Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಪಂಜರ ಕಾಯಲು ನೀವೇ ನಿಲ್ಲಬೇಕು!

ನಮ್ಮಿಬ್ಬರ ಮಧ್ಯೆ ರಹಸ್ಯಗಳೇ ಇಲ್ಲ. ಏನೇ ನಡೆದರೂ ಅವನಿಗೆ ನಾನು ಹೇಳ್ತೀನಿ. ಅವನೂ ಅಷ್ಟೆ: ಯಾವುದನ್ನೂ ಮುಚ್ಚಿಡೋದಿಲ್ಲ. ಪ್ರತಿಯೊಂದನ್ನೂ ಹೇಳಿಕೊಳ್ತೀವಿ. "we are so loyal to each other ಗೊತ್ತಾ'' ಹಾಗಂತ ಹೇಳಿಕೊಂಡಿದ್ದ ಹುಡುಗಿಗೆ ಈಗ ಮೂವತ್ತೊಂದು ವರ್ಷ ವಯಸ್ಸು. ಮೊನ್ನೆ ಮತ್ತೆ ಸಿಕ್ಕಿದ್ದಳು. ಮುಖದಲ್ಲಿ ಮೊದಲಿನ ಸಂತೋಷವಿಲ್ಲ. ಅವನ ಬಗ್ಗೆ ಆಡಿದ ಮಾತುಗಳಲ್ಲಿ ಮೊದಲಿನ ಉತ್ಕಟತೆಯಿಲ್ಲ. ಹಾಗಂತ ಅವನನ್ನು ಅವಳು ಪ್ರೀತಿಸುವುದನ್ನು ನಿಲ್ಲಿಸಿಲ್ಲ. ಮೊದಲಿನಷ್ಟೇ ಪ್ರೀತಿಸುತ್ತಿದ್ದಾಳೆ. ಆದರೆ ಪ್ರೀತಿಸುವುದರಲ್ಲಿ ಮೊದಲಿನ ಆನಂದ ಉಳಿದಿಲ್ಲ. ಏಕೆಂದರೆ, ಮೊದಲಿನ ಪ್ರೀತಿಯನ್ನು ಸ್ವಚ್ಛಂದತೆ ಆಳುತ್ತಿತ್ತು. ಈಗ ಅವಳ ಸ್ವಾತಂತ್ರ್ಯವನ್ನು ಅವನ ವಿಪರೀತ ಪ್ರೀತಿ ಕಿತ್ತುಕೊಂಡುಬಿಟ್ಟಿದೆ.

''ಅವ್ನು ಹೇಳಿದ ಹೊತ್ತಿಗೆ ಅಲ್ಲಿರಲೇಬೇಕು. ಅವನು ಮನೆಗೆ ಬರೋ ಹೊತ್ತಿಗೆ ನಾನು ಮನೇಲಿ ಇರಲೇಬೇಕು. ಇಂತಿಷ್ಟು ಹೊತ್ತಿಗೆ ಫೋನು ಮಾಡು ಅಂದಿರ‍್ತಾನೆ. ಮಾಡದೇ ಇದ್ರೆ ಕೊಂದೇ ಹಾಕ್ತಾನೆ. ಎಲ್ಲಿಂದ ಮಾಡ್ತಿದೀನಿ ಅಂತ ಮೊಬೈಲಿನಲ್ಲಿ ನಂಬರು ನೋಡ್ಕೋತಾನೆ. ಮನೆಗೆ ಯಾರು ಫೋನು ಮಾಡಿದ್ರು ಅಂತ ಗೊತ್ತಾಗ್ಲಿ ಅನ್ನೋ ಕಾರಣಕ್ಕೆ ಕಾಲರ್ I.D. ಹಾಕ್ಸಿದಾನೆ. ತುಂಬ ಪೊಸೆಸಿವ್ವು. ಎಷ್ಟು ಬೇಗ ಸಿಟ್ಟು ಬರುತ್ತೆ ಗೊತ್ತಾ? ಒಂದೊಂದ್ಸಲ ಅವನ ಪ್ರೀತಿ ಉಸಿರುಗಟ್ಟಿಸುತ್ತೆ!'' ಅಂದಳು.

ನಕ್ಕು ಸುಮ್ಮನಾದೆ. ಇಂಥದೊಂದು ಹಂತ ನಾನೂ ದಾಟಿ ಬಂದಿದ್ದೇನೆ. ಪ್ರೀತಿಸುವ ದಿನಗಳಲ್ಲಿ ಪ್ರತಿಯೊಬ್ಬರಿಗೂ ಹಾಗೇ ಅನ್ನಿಸುತ್ತದೆ. ಒಬ್ಬರಿಗೊಬ್ಬರು ಎಲ್ಲವನ್ನೂ ಹೇಳಿಕೊಳ್ಳಬೇಕು. ಅಸಲು ಇಬ್ಬರ ಮಧ್ಯೆ ರಹಸ್ಯಗಳೇ ಇರಬಾರದು. ಒಬ್ಬರಿಗೊಬ್ಬರು ತೆರೆದ ಪುಸ್ತಕದಂತಿರಬೇಕು. ಈ ಅನಿಸಿಕೆ ಎಷ್ಟು ತೀವ್ರವಾಗಿರುತ್ತದೆ ಅಂದರೆ ಅತ್ಯಂತ ಪರ್ಸನಲ್ ಆದ ವಿವರಗಳನ್ನು ಬರೆದಿಟ್ಟ ಡೈರಿಯ ಪುಟಗಳನ್ನೂ ಕೂಡ ನಾವು ಪ್ರೀತಿಸಿದವರಿಗೆ ಓದಲು ಕೊಟ್ಟುಬಿಡುತ್ತೇವೆ. ಅದೊಂದು ಥರದ, ಸ್ವಾತಂತ್ರ್ಯ ಕಳೆದುಕೊಳ್ಳುವುದರಲ್ಲೇ ದೊಡ್ಡ ಸಂತೋಷವಿದೆ ಅಂತ ಭಾವಿಸುವ ಕಾಲ! ಹಾಗೆ ಎಲ್ಲವನ್ನೂ ತೆರೆದಿಟ್ಟ, ಎಲ್ಲವನ್ನೂ ಬರೆದುಕೊಟ್ಟ ಮತ್ತು ಎಲ್ಲವನ್ನೂ ಕೊಟ್ಟುಬಿಟ್ಟ ಜೀವವನ್ನು ತುಂಬ ಇಂಟೆನ್ಸ್ ಆಗಿ ಪ್ರೀತಿಸಿಯೂ ಬಿಡುತ್ತೇವೆ. ನಮಗೇ ಗೊತ್ತಿಲ್ಲದಂತೆ ನಮ್ಮ ವೈಯಕ್ತಿಕ ಬದುಕಿನ ಮೂಲೆಯನ್ನೂ ಅವರೇ ಆವರಿಸಿಕೊಂಡು ಬಿಡುತ್ತಾರೆ. ಮತ್ತು ಅದನ್ನು ನಾವು ಸೌಭಾಗ್ಯವೇನೋ ಎಂಬಂತೆ enjoy ಮಾಡತೊಡಗುತ್ತೇವೆ.

ಕಳೆದು ಹೋಗಿರುವುದು ನಮ್ಮ ಮೂಲಭೂತ ಸ್ವಾತಂತ್ರ್ಯ ಅಂತ ಗೊತ್ತಾಗುವ ತನಕ ಈ ಸಂತಸ ಜಾರಿಯಲ್ಲಿರುತ್ತದೆ.

ಅವಳು ಪ್ರೇಯಸಿಯೇ ಆಗಿರಲಿ, ಹೆಂಡತಿಯೇ ಆಗಿರಲಿ; ಅವಳನ್ನು ನಾವು ಎಷ್ಟೇ ಪ್ರೀತಿಸಿರಲಿ, ಅವಳೊಂದು ತೆರೆದ ಪುಸ್ತಕ ಎಂಬಂತೆ ಎಷ್ಟೇ open ಆಗಿ ನಮ್ಮೊಂದಿಗೆ ವರ್ತಿಸಿರಲಿ. ಅವಳಿಗೂ ಚಿಕ್ಕ ಚಿಕ್ಕ ರಹಸ್ಯಗಳಿರುತ್ತವೆ! ನಮಗದು ಗೊತ್ತೇ ಇರುವುದಿಲ್ಲ. ''ಗಂಡನೊಂದಿಗೆ ಎಂಥ ರಹಸ್ಯ?'' ಅಂತ ಒರಟು ವಾದ ಮಾಡಬೇಡಿ. ಮನುಷ್ಯ ಮನಸಿನ ವೈಚಿತ್ರ್ಯವೇ ಅಂತಹುದು. ಎಲ್ಲ ಬಿಟ್ಟು ಕೊಟ್ಟ ಮೇಲೂ ಅದೊಂದು ಪುಟ್ಟ ರಹಸ್ಯವನ್ನು ಉಳಿಸಿಕೊಳ್ಳ ಬಯಸುತ್ತದೆ. ಅದು ಅಂಥ ಅಪಾಯಕಾರಿ ರಹಸ್ಯವಾಗಿರಬೇಕು ಅಂತೇನೂ ಅಲ್ಲ. ನಮಗದು ರಹಸ್ಯವಲ್ಲವೇ ಅಲ್ಲ ಎನ್ನುವಂಥ ಚಿಕ್ಕ ಸಂಗತಿಯಾಗಿರಬಹುದು. ''ಮಧ್ಯಾಹ್ನ ನಾನು ಫೋನು ಮಾಡಿದಾಗ ರಿಂಗ್ ಆಗ್ತಾ ಇತ್ತು. ತೆಗೆಯೋರೇ ಇರಲಿಲ್ಲ. ಎಲ್ಲಿಗೆ ಹೋಗಿದ್ದೆ?'' ಅಂತ ನೀವು ಉಸಿರುಗಟ್ಟುವಂತೆ ಕೇಳಿದಾಗ ಆಕೆ ಅತ್ಯಂತ ರಹಸ್ಯಮಯವಾಗಿ ಎಲ್ಲಿಗೋ ಹೋಗಿ ಏನೋ ಮಾಡಿ ಬಂದಿದ್ದಿರಬೇಕು ಅಂದುಕೊಳ್ಳಲೇಬೇಡಿ. ಆಕೆ ಅಲ್ಲೇ ಬೀದಿ ಕೊನೆಯ ಸರ್ಕ್ಯುಲೇಟಿಂಗ್ ಲೈಬ್ರರಿಗೆ ಹೋಗಿದ್ದಿರಬಹುದು. ''ಹಾಗಂತ ನಂಗೆ ಹೇಳಬಹುದಿತ್ತಲ್ಲ?'' ಅಂತ ವಾದಿಸಬೇಡಿ.

ನಿಮಗೆ ಹೇಳದೆ ಹೋಗುವ ಮೂಲಕ, ಆಕೆ ಯಾವತ್ತೋ ಕಳೆದುಕೊಂಡ ತನ್ನ ಮಧುರವಾದ ಅತಿ ಪುಟ್ಟ, ನಿರುಪದ್ರವಿ ಸ್ವಾತಂತ್ರ್ಯವನ್ನು ವಾಪಸು ತಂದುಕೊಂಡ ಸಂತೋಷ ಅನುಭವಿಸಿ ಬಂದಿರುತ್ತಾಳೆ. ಆ ಸಂತೋಷ ಆಕೆಗೆ ಉಳಿಯಲಿ. ಯಾಕೆ ಕಸಿಯುತ್ತೀರಿ?

ತಿಂಗಳುದ್ದಕ್ಕೂ ಮನೆಯ ನಿರ್ವಹಣೆಗೆ ಅಂತ ಸಾವಿರಗಟ್ಟಲೆ ರುಪಾಯಿ ಕೊಟ್ಟ ಮೇಲೂ ನನ್ನ ಹೆಂಡತಿ ನನ್ನ ಪರ್ಸಿನಲ್ಲಿ ಸಿಗುವ ಸಣ್ಣ ಮೊತ್ತದ ದುಡ್ಡು ಕದೀತಾಳೆ. ನನಗೆ ಗೊತ್ತಿಲ್ಲದೇನೆ ಒಂದು ಅಕೌಂಟು ಮತ್ತ್ಯಾವುದೋ ಬ್ಯಾಂಕಿನಲ್ಲಿ ತೆರೆದಿರುತ್ತಾಳೆ. ತೀರ ನೋಡಿದರೆ ಅಂಥಾ ದೊಡ್ಡ ದುಡ್ಡೇನೂ ಇರುವುದಿಲ್ಲ. ಗೌರಿ ಹಬ್ಬಕ್ಕೆ ಅಣ್ಣ ತಮ್ಮಂದಿರು ಕಳಿಸಿದ್ದು; ಹೆಚ್ಚೆಂದರೆ ನನ್ನ ಕಿಸೆಯಿಂದ ಕದ್ದದ್ದು! ಜೀವನದ ಎಲ್ಲ ಸಂಗತಿಗಳನ್ನೂ ನನ್ನೆದುರಿಗೆ ತೆರೆದಿಟ್ಟು, ನನಗೆ ತನ್ನದೆಲ್ಲವನ್ನೂ ಕೊಟ್ಟು ಬಿಟ್ಟ, ನನ್ನನ್ನು ಪ್ರೀತಿಸುವುದೇ ಬದುಕಿನ ಗುರಿ ಅಂದುಕೊಂಡ ನನ್ನ ಹೆಂಡತಿಗೇಕೆ ಇಂಥ ಗುಟ್ಟುಗಳಿರಬೇಕು ಅಂದುಕೊಂಡರೆ ಅವನು ಕಡು ಮೂರ್ಖ, sensitivity ಎಂದರೆ ಏನೂಂತ ಗೊತ್ತಿಲ್ಲದ ಸರ್ವಾಧಿಕಾರಿ.

ತುಂಬ ಪೊಸೆಸಿವ್ ಆಗಿ ಪ್ರೀತಿಸಿದ, ಹಿಡಿದಿಟ್ಟುಕೊಂಡ, ಕಟ್ಟಿ ಹಾಕಿದಂತೆ ಬಾಳಿಸಿದ ಹೆಂಗಸಿಗೆ ಒಂದೇ ಒಂದು ಸಲ ಸ್ವಾತಂತ್ರ್ಯವನ್ನು ಕೊಟ್ಟು ನೋಡಿ? ಪೈಸೆ ಪೈಸೆಗೂ ಲೆಕ್ಕ ಕೇಳಿ ಪೀಡಿಸಿದ ಹೆಂಡತಿಯ ಕೈಗೆ ಇದ್ದಕ್ಕಿದ್ದಂತೆ ಒಂದು ದಿನ ಐದು ನೂರರ ನೋಟು ಕೊಟ್ಟು ''ಬೇಕಾದ್ದು ಮಾಡಿಕೋ'' ಅಂತ ಹೇಳಿ ನೋಡಿ. ನೀನಿನ್ನು ಮೇಲೆ ಕೊಂಚ ತಡವಾಗಿ ಬಂದರೂ ನಾನು ಪ್ರಶ್ನೆ ಕೇಳಿ ಪ್ರಾಣ ತಿನ್ನುವುದಿಲ್ಲ ಅಂತ ಆಕೆಗೊಮ್ಮೆ ಮನವರಿಕೆ ಮಾಡಿಕೊಟ್ಟು ನೋಡಿ! ಆಕೆಯ ನಿರುಪದ್ರವಿ ರಹಸ್ಯಗಳನ್ನು ಇಟ್ಟುಕೊಳ್ಳಲು ಒಂದು ಲಾಕರ್, ಒಂದು ಪ್ರತ್ಯೇಕ ಆಲ್ಮೆರಾ, ಕಡೇ ಪಕ್ಷ ಒಂದು ಚಿಕ್ಕ ಪೆಟ್ಟಿಗೆ ಕೊಡಿಸಿ ನೋಡಿ?

ಆಕೆಯಲ್ಲ: ಆಕೆಗಿಂತಲೂ ''ನೀವು'' ಜಾಸ್ತಿ ಸಂತೋಷವಾಗಿ ಬದುಕತೊಡಗುತ್ತೀರಿ. ಜೈಲಿನಲ್ಲಿರುವ ಕೈದಿಯೊಬ್ಬನೇ ಅಸ್ವತಂತ್ರನಲ್ಲ. ಅವನನ್ನು ಕಾಯಲು ನಿಂತವನ ಸ್ವಾತಂತ್ರ್ಯವೂ ಹರಣವಾಗಿರುತ್ತದೆ. ನಿಮ್ಮ ಗೆಳತಿಯನ್ನ ನಿರ್ಬಂಧದಲ್ಲಿ ಇರಿಸಿದ ಆರಂಭದಲ್ಲಿ ನಿಮಗೆ ಅದೊಂದು ತೆರನಾದ ಆನಂದ ಸಿಕ್ಕಿರಬಹುದು. ಆದರೆ ಆಕೆ ನಿಮ್ಮ ನಿರ್ಬಂಧವನ್ನು ಮೀರಿ ಎಲ್ಲಿ ಸ್ವತಂತ್ರಳಾಗಿ ಬಿಡುತ್ತಾಳೋ ಎಂಬ ನಿಮ್ಮ ಚಡಪಡಿಕೆ ಇದೆಯಲ್ಲ? ಅದು ನಿಮ್ಮ ಆರಂಭಿಕ ಆನಂದವನ್ನೂ ಕೊಂದು ಹಾಕಿ ಬಿಡುತ್ತದೆ. ಅವಳನ್ನು ನೀವು ಕರೆಕ್ಟಾಗಿ, ಕಟೆದು ಕಂಟ್ರೋಲಿನಲ್ಲಿ ಇಟ್ಟುಕೊಂಡು ಬಿಟ್ಟಿದ್ದೇನೆ ಅಂದುಕೊಳ್ಳುತ್ತಿರುತ್ತೀರಿ.

ಆದರೆ sorry, ನೀವು ಆಕೆಯನ್ನು ಕೇವಲ ಗುಲಾಮಳನ್ನಾಗಿ ಮಾಡಿ ಪಂಜರದಲ್ಲಿ ಇಟ್ಟುಬಿಟ್ಟಿರುತ್ತೀರಿ. ದುರಂತವೆಂದರೆ, ಪಂಜರ ಕಾಯಲು ನೀವೇ ನಿಲ್ಲಬೇಕು! ನೀವು ನಿಮಗೇ ಗೊತ್ತಿಲ್ಲದಂತೆ ಗುಲಾಮರಾಗಿ ಬಿಟ್ಟಿದ್ದೀರಿ.

ರಜನೀಶ್ ಈ ವಿಷಯದ ಬಗ್ಗೆ ತುಂಬ ಸೊಗಸಾಗಿ ಈ ಮಾತು ಹೇಳಿದ್ದಾನೆ: ''ಇಬ್ಬರು ಗುಲಾಮರು ಯಾವತ್ತಿಗೂ ಸಂತೋಷವಾಗಿ ಇರಲಾರರು!''

ಅದಕ್ಕೇ ಹೇಳಿದ್ದು: liberate your girl, your woman. ಅವಳನ್ನು ಸ್ವತಂತ್ರಳಾಗಿಸುವ ಮೂಲಕ ನೀವು ಸ್ವತಂತ್ರರಾಗಿಬಿಡಿ. ಸ್ವಾತಂತ್ರ್ಯ ಮತ್ತು ಸ್ವಚ್ಛಂದತೆ ನಿಮ್ಮ ಪ್ರೀತಿಯನ್ನು ಬಲಗೊಳಿಸುತ್ತದೆ. ರೆಕ್ಕೆ ಹಗುರಾಗುತ್ತವೆ. ಮನಸ್ಸು ನಿರಾಳ ಆಕಾಶವಾಗುತ್ತದೆ. ಕಟ್ಟಿ ಹಾಕಿದ ಜೀವ ಮನೆಯನ್ನಷ್ಟೇ ಗುಡಿಸಿ ಸ್ವಚ್ಛಗೊಳಿಸಬಹುದು. ಆದರೆ ಸ್ವಚ್ಛಂದ ಜೀವ ತನ್ನ ರೆಕ್ಕೆಗಳ ಮೇಲೆ ಹೊಸ ಗಾಳಿ-ಬೆಳಕು ಹೊತ್ತು ತರುತ್ತದೆ!

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 24 August, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books