Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ರಾಜ್ಯದ ರೈತರಿಗೆ ಮೋಸ ಮಾಡುತ್ತಿರುವುದು ಮೋದಿ ಹಾಗೂ ಸೋನಿಯಾ

ಈ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಬ್ಬರೂ ಸೇರಿ ಕುಡಿಯಲು ನೀರು ಕೇಳುತ್ತಿರುವ ಕರ್ನಾಟಕದ ರೈತರನ್ನು ವಂಚಿಸುತ್ತಿದ್ದಾರೆ. ಅಂದ ಹಾಗೆ ಮಹದಾಯಿ ನದಿಯಿಂದ ರಾಜ್ಯಕ್ಕೆ ಒದಗಿಸಬೇಕಾದ ಏಳೂವರೆ ಟಿಎಂಸಿಯಷ್ಟು ನೀರಿನ ಪಾಲನ್ನು ನಮಗೆ ಕೊಡಿ. ನ್ಯಾಯಾಧೀಕರಣದ ತೀರ್ಪು ಆಮೇಲೆ ಬರಲಿ ಎಂಬ ಅರ್ಥದಲ್ಲಿ ರಾಜ್ಯ ಸರ್ಕಾರ ಒಂದು ಮನವಿಯನ್ನು ಸಲ್ಲಿಸಿತ್ತಲ್ಲ? ಆ ಮನವಿಯನ್ನು ನ್ಯಾಯಾಧೀಕರಣ ತಿರಸ್ಕರಿಸಿತು. ಇದರ ಪರಿಣಾಮವಾಗಿ ಕಳೆದ ಶುಕ್ರವಾರ ಕರ್ನಾಟಕ ಬಂದ್ ಆಚರಣೆ ಮಾಡಲಾಯಿತು. ಆ ಸಂದರ್ಭದಲ್ಲಿ ಪ್ರತಿಭಟನಾ ನಿರತರನ್ನು ಪೊಲೀಸರು ಯಾವ ರೀತಿ ಸಿಕ್ಕ ಸಿಕ್ಕಂತೆ ಬಾರಿಸಿದರೆಂದರೆ, ನೋ ಡೌಟ್ ಇವರು ದೇಶದ ಆಂತರಿಕ ವ್ಯವಸ್ಥೆಯನ್ನು ಕಾಪಾಡುವುದಕ್ಕಿಂತ ಮುಖ್ಯವಾಗಿ ಶತ್ರು ರಾಷ್ಟ್ರದೊಡನೆ ಹೋರಾಡುವ ಸೈನಿಕರಂತೆ ಹೋರಾಡಿದರು.

ಹೀಗಾಗಿ ಇಂತಹವರನ್ನು ಗಡಿ ಭಾಗದಲ್ಲಿ ನಿಯೋಜಿಸಿ ನಮ್ಮ ಜನರನ್ನು ನಮ್ಮವರಂತೆ ಕಾಣುವ ಮನಸ್ಥಿತಿ ಇರುವವರನ್ನು ಪೊಲೀಸರನ್ನಾಗಿ ಇಂಥಲ್ಲಿ ನಿಯೋಜಿಸಬೇಕು. ಅದು ಒಂದು ಕಡೆ ಇರಲಿ. ಆದರೆ ಈಗ ವಿಷಯಕ್ಕೇ ಬರೋಣ. ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರನ್ನು ಒದಗಿಸುವ ವಿಷಯದಲ್ಲಿ ಏನು ತೊಂದರೆಯಿದೆ? ಯಾವ ತೊಂದರೆಯಿದೆ? ವೈಜ್ಞಾನಿಕವಾಗಿ ಇದಕ್ಕೇನಾದರೂ ಕಾರಣವಿದೆಯಾ? ಇದನ್ನೆಲ್ಲ ತಿಳಿಸುವ ಕೆಲಸವಾಗಬೇಕು. ಆದರೆ ನೂರಾರು ದಿನಗಳಿಂದ ಕುಡಿಯುವ ನೀರಿಗಾಗಿ ಅಲ್ಲಿನ ಜನ ಹೋರಾಟ ಮಾಡುತ್ತಿದ್ದರೆ ಯಾವ ರಾಜಕೀಯ ಪಕ್ಷಗಳೂ ಸತ್ಯವನ್ನು ಹೇಳುವ ಗೋಜಿಗೆ ಹೋಗುತ್ತಿಲ್ಲ. ಸತ್ಯ ಹೇಳಿದರೆ ನಾವೆಲ್ಲಿ ನಿಷ್ಠುರರಾಗುತ್ತೇವೋ ಅಂತ ಹೆದರಿಕೆ. ಆದರೆ ಪರೋಕ್ಷವಾಗಿ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಮಾತನಾಡಿಸಿ ನೋಡಿ. ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಒದಗಿಸುವ ವಿಷಯದಲ್ಲಿ ಇರುವ ಅಡ್ಡಿಗಳೇನು ಎಂಬ ಕುರಿತಂತೆ ಪುಂಖಾನುಪುಂಖವಾಗಿ ಮಾತನಾಡುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯ ಕಾರಣಗಳನ್ನೇ ತೆಗೆದುಕೊಳ್ಳಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಿಯೋಗ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡು ಮಹದಾಯಿ ನದಿಯಿಂದ ನಮಗೆ ಕುಡಿಯಲು ನೀರು ಕೊಡಿಸಿ ಎಂದು ಮನವಿ ಮಾಡಿಕೊಂಡಿತಲ್ಲ? ಆಗ ಮೋದಿ ಏನು ಹೇಳಿದರು? ಮಹದಾಯಿ ನದಿ ಹರಿಯುವ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದವರನ್ನು ನೀವು ಮನ ಒಲಿಸಿ. ಬಿಜೆಪಿಯವರನ್ನು ನಾವು ಮನ ಒಲಿಸುತ್ತೇವೆ ಅಂತಲ್ಲವೇ? ಒಬ್ಬ ಪ್ರಧಾನಿ ಈ ರೀತಿ ಸುಲಭವಾಗಿ ನುಣುಚಿಕೊಳ್ಳಬಾರದು. ಇಂತಹುದೇ ಸಂದರ್ಭಗಳು ಬಂದು ನೀರಿನ ವಿಷಯದಲ್ಲಿ ಅಂತರ್ ರಾಜ್ಯ ಗಲಭೆಗಳು ಸಂಭವಿಸಿದಾಗ ಇಂದಿರಾ ಗಾಂಧಿ ಅವರಿಂದ ಹಿಡಿದು ಹಲವು ನಾಯಕರು ಆಯಾ ರಾಜ್ಯಗಳನ್ನು ಸಮಾಧಾನಿಸಿ ನ್ಯಾಯಾಧೀಕರಣದ ಹೊರಗೇ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದಾರೆ.

ಮೋದಿ ಈ ದೇಶಕ್ಕೆ ಪ್ರಧಾನಿ. ಎನ್‌ಡಿಎ ಮೈತ್ರಿಕೂಟಕ್ಕೆ ಮಾತ್ರವಲ್ಲ, ಚುನಾವಣೆಯಲ್ಲಿ ಹೋರಾಡುವಾಗ ಎನ್‌ಡಿಎ ಅಂತಲೋ, ಯುಪಿಎ ಅಂತಲೋ ಬಡಿದಾಡಲಿ. ಆದರೆ ಪ್ರಧಾನಿಯಾದ ನಂತರ ಅಲ್ಲ. ನಿಜಕ್ಕೂ ಅವರಿಗೆ ಈ ವಿವಾದವನ್ನು ಬಗೆಹರಿಸುವ ಕಾಳಜಿ ಇದ್ದಿದ್ದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನೂ ಪಾರ್ಟಿ ಮಾಡಿಕೊಂಡು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷಗಳ ನಾಯಕರ ಸಭೆ ಕರೆಯಬೇಕಿತ್ತು. ಆದರೆ ಅವರಿಗೆ ಆತಂಕ. ಸದ್ಯದಲ್ಲೇ ಗೋವಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಒಂದಷ್ಟು ನೀರು ಅಂತ ಕೊಡಿಸಿದರೆ ನಿಶ್ಚಿತವಾಗಿ ಚುನಾವಣೆಯಲ್ಲಿ ಮಣ್ಣು ಮುಕ್ಕುತ್ತೇವೆ ಅಂತ. ಹೀಗಾಗಿ ರಾಜ್ಯದ ಬಿಜೆಪಿ ನಾಯಕರು ಇಲ್ಲಿನ ಹೊಡೆತ ತಾಳಲಾಗದೆ ಪ್ರಧಾನಿಯವರ ಬಳಿ ಹೋಗಿ ವಿಷಯ ತಿಳಿಸಿದರೆ, ಮುಂದಿನ ಗೋವಾ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಸುಮ್ಮನಿರಿ. ಚುನಾವಣೆ ಮುಗಿದು ಎರಡೇ ತಿಂಗಳಲ್ಲಿ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿ ವಿವಾದ ಪರಿಹರಿಸುತ್ತೇನೆ ಎಂದು ಕತೆ ಹೇಳಿದ್ದಾರೆ.

ಅರ್ಥಾತ್, ಅವರಿಗೀಗ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಕರ್ನಾಟಕದ ರೈತರಿಗಿಂತ ಗೋವಾ ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆ ಮುಖ್ಯ. ಅನುಮಾನವೇ ಇಟ್ಟುಕೊಳ್ಳಬೇಡಿ. ಅಲ್ಲಿಯ ತನಕ ಪ್ರಧಾನಿ ನರೇಂದ್ರ ಮೋದಿ ನೆಪ ಮಾತ್ರಕ್ಕೂ ಈ ಸಮಸ್ಯೆಯನ್ನು ಬಗೆಹರಿಸುವ ಗೋಜಿಗೂ ಹೋಗುವುದಿಲ್ಲ. ಒಂದು ಸಲ ಚುನಾವಣೆ ನಡೆದು, ಮತ್ತೊಮ್ಮೆ ಗೋವಾದಲ್ಲಿ ಅಧಿಕಾರ ಸೂತ್ರ ಹಿಡಿದ ಮೇಲೆ ಅವರು ಈ ಸಮಸ್ಯೆಯ ಪರಿಹಾರಕ್ಕೆ ಮುನ್ನುಗ್ಗುತ್ತಾರೆ. ಯಾಕೆಂದರೆ ಅಷ್ಟರಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆಗಳು ಹತ್ತಿರವಾಗಿರುತ್ತವೆ. ಆಗ ಸಮಸ್ಯೆಯನ್ನು ಒಂದು ಮಟ್ಟದಲ್ಲಿ ಬಗೆಹರಿಸಿದರೆ ಏಳೂವರೆ ಟಿಎಂಸಿ ನೀರು ಕೊಡಿಸಲು ಆಗದಿದ್ದರೂ ಒಂದೈದು ಟಿಎಂಸಿ ನೀರು ಕೊಡಿಸಿದರೆ ಕರ್ನಾಟಕದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಇದು ಪ್ರಧಾನಿ ನರೇಂದ್ರ ಮೋದಿಯ ಲೆಕ್ಕಾಚಾರ.

ಇದೇ ರೀತಿಯ ಲೆಕ್ಕಾಚಾರ ಸೋನಿಯಾ ಗಾಂಧಿ ಅವರಲ್ಲೂ ಇದೆ. ಇವತ್ತು ಕರ್ನಾಟಕಕ್ಕೆ ನೀರು ಕೊಡಿಸಲು ಹೋದರೆ ಗೋವಾ ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ದುರ್ಬಲವಾಗುತ್ತದೆ. ಆಗ ಮುಲಾಜೇ ಇಲ್ಲದೆ ಗೋವಾದ ಜನ ಬಿಜೆಪಿಯ ಜೊತೆ ನಿಲ್ಲುತ್ತಾರೆ. ಯಥಾಪ್ರಕಾರ ನಾವು ಐದು ವರ್ಷಗಳ ವನವಾಸಕ್ಕೆ ಸಜ್ಜಾಗಬೇಕು ಎಂಬುದು ಅವರ ಯೋಚನೆ. ಹಾಗಂತಲೇ ಅವರು ಈ ಹಿಂದೆ ಗೋವಾ ರಾಜ್ಯಕ್ಕೆ ಹೋಗಿ ಮಹದಾಯಿ ನದಿ ನೀರಿನ ವಿವಾದದ ಬಗ್ಗೆ ಮಾತನಾಡುತ್ತಾ: ನಾನು ಗೋವಾದ ಪರ ಇದ್ದೇನೆ ಎಂದು ಕತೆ ಹೇಳಿ ಬಂದಿರುವುದು. ಅಲ್ರೀ. ಸಮುದ್ರಕ್ಕೆ ಸೇರುವ ನೀರಿನಲ್ಲಿ ಇಂತಿಷ್ಟು ಪರ್ಸೆಂಟು ನೀರು ಸಮುದ್ರಕ್ಕೆ ಸೇರಬೇಕು ಅನ್ನುವುದು ನಿಜ. ಆದರೆ ಅದರಲ್ಲಿ ಕರ್ನಾಟಕಕ್ಕೆ ಬರಬೇಕಾದ ಏಳೂವರೆ ಟಿಎಂಸಿ ನೀರನ್ನು ಒದಗಿಸಲು ಸಮಸ್ಯೆ ಏನಿದೆ? ಅಲ್ಲಿ ನೀರೇ ದಕ್ಕುವುದಿಲ್ಲವಾ? ಅದನ್ನಾದರೂ ರೈತರಿಗೆ ವಿವರವಾಗಿ ಹೇಳಲಿ. ಅದನ್ನು ಬಿಟ್ಟು ಗೋವಾದಲ್ಲಿ ಗೆಲ್ಲಬೇಕೆಂದೇ ಮೋದಿ ಹಾಗೂ ಸೋನಿಯಾ ಹೊರಟರೆ ಗತಿ ಏನು? ಎಲ್ಲಕ್ಕಿಂತ ಮುಖ್ಯವಾಗಿ ಈ ರಾಜ್ಯದ ರಾಜಕಾರಣಿಗಳು ಏನು ಮಾಡಬೇಕು?

ಇವತ್ತು ಈ ವಿಷಯ ಬಂದಾಗ ಸಂಸದರ ಪಾತ್ರ ದೊಡ್ಡದಿದೆ. ಅವರು ಹೋಗಿ ತಮ್ಮ ತಮ್ಮ ಪಕ್ಷಗಳ ನಾಯಕರ ಬಳಿ ಮಹದಾಯಿ ನದಿ ನೀರಿನ ವಿವಾದವನ್ನು ಬಗೆಹರಿಸಲು ಪಟ್ಟು ಹಿಡಿಯಬೇಕು. ಇದೇ ತಮಿಳ್ನಾಡು, ಆಂಧ್ರಪ್ರದೇಶದ ಸಂಸದರನ್ನು ನೋಡಿ. ತಮ್ಮ ತಮ್ಮಲ್ಲಿ ಏನೇ ಕಚ್ಚಾಟ ಮಾಡಿಕೊಳ್ಳಲಿ. ಆದರೆ ನೆಲ, ಜಲದ ವಿಷಯ ಬಂದರೆ ಒಂದಾಗಿ ನಿಂತುಬಿಡುತ್ತಾರೆ. ಆಗ ಯಾರೂ ಯಾವ ಪಕ್ಷದವರಲ್ಲ. ಆಯಾ ರಾಜ್ಯದವರು ಅಷ್ಟೇ. ಇದೇ ರೀತಿಯ ಖಡಕ್ಕುತನ ನಮ್ಮ ಸಂಸದರಿಗೂ ಬರಬೇಕು. ಯಾಕೆಂದರೆ ಅಲ್ಲಲ್ಲೋ ಬಿಲ್ಲಲ್ಲೋ ಅಂತ ನಾಟಕ ಮಾಡುತ್ತಿರುವವರು ಮೋದಿ ಹಾಗೂ ಸೋನಿಯಾ. ಈ ಇಬ್ಬರಿಗೂ ಚಳಿ ಬಿಡಿಸುವ ತಾಕತ್ತು ನಮ್ಮ ಸಂಸದರಿಗಿರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಪ್ರಾಮಾಣಿಕವಾಗಿ ಏನು ಮಾಡಬೇಕೋ? ಅದನ್ನು ಮಾಡಿದೆ. ಮಹದಾಯಿ ನೀರನ್ನು ಕುಡಿಯಲು ಒದಗಿಸಿ ಎಂಬ ಬೇಡಿಕೆಗೆ ಪೂರಕವಾಗಿ ನ್ಯಾಯಾಧೀಕರಣದ ಮುಂದೆ ಅರ್ಜಿ ಹಾಕಿದೆ. ವಾದಿಸಿದೆ. ಆದರೆ ನ್ಯಾಯಾಧಿಕರಣ ಒಪ್ಪಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಏನು ಮಾಡಲು ಸಾಧ್ಯ?

ಹಾಗೇನಾದರೂ ಈ ವಿಷಯವನ್ನು ಕೈಗೆತ್ತಿಕೊಳ್ಳುವ ಮೊದಲ ಶ್ರೇಣಿಯವರೆಂದರೆ ನಮ್ಮ ಸಂಸದರು. ಇವರು ಅಲ್ಲಿಗೆ ಹೋಗಿ ಯಾವ ವಿಷಯ ಮಾತನಾಡುತ್ತಾರೆ ಅಂತಲೇ ಗೊತ್ತಾಗುವುದಿಲ್ಲ. ಹೋಗಲಿ. ಹಿಂದಿ ಬರುವುದಿಲ್ಲ, ಇಂಗ್ಲಿಷ್ ಬರುವುದಿಲ್ಲ. ಹೀಗಾಗಿ ತುಂಬ ಜನ ಮಾತನಾಡುವುದೇ ಇಲ್ಲ ಅಂದುಕೊಳ್ಳೋಣ. ಆದರೆ ರಾಜ್ಯದ ನ್ಯಾಯಯುತ ಬೇಡಿಕೆಯ ಕುರಿತು ಸಂಸತ್ತಿನಲ್ಲಿ ಒಗ್ಗಟ್ಟಾಗಿ ನಿಂತು ಸದನದ ಗಮನ ಸೆಳೆಯಲು ಸಾಧ್ಯ? ಬಿಜೆಪಿಯವರು ಈ ಸಮಸ್ಯೆ ಬಗೆಹರಿಸಲಿ ಎಂದು ಕಾಂಗ್ರೆಸ್ ಪಕ್ಷದವರು, ಕಾಂಗ್ರೆಸ್‌ನವರು ಬಗೆಹರಿಸಲಿ ಎಂದು ಬಿಜೆಪಿಯವರು ಕಾದು ಕುಳಿತರೆ ಬಾಯಾರಿಕೆಯಿಂದ ಕಂಗಾಲಾಗಿರುವ ನಮ್ಮ ರೈತರು ಏನು ಮಾಡಬೇಕು? ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮೇಲೆದ್ದು ನಿಂತು ಸಮಸ್ಯೆಯ ಪರಿಹಾರಕ್ಕೆ ಮುಂದಾಗುವಂತೆ ನಮ್ಮ ಸಂಸದರು, ಕೇಂದ್ರ ಸಚಿವ ಸಂಪುಟದಲ್ಲಿರುವ ನಮ್ಮವರು ಮಾಡಲಿ. ವಿನಾಕಾರಣ ಎಲ್ಲದಕ್ಕೂ ರಾಜ್ಯ ಸರ್ಕಾರವೇ ಹೊಣೆ ಎಂಬಂತೆ ಮಾತನಾಡುವುದು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಯತ್ನವೇ ವಿನಾ ಇನ್ನೇನೂ ಅಲ್ಲ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 August, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books