Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಕಮಲಹಾಸನ್‌ನ ಅದೊಂದು ಸಿನೆಮಾ ಮುಂದೆ ನೂರು ಕಬಾಲಿಗಳು ಠಾ!

ನಕ್ಕು ಸಾಕಾಯ್ತು.

ಅವನ ಹೆಸರು ಪಂಪಾಪತಿ. ಕಪ್ಪಗೆ, ತೆಳ್ಳಗಿರುವ ಟಿಪಿಕಲ್ ಬಳ್ಳಾರಿ ಹುಡುಗ. ಅವನು ಪಿಯು ಓದುತ್ತಿದ್ದಾನೆ. ಸಂಭಾವಿತ ಕಿರಿಯ. ಅವನು ಬಳ್ಳಾರಿಯ 'ಬಾಲಾ' ಹೊಟೇಲಿನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾನೆ. ಅಲ್ಲೇ ಇರುತ್ತಾನೆ. ಅವನ ಹುಟ್ಟೂರು ಮೋಕ. ನಾವು ಬಳ್ಳಾರಿ ಮಂದಿ ಅದನ್ನು 'ಮ್ವೋಕಿ' ಅಂತೇವೆ. ನನ್ನ ರೂಮಿಗೆ ಬರೋ room boyಗೆ, ಹೊಟೇಲಿನ ವೆಯಿಟರ‍್ಸ್‌ಗೆ, ನನ್ನ ಡ್ರೈವರುಗಳಿಗೆ ಕೈತುಂಬ tips ಕೊಡೋದು ನನ್ನ ಪರಿಪಾಠ. ಅದು ನನ್ನ ಪುಣ್ಯದ ಕೆಲಸ. ಪಂಪಾಪತಿಯನ್ನು ಮಾತಾಡಿಸಿ, ಅವನ ವಿವರಗಳನ್ನೆಲ್ಲ ಕೇಳಿ ತಿಳಿದುಕೊಂಡೆ. ಆನಂತರ ಅವನಿತ್ತ ಕಾಫಿ ಕುಡಿದು, ''ಲೇ ತಮ್ಮಾ, ಕೆಳಗೆ ಹೋಗಿ ನಮ್ಮ ಹುಡುಗರಿರ‍್ತಾರೆ ಕರಿ'' ಅಂದೆ. ಅವನು ಹೊರಟ.

''ಅಲ್ಲಲೇ, ನಾನು ಯಾರಂತ ಗೊತ್ತಾ?'' ಅಂದೆ. ಅವನು ಎಗಾದಿಗಾ ಮುಖ ನೋಡಿದ. ಗುರುತಿಸೋದು ಕಷ್ಟವಾಗಿರಬಹುದು. ಇಷ್ಟಕ್ಕೂ ಬಳ್ಳಾರಿ ಬಳಿಯ ಮೋಕಾದ ಆ ಕಪ್ಪು ಹುಡುಗ ನನ್ನನ್ನು ಯಾಕಾದರೂ ನೆನಪಿಟ್ಟುಕೊಂಡು ಗುರುತಿಸಬೇಕು? After all, ಒಬ್ಬ ರವಿ ಬೆಳಗೆರೇನ?

''ನಾನಲೇ... ನಾನು... ರವಿ ಬೆಳಗೆರೆ!'' ಅಂದೆ.

''ಹ್ಞಾಂ... ನೀವೇನ್ಸಾರ್? ನಿಮ್ ಮೊಮ್ಮಗಳು ಪರಿಣಿತಾ ಶಿವರಾಜ್ ಕುಮಾರ್ ಜತ್ಯಾಗೆ ಸಿನ್ಮಾದಾಗೆ acting ಮಾಡ್ತದಾಳಲ್ಲ-ಸಾರ್?'' ಅಂದ.

ಭಗವಂತಾ...!

ನಾನು ಕತೆಗಾರ, ಇದೇ ಬಳ್ಳಾರಿಯಲ್ಲಿ ಲೆಕ್ಚರರ್, ನಾನು ಪ್ರಸಿದ್ಧ ಪತ್ರಕರ್ತ, ಸಾಹಿತ್ಯ ಅಕಾದೆಮಿಯಿಂದ ಹಿಡಿದು ಅನುವಾದ ಅಕಾದೆಮಿತನಕ, ಅತ್ತ ಮಾಧ್ಯಮ ಅಕಾದೆಮಿಯಿಂದಲೂ ಜೀವಮಾನ ಸಾಧನೆಗೆ ಪ್ರಶಸ್ತಿ ಪಡೆದ 'ವೀರಾಧಿವೀರ', ತಗಡು ಚಿತ್ರನಟ, ಕಾಂಟ್ರೊವರ್ಸಿಯಲ್ ಕಲ್ಯಾಣ ಸುಂದರ... ನನ್ನನ್ನು ಗುರುತಿಸದೆ ಆ ಚೋಟುದ್ದದ ಪೋರಿ 'ಗುಡ್ಡಿ'ಯನ್ನ ರೆಫರ್ ಮಾಡುತ್ತಿದ್ದಾನಲ್ಲಾ ಅನ್ನಿಸಿ ಫಕಾಲನೆ ನಕ್ಕೆ! ಈ ಪ್ರಪಂಚವೇ ಹಾಗೆ. ಕುವೆಂಪು ನೆನಪಿಗಿಲ್ಲ. ಆದರೆ ಎಂಥ ಕಗ್ಗ ಹಳ್ಳಿಗನಿಗೂ ಇವತ್ತು ವಾಟ್ಸ್ಯಾಪ್ ಗೊತ್ತು. ಮೊದಲೆಲ್ಲ ದಿನಕ್ಕೆರಡು ಸಲ, ಅದಕ್ಕೂ ಮುಂಚೆ ಒಂದೇ ಸಲ ಬರುತ್ತಿದ್ದ ವಾರ್ತೆಗಳನ್ನು ಕಾಯ್ದು ಕುಳಿತು ನೋಡುತ್ತಿದ್ದರು ಜನ. ಈಗೇನಿದೆ? ಟೀವಿ ನೈನ್ ಬಿಚ್ಚಿಕೊಂಡರೆ ಇಡೀ ದಿನ, ಇಡೀ ರಾತ್ರಿ ಸುದ್ದಿ! ಅವರು ಅದೇ ಸುದ್ದಿಯನ್ನು ತಿರುವಿ-ತಿರುವ್ಯಾಡಿ ಹೇಳಿ-ತೋರಿಸಿದರೂ ಸರಿಯೇ. Suddi repeats. ಈಗ ಅದೂ ಬೇಡ: ಹತ್ತು ಟೀವಿ ಹರಡೋ ಸುದ್ದಿಯನ್ನು ಅರ್ಧ ಅಂಗೈ ಅಗಲದ ಮೊಬೈಲ್‌ನಲ್ಲಿ ಈ ವಾಟ್ಸ್‌ಆಪ್ ಹರಡಿ ಬಿಡುತ್ತದೆ. ನೋಡ್ತಿರಿ, ಕೆಲವೇ ದಿನಗಳಲ್ಲಿ ಈ ಟೀವಿಗಳೆಲ್ಲ 'ಠಾ'.

ಆದರೆ ಕೆಲವು ಸಾವಿರ ವರ್ಷಗಳ ನಂತರವೂ ಆ ಮಹಾಭಾರತ-ರಾಮಾಯಣ ಉಳಿದುಕೊಳ್ಳುತ್ತವೆ. ಟ್ಯಾಗೋರ್ ಕವಿತೆಗೆ expiry date ಇದೆಯಾ? ಪುರಂದರ ಅಥವಾ ಕನಕ ದಾಸರ ಕೀರ್ತನೆಗಳಿಗೆ? ಅಲ್ಲಮರ ವಚನಗಳಿಗೆ The End ಬರೆದವರೆಲ್ಲಿದ್ದಾರೆ?

ಅಂದ್ಹಾಗೆ, ಈ ತೆಲುಗರು ನನ್ನ ಆರಾಧ್ಯ ದೈವದಂತಹ ಚಲಂ ಅವರನ್ನು ಮರೆತು ಮಡಚಿಟ್ಟು ಬಿಟ್ಟಿದ್ದಾರಾ ಎಂಬ ಅನುಮಾನದಿಂದ ಮೊನ್ನೆ ಇಂಟರ್‌ನೆಟ್‌ನ ಕದ ತೆರೆದೆ. ಖುಷಿಯಾಗಿ ಹೋಯಿತು. ನೀವು www.writerchalam.com ಅಂತ type ಮಾಡಿ. ಬೇಸರವೆಲ್ಲ ಉಡೀಸ್. ಅಲ್ಲಿ ಚಲಂಗಾರು ನಿರಾಳವಾಗಿ ಜೀವಂತ ಸಿಗುತ್ತಾರೆ. ಅವರ ಕಾದಂಬರಿಗಳ ಕುರಿತಾದ ಚರ್ಚೆ, ಅವುಗಳ ಪಾತ್ರಗಳಾದ ಅರುಣ, ಅಮೀನಾರ ಕುರಿತಾದ ಚರ್ಚೆ, ಚಲಂ ಪತ್ನಿ ಹಾಗೂ ನಾದಿನ 'ವೊಯ್ಯಿ' ಕುರಿತ ಚರ್ಚೆ... my Goodness, ಚಲಂ ಸಮೃದ್ಧವಾಗಿ ಕೈಗೆ ಸಿಗುತ್ತಾರೆ. ಅಷ್ಟೇ ಅಲ್ಲ: ಚಲಂ ಅವರ ವೃದ್ಧಾಪ್ಯದ ದಿನಗಳ ಒಂದೇ art work ನನ್ನಲ್ಲಿತ್ತಲ್ಲ? (ಅದೇ ಎಲ್ಲರಲ್ಲೂ ಇದೆ) ಅದು ಬಿಟ್ಟು ಸುಮಾರು ಒಂದು ಡಜನ್ ಫೊಟೋಗಳು (ಚಲಂ ಅವರವು) ಆ ವೆಬ್‌ಸೈಟ್‌ನಲ್ಲಿವೆ.

ಆದರೆ ಇವತ್ತು ಮಧ್ಯಾಹ್ನದಾದ್ಯಂತ ನನ್ನನ್ನು ಆವರಿಸಿಕೊಂಡದ್ದು ಶ್ರೀಶ್ರೀ. He is another pillar of Telugu poetry. ಶ್ರೀಶ್ರೀ ಅವರದೊಂದು ಕೃತಿಗೆ ಚಲಂ ಮುನ್ನುಡಿ ಬರೆದಿದ್ದಾರೆ. ಹಾಗೆ ಚಲಂ ಕಟ್ಟರ್ ಕಮ್ಯುನಿಸ್ಟರಲ್ಲದಿದ್ದರೂ, ಅವರು ಕಮ್ಯುನಿಸ್ಟ್ ವಾದದ ವಿರೋಧಿಯಲ್ಲ. ಅವರೂ ಪಕ್ಕಾ ನಿರೀಶ್ವರವಾದಿ. ಶುದ್ಧ ಸಮಾನತಾವಾದಿ. ಕೊಂಚ ಅತಿ ಎಂಬಷ್ಟು ಸ್ತ್ರೀ ರಸಿಕ (!) ವಾದಿ. But, ಶ್ರೀಶ್ರೀ ಮಾತ್ರ ಶುದ್ಧ ರಕ್ತದಲ್ಲಿ ತೋಯಿಸಿದ ಕಮ್ಯುನಿಸ್ಟು. ಅದಕ್ಕಿಂತ ಮಿಗಿಲು, ಅವರೊಬ್ಬ ನಕ್ಸಲೈಟು. ಅಕಸ್ಮಾತ್ ಶ್ರೀಶ್ರೀ ಏನಾದರೂ ಚಲಂ ಅವರಂತೆ ರಸಿಕತೆಯೆಡೆಗೆ ವಾಲಿ ಬಿಟ್ಟಿದ್ದರೆ ಆ ಪರಿಣಾಮ ಬೇರೆಯಾಗುತ್ತಿತ್ತು. ಒಂದು ಸಂದರ್ಶನದ ಎಕ್ಸಾಂಪಲ್ ಕೊಡ್ತೇನೆ ನೋಡಿ.

''ಸರ್, ನಿಮಗೆಷ್ಟು ಪತ್ನಿಯರು?'' ಒಬ್ಬ ಪತ್ರಕರ್ತೆ ಕೇಳಿದಳು.

''ಇಬ್ಬರು'' ಅಂದರು ಶ್ರೀಶ್ರೀ.

''ಗೆಳತಿಯರು?''

''ಬೇಕಾದಷ್ಟು'' ಉತ್ತರಿಸಿದರು ಶ್ರೀಶ್ರೀ.

''ಅಲ್ಲ, ಎಷ್ಟು ಜನರೊಂದಿಗೆ ನೀವು ಸಂಬಂಧವಿಟ್ಟುಕೊಂಡಿದ್ದೀರಿ?'' ಅಂತ ಕೇಳಿಬಿಟ್ಟಳು ಪತ್ರಕರ್ತೆ. ಅದಕ್ಕೆ ಶ್ರೀಶ್ರೀ ಏನಂತ ಉತ್ತರಿಸಿದರು ಗೊತ್ತೆ?

''ನೋಡಮ್ಮಾ, ಹುಟ್ಟಿದಾಗಿನಿಂದ ಇವತ್ತಿನ ತನಕ ನೀನು ಎಷ್ಟು ಸಲ ಉಪ್ಪಿಟ್ಟು ತಿಂದಿದ್ದೀಯ? ನೆನಪಿದೆಯಾ? ನಾನಿಟ್ಟುಕೊಂಡ ಸಂಬಂಧಗಳ ಸಂಖ್ಯೆ ಹಾಗೆ...!''

I was stunned. ಶ್ರೀಶ್ರೀಗೆ ಅನೇಕ ಮದುವೆ ಹೊರಗಿನ ಸಂಬಂಧಗಳಿದ್ದವು: ಗೊತ್ತಿತ್ತು. ಅದನ್ನು ಅಷ್ಟು ಬಹಿರಂಗವಾಗಿ ಹೇಳಿಕೊಂಡಾರು ಎಂಬ ಕಲ್ಪನೆ ನನಗಿರಲಿಲ್ಲ. ಅವರ ಪಾಲಿಗೆ ಅದೊಂದು ದೊಡ್ಡ ಸಂಗತಿಯಲ್ಲ. Just trivia.

ಹಾಗೆ ಅನ್ನಿಸಿದ್ದರಿಂದಲೋ ಏನೋ ಶ್ರೀಶ್ರೀ, ಓದುಗನ ಕಣ್ಣಲ್ಲಿ ರಕ್ತ ತೊಟ್ಟಿಕ್ಕುವಂತಹ ಪದ್ಯ ಬರೆಯಲು ಸಾಧ್ಯವಾಯಿತು. ನೀವು ಒಮ್ಮೆ ಆತನ 'ಮಹಾಪ್ರಸ್ಥಾನಂ' ಕವಿತಾ ಸಂಕಲನವನ್ನು ಓದಬೇಕು. ಅವರ ಕವಿತೆಗಳು ಸಿನೆಮಾಗಳಲ್ಲಿ ಹಾಡುಗಳಾದುದನ್ನು ಕಿವಿಯಾರೆ ಕೇಳಬೇಕು. ಒಮ್ಮೆ 'ಆಕಲಿರಾಜ್ಯಂ' ಚಿತ್ರದಲ್ಲಿ ಬಳಕೆಯಾದ ಅವರ 'ಓ ಮಹಾತ್ಮಾ ಓ ಮಹರ್ಷಿ'ಯನ್ನು ನೀವೇ ಹಾಳೆ ಕೈಲಿ ಹಿಡಿದು ಓದಬೇಕು. ಶ್ರೀಶ್ರೀ ಒಬ್ಬರೇ ಅಲ್ಲ, ಅನೇಕರ ಕವಿತೆಗಳು translationಗೆ ಬಿದ್ದರೆ ಹಾಳಾಗಿ ಹೋಗುತ್ತವೆ. ಕೆಲವು ಫೇಸ್‌ಬುಕ್ ಚತುರರು ಗಾಲಿಬ್ ಕವಿತೆಗಳ ಅನುವಾದ ಮಾಡುತ್ತಾರೆ. ಅಷ್ಟೇಕೆ, ಗುಲ್ಜಾರ್‌ರನ್ನು ಅನುವಾದ ಮಾಡುತ್ತಾರೆ. ಸುಮ್ನೆ ದಾರಿಯಲ್ಲಿ ಅವರನ್ನು ನೋಡಿದಾಗ ಹತ್ತಿರಕ್ಕೆ ಕರೆದು ರಪ್ಪನೆ ಕೆನ್ನೆಗೆ ಬಾರಿಸಬೇಕೆನಿಸುತ್ತದೆ. ಹಿಂದೊಮ್ಮೆ ''ನೋಡ್ರೀ, ಉರ್ದು ಕವಿತೆಗಳನ್ನ ಕನ್ನಡಕ್ಕೆ ಸಮರ್ಥವಾಗಿ ತರಬಲ್ಲ ಒಬ್ಬೇ ವ್ಯಕ್ತಿ ಅಂದರೆ, ಅದು ರವಿ ಬೆಳಗೆರೆ'' ಎಂದು ಹಿರಿಯ ಕವಿಯೊಬ್ಬರು ಹೇಳಿದರಂತೆ. I am not sure. ನನ್ನ ಗದ್ಯ ಚೆಂದಗಿದೆ. ಗದ್ಯವನ್ನು ಚೆಂದಗೆ ಅನುವಾದಿಸಲೂ ಬಲ್ಲೆ. ಆದರೆ ಯಾವನಿಗೆ ಬೇಕ್ರೀ poetry ಸಹವಾಸ? ಅಷ್ಟಿಷ್ಟರ ಮಟ್ಟಿಗೆ ತೆಲುಗು ಪದ್ಯ ಅನುವಾದಿಸಬಲ್ಲೆನೇನೋ? Not urdu. ನಮ್ಮ ಇತಿಮಿತಿ ನಮಗೆ (atleast ನಮಗೆ) ಗೊತ್ತಿರಬೇಕು.

ನೀವು ತೆಲುಗಿನ 'ಆಕಲಿರಾಜ್ಯಂ' ಸಿನೆಮಾ ನೋಡಿದ್ದೀರಾ? ನನಗೆ ಗೊತ್ತಿಲ್ಲ. ಅದೊಂದು master ಕಲಾಕೃತಿ. ಇತ್ತೀಚೆಗೆ ತೀರಿಕೊಂಡ ಕೆ.ಬಾಲಚಂದರ್ ಅದರ ನಿರ್ದೇಶಕರು. ಹೀರೋ ಹೆಸರು ಕಮಲ ಹಾಸನ್. ನಾಯಕಿ ಶ್ರೀದೇವಿ. ಸಿನೆಮಾದ ಉದ್ದಕ್ಕೂ ಬಳಸಲಾಗಿರುವುದು ಶ್ರೀಶ್ರೀ ಅವರ ಕವಿತೆ, ಮಾತು, ಹಾಡು. ಒಂದು ಹಾಡು ಓದಿಸುತ್ತೇನೆ. ತೆಲುಗಿನಲ್ಲಿ ''ಏದಿ'' ಅಂದರೆ ಯಾವುದು. ಅಷ್ಟು ಸಾಕು, ನೀವು ಓದುತ್ತಾ ಹೋಗಿ. Just read it.

ಯಾವುದು ಕತ್ತಲೆ/ಯಾವುದು ಬೆಳಕು/ಯಾವುದು ಜೀವನ/ಯಾವುದು ಮೃತ್ಯು/ಪುಣ್ಯ ಯಾವುದು/ಪಾಪ? ಯಾವುದು ನರಕ/ಯಾವುದು ನಾಕ/ಯಾವುದು ಸತ್ಯ/ಯಾವುದಸತ್ಯ/ಯಾವುದು ನಿತ್ಯ/ಯಾವುದನಿತ್ಯ/ಯಾವುದು ಏಕ/ಯಾವುದನೇಕ/ಯಾವುದು ಕಾರಣ/ಯಾವುದು ಕಾರ್ಯ....

ಇವತ್ತಿಗೂ 'ಆಕಲಿ ರಾಜ್ಯಂ'ನ ಆ ದೃಶ್ಯ ನೋಡಿದರೆ ಗಳಗಳಿಸಿ ಅತ್ತು ಬಿಡುತ್ತೇನೆ. ಅದರಲ್ಲಿ ಕಮಲ್ ಒಬ್ಬ ರೆಬೆಲ್. ಅವನು ನಿರುದ್ಯೋಗಿ. ಅಕ್ಷರಶಃ ಹೊಟ್ಟೆಗಿಲ್ಲದ unemployed. ಅವನನ್ನು ಹೆಚ್ಚು ಕಡಿಮೆ ಅಷ್ಟೇ ಗತಿಯಿಲ್ಲದ ಶ್ರೀದೇವಿ ಪ್ರೀತಿಸುತ್ತಾಳೆ. ಅವಳಿಗೆ ಒಂದು ಚಿಕ್ಕ ನೌಕರಿಯಿದೆ. ಅವಳ ಆಫೀಸಿನ owner ಅವಳನ್ನು ಪ್ರೀತಿಸುತ್ತಾನೆ: ಅವಳಲ್ಲ. ಶತಾಯಗತಾಯ ಗಂಟು ಬಿದ್ದು ಅವಳನ್ನು ಮದುವೆಗೆ ಒಪ್ಪಿಸುತ್ತಾನೆ. ಅದ್ಹೇಗೋ, ಆ ಮದುವೆ ಕಮಲ್‌ಗೆ ನೌಕರಿ ಒದಗಿಸೀತೆಂಬ ನಂಬಿಕೆಯಲ್ಲಿ ಶ್ರೀದೇವಿ ಆ ಮದುವೆಗೆ ಒಪ್ಪುತ್ತಾಳೆ. ಅವಳ ಶ್ರೀಮಂತ ಒಡೆಯ ತಾಳಿ ಖರೀದಿಸುತ್ತಾನೆ. ಕಾರಿನಲ್ಲಿ ಹೊರಡುತ್ತಾರೆ: ಮದುವೆಗೆ. ದಾರಿಯಲ್ಲಿ ಶ್ರೀದೇವಿಗೆ ಆ ಹಾಡು ಕೇಳಿಸಿಬಿಡುತ್ತದೆ: ಈಗಷ್ಟೇ ನಾನು ಅನುವಾದಿಸಿದ ಹಾಡು: ಓ ಮಹಾತ್ಮಾ...ಓ ಮಹರ್ಷಿ. ''ಒನ್ನಿಮಿಷ...ಬಂದೆ'' ಅಂದವಳೇ ಶ್ರೀದೇವಿ ಕಾರಿಂದ ಇಳಿದು ಆ ಹಾಡು ಕೇಳಿಬರುವ ದಿಕ್ಕಿಗೆ, ಆ ರಾಗದ ಜಾಡು ಹಿಡಿದು ನಡೆಯುತ್ತಾಳೆ. ಹತ್ತಿರದಲ್ಲೇ ಪಾರ್ಕು. ಪೊದೆಯೊಂದರ ಹಿಂದೆ ಕವಿ ಶ್ರೀಶ್ರೀ ಪಟ್ಟ ಶಿಷ್ಯ ಕಮಲ್ ಅದನ್ನು ಹಾಡುತ್ತ ಕುಳಿತಿರುತ್ತಾನೆ. ಯಾವುದು ಸತ್ಯ? ಯಾವುದಸತ್ಯ? ಯಾವುದು ನಿತ್ಯ? ಯಾವುದನಿತ್ಯ?

ಹುಡುಗೀ, ಅಷ್ಟು ಗಾಢವಾಗಿ ಪ್ರೀತಿಸಿದ, ಆರಾಧಿಸಿದ, more than anything ಅಷ್ಟು ತೀವ್ರವಾಗಿ ನಂಬಿದ ನೀನೇ ಮೋಸ ಮಾಡಿದ ಮೇಲೆ, ಹೇಳೇ...ಇನ್ನೇನಿದೆ? ಎಂಬರ್ಥದ ಹಾಡು. ಎದೆ ಒಡೆದು ಹೋಗುವಂತೆ ಬಿಕ್ಕಿ ಅಳುವ ಶ್ರೀದೇವಿ ತನ್ನಿಡೀ ನಿರ್ಧಾರ ಬದಲಿಸಿ ಅವನ ತೆಕ್ಕೆಗೆ ಬೀಳುತ್ತಾಳೆ. ಅತ್ತ ಕಾರಿನಲ್ಲಿ ಕುಳಿತ ಧಣಿ: ಅವನಲ್ಲಿಗೆ ಬರುವ ಭಿಕ್ಷುಕನ ಡಬ್ಬಿಗೆ, ಖರೀದಿಸಿಟ್ಟುಕೊಂಡ ತಾಳಿ ಬಿಸಾಡಿ ಉದ್ಗರಿಸುತ್ತಾನೆ : lucky bastard! ಅದರರ್ಥ ತಾನು unlucky bastard.

ಇಂಥ ಸಿನೆಮಾಗಳನ್ನ ನೋಡಬೇಕು. ಇಂಥ ಸಾಹಿತ್ಯ ಓದಬೇಕು. ಅದು ಬಿಟ್ಟು ಬೇರೇನಿದೆ. ಬರೆದರೆ, ಅದೆಷ್ಟು ಹಾದರದ ಕಥೆಗಳು 'ಖಾಸ್‌ಬಾತ್‌'ಗಳಾದಾವೋ?

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 July, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books