Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಅವನು ಎಲ್ಲಾ ‘ಡಾಕ್ಲುಮೆಂಟ್’ಗಳನ್ನು ‘ವಾಸ್ಸಾಪ್’ನಲ್ಲಿ ಕಳಿಸಿಯಾನೆಂದು ಕಾಯುತ್ತಾ...

ಅದರ ಹೆಸರೇ ಬಾಲ.

ಅದರ ಒಡೆಯ, ನನ್ನ ಸಹಪಾಠಿ ರಾಧಾಕೃಷ್ಣ ಪೋಲಾ. ಮೊದಲು ಆತ ಕಟ್ಟಿದ ಹೊಟೇಲಿನ ಹೆಸರು ಪೋಲ! ಸ್ವಲ್ಪ ಮಟ್ಟಿಗೆ ಚೆನ್ನಾಗಿ ಉಳಿದುಕೊಂಡಿರೋದು ಹೋಟೆಲ್ ಬಾಲ. ಅಲ್ಲಿ ಉಳಿದುಕೊಂಬೋ ವ್ಯವಸ್ಥೆ ಆಗಿತ್ತು. ನನ್ನ ಹಿರಿಯ ವರದಿಗಾರ ಲೋಕೇಶ್ ಕೊಪ್ಪದ್ ವಕೀಲರ ಸುತ್ತ ಅಲೆದು, ಕೋರ್ಟಿನಲ್ಲಿರೋ ಕೇಸುಗಳಿಗೆಲ್ಲ ಒಂದು ವ್ಯವಸ್ಥೆ ಮಾಡುತ್ತಿದ್ದ. ಬಾಲಾದಲ್ಲಿ ನನ್ನ ರೂಮಿನಿಂದ ಹೊರಡೋ ಮುನ್ನ ಸ್ನಾನ ತಿಂಡಿ ಮುಗಿಸುವುದಿತ್ತು. ಶುದ್ಧ ಬಳ್ಳಾರಿಗನಂತೆ ಒಂದು ಪ್ಲೇಟ್ ‘ವಗ್ಗಣ್ಣಿ’ ತಿಂದೆ. ವಗ್ಗರಣೆಯನ್ನು ಬಳ್ಳಾರಿಗರು ಶತಮಾನಗಳಿಂದ ‘ವಗ್ಗಣ್ಣಿ’ ಅನ್ನುತ್ತಲೇ ಇದ್ದಾರೆ. ಅದರ ಜೊತೆಗೆ ಮೆಂಚಿನ ಕಾಯಿ. I mean ಮಿರ್ಚಿ.

ನನ್ನ ಕೆಲಸಗಳಿಗೆ ನೆರವಾಗುತ್ತಿದ್ದವನು ಅಚ್ಚ ಕಪ್ಪಿನ ಹುಡುಗ ಪಂಪಾಪತಿ. ಅವನದು ಹತ್ತಿರದಲ್ಲೇ ಇರುವ ಗ್ರಾಮ ಮೋಕಾ. ಇವನು ಎರಡನೆ ಪಿಯು ಓದುತ್ತಿದ್ದಾನೆ. ಹೊಟೇಲಿನಲ್ಲಿ ರೂಮು, ಊಟ, ವಸತಿ-ಫ್ರೀ. “ಆಯ್ತು ಪಂಪಾಪತೀ, ಕೆಳಗೆ ಹೋಗಿ ನಮ್ಮ ಹುಡುಗರು ಕಾಯ್ತಿರ್ತಾರೆ. ಅವರಿಗೆ ಮೇಲಕ್ಕೆ ಬರಲು ಹೇಳು" ಅಂದೆ. ಅವನು ‘ಹೂನ್ಸಾರ್’ ಅಂದ. “ಆದರೆ ಅವರಿಗೆ ಏನಂತ ಹೇಳ್ತೀ? ಯಾರು ಕರೀತಿದಾರೆ ಅಂತ ಹೇಳ್ತಿ? ನಿನಗೆ ನನ್ನ ಹೆಸರಾದರೂ ಗೊತ್ತಾ?" ಅಂದೆ. “ನಿನ್ನ ಹೆಸರೂ...ನೆನಪಾಗ ವಲ್ದಣ್ಣ..." ಅಂತಾ ಪಾದ ನುಲುಮುತ್ತಿದ್ದ.

“ಲೇಯ್, ನಾನು ಕಣೋ ರವಿ ಬೆಳಗೆರೇ!" ಅಂದೆ. As it is of a national fame.

“ಅರೆರೆ, ರವ್ ಬೆಳಗೆರೆ....ನಿಮ್ ಮೊಮ್ಮಗಳು ಶಿವರಾಜ್‌ಕುಮಾರ್ ಜೊತ್ಯಾಗೆ acting ಮಾಡ್ತದಾಳಲ್ಲ? ಅದೇ ರವಿ ಬೆಳಗೇರಿ ಏನ್ಸಾರ್?" ಅಂದ.

ಅಲ್ಲ ಕಣ್ರೀ, ನಾನು ಅದೇ ಊರಿನವನು. ಪಂಪಾಪತಿಯಂಥ ಸಾವಿರಾರು ಮಕ್ಕಳಿಗೆ ಪಾಠ ಹೇಳಿದ ಉಪನ್ಯಾಸಕ. ಇಂದಲ್ಲ ನಾಳೆ ಹಂಪೆಯಲ್ಲಿ ಪಿ.ಎಚ್‌ಡಿ., ಪ್ರಬಂಧ ಮಂಡಿಸುತ್ತಿರುವವನು. ಸಾಲದೆಂಬಂತೆ, ದಿಕ್ಕು-ದಿಕ್ಕಿಗೆ ಬೆಂಕಿ ಹಚ್ಚಿ ಬರಬಲ್ಲ ಪತ್ರಕರ್ತ. I mean ಸಂಪಾದಕ. ನಾನೊಬ್ಬ ಕತೆಗಾರ. ನನಗೆ ಒಂದು ಲಾರಿಗಾಗುವಷ್ಟು ಪ್ರಶಸ್ತಿ ಪುರಸ್ಕಾರ ಬಂದಿವೆ. ಉಹುಂ, ಅವನಿಗೆ ಅದ್ಯಾವುದೂ ಅರ್ಥವಾಗಲಿಲ್ಲ. ಛಕ್ಕನೆ ಸಿಕ್ಕಿದ್ದು, ಶಿವರಾಜಕುಮಾರ್ ಜೊತೆ ನನ್ನ ಮೊಮ್ಮಗಳು ನಟಿಸುತ್ತಿದ್ದಾಳೆ ಎಂಬ ಪಾಯಿಂಟು. ಸದ್ಯ, ಮೊಮ್ಮಗಳು ಬೆಳೆದು ನನಗೊಂದು ಅಸ್ತಿತ್ವ ಅಂತ ರೂಪಿಸಿಕೊಟ್ಟಳಲ್ಲಾ... ಅಂದುಕೊಂಡೆ. ಆ ಪರಿ ಮುಂದು ಮುಂದಕ್ಕೆ ಬೆಳೆದ ಬಳ್ಳಾರಿ ಜಿಲ್ಲೆ ಅದಿನ್ಯಾವ ಪರಿ ಹಿಂದುಳಿದಿದೆ ಎಂಬುದಕ್ಕೆ ಇದೊಂದೇ ಉದಾಹರಣೆ ಸಾಕು.

ಇದಕ್ಕೆ exactly opposite ಉದಾಹರಣೆಯೊಂದಿದೆ ನೋಡಿ. ಅವತ್ತೇ ನಾನು ಗೆಳೆಯರೊಬ್ಬರೊಂದಿಗೆ ಗಿಡದ ಅಡಿಗೆ park ಮಾಡಿ ಕಾರಿನಲ್ಲಿ ಕುಳಿತಿದ್ದೆ. ಗೆಳೆಯರೊಬ್ಬರು ಹರಟುತ್ತಿದ್ದರು. ಅಲ್ಲಿಗೆ ಸರಿಯಾಗಿ ಒಬ್ಬ ಅರವತ್ತರ ಆಸುಪಾಸಿನ ಆಜಾನುಬಾಹು ಬಂದ. ಬಹುಶಃ ದಲಿತ. ಅವನದೇನೋ ಸಮಸ್ಯೆ. ಅವನಿಗೆ ವಿವರಿಸಲಾಗುತ್ತಿಲ್ಲ. ಆ ಹೊತ್ತಿಗಾಗಲೇ ಕುಡಿದಿದ್ದ. “ಸ್ವಾಮೀ, ನಾನು ಇರೋ ‘ಡಾಕ್ಲು’ಮೆಂಟ್ಸ್ ಎಲ್ಲಾ ನಿಂಗೆ ವಾಷಾಪ್‌ನಾಗೆ ಹಾಕಿ ಕಳಿಸಿ ಬಿಡ್ತೀನಿ. ನೀನೇ ನೋಡು....ಸಹಾಯ ಮಾಡು" ಎಂದು ರಪ್ಪನೆ ಜೋರಿ ತಪ್ಪಿ ನನ್ನ ಕಾರಿನ ಮೇಲೆ ಬಿದ್ದ. ತನ್ನ ಡಾಕ್ಯುಮೆಂಟ್ಸ್ ನೆ (ಅವನಿಗದು ಡಾಕ್ಲುಮೆಂಟ್!) ಲ್ಲ Whats appಗೆ ಹಾಕಿ ಕಳಿಸಬಹುದು ಎಂಬ ಅಂದಾಜು ಇದೆಯಲ್ಲ? ಶಭಾಷ್‌ಗಿರಿಯನ್ನು technologyಗೆ ಕೊಡಲೇ ಬೇಕು. ಮೊದಲು ಪೇಜರ್ ಬಂತು. “ನೋಡು ರವೀ ಇಲ್ಲಿ ..-ಒಂದು ವೈರ್ ಇಲ್ಲ. Tower ಇಲ್ಲ. ಇದು ಹೇಗೆ ಕೆಲ್ಸ ಮಾಡ್ತಿದೆ ನೋಡು!" ಅಂದಿದ್ದ ಶ್ರೀಧರ.

ಆ ನಂತರ ಮೊಬೈಲೇ ಬಂತಲ್ಲ? ಅದು ನಮ್ಮನ್ನೆಲ್ಲ ಸಾಮೂಹಿಕವಾಗಿ ಅಚ್ಚರಿಗೆ ತಳ್ಳಿದ ಸಂಗತಿ. ಅಮೆರಿಕನ್ ಫಿಲ್ಸ್ ನಲ್ಲಿ ಕಾರೊಳಗೇ ಕೂತು ನಟರು ಮಾತನಾಡುತ್ತಾರಲ್ಲ? ಅದೇ ಇದು. ಅದನ್ನೇ ಮೆಸೇಜುಗಳಿಗೆ ಬಳಸಿಕೊಳ್ಳಿ ಅಂದರು. ಆ ನಂತರ Instagram ಬಂತು. ವಾಟ್ಸಪ್ ಬಂತು. ಒಂದೆರಡಲ್ಲ ಅದರಿಂದ ಲಾಭವಾಯ್ತಾ, ನಷ್ಟವಾಯ್ತಾ? ಲೆಕ್ಕಾಚಾರ ಆಮೇಲೆ ನೋಡೋಣ. ನಮ್ಮ ಬದುಕುಗಳ ಸಂಗತಿ ಹೇಳಿ? We all have become loners. ಎಲ್ಲರೂ ಒಬ್ಬಂಟಿಗಳಾಗಿ ಬಿಟ್ಟಿದ್ದೇವೆ. ಹಾಗಂತ ಪಶ್ಚಾತ್ತಾಪ ಬೇಕಿಲ್ಲ: ಇದು ನಾವೇ ತಂದುಕೊಂಡ ಏಕಾಂಗಿತನ. ಮೊದಲು ಟೀವಿ ಬಂದಾಗಲೇ ಸೀರಿಯಲ್‌ಗಳು-ವಾರ್ತೆಗಳು ಮನೆಯನ್ನ devide ಮಾಡಿದೆವು. ಹೆಂಗಸರು ಕೈಲಿದ್ದ ಕಾದಂಬರಿ ಬಿಸಾಕಿ ಟೀವಿ ಸೀರಿಯಲ್‌ಗಳಿಗೆ ಅಂಕಿತರಾದರು. ನಂತರ ಮೊಬೈಲ್ ಬಂತು. ಮೂಲೆ ಹಿಡಿದು ಕೂತ ಹುಡುಗಿಗೆ ಮಾತು ಬೇಡ. ಅವಳು ಯಾವ ಪ್ರಧಾನಿ ಕಾಯುತ್ತಿದ್ದಾನೋ ಎಂಬಂತೆ ಒಂದೇ ಸಮನೆ ಕುಟ್ಟಿ ಕುಟ್ಟಿ ಎಸ್ಸೆಮ್ಮೆಸ್ ಕಳಿಸುತ್ತಿರುತ್ತಾಳೆ. ಅವಳಿಗಸಲು ಮನೆಯ ಸಂಗತಿಗಳೇ ಬೇಕಾಗಿಲ್ಲ. ಆದರೆ ಮನೆಯವರ ವಿರುದ್ಧ ಸಾವಿರ ಕಂಪ್ಲೇಂಟುಗಳಿವೆ. Nobody bothers for me. I am unwanted here... ಇಂಥವೇ ಗೊಣಗಾಟಗಳು. ಇನ್ನು ಫೇಸ್‌ಬುಕ್ ಹಣಿಕುತ್ತೀರಾ? ಅದು ಶುದ್ಧ ಸ್ವಕುಚಮರ್ದನೋತ್ಸಾಹದ ಪರಮಾವಧಿ. ಇದು ನನ್ನ ಬೈಕು. ನಮ್ಮ ಕುಟುಂಬಕ್ಕೆ ಬಂದ ಇನ್ನೊಬ್ಬ ಸದಸ್ಯನಂತಹ ಕಾರು. ಇದು ನಮ್ಮ ಬುಲ್ಲು. ನಮ್ಮ ಬುಲ್‌ಷಿಟ್ಟು ಎಂಬ ಪ್ರವರ ಪಾಠಣ. ಅದಕ್ಕೆ ಸರಿಯಾಗಿ ಫೇಸ್‌ಬುಕ್‌ನಲ್ಲಿ ಸಿಗುವ ಉದ್ದರಿ ಮೆಸೇಜ್‌ಗಳನ್ನು (statusಗಳನ್ನ ಅಥವಾ updatesಗಳನ್ನ ಓದಿ ನೋಡಿ?) “ನೀವು ಯಾರಿಗೂ ಕೇರ್ ಮಾಡಬೇಕಾಗಿಲ್ಲ. Fuck off ಅನ್ನಿ!" ಎಂಬ ಆಶೀರ್ವಚನ ಒಂದು ಕಡೆ. “ನೀವು ನಿಮಗೆ ಹೇಗಿರಬೇಕು ಅನ್ನಿಸುತ್ತೆ. ಹಾಗಿದ್ದು ಬಿಡಿ. ಸುತ್ತಲಿನ ಪ್ರಪಂಚ ಹೊಂದಿಕೊಳ್ಳುತ್ತೆ!" ಎಂಬುದೊಂದು ಹೇಳಿಕೆ. “ನನ್ನ attitudeನ ನಾನು ಬದಲಿಸಿಕೊಳ್ಳಲ್ಲ: ನಾನಿರೋದೇ ಹಾಗೆ!" ಎಂಬ ವೇದವಾಕ್ಯ ಹಾಕಿ ನೋಡಿ. ಅದಕ್ಕೆ ಸಂಜೆಯಾಗೋದರೊಳಗೆ ಒಂಬೈನೂರು. ಅದರಲ್ಲೂ ಹುಡುಗಿಯೊಬ್ಬಳು ಇಂಥದ್ದು ಹಾಕಿಬಿಟ್ರೆ, ಬೆಳಿಗ್ಗೆ ಹೊತ್ತಿಗೆ ಅವಳು ಘನಾಘನ ಸುಂದರಿ!

ಒಬ್ಬ ಹೆಣ್ಣು ಮಗಳು ಅದೇಕೋ ವಿಪರೀತ ಪೇಚಾಡುತ್ತಿದ್ದಳು. ಆಕೆಯ ಫೇಸ್‌ಬುಕ್ ಹ್ಯಾಕ್ ಆಗಿ ಯಡವಟ್ಟಾಗಿತ್ತು. “ಪಾಪ, ಎಷ್ಟು ಕಾಯ್ತಾ ಇರ್ತಾರೆ ಗೊತ್ತಾ ಹುಡುಗರು? ನನ್ನ ಸಲಹೆ, ಸಮಾಧಾನಗಳ ಮೇಲೆ ಅವರೆಲ್ಲರ ಜೀವನ ನಿಂತಿದೆ!" ಅಂದಳಾಕೆ. ಹಾಗೆ ಕಾಯ್ತಿರೋದು ಯಾರು ಅಂದೆ. ಅವರೆಲ್ಲ ಆಕೆಯ ಫೇಸ್‌ಬುಕ್ ಫ್ರೆಂಡ್ಸ್. ಈ ಕಡೆ ಸೆಕೆಂಡ್ ಪಿಯುಸಿ ಪಾಸಾಗಿರಲ್ಲ: ಥರ್ಡ್ ಪಿಯುಸಿಗೆ ಅಡ್ಮಿಷನ್ ಸಿಕ್ಕಿರೋದಿಲ್ಲ. ಈ ಮನಸ್ತತ್ವ ಅವರನ್ನು ಅದೆಲ್ಲಿಗೆ ಒಯ್ದು ಬಿಡುತ್ತದೋ? ಭಗವಂತ ಬಲ್ಲ. ನೀವು ಗಮನಿಸಿ ನೋಡಿ: ತೀರ ಎಂಥ ಚಟವೆಂದರೆ ನೂರಕ್ಕೆ ತೊಂಬತ್ತೊಂಬತ್ತು ಹುಡುಗೀರು toiletಗೆ ಬಾತ್‌ರೂಮಿಗೆ ಮೊಬೈಲ್ ಒಯ್ಯುತ್ತಾರೆ. ಅಕಸ್ಮಾತ್ ಯಾರದಾದ್ರೂ call miss ಆಗಿ ಬಿಟ್ರೆ? ಇವರಿಗೆ ಅದಿನ್ಯಾವ ಹಿಲರಿ ಕ್ಲಿಂಟನ್ ಫೋನು ಮಾಡುತ್ತಾಳೋ, ತಿರುಪತಿ ತಿಮ್ಮಪ್ಪನೇ ಬಲ್ಲ. ಅವರು ದಿನಕ್ಕಿಷ್ಟು ಅಂತ ಎಸ್ಸೆಮ್ಮೆಸ್ ನಿಗದಿ ಮಾಡಿಕೊಂಡಿರುತ್ತಾರೆ. ಅವು free smsಗಳು. ಅವು ಮುಗಿಯೋ ತಂಕಾ ಎಸ್ಸೆಮ್ಮೆಸ್ ಮಾಡುತ್ತಲೇ ಇರುತ್ತಾರೆ!

ನಾನು ಕೆಲಕಾಲ ಎಲ್ಲ ಬಿಟ್ಟು ಮೆಡಿಕಲ್ ರೆಪ್ರೆಸೆಂಟೀಟಿವ್ ಆಗಿದ್ದೆ. ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸುತ್ತಬೇಕು. ಅದೇ ದಾರಿಯಲ್ಲಿ ಕಂಪ್ಲಿಗೆ ಹೋಗುತ್ತಿದ್ದೆ. ಅಲ್ಲಿ ಒಬ್ಬ ಪುಲ್ಲಯ್ಯ ಅಂತ RMP ಡಾಕ್ಟರನಿದ್ದ. ಅವನು ಅಕ್ಷರ ಬರೆಯಲು ಬಾರದ ನಿರಕ್ಷರ ಕುಕ್ಷಿ. ಬೆಳಿಗ್ಗೆ ಕ್ಲಿನಿಕ್ ತೆರೆದು ಹನ್ನೆರಡು ಗಂಟೆ ತನಕ ಕರಾರುವಾಕ್ಕಾಗಿ ಬಂದ ಪ್ರತಿ ರೋಗಿಗೂ ಒಂದು ಇಂಜೆಕ್ಷನ್ ಕೊಡುತ್ತಿದ್ದ: ರೋಗಿಗೆ ಅದು ಬೇಕಿರಲಿ-ಬಿಡಲಿ. ಹನ್ನೆರಡರ ನಂತರ ಜಪ್ಪಯ್ಯ ಅಂದರೂ no ಸೂಜಿ! “ಏನು ಪುಲ್ಲಯ್ಯಾಇದು ಸಿಸ್ಟಮ್ಮು?" ಅಂತ ಕೇಳಿದ್ದೆ. “ಸ್ವಾಮೀ, ಬೆಳಿಗ್ಗೆ ಹನ್ನೆರಡಕ್ಕೆ ಪಿಗ್ಮಿ ಕಲೆಕ್ಟರ್ ಹುಡುಗ ಕಲೆಕ್ಷನ್ನಿಗೆ ಬರ‍್ತಾನೆ. ಅವನಿಗೆ ದಿನಾ ಅರವತ್ತು ರುಪಾಯಿ ಕಟ್ಟಲೇಬೇಕು. ಇಂಜೆಕ್ಷನ್ ಚುಚ್ಚದಿದ್ರೆ ಅಷ್ಟು ಹಣ ಹುಟ್ಟೋದಿಲ್ಲ: ರುಪಾಯಿ ಜಮೆ ಆಯಿತೋ? ಇಂಜೆಕ್ಷನ್ stop! ಅವನದು ಅಷ್ಟೇ ವ್ಯವಹಾರ. ಈ ಎಸ್ಸೆಮ್ಮೆಸ್ ಎಣಿಸಿಕೊಡೋ ಬಾಲೆಯರನ್ನ ನೋಡಿದರೆ ನಂಗೆ ಡಾ.ಪುಲ್ಲಯ್ಯ ನೆನಪಾಗುತ್ತಾನೆ.

ಮೊದಲೆಲ್ಲ ಏನಿತ್ತು? ನಮ್ಮದು ಶುದ್ಧ ಬಿಸಿಲ ಸೀಮೆ. ಅದರಲ್ಲೇ ಬಳ್ಳಾರಿ ತಾಲೂಕು, ಹೊಸಪೇಟೆ-ಸಿರಗುಪ್ಪ ತಾಲೂಕು, ಆ ಕಡೆ ಹರಪನಹಳ್ಳಿ ತಾಲೂಕುಗಳಲ್ಲಿ ಯಾವ ಆಳಕ್ಕೆ ಗುದ್ದಿದರೂ ನೀರು ಚಿಮ್ಮುತ್ತಿರಲಿಲ್ಲ. ವಿಪರೀತ ಬಡತನವಿತ್ತು. ಆಗಲೇ ಬಂದಿದ್ದು mining boom ಸಟ್ಟ ಸರಹೊತ್ತಿನಲ್ಲಿ ಆಕಾಶದಿಂದ ಬಿಚ್ಚಿಕೊಂಡು ಬಿತ್ತೇನೋ ಎಂಬಂತೆ ದುಡ್ಡಿನ ಸುರಿಮಳೆ. ಇದಕ್ಕೆ ಒಬ್ಬ ಜನಾರ್ದನ ರೆಡ್ಡಿ ಮಾತ್ರ ಕಾರಣ ಅಂದರು. Not at all. ಒಂದು ಪಡೆಯೇ ಜಿಲ್ಲೆಯಾದ್ಯಂತ (ಆಂಧ್ರದಲ್ಲೂ) ಎದ್ದು ನಿಂತು ಮೈನಿಂಗ್ ಪ್ರದೇಶಗಳನ್ನು ಕೆಬರಿ ಇಟ್ಟವು. ನೋಡಬಾರದ ಗಾತ್ರದಲ್ಲಿ, ನೋಡಬಾರದ ಹೊತ್ತಿನಲ್ಲಿ ಜಿಲ್ಲೆಯ ಜನ ದುಡ್ಡು ನೋಡಿದರು. ಅದು ಅತಿರೇಕದ ಪರಮಾವಧಿ. ಉದ್ಧಾರವಾದವರು ಆದರು. ಆದರೆ ರಪ್ಪನೆ ಕಳಚಿಕೊಂಡು ಬಿತ್ತು. ಲಾರಿಗಳಿಗೆ ಬ್ರೇಕ್ ಬಿದ್ದವು. ಅಷ್ಟೂ ದೊಡ್ಡ ವ್ಯವಹಾರ ಬೋರಲು ಬಿತ್ತು: ಖಲ್ಲಾಸ್!

ಈಗ ಅಷ್ಟಿಷ್ಟು ಹಣ ಜನರ ಕೈಲಿದೆ. ಆದರೆ ಸುಲಭಕ್ಕೆ ಯಾರೂ ದುಡ್ಡು ಬಿಚ್ಚುತ್ತಿಲ್ಲ. ನಾಳೆ ಹೆಂಗೋ? Finally, ಉಳಿದಿರುವುದೇನಪ್ಪಾ ಅಂತ ನೋಡಿದರೆ, ಆ ದಲಿತ ತನ್ನ ‘ಡಾಕ್ಲುಮೆಂಟ್’ಗಳನ್ನೆಲ್ಲ ‘ವಾಸ್ಸಾಪ್’ನಲ್ಲಿ ನನಗೆ ಕಳಿಸಲು ಅಣಿಯಾಗಿರುವುದು. ಅವನಿಗೆ ನನ್ನ ನಂಬರೇ ಗೊತ್ತಿಲ್ಲ. ಯಾಕೆ ಕಳಿಸಬೇಕು ‘ಡಾಕ್ಲುಮೆಂಟು’ ಎಂಬುದೂ ಗೊತ್ತಿಲ್ಲ. ಮಧ್ಯಾಹ್ನಕ್ಕೇ ಕುಡಿದಿದ್ದಾನೆ. ಸುಮ್ಮನೆ ಹೀಗೆ ಮಾತಾಡಬೇಕು. I am sure: ಅವನಿಗೆ ನನ್ನ ಹೆಸರೂ ಗೊತ್ತಿರಲಾರದು.

ಏನಾಗಿ ಹೋಯಿತು ನನ್ನೂರು?

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 19 July, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books