Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ನೆಹರೂಗಿಂತ ಅದ್ಭುತವಾಗಿ ಫ್ಯಾಮಿಲಿ ರಾಜಕಾರಣ ಮಾಡಿದ್ದು ದೇವು

ಆಡಿದ ಮಾತು ತಮ್ಮ ನೆತ್ತಿಗೇ ತಿರುಗಿ ಬಂದು ಬೀಳುತ್ತದೆ ಎಂಬ ಮಾತು ಬಹುಶಃ ಮಾಜಿ ಪ್ರಧಾನಿ ದೇವೆಗೌಡರನ್ನು ನೋಡಿಯೇ ಶಕ್ತಿ ಪಡೆದಿರಬೇಕು ಅನ್ನಿಸತೊಡಗಿದೆ. ಯಾಕೆಂದರೆ ಒಂದು ಕಾಲದಲ್ಲಿ ನೆಹರೂ ಅವರ ವಂಶಪಾರಂಪರ‍್ಯ ರಾಜಕಾರಣದ ಬಗ್ಗೆ ವಿಪರೀತ ಎಂಬಷ್ಟು ಮಾತನಾಡಿದವರ ಪೈಕಿ ದೇವೆಗೌಡ ಕೂಡ ಒಬ್ಬರು.

ಇವತ್ತು ತಿರುಗಿ ನೋಡಿದರೆ ಅವರ ವಂಶಪಾರಂಪರ‍್ಯ ರಾಜಕಾರಣದ ಮೋಹ ಜೆಡಿಎಸ್ ಎಂಬ ಫ್ಯಾಮಿಲಿ ಓರಿಯೆಂಟೆಡ್ ಪಾರ್ಟಿಯನ್ನೇ ಚಿಂದಿ ಮಾಡಿ ಹಾಕಿದೆ. ಮೊನ್ನೆ ನಡೆದ ರಾಜ್ಯಸಭಾ ಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಚೆಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಅಹ್ಮದ್ ಖಾನ್, ಅಖಂಡ ಶ್ರೀನಿವಾಸ ಮೂರ್ತಿ ಥರದವರೆಲ್ಲ ಪಕ್ಷದ ವಿರುದ್ಧವೇ ತಿರುಗಿ ಬಿದ್ದರಲ್ಲ? ಇದರ ಬಗ್ಗೆ ಅವರನ್ನು ದೂರುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಶ್ರಮಿಸಿದವರು ಅವರು. ಇದೇ ದೇವೆಗೌಡರಿಗಾಗಿ ದುಡಿದವರು ಅವರು. ಇದೇ ಜೆಡಿಎಸ್‌ಗಾಗಿ ಬೆವರು ಹರಿಸಿದವರು ಅವರು. ಅವರಿಗಾಗಿ ದೇವೆಗೌಡರು ಏನೂ ಮಾಡಿಲ್ಲವೆಂದಲ್ಲ. ಹಾಗಂತ ದೇವೆಗೌಡರಿಂದಲೇ ಅವರೆಲ್ಲ ಸಾರೋದ್ಧಾರವಾಗಿ ಬಿಟ್ಟರು ಎಂಬಂತೆ ಮಾತನಾಡುವುದಿದೆಯಲ್ಲ? ಇದ್ಯಾಕೋ ಅತಿಯಾಯಿತು.

ಅಂದ ಹಾಗೆ ಮೊನ್ನೆ ನಡೆದ ಜೆಡಿಎಸ್ ಪ್ರಹಸನವನ್ನು ಕಂಡು ನನಗೆ ಒಂದು ಕತೆ ನೆನಪಿಗೆ ಬಂತು. ಅವತ್ತು ಯುದ್ಧಭೂಮಿಯಾಗಿದ್ದ ಅಫಘನಿಸ್ತಾನದಲ್ಲಿ ನಾನಿದ್ದೆ. ಆಗ ಜೊತೆಯಲ್ಲಿದ್ದ ಸ್ನೇಹಿತರೊಬ್ಬರು ಒಂದು ಆಫ್ರಿಕನ್ ಕತೆ ಹೇಳಿದರು. ಮೊದಲೇ ಅದು ಯುದ್ಧ ಪೀಡಿತ ದೇಶ. ಅಂತಹ ಜಾಗದಲ್ಲಿ ಕತೆ ಕೇಳುವುದೆಂದರೆ ಅದೇನು ಸುಖವೋ ಎಂಬಂತೆ ನಾನೂ ಕೇಳುತ್ತಾ ಹೋಗಿದ್ದೆ. ಆ ಕತೆಯಲ್ಲಿ ಒಂದು ಗುಡ್ಡಗಾಡು ಜನಾಂಗ ಇರುತ್ತದೆ. ಈ ಗುಡ್ಡಗಾಡು ಜನಾಂಗಕ್ಕೆ ಒಬ್ಬ ನಾಯಕ. ಆತ ಗುಡ್ಡಗಾಡು ಪ್ರದೇಶದ ಜನರ ಕಷ್ಟಗಳ ಬಗ್ಗೆ ಮಾತನಾಡುತ್ತಾ ದೊಡ್ಡ ಹೀರೋ ಆಗಿ ಬಿಡುತ್ತಾನೆ. ಹೀಗಿರುತ್ತಲೇ ದೂರದ ನಗರವೊಂದರಿಂದ ಆ ಗುಡ್ಡಗಾಡು ಪ್ರದೇಶಕ್ಕೆ ಭೂಮಿಯ ಆಸೆಗಾಗಿ ಶ್ರೀಮಂತನೊಬ್ಬ ಬರುತ್ತಾನೆ. ಆತನಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಇಲ್ಲಿ ದಂಡಿಯಾಗಿ ಭೂಮಿ ಪಡೆಯಬೇಕೆಂದರೆ ಆ ಗುಡ್ಡಗಾಡು ನಾಯಕನ ಬೆಂಬಲ ಬೇಕೇ ಬೇಕು ಅಂತ.

ಸರಿ, ಆತ ಈತನ ಸ್ನೇಹ ಕುದುರಿಸುತ್ತಾನೆ. ಅಂದ ಹಾಗೆ ಆ ಗುಡ್ಡಗಾಡು ಜನರ ನಾಯಕ ಕೂಡ ಏನೂ ಶ್ರೀಮಂತನಲ್ಲ. ಜನರ ವಿಶ್ವಾಸವೇ ಅವನ ಬಂಡವಾಳ. ಇದನ್ನರಿತ ಶ್ರೀಮಂತ ಮೆತ್ತಗೆ ಆತನಿಗೆ ದುಡ್ಡಿನ ರುಚಿ ತೋರಿಸುತ್ತಾನೆ. ಅದರಿಂದ ಲಭ್ಯವಾಗುವ ವೈಭೋಗದ ಕನಸು ತೋರಿಸುತ್ತಾನೆ. ಆತನ ಕನಸಿಗೆ ಬಲಿಯಾಗುವ ಆ ಗುಡ್ಡಗಾಡು ಜನಾಂಗದ ನಾಯಕ ಸಹಜವಾಗಿ ಆಮಿಷಕ್ಕೆ ಬಲಿಯಾಗುತ್ತಾನೆ. ಒಂದು ಕಾಲದಲ್ಲಿ ಸರಳ ಬದುಕಿನ ಮಹತ್ವವನ್ನು ಹೇಳುತ್ತಿದ್ದವನು ಕ್ರಮೇಣ, ತಾವಿರುವ ಪ್ರದೇಶ ಉದ್ಧಾರವಾಗಬೇಕಾದ್ದು ಯಾಕೆ ಅನಿವಾರ್ಯ ಎಂದು ಕತೆ ಹೇಳತೊಡಗುತ್ತಾನೆ. ಶುರುವಿನಲ್ಲಿ ಕೆಲವರ ಬಳಿ ಒಂದಷ್ಟು ಭೂಮಿ ಕೊಡಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಆತನಿಗೂ ಕಮೀಷನ್ ಬರುತ್ತದೆ. ಈ ಕಮೀಷನ್ ಹಣದಿಂದ ಆತ ತನ್ನ ಮಕ್ಕಳು ಬೆಳೆಯಲಿ. ಐಷಾರಾಮಿ ಜೀವನ ಅನುಭವಿಸಲಿ ಎಂದು ಬಯಸುತ್ತಾನೆ. ಅದು ಹಾಗೇ ಆಗುತ್ತದೆ. ಕಾಲ ಕ್ರಮೇಣ ಮಕ್ಕಳ ಮಕ್ಕಳು, ಅಂದರೆ ಮೊಮ್ಮಕ್ಕಳು ಬರುತ್ತಾರೆ. ಅವರ ಕಾಲದಲ್ಲೂ ಆ ನಾಯಕನ ದುಡಿಯುವ ಶಕ್ತಿ ಕಡಿಮೆಯಾಗಿರುವುದಿಲ್ಲ.

ಅದೇ ಕಾಲಕ್ಕೆ ತಮ್ಮಜ್ಜನ ಪವರ್ರು ನೋಡಿದ ಮೊಮ್ಮಕ್ಕಳ ಪಿತ್ಥ ನೆತ್ತಿಗೇರುತ್ತದೆ. ಹೀಗಾಗಿ ಇಡೀ ಗುಡ್ಡಗಾಡು ಪ್ರದೇಶವೇ ತಮ್ಮಜ್ಜನಿಗೆ ದೊರಕಿರುವ ಉಂಬಳಿ ಎಂದು ಭಾವಿಸುತ್ತಾರೆ. ಅಜ್ಜನ ಜೊತೆಗಿದ್ದವರು ಸೈಡಿಗೆ ಹೋದರೂ, ತಮ್ಮಪ್ಪ-ಚಿಕ್ಕಪ್ಪಂದಿರ ಜೊತೆಯಲ್ಲಿದ್ದವರನ್ನೂ ಕೀಳಾಗಿ ನೋಡತೊಡಗುತ್ತಾರೆ. ನಮ್ಮಜ್ಜನ ಪವರ್ರಿನಿಂದಾಗಿಯೇ ಇವರೆಲ್ಲ ಬೆಳೆದಿದ್ದು ಎಂದು ಬಹಿರಂಗವಾಗಿ ಆಡಿಕೊಳ್ಳತೊಡಗುತ್ತಾರೆ. ಅದೇ ಕಾಲಕ್ಕೆ ಆ ಗುಡ್ಡಗಾಡು ಪ್ರದೇಶದ ಬಹುತೇಕ ಭಾಗವನ್ನು ನುಂಗಿ ಹಾಕಿದ್ದ ಉದ್ಯಮಿಯ ಮಕ್ಕಳ ಕಾಲ ಶುರುವಾಗುತ್ತದೆ. ಅವರ ಬಳಿಯೂ ಆ ನಾಯಕ ಆಟ ಹಾಕಲು ನೋಡುತ್ತಾನೆ. ಆದರೆ ಹಲವರು ಉಲ್ಟಾ ಹೊಡೆಯುತ್ತಾರೆ. ಇಷ್ಟು ದಂಡಿಯಾಗಿ ಭೂಮಿ ಹೊಡೆಯುತ್ತೀರಿ. ಸವಲತ್ತು ಪಡೆಯುತ್ತೀರಿ. ಆದರೆ ಕಮೀಷನ್‌ನ ಶೇಕಡಾ ಐದರಷ್ಟೂ ನಮಗೆ ಬರುತ್ತಿಲ್ಲ ಎಂದು ತಕರಾರು ಎತ್ತುತ್ತಾರೆ. ಫೈನಲಿ, ಈ ಕಮೀಷನ್ ವಿಷಯದಲ್ಲಿ ಜಗಳಗಳಾಗಿ ಗುಡ್ಡಗಾಡು ಪ್ರದೇಶದ ಜನರ ಮನಸ್ಸೇ ಹೋಳಾಗುತ್ತದೆ.

ಅವತ್ತು ನಾನು ಕೇಳಿದ ಒಟ್ಟಾರೆ ತಾತ್ಪರ್ಯ ಇದು. ನನಗನ್ನಿಸುವ ಪ್ರಕಾರ, ಜೆಡಿಎಸ್‌ಗೂ ಇಂತಹದೊಂದು ರೋಗ ತಗಲಿಕೊಂಡಿದೆ. ಪಕ್ಷದಿಂದ ದೊರೆಯುವ ದೊಡ್ಡ ಲಾಭಗಳೆಲ್ಲ ದೇವೆಗೌಡರ ಮನೆಯವರಿಗೆ. ಅವರು ಬಳಸಿ ಉಳಿದರೆ ಬೇರೆಯವರಿಗೆ ಎಂಬಂತೆ. ಅರೇಸ್ಕಿ, ಅವರ ಪವರ್ರಿನಿಂದ ಅವರು ಇಷ್ಟೆಲ್ಲ ಆಡುತ್ತಿರುವಾಗ ನಾವೇಕೆ ಬೇರೆಯಾಗಿ ನಿಲ್ಲಬಾರದು. ಅವರದು ಅವರಿಗೆ, ನಮ್ಮದು ನಮಗೆ ಎಂಬಂತೆ ಜೆಡಿಎಸ್‌ನ ಭಿನ್ನರ ಪಡೆ ನಿಂತಿದೆ. ಇವತ್ತು ಯಾರೇನೇ ಕತೆ ಹೇಳಿದರೂ ಆಳದಲ್ಲಿ ಇದು ಲಾಭದ ಹಂಚಿಕೆಯಲ್ಲಿ ಆಗಿರುವ ಜಗಳವೇ ಹೊರತು ಇನ್ನೇನಲ್ಲ. ನೂರು ರುಪಾಯಿ ಲಾಭವಾದರೆ ತೊಂಬತ್ತೈದು ರುಪಾಯಿ ಅವರ ಮನೆಯವರಿಗೆ ಸೇರಬೇಕು. ಉಳಿದ ಶೇಕಡಾ ಐದರಷ್ಟನ್ನು ಮಾತ್ರ ನಾವು ತೆಗೆದುಕೊಂಡು ನೆಕ್ಕಬೇಕಾ? ಅಂತ. ಸರಿ, ಭಿನ್ನಮತ ಶುರುವಾಗಿದೆ. ಈಗ ತಾರಕಕ್ಕೇರಿ ನಿಂತಿದೆ. ಇರಲಿ, ಅಂದ ಹಾಗೆ ದೇವೆಗೌಡರು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಈ ದೇಶದಲ್ಲಿ ವಂಶಪಾರಂಪರ‍್ಯ ರಾಜಕಾರಣದ ಪಿತಾಮಹ ಅಂತ ಅವರೇನು ಹಿಂದೆ ನೆಹರೂ ಅವರನ್ನು ಬಣ್ಣಿಸುತ್ತಿದ್ದರೋ? ಅದಕ್ಕಿಂತ ದೊಡ್ಡ ಮಟ್ಟದಲ್ಲಿ ವಂಶಪಾರಂಪರ‍್ಯ ರಾಜಕಾರಣವನ್ನು ದೇವೆಗೌಡರು ಮಾಡಿದ್ದಾರೆ.

ಅಂದ ಹಾಗೆ ನೆಹರೂ ಈ ದೇಶದ ಪ್ರಧಾನಿಯಾಗಲು ಅವರಪ್ಪ ಮೋತಿಲಾಲ್ ನೆಹರೂ ಕಾರಣರಲ್ಲ. ಬದಲಿಗೆ ನೆಹರೂ ತಮ್ಮ ಕನಸಿನ ಉತ್ತರಾಧಿಕಾರಿ ಎಂದು ಗಾಂಧಿ ಭಾವಿಸಿದ್ದ ಕಾರಣಕ್ಕಾಗಿ ನೆಹರೂ ಈ ದೇಶದ ಪ್ರಧಾನಿಯಾದರು. ಅಂದ ಹಾಗೆ ನೆಹರೂ ತಮ್ಮ ಮಗಳು ಇಂದಿರಾ ಗಾಂಧಿಯನ್ನು ರಾಜಕೀಯವಾಗಿ ಬೆಳೆಸಿದ್ದು ನಿಜ. ಆದರೆ ಇಂದಿರಾ ಗಾಂಧಿ ದೊಡ್ಡ ಸ್ಥಾನಕ್ಕೆ ಹೋಗುವ ಮುನ್ನವೇ ನೆಹರೂ ತೀರಿಕೊಂಡರು. ಆನಂತರದ ದಿನಗಳಲ್ಲಿ ಇಂದಿರಾ ಗಾಂಧಿ ಅವರು ಲಾಲ್‌ಬಹಾದುರ್ ಶಾಸ್ತ್ರಿ ಅವರು ತೀರಿಕೊಂಡ ನಂತರ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಯಾವ ಲೆವೆಲ್ಲಿನಲ್ಲಿ ಹೋರಾಡಿದರು ಎಂದರೆ ಆ ದಾರಿಯಲ್ಲಿ ಬಂದ ಅತಿರಥ ಮಹಾರಥರನ್ನೆಲ್ಲ ಹೊಡೆದುರುಳಿಸಿದರು.

ಆದರೆ ನೆನಪಿಡಿ. ಇಂದಿರಾ ಗಾಂಧಿ ಅವರಿಗೆ ನೆಹರೂ ಅವರ ಚಾಣಾಕ್ಷತೆ ಬಂದಿತ್ತೇ ಹೊರತು, ನೆಹರೂ ಅವರಿಂದಲೇ ರಾಜಕೀಯವಾಗಿ ಅವರು ಉನ್ನತ ಸ್ಥಾನದಲ್ಲಿ ಪ್ರತಿಷ್ಠಾಪಿತರಾಗಿರಲಿಲ್ಲ. ತಮ್ಮ ನಂತರ ಈ ದೇಶದ ಪ್ರಬಲ ನಾಯಕನಾಗಿ ಮಗ ಸಂಜಯ ಗಾಂಧಿ ಬೆಳೆಯುತ್ತಾನೆ ಎಂದವರು ಭಾವಿಸಿದ್ದರು. ಆದರೆ ಸಂಜಯ ಗಾಂಧಿ ವಿಮಾನ ಅಪಘಾತದಲ್ಲಿ ತೀರಿಕೊಂಡ. ಮುಂದೆ ಇಂದಿರಾ ಗಾಂಧಿಯೇ ಹತ್ಯೆಯಾಗಿ ಹೋದರು. ಅವರ ಹತ್ಯೆಯ ನಂತರ ರಾಜೀವ್ ಗಾಂಧಿ ರಾಜಕಾರಣಕ್ಕೆ ಬಂದರೇ ಹೊರತು, ಇಂದಿರಾ ಗಾಂಧಿ ಅವರೇನೂ ಮಗನನ್ನು ತಂದು ಪ್ರತಿಷ್ಠಾಪಿಸಿರಲಿಲ್ಲ. ಹೋಗಲಿ, ಸೋನಿಯಾ ಗಾಂಧಿಯನ್ನು ರಾಜೀವ್ ಗಾಂಧಿ ತಂದು ಪ್ರತಿಷ್ಠಾಪಿಸಿದರಾ? ನೋ ಛಾನ್ಸ್. ನೆಮ್ಮದಿಯಾಗಿ ಮನೆಯಲ್ಲಿದ್ದ ಹೆಣ್ಣು ಮಗಳು ಆಕೆ. ರಾಜೀವ್ ಗಾಂಧಿ ಅವರು ಎಲ್‌ಟಿಟಿಇ ಉಗ್ರರಿಂದ ಹತರಾದ ನಂತರ ಸೋನಿಯಾ ಗಾಂಧಿಯನ್ನು ಬಲವಂತವಾಗಿ ರಾಜಕೀಯಕ್ಕೆ ಎಳೆತರಲಾಯಿತು. ಇವತ್ತು ದೇವೆಗೌಡರಿಗೆ ತಮ್ಮ ಮಕ್ಕಳು, ಮೊಮ್ಮಕ್ಕಳು, ಸೊಸೆಯರ ಮೇಲಿದ್ದ ಪ್ರೀತಿ ಸೋನಿಯಾ ಗಾಂಧಿಗಿದ್ದಿದ್ದರೆ ರಾಹುಲ್ ಗಾಂಧಿಯನ್ನು ಉಪಪ್ರಧಾನಿ ಹುದ್ದೆಗಾದರೂ ತಂದು ಕೂರಿಸಲು ಬೇಕಾದಷ್ಟು ಸಮಯಾವಕಾಶವಿತ್ತು. ಆದರೂ ಸೋನಿಯಾ ಗಾಂಧಿ ಆ ಕೆಲಸ ಮಾಡಲಿಲ್ಲ. ಯಾಕೆಂದರೆ ನೆಹರೂ ಕುಟುಂಬ ಎಂಬುದು ಕಾಂಗ್ರೆಸ್ ಪಾಲಿಗೆ ಒಂದು ಬ್ರ್ಯಾಂಡೇ ಹೊರತು, ಆ ಫ್ಯಾಮಿಲಿಗೆ ರಾಜಕಾರಣ ಎಂಬುದು ಅನಿವಾರ್ಯವಲ್ಲ.

ಸರಿ, ಈಗ ದೇವೆಗೌಡರ ವಿಷಯಕ್ಕೆ ಬನ್ನಿ. ದೇವೆಗೌಡರು ಮುಖ್ಯಮಂತ್ರಿಯಾದರು, ಪ್ರಧಾನಿಯಾದರು. ಅವರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಮತ್ತೊಬ್ಬ ಮಗ ರೇವಣ್ಣ ಹಲವಾರು ಖಾತೆಗಳಿಗೆ ಮಂತ್ರಿಯಾದರು. ಸೊಸೆ ಅನಿತಾ ಕುಮಾರಸ್ವಾಮಿ ಎಂಪಿಯಾದರು. ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯ್ತಿಗೆ ಬಂದು ಕೂತಿದ್ದಾರೆ. ರೇವಣ್ಣ ಅವರ ಮಗ ಪ್ರಜ್ವಲ್ ಮುಂದಿನ ಎಂಪಿ ಕ್ಯಾಂಡಿಡೇಟು. ದೇವೆಗೌಡರ ಬೀಗರು, ಬೀಗದ ಕೈಗಳೆಲ್ಲ ರಾಜಕಾರಣದಲ್ಲಿ ಮೆರೆದಿದ್ದೂ ಮೆರೆದಿದ್ದೇ. ತೆಗೆದು ನೋಡಿ. ನೆಹರೂ ಫ್ಯಾಮಿಲಿಯಲ್ಲಿ ಯಾರಾದರೂ ಈ ಪಾಟಿ ಅಧಿಕಾರದ ಬೆನ್ನ ಹಿಂದೆ ಬಿದ್ದಿದ್ದಾರಾ ಅಂತ? ಖಂಡಿತವಾಗಿಯೂ ಇಲ್ಲ. ಅಂದ ಹಾಗೆ ದೇವೆಗೌಡರು ಗಮನಿಸಬೇಕಾದ ಒಂದು ಸಂಗತಿ ಇದೆ. ವಂಶಪಾರಂಪರ‍್ಯ ರಾಜಕಾರಣ ಎಂಬುದಕ್ಕೆ ಹತ್ತು ವರ್ಷ, ಹದಿನೈದು ವರ್ಷಗಳ ಹಿಂದೆ ಸ್ವಲ್ಪ ಬೆಲೆ ಇತ್ತು. ಆದರೆ ಈಗ ವಂಶಪಾರಂಪರ‍್ಯ ರಾಜಕಾರಣದ ಮುಖ ಕಂಡರೆ ಜನ ಹೇಸಿಗೆ ಪಟ್ಟುಕೊಳ್ಳತೊಡಗಿದ್ದಾರೆ.

ಅದೇ ಪಕ್ಕದ ತಮಿಳುನಾಡನ್ನು ನೋಡಿ. ಕರುಣಾನಿಧಿಯ ಆಟಾಟೋಪಗಳು, ಅವರ ಮಕ್ಕಳಾದ ಸ್ಟಾಲಿನ್, ಅಳಗಿರಿಯ ದೊಂಬಿಗಳನ್ನು ನೋಡಿದ ತಮಿಳುನಾಡಿನ ಜನ ಅಯ್ಯೋ, ಇವರ ಬದಲು ಅಮ್ಮ ಜಯಲಲಿತಾ ಮುಖ್ಯಮಂತ್ರಿಯಾದರೆ ಪಕ್ಷದಲ್ಲಿ ಕಾರ್ಯಕರ್ತರಾದರೂ ಬೆಳೆಯಲು ಅವಕಾಶವಿದೆ. ಅವರಿಗೇನು ಮಕ್ಕಳಾ, ಮರಿಯಾ ಅಂದುಕೊಂಡು ಸತತ ಎರಡನೇ ಬಾರಿ ಚುನಾಯಿಸಿದರು. ಪಶ್ಚಿಮಬಂಗಾಳಕ್ಕೆ ಹೋಗಿ ನೋಡಿ. ಕಮ್ಯೂನಿಸ್ಟರ ರಫ್ ಆಂಡ್ ಟಫ್ ನೇಚರ್ರಿನ ನಡುವೆಯೂ ಏಕಾಂಗಿ ಹೆಣ್ಣು ಮಗಳು ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ದಾರೆ. ಯಾಕೆಂದರೆ ಗಂಟು ಮಾಡಿಡಲು ಅವರಿಗೆ ಹಿಂದೆ, ಮುಂದೆ ಯಾರೋ ಉತ್ತರಾಧಿಕಾರಿಗಳಿಲ್ಲ. ಏನಿದ್ದರೂ ಮುಂದಿನ ದಿನಗಳಲ್ಲಿ ದೀದಿಯ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ, ಕಾರ್ಯಕರ್ತರಿಗೆ ಒಂದು ಭವಿಷ್ಯ ಅಂತ ಇದೆ. ಉತ್ತರ ಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವ್ ಅವರ ಆರ್ಭಟಕ್ಕಿಂತ ಹೆಚ್ಚಾಗಿ ಮಿಂಚುವುದು ಬಹುಜನ ಸಮಾಜ ಪಕ್ಷದ ಮಾಯಾವತಿಯೇ. ಬಿಹಾರದಲ್ಲಿ ವಂಶಪಾರಂಪರ‍್ಯ ರಾಜಕಾರಣ ಮಾಡುತ್ತಿದ್ದ ಲಾಲೂ ಪ್ರಸಾದ್ ಯಾದವ್, ಇಂತಹ ರಾಜಕಾರಣದ ಬಗ್ಗೆ ಒಲವಿಲ್ಲದ ನಿತೀಶ್ ಕುಮಾರ್ ಅವರ ಕೈಕಾಲು ಹಿಡಿದು ಅಧಿಕಾರದ ಬೌಂಡರಿಗೆ ಬರಬೇಕಾಯಿತು.

ಹಾಗೆಯೇ ಸ್ವಲ್ಪ ಒರಿಸ್ಸಾಕ್ಕೆ ಬಂದು ನೋಡಿ. ಬಿಜು ಪಾಟ್ನಾಯಕ್ ಅವರ ಮಗ ನವೀನ್ ಪಾಟ್ನಾಯಕ್ ಮುಖ್ಯಮಂತ್ರಿಯಾದರೂ ವಂಶಪಾರಂಪರ‍್ಯ ರಾಜಕಾರಣ ಮಾಡುತ್ತಿಲ್ಲ. ಹೀಗಾಗಿ ಅವರು ಸೇಫ್. ಕಾರ್ಯಕರ್ತರಿಗೆ ಒಂದು ಭವಿಷ್ಯ ಅಂತ ಇದೆ. ಹೀಗೆ ಪಕ್ಷದಲ್ಲಿರುವ ಕೇಡರ್‌ಗೆ ಒಂದು ಭವಿಷ್ಯ ಅಂತ ಇದ್ದರೆ ಕೇಡರ್ ಸಹಜವಾಗಿ ಬೆಳೆಯುತ್ತದೆ. ಆದರೆ ಜೆಡಿಎಸ್‌ನಲ್ಲಿ ಕುಮಾರಸ್ವಾಮಿಯೇ ಸಿಎಂ ಕ್ಯಾಂಡಿಡೇಟ್, ರೇವಣ್ಣನವರೇ ಡಿಸಿಎಂ ಕ್ಯಾಂಡಿಡೇಟ್. ಶ್ರೀಮತಿ ಭವಾನಿ ರೇವಣ್ಣನವರಿಗೆ ಮುಂದಿನ ದಿನಗಳಲ್ಲಿ ಪವರ್ ಫುಲ್ ಮಂತ್ರಿಗಿರಿ. ಮೊಮ್ಮಗ ಪ್ರಜ್ವಲ್ ರೇವಣ್ಣನವರಿಗೆ ಜೆಡಿಎಸ್‌ನ ಜಹಗೀರು ಗ್ಯಾರಂಟಿ. ಈ ಥರ ಇದ್ದರೆ ಒಂದು ಪಕ್ಷ ಬೆಳೆಯಲು ಸಾಧ್ಯವೇ? ಪ್ರಧಾನಿಯಾದ ಹಮ್ಮಿನಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಯಾವಾಗ ದೇವೆಗೌಡರು ಪಕ್ಷದಿಂದ ಹೊರಹಾಕಿಸಿದರೋ? ಅವತ್ತೇ ಕರ್ನಾಟಕದಲ್ಲಿ ಜನತಾಪರಿವಾರ ಹೋಳಾಗಿ ಹೋಯಿತು.

ಆನಂತರ ಉಳಿದಿದ್ದು ಜೆಡಿಎಸ್ ಆದರೂ ಶುರುವಿನಲ್ಲಿ ಸಿದ್ದರಾಮಯ್ಯ, ಪ್ರಕಾಶ್, ಸಿಂಧ್ಯಾ, ಇಬ್ರಾಹಿಂ ಥರದ ನಾಯಕರು ಇದ್ದ ಪರಿಣಾಮವಾಗಿ ಅದಕ್ಕೊಂದು ಭವಿಷ್ಯ ಇತ್ತು. ಈಗೇನಿದೆ? ಸ್ವತಃ ದೇವೆಗೌಡರೇ ಮಕ್ಕಳು, ಸೊಸೆಯಂದಿರಿಗಾಗಿ, ಮೊಮ್ಮಕ್ಕಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡು ಅವರ ಕುಟುಂಬ ವಕ್ಕಲಿಗರನ್ನು ತಮ್ಮ ಅಡಿಯಾಳುಗಳು ಎಂದುಕೊಂಡು ಮೆರೆಯುತ್ತಿದೆ. ಮೊನ್ನೆ ಇಂತಹ ಧೋರಣೆಯ ವಿರುದ್ಧ ಎಂಟು ಮಂದಿ ಸಿಡಿದೆದ್ದರೆ, ದೇವೆಗೌಡರದು ಯಥಾಪ್ರಕಾರದ ಮಾತು. ಪ್ರಾದೇಶಿಕ ಪಕ್ಷವನ್ನು ಬೆಳೆಸಲು ನಾಡಿನ ಜನ ಬೆಂಬಲ ನೀಡಬೇಕು ಅಂತ. ಇವರ ಮನೆಯನ್ನು ಉದ್ಧಾರ ಮಾಡಲು ಇಡೀ ನಾಡೇ ಟೊಂಕ ಕಟ್ಟಿ ನಿಲ್ಲಬೇಕು. ಹಾಗಿದೆ ಇವರ ಮಾತಿನ ವರಸೆ.

ನೀವೇ ಹೇಳಿ. ಮೇಲೆ ಹೇಳಿದ ಕತೆಯಲ್ಲಿನ ಗುಡ್ಡಗಾಡು ಜನಾಂಗದ ನಾಯಕನಿಗೂ, ದೇವೆಗೌಡರಿಗೂ ಏನಾದರೂ ವ್ಯತ್ಯಾಸವಿದೆಯೇ? ನೆಹರೂಗಿಂತ ಇವರು ಅದ್ಭುತವಾಗಿ ವಂಶಪಾರಂಪರ‍್ಯ ರಾಜಕಾರಣ ಮಾಡಿಲ್ಲವೇ? ಯೋಚಿಸಿ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 20 June, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books