Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಇಂತಹವರೇ ಪತ್ರಕರ್ತರಾಗಬೇಕು ಎಂದು ರಾಜಕಾರಣಿಗಳು ನಿರ್ಧರಿಸಿದರೆ?

ಒಮ್ಮೆ ಇದನ್ನು ನೆನಪಿಸಿಕೊಳ್ಳಿ.

ಒಂದು ಕಾಲದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎನ್ನಿಸಿಕೊಂಡಿದ್ದ ಪತ್ರಿಕಾರಂಗದಲ್ಲಿ ಬ್ರಾಹ್ಮಣರೇ ಹೆಚ್ಚು. ಹೀಗೆ ಆಯಕಟ್ಟಿನ ಜಾಗಗಳಲ್ಲಿ ಅವರೇ ಹೆಚ್ಚಾಗಿರುವುದರಿಂದ ಉಳಿದ ಜಾತಿಯ ಪತ್ರಕರ್ತರು ಅವರ ಕೈ ಕೆಳಗೆ ದುಡಿಯಬೇಕೇ ಹೊರತು ತಮಗನ್ನಿಸಿದಂತೆ ಬರೆಯಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಮೊನ್ನೆ ಯಾವುದೋ ಪುಸ್ತಕ ನೋಡಿದೆ. ಪತ್ರಿಕೋದ್ಯಮದಲ್ಲಿ ದಲಿತರಿಗೆ ಹೆಚ್ಚಿನ ಅವಕಾಶ ದಕ್ಕಿಲ್ಲ ಎಂಬ ಹಳಹಳಿಕೆ ಅದರಲ್ಲಿತ್ತು. ನೋ ಡೌಟ್. ಆದರೆ ಒಂದು ವಿಷಯ ಮಾತ್ರ ನಿಜ. ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಪತ್ರಿಕೋದ್ಯಮದ ಆಯಕಟ್ಟಿನ ಜಾಗಗಳಲ್ಲೆಲ್ಲ ಬ್ರಾಹ್ಮಣರೇ ಬಂದು ಕೂರುವ ಕಾಲ ಹೋಗಿದೆ. ಅದೇ ರೀತಿ ದಲಿತರ ಸಂಖ್ಯೆ ಕಡಿಮೆಯಾದರೂ ಅಹಿಂದ ವರ್ಗಗಳ ಹಲವಾರು ಮಂದಿ ಮಾಧ್ಯಮ ಲೋಕಕ್ಕೆ ನುಗ್ಗಿದ್ದಾರೆ. ಇವೆಲ್ಲ ಸಹಜ ಬಿಡಿ. ಒಂದು ಸಾಮಾಜಿಕ ವ್ಯವಸ್ಥೆ ಕಾಲ ಕಾಲಕ್ಕೆ ಬದಲಾದಂತೆ ಎಲ್ಲ ರಂಗಗಳಲ್ಲೂ ಬದಲಾವಣೆಗಳು ಆಗುತ್ತಿರುತ್ತವೆ. ಒಂದಷ್ಟು ಹಳಹಳಿಕೆಗಳ ನಡುವೆಯೂ ಮಾಧ್ಯಮ ರಂಗದಲ್ಲಿ ಎಲ್ಲ ಸಮುದಾಯಗಳ ಮಿಶ್ರಣವಾಗಿದೆ.

ಆದರೆ ನನಗೆ ಆಶ್ಚರ್ಯವಾಗುತ್ತಿರುವುದು ಈ ವಿಷಯದ ಬಗೆಗಲ್ಲ. ಬದಲಿಗೆ ಮಾಧ್ಯಮ ರಂಗದಲ್ಲಿರುವ ಪ್ರಮುಖ ಟೀವಿಗಳು, ಪತ್ರಿಕೆಗಳ ಆಯಕಟ್ಟಿನ ಜಾಗಗಳಿಗೆ ಯಾರು ಬಂದು ಕೂರಬೇಕು? ಎಂಬುದನ್ನು ನಮ್ಮ ರಾಜಕೀಯ ಪಕ್ಷಗಳ ನಾಯಕರು ನಿರ್ಧರಿಸತೊಡಗಿದ್ದಾರೆ ಎಂಬುದು. ಬಿಜೆಪಿಯ ನಾಯಕರೊಬ್ಬರು ಬಯಸಿದವರೇ ಕೆಲ ಪತ್ರಿಕೆಗಳ, ಟೀವಿಗಳ ಆಯಕಟ್ಟಿನ ಜಾಗಗಳಿಗೆ ಬಂದು ಕೂರುತ್ತಿರುವುದು, ಕಾಂಗ್ರೆಸ್ ನಾಯಕರೊಬ್ಬರು ಬಯಸಿದವರೇ ಹಲವು ಜಾಗಗಳಲ್ಲಿ ಸೆಟ್ಲ್ ಆಗುತ್ತಿರುವುದು ಈಗ ಹೊಸ ವಿಷಯವಾಗಿ ಉಳಿದಿಲ್ಲ. ಆದರೆ ಹೀಗೆ ಬಂದು ಕುಳಿತವರು ಮಾಧ್ಯಮ ಲೋಕದ ಮೂಲಕ ಜನರಿಗೆ ರಾಜಕೀಯ ಲೋಕದ, ವ್ಯಾವಹಾರಿಕ ಸಾಮ್ರಾಜ್ಯದ ಸ್ಪಷ್ಟ ಚಿತ್ರಣ ನೀಡಲು ಸಾಧ್ಯವೇ? ನೋ ಛಾನ್ಸ್. ಬದಲಿಗೆ ತಮ್ಮನ್ನು ಆ ಜಾಗಕ್ಕೆ ಬಂದು ಕೂರುವಂತೆ ಮಾಡಿದವರ ವಿಷಯದಲ್ಲಿ ಇಂತಹ ಪತ್ರಕರ್ತರಿಗೆ ವಿಪರೀತ ಎಂಬಷ್ಟು ಕೃತಜ್ಞತೆ ಇರುತ್ತದೆ ಮತ್ತು ವ್ಯವಸ್ಥೆಯಲ್ಲಿ ಅದೇ ನಾಯಕ ಮೇಲೇಳಲು ಏನು ಮಾಡಬೇಕೋ? ಅದನ್ನೇ ತಮ್ಮ ಬರವಣಿಗೆಯ ಮೂಲಕ ಮಾಡುತ್ತಿರುತ್ತಾರೆ.

ರೀ, ನಿಮ್ಮ ಪತ್ರಿಕೆಗೆ, ಟೀವಿಗೆ ಇಂತಹವರನ್ನು ಛೀಫ್ ರಿಪೋರ್ಟರರನ್ನಾಗಿ ತೆಗೆದುಕೊಳ್ರೀ ಅಥವಾ ಪೊಲಿಟಿಕಲ್ ಛೀಫ್ ಮಾಡ್ರಿ ಅಂತಲೋ, ಇನ್ನೇನೋ ಸೂಚನೆಯನ್ನು ಬಿಜೆಪಿಯ, ಕಾಂಗ್ರೆಸ್‌ನ ನಾಯಕರು ಕೊಡುತ್ತಿದ್ದಾರೆ ಎಂಬುದು ಈಗ ರಹಸ್ಯವೇನೂ ಅಲ್ಲ. ಮಾಧ್ಯಮ ಲೋಕದಲ್ಲಿ ಪದೇಪದೆ ದೊಡ್ಡ ಮಟ್ಟದ ಬದಲಾವಣೆಗಳಾಗುತ್ತಿರುವುದು ಇದೇ ಕಾರಣಕ್ಕಾಗಿ. ನೀವು ಬಹುತೇಕ ಪತ್ರಕರ್ತರನ್ನು ಹಿಡಿದು ಕೇಳಿ. ರೀ, ಹೇಗಿದೆ ನಿಮ್ಮ ಮೀಡಿಯಾ? ಚೆನ್ನಾಗಿದೆಯಾ? ಅಂತ. ಈ ಪ್ರಶ್ನೆಗೆ ಬಹುತೇಕರು: ಇಲ್ಲ, ನಾನೀಗ ಆ ಮೀಡಿಯಾದಲ್ಲಿಲ್ಲ. ಬದಲಿಗೆ ಇಂತಹ ಮೀಡಿಯಾದ ಛೀಫ್ ರಿಪೋರ್ಟರು ಅಂತಲೋ? ಡೆಸ್ಕ್ ಸೀನಿಯರ್ ಅಂತಲೋ? ಪೊಲಿಟಿಕಲ್ ಛೀಫ್ ಅಂತಲೋ? ಹೇಳಿಕೊಳ್ಳುತ್ತಾರೆ.

ಹಾಗಂತ ಅವರು ಅಲ್ಲಿ ಪರ್ಮನೆಂಟಾಗಿ ಇರುತ್ತಾರೆ ಅಂದುಕೊಳ್ಳಬೇಡಿ. ಇನ್‌ಫ್ಯಾಕ್ಟ್, ಪ್ರಜಾವಾಣಿಯಂತಹ ಕೈ ಬೆರಳೆಣಿಕೆಯಷ್ಟು ಮೀಡಿಯಾಗಳನ್ನು ಬಿಟ್ಟರೆ ಉಳಿದ ಬಹುತೇಕ ಕಡೆ ಇದೇ ಸ್ಥಿತಿ. ಇವತ್ತು ಎಂ.ಜಿ. ರೋಡಿನಲ್ಲಿದ್ದವರು ನಾಳೆ ಶಾಂತಿನಗರದಲ್ಲಿರುತ್ತಾರೆ. ಇವತ್ತು ಚಾಮರಾಜಪೇಟೆಯಲ್ಲಿದ್ದವರು ನಾಳೆ ಕ್ವೀನ್ಸ್ ರೋಡಿಗೆ ಬರುತ್ತಾರೆ. ಹೀಗೆ ಬಂದವರು ಪತ್ರಿಕೋದ್ಯಮ ಮಾಡುವುದಕ್ಕಿಂತ ಮುಖ್ಯವಾಗಿ ಎರಡು ಕೆಲಸ ಮಾಡಬೇಕಾಗುತ್ತದೆ. ಒಂದು, ತಮ್ಮನ್ನು ಆ ಜಾಗಕ್ಕೆ ತಂದು ಕೂರಿಸಿದವರಿಗೆ ಸದಾ ಕೃತಜ್ಞರಾಗಿರುವುದು ಮತ್ತು ಅದಕ್ಕೆ ಪೂರಕವಾಗಿ ಬರೆಯುವುದು. ಎರಡನೆಯದಾಗಿ, ಆ ಸಂಸ್ಥೆಯ ಮಾಲೀಕರಿಗೆ ವ್ಯಾವಹಾರಿಕವಾಗಿ ಕೆಲಸ ಮಾಡಿಕೊಡುವುದು. ಈ ಎರಡು ಕೆಲಸಗಳನ್ನು ಅವರು ಯಶಸ್ವಿಯಾಗಿ ಮಾಡಿದರೋ? ಒಂದಷ್ಟು ಕಾಲ ಅಲ್ಲಿರುತ್ತಾರೆ. ಇಲ್ಲದಿದ್ದರೆ ಯಥಾಪ್ರಕಾರ ರೋಡ್ ಛೇಂಜ್ ಮಾಡಬೇಕು ಅಷ್ಟೇ.

ಇದರರ್ಥ, ಜಾಗತೀಕರಣದ ಭರಾಟೆ ಮಾಧ್ಯಮವನ್ನು ಯಾವ ಮಟ್ಟಿಗೆ ತಟ್ಟಿದೆ ಎಂದರೆ, ರೀ ಮಾಧ್ಯಮರಂಗಕ್ಕೆ ಬಂದಿದ್ದೇನೆ. ವಸ್ತುಸ್ಥಿತಿಯನ್ನು ಜನರಿಗೆ ಹೇಳುತ್ತೇನೆ ಎಂದು ಎದೆ ತಟ್ಟಿಕೊಂಡು ಧೈರ್ಯದಿಂದ ಹೇಳುವ ಪತ್ರಕರ್ತರ ಸಂಖ್ಯೆಯೇ ಕಡಿಮೆಯಾಗಿ ಹೋಗಿದೆ. ಕೇಳಿದರೆ ಏನು ಮಾಡೋದು? ಮೊದಲು ನಾವು ಉಳಿದುಕೊಳ್ಳಬೇಕು. ನಾವು ಉಳಿದುಕೊಳ್ಳಬೇಕು ಎಂದರೆ ಸಂಸ್ಥೆಯ ಮಾಲೀಕರು ಉಳಿದುಕೊಳ್ಳಬೇಕು. ಆಮೇಲಿನಿದ್ದರೂ ಜನರ ಬಗ್ಗೆ ಯೋಚಿಸಬಹುದು ಎಂಬ ಮಾತೇ ಹೆಚ್ಚಾಗಿ ಕೇಳಿ ಬರುತ್ತದೆ. ಮೀನ್ಸ್, ಮಾಧ್ಯಮ ರಂಗವೂ ಈಗ ದುಡ್ಡಿನ ಹಿಂದೆ ಬಿದ್ದಿದೆ. ಯಾವ ಮಟ್ಟಿಗೆ ಎಂದರೆ ಮೊದಲು ಸಂಪಾದಕೀಯ ವಿಭಾಗ ಮಾಧ್ಯಮದ ಮೇಲೆ ಹಿಡಿತ ಇರಿಸಿಕೊಂಡಿತ್ತು. ಈಗ ಸಂಪಾದಕೀಯ ವಿಭಾಗದ ಬಹುತೇಕ ಸಿಬ್ಬಂದಿ ಸಂಸ್ಥೆಯ ಒರಿಜಿನಲ್ ಡಾನುಗಳ ಥರ ಆಗಿ ಹೋಗಿರುವ ಜಾಹೀರಾತು ವಿಭಾಗದ ಛೀಫುಗಳ ಕೈಗೊಂಬೆಗಳಂತಾಗಿ ಹೋಗಿದ್ದಾರೆ.

ರೀ, ಇಂತಹವರನ್ನು ಕಲಿಯುಗದ ಸತ್ಯ ಹರಿಶ್ಚಂದ್ರ ಅಂತ ಬರೆಯಬೇಕು ಕಣ್ರೀ ಎಂದರೆ ಸಂಪಾದಕೀಯ ವಿಭಾಗದವರು ಕಮಕ್ಕಕಿಮಕ್ಕೆನ್ನದೆ ಅದನ್ನು ಮಾಡಬೇಕು. ಮೋದಿ ಜಿಂದಾಬಾದ್, ಸಿದ್ದರಾಮಯ್ಯ ಜಿಂದಾಬಾದ್, ಯಡಿಯೂರಪ್ಪ ಜಿಂದಾಬಾದ್ ಅಂತ ನೇರವಾಗಿ ಹೇಳದೆ ಇರಬಹುದು. ಆದರೆ ಅದೇ ಅರ್ಥ ಬರುವಂಗೆ ಬರೆಯಿರಿ ಎಂದು ಜಾಹೀರಾತು ವಿಭಾಗದವರು ಹೇಳುತ್ತಾರೆ. ಅದಕ್ಕೆ ಪೂರಕವಾಗಿ ಸಂಪಾದಕೀಯ ವಿಭಾಗದವರು ವರ್ತಿಸುತ್ತಾರೆ. ಹೀಗಾಗಿ ನಿಮಗೆ ನೆನಪಿನಲ್ಲಿರಲಿ. ಇವತ್ತು ಮೇಜರ್ ಮೀಡಿಯಾಗಳು ಅಂತೇನಿವೆ? ಇದರಲ್ಲಿ ನೂರಕ್ಕೆ ತೊಂಬತ್ತೈದು ಪರ್ಸೆಂಟು ಮೀಡಿಯಾಗಳು ಪಕ್ಕಾ ವ್ಯಾಪಾರಿ ಸಂಸ್ಥೆಗಳು. ವ್ಯಾಪಾರಂ ದ್ರೋಹ ಚಿಂತನಂ ಎಂಬ ಗಾದೆಯೇ ಇಲ್ಲವೇ? ವ್ಯಾಪಾರದಲ್ಲಿ ಅದೆಲ್ಲ ಸಹಜ. ಹೀಗಾಗಿ ನಿಮಗೆ ಬರುತ್ತಿರುವ ಸುದ್ದಿಗಳೆಲ್ಲವೂ ನಿಜ ಎಂದುಕೊಳ್ಳಬೇಡಿ. ಆ ಸುದ್ದಿ ಯಾರ ಲಾಭಕ್ಕಾಗಿಯೋ ಪ್ರಕಟವಾಗಿರಬಹುದು. ಯಾರನ್ನೋ ಮೇಲೆ ತರಲು, ಇನ್ಯಾರನ್ನೋ ಕೆಳಕ್ಕೆ ತಳ್ಳಲು ಪ್ರಕಟವಾಗುತ್ತಿರಬಹುದು. ಹೀಗಾಗಿ ಜಾಗತೀಕರಣದ ಈ ದಿನಗಳಲ್ಲಿ ಮಾಧ್ಯಮ ಸ್ವಾತಂತ್ರ್ಯ ಎಂದರೆ ಯಾವ ಕಡೆಯಿಂದ ನಗಬೇಕು ಎಂಬುದು ಖುದ್ದು ಮಾಧ್ಯಮದವರಿಗೇ ಅರ್ಥವಾಗದಂತಾಗಿದೆ.

ಅಲ್ರೀ, ನಿಮ್ಮ ಸಂಸ್ಥೆಯ ಟಿಆರ್‌ಪಿ ಜಾಸ್ತಿ ಮಾಡಿಕೊಳ್ಳಬೇಕು ಅಂತ ನೀವು ಸುದ್ದಿ ಮಾಡಲು ಹೋಗಿ ಒದೆ ತಿಂದು ಬಂದರೆ, ಅದಕ್ಕೇಕೆ ಇಡೀ ಮಾಧ್ಯಮ ಲೋಕ ತಲೆ ಕೊಡಬೇಕು? ಅಂತ ಕೇಳುವವರು ಹೆಚ್ಚಾಗಿದ್ದಾರೆ. ಯಾಕೆಂದರೆ ಮಾಧ್ಯಮಗಳು ಹೇಗೆ ನಡೆಯುತ್ತಿವೆ? ಎಂಬುದು ಇವರೆಲ್ಲರಿಗೂ ಗೊತ್ತಿದೆ. ಮುಂಚೆ ಪತ್ರಕರ್ತರ ಮೇಲೆ ಸಣ್ಣದೊಂದು ಹಲ್ಲೆಯಾದರೆ ಸಾಕು, ಇಡೀ ಮಾಧ್ಯಮ ಲೋಕವೇ ಮೇಲೆದ್ದು ನಿಂತುಬಿಡುತ್ತಿತ್ತು. ಆದರೆ ಈಗ ಸುಮ್ಮನೆ ಒಂದು ರೌಂಡು ನೋಡಿದಂತೆ ಮಾಡಿ ಸುಮ್ಮನಾಗಿಬಿಡುತ್ತದೆ. ಜಾಗತೀಕರಣ ಎಂಬುದು ಮಾಧ್ಯಮ ಲೋಕವನ್ನು ಈ ರೀತಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವಾಗ ನಾನು ಮಾಧ್ಯಮ ರಂಗಕ್ಕೆ ಬಂದು ಜಗತ್ತನ್ನೇ ಬದಲಿಸುತ್ತೇನೆ ಎಂಬ ಭ್ರಮೆಯೊಂದಿಗೆ ಯಾರು ಈ ಲೋಕಕ್ಕೆ ನುಗ್ಗಲು ಸಾಧ್ಯವಿಲ್ಲ. ಇನ್‌ಫ್ಯಾಕ್ಟ್, ನಾವು ಮಾಡಿದ ವರದಿ ಒಂದು ವ್ಯವಸ್ಥೆಯನ್ನು ಬದಲಿಸುತ್ತದೆ ಎಂದರೆ ಬೇರೆ ಮಾತು. ಆದರೆ ಬದಲಾವಣೆ ಎಂಬುದೇ ಬಿಜಿನೆಸ್ಸಿನ ಭಾಗವಾದರೆ, ಇಂತಹ ಬದಲಾವಣೆಗೆ ಸಾಮಾಜಿಕ ಕಾಳಜಿ ಎಂಬುದು ಇಲ್ಲವಾದರೆ ಮಾಧ್ಯಮ ರಂಗಕ್ಕೆ ಪಾವಿತ್ರ್ಯವೇ ಇಲ್ಲದಂತಾಗುತ್ತದೆ.

ಇವತ್ತು ಜನ ರಾಜಕಾರಣಿಗಳನ್ನು ಯಾಕೆ ಕೆಟ್ಟದಾಗಿ ನೋಡುತ್ತಾರೆ? ಸಹಜವಾಗಿಯೇ ಬಹುತೇಕರು ಸ್ವಜನ ಪಕ್ಷಪಾತ ಮಾಡುತ್ತಾರೆ. ಹೀಗಾಗಿ ಅವನಾ? ಅಯ್ಯೋ, ಅವರು ಗೆದ್ದರೂ ಒಂದೇ, ಸೋತರೂ ಒಂದೇ ಬಿಡ್ರಿ. ಗೆದ್ದರೆ ತಮ್ಮ, ತಮ್ಮ ಹಿಂಬಾಲಕರ ಮನೆ ಉದ್ಧಾರವಾಗುವಂತೆ ಮಾಡುತ್ತಾರೆ. ಸೋತರೆ ಮತ್ತೊಬ್ಬರು ಬಂದು ಅದೇ ಕೆಲಸ ಮಾಡುತ್ತಾರೆ ಎಂದು ಬಿಡುತ್ತಾರೆ. ಒಂದು ಕಾಲದಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ನೆಲೆಯಾಗಿದ್ದ ಈ ಭಾವನೆ ಇವತ್ತು ಮಾಧ್ಯಮ ಲೋಕದ ಮೇಲೆ ಆವರಿಸಿದೆ. ಅಯ್ಯೋ, ಆ ಪೇಪರಾ? ಆ ಟೀವಿಯಾ? ಅದು ಇಂತಹವರ ಪರ ಎಂದು ಜನ ನಿರರ್ಗಳವಾಗಿ ಮಾತನಾಡುತ್ತಾರೆ. ಹಲವು ವರ್ಷಗಳ ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ. ಮಾಧ್ಯಮ ಲೋಕದ ಜನರೆಂದರೆ ಅವರನ್ನು ಗೌರವದಿಂದ ನೋಡುವ ಕಾಲವಿತ್ತು. ಆದರೆ ಈಗ, ರೀ ನೀವೇನೇ ಮಾಡಿದರೂ ಅವರು ಇಂತಹವರ ಪರವಾಗಿಯೇ ಬರೆಯುತ್ತಾರೆ. ಇಂತಹವರ ವಿರುದ್ಧವಾಗಿಯೇ ಬರೆಯುತ್ತಾರೆ ಎಂದು ಸುಲಭವಾಗಿ ಜನ ತೀರ್ಪು ನೀಡುತ್ತಾರೆ ಎಂಬುದರ ಅರ್ಥ.

ಇವತ್ತು ಮಾಧ್ಯಮ ಎಂಬುದು ರಂಗವಾಗಿಲ್ಲ. ಬದಲಿಗೆ ಉದ್ಯಮವಾಗಿದೆ. ಅರ್ಥಾತ್, ಬಿಜಿನೆಸ್ ಆಗಿದೆ. ಬಿಜಿನೆಸ್‌ನಲ್ಲಿ ಯಾರನ್ನಾದರೂ ಎತ್ತಬಹುದು, ಯಾರನ್ನಾದರೂ ತುಳಿಯಬಹುದು ಎಂಬ ಲೆಕ್ಕಾಚಾರ ಮುಖ್ಯವೇ ಹೊರತು ಜನ ಅನುಭವಿಸುತ್ತಿರುವ ಕಷ್ಟವಲ್ಲ. ಒಂದು ವೇಳೆ ಆ ಕಷ್ಟದಿಂದ ತಮ್ಮ ಸಂಸ್ಥೆಯ ಟಿಆರ್‌ಪಿ ಹೆಚ್ಚುತ್ತದೆ ಎಂದಾದರೆ ಮಾಧ್ಯಮಗಳು ಅದನ್ನೂ ಮಾಡುತ್ತವೆ. ನಿಮಗೆ ಗೊತ್ತಿರಲಿ. ಈ ರಿಯಾಲಿಟಿ ಷೋಗಳ ಪೈಕಿ ಬಹುತೇಕ ಷೋಗಳಿಗೆ ಇಂತಹ ಬಿಜಿನೆಸ್ ಮನೋಭಾವವೇ ಮುಖ್ಯ. ಯಾವುದೋ ಬಡ ಕುಟುಂಬದ ಗಂಡ- ಹೆಂಡತಿಯನ್ನು ತಂದು ಟೀವಿಗಳಲ್ಲಿ ಚರ್ಚೆಗೆ ಕೂರಿಸುವುದು, ಅವರಿಗೆ ಇಂತಿಷ್ಟು ಅಂತ ಹಣ ಕೊಟ್ಟು, ಮಾತಿನ ಮಧ್ಯೆ ಧಡಾರನೆ ಮೇಲೆದ್ದು ಹೆಂಡತಿ ತನ್ನ ಗಂಡನನ್ನು ರಪ್ಪ ರಪ್ಪ ಅಂತ ಬಾರಿಸುವಂತೆ ಮಾಡುವುದು ಕೂಡ ಆಳದಲ್ಲಿ ಜಾಗತೀಕರಣದ ಒಂದು ಭಾಗವೇ. ಫೈನಲಿ, ಸಂಬಂಧಗಳನ್ನೂ ಅಲ್ಲಿ ವ್ಯಾಪಾರಕ್ಕಿಡಲಾಗುತ್ತದೆ. ಯಾವುದು ಹೈಯೆಸ್ಟ್ ಬಿಜಿನೆಸ್ಸು ಮಾಡುತ್ತದೆ ಎಂಬುದನ್ನು ಉದ್ಯಮಪತಿಗಳು ಗಮನಿಸುತ್ತಾರೆ. ಹೀಗೆ ಮಾಧ್ಯಮ ಲೋಕವೆಂಬುದು ಇವತ್ತು ಸಿಂಗಲ್ ಡಿಜಿಟ್ ಲಾಟರಿಯಂತೆ ಒಂದು ಉದ್ಯಮವಾಗಿ ಬದಲಾಗುತ್ತಿದೆಯೇ ಹೊರತು ಇನ್ನೇನಲ್ಲ.

ಅಲ್ರೀ, ಇಂತಹ ಮೀಡಿಯಾಕ್ಕೆ ಇಂತಹವರೇ ಛೀಫ್ ಆಗಬೇಕು ಎಂಬಲ್ಲಿಗೆ ನಮ್ಮ ರಾಜಕೀಯ ನಾಯಕರು, ಬಿಜಿನೆಸ್ ಸಾಮ್ರಾಟರು ನಿರ್ಧರಿಸುತ್ತಾರೆ ಎಂದರೆ ಮಾಧ್ಯಮ ರಂಗ ಯಾವ ಲೆವೆಲ್ಲಿಗೆ ತಲುಪಿರಬೇಕು. ಒಂದು ಕಾಲದಲ್ಲಿ ತಮಿಳುನಾಡಿನ ಕರುಣಾನಿಧಿ ಫ್ಯಾಮಿಲಿ ‘ಉದಯ’ ಟೀವಿ ಆರಂಭಿಸಿತು. ಅದರ ಬೆನ್ನಲ್ಲೇ ಜೈಕಾರ ಹಾಕಿಸಿಕೊಳ್ಳಲು ಜಯಲಲಿತಾ ಕೂಡ ‘ಜಯಾ’ ಟೀವಿ ಮೇಲೇಳಲು ಕಾರಣರಾದರು. ಕ್ರಮೇಣ ಈ ಪರಂಪರೆ ದೇಶದುದ್ದ ಯಾವ ರೀತಿ ಹರಡಿದೆ ಎಂದರೆ ಒಂದೋ, ಬಹುತೇಕ ಮಾಧ್ಯಮಗಳು ಉದ್ಯಮಿಗಳ ಕೈಲಿದೆ. ಇಲ್ಲವೇ ರಾಜಕಾರಣಿಗಳ ಕೈಲಿದೆ. ನಿಜವಾದ ಮಾಲೀಕನೇ ಸಂಪಾದಕನಾಗಿರುವ, ತನ್ನಿಚ್ಛೆಯಂತೆ ನಡೆಸುವ ಮಾಧ್ಯಮಗಳ ಸಂಖ್ಯೆ ಬೆರಳೆಣಿಕೆಯಷ್ಟಾಗಿ ಹೋಗಿದೆ. ಇದು ಕ್ರಮೇಣ ಮರೆಯಾಗುತ್ತಾ, ಮರೆಯಾಗುತ್ತಾ ಹೋದರೆ ಏನಾಗುತ್ತದೆ? ಯೋಚಿಸಿದರೆ ನಿಜಕ್ಕೂ ಗಾಬರಿಯಾಗುತ್ತದೆ.

ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 May, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books