Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಸಿದ್ದು ಸರ್ಕಾರ ತಾನೇ ಕುಸಿಯುತ್ತಿರುವಾಗ ಈ ಸತ್ಯಹರಿಶ್ಚಂದ್ರ ಸುಮ್ಮನಿದ್ದರೆ ಸಾಕು

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪಡಸಾಲೆಯಿಂದ ಹೊಸ ಸುದ್ದಿಯೊಂದು ತೇಲಿ ಬಂದಿದೆ. ಅದೆಂದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮೂರೂವರೆ ವರ್ಷಗಳ ಆಡಳಿತಾವಧಿಯ ವಿವರಗಳನ್ನು ಒಳಗೊಂಡ ಕಲಿಯುಗದ ಸತ್ಯಹರಿಶ್ಚಂದ್ರ ಎಂಬ ಗ್ರಂಥವನ್ನು ಪ್ರಕಟಿಸುವುದು. ಇದು ಎಷ್ಟರ ಮಟ್ಟಿಗೆ ನಿಜವೋ? ಗೊತ್ತಿಲ್ಲ. ಆದರೆ ಅಂತಹುದೊಂದು ಪುಸ್ತಕ ಬಂದರೆ ಯಡಿಯೂರಪ್ಪನವರ ವರ್ಚಸ್ಸು ಪಾತಾಳಕ್ಕೆ ಕುಸಿಯಲಿದೆ ಎಂಬುದು ಮಾತ್ರ ನಿಜ. ಯಾಕೆಂದರೆ ಯಡಿಯೂರಪ್ಪನವರು ಕರ್ನಾಟಕವನ್ನಾಳಿದ ಮೂರೂವರೆ ವರ್ಷಗಳ ಕಾಲಾವಧಿಯಲ್ಲಿ ದಿ ಬೆಸ್ಟ್ ಎಂಬಂತಹ ಆಡಳಿತವನ್ನೇನೂ ನೀಡಿರಲಿಲ್ಲ.

ಆಳವಾಗಿ ಗಮನಿಸಿ ನೋಡಿದರೆ ಯಡಿಯೂರಪ್ಪನವರ ಕಾಲದಲ್ಲಿ ಆದ ತಲೆನೋವುಗಳ ಹೊಡೆತವನ್ನು ಇದುವರೆಗೂ ರಾಜ್ಯ ಭರಿಸಿಕೊಳ್ಳಲು ಸಾಧ್ಯವಾಗಿಲ್ಲ. ತಮಾಷೆ ಎಂದರೆ ಹೀಗಿದ್ದರೂ ಯಡಿಯೂರಪ್ಪ ಬಿಜೆಪಿಯ ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಇನ್ನೇನು ಭವಿಷ್ಯದ ಸಿಎಂ ರೆಡಿಯಾಗುತ್ತಿದ್ದಾರೆ ಎಂದೇ ಅನ್ನಿಸಿತ್ತು. ಆದರೆ ಅವರು ರಾಜ್ಯ ಬಿಜೆಪಿಯ ಅಧ್ಯಕ್ಷರಾದ ಕೆಲವೇ ಕಾಲದಲ್ಲಿ ರಾಜ್ಯ ಬಿಜೆಪಿಯ ವರ್ಚಸ್ಸು ತಳ ಕಚ್ಚತೊಡಗಿದೆ. ಕಾರಣ ಸ್ಪಷ್ಟ. ಕೆಜೆಪಿಗೆ ತಮ್ಮ ಜೊತೆ ಯಾರ‍್ಯಾರು ಬರಲಿಲ್ಲವೋ ಅವರನ್ನೆಲ್ಲ ಗುರುತಿಸಿ, ಗುರುತಿಸಿ ಬಾರಿಸುವ ಕೆಲಸಕ್ಕೆ ಯಡಿಯೂರಪ್ಪ ಇಳಿದಿದ್ದಾರೆ. ಪರಿಣಾಮವಾಗಿ ಸಿದ್ದರಾಮಯ್ಯನವರ ಸರ್ಕಾರವನ್ನು ಸ್ವಯಂಬಲದ ಮೇಲೆ ಉರುಳಿಸುವ ಶಕ್ತಿಯನ್ನು ಬಿಜೆಪಿ ಕಳೆದುಕೊಳ್ಳುತ್ತಿದೆ. ಅಬ್ಬಬ್ಬಾ ಎಂದರೆ ದೇವೆಗೌಡ ಹಾಗೂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜೊತೆ ಕೈ ಜೋಡಿಸಿ ಅಧಿಕಾರ ಹಿಡಿಯಲು ಅದು ಸಮರ್ಥವಾಗಬಹುದಷ್ಟೇ.

ಅಂದ ಹಾಗೆ ಕುಮಾರಸ್ವಾಮಿ ಮತ್ತು ದೇವೆಗೌಡರ ಜೊತೆ ಸೇರಿ ಬಿಜೆಪಿ ಅಧಿಕಾರ ಹಿಡಿಯುವ ಸ್ಥಿತಿ ಬಂದಿತು ಎಂದುಕೊಳ್ಳಿ. ಯಡಿಯೂರಪ್ಪನವರ ರಾಜಕೀಯ ಭವಿಷ್ಯ ಮುಗಿಯಿತು ಎಂದರ್ಥ. ಅವರು ಅಧಿಕಾರದಲ್ಲಿದ್ದಾಗ ಧಾರಾಳವಾಗಿ ಕಪ್ಪಕಾಣಿಕೆ ಪಡೆಯುತ್ತಿದ್ದವರು, ಸೈಟು-ಮನೆ ಅಂತ ಮಾಡಿಕೊಂಡವರು ಬೀದಿಯಲ್ಲಿ ನಿಂತು ಏನೇ ಬೊಗಳಿದರೂ ಫೈನಲಿ, ಯಡ್ಡಿ ತಮ್ಮ ರಾಜಕೀಯ ಜೀವನದ ಲಾಸ್ಟ್ ಸ್ಟೇಜಿನಲ್ಲಿದ್ದಾರೆ. ಇಂತಹ ಟೈಮಿನಲ್ಲಿ ಅವರ ಕುರಿತು ಕಲಿಯುಗದ ಸತ್ಯ ಹರಿಶ್ಚಂದ್ರ ಎಂಬ ಪುಸ್ತಕ ಬಂದರೆ ಆಹಾ, ಕನ್ನಡಿಗರು ನೋಡಿ ಆನಂದಿಸಬೇಕು. ಅಂದ ಹಾಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೂರು ವರ್ಷ ಪೂರೈಸಿತಲ್ಲ? ಈ ಮೂರು ವರ್ಷಗಳ ಅವಧಿಯಲ್ಲಿ ಅದು ಯಾರಲ್ಲೂ ಹೇಳಿಕೊಳ್ಳುವಂತಹ ಭರವಸೆಯನ್ನು ಮೂಡಿಸಲಿಲ್ಲ. ಅಧಿಕಾರಕ್ಕೆ ಬರುಬರುತ್ತಿದ್ದಂತೆಯೇ ಅಭಿನವ ದೇವರಾಜ ಅರಸು ಅಂತ ತಮ್ಮ ಅಭಿಮಾನಿಗಳು ಹೊಗಳುವಂತೆ ನೋಡಿಕೊಂಡ ಸಿದ್ದರಾಮಯ್ಯ ತಪ್ಪಿಯೂ ದೇವರಾಜ ಅರಸರ ಸನಿಹಕ್ಕೂ ಸುಳಿಯಲಿಲ್ಲ. ಬದಲಿಗೆ ಕರ್ನಾಟಕವನ್ನು ಹೈಕಮಾಂಡ್ ಪಾಲಿಗೆ ಸಮೃದ್ಧ ಹುಲ್ಲುಗಾವಲನ್ನಾಗಿ ಮಾಡಿದರು. ಟೈಮುಟೈಮಿಗೆ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡಿರುವ ದಿಗ್ವಿಜಯ್‌ಸಿಂಗ್ ಮೂಲಕ ಹೈಕಮಾಂಡ್ ವರಿಷ್ಠರಿಗೆ ಕಪ್ಪಕಾಣಿಕೆ ಸಲ್ಲುವಂತೆ ನೋಡಿಕೊಂಡರು.

ವಾಸ್ತವವಾಗಿ ಇದಿಷ್ಟೇ ಅವರ ಸಾಧನೆ. ಉಳಿದದ್ದನ್ನು ಬಿಡಿ. ಸರ್ಕಾರ ಎಂಬ ವ್ಯವಸ್ಥೆಯಲ್ಲಿ ಅಧಿಕಾರಿಗಳಿರುತ್ತಾರೆ. ಸಹಜವಾಗಿ ಅವರು ಒಂದಷ್ಟು ಕೆಲಸ ಮಾಡುತ್ತಾರೆ. ವಾಸ್ತವವಾಗಿ ಅವರು ಏನು ಕೆಲಸ ಮಾಡುತ್ತಾರೋ? ಅದಕ್ಕೆ ಪೂರಕವಾಗಿ ತಮ್ಮ ದೂರದೃಷ್ಟಿಯ ಮೂಲಕ ಆಡಳಿತ ನಡೆಸುವ ರಾಜಕಾರಣಿಗಳು ರಾಜ್ಯಕ್ಕೆ ಒಳ್ಳೆಯದು ಮಾಡಬೇಕು. ಆದರೆ ಸಿದ್ದರಾಮಯ್ಯನವರ ಮಂತ್ರಿ ಮಂಡಲವನ್ನು ತೆಗೆದುನೋಡಿ. ಆರೇಳು ಮಂದಿ ಬಿಟ್ಟರೆ ಉಳಿದ ಬಹುತೇಕ ಮಂತ್ರಿಗಳು ಶುದ್ಧ ನಿರುಪಯೋಗಿಗಳು. ನಾಟಿ ಹಸುಗಳ ಅರೆಪಾವು ಹಾಲು, ಬುಟ್ಟಿಗಟ್ಟಲೆ ಸೆಗಣಿ ಎಂಬಂತೆ. ಬಹುತೇಕ ಸಚಿವರಿಗೆ ತಮ್ಮ ಖಾತೆಯ ಮೇಲೆ ನಯಾಪೈಸೆಯ ಪ್ರೀತಿಯೂ ಇಲ್ಲ. ಇಂತಹ ಅಧಿಕಾರಿಗಳು ಏನು ಹೇಳುತ್ತಾರೋ? ಅದನ್ನು ಕೇಳಿಕೊಂಡು ಆರಾಮಾಗಿರುತ್ತಾರೆ. ಅಡ್ಡಾಡಲು ಕಾರು, ವೈಭವೋಪೇತ ಬಂಗಲೆ, ಜಿಂದಾಬಾದ್ ಹೇಳಲು ಒಂದಷ್ಟು ಮಂದಿ ಭಟ್ಟಂಗಿಗಳು. ಇದನ್ನು ಬಿಟ್ಟು ಸಿದ್ದರಾಮಯ್ಯನವರ ಸರ್ಕಾರದಲ್ಲಿ ಇನ್ನೇನಿದೆ? ಇಂತಹ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಅಡ್ಡ ಮಲಗಿಸಲು ದೊಡ್ಡ ಯತ್ನವೇನೂ ಬೇಡ. ವೀರಾವೇಶವೂ ಬೇಡ. ಸುಮ್ಮನೆ ಈ ಸರ್ಕಾರದ ನಡವಳಿಕೆಗಳ ಕುರಿತು ಜನರ ಗಮನಕ್ಕೆ ತಂದರೆ ಸಾಕು.

ಈಗ ಎಕ್ಸಾಂಪಲ್ಲು ನೋಡಿ. ಸಿದ್ದರಾಮಯ್ಯನವರ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ನಾವೇ ಅನ್ನುತ್ತದೆ. ಆದರೆ ವಾಸ್ತವವಾಗಿ ಕೇಂದ್ರ ಸರ್ಕಾರ ಇಪ್ಪತ್ತು ರುಪಾಯಿಗೆ ಒಂದು ಕೆಜಿಯಂತೆ ಭತ್ತ ಖರೀದಿಸಿ, ಅದನ್ನು ಐದು ರುಪಾಯಿಗೆ ಕೆಜಿಯಂತೆ ರಾಜ್ಯ ಸರ್ಕಾರಕ್ಕೆ ಕೊಡುತ್ತದೆ. ಅಂದರೆ ಹದಿನೈದು ರುಪಾಯಿಗಳಷ್ಟು ಹಣವನ್ನು ಕೇಂದ್ರ ಸರ್ಕಾರ ಕೊಡುತ್ತದೆ ಮತ್ತು ಒಂದು ಲಕ್ಷದ ಅರವತ್ತೊಂದು ಸಾವಿರ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ರಾಜ್ಯಕ್ಕೆ ಸರಬರಾಜು ಮಾಡುತ್ತದೆ. ಆದರೆ ರಾಜ್ಯಕ್ಕೆ ಬೇಕಿರುವುದು ಒಂದು ಲಕ್ಷ ಐವತ್ತೇಳು ಸಾವಿರ ಮೆಟ್ರಿಕ್ ಟನ್ ಅಕ್ಕಿ. ಈ ಅಕ್ಕಿಯನ್ನು ಅದು ಅನ್ನಭಾಗ್ಯ ಯೋಜನೆಯ ಮೂಲಕ ಬಡವರಿಗೆ ಕೊಡುತ್ತದೆ. ಅದಕ್ಕಾಗಿ ಅದು ಬಿಟ್ಟು ಕೊಡುವುದು ಐದು ರುಪಾಯಿ. ಆದರೆ ಅದೇ ಅಕ್ಕಿಯ ಮೇಲೆ ಕೇಂದ್ರ ಸರ್ಕಾರ ಹದಿನೈದು ರುಪಾಯಿ ಬಿಟ್ಟು ಕೊಟ್ಟಿರುತ್ತದೆ ಅಂತ ಸಿದ್ದರಾಮಯ್ಯ ಸರ್ಕಾರ ಅಪ್ಪಿತಪ್ಪಿಯೂ ಹೇಳುವುದಿಲ್ಲ. ಇದನ್ನು ವಿವರವಾಗಿ ಅಧ್ಯಯನ ಮಾಡಿ ಜನರಿಗೆ ಹೋಗಿ ಅನ್ನಭಾಗ್ಯ ಯೋಜನೆಯ ಆಳದಲ್ಲಿ ನಡೆಯುತ್ತಿರುವುದೇನು? ಅಂತ ಬಿಜೆಪಿಯವರು ಜನರಿಗೆ ಹೇಳಿದರೂ ಸಾಕು. ಆದರೆ ಯಡಿಯೂರಪ್ಪ ನಿಜಕ್ಕೂ ಕಲಿಯುಗದ ಸತ್ಯಹರಿಶ್ಚಂದ್ರ.

ಹೀಗಾಗಿ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟ ಸಚಿವರ ಬಗ್ಗೆ ಛಾರ್ಜ್‌ಶೀಟ್ ತರುತ್ತೇವೆ ಎಂದು ಘೋಷಣೆ ಕೂಗುತ್ತಾರೆ. ಅವರಿಗೆ ಜನರ ಅಭಿವೃದ್ಧಿಗಿಂತ ರಾಜಕೀಯ ಮುಖ್ಯ. ತಮ್ಮ ಕಾಲ ಎಂದರೆ ರಾಮರಾಜ್ಯ. ಜನರೆಲ್ಲ ಸಂತೃಪ್ತಿಯಿಂದಿದ್ದರು ಎಂದವರು ತಿಳಿದುಕೊಂಡಿದ್ದಾರೆ. ಆದರೆ ಹೋಲಿಸಿ ನೋಡಿದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಜೈಲು, ಬೇಲುಗಳ ಕಳಂಕ ಅಂಟಿಕೊಂಡಿಲ್ಲ. ಅಷ್ಟರ ಮಟ್ಟಿಗೆ ಯಡಿಯೂರಪ್ಪನವರ ಸರ್ಕಾರಕ್ಕಿಂತ ಸಿದ್ದರಾಮಯ್ಯನವರ ಸರ್ಕಾರ ವಾಸಿ. ಹೀಗಿರುವಾಗ ಅವರು ಇವರ ಸರ್ಕಾರದಲ್ಲಿರುವ ಭ್ರಷ್ಟ ಮಂತ್ರಿಗಳ ವಿರುದ್ಧ ಛಾರ್ಜ್‌ಶೀಟ್ ಹೊರತರುತ್ತಾರಂತೆ. ಜೋಕು ಮಾಡುವ ಮನಸ್ಥಿತಿ ಇರಬೇಕು. ಆದರೆ ಅಪಹಾಸ್ಯ ಮಾಡುವ ಮಟ್ಟಕ್ಕಿಳಿಯಬಾರದು.

ಈಗ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಜನರ ನಿರೀಕ್ಷೆಯಂತಾಗಲಿಲ್ಲ. ಆ ಮಾತು ಬೇರೆ. ಯಾಕೆಂದರೆ ಮೊದಲನೆಯದಾಗಿ ಅವರನ್ನು ಮತ್ತು ದೇವರಾಜ ಅರಸರನ್ನು ಹೋಲಿಸುವುದೇ ಸರಿಯಲ್ಲ. ದೇವರಾಜ ಅರಸರ ಕಾಲಘಟ್ಟವೇ ಬೇರೆ. ಸಿದ್ದರಾಮಯ್ಯನವರ ಕಾಲಘಟ್ಟವೇ ಬೇರೆ. ದೇವರಾಜ ಅರಸರು ಆಡಳಿತ ನಡೆಸುತ್ತಿದ್ದಾಗ ಜಾಗತೀಕರಣ ಎಂಬುದು ಇನ್ನೂ ದೇಶದೊಳಗೆ ನುಗ್ಗಿರಲಿಲ್ಲ. ಹೀಗಾಗಿ ಆಗ ಶೋಷಿತ ಜಾತಿಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವುದು ಒಂದು ಸವಾಲಾಗಿತ್ತು. ದೇವರಾಜ ಅರಸರು ಈ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಮಾಡಿದರು. ಆದರೆ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗುವ ಕಾಲಕ್ಕಾಗಲೇ ಜಾಗತೀಕರಣ ಎಂಬ ಭೂತ ದೇಶದೊಳಗೆ ನುಗ್ಗಿ ದಶಕಗಳೇ ಆಗಿವೆ. ಈಗ ಎಲ್ಲ ಬಿಟ್ಟ, ಮಗ ಭಂಗಿ ನೆಟ್ಟ ಎನ್ನುವಂತೆ ಜಾತಿಗಳ ಜನಸಂಖ್ಯೆಯನ್ನು ಕಂಡು ಹಿಡಿದು ವ್ಯವಸ್ಥೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಸಾಧಿಸುವುದಾಗಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ.

ಅಂದ ಹಾಗೆ ಕರ್ನಾಟಕದ ಜಾತಿ ವ್ಯವಸ್ಥೆಯನ್ನು ಗಮನಿಸಿದವರಿಗೆ ಸಂಖ್ಯಾ ಬಲದಲ್ಲಿ ದಲಿತರೇ ನಂಬರ್ ಒನ್ ಎಂಬುದು ಗೊತ್ತಿತ್ತಲ್ಲವೇ? ಆದರೆ ಇದುವರೆಗೂ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ. ಯಾಕೆಂದರೆ ಜಾತಿಗಳನ್ನು ಒಡೆಯುವ ಕೆಲಸವನ್ನು ಹಿಂದೆ ರಾಜಕೀಯವಾಗಿ ಮಾಡುವ ಕೆಲಸ ನಡೆಯುತ್ತಿತ್ತಾದರೂ ಈಗ ಜಾಗತೀಕರಣ ಎಂಬ ವ್ಯವಸ್ಥೆ ಇನ್ನಷ್ಟು ಕುಶಲ ರೀತಿಯಲ್ಲಿ ಅದನ್ನು ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜಾಗತೀಕರಣದ ಯುಗದಲ್ಲಿ ದುಡ್ಡಿದ್ದವನಿಗೆ ಬಲ ಜಾಸ್ತಿಯೇ ಹೊರತು ಜಾತಿಗಳಿಗೆ ಬಲವಲ್ಲ. ಯಾವ ಜಾತಿಯವರು ಮುಖ್ಯಮಂತ್ರಿಯಾಗಬೇಕು, ಯಾವ ಜಾತಿಯವರು ಪ್ರಧಾನಿಯಾಗಬೇಕು ಎಂಬುದಕ್ಕಿಂತ ಯಾರು ಬಂದು ಆ ಜಾಗದಲ್ಲಿ ಕುಳಿತರೆ ತಾವು ದುಡ್ಡು ಮಾಡಲು ಅನುಕೂಲ ಎಂದು ಜಾಗತೀಕರಣದ ಡಾನುಗಳು ಯೋಚಿಸುತ್ತಾರೆ. ಇವತ್ತು ಸಿದ್ದರಾಮಯ್ಯನವರು ಜಾಗತೀಕರಣದ ಸೂಕ್ಷ್ಮಗಳನ್ನು, ಅದು ಹೈಕಮಾಂಡ್ ಮುಂದೆ ಇಟ್ಟಿರುವ ಸವಾಲನ್ನು ಎದುರಿಸಲು ಶಕ್ತರಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ನಾಳೆ ಆ ಕೆಲಸದಲ್ಲಿ ಅವರು ಅಸಮರ್ಥರು ಎಂಬುದು ಸಾಬೀತಾಗಲಿ ನೋಡಿ. ಇದೇ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಮುಲಾಜೇ ಇಲ್ಲದೆ ಕೆಳಗಿಳಿಸಿಬಿಡುತ್ತದೆ.

ಅಂದ ಹಾಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಜಾಗತೀಕರಣದ ಸನ್ನಿವೇಶವನ್ನು ಎದುರಿಸಲು ಅಗತ್ಯವಾದ ಕ್ಯಾಂಡಿಡೇಟು ಸಿಕ್ಕಾಗಿದೆ. ಆದರೆ ಅವರನ್ನು ಸಿಎಂ ಹುದ್ದೆಯ ಮೇಲೆ ತಂದು ಕೂರಿಸಲು ಅದು ಕಾಯುತ್ತಿದೆ. ಒಂದು ಸಲ ಕುದುರೆಯೇರಿರುವ ಸಿದ್ದರಾಮಯ್ಯ ಆ ಕುದುರೆಯನ್ನು ಓಡಿಸಲು ಅಸಮರ್ಥ ಎಂಬುದು ಮನದಟ್ಟಾದರೆ ಅನುಮಾನವೇ ಬೇಕಿಲ್ಲ. ಹೈಕಮಾಂಡ್ ಸಿದ್ದರಾಮಯ್ಯನವರನ್ನು ಕೆಳಗಿಳಿಸಿಬಿಡುತ್ತದೆ. ಹೀಗಾಗಿ ಇವತ್ತು ಸಿದ್ದರಾಮಯ್ಯನವರನ್ನು ನಾವೇನು ನೋಡುತ್ತಿದ್ದೇವೆ. ಅವರು ಸನ್ನಿವೇಶದ ನಾಯಕರೇ ಹೊರತು ದೇವರಾಜ ಅರಸರಂತೆ ವಿಷನರಿ ಇರುವ ನಾಯಕರಲ್ಲ. ಅವರ ವಿಷನರಿ ಈಗಿನ ಕಾಲಕ್ಕೆ ಸೂಟೆಬಲ್ಲೂ ಅಲ್ಲ. ಆದರೆ ಅದು ಸಾಮಾಜಿಕವಾಗಿ. ಆದರೆ ಆರ್ಥಿಕವಾಗಿ ಅವರು ಜಾಗತೀಕರಣದ ಸೂಕ್ಷ್ಮಗಳನ್ನು ಅರಿತಿದ್ದಾರೆ. ಸಿಎಂ ಪೋಸ್ಟಿನಲ್ಲಿ ಉಳಿದುಕೊಂಡಿದ್ದಾರೆ.

ಪರಿಸ್ಥಿತಿ ಹೀಗಿರುವುದರಿಂದಲೇ ಮುಖ್ಯಮಂತ್ರಿಯಾಗಿ ಅವರು ಮಹತ್ವದ್ದನ್ನು ಸಾಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವರನ್ನು ನಿಜವಾಗಿಯೂ ನಂಬಿದವರು, ಇವರಿಂದ ದೇವರಾಜ ಅರಸರ ಮಾದರಿಯಲ್ಲಿ ಪರಿವರ್ತನೆಯಾಗುತ್ತದೆ ಎಂದು ನಂಬಿದವರು ಕ್ರಮೇಣ ದೂರವಾಗುತ್ತಿದ್ದಾರೆ. ಹೀಗೆ ನೋಡನೋಡುತ್ತಿದ್ದಂತೆಯೇ ಅವರ ಜೊತೆಗಿದ್ದ ಮೂಲಗುಂಪು ಬಹುತೇಕ ದೂರವಾಗುತ್ತದೆ. ಸಿದ್ದರಾಮಯ್ಯ ಕೂಡ ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ದುರ್ಬಲರಾಗುತ್ತಾರೆ. ಹೀಗೆ ಒಂದು ಸರ್ಕಾರ ದುರ್ಬಲವಾದಾಗ ಅದನ್ನು ಎನ್‌ಕ್ಯಾಷ್ ಮಾಡಿಕೊಳ್ಳುವುದೂ ಕಲೆ. ಆದರೆ ಬಿಜೆಪಿಯ ಅಧ್ಯಕ್ಷರಾದ ಯಡಿಯೂರಪ್ಪನವರಿಗೆ ಈ ಕಲೆಗೆ ಅಗತ್ಯವಾದ ಮಂತ್ರವೇ ಮರೆತು ಹೋದಂತಿದೆ. ಸುಖಾಸುಮ್ಮನೆ ಅರಚಿಕೊಂಡರೆ ತಮ್ಮ ನಾಯಕತ್ವದ ಖದರ್ರು ಜಾಸ್ತಿ ಎಂದು ಅವರು ಅಂದುಕೊಂಡಿದ್ದಾರೆ. ಹೀಗಾಗಿಯೇ ಪಕ್ಷದಲ್ಲಿರುವ ಬಹುತೇಕರನ್ನು ಅದಾಗಲೇ ದೂರ ಮಾಡಿಕೊಂಡಿದ್ದಾರೆ. ಅನಂತಕುಮಾರ್ ಅವರಿಗೆ ಹತ್ತಿರದವರಲ್ಲ, ಈಶ್ವರಪ್ಪ ಹತ್ತಿರದವರಲ್ಲ, ಪ್ರಹ್ಲಾದ್ ಜೋಷಿ ಹತ್ತಿರದವರಲ್ಲ. ಅಷ್ಟೇ ಏಕೆ? ಜಗದೀಶ್ ಶೆಟ್ಟರ್ ತರದ ಸೌಮ್ಯ ಸ್ವಭಾವದ ನಾಯಕರೂ ಅವರಿಗೆ ಹತ್ತಿರದವರಾಗಿ ಉಳಿದಿಲ್ಲ.

ಕಾರಣ ಇಷ್ಟೇ. ಸಿಎಂ ಸಿದ್ದರಾಮಯ್ಯನವರು ತಮ್ಮ ಅಕ್ಕಪಕ್ಕ ಇರಿಸಿಕೊಂಡವರಿಗಿಂತ ಅಪಾಯಕಾರಿ ವ್ಯಕ್ತಿಗಳನ್ನು ಯಡಿಯೂರಪ್ಪ ತಮ್ಮ ಪಕ್ಕ ಇರಿಸಿಕೊಂಡಿದ್ದಾರೆ ಮತ್ತು ಅವರು ಹೇಳಿದಂತೆ ಕೇಳುತ್ತಿದ್ದಾರೆ. ಯಾವಾಗ ಇಂತಹವರನ್ನು ಅವರು ದೂರವಿಡಲು ಸಮರ್ಥರಾಗುವುದಿಲ್ಲವೋ? ಆಗ ಕ್ರಮೇಣ ಅವರ ಶಕ್ತಿ ನಾಶವಾಗುತ್ತಾ, ಮುಂದಿನ ಚುನಾವಣೆಯ ವೇಳೆಗೆ ಬಿಜೆಪಿ ಅಧಿಕಾರದಲ್ಲಿ ಪಾಲು ಪಡೆಯಲು ಜೆಡಿಎಸ್ ಪಕ್ಷವನ್ನು ಅವಲಂಬಿಸುವ ಸ್ಥಿತಿ ಬರುತ್ತದೆ. ಕಲಿಯುಗದ ಸತ್ಯಹರಿಶ್ಚಂದ್ರ ಯಡಿಯೂರಪ್ಪ ಅಂತಹ ಸ್ಥಿತಿಯನ್ನು ನಿರ್ಮಿಸಿಕೊಳ್ಳದಿರಲಿ. ಯಾಕೆಂದರೆ ಒಂದು ಕೆಟ್ಟ ಸರ್ಕಾರ ಅಸ್ತಿತ್ವದಲ್ಲಿರುವಾಗ ಜನರಿಗೆ ದೂರಗಾಮಿ ನೆಲೆಯಲ್ಲಿ ಒಂದು ಭರವಸೆಯ ಚುಕ್ಕಿಯಾದರೂ ಕಾಣಬೇಕು. ಆದರೆ ಆ ಚುಕ್ಕಿಯೇ ಮಸುಕಾಗಿ ಹೋದರೆ? ಯಡಿಯೂರಪ್ಪನವರ ಹೆಜ್ಜೆಗಳನ್ನು ನೋಡಿದರೆ ಯಾಕೋ ಹಾಗನ್ನಿಸುತ್ತಿದೆ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 May, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books