Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಕಳಚಿಕೊಂಡಿತು ನೋಡಿ ಶನಿ ಸುಬ್ಬೇಗೌಡನ ಹಳೇ ವಿಕೆಟ್!

“ಅವನು ತೀರಿಕೊಂಡ"

ಹಾಗಂತ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದ ಬಿ.ಸುರೇಶ್. ಆ ಹೊತ್ತಿಗೆಲ್ಲ ನಮ್ಮ ಹುಡುಗರು ಸುದ್ದಿ ದೊಗೆದಿದ್ದರು. ಸತ್ತವನು ಗತಕಾಲದ ಪರಿಚಿತ ಎಂ.ಎಸ್. ಸತೀಶ್. ಸಾವಿನ ಸುದ್ದಿ ಕೇಳಿ, ಖಚಿತಪಡಿಸಿಕೊಂಡು ನನಗೆ ಏನೆಂದರೆ ಏನೂ ಆಗ ಬೇಕಿರಲಿಲ್ಲ. ಸ್ನೇಹಕ್ಕೆ, ನಂಬಿಕೆಗೆ, ವಿಶ್ವಾಸಕ್ಕೆ-ಯಾವುದಕ್ಕೂ ಅವನು ಅರ್ಹನಲ್ಲ: ಸ್ಮರಣೆಗೂ. ನನಗೆ ಅವನು ಅಜಮಾಸು 1989ರಿಂದಲೂ ಪರಿಚಿತ. ಅದೊಮ್ಮೆ,

“ರವೀ, ಆಫೀಸ್ನಲ್ಲಿ ಇದೀಯಾ? ಅವ್ನು ಅಲ್ಲಿ ಧೋಬಿ ಘಾಟ್‌ನಲ್ಲಿ ಬಿದ್ದು ಬಿಟ್ಟಿದ್ದಾನಂತೆ. ಇಲ್ಲಿ ನನ್ನ ಅಸಿಸ್ಟೆಂಟ್ಸ್ ಕೂಡ ಯಾರೂ ಇಲ್ಲ. ಅವನನ್ನ ಎತ್ತಿ ಹಾಕಿ ಬರಬೇಕಲ್ಲ? ಅಂದಳು ಗೌರಿ. ಹಾಗೆ ನಾನು ಮತ್ತು ಲಂಕೇಶ್‌ರ ಮಗಳು ಗೌರಿ ಆಗೊಮ್ಮೆ ಈಗೊಮ್ಮೆ ಮಾತನಾಡುತ್ತಿರುತ್ತೇವೆ. Nice person ಅವಳು. ನಮ್ಮ ಒಂದಿಬ್ಬರು ಹುಡುಗರನ್ನು ಕರೆದು ಆಫೀಸಿಗೆ ಹತ್ತಿರದಲ್ಲೇ ಇರುವ ಧೋಬಿ ಘಾಟ್ ಬಳಿಗೆ ಕಳಿಸಿದೆ. ರಸ್ತೆ ಪಕ್ಕದಲ್ಲೇ ಬೈಕೂ ಕೆಡವಿಕೊಂಡು, ಎಚ್ಚರ ತಪ್ಪಿ ಅಂಗಾತ ಬಿದ್ದಿದ್ದನಂತೆ ಸತೀಶ. ಎತ್ತಿ ಜೀಪಿಗೆ ಹಾಕಿಕೊಂಡು ಅವನ ಮನೆಯಲ್ಲಿ ಇವರು ಕೆಡವಿ ಬಂದಿದ್ದರು. ನನಗೆ ಅವನ ಇತರೆ details ಕೇಳಿಸಿಕೊಳ್ಳುವ ಉಮ್ಮೇದಿಯೂ ಇರಲಿಲ್ಲ. ಅವನು ಕುಡಿಕುಡಿದು ಎಲ್ಲಂದರಲ್ಲಿ ಬೀಳುವುದು ಗೊತ್ತೇ ಇತ್ತು. ಅವನು ಮೂಲತಃ ಬೆಂಗಳೂರಿನವನೇ. ರಾಜಾಜಿನಗರದ ಆಸುಪಾಸಿನಲ್ಲಿ ಬೆಳೆದವನು. Mostly, ಕೆ.ಎಲ್.ಇ. ಕಾಲೇಜಿನಲ್ಲಿ ಓದಿದ್ದವನು. ‘ಅಭಿಮಾನಿ’ ಪ್ರಕಾಶನದಲ್ಲಿ ಕೆಲಸ ಮಾಡುತ್ತಿದ್ದ ಕಾಲದಿಂದ ನನಗೆ ಪರಿಚಿತ. ಅವನ ಇಂಗ್ಲಿಷು ಸುಮಾರಾಗೇ ಇತ್ತು. ಇದ್ದ ಒಬ್ಬ ಅಣ್ಣನಿಗೆ ಇವನು ಸಾಕಾಗಿದ್ದ. ಅಕ್ಕಂದಿರಿಗೆ ಸತೀಶ ಸದಾ ಆತಂಕದ ಸಂಗತಿ. ಮೊದಲಿಂದಲೂ ಒಂದೇ ಕಂಪ್ಲೇಂಟು: ಕುಡೀತಾನೆ. ಸತೀಶನ ಬಗ್ಗೆ ಅವನ ಮನೆಯಾಕೆ ಶುಭಾಗೆ ಎಷ್ಟು ಅಸಹ್ಯ ಹುಟ್ಟಿತ್ತೆಂದರೆ, ಪುಟ್ಟ ಮಗಳನ್ನೂ ಕರೆದುಕೊಂಡು ಈ ಬೆಂಗಳೂರೇ ಬಿಟ್ಟು ಮೈಸೂರು ಸೇರಿಕೊಂಡು ಬಿಟ್ಟಿದ್ದರು. ಆಕೆ ತುಂಬ ಗಂಭೀರವಾದ, ಗೌರವಯುತ ನಡತೆಯ ಹೆಣ್ಣುಮಗಳು. ಅವನ ಮಗು ತುಂಬ ಮುದ್ದಾಗಿತ್ತು. ದುರಂತವೆಂದರೆ, ಸತೀಶನ ತಂದೆ ತಾಯಿ ವಯಸ್ಸಾದ ಕಾರಣಕ್ಕೆ ಪುಟ್ಟಪರ್ತಿ ಸೇರಿ ಅಲ್ಲೇ ಮಣ್ಣಾಗಿ ಹೋದರು.

ಮೊದಲೆಲ್ಲ ಸತೀಶ್ ಬಿಗಿಯಾಗೇ ಇದ್ದ. ಕುಳ್ಳಗಿನವನಾದರೂ ಮೈಕಟ್ಟು ಬಿಗಿಯಾಗಿತ್ತು. ಕುಡಿಯದೆ ಇದ್ದ ದಿನಗಳಲ್ಲಿ ಚೆನ್ನಾಗಿ dress ಮಾಡಿಕೊಳ್ಳುತ್ತಿದ್ದ. ಎಲ್ಲ ತರಹದ ಗಾಡಿಗಳನ್ನ drive ಮಾಡುತ್ತಿದ್ದ. ಅವನಿಗೆ ಮದುವೆಯಾಯಿತು ಅಂತ ಗೊತ್ತಾದಾಗ ಗಂಡ-ಹೆಂಡತೀನ ನನ್ನ ಮನೆಗೆ ಊಟಕ್ಕೆ ಕರೆದಿದ್ದೆ. ಆಕೆ ಆಗ ಬಸುರಿ. ಆಗ ಅವನು ಕುಡಿಯುತ್ತಿರಲಿಲ್ಲ. ಒಂದು ಖಾಯಿಲೆ ಬಗ್ಗೆ ಅಷ್ಟಿಷ್ಟು ಓದಿಕೊಂಡಿದ್ದೆ. ಅದನ್ನೀಗ ಆಲ್ಕೋಹಾಲಿಸಂ ಅಂತಾರೆ. ಮೊದಲು ಡಿಪ್ಸೋಮೇನಿಯಾ ಅನ್ನುತ್ತಿದ್ದರು. ಅದಕ್ಕೆ ಈಡಾದವರು ವಿಪರೀತ ಕುಡಿಯುತ್ತಾರೆ. ಅದು ಕುಡಿದಷ್ಟೂ ಹಂಬಲು ತೀರದ ಮದ್ಯ ರೋಗ. ಒಂದಷ್ಟು ದಿನ ಕುಡಿತ ನಿಲ್ಲಿಸುತ್ತಾರೆ: only to return to the habit. ನನ್ನ ಹೆಂಡತಿಯ ತಮ್ಮ ಅನಂತನಿಗೆ ಇದೇ ಖಾಯಿಲೆ. ಮೊದಲೆಲ್ಲ ಸತೀಶನ ಕುಡಿತದ ಬಗ್ಗೆ ನಮಗೆ ಗೊತ್ತಿರಲಿಲ್ಲ. ನಾವೆಲ್ಲ ಆ ವಿಷಯದಲ್ಲಿ ‘masters’. ನಾನಂತೂ ಹೆಚ್ಚೂ ಕಡಿಮೆ ಹದಿನಾಲ್ಕು-ಹದಿನೈದು ಲಾರ್ಜ್‌ಗಳಷ್ಟು ಕುಡಿದು ಬೈಕ್ ಓಡಿಸಿಕೊಂಡು ಹೋಗಿ ಮನೆ ಸೇರುತ್ತಿದ್ದೆ. ಆದರೆ ಕೆಲ ದಿನಗಳಲ್ಲಿ ನಮಗೆ ವರದಿ ಬರತೊಡಗಿತು. ಸತೀಶ ನಮ್ಮೊಂದಿಗೆ ಕುಡಿಯುತ್ತಿದ್ದ. ಮನೆಗೆ ಹೋಗುವಾಗ ಎಚ್ಚರತಪ್ಪಿ ಎಲ್ಲೆಂದರಲ್ಲಿ ಬಿದ್ದು ಬಿಡುತ್ತಿದ್ದ. ಕೆಲವು ಸಲ ಪತ್ನಿಯನ್ನು ಹೊಡೆಯುತ್ತಿದ್ದ. ಆಕೆಯ ಸೋದರರೊಂದಿಗೆ ಜಗಳಕ್ಕೆ ಬೀಳುತ್ತಿದ್ದ. ಕಾಲಾಂತರದಲ್ಲಿ ಅವನು ಸ್ವತಂತ್ರನಾಗಿ drive ಮಾಡಲು ಸಾಧ್ಯವಿಲ್ಲ ಎಂಬಂತಾಗಿ ಹೋದ. He became totally alcoholic. ಒಂದಷ್ಟು ದಿನ ಅವನನ್ನು ಶಾಲೆಯ ಒಂದಷ್ಟು ಕೆಲಸ ನೋಡಿಕೊಳ್ಳಲು ಬಿಟ್ಟೆ. ಸತೀಶ್ ಮತ್ತೆ ಚರಂಡಿಗೆ ಬಿದ್ದ ಸುದ್ದಿ ಬಂತು. ಅವನು ಹೆಂಗಸರ ತಂಟೆಗೆ ಹೋಗುತ್ತಿರಲಿಲ್ಲ. ಆ ಸಹನೆ ಅವನಿಗಿರಲಿಲ್ಲ. ಅವನು ಮತ್ತೆ ಕುಡೀತಿದಾನೆ ಅಂತ ಸುದ್ದಿ ಕಿವಿಗೆ ಬಿದ್ದರೆ ಸಾಕು: “ನಿವೇದಿತಾ, ಇವನು ನಾಳೆಯಿಂದ ಕೆಲಸಕ್ಕೆ ಬರೋದಿಲ್ಲ ನೋಡು" ಅನ್ನುತ್ತಿದ್ದೆ.

ಇವನ ಕೈಲಿ ಅದನ್ನು ನಿಯಂತ್ರಿಸಲಾಗದು ಅಂತ ಖಚಿತವಾದ ಮೇಲೆ ಶಾಲೆಯಿಂದ ತೆಗೆದು ಪತ್ರಿಕೆಯ ಕೆಲಸಕ್ಕೇ ಹಾಕಿಕೊಂಡೆ. ಸುಮ್ಮನೆ ನನ್ನ ಜೊತೆಗಿರು ಮಾರಾಯಾ ಅನ್ನುತ್ತಿದ್ದೆ. ಕುಡಿತ ಬಿಟ್ಟರೆ ಅವನಿಗೆ ಇನ್ನೊಂದು ಚಟವಿತ್ತು. ಅವನು ಯಾವಾಗ ಹುಡುಕಿದರೂ ಸ್ವಲ್ಪ ಖ್ಯಾತನಾಮರನ್ನೇ ಹುಡುಕುತ್ತಿದ್ದ. ಕೆಲವು ಕಾಲ ಅವನು ಗುಂಡೂರಾಯರ ಕಾಲ ಸಂದಿಯಲ್ಲಿ ಓಡಾಡಿಕೊಂಡಿದ್ದ. ಆನಂತರ ದಾವಣಗೆರೆಯ ಶ್ರೀಮಂತರೊಬ್ಬರೊಂದಿಗೆ ಇದ್ದ. ಆಮೇಲೆ ನನಗೂ ಸ್ನೇಹಿತರೇ ಆದ ಕೇತಮಾರನಹಳ್ಳಿಯ ಕಾರ್ಪೊರೇಟರ್ ಕೇಶವಮೂರ್ತಿಯ ಜೊತೆಯಲ್ಲಿ ಓಡಾಡಿಕೊಂಡಿದ್ದ. ಮುಂದೆ ಬಾಲಕೃಷ್ಣ ಕಾಕತ್ಕರ್ ಜೊತೆ ಕಾಣಿಸಿಕೊಂಡ. ಸಮಸ್ಯೆಯೆಂದರೆ, ತಾನು ಯಾರೊಂದಿಗೇ ಓಡಾಡಿರಲಿ, ಕೆಲವು ದಿನಗಳ ನಂತರ ಅವನು ಮತ್ತೊಬ್ಬ ‘ಧಣಿ’ಯನ್ನು ಹುಡುಕುತ್ತಾನೆ. ಆ ಧಣಿಯೆದುರು ಹಿಂದಿನ ಧಣಿಯ ಕುರಿತು ಬಾಯಿಗೆ ಸಿಕ್ಕಂತೆ ಮಾತನಾಡುತ್ತಾನೆ. ಆ ವಿಷಯದಲ್ಲಿ ಸತೀಶ್ ನಯಾಪೈಸೆಯ ನಿಯತ್ತೂ ಇಲ್ಲದ ಕ್ರಿಮಿ.

ಅದೊಮ್ಮೆ ಬೆಳಿಗ್ಗೆ ಬೆಳಿಗ್ಗೆಯೇ ಮನೆಗೆ ಬಂದ. ಕುಳಿತವನು ಗಳಗಳನೆ ಅತ್ತ. “ಅಘೋರಿಗಳ ಸಹವಾಸ ಮಾಡಿ ಕೆಟ್ಟು ಹೋಗಿಬಿಟ್ಟೆ ಸರ್!" ಅಂದ. ಮೈಮೇಲೆ ಒಂದು ಪಂಚೆ, ಒಂದು ಅಂಗಿ ಮಾತ್ರ ಇತ್ತು. ನೇರವಾಗಿ ಕರೆದುಕೊಂಡು ಹೋಗಿ ಚಡ್ಡಿ, ಬನೀನು, ಅಂಗಿ, ಪ್ಯಾಂಟು, ಚಪ್ಪಲಿ ಸಮೇತ ಎಲ್ಲವನ್ನೂ ಕೊಡಿಸಿದೆ: ಎರಡೆರಡು ಜೊತೆ. ಕೆಲಸಕ್ಕೆ ಬಂದು ಕುಳಿತ. ಆಫೀಸಿನಲ್ಲಿ ಎಲ್ಲರೂ ಅವನನ್ನು ಸತೀಶಣ್ಣ ಅನ್ನುತ್ತಿದ್ದರು. ಆದರೆ ಅವನ ಈ ಆಗಮನ-ನಿರ್ಗಮನಗಳು ಅತಿಯಾಗಿ ಹೋದವು. ಅವನ mentality ಹೇಗಿತ್ತು ನೋಡಿ. ಒಮ್ಮೆ drive ಮಾಡುತ್ತಾ ಹೋಗಿ ದಾರಿಯಲ್ಲೇ ಸಿಕ್ಕ ಕೊಟ್ಟಿಗೆಹಾರದ guest houseಗೆ ಹೋದೆವು. ಅದ್ಭುತವಾದ ಸೂರ್ಯಾಸ್ತವದು. “ಸತೀಶಾ, ನಿನ್ನನ್ನ ಕರ‍್ಕೊಂಡು ಬರೋ ಬದಲು ಚೆನ್ನಾಗಿರೋ ಒಬ್ಬ ಹುಡ್ಗೀನ ಕರ‍್ಕೊಂಡು ಬಂದಿದ್ರೆ ಆ ಮಾತೇ ಬೇರೆ ಇತ್ತು" ಅಂತ ತಮಾಷೆಗೆ ಅಂದೆ. ಅಲ್ಲೇ ನಿಂತಿದ್ದವನು ತಕ್ಷಣ, “ಅರೇಂಜ್ ಮಾಡ್ಲಾ ಸರ್ ನಾನೂ?" ಅಂದುಬಿಟ್ಟ.

“Stupid fellow, ಇನ್ನು ಒಂದೇ ಒಂದು ಸಲಕ್ಕೂ ಈ ಮಾತು ಅನ್ನಬೇಡ. ಇದು ಅಭ್ಯಾಸವಾಗಿ ಹೋಗುತ್ತೆ. ನೋಡ ನೋಡ್ತ pimp ಅನ್ನಿಸ್ಕೊಂಡು ಬಿಡ್ತೀಯಾ. ''Be careful" ಅಂತ ಬೈದೆ. ಅವನು ಮತ್ತೊಮ್ಮೆ ಆ ತಪ್ಪು ಮಾಡಲಿಲ್ಲ. ಆ ಥರದ ಕೆಲವರು ನನಗೆ ಗೊತ್ತಿದ್ದಾರೆ. ಅವರಾದರೂ ಬೇಕು ಬೇಕು ಅಂತ pimpಗಳಾದವರಲ್ಲ. ಮೊದಲ ಸಲ ಆ ಕೆಲಸ ಮಾಡಿದಾಗ ನಾಚಿಕೆ ಅನುಭವಿಸುತ್ತಾರೆ. ರಿಗ್ರೆಟ್ ಅನುಭವಿಸುತ್ತಾರೆ. ಏಕೆಂದರೆ, ಮೊದಲ ಬಾರಿಗೆ ಅಂಥವರು ತಮ್ಮ ಅಕ್ಕ ತಂಗಿ, ಹೆಂಡತಿ-ಇಂಥವರನ್ನೇ ಒಯ್ದು ಬಲಿ ಹಾಕಿರುತ್ತಾರಲ್ಲ? ಆ ಬೇಸರ ಆರಂಭದಲ್ಲಿ ಮಾತ್ರ ಆಗುತ್ತೆ. ಆಮೇಲೆ ಅದು ಅಭ್ಯಾಸವಾಗಿ ಬಿಡುತ್ತದೆ. ಕೂತಲ್ಲೇ ತಿಂದು ಅನುಭವಿಸಿದವರಿಗೆ ಆ ರುಚಿ ಹೋದೀತಾದರೂ ಹೇಗೆ? ಅದು ಗೊತ್ತಿದ್ದುದರಿಂದಲೇ ಸತೀಶನನ್ನು ಗದರಿಸಿದ್ದೆ. ಅವನೇನೂ ಬದಲಾದಂತೆ ಕಾಣೆ.

ಪದೇಪದೆ ಅವನು ಕುಡಿದು, ಕೆಲವು ದಿನ ಬಿಟ್ಟು-ಅದನ್ನೇ ಅಭ್ಯಾಸ ಮಾಡಿಕೊಂಡನಲ್ಲ. ಒಮ್ಮೆ ಮಾತ್ರ ಜೊತೆಯಲ್ಲಿದ್ದವರಿಗೆ ಹೇಳಿದೆ: “ಇವನಿನ್ನು ಕೆಲಸಕ್ಕೆ ಬರೋಲ್ಲ ನೋಡಿ" ಅಂತ. ಅದಾದ ನಂತರ ಅವನು ಆಗಾಗ ಮೆಜೆಸ್ಟಿಕ್‌ನ ಬಸ್ ನಿಲ್ದಾಣಕ್ಕೆ ಬಂದಿದ್ದನಂತೆ ಎಂಬ ಸುದ್ದಿ ಬಂತು. ಅವನಿಗೆ ಪ್ರಜ್ಞೆ-ನಾಚಿಕೆ ಎರಡೂ ಇರಲಿಲ್ಲ. “ದಯವಿಟ್ಟೂ... ಒಂದ್ twenty rupees ಕೊಡ್ತೀಯಾ?" ಅಂತ ನಮ್ಮ ಏಜೆಂಟರಿಗೋ, ಪಾರ್ಸಲ್ ಹಾಕುವವರಿಗೋ ಕೇಳುತ್ತಿದ್ದ. ಮತ್ತೆ ಕೆಲವು ಸಲ ಕೇತಮಾರನಹಳ್ಳಿ ಕೇಶವಮೂರ್ತಿ ಹತ್ತಿರಕ್ಕೆ ಹೋಗುತ್ತಿದ್ದ. ಯಾರಿಗೇ ಆದರೂ ತೀರ ಇಪ್ಪತ್ತು ಮೂವತ್ತು ರುಪಾಯಿ ಕೊಡಲು ಹಿಂಜರಿಕೆಯಾಗೋದಿಲ್ಲ ನೋಡಿ? ಅವರು ಕೊಡುತ್ತಿದ್ದರು. ಇವನಿಗೆ ಒಂದು ದಿನ ಕಳೆಯಲಿಕ್ಕೆ ಅಷ್ಟು ಸಾಕು. ನಾವಾದರೂ ಎಣಿಸಿದರೆ ಮುಗಿಯದಷ್ಟು ಕುಡುಕರನ್ನು ನೋಡುತ್ತಿರುತ್ತೇವೆ. ಆದರೆ ತೀರಾ ಪತ್ರಿಕೋದ್ಯಮಕ್ಕೇ ಬಂದು ಬಿಡ್ತಾರಲ್ಲ? ಹೇಸಿಗೆಯಾಗುತ್ತದೆ. ಆ ತೆರನಾದ ಹೇಸಿಗೆ ಹುಟ್ಟಿಸಿದವನು ಸತೀಶ. ಏಕೆಂದರೆ, ಬಸ್‌ಸ್ಟ್ಯಾಂಡ್‌ನಲ್ಲಿ twenty rupees ಕೇಳುತ್ತಿದ್ದವನು, ಅಲ್ಲಿ ಅಂತರ್ಧಾನನಾಗಿ ಮತ್ತೆ ತೇಲಿದ್ದು ಎಲ್ಲಿ ಗೊತ್ತೆ? ಅದು ‘ಶನಿಯಾ’ ಪತ್ರಿಕಾ ಕಚೇರಿಯಲ್ಲಿ.

ಬರೆದರೆ, ಅದೂ ಇತಿಹಾಸವೇ. ಅವನೊಬ್ಬ ಶನಿ ಸುಬ್ಬೇಗೌಡ ಅಂತ ಇದ್ದಾನೆ. ಸರಿಯಾಗಿ ಒಂದು ಅಂಗೈ ಗಾತ್ರದ ಕನ್ನಡಕ, ಜೋಬದ್ರಗೇಡಿ ಮುಖ. ಮೊದಲು ಅವನನ್ನು ನಾನು ನೋಡಿದ್ದು ನನ್ನ ಗೆಳೆಯ ಕೆ.ಎಂ. ವೀರೇಶ್ ಜೊತೆಯಲ್ಲಿ. ನಿಮಗೆ ಗೊತ್ತು, ವೀರೇಶ್ ನನ್ನೊಂದಿಗೆ ಓಡಾಡುತ್ತಾ ಕೆಲವು ಅದ್ಭುತವಾದ ಫೊಟೋಗಳನ್ನು ತೆಗೆದುಕೊಟ್ಟವನು. ಅವನೊಂದಿಗೆ ಬಂದ ಶನಿ ಸುಬ್ಬೇಗೌಡ ‘ಪತ್ರಿಕೆ’ಯ ಏಜೆನ್ಸಿ ಕೊಡಿ ಅಂತ ಕೇಳಿದ್ದ. ಅವತ್ತಿಗಾಗಲೇ ಮೂವರು ಏಜೆಂಟರು ಪಾದರಸದಂತೆ ಇಡೀ ಊರು ತಿರುಗಿ ‘ಪತ್ರಿಕೆ’ಯ ಮಾರಾಟದ ವ್ಯವಸ್ಥೆ ಮಾಡಿದ್ದರು. ಅವರನ್ನು ಬದಲಿಸಿ ಶನಿ ಸುಬ್ಬೇಗೌಡನಿಗೆ ಏಜೆನ್ಸಿ ಕೊಡೋ ಮನಸು ನನಗಿಲ್ಲವಾಗಿತ್ತು. ಅದರ ಜರೂರತ್ತೂ ಇಲ್ಲವಾಗಿತ್ತು. “ಕೊಡೋಕಾಗಲ್ಲ ಗೌಡರೇ" ಅಂತ ಹೇಳಿದೆ. ಆನಂತರ ಅವನನ್ನು ನೆನಪೂ ಮಾಡಿಕೊಳ್ಳಲಿಲ್ಲ. ಅವನಿಗೆ ನೂರೆಂಟು ಏಜೆನ್ಸಿಗಳಿದ್ದವು. ಆದರೆ ದುಡ್ಡು ದುಡಿಯೋ ಹಪಹಪಿ. ಅವನು ಕೆಲವು ತಲೆಮಾಸಿದ ಸೆಕ್ಸ್ ಪತ್ರಿಕೆಗಳನ್ನು ಮಾಡಲಾರಂಭಿಸಿದ. ಅವುಗಳ ಪ್ರತಿಗಳನ್ನಿಡಲಿಕ್ಕೆ ಅವನೊಂದು ಗೋದಾಮಿನ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದ. ಅವನಿಗೂ ನಮ್ಮ ಮೂವರು ಏಜೆಂಟರಿಗೂ ಚಿಲ್ರೆ ಕಾರಣಕ್ಕೆ ಮೇಲಿಂದ ಮೇಲೆ ಜಗಳಗಳು. ಅದೊಮ್ಮೆ ಸಿ.ಸಿ.ಬಿ. ಪೊಲೀಸರು ಆ ಗೋದಾಮಿನ ಮೇಲೆ ರೇಡ್ ಮಾಡಿ ಸೆಕ್ಸ್ ಪತ್ರಿಕಾ ಪ್ರತಿಗಳ ಸಮೇತ ಶನಿ ಸುಬ್ಬೇಗೌಡನನ್ನು ಬಂಧಿಸಿ ಜೈಲಿಗೆ ಕಳಿಸಿದರಂತೆ. ನನಗೆ ಈ ವಿಷಯ ಗೊತ್ತೂ ಇರಲಿಲ್ಲ. ಅದ್ಯಾರು ಅವನಿಗೆ ಹಾಗಂತ ಹೇಳಿ ತಲೆ ಕೆಡಿಸಿದರೋ ಕಾಣೆ. ರೇಡ್ ಮಾಡಿಸಿದ್ದೇ ರವಿ ಬೆಳಗೆರೆ ಅಂತ ನಂಬಿಕೊಂಡು ಬಿಟ್ಟ ಶನಿ ಸುಬ್ಬೇಗೌಡ.

ಬರಿ ನಂಬಿದ್ದಷ್ಟೆ ಅಲ್ಲವಲ್ಲ? ಶನಿ ಸುಬ್ಬೇಗೌಡ ಒಂದು ವಾರಪತ್ರಿಕೆ ಮಾಡಿದ ‘ಶನಿಯಾ’ ಅಂತ. ಆಗ ಕರೆಕ್ಟಾಗಿ ಫೀಲ್ಡಿಗೆ ಇಳಿದವನೇ ಮತ್ತೊಬ್ಬ ಶನಿ ಸಂತಾನಿ, ಲಾಟ್ರಿ ಸಂತು. ಮೊದಲು ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಎಂಬಂತೆಯೇ ಇದ್ದವನು ಸಂತು. ಅವನಿಗೆ ದುಷ್ಟ ಘಳಿಗೆಯಲ್ಲಿ ಲಾಟರಿ ಹುಚ್ಚು ಹಿಡಿಯಿತು. ಅದರ ಪರಿಣಾಮವಾಗಿ ನನಗೇ ಸುಮಾರು ಒಂದೂವರೆ ಲಕ್ಷ ರುಪಾಯಿ ವಂಚಿಸಿದ. ನಾನು ಬೈಯಲಿಲ್ಲ, ಬಡಿಯಲಿಲ್ಲ. ಸುಮ್ಮನೆ ಎಬ್ಬಿಸಿ ಹೊರಕ್ಕೆ ಕಳಿಸಿಬಿಟ್ಟೆ. ಹೊರಕ್ಕೆ ಹೋಗಿ ಅವನು ಮಾಡಿದ್ದೇನು ಗೊತ್ತೆ? ನಮ್ಮಲ್ಲಿದ್ದು, ನನ್ನೊಂದಿಗೆ ಜಗಳ ಮಾಡಿಕೊಂಡು ಹೊರಬಿದ್ದವರದೇ ಒಂದು ಫೌಜು ಕಟ್ಟಿ ಅದಕ್ಕೆ ತಾನೇ ರಿಂಗ್ ಮಾಸ್ಟರ್ ಆದದ್ದು. ಅವನ ರಿಂಗ್ ಮಾಸ್ಟರಿಕೆಯಲ್ಲಿ ಆರಂಭವಾದದ್ದೇ ‘ಶನಿಯಾ’ ವಾರಪತ್ರಿಕೆ. ಶನಿ ಸುಬ್ಬೇಗೌಡನಿಗೆ ಸರಿಯಾಗಿ ಹೆಬ್ಬೆಟ್ಟು ಒತ್ತಲಿಕ್ಕೂ ಬಾರದು. ಅವನು ಅದರ ಮಾಲೀಕ ಕಮ್ ಸಂಪಾದಕ. ಅವನಿಗೊಂದೆರಡು ಸೈಟುಗಳಿದ್ದವಂತೆ. “ಅವುಗಳನ್ನು ಒಂದೊಂದಾಗಿ ಮಾರುತ್ತೇನೆ. ಆದರೆ ರವಿ ಬೆಳಗೆರೇನ ನೆಲಕ್ಕೆ ಹಾಕೇ ಹಾಕ್ತೇನೆ" ಅಂದನಂತೆ. ಅದರಲ್ಲಿ ಕೆಲವು ನನ್ನ ಪರಿಚಯದವರೇ ಆದ ಹುಡುಗರಿದ್ದರು. ಆ ಪೈಕಿ ಮುಂದಿನ ಸಾಲಿನಲ್ಲಿ ಕುಳಿತಿದ್ದವನು ಈ ಪೀವಟ್ ಸತೀಶ. ಅಲ್ಲಿಂದ ಶುರುವಾಯಿತಲ್ಲ ಈ ತಗಡೇಶಿಗಳ ಅಖಂಡ ರಸ ಯಾತ್ರೆ? ಆ ಪೈಕಿ ಒಬ್ಬ ಪುತ್ತೂರಿನ ಗುಂಗುರು ಶರ್ಮ ಅಂತ ಇದ್ದ. ಲಾಟರಿ ಸಂತೂ ಜೊತೆಗೆ ಒಬ್ಬ ಹಿತ್ಲು ಬಾಗ್ಲು ಸಂತು ಅಂತ ಇದ್ದ. ಆಗೆಲ್ಲ ಈ ಸತೀಶ ‘ಶನಿಯಾ’ ಪತ್ರಿಕೆಯ ಆಫೀಸಿನಲ್ಲೇ ಮಲಗುತ್ತಿದ್ದ. ಬೆಳ್ಳಿ ಅಬ್ರಹಾಂ ಎಂಬೊಬ್ಬ ಇವನಿಗೆ ಇಡ್ಲಿ-ಕಾಫಿ ತಂದು ಕೊಡುತ್ತಿದ್ದ.

ಶನಿ ಸುಬ್ಬೇಗೌಡನ ‘ಶನಿಯಾ’ ಪತ್ರಿಕೆ ಈಯ್ದ ನಾಯಿಯಂತೆ ನೆಲ ಕಚ್ಚಿಕೊಂಡು ಮಲಗಿತೇ ಹೊರತು ಮೇಲಕ್ಕೆ ಏಳಲಿಲ್ಲ. “ನೀವು ವಾರ ಪತ್ರಿಕೆ ಮಾಡಿ, ಅದರಲ್ಲಿ ರವಿ ಬೆಳಗೆರೇನ ಹೊಡಿಯೋಕೆ ಆಗುತ್ತಾ ಗೌಡ್ರೇ? ಒಂದು ಫಸ್ಟ್ ಕ್ಲಾಸ್ ದಿನಪತ್ರಿಕೆ ಮಾಡಬೇಕು. ನಾನು ಹೆಲ್ಪ್ ಮಾಡ್ತೀನಿ" ಅಂತ ತಿದಿ ಒತ್ತಿದ್ದವನು ‘ದನ ಕಾಯೋ’ ವಿಜಿ. ಆಗ ಶನಿ ಸುಬ್ಬೇಗೌಡನ ಹೆಂಡತಿ ಬಹಳ ತಡೆದರಂತೆ. ಆದರೆ ‘ಶನಿಯಾ’ ಪತ್ರಿಕೆಯನ್ನೇ ದಿನಪತ್ರಿಕೆಯನ್ನಾಗಿ ಮಾಡಿ ಇತ್ತ ಅದರ ಬಿಡುಗಡೆ ಮಾಡಿದ. ಅತ್ತ ಅವನ ಪತ್ನಿ ನೇಣು ಹಾಕಿಕೊಂಡು ತೀರಿ ಹೋದರು. ಅದಾದ ಮೇಲೆಯೇ ಪೀವಟ್ ಸತೀಶ ಅಲ್ಲಿಂದ ಹೊರಬಿದ್ದದ್ದು.

ಇದೇನೂ ಹಳೆಯ ಮಾತಲ್ಲ: ಕೇವಲ ಒಂದು ವಾರದ ಹಿಂದೆ ಫೇಸ್‌ಬುಕ್‌ನಲ್ಲಿ ಮೆಸೇಜು ಕೊಟ್ಟ ಸತೀಶ, “ನಿಮ್ಮನ್ನು ಭೇಟಿಯಾಗಬೇಕು" ಅಂದ. ಅಂದವನು ಆಫೀಸಿಗೇ ಬಂದ. “ಕುಡಿಯೋದು ಬಿಟ್ಟು ಐದು ವರ್ಷ ಆಗೋಯ್ತು ಸಾರ್. ಒಂದು ಕುಡಿತ ಬಿಡಿಸೋ ರಿಹ್ಯಾಬಿಲಿಟೇಷನ್ ಸೆಂಟರ್‌ನಲ್ಲಿ ಕೆಲಸ ಮಾಡ್ತಿದೀನಿ. ಊಟದ ಖರ್ಚಿಗೆ ಕೊಟ್ಟು, ಇರೋಕೆ ಜಾಗ ಕೊಟ್ಟು ಐದು ಸಾವಿರ ಸಂಬಳ ಕೊಡ್ತಾರೆ. ಐದು ವರ್ಷ ಆಯ್ತು ಸರ್, ಕುಡಿಯೋದನ್ನ ಬಿಟ್ಟು" ಅಂದ. ಸತೀಶ್, ಬಿಟ್ಟಿದ್ದು ನಿಜವಾದ್ರೆ I am happy. But don't return to the habit ಅಂದೆ. ಅದೆಲ್ಲಿಯ returning. ರಿಹ್ಯಾಬಿಲಿಟೇಷನ್ ಸೆಂಟರ್‌ನಲ್ಲಿ ಔಷಧಿ ತಗೊಂಡು ಕುಡಿತ ಬಿಡುವುದರಲ್ಲಿ ಕೆಲವು riskಗಳಿವೆ. ಅಲ್ಲಿ ಕೊಡೋ ಔಷಧಿಗಳ ಪೈಕಿ ಕೆಲವು ಮರಣಾಂತಿಕ. ಅವನ್ನು ತೆಗೆದುಕೊಂಡ ಮೇಲೆ ಅಪ್ಪಿತಪ್ಪಿ ಕೂಡ ಕುಡಿಯಬಾರದು. ಕುಡಿದರೆ ಪ್ರಾಣವೇ ಹೋಗುತ್ತದೆ. ಈಗೊಂದು ಗಂಟೆಯ ಮುಂಚೆ ಸತೀಶನ ಪರಿಚಿತರೊಬ್ಬರು ಫೋನ್ ಮಾಡಿದ್ದರು. “ಸರ್, ಮೊದಲು ಉಸಿರಾಟದ ಸಮಸ್ಯೆ ಆಯ್ತು. ಗೊತ್ತೇ ಇದೆಯಲ್ಲ ಸರ್? ಲಿಕ್ಕರ್ ತಗೊಂಡು ಬಿಟ್ಟಿದ್ರು. ಆಸ್ಪತ್ರೆಗೆ ತಗೊಂಡು ಹೋಗೋ ಹೊತ್ತಿಗೆ ತೀರ ಹೋಗೇ ಬಿಟ್ರು...." ಅಂದರು.

“ಸರ್, ನಿಮಗೆ ಗೊತ್ತಿಲ್ಲದ್ದೇನಲ್ಲ. ಸುತ್ತಲೂ ನಾಯಿ ಕುಳ್ಳಿರಿಸಿಕೊಂಡು, ಅವುಗಳ ಮಧ್ಯೆ ಸಾಯಿಬಾಬ ಇರ‍್ತಾನಲ್ಲ? ಹಂಗಿದ್ದ ಸತೀಶ. ಒಯ್ದು, ಒಂದು ದಾರೀಗೆ ತರೋ ಪ್ರಯತ್ನ ಮಾಡಿದ್ವಿ. ಮತ್ತೆ ಕುಡಿದು ಬಿಟ್ಟ ಸರ್. ಉಳಿಸೋದಾದರೂ ಹೆಂಗೆ?" ಅಂದಿದ್ದು ಇನ್ನೊಬ್ಬರು.

ಆಯ್ತು, ಅವನಿಗೆ ಐವತ್ತೆಂಟಾಗಿದ್ದಿರಬಹುದು ವರ್ಷ. ಸತ್ತರೆ ಅಳಲಿಕ್ಕೆ ಅಪ್ಪ-ಅಮ್ಮನೂ ಇಲ್ಲ. ಸ್ವತಂತ್ರವಾಗಿ ಬದುಕೋದು ಕೈ ಹಿಡಿದ ಹೆಣ್ಣು ಮಗಳಿಗೆ ಗೊತ್ತಿದೆ. ಅವನ ಮಗು ಕೆಲಸಕ್ಕೆ ಸೇರಿಕೊಂಡಿದೆ. ಶನಿ ಸುಬ್ಬೇಗೌಡನಿಗಾಗಿ ಸತೀಶನಂಥವರು ಕ್ವಾರ್ಟರ್‌ಗೊಬ್ಬರಂತೆ ಸಿಗುತ್ತಾರೆ. ಪುತ್ತೂರು ಗುಂಗ್ರು? ಅವನ್ಯಾವ ಚರಂಡಿಯಲ್ಲಿದ್ದಾನೋ? ಬಿಡುವಾದಾಗ ಬರೆಯೋಣ.

-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 24 May, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books