Ravi Belagere
Welcome to my website
“ಇವತ್ತೇ ಫಸ್ಟ್ ಟೈಮ್!" ಡೇಟು, ಜಾಗ ಇತ್ಯಾದಿಗಳು ನೆನಪಿರಬಹುದು. ಅಷ್ಟೇ ಹೊರತು ಜೀವನದಲ್ಲಿ ಅವೆಷ್ಟೋ ಸಂಗತಿಗಳಿರುತ್ತವೆ: ‘ಇದು ಫಸ್ಟ್ ಟೈಮ್’ ಎಂದು ನೆನಪಿಟ್ಟುಕೊಳ್ಳುವಂತಹವು. ಹಾಗೆ ಅನೇಕ ಫಸ್ಟ್ ಟೈಮ್‌ಗಳು, ಮೊಟ್ಟ ಮೊದಲ ಸಿಗರೇಟು, ಮೊದಲ ಪೆಗ್, ಕೊಟ್ಟ ಮೊದಲ ಮುತ್ತು, ಮೊದಲ ಮೈಥುನ ಇತ್ಯಾದಿಗಳಿಂದ ಹಿಡಿದು, ಮೊದಲ ಫಸ್ಟ್ ಕ್ಲಾಸ್, ಮೊದಲ ಪ್ರಕಟಿತ ಕಥೆ, ಮೊದಲ ಕಾದಂಬರಿ, ಮೊದಲ ಆಕ್ಸಿಡೆಂಟ್-ಇತ್ಯಾದಿಗಳ ಸಾಲೇ ಇದೆ. ಅದೆಲ್ಲ ಇರಲಿ: ನಿಮ್ಮ ಬದುಕಿನ ‘ಫಸ್ಟ್ ಟೈಮ್’ಗಳ ಬಗ್ಗೆ ನೀವೇ ಹೇಳಿ. ಒಂದು ನೆನಪನ್ನು ‘ದಿಲ್ ನೇ ಫಿರ್ ಯಾದ್’ ಅಂಕಣಕ್ಕೆ ಕಳಿಸುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಜಾಸ್ತಿ ಟೈಮಿಲ್ಲ ದೊರೆ: ಬೇಗ ಬರೆದು ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಸೂಟು ಹಾಕ್ಕಂಡು ಎದುರಿಗೆ ಕುಂತ ಲಕ್ಷ್ಮಣ ಹೂಗಾರ ಎಂಬಾತನಿಗೆ...

ಕೆಲವು ತಪ್ಪುಗಳು ದಡ್ಡತನದಿಂದಲೋ, ಅಜ್ಞಾನದಿಂದಲೋ, ತಪ್ಪು ಗ್ರಹಿಕೆಯಿಂದಲೋ ನಡೆದು ಹೋಗುತ್ತವೆ. ಉದಾಹರಣೆ ಅಂದ್ರೆ, ಕೆಲವು ವರ್ಷಗಳ ಹಿಂದೆ ರಾಜಕಾರಣಿ ಸಿ.ಎಂ.ಇಬ್ರಾಹಿಂ ಅವರನ್ನ ನಾವು 'ಸೈಕಲ್’ ಅಂತ ಕಿಚಾಯಿಸುತ್ತಿದ್ದೆವು. ‘ಸೈಕಲ್’ ಅಂದರೆ ಸಲಿಂಗಿ ಎಂಬ ಅರ್ಥವಿದೆ: ಒಂದು stangನಂತೆ. ಇಬ್ರಾಹಿಂ ಕೊಂಚ ಹೆಣ್ಣೆಣ್ಣು. ಅದೊಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದೆಲ್ಲ ಮುಗಿದ ಮೇಲೆ ವಿಸ್ಕಿ ಗೋಷ್ಠಿ ಆರಂಭವಾಯಿತು. ನನಗೆ ಕೊಂಚ ದೂರದಲ್ಲಿ ಗೆಳೆಯ ಶಶಿಧರ ಭಟ್ ಕೈಲಿ ಗ್ಲಾಸು ಹಿಡಿದು ಯಾರೊಂದಿಗೋ ಹರಟುತ್ತಿದ್ದ. ಅದೆಲ್ಲಿಂದ ಬಂದರೋ ಇಬ್ರಾಹಿಂ? ಬಂದವರೇ ಶಶಿಧರ ಭಟ್ಟನನ್ನು ಹಿಂಬದಿಯಿಂದ ಆಲಂಗಿಸಿಕೊಂಡು ಬಿಟ್ಟರು. ನಾವು ಒಂದಷ್ಟು ಜನ ನಗಲಾರಂಭಿಸಿದ್ದು ಶಶಿಗೆ ಗೊತ್ತಾಯಿತು. ಅವರು ಬಿಡಲೊಲ್ಲರು: ಶಶಿ ಕೊಸರಿ ಕೊಸರಿ ನೆಗೆಯೋದನ್ನು ನಿಲ್ಲಿಸಲೊಲ್ಲ. ರಾಜಕಾರಣಿಗಳ ಪೈಕಿ ದೇವೆಗೌಡರಿಗೆ ಈ ಆಲಿಂಗನಾ ಅಭ್ಯಾಸವಿದೆ. ಆದರೆ ಅದು ಬೇರೆಯೇ ತೆರನಾದದ್ದು. ಇಬ್ರಾಹಿಂರದು ಹಿಂಬಾಗಿಲು ನೂಕಿಕೊಂಡವರ ಶೈಲಿಯ ಸೈಕಲ್ ಆಲಿಂಗನ. ಆಗಿನಿಂದಲೂ ಅವರಿಗೆ ‘ಸೈಕಲ್’ ಎಂಬ ‘ಉಪನಾಮ’ ತಗುಲಿಕೊಂಡಿತು.

ಮುಂದೆ ನಾನು ಬೆಂಗಳೂರಿನ ಚಿಕ್ಕದೊಂದು ಸಲಿಂಗ ಗುಂಪಿನ ಸಂದರ್ಶನ ಮಾಡಿದ್ದೆ. ಆ ತನಕ ಗೊತ್ತಿಲ್ಲದ ಅನೇಕ ಸಂಗತಿಗಳು ಆ ಸಂದರ್ಶನದಿಂದ ಗೊತ್ತಾದವು. ಆ ಪುಟ್ಟ ಗುಂಪಿನಲ್ಲಿ ಒಂದಿಬ್ಬರು ಖ್ಯಾತನಾಮರಿದ್ದರು. ಉಳಿದೆಲ್ಲಕ್ಕಿಂತ ಫ್ಯಾಷನ್ ಪ್ರಪಂಚದಲ್ಲಿ ಸಲಿಂಗಿಗಳಿದ್ದಾರೆ ಅಂತ ಗೊತ್ತಾಯಿತು. ಅಲ್ಲಿದ್ದ ಹುಡುಗಿಯೊಬ್ಬಳು. ''Sir, this is the most safe place for a girl!" ಅಂದಳು. ಸಲಿಂಗಿಗಳು ಹುಡುಗೀರ ತಂಟೆಗೆ ಬರಲ್ಲ.

ಆದರೆ ‘ಪತ್ರಿಕೆ’ಯ ಕೈಗೆ ಅನಾಮತ್ತಾಗಿ ಸಿಕ್ಕ ನಟಿ ಎಂದರೆ ಉಜ್ವಲಾ. ಇವತ್ತು ಆ ಹುಡುಗಿಯ ಮುಖವೂ ನೆನಪಿಲ್ಲ. ಉಜ್ವಲಾ ಎಂಬ ಹೆಸರನ್ನು ನಮ್ಮ ಸಿನೆಮಾ ವರದಿಗಾರ ಬೇಕೆಂತಲೇ ‘ಉಜ್ಜಲಾ’ ಅಂತ ಬರೆದು ಗೇಲಿ ಮಾಡುತ್ತಿದ್ದ. ಆ ಹೊತ್ತಿಗೆ ಸರಿಯಾಗಿ ‘ಉಜ್ವಲಾ’ಗೆ ಒಬ್ಬ girl friend ಇದ್ದಾಳೆ ಎಂಬ ಸುದ್ದಿ ಸಿಡಿಯಿತು. ಅವಳೊಂದಿಗೆ ಈ ಹುಡುಗಿ ತೆಗೆಸಿಕೊಂಡ ಫೊಟೋಗಳು ಬಯಲಾದವು. ಆ ನಂತರ ಅವರಿಬ್ಬರೂ ಅದೆಲ್ಲಿಗೋ ಓಡಿ ಹೋದರು. ಅವಳನ್ನು ಹುಡುಕಿಕೊಡಿ ಅಂತ ಉಜ್ವಲಾ ತಾಯಿ ನಮ್ಮನ್ನು ಗೋಗರೆಯತೊಡಗಿದಳು. ಮುಂದೆ ಆ ಹುಡುಗಿಯ ಸುದ್ದಿಯೇ ಇಲ್ಲದಂತಾಯಿತು.

ಆದರೆ ನನಗೂ ಒಂದು ಜ್ಞಾನೋದಯ ಬೇಕಿತ್ತಲ್ಲ? “ರವೀ, ಯೋಚಿಸಿ ನೋಡು. This is not fair" ಅಂದದ್ದು ನನ್ನ ಗೆಳತಿ ಸುಷ್ಮಾ. ಅವಳು ಹೆಸರಿಗೆ ಇಂಡಿಯನ್. ಹೆಚ್ಚೂ ಕಡಿಮೆ ಅವಳಿರೋದು ಪ್ಯಾರಿಸ್‌ನಲ್ಲಿ. “ಉಳಿದದ್ದು ನಾನು ಮಾತನಾಡೋದಿಲ್ಲ: ಆದರೆ ಸಲಿಂಗ ಕಾಮ ಅನ್ನೋದನ್ನ ನೀನು ಅಪರಾಧ ಅನ್ನೋ ಹಾಗೆ ಚಿತ್ರಿಸ್ತೀಯಲ್ಲ? ಅದು ಖಂಡಿತ ಸರಿಯಲ್ಲ" ಅಂದಳು. ನಾನು ವಾದಕ್ಕೆ ಬೀಳಲಿಲ್ಲ. ಒಂದಷ್ಟು ಪುಸ್ತಕ ತಂದುಕೊಂಡು ಓದತೊಡಗಿದೆ. My God! ಅದೊಂದು ಬೃಹತ್ ಚಳವಳಿಯೇ ಸರಿ. ಅವರ‍್ಯಾರೂ ಆರ್ಡಿನರಿ ಮಂದಿಯಲ್ಲ. ಅವರು ಸಿ.ಎಂ.ಇಬ್ರಾಹಿಂ ಥರಾ ಚಿಲ್ರೆ ರಾಜಕಾರಣಿಗಳಲ್ಲ. ಸಲಿಂಗಿಗಳ ಸಾಲಿನಲ್ಲಿ ಘಟಾನುಘಟಿಗಳೇ ಇದ್ದಾರೆ. ಅಷ್ಟೇಕೆ, ನಮ್ಮ ಪ್ರೀತಿಯ ಪತ್ರಕರ್ತ ಹಾಗೂ ಬರಹಗಾರ ವೈಯೆನ್ಕೆ? Yes, he was a gay. ಸಲಿಂಗಿ ಗಂಡಸರನ್ನು ಇಂಗ್ಲಿಷಿನಲ್ಲಿ Gay ಅನ್ನುತ್ತಾರೆ. ನನ್ನ ಚೇಷ್ಟೆಯ ಮಿತ್ರರು ಅವರನ್ನು “ವೈಯೆನ್‌gay" ಅನ್ನುತ್ತಿದ್ದರು. ಅನೇಕ ಕವಿ-ಸಾಹಿತಿಗಳು ಸಲಿಂಗಿಗಳು. ವಿಮರ್ಶಕ ಕಿ.ರಂ.ನಾಗರಾಜ್ ಆ ಸಾಲಿನಲ್ಲಿ ನಿಲ್ಲುವವರು. ಈ ಪೈಕಿ ಕೆಲವರು ಎರಡೂ ಕಡೆ ಸಲ್ಲುವವರಿದ್ದಾರೆ. ಅವರಿಗೆ ಗಂಡೂ ಸಮ್ಮತ. ಹೆಣ್ಣೂ ಸಮ್ಮತ. “ಅಯ್ಯೋ, ಏನು ಮಾಡೋದು ಹೇಳಿ. ಚಿಕ್ಕಂದಿನಿಂದ ಕೆಟ್ಟ ಸಹವಾಸಕ್ಕೆ ಬಿದ್ದು ಅಂಥದ್ದನ್ನೆಲ್ಲ ಕಲ್ತುಬಿಟ್ಟಿರ್ತಾರೆ!" ಅನ್ನುವವರಿದ್ದಾರೆ. ಮತ್ತೆ ಕೆಲವರು ಅದನ್ನು ‘ಬಿಡಿಸಬಹುದಾದ’ ದುರಭ್ಯಾಸ ಅಂದುಕೊಂಡಿದ್ದಾರೆ.

No! ಹಾಗೆ ಅನ್ನಲೇಬೇಡಿ. ಅದನ್ನು ಯಾರೂ ‘ಕಲಿತಿ’ರುವುದಿಲ್ಲ. ಸಲಿಂಗ ಕಾಮವನ್ನು ಕುಡಿತ ಬಿಡಿಸಿದಂತೆ ಅಥವಾ ಸಿಗರೇಟು ಬಿಡಿಸಿದಂತೆ ‘ಬಿಡಿಸ’ಲಾಗುವುದಿಲ್ಲ. It is not a habit. ಖಂಡಿತ ಅದು ಚಟವಲ್ಲ. ಅದನ್ನು ‘ಬಿಡಿಸ’ಲಾಗುವುದಿಲ್ಲ. ಹಾಗಾದರೆ ಅದು ವಿಕೃತಿಯಾ? Not at all. ಅದರಲ್ಲಿ ನೆಗೆಟಿವ್ ಅನ್ನುವಂಥದ್ದು ಏನೇನೂ ಇಲ್ಲ. ತಮಾಷೆ ಮಾಡಿ ಗೇಲಿ ಮಾಡುವಂಥದ್ದೂ, ಅಪಹಾಸ್ಯ ಮಾಡುವಂಥದ್ದೂ ಏನೂ ಇಲ್ಲ. It is very natural. ಅಂದಹಾಗೆ, ನೀವು ವಸುಧೇಂದ್ರನನ್ನು ಬಲ್ಲಿರಿ ತಾನೆ? ಅವನು ತುಂಬ ಚೆಂದ ಬರೆಯುತ್ತಾನೆ. ಅನೇಕರು ಹುಡುಕಾಡಿ ಅವನ ಕೃತಿಗಳನ್ನು ಓದುತ್ತಾರೆ. ಮೆಚ್ಚಿ ಮಾತನಾಡುತ್ತಾರೆ. ಉಳಿದದ್ದು ಬಿಡಿ: ನೀವು ಅವನ ‘ಮೋಹನ ಸ್ವಾಮಿ’ ಕೃತಿಯನ್ನು ಓದಿದ್ದೀರಾ? Please read. ವಸುಧೇಂದ್ರ ನಿಮಗೆ ಇನ್ನೂ ಜಾಸ್ತಿ ಇಷ್ಟವಾಗುತ್ತಾನೆ. ಜಾಸ್ತಿ ಅರ್ಥವಾಗುತ್ತಾನೆ.

ಅಂದ್ಹಾಗೆ, ವಸುಧೇಂದ್ರ ಬಳ್ಳಾರಿಯವನು. ಅವನು ಹುಟ್ಟಿ ಬೆಳೆದದ್ದು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ. ಬಳ್ಳಾರಿಯಲ್ಲಿ ನನ್ನ ಮನೆಯ ಪಕ್ಕದಲ್ಲಿ ಜೋಶಿ ಅಂತ ಇದ್ದರು. ಅವರಿಗೆ ವಸುಧೇಂದ್ರ ತುಂಬ ಹತ್ತಿರದ ಸಂಬಂಧಿ. ಅವರ ಮನೆಗೆ ಬಂದು ಇವನು ದಿನಗಟ್ಟಲೆ ಇರುತ್ತಿದ್ದನಂತೆ. “ಅಲ್ಲೋ, ನಾನು ಪಕ್ಕದಲ್ಲೇ ಇದ್ದೆ. ಮಾತಾಡಿಸಬಾರದಾ?"ಅಂದೆ ಒಮ್ಮೆ. ಮಾರಾಯ, ಅಷ್ಟು ಧೈರ್ಯ ಎಲ್ಲೀದಪ್ಪಾ? ನಾನು ನಿಂಗಿಂತ ಭಾಳ ಸಣ್ಣೋನು. ಅದೂ ಅಲ್ದೆ ನೋಡ್ಲಿಕ್ಕೆ ನೀನು ರಾವಣಾಸುರ ಇದ್ಧಂಗೆ ಇದ್ದಿ. ನಿನ್ಯಾರಪ್ಪಾ ಮಾತಾಡ್ಸೋರು?" ಅಂದು ನಕ್ಕಿದ್ದ. Of course, ವಸುಧೇಂದ್ರ ನನಗಿಂತ ಸಾಕಷ್ಟು ಕಿರಿಯ. But a wonderful writer. ಅವನ ಅಪಾರ್ಟ್‌ಮೆಂಟ್ ಇಲ್ಲೆಲ್ಲೋ ಹತ್ತಿರದಲ್ಲೇ ಇರಬೇಕು. ಆಫೀಸು ಇನ್ನೆಲ್ಲೋ ಇಂದಿರಾನಗರದಲ್ಲಿ. “ಏನು ಮಾಡೋದಪ್ಪಾ? ನನ್ನ ಕಥೆ-ಕವನ ಎಲ್ಲಾ ನಾನು ಬರೆದಿದ್ದು ನನ್ನ ಕಾರಿನ್ಯಾಗೇ. ನನ್ನ driver ಲಿಂಗಪ್ಪನಿಗೆ thanx ಹೇಳಬೇಕು ನೋಡು. ಅವನು drive ಮಾಡ್ತಾ ಇರೋದು: ನಾನು ಹಿಂದಿನ ಸೀಟಿನ್ಯಾಗೆ laptopನ್ಯಾಗೆ ಕಥಿ ಬರಿತಾ ಇರೋದು.." ಅಂದು ನಕ್ಕಿದ್ದ ವಸುಧೇಂದ್ರ.

“ಅಲ್ಲೋ, ಎಲ್ಲಾ ಸರಿ. ನಿಂದೆ ಮನಿ ಇದೆ. ಕಾರ್ ಇದೆ. ನೌಕರಿ ಇದೆ. You get a fat purse. ಸಾಫ್ಟ್‌ವೇರ್ ಇಂಡಸ್ಟ್ರಿಯೊಳಗಿದ್ದೀ. ನಾನಾ ದೇಶಗಳಿಗೆ ಹೋಗಿ ಬಂದೀಯಿ. ಆದ್ರೆ ಮದುವೀ ಯಾಕೆ ಆಗವಲ್ಲಿ?" ಎಂದು ಪೆದ್ದನಂತೆ ಕೇಳಿದ್ದೆ. ಅವತ್ತು ಅವನು ಉತ್ತರ ಕೊಟ್ಟಿರಲಿಲ್ಲ. ಇವತ್ತು ಕೊಟ್ಟಿದ್ದಾನೆ. He is a gay. ಅದನ್ನು ಸಂದರ್ಶನವೊಂದರಲ್ಲಿ ಅವನೇ ಮುಕ್ತವಾಗಿ ಹೇಳಿಕೊಂಡಿದ್ದಾನೆ. ನಮ್ಮ ವೈಯೆನ್ಕೆ ಹೇಳಿಕೊಂಡಿರಲಿಲ್ಲ. ಕೀ.ರಂ.ನಾಗರಾಜ್ ಹೇಳಿಕೊಂಡಿರಲಿಲ್ಲ. ವಸುಧೇಂದ್ರ ತುಂಬ ಮುಕ್ತವಾಗಿ ಹೇಳಿಕೊಂಡಿದ್ದಾನೆ. ಅವನ ಸಂದರ್ಶನ ಒಂದರ್ಥದಲ್ಲಿ “ಹೌದು, ಏನೀಗ?" ಎಂಬ ಧಾಟಿಯಲ್ಲೇನೂ ಇಲ್ಲ. It is very soft. ಆತ್ಮೀಯವಾದ ದನಿಯಲ್ಲಿ ಮಾತನಾಡುತ್ತಾ ಹೋಗಿದ್ದಾನೆ. Please read ‘ಮೋಹನ ಸ್ವಾಮಿ’. You will love ವಸುಧೇಂದ್ರ. ಒಂದು ಸಂಗತಿಯೆಂದರೆ ‘ಮೋಹನ ಸ್ವಾಮಿ’ಯನ್ನ ಅಥವಾ ವಸುಧೇಂದ್ರನ ಸಂದರ್ಶನವನ್ನ ಓದೋಕೆ ತುಂಬಾನೇ ಮುಂಚೆ ನನಗೆ ಗೊತ್ತಾಗಿತ್ತು : he is gay ಅಂತ. ಒಂದು ಕ್ಷಣಕ್ಕೂ ಅವನು ನನಗೆ ಅಸಹ್ಯ ಅನ್ನಿಸಿಲ್ಲ. ಅಸಹನೀಯ ಅನ್ನಿಸಿಲ್ಲ. ಹೆದರಿಕೆಯಾಗಿಲ್ಲ. ಕರುಣೆ ಮೂಡಿಲ್ಲ. I have taken it in a very right way.

ಯಾಕೆ ಅಂದರೆ ಒಬ್ಬ ಮನುಷ್ಯನ sexual preferenceಗಳನ್ನ, ಅವನ ಲೈಂಗಿಕ desireಗಳನ್ನ ನಾನು ತಿಳಿದುಕೊಂಡು, ಆ ಕಾರಣಕ್ಕೆ ಇಷ್ಟಪಡುವುದಿಲ್ಲ. ಅಥವಾ ದ್ವೇಷಿಸುವುದಿಲ್ಲ. ನೀವು ದೋಸೆ ತಿಂತೀರಿ ಅನ್ನೋ ಕಾರಣಕ್ಕೆ ನಿಮ್ಮನ್ನು ದ್ವೇಷಿಸಲು ಸಾಧ್ಯವೇ? ಇದು ಕೂಡ ಅಷ್ಟೆ. Once again, ನನಗೆ ತೆಲುಗು ಕವಿ ಶ್ರೀ ಶ್ರೀ ನೆನಪಾಗುತ್ತಾರೆ. ಅವರನ್ನ ಒಬ್ಬ ಹುಡುಗಿ ಸಂದರ್ಶನ ಮಾಡುತ್ತಿದ್ದಳು. “ಸರ್, ನಿಮಗೆ ಎಷ್ಟು ಜನ ಹೆಂಡತಿಯರು?" ಅದಕ ಶ್ರೀ ಶ್ರೀ ಕೊಟ್ಟ ಉತ್ತರ, “ಇಬ್ಬರು". “ನಿಮಗೆ ಬೇರೆ ಎಷ್ಟು ಜನ ಹೆಂಗಸರೊಂದಿಗೆ ಸಂಬಂಧವಿದೆ?" ಅಂತ ಕೇಳಿದಳು. “ನೋಡಮ್ಮಾ, ನೀನು ಏಳನೇ ಕ್ಲಾಸಿನಲ್ಲಿ ಓದ್ತಾ ಇದ್ದ ಕಾಲದಿಂದ ಇವತ್ತು ಬೆಳಗ್ಗೆ ತನಕಾ ಎಷ್ಟು ಉಪ್ಪಿಟ್ಟು ತಿಂದಿದ್ದೀಯ?" ಅಂದರು ಶ್ರೀ ಶ್ರೀ. ಸಂದರ್ಶನ ಮಾಡ್ತಿದ್ದ ಹುಡುಗಿ ಕಕ್ಕಾವಿಕ್ಕಿಯಾಗಿದ್ದಳು.

ಈಗೊಂದೆರಡು ವರ್ಷದ ಹಿಂದೆ TV9ನಲ್ಲಿ ‘ಚಕ್ರವ್ಯೂಹ’ ಅನ್ನೋ showನಲ್ಲಿ ಲಕ್ಷ್ಮಣ ಹೂಗಾರ್ ಎಂಬಾತ ಎದುರಿಗೆ ಕುಳಿತು ಪ್ರಶ್ನೆ ಕೇಳುತ್ತಿದ್ದ. “ಹೌದೂ, ರವಿಯವರೇ ನಿಮಗೆ ಎಷ್ಟು ಜನ ಹೆಂಡ್ರು?" ಅಂತ ಕೇಳಿದ. ಅದನ್ನ ಕೇಳಬಾರ‍್ದು ಅಂದಿಲ್ಲ. ಆದರೆ ಕೇಳುವ ಧಾಟಿ ಅದಾಗಿರಬಾರದು. It was very annoying. ಅವನು ಅಲ್ಲಿಗೇ ಸುಮ್ಮನಾಗಲಿಲ್ಲ. “ನೀವು ಹಾಗಾದ್ರೆ ಎಷ್ಟು ದುಡ್ಡು ಮಾಡಿದ್ದೀರಿ?" ಅಂತ ಕೇಳಿದ. ಅದಕ್ಕೆ ಉತ್ತರಿಸಿದೆ. “ಹಾಗಾದ್ರೆ ನೀವು ಆಗರ್ಭ ಶ್ರೀಮಂತರಾ?" ಅಂದ. ಆ ಗರ್ಭ ಈ ಗರ್ಭ ಅಲ್ಲ. ಸ್ವಯಂ ಗರ್ಭ! ಅಲ್ರೀ, ಗುಲ್ಬರ್ಗ ಜಿಲ್ಲೆಯ ಅಳಂದದಿಂದ ಬಂದ ನೀವು ಸೂಟ್ ಹಾಕ್ಕಂಡು ಎದುರಿಗೆ ಕೂತು ಪ್ರಶ್ನೆ ಕೇಳೋ ಹಂಗಾಗಿದೀರಿ ಅಂದ್ರೆ, ನಾನು ಬಳ್ಳಾರಿಯಿಂದ ಬಂದು ದುಡ್ಡು ದುಡೀಬಾರದಾ? ಅಂತ ಕೊಡವಿದೆ.

ಅವನೀಗ ಅಲ್ಲಿ ಇದ್ದಂತಿಲ್ಲ. ಎಲ್ಲಿದ್ದಾನೆ ಅಂತ ತಿಳಿದುಕೊಳ್ಳೋ ಉತ್ಸುಕತೆ ನನಗಿಲ್ಲ. ಹೇಳಬೇಕಾದ ಸಂಗತಿಯೆಂದರೆ, ಸಂದರ್ಶನಗಳನ್ನು ಮಾಡುವಾಗ ಎದುರಿನವರನ್ನು hurt ಮಾಡಬಾರದು. ಬೇಕಾದ್ರೆ ಅವರನ್ನ ಫಸಿಗೆ ಬೀಳಿಸಿ. ಸಿಕ್ಹಾಕಿಕೊಳ್ಳುವಂತೆ ಮಾಡಿ. ಅದ್ಯಾಕೆ hurt ಮಾಡ್ತೀರಿ? ಮನಸ್ಸಿನಲ್ಲಿ ವಿಷ ಇಟ್ಟುಕೊಂಡು ಮಾತಿಗೆ ಕುಳಿತರೆ, ಅಂಥ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅಂಥ ಧಾಟಿ ಬಂದುಬಿಡುತ್ತೆ. ಒಮ್ಮೆ ತೇಜಸ್ವಿನಿ “ನಿಮಗೆ ತುಂಬ ಜನ ಗೆಳತೀರು ಇದ್ದಾರೆ ಅಂತಾರಲ್ಲ? ಏನಂತೀರಿ?" ಅಂತ ಕೇಳಿದಳು. ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲರು, “ನೋಡಮ್ಮಾ, ಅವಾಗಿಂದ ನಾನು-ನೀನು ಬಾಗಿಲು ಹಾಕ್ಕಂಡು ಇಲ್ಲಿ ಮಾತಾಡ್ತಾ ಕೂತಿದೀವಿ. ಇನ್ನೊಂದರ್ಧ ಗಂಟೆ ಹೀಗೇ ಕೂತ್ಕಂಡ್ರೆ ನನಗೂ-ನಿನಗೂ ಸಂಬಂಧ ಇದೆ ಅಂತ ಜನ ಮಾತಾಡ್ತಾರೆ. ಅಲ್ವಾ?" ಅಂದವರು ಹಾಗೇ ತೇಲಿಸಿ ಸುಮ್ಮನಾದರು. He was street smart.

ಇವತ್ತಿಗೆ ಅನೇಕ ವರ್ಷಗಳ ಹಿಂದೆಯೇ ನನಗೆ ‘ಮೋಹನ ಸ್ವಾಮಿ’ ಅರ್ಥವಾಗಿದ್ದ. ವಸುಧೇಂದ್ರ ಇಷ್ಟವಾಗಿದ್ದ. Homosexuality ಅರ್ಥವಾಗಿತ್ತು. ಇಬ್ಬರು ಸ್ತ್ರೀಯರ ಮಧ್ಯದ lesbianism ಅರ್ಥವಾಗಿತ್ತು. ಹಾಗಂತ, ಆ ತೆರನಾದ ಸಂಬಂಧ ಇಟ್ಟುಕೊಳ್ಳುವುದು ತಪ್ಪಲ್ಲ. ಅದನ್ನು ಬಿಡಿಸಬಹುದು ಎಂದೆಲ್ಲ ಮಾತನಾಡೋದು stupidity. ಅದು ಮನೋವಿಕಾರವಲ್ಲ. ಅಪಾಯಕಾರಿಯಲ್ಲ. ವಿಕೃತಿಯಲ್ಲ. It is just natural. ‘ನೀವೇಕೆ ಹೀಗೆ?" ಅಂತ ಕೇಳೋದೂ ಸರಿಯಲ್ಲ. ''ನೀವು ಹುಡುಗೀರನ್ನ ಇಷ್ಟಪಡಲ್ವೆ? ಇದು ಕೂಡ ಅಷ್ಟೇ ಸಹಜ. Just natural. ಯಾಕೆ ಅಂತ ನಾವು ಕೇಳಿಕೊಂಡೇ ಇಲ್ಲ. It is natural for us. ನಾವು ಇರೋದು ಹೀಗೆ!" ಎಂಬ ಉತ್ತರ ದೊರೆಯುತ್ತದೆ.

ಇದಕ್ಕೆ ಇನ್ನೊಂದು ಮಾತು ಹೇಳಬೇಕು. ನಮ್ಮಲ್ಲಿ ಇದನ್ನೆಲ್ಲ ಅರ್ಥ ಮಾಡಿಕೊಳ್ಳೋರು ತುಂಬ ಕಡಿಮೆ. ‘ಅಯ್ಯೋ ಇದ್ಕಳ್ಳಿ ಬಿಡ್ರೀ. ಅವರಿಗೆ ಹ್ಯಾಗೆ ಬೇಕೋ ಹಾಗಿದ್ದಾರೆ. ನಿಮಗೇನೂ ತೊಂದ್ರೆ ಮಾಡಿಲ್ವಲ್ಲಾ?" ಎಂದೆನ್ನುವ ಆರೋಗ್ಯವಂತ ಮನಸ್ಕರೂ ಇದ್ದಾರೆ. ಅವರ ಸಂಖ್ಯೆ ಕಡಿಮೆ. ನಿಮಗೆ ವೀಣಾಧರಿ ಗೊತ್ತು. ಬದುಕಿನ ತನ್ನ ಕೊನೇ ಎರಡು ವರ್ಷಗಳನ್ನ ಆಕೆ ನನ್ನ ಮನೆಯಲ್ಲಿ ಕಳೆದದ್ದೂ ಗೊತ್ತು. “ಅಯ್ಯೋ, ಯಾರ್ರೀ ಹಾಗೆಲ್ಲ ಮನೇಲಿಟ್ಕೋತಾರೇ? ರವಿ ಬೆಳಗೆರೇಗೂ ಖಾಯ್ಲೆಯಂತೆ. ಏಡ್ಸ್ ಇದೆಯಂತೆ!" ಅಂದ ಮೂರ್ಖರು ನನಗೆ ಗೊತ್ತು. What to do with them? ಲೈಂಗಿಕತೆಯ ಬಗ್ಗೆ ಸರಿಯಾದ ಅರಿವಿಲ್ಲದಿದ್ರೆ ಹೀಗಾಗುತ್ತದೆ. ಇದರ ಬಗ್ಗೆ ಎಷ್ಟು ಸಾವಿರ ಬಾರಿ ಬರೆದರೂ ಅಷ್ಟೇ. ಆದರೆ ಬದಲಾವಣೆ ಆಗೇ ಆಗುತ್ತೆ: ನಿಧಾನವಾಗಿಯಾದರೂ...!

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 May, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books