Ravi Belagere
Welcome to my website
“ಇವತ್ತೇ ಫಸ್ಟ್ ಟೈಮ್!" ಡೇಟು, ಜಾಗ ಇತ್ಯಾದಿಗಳು ನೆನಪಿರಬಹುದು. ಅಷ್ಟೇ ಹೊರತು ಜೀವನದಲ್ಲಿ ಅವೆಷ್ಟೋ ಸಂಗತಿಗಳಿರುತ್ತವೆ: ‘ಇದು ಫಸ್ಟ್ ಟೈಮ್’ ಎಂದು ನೆನಪಿಟ್ಟುಕೊಳ್ಳುವಂತಹವು. ಹಾಗೆ ಅನೇಕ ಫಸ್ಟ್ ಟೈಮ್‌ಗಳು, ಮೊಟ್ಟ ಮೊದಲ ಸಿಗರೇಟು, ಮೊದಲ ಪೆಗ್, ಕೊಟ್ಟ ಮೊದಲ ಮುತ್ತು, ಮೊದಲ ಮೈಥುನ ಇತ್ಯಾದಿಗಳಿಂದ ಹಿಡಿದು, ಮೊದಲ ಫಸ್ಟ್ ಕ್ಲಾಸ್, ಮೊದಲ ಪ್ರಕಟಿತ ಕಥೆ, ಮೊದಲ ಕಾದಂಬರಿ, ಮೊದಲ ಆಕ್ಸಿಡೆಂಟ್-ಇತ್ಯಾದಿಗಳ ಸಾಲೇ ಇದೆ. ಅದೆಲ್ಲ ಇರಲಿ: ನಿಮ್ಮ ಬದುಕಿನ ‘ಫಸ್ಟ್ ಟೈಮ್’ಗಳ ಬಗ್ಗೆ ನೀವೇ ಹೇಳಿ. ಒಂದು ನೆನಪನ್ನು ‘ದಿಲ್ ನೇ ಫಿರ್ ಯಾದ್’ ಅಂಕಣಕ್ಕೆ ಕಳಿಸುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಜಾಸ್ತಿ ಟೈಮಿಲ್ಲ ದೊರೆ: ಬೇಗ ಬರೆದು ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಕೋಳಿ ಫಯಾಜ್‌ಗೆ ಹೆದರಿಕೆಯಾಗಲಿಕ್ಕೆ ಆ ಪರಿ ಶಕ್ತಿವಂತ ಶತ್ರುವೆಲ್ಲಿದ್ದ?

“ರೌಡಿಗಳಾ? ಯಾರಿದ್ದಾರೆ ಅವರು ಸತ್ತಾಗ ಅಳೋದಕ್ಕೆ? ಎಲ್ಲಾ ಪೊರ್ಕಿಗಳು" ಅಂತ ಪೊಲೀಸ್ ಅಧಿಕಾರಿಯೊಬ್ಬರು ಅಂದದ್ದು ನನಗೆ ನಿಚ್ಚಳವಾಗಿ ನೆನಪಿದೆ. ಕೆಲವರ ವಿಷಯದಲ್ಲಿ ಅದು ಸತ್ಯವೂ ಹೌದು. ಸಾಮಾನ್ಯವಾಗಿ ರೌಡಿಗಳು ಬಡವರ ಮನೆಯಿಂದಲೇ ಬಂದವರು. ‘ಮನೆಗೆ ಹೆಚ್ಚಾದವರು’ ಎಂಬಂತಿರುತ್ತಾರೆ. ರೌಡಿ ಚಟುವಟಿಕೆಗಳಿಗೆ ಬಿದ್ದ ಮೇಲಂತೂ, ಇರೋ ನಾಲ್ವರು ಗೆಳೆಯರಿಂದಲೂ ದೂರವಾಗಿ, ಪೊಲೀಸರಿಗೆ ಹೆದರಿ ಕಳ್ಳ ಬೀಳುತ್ತಾರೆ. ಸುತ್ತಲಿನ ಸಮಾಜದಿಂದ cut off ಆಗಿ ಬಿಟ್ಟರೆ ಬದುಕಿನ ರೀತಿಯೇ ಬೇರೆಯಾಗಿ ಬಿಡುತ್ತದೆ.

“ನೈ ಸಾಬ್...ಕ್ಯಾ ಕರೇ ತೋ ಭೀ ಚಲ್ತಾ ಹೈ. ಮಗರ್ ಮರ್ಡರ್ ಕರ್‌ನಾ ನಹೀ ದೇಖೋ...." ಅಂದಿದ್ದ ಕೋಳಿ ಫಯಾಜ್. ಹೇಳಿದ್ದೆನಲ್ಲಾ ಆಗಲೇ: ಜಿಟಿ ಜಿಟಿ ಮಳೆಯ ಸಾಯಂಕಾಲದಲ್ಲಿ, ಪ್ರೆಸ್ ಕ್ಲಬ್‌ನಲ್ಲಿ ನನಗೆ ಸಿದ್ದೀಕಿ ಆಲ್ದೂರಿ ಸಿಕ್ಕಿದ್ದ. ಕ್ಲಬ್‌ನಿಂದ ಯಾವ ಮಹಾದೂರವೂ ಅಲ್ಲ ಶಿವಾಜಿನಗರ. ಅದು ಫಯಾಜ್‌ನ ಆಟದ ಅಂಗಳ. “ಅದಕ್ಕೇನಿದೆ, ಪರಿಚಯ ಮಾಡ್ಕೊಡ್ತೀನಿ ಬಾ" ಅಂದ ಸಿದ್ದೀಕಿ ಮರು ದಿನವೇ ನನ್ನನ್ನು ಶಿವಾಜಿನಗರಕ್ಕೆ ಕರೆದೊಯ್ದಿದ್ದ. ಅವನು ಹೇಳಿಟ್ಟಿದ್ದರಿಂದಲೇ ಫಯಾಜ್ ನಮಗಾಗಿ ಕಾಯುತ್ತ ಕುಳಿತಿದ್ದ. ಅವನು ದೈತ್ಯದೇಹಿ. ಕೆನ್ನೆಗಳ ಮೇಲೆ ಸಣ್ಣಗೆ ಕುರುಚಲು. ಅವನು ತನ್ನ ಕೋಳಿ ಅಂಗಡಿಯಲ್ಲೇ ಕುಳಿತಿದ್ದ. ಅವನ ಮಾತು, ಕುಳಿತ ಭಂಗಿ ನೋಡಿದರೇನೇ ಇವನು ಮಚ್ಚು ಕೆಳಗಿಟ್ಟ ನಿವೃತ್ತ ರೌಡಿ ಅನ್ನಿಸುತ್ತಿತ್ತು. ಏಕೆಂದರೆ, ಫೀಲ್ಡಿನಲ್ಲಿ active ಆಗಿರುವ ರೌಡಿಗಳು ಹಾಗೆಲ್ಲಾ ಖುಲ್ಲಾ ಖುಲ್ಲಾ ಕೂಡುವುದಿಲ್ಲ. ಯಾವ ಕ್ಷಣದಲ್ಲಿ ಯಾವ ಏಟೋ ಎಂಬಂತಿರುತ್ತದೆ ಬದುಕು. ಸತ್ತ ರೌಡಿಗಳನ್ನೆಲ್ಲ ಒಮ್ಮೆ ಚೆಕ್ ಮಾಡುತ್ತ ಹೋಗಿ. ಹೆಚ್ಚಿನವರು ಇಂಥ ಮೈಮರೆವಿನಿಂದಾಗಿಯೇ ಶತ್ರುವಿನ ಕೈಗೆ ಸಿಕ್ಕು ಕೊಲೆಯಾಗಿಬಿಟ್ಟಿರುತ್ತಾರೆ. Mostly, ಫಯಾಜ್‌ಗೆ ಅಂಥ ದುಷ್ಮನಿ ಯಾರೊಂದಿಗೂ ಇರಲಿಲ್ಲ. ಅಥವಾ ಇರುವುದು ಅವನಿಗೆ ಗೊತ್ತಿರಲಿಕ್ಕಿಲ್ಲ. ಮುಖ್ಯವಾಗಿ ಅವನಿಗೆ ದುಷ್ಮನಿ ಅಂತ ಇದ್ದದ್ದು ಸಾಂಪ್ ನಯೀಮ್‌ನೊಂದಿಗೆ. ಅವನನ್ನಾಗಲೇ ಕೋಳಿ ಫಯಾಜ್ ತಿಂದು ಮುಗಿಸಿದ್ದ. ಅವನ ಕೈಲಿ ಏಟು ತಿಂದೂ ಬದುಕುಳಿದವನೆಂದರೆ ಫಕ್ರುದ್ದೀನ್ ಒಬ್ಬನೇ. ಅವನ ಮನೆಯೊಳಕ್ಕೇ ನುಗ್ಗಿ ಅವನನ್ನು ಅದ್ಯಾವ ಪರಿ ಕೊಚ್ಚಿದನೆಂದರೆ, ಈ ಹೊಡೆತ ತಿಂದವನು ಬದುಕುಳಿಯಲು ಸಾಧ್ಯವೇ ಇಲ್ಲ ಅಂದುಕೊಂಡು ಫಯಾಜ್ ಹೊರಟು ಬಂದಿದ್ದ! ಅಷ್ಟಾದರೂ ಆ ಪಾಪಿ ಬದುಕುಳಿದುಬಿಟ್ಟ. ಅಕ್ಷರಶಃ ಅವನ ಕೈಕಾಲಿನ ಬೆರಳು, ಹೊರಬಿದ್ದ ಕರುಳು ಮುಂತಾದವುಗಳನ್ನು ಒಂದೊಂದಾಗಿ ಆಯ್ದು ಗೋಣಿ ಚೀಲಕ್ಕೆ ತುಂಬಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಅದ್ಹೇಗೋ ಅವನು ಬದುಕುಳಿದು ಬಿಟ್ಟ.

ಆದರೆ ಲಂಬಾ ಲಂಬಾ ಮಲಗಿದ್ದವನು ಧಿಡಗ್ಗನೆ ಎದ್ದು ನಿಂತನಲ್ಲ? ಅವನು ಸಾಂಪ್ ನಯೀಮ್. ‘ಸಾಂಪ್’ ಅಂದರೆ ಹಾವು. ವಿಚಿತ್ರವಾದ ತಾಕತ್ತು ಹೊಂದಿದ್ದ ಸಾಂಪ್ ನಯೀಮ್‌ನ ಮೂಲ ಹೆಸರು ನಯೀಮ್ ಅಬುಷಾರ್. ಅವನು ಅದ್ಭುತ ಮೆಕ್ಯಾನಿಕ್. ಏಳು ಅಡಿಗೆ ಒಂದೆರಡು ಇಂಚು ಕಡಿಮೆಯಿದ್ದನೇನೋ? ಅವನು ದುಷ್ಟ, ಒರಟ, ಕ್ರೂರಿ - ಎಲ್ಲಾ ಹೌದು. ಆದರೆ ರೌಡಿಯಲ್ಲ. ಅವನಿಗೆ ಕೈಯಲ್ಲಿ ಕಸುವಿತ್ತು; ಕಸುಬೂ ಇತ್ತು. ದೈಹಿಕವಾಗಿ ವಿಪರೀತ ಬಲಿಷ್ಠವಾಗಿದ್ದ ನಯೀಮ್‌ಗೆ ಒಂದೇ ಒಂದು ಬಲಹೀನತೆ ಇತ್ತು. ಅದು, ಅವನ ಮಗ! ಹುಡುಗ ತುಂಬ ಮುದ್ದಾಗಿದ್ದ. ಅವನ ತಾಯಿ ಎಷ್ಟಾದರೂ ಆಂಗ್ಲೋ ಇಂಡಿಯನ್. ಚಿಕ್ಕಂದಿನಲ್ಲೇ ಮಗುವಿಗೆ ಇಂಗ್ಲೀಷು ಕಲಿಸಿದ್ದಳು. ಅವಳಾದರೂ ಚೆಂದದ ಹೆಂಗಸು. ನಯೀಮ್ ಅಬುಷಾರ್ ಕೇವಲ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದಿದರೆ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಅವನಿಗೆ ಮುಂಬಯಿಯ ಮುತಾಲಿಕ್ ಸೋಂಡೆ ಎಂಬುವವನ ಸ್ನೇಹ ಬೆಳೆದು ಬಿಟ್ಟಿತ್ತು. ಸೋಂಡೆ ಪಕ್ಕಾ ಡ್ರಗ್ ಪೆಡ್ಲರ್. ಅವನಿಗೆ ತೋಳಲ್ಲಿ ತಾಕತ್ತಿರಲಿಲ್ಲ. ಆದರೆ ಡ್ರಗ್ ದಂಧೆಯ ಆಳ-ಅಗಲ ಗೊತ್ತಿತ್ತು. ತನ್ನ ಕಸುಬು ಮಾಡಿಕೊಂಡು ತೆಪ್ಪಗಿದ್ದ ನಯೀಮ್‌ನನ್ನು ಆ ದಂಧೆಗೆಳೆದವನು ಮುತಾಲಿಕ್ ಸೋಂಡೆ.

ಸ್ನೇಕ್ ನಯೀಮ್ ಆ ಕಾಲಕ್ಕೆ ಒಳ್ಳೆಯ ಕರಾಟೆ ಮಾಸ್ಟರ್. ಅಸಲು ಅವನು ಇಂಡಿಯದವನೇ ಅಲ್ಲ: ಅವನು ಈಜಿಪ್ತದ ಕಡೆಯವನು ಅನ್ನುತ್ತಾರೆ ಹಳಬರು. ಸೋಂಡೆಯೊಂದಿಗೆ ಸೇರಿ ಸಾಕಷ್ಟು ಸಂಪಾದಿಸಿದ ನಯೀಮ್. ಈ ಡ್ರಗ್ ಮಾರುವವರು ವಿಪರೀತವಾಗಿ ಚೇಳು ಮತ್ತು ಹಾವು ಸಾಕಿಕೊಂಡಿರುತ್ತಾರೆ ಎಂಬ ನಂಬಿಕೆ ಜನಕ್ಕಿದೆ. ಎಷ್ಟು ಡ್ರಗ್ ಸೇವಿಸಿದರೂ ವ್ಯಕ್ತಿಗೆ ‘ಕಿಕ್’ ಆಗದೆ ಹೋದರೆ ಇವರು ತಮ್ಮಲ್ಲಿನ ಚೇಳು ಹೊರತೆಗೆದು ಅವರಿಗೆ ಒಂದು ಸಲ ಕಚ್ಚಿಸುತ್ತಾರೆ. ಕೆಲವರು ಹಾವಿನ sting ಕೂಡ ಮಾಡಿಸುವುದುಂಟಂತೆ. ಇದೆಲ್ಲಾ ನಿಜವಾ? God knows. ಹಾಗೆ ಕಚ್ಚಿಸಲೆಂದೇ ಅಲ್ಲಲ್ಲಿ ಹಾವು ಹಿಡಿದು ನಯೀಮ್ ಸಾಕಿಕೊಂಡಿದ್ದನಂತೆ. ಹಾಗಾಗಿ ಅವನಿಗೆ ಸ್ನೇಕ್ ನಯೀಮ್ ಎಂಬ ಹೆಸರು. ಅದಾಯ್ತಲ್ಲ? ದುಡಿದ ಹಣದಲ್ಲಿ ನಯೀಮ್ ಮತ್ತು ಸೋಂಡೆ ಸೇರಿ ಒಂದು ಮನೆ ಹಾಗೂ ಎರಡು ಅಂಗಡಿ ಕಟ್ಟಿಸಿದ್ದರು. ಕೆಲವು ದಿನ ಗೆಳೆತನ ಚೆನ್ನಾಗಿಯೇ ಇತ್ತು. ಆದರೆ ನಯೀಮ್‌ನನ್ನು ಬಕರಾ ಮಾಡಿ ಅದೊಂದು ಮನೆ ಹೊಡೆದುಕೊಂಡು ಬಿಡಬೇಕು ಎಂದು ಹೊರಟ ಸೋಂಡೆ. ಎಷ್ಟಾದರೂ ಹಣವಂತ. ಅವನು ಹೋಗಿ ವಿನಂತಿಸಿದಾಗ ಕಮ್ಮನಹಳ್ಳಿ ಪೊಲೀಸರು ಸುಖಾ ಸುಮ್ಮನೆ ರೇಪ್ ಕೇಸ್ ಹಾಕಿ ನಯೀಮ್‌ನನ್ನು ಜೈಲಿಗೆ ಕಳಿಸಿಬಿಟ್ಟರು. ಮನೆಗೆಲಸದ ಹುಡುಗಿಯನ್ನು ರೇಪ್ ಮಾಡಿದ ಎಂಬ ಆಪಾದನೆ. ಅಂಥ ಕೇಸು ಬಿದ್ದರೆ ಜಾಮೀನು ಸುಲಭಕ್ಕೆ ಸಿಗುವುದಿಲ್ಲ. ತಿಂಗಳಗಟ್ಟಲೆ ಅವನು ಜೈಲು ಸೇರಿದರೆ ಹೆಂಡತಿ, ಮಗುವನ್ನು ಒಕ್ಕಲೆಬ್ಬಿಸುವುದ್ಯಾವ ಕಷ್ಟ?

ಆದರೆ ಆ ಕೆಲಸವನ್ನು ನೇರವಾಗಿ ತಾವೇ ಮಾಡೋದು ಸರಿಯಲ್ಲ; ಅದಕ್ಕೊಬ್ಬ ರೌಡಿ ಬೇಕು ಎಂದು ಪೊಲೀಸರು ನಿರ್ಧರಿಸಿದರು. ಡ್ರಗ್ ದಂಧೆಯ ಸೋಂಡೆಯನ್ನು ಕರೆಸಿ, ಅವನಿಗೆ ಕೋಳಿ ಫಯಾಜ್‌ನ ಪರಿಚಯ ಮಾಡಿಸಿದರು. ಅವರು ಸಾಂಪ್ ನಯೀಮ್‌ನನ್ನು ಮನಸೋಯಿಚ್ಛೆ ಹಿಂಸಿಸಿದ್ದರು. ಏರೋಪ್ಲೇನ್ ಹತ್ತಿಸಿದ್ದರು. ಅದೆಲ್ಲ ಮಾಡಿ ಮುಗಿದ ಮೇಲೆ ಪೊಲೀಸರು ಫಯಾಜ್‌ನನ್ನು ಫೀಲ್ಡಿಗೆ ಇಳಿಸಿದ್ದರು. ಅವನು ಆಗ ಕೋಳಿ ವ್ಯಾಪಾರ ಮಾಡುತ್ತಿದ್ದ. ಅದರೊಂದಿಗೆ Star hotelಗಳನ್ನೂ ಕಾಡುತ್ತಿದ್ದ. ಮತ್ತೇನಿಲ್ಲ, ತಮ್ಮ ಹೊಟೇಲಿಗೆ ಅವರು ಫಯಾಜ್ ಕಡೆಯಿಂದಲೇ ಕೋಳಿ ಖರೀದಿಸಬೇಕು ಎಂಬ ಷರತ್ತು. ಅದರಲ್ಲೇ ಫಯಾಜ್ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದ. ಆ ತನಕ ಅವನಿಗೆ ಸಾಂಪ್ ನಯೀಮ್ ಯಾರು ಎಂಬುದೇ ಗೊತ್ತಿರಲಿಲ್ಲ. ಅವನನ್ನು ನೋಡಿಯೂ ಇರಲಿಲ್ಲ. ಈಗ ಪೊಲೀಸರೇ ಕರೆದು “ನಿನ್ನ ಡೀಲ್ ನೀನು ಮಾಡಿಕೋ" ಅಂದರೆ ಅವನೇಕೆ ಸುಮ್ಮನಿರುತ್ತಾನೆ? ಕಮ್ಮನಹಳ್ಳಿಯ ನಯೀಮ್ ಮನೆಯ ಮೇಲೆ ದಾಳಿ ಇಟ್ಟೇ ಬಿಟ್ಟ ಫಯಾಜ್. ಇದ್ದವಳು ಸಾಂಪ್ ನಯೀಮ್‌ನ ಹೆಂಡತಿ. ಅವಳನ್ನು ಎಳೆದು ಹೊರಕ್ಕೆ ನೂಕಿದ. ಮನೆಯಲ್ಲಿ ಇದ್ದಬದ್ದದ್ದನ್ನೆಲ್ಲ ಹೊರಹಾಕಿದ. ಬೇರೆ ಪಾರ್ಟಿ ಬರೋ ತನಕ ತನ್ನ ಹುಡುಗರನ್ನೇ ಆ ಮನೆಯಲ್ಲಿ ಇರಿಸಿದ. ರೇಪ್ ಕೇಸ್ ಅಂದರೆ ಸುಮ್ಮನೆ ಮಾತೇ? ನಯೀಮ್‌ಗೆ ಸುಲಭಕ್ಕೆ ಜಾಮೀನು ಸಿಗಲಿಲ್ಲ. ಅದಕ್ಕಾಗಿ ಅವನ ಹೆಂಡತಿಯೇ ಓಡಾಡಬೇಕಿತ್ತು. ಮನೆ ಖಾಲಿ ಮಾಡಿದ ಬಗ್ಗೆ ಅವಳೇ ಅತ್ತುಕೊಂಡು ಹೇಳಿದ್ದಳು. ಮನೆ ಖಾಲಿ ಮಾಡಿದುದಷ್ಟೇ ಅಲ್ಲ, ಅದರಲ್ಲಿದ್ದ ಒಂದು ವಿಡಿಯೋ ಪ್ಲೇಯರ್ ಹಾಗೂ ಕೆಲವು ಕೆಸೆಟ್ಸ್ ತನ್ನ ಶಿಷ್ಯರ ಕೈಲಿ ಶಿವಾಜಿನಗರದ ಮನೆಗೆ ಕಳಿಸಿಬಿಟ್ಟ. ವಿಡಿಯೋ ಪ್ಲೇಯರ್ ಎಂಬ ಹೆಸರನ್ನೂ ಈಗಿನವರು ಕೇಳಿರಲಾರರು. ಅದನ್ನು ವಿ.ಸಿ.ಪಿ. ಅನ್ನುತ್ತಿದ್ದರು. ಅದರೊಳಕ್ಕೆ ಹಾಕುತ್ತಿದ್ದುದನ್ನು ಕೆಸೆಟ್ ಅನ್ನುತ್ತಿದ್ದರು. ಎರಡನ್ನೂ ಬಾಡಿಗೆಗೆ ಕೊಡುವವರಿದ್ದರು. ಮನೆಯಲ್ಲಿದ್ದ ಇತರೆ ವಸ್ತುಗಳಿಗಿಂತ ಆ ವಿಡಿಯೋ ಪ್ಲೇಯರ್‌ಗಾಗಿ ತಪಿಸಿಬಿಟ್ಟ ನಯೀಮ್. ಮುಖ್ಯವಾಗಿ, ಮನೆ ಖಾಲಿ ಮಾಡಿಸಿದ ಕೋಳಿ ಫಯಾಜ್ ಬಗ್ಗೆ ಅವನಿಗೆ ಕೆಂಡಾಮಂಡಲ ಸಿಟ್ಟು ಬಂದಿತ್ತು.

ಅಂಥ ನಯೀಮ್ ಸುಮ್ಮನೆ ಶಿವಾಜಿನಗರಕ್ಕೆ ಬಂದು ವಿಚಾರಣೆ ಮಾಡಿಕೊಂಡ. ಆ ಕ್ಷಣಕ್ಕೆ ಅವನಿಗೆ ಫಯಾಜ್ ಸಿಗಲಿಲ್ಲ. ಆದರೆ ಫಯಾಜ್‌ನ ಪಕ್ಕಾ ಶಿಷ್ಯರಾದ ಸಯ್ಯದ್ ಮುಷ್ತಾಕ್, ಚಾಂದ್ ಮತ್ತು ಅಹ್ಮದ್ ಸಿಕ್ಕುಬಿಟ್ಟರು. ಫಯಾಜ್‌ಗಿಂತ ಆ ಮನೆಯಲ್ಲಿ ಈ ಮೂವರೇ ಗಂಡಾಗುಂಡಿ ನಡೆಸಿದ್ದು ಜಾಸ್ತಿ. ಆ ಮೂರು ಜನರನ್ನು ನೇರವಾಗಿ ಎತ್ತಿಕೊಂಡು ಹೋಗಿಬಿಟ್ಟ ನಯೀಮ್. ಆ ಮನೆ ಖಾಲಿಯಾಗಿತ್ತಾದರೂ ಅದರಲ್ಲಿ ವಾಸಕ್ಕೆ ಇನ್ನೂ ಯಾರೂ ಬಂದಿರಲಿಲ್ಲ. ಹೆಡೆಮುರಿ ಕಟ್ಟಿ ತಂದ ಆ ಮೂರು ಜನರನ್ನ ನಯೀಮ್ ಚೆನ್ನಾಗಿ ಬಡಿದ. ಸುಳ್ಳೇ ರೇಪ್ ಕೇಸ್ ಹಾಕಿ, ಜೈಲಿಗೆ ಕಳಿಸುವ ಮುನ್ನ ಲಾಕಪ್‌ನಲ್ಲಿ ಪೊಲೀಸರು ಭಯಾನಕವಾಗಿ ಹಿಂಸಿಸಿದ್ದರಲ್ಲ? ಅದೆಲ್ಲ ನೆನಪಿಗಿತ್ತು ಅವನಿಗೆ. ಹೊತ್ತು ತಂದವರನ್ನು ಅದೇ ತೆರನಾಗಿ ಹಿಂಸಿಸಿದ. ನಡೆದಾಡಲು ಸಾಧ್ಯವೇ ಆಗದಂತೆ ಅವರ ಅಂಗಾಲುಗಳಿಗೆ ಲಾಳ ಕಟ್ಟಿದ. ಮೂರೂ ಜನರನ್ನು ಎರೋಪ್ಲೇನ್ ಹತ್ತಿಸಿದ. ಮನೆಯಂತೂ ಅವನು ಬಿಟ್ಟುಕೊಡೋ ಮಾತಿರಲಿಲ್ಲ. ಈಗ ಜೈಲಿನಿಂದ ಹೊರಬಿದ್ದ ಮೇಲೆ ಅದನ್ನು ದಕ್ಕಿಸಿಕೊಂಡಾನೆಯೇ ಸೋಂಡೆ? ಉಳಿದದ್ದೆಂದರೆ ಮನೆ ಖಾಲಿ ಮಾಡಿಸಿದ ಕೋಳಿ ಫಯಾಜ್‌ನ ಕಥೆ. ಅವನ ಮೂರೂ ಜನ ಶಿಷ್ಯರನ್ನು ನಯೀಮ್ ಹಾಗೆ ಚಿತ್ರಹಿಂಸೆ ಕೊಟ್ಟ ನಂತರ, ಇನ್ನೊಂದು ಅಧ್ಯಾಯ ಪ್ರಾರಂಭಿಸಿದ. ಅವನು ಸರದಿಯಂತೆ ಒಬ್ಬರನ್ನೂ ಹಿಡಿದು ಸಲಿಂಗ ಶಿಕ್ಷೆ ನೀಡಿದ. That was really humiliating. ಯಾವ ಗಂಡಸು ತಾನೇ ಅದನ್ನು ಸಹಿಸಿಯಾನು?

ಆದರೆ ಅವರಿಗೆ ಬೇರೆ ದಾರಿ ಎಲ್ಲಿತ್ತು? ತಿನ್ನಲಿಕ್ಕೆ ಅವರಿಗೆ ಒಂದು ಮುಷ್ಟಿ ಅನ್ನ ಕೂಡ ಕೊಟ್ಟಿರಲಿಲ್ಲ ನಯೀಮ್. ಅದೆಲ್ಲ ಶಿಕ್ಷೆಗಳ ನಂತರ ಅವನು ಮೂರೂ ಮಂದಿಯನ್ನು ನಗ್ನಗೊಳಿಸಿದ. ಮೂರು ಸ್ಟೂಲ್ ತಂದು ಒಂದೊಂದರ ಮೇಲೆ ಒಬ್ಬೊಬ್ಬರನ್ನು ಕೂಡಿಸಿದ. ಎದ್ದು ನಿಲ್ಲಲಿಕ್ಕೆ ಆಗದಂತೆ ಅವರ ಕಾಲುಗಳನ್ನು ಕಟ್ಟಿ ಕೂಡಿಸಿದ್ದ. ಆಗಲೇ ಅವರು ಶಕ್ತಿ ಬಿಟ್ಟು “ಅಮ್ಮಾಗೇ...." ಅಂತ ಕೂಗಿದ್ದು. ನಯೀಮ್ ಪಸಂದಾದ ಮೂರು ಹಾವು ತಂದು ಅವರಿದ್ದ ಕೋಣೆಯಲ್ಲಿ ಬಿಟ್ಟು ಬಿಟ್ಟಿದ್ದ. ನಾಗರಹಾವಾ? ಕೇರೆ ಹಾವಾ? ಹಾವು ಹಾವೇ! ಎಂಥವರಿಗೂ ಪ್ರಾಣಭಯ: ಬಾಯಿ ಬಡಿದುಕೊಳ್ಳುವಂತಾಗುತ್ತದೆ. ಫಯಾಜ್‌ನ ಶಿಷ್ಯರನ್ನು ಹಾಗೆ ಮೂರು ದಿನ ಕೂಡಿಸಿದ್ದ ನಯೀಮ್. ಅವರಿಗೆ ಆಗೊಮ್ಮೆ ಈಗೊಮ್ಮೆ ಗ್ಲೂಕೋಸ್ ಬೆರೆತ ನೀರು ಕುಡಿಸುತ್ತಿದ್ದ.

ಅಷ್ಟಾದ ಮೇಲೆ ಎದ್ದು ನಿಲ್ಲುವ ತಾಕತ್ತು ಯಾವನಿಗಿದ್ದೀತು? ಅವರನ್ನು ಆ ಸ್ಥಿತಿಯಲ್ಲಿಯೇ ಮನೆಯಿಂದ ಹೊರಕ್ಕೆ ನೂಕಿದ್ದ ನಯೀಮ್, “ನಿಮ್ಮ ಬಾಸ್‌ಗೆ ಹೇಳಿ, ನಿಮಗಾದದ್ದೇ ಅವನಿಗೂ ಆಗುತ್ತೆ!" ಅಂದಿದ್ದ. ಹೋಗಿ ಬಾಸ್‌ಗೆ ಹೇಳಲಿಕ್ಕೆ ಏನಿದೆ? ನೂಕಿದರೆ ಸತ್ತು ಬೀಳುವಂತಾದ ಆ ಮೂವರು ಮನೆಗಳಿಗೆ ಹೋಗಿ ಎಚ್ಚರ ತಪ್ಪಿದವರಂತೆ ಮಲಗಿಬಿಟ್ಟರು. ಕೊಂಚ ಪ್ರಾಣ ಬಂದ ನಂತರ ಅವರು ಶಿವಾಜಿನಗರಕ್ಕೆ ಹೋದರು. ಆಗಲೇ ಫಯಾಜ್ ಒಂದು ರೌಂಡ್ ಕುಡಿದು ಕುಳಿತಿದ್ದ. ಅವರು ನಯೀಮ್ ಕೊಟ್ಟ ಚಿತ್ರ ಹಿಂಸೆಯನ್ನೆಲ್ಲ ವಿವರಿಸಿದರು. ಫಯಾಜ್ ಎಲ್ಲ ಕೇಳಿಕೊಂಡು ಕುಳಿತೇ ಇದ್ದ. ಆದರೆ ನಯೀಮ್ ಕೊಟ್ಟ ಸಲಿಂಗ ಶಿಕ್ಷೆಯ ವಿವರ ಕೇಳಿ ಕನಲಿಬಿಟ್ಟ. “ಇದೇ ಶಿಕ್ಷೆಯನ್ನು ನಿಮ್ಮ ಬಾಸ್‌ಗೂ ಕೊಡ್ತೇನೆ ಅಂದ!" ಎಂಬ ಮಾತು ಸೇರಿಸಿದರು. ಫಯಾಜ್ ಕೆರಳಿದ್ದೇ ಆ ಮಾತಿಗೆ. ನಿಜ ಹೇಳಬೇಕೆಂದರೆ ಸ್ನೇಕ್ ನಯೀಮ್ ಒಂದರ್ಥದಲ್ಲಿ ಆ ಮೂವರಷ್ಟೇ ಹೈರಾಣಾಗಿದ್ದ. ಹೊಡೆಯುವಾಗ ಒಂದು sadistic pleasure ಇರುತ್ತೆ. ಆನಂತರ ಶುರುವಾಗುತ್ತದೆ ಎದೆಯಲ್ಲಿ ಡುಕು ಡುಕು. ಫಯಾಜ್‌ಗೆ ಆ ಶಿಷ್ಯರು ಏನೇನೆಲ್ಲ ಹೇಳುತ್ತಾರೋ? ಮೊದಲೇ ತಾನು ಸ್ಥಳೀಯನಲ್ಲ. ನೆರವಿಗೆ ಯಾವ ಗ್ಯಾಂಗೂ ತನ್ನೊಂದಿಗಿಲ್ಲ. ಅಂಥ ಯಮ ತಾಕತ್ತಿನ ಫಯಾಜ್ ತನ್ನನ್ನು ಬದುಕಲು ಬಿಟ್ಟಾನೆಯೇ? ಹಾಗೆಲ್ಲ ಯೋಚಿಸಿದ ನಯೀಮ್ ಒಬ್ಬ ವಕೀಲರಲ್ಲಿಗೆ ಹೋಗಿ, “ಇಬ್ಬರಿಗೂ ರಾಜಿ ಮಾಡಿಸಿಬಿಡಿ" ಅಂದಿದ್ದ. ವಂಚಕನಾದ ಸೋಂಡೆ, ಕೊಡಬೇಕಾದ ಹಣ ಕೊಟ್ಟು ಬಿಟ್ಟರೆ ತಾನು ದೇಶವನ್ನೇ ಬಿಟ್ಟು ಹೋಗುವುದಾಗಿ ಕೂಡ ಸ್ನೇಕ್ ನಯೀಮ್ ವಕೀಲರಿಗೆ ಹೇಳಿದ್ದ. ಕೋಳಿ ಫಯಾಜ್ ಆ ವಕೀಲರಿಗೆ ಚಿರಪರಿಚಿತ. ಅವರ ಮಾತು ಮೀರಲಾರ ಎಂಬ ನಂಬಿಕೆ ನಯೀಮ್‌ನದು. “ಆಯ್ತು, ನಾಳೆ ಅವನನ್ನ ಕರೆಸಿ ಹೇಳ್ತೇನೆ. ಅಲ್ಲೀ ತನಕ ಅವನ ಕೈಗೆ ಸಿಗಬೇಡ" ಅಂದಿದ್ದರು ವಕೀಲರು. ಅವಿವೇಕಿ ನಯೀಮ್ ತೆಪ್ಪಗಿರಬಾರದೆ? ಅವನು ಕಮ್ಮನಹಳ್ಳಿಯ ಮನೆಯಲ್ಲೇ ಇದ್ದಿದ್ದರೂ ಸಾಕಿತ್ತು. ಜೀವನದಲ್ಲಿ ಅವನು ಕಟ್ಟಕಡೆಯ ತಪ್ಪು ಮಾಡಿಬಿಟ್ಟಿದ್ದ.

ಓಡಾಡಲಿಕ್ಕೆ ಅವನೊಂದು ಯಜ್ಡಿ ಬೈಕ್ ಇಟ್ಟುಕೊಂಡಿದ್ದ. ಅದರ ಮೇಲೆ ಪುಟ್ಟ ಮಗನನ್ನೂ ಕೂಡಿಸಿಕೊಂಡು ರಾತ್ರಿಯ ಕೊನೆಯ showಗೆ ‘ಲಿಡೋ’ ಟಾಕೀಸಿಗೆ ಹೋಗಿಬಿಟ್ಟ! ಒಬ್ಬನೇ ಹೋಗಿದ್ದಿದ್ದರೆ ಮಾತು ಬೇರೆ ಇತ್ತು. ಜೊತೆಯಲ್ಲಿ ಹುಡುಗನಿದ್ದ ನೋಡಿ? ಫಕ್ಕನೆ ಅವರಿವರ ಕಣ್ಣು ಬೀಳುತ್ತಿತ್ತು. ಹಾಗೆ ಅವನು ಸಿನೇಮಕ್ಕೆ ಹೋದ ಸಂಗತಿ ಫಯಾಜ್‌ನ ಕಿವಿಗೆ ಬಿದ್ದಿತ್ತು. In no time, ಹೊಟ್ಟೆ ತುಂಬ ಕುಡಿದು ಬಿಟ್ಟ ಫಯಾಜ್. ಅವನ ಶಿಷ್ಯರೆಲ್ಲ ಶಿವಾಜಿನಗರದ ಕೋಳಿ ಅಂಗಡಿಯ ಆಸುಪಾಸಿನಲ್ಲೇ ಇದ್ದರು. ಒಂದು ಹಿಂಡು ಕಟ್ಟಿಕೊಂಡವನೇ ಫಯಾಜ್, ಹತ್ತಿರದ ‘ತಾಜ್’ ಹೊಟೇಲಿನ ಬಳಿ ಹೊಂಚಿಗೆ ಕುಳಿತುಬಿಟ್ಟ. “ಸಾಥ್ ಮೇ ಬಚ್ಚಾ ಹೈ!" (ಜೊತೇಲಿ ಮಗುವಿದೆ) ಅಂದರು ಯಾರೋ. “ಅದನ್ನ ಪಕ್ಕಕ್ಕೆ ನೂಕಿ ಬಿಡಿ" ಅಂದ ಫಯಾಜ್.

ಅವತ್ತು ನಯೀಮ್ ಏಕಾಂಗಿಯಾಗಿದ್ದಿದ್ದರೆ ಉಳಿದುಕೊಳ್ಳುತ್ತಿದ್ದನೇನೋ? ಮಗುವನ್ನು ಪಕ್ಕಕ್ಕೆ ನೂಕಿದವನೇ ಕೋಳಿ ಫಯಾಜ್ ಕಾರ್ಯಾಚರಣೆ ಆರಂಭಿಸಿ ಬಿಟ್ಟ. ತಲವಾರ್‌ನಲ್ಲಿ ಅವನನ್ನು ಅಲ್ಲೇ ಕತ್ತರಿಸಿದ್ದರೂ ಆಗುತ್ತಿತ್ತು. ಆದರೆ....!

-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 May, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books