Ravi Belagere
Welcome to my website
“ಇವತ್ತೇ ಫಸ್ಟ್ ಟೈಮ್!" ಡೇಟು, ಜಾಗ ಇತ್ಯಾದಿಗಳು ನೆನಪಿರಬಹುದು. ಅಷ್ಟೇ ಹೊರತು ಜೀವನದಲ್ಲಿ ಅವೆಷ್ಟೋ ಸಂಗತಿಗಳಿರುತ್ತವೆ: ‘ಇದು ಫಸ್ಟ್ ಟೈಮ್’ ಎಂದು ನೆನಪಿಟ್ಟುಕೊಳ್ಳುವಂತಹವು. ಹಾಗೆ ಅನೇಕ ಫಸ್ಟ್ ಟೈಮ್‌ಗಳು, ಮೊಟ್ಟ ಮೊದಲ ಸಿಗರೇಟು, ಮೊದಲ ಪೆಗ್, ಕೊಟ್ಟ ಮೊದಲ ಮುತ್ತು, ಮೊದಲ ಮೈಥುನ ಇತ್ಯಾದಿಗಳಿಂದ ಹಿಡಿದು, ಮೊದಲ ಫಸ್ಟ್ ಕ್ಲಾಸ್, ಮೊದಲ ಪ್ರಕಟಿತ ಕಥೆ, ಮೊದಲ ಕಾದಂಬರಿ, ಮೊದಲ ಆಕ್ಸಿಡೆಂಟ್-ಇತ್ಯಾದಿಗಳ ಸಾಲೇ ಇದೆ. ಅದೆಲ್ಲ ಇರಲಿ: ನಿಮ್ಮ ಬದುಕಿನ ‘ಫಸ್ಟ್ ಟೈಮ್’ಗಳ ಬಗ್ಗೆ ನೀವೇ ಹೇಳಿ. ಒಂದು ನೆನಪನ್ನು ‘ದಿಲ್ ನೇ ಫಿರ್ ಯಾದ್’ ಅಂಕಣಕ್ಕೆ ಕಳಿಸುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಜಾಸ್ತಿ ಟೈಮಿಲ್ಲ ದೊರೆ: ಬೇಗ ಬರೆದು ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಧಾರವಾಡದ ಮಳೆಗೆ ರಬ್ಬರ್ ಚಪ್ಪಲಿ ಹಾಕ್ಕೊಂಡು ಸಿಕ್ರೆ!

ಅದು ನಿದ್ರೆಯ ರೀತಿಯ ನಿದ್ರೆಯಲ್ಲ. ನೀವು ಪರೀಕ್ಷಿಸಿ ನೋಡಿ. ಬೆಳಗಿನ ಜಾವ ನಾಲ್ಕು ಗಂಟೆ ತನಕ ನಾನು ಎಚ್ಚರವಾಗಿರುತ್ತೇನೆ: ನಾಕ್ಟರ‍್ನಲ್! ಏನು ಜಪ್ಪಯ್ಯ ಅಂದರೂ ನಿದ್ದೆ ಬರುವುದಿಲ್ಲ. ಕೊಂಚ ಹೊತ್ತು ಹಾಡು ಕೇಳ್ತೇನೆ. ಫೇಸ್‌ಬುಕ್ ಜಾಲಾಡುತ್ತೇನೆ. ಆಫೀಸಿನಲ್ಲೇ ದೆಯ್ಯದಂತೆ ಓಡಾಡುತ್ತೇನೆ. ನನ್ನ ಕಾವಲಿನ ಹುಡುಗನಿಗೆ ಮೈ ತುಂಬ ನಿದ್ರೆ. ಅವನು ಕೇವಲ ನನ್ನ ಕಾವಲಿನ ಗಾರ್ಡ್ ಅಲ್ಲ. ನನಗೆ ಊಟ ಬಡಿಸೋದು, ಅದನ್ನ ಬಿಸಿ ಮಾಡೋದು, ಒಂಚೂರು ಕಾಲೊತ್ತುವುದು ಇತ್ಯಾದಿ ಮಾಡುತ್ತಾನೆ. ಮಾತು ಮಾತ್ರ, ಅದೇನು ಬಂಗಾರವೋ ಬಾಯಲ್ಲಿ. ಜಪ್ಪಯ್ಯ ಅಂದು ಕಾಲಿಗೆ ಬಿದ್ದರೂ ಮಾತನಾಡೋದಿಲ್ಲ! ಉಳಿದವರೊಂದಿಗೆ ಚೆನ್ನಾಗೇ ಇರುತ್ತಾನೆ. ಕೊಂಚ ತುಂಟ ಕೂಡ. ಅದೇನು ನಿರ್ಧಾರವೋ ಕಾಣೆ: ನನ್ನೊಂದಿಗೆ ಬಿಲ್‌ಕುಲ್ ಮಾತಿಲ್ಲ. ಕೋಲಾರದ ಕಡೆಯ ಹುಡುಗ. ತೆಲುಗಿನಲ್ಲಿ ಮಾತಾಡಿಸಿದರೂ ಉತ್ತರವಿರೋದಿಲ್ಲ. ಅವನ ಅವ್ಯಾಹತ ಮೌನಕ್ಕೆ ನಾನೇ ಹೊಂದಿಕೊಂಡು ಬಿಟ್ಟಿದ್ದೇನೆ. ಅವನ ಹೆಂಡತಿ ತುಂಬ ಒಳ್ಳೆಯ ಹುಡುಗಿ. ನನ್ನ ಸ್ನೇಹಿತರೊಬ್ಬರ ವಿದ್ಯಾರ್ಥಿನಿಯಾಗಿದ್ದವಳು. ಇವನನ್ನು ದಬಾಯಿಸಿ ಕಂಟ್ರೋಲ್‌ನಲ್ಲಿಟ್ಟುಕೊಂಡಿದ್ದಾಳೆ. ಈ ದಂಪತಿಗಳಿಗೆ ಒಂದು ಮಗುವಿದೆ. ಅದರ ಬೆನ್ನಲ್ಲೇ ಹುಡುಗಿ, ಮತ್ತೆ ಬಸುರಿ. ಎಲ್ಲೋ ಗಾರ್ಮೆಂಟ್ಸ್‌ಗೆ ಹೋಗುತ್ತಿದ್ದವಳು ಈಗ ಬಿಟ್ಟಿದ್ದಾಳೆ. ಪರವಾಗಿಲ್ಲ, ಇವನಿಗೆ ನಾವು ಕೊಡೋ ಸಂಬಳದಲ್ಲೇ ಸಂಸಾರ ನಡೆಯಬಹುದು. ಆದರೂ ಗಂಡ-ಹೆಂಡತಿ ಇಬ್ಬರೂ ದುಡಿದರೇನೇ ಬೆಂಗಳೂರಿನಲ್ಲಿ ಸಂಸಾರ ನಡೆಯೋದು. ಈ ಸಲ ಮಗು ಆದ ಮೇಲೆ ಸರಿಯಾದ ಕಡೆ ಹುಡುಕಿ ಕೆಲಸಕ್ಕೆ ಸೇರಿಸು ಅಂತ ಇವನಿಗೆ ಹೇಳಿದ್ದೇನೆ. ಪುಣ್ಯಾತ್ಮ ತಲೆಯಾಡಿಸಿದ್ದಾನೆ.

ಅವನ ಪಾಡಿಗೆ ಅವನನ್ನು ಬಿಟ್ಟು, ನಾನು ಬೆಳಗಿನ ಜಾವದ ನಾಲ್ಕು ಗಂಟೆಯ ತನಕ ಎದ್ದಿರುತ್ತೇನೆ. ಓದಲು ಕುಳಿತೆನೆಂದರೆ ನನಗೆ ಯಾವ ಕಾವಲೂ ಬೇಡ. ಸರಿ, ನಾಲ್ಕಕ್ಕೆ ಮಲಗ್ತೀನಲ್ಲ? ಬೆಳಗಿನ ಏಳೂವರೆ-ಎಂಟಕ್ಕೆ ಎದ್ದು ಪದ್ಮಾಸನ ಹಾಕಿ ಶನಿಯಂತೆ ಕೂತಿರುತ್ತೇನೆ. ಇವನು ರೆಡ್ಡಿ ಕಾಫಿ ಮಾಡಿ ಮಾಡಿ ಕೊಡುತ್ತಾನೆ. ನನ್ನ ಸಿಗರೇಟಿನ ಅಗ್ನಿಹೋತ್ರ ಆಗಲೇ ಶುರು. ಅರನಿದ್ರೆಯಾಯ್ತು ಅಂದುಕೊಳ್ತೇನೆಯೇ ಹೊರತು,ಮತ್ತೆ ನನಗೆ ನಿದ್ರೆ ಬರುವುದಿಲ್ಲ. ಧಾರವಾಡಕ್ಕೆ ಹೋಗಿ ಡಾ.ಪಾಂಡುರಂಗಿಯವರ ಕೈಲಿ ಇದನ್ನ ರಿಪೇರಿ ಮಾಡಿಸಿಕೊಂಡು ಬರಬೇಕು. ಅಲ್ಲಿಗೆ ಹೋಗಿ ಎರಡು ವರ್ಷಗಳೇ ಆದವು. I miss entire family. ಡಾಕ್ಟರು, ಅವರ ಪತ್ನಿ, ಮಗ ಡಾ.ಆದಿತ್ಯ, ಸೊಸೆ ಡಾ.ಸಪ್ನಾ-ಎಲ್ಲರೂ ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ. ಈಗಂತೂ ಡಾ.ಸಮೃದ್ಧಿ ಹುಟ್ಟಿ ಬಿಟ್ಟಿದ್ದಾಳೆ. ಆ ಕುಟುಂಬಕ್ಕೆ ನಾನು ನಾನಾ ರೀತಿಯಾಗಿ ಋಣಿ. ಹಾಗೆಯೇ ಧಾರವಾಡದ ಮಳೆ ಶುರುವಾಗಿದ್ದರೆ ಅದನ್ನ enjoy ಮಾಡುವುದರಲ್ಲಿ ಭಯಂಕರ ಖುಷಿ ಇದೆ. “ಧಾರವಾಡದ ಮಳೆ ನಂಬಬಾರ‍್ದು, ಬೆಳಗಾವಿಯ ಹುಡುಗೀನ ನಂಬಬಾರದು" ಎಂಬ ಉಡಾಳ ಮಾತೊಂದಿದೆ. ಪಾಪ, ಆ ಹುಡುಗೀರು ಏನು ತಪ್ಪು ಮಾಡಿದ್ದಾರು? ಇದಿರಾದರೆ ಚೆಂದನ ರುಚಿಯ ‘ಕುಂದಾ’ ಒಂಚೂರು ಕೈಗಿತ್ತು, ನಕ್ಕು ನಡೆದಾರು. We must respect them. ಧಾರವಾಡದ ಮಳೆ ಈಗ ಮೊದಲಿನಂತಿಲ್ಲ. ಮೊದಲೆಲ್ಲ ಛತ್ರಿ ಬಿಟ್ಟು ಹೊರಕ್ಕೆ ಬಂದಾಗಲೇ ಜಪ್ಪ ಜಡಿದುಬಿಡುತ್ತಿತ್ತು. ಮೊದಲೇ ಕೆಂಪು ಮಣ್ಣು. ರಬ್ಬರ್ ಚಪ್ಪಲಿ ಹಾಕಿಕೊಂಡು ಹೊರಟಿದ್ದರಂತೂ ಕುಂಡಿಯ ಮೇಲೆ ಅಪೂರ್ವ ಆರ್ಟ್‌ವರ್ಕ್.

ಧಾರವಾಡವೊಂದೇ ಅಲ್ಲ: ಜೊಯಿಡಾಕ್ಕೆ ಈ ಬಾರಿ ಹೋಗಲೇಬೇಕು. ಮೊನ್ನೆ ಅಲ್ಲಿಂದ ಮಿತ್ರ ರವಿ ರೇಡ್ಕರ್ ಬಂದಿದ್ದರು. ಅಲ್ಲೂ ಮಳೆಯ ನಿರೀಕ್ಷೆ ನಡೆದಿದೆ. ಒಮ್ಮೆ ಮಳೆಯಾಯಿತೆಂದರೆ ಅಲ್ಲೆಲ್ಲ ಸುತ್ತುವ ಆ ಖುಷಿಯೇ ಬೇರೆ. ಈಗಿರುವ ನನ್ನ ಡ್ರೈವರ್ ಸಂತೋಷ್ ಅಲ್ಲಿಗೆಲ್ಲ ಬಂದಿಲ್ಲ. ಕೊಂಚ ಸಹನೆಯಿಟ್ಟುಕೊಂಡು ಗೋವೆಯ ತನಕ ಗಾಡಿ ಓಡಿಸಿ ಬಿಟ್ಟರೆ ಆಹ್! ಗೋವೆಯ ಮಳೆ ಸ್ವರ್ಗ ಸಮಾನ.

ಮೊದಲು ನನ್ನಲ್ಲಿದ್ದ ಡ್ರೈವರನೊಬ್ಬ ಅಪಘಾತ ಮಾಡಿಕೊಂಡು ಸತ್ತನಂತೆ ಹಾಗಂತ ಮೊನ್ನೆ ಯಾರೋ ಹೇಳಿದರು. ಅದು ನಿಜವಾ? ಗೊತ್ತಿಲ್ಲ. ಚಿಕ್ಕ ಹುಡುಗ. ಚಿಕ್ಕ ಕುಟುಂಬ. ಅವನಿಗೆ ಸಿನೆಮಾದಲ್ಲಿ ನಟಿಸೋ ಚಟವಿತ್ತು. ಹೆಚ್ಚೆಂದರೆ ನಲವತ್ತು ವರ್ಷವಿರಬಹುದು. ಮನಸ್ಸಿಗೆ ಹಳಹಳಿ ಅನ್ನಿಸಿತು.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 May, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books