Ravi Belagere
Welcome to my website
“ಇವತ್ತೇ ಫಸ್ಟ್ ಟೈಮ್!" ಡೇಟು, ಜಾಗ ಇತ್ಯಾದಿಗಳು ನೆನಪಿರಬಹುದು. ಅಷ್ಟೇ ಹೊರತು ಜೀವನದಲ್ಲಿ ಅವೆಷ್ಟೋ ಸಂಗತಿಗಳಿರುತ್ತವೆ: ‘ಇದು ಫಸ್ಟ್ ಟೈಮ್’ ಎಂದು ನೆನಪಿಟ್ಟುಕೊಳ್ಳುವಂತಹವು. ಹಾಗೆ ಅನೇಕ ಫಸ್ಟ್ ಟೈಮ್‌ಗಳು, ಮೊಟ್ಟ ಮೊದಲ ಸಿಗರೇಟು, ಮೊದಲ ಪೆಗ್, ಕೊಟ್ಟ ಮೊದಲ ಮುತ್ತು, ಮೊದಲ ಮೈಥುನ ಇತ್ಯಾದಿಗಳಿಂದ ಹಿಡಿದು, ಮೊದಲ ಫಸ್ಟ್ ಕ್ಲಾಸ್, ಮೊದಲ ಪ್ರಕಟಿತ ಕಥೆ, ಮೊದಲ ಕಾದಂಬರಿ, ಮೊದಲ ಆಕ್ಸಿಡೆಂಟ್-ಇತ್ಯಾದಿಗಳ ಸಾಲೇ ಇದೆ. ಅದೆಲ್ಲ ಇರಲಿ: ನಿಮ್ಮ ಬದುಕಿನ ‘ಫಸ್ಟ್ ಟೈಮ್’ಗಳ ಬಗ್ಗೆ ನೀವೇ ಹೇಳಿ. ಒಂದು ನೆನಪನ್ನು ‘ದಿಲ್ ನೇ ಫಿರ್ ಯಾದ್’ ಅಂಕಣಕ್ಕೆ ಕಳಿಸುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಜಾಸ್ತಿ ಟೈಮಿಲ್ಲ ದೊರೆ: ಬೇಗ ಬರೆದು ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಭೂಗತ ಲೋಕದ ಹುತ್ತ ಹೊಕ್ಕವನಿಗೆ ಕಥೆಗಳ ಕೊರತೆಯೇ?

“ಅವನಾ... ಅವನ್ಯಾವ ‘ಬಾಸ್’ ರೀ? ಕೋರ್ಟ್‌ನಲ್ಲಿ ದುಷ್ಮನ್‌ನ ಒಳ್ಳೇ ಬೆಕ್ಕು ಪರಚಿಧಂಗೆ ಪರಚಿ ಹತ್ತು ವರ್ಷ ಶಿಕ್ಷೆ ತಗೊಂಡೋನು, ಅವ್ನೂ ಒಬ್ಬ ರೌಡೀನೇನ್ರೀ?" ಎಂದು ಗಹಗಹಿಸಿ ನಗುತ್ತಿದ್ದವನು ಕೊತ್ವಾಲ್ ರಾಮಚಂದ್ರ.

ನಾನು ಬೆಂಗಳೂರಿಗೆ ಬಂದು ಭೂಗತ ಲೋಕವೆಂಬೋ ಹುತ್ತದೊಳಕ್ಕೆ ಕೈ ಇಡುವ ಹೊತ್ತಿಗಾಗಲೇ ಅವನ ಕೊಲೆಯಾಗಿತ್ತು. In a way ಅವನ ಜಮಾನಾ ಮುಗಿದಿತ್ತು. ಅವನ ಬಗ್ಗೆ ಹೇಳಲಿಕ್ಕೇನಂತೆ? ಭರ್ತಿ ಕಥೆಗಳಿದ್ದವು. ಅಷ್ಟರಮಟ್ಟಿಗೆ he was a legend. ಆಗೆಲ್ಲ ಕೆಮರಾಗಳಿರಲಿಲ್ಲ. ಫೊಟೋ ತೆಗೆಸಿಕೊಳ್ಳಬೇಕೆಂದರೆ ಸ್ಟುಡಿಯೋಕ್ಕೇ ಹೋಗಿ, ಪೋಸು ಕೊಟ್ಟು ನಿಂತು, ಕೆಮರಾದವನು ಒಂದು ಕರೀ ಮುಸುಗಿನಲ್ಲಿ ನಿಂತು ಫೊಟೋ ತೆಗೆಯಬೇಕು. ಅದನ್ನು ಅವನು ತನ್ನದೇ ಬಿಡುವಿನಲ್ಲಿ ತೊಳೆದು, ರೆಡಿ ಮಾಡಿಟ್ಟ ಮೇಲೆ ನಾವು ಹೋಗಿ ಬ್ಲಾಕ್ ಅಂಡ್ ವೈಟ್‌ನ ಮೂರು ಕಾಪಿ ತಂದುಕೊಳ್ಳಬೇಕಿತ್ತು. ನನಗೆ ಅದೇನು ಮೋಹವೋ ಕಾಣೆ; ಇವತ್ತಿಗೂ ನನಗೆ black and white photoಗಳೆಂದರೆ ಇಷ್ಟ. ಆ ನಂತರದ ಕಲರ್ ಫೊಟೋಗಳದೇನು ನೆಚ್ಚಿಗೆ? ಆರು ತಿಂಗಳಾದ ಮೇಲೆ ಬಣ್ಣ ಬಿಟ್ಟು ಒರಿಜಿನಲ್ ಅಟ್ರಾಕ್ಷನ್ನನ್ನೇ ಕಳೆದುಕೊಂಡು ಬಿಡುತ್ತಿದ್ದವು. ಈಗಿನವು ಇನ್ನೂ ಚೇಷ್ಟೆ ಮಾಡುತ್ತವೆ: ಇವು ಅಸಲು ಕೈಗೇ ಸಿಗುವುದಿಲ್ಲ. ನೀರ ಮೇಲಿನ ಗುಳ್ಳೆ. ಇವು ಕೊಳೆಯಾಗೋದೇನೂ ಇಲ್ಲ. ಆದರೆ ಇವುಗಳಿಗೊಂದು ‘ಬಾಣಂತಿ ಸೇವೆ’ ಥರದ್ದನ್ನ ಮಾಡಬೇಕು. ಆಗ, ಯಾವುದೋ ಕಾಲದಲ್ಲಿ ನಾನು ಬಂಡೀಪುರಕ್ಕೆ ಹೋಗುತ್ತಿದ್ದೆ. ಹುಬ್ಬಳ್ಳಿಯ ಗೆಳೆಯ ಶಶಿ ಸಾಲಿಗೆ wild life photographyಯ ಹುಚ್ಚು. ಅವರಿಗೆ ನಾನು ಕಂಪೆನಿಗೆ ಬೇಕು. ಅವರದೊಂದು ಟೀಮಿಗೆ ಟೀಮೇ ಹೊರಡುತ್ತಿತ್ತು. ಅವರ ಪೈಕಿ ನಂಗೆ ತುಂಬ ಇಷ್ಟವಾಗುತ್ತಿದ್ದವರು ಇಡೀ ಗುಂಪಿಗೇ ಹಿರಿಯ ಫೊಟೋಗ್ರಾಫರ್. ನನಗೆ ಬಂಡೀಪುರ ಯಾತ್ರೆಯ ಪ್ರತಿ ಹೆಜ್ಜೆಯೂ ನೆನಪಿದೆ. ಮುಂದೆ ಮುಂದೆ ಕೆಲವರು ಹೋಗುತ್ತಿದ್ದರು. ಅವರ ಹಿಂದೆ ನಾನು. ನನಗೆ ತುಂಬ ಇಷ್ಟವಾಗುತ್ತಿದ್ದುದೆಂದರೆ ಹಿರಿಯರಾದ ಟಿ.ಎನ್.ಎ. ಪೆರುಮಾಳೆ ಅವರ ಮೆಲು ಮಾತು. ಕಪ್ಪು-ಬಿಳಿ ಫೊಟೋಗ್ರಫಿಯಲ್ಲಿ ಅವರದಾಗ ಅತಿ ದೊಡ್ಡ ಹೆಸರು. ಸಂಡೂರಿನ ದೊರೆ ಎಂ.ವೈ.ಘೋರ್ಪಡೆಯವರೊಂದಿಗೆ ಪೆರುಮಾಳ್‌ರ ಓಡಾಟವಿತ್ತು. ಇವತ್ತಿಗೂ ಅವರಿಬ್ಬರೂ ತೆಗೆದ ಚಿತ್ರಗಳು ಅಮೋಘವಾಗಿವೆ. ಕಾಡಿಗೆ ಹೊಕ್ಕ ನಂತರ ಒಬ್ಬ ಫೊಟೋಗ್ರಾಫರ್ ತಂತಾನೆ ಕಲಿಯುವ ಪಾಠವೆಂದರೆ ಏರು ದನಿಯಲ್ಲಿ ಮಾತನಾಡಲೇ ಬಾರದು. ವಿಷಯ ಅದೇನೇ ಇರಲಿ; ಪಿಸುಮಾತಾಡಿಕೊಂಡೇ ಮುನ್ನಡೆಯಬೇಕು. ಹಾಗೆ ವಿಪರೀತವಾದ ಕರ್ಕಶ ಪರಿಸರದಲ್ಲಿ ಫೊಟೋ ತೆಗೆಯಬೇಕಾದ್ದು war photographerನ ಜರೂರತ್ತು. ನನಗೆ ಎರಡೂ ಪರಿಚಯವಿದೆ. ಇಲ್ಲಿ ಬಂಡೀಪುರದಲ್ಲಿ, ನನ್ನ ಜೋಯಿಡಾದಲ್ಲಿ, ಅತ್ತ ಕಾರ್ಗಿಲ್‌ನಲ್ಲಿ, ಅಫಘನಿಸ್ತಾನದಲ್ಲಿ, ಹಿಂಡು ಹಿಂಡು ಸಿಂಹ ಸಿಕ್ಕುವ ಕೀನ್ಯಾದ ಮಸಾಯ್ ಮಾರಾ ಕಾಡುಗಳಲ್ಲಿ ಸಾಕು ಸಾಕಾಗುವಷ್ಟು ಫೊಟೋಗ್ರಫಿ ಮಾಡಿದ್ದೇನೆ. ಈ ವಿಷಯದಲ್ಲಿ ನನಗೆ ಒಂದು ಆಸೆಯಿದೆ. ಹಿಮವಂತ ಇನ್ನೊಂಚೂರು ದೊಡ್ಡವನಾಗಬೇಕು. ಸ್ವಂತವಾಗಿ ಫೊಟೋ ತೆಗೆಯುವಷ್ಟಾಗಬೇಕು. ಆಗ ಹೋಗಬೇಕು ಕೀನ್ಯಾಗೆ ಅವನನ್ನು ಕರೆದುಕೊಂಡು. ಅಷ್ಟು ಸಂಖ್ಯೆಯಲ್ಲಿ, ಆ ವೆರೈಟಿಯ ಪ್ರಾಣಿ-ಪಶುಗಳು ಇನ್ನೆಲ್ಲೆಲ್ಲೂ ಸಿಗಲಾರವು. ಮಸಾಯ್ ಮಾರಾ, ಉಗಾಂಡಾ, ಟಾಂಜೇನಿಯಾ, ಟಿಸಾವೋ ಎಲ್ಲ ಸುತ್ತಿಕೊಂಡು ಬರೋ ಹೊತ್ತಿಗೆ ಒಂದು ತಿಂಗಳಾಗುತ್ತದೇನೋ? Hima will enjoy the trip. ನನ್ನ ಸಂಗತಿ ಬಿಡಿ; ಬೇಟೆಗಾರನೊಬ್ಬ ಮಚಾನು ಕಟ್ಟಿಕೊಂಡು ತನ್ನ ಬೇಟೆಗಾಗಿ ಕೂಡುತ್ತಾನಲ್ಲ? ಹಾಗೆ ಕುಳಿತು ಫೊಟೋ ತೆಗೆದಿದ್ದೇನೆ. ಕೀನ್ಯಾದ ಮಸಾಯ್‌ಮಾರಾದಲ್ಲಿ. one should enjoy such things in the life. ಬಂಡೀಪುರ, ನಾಗರಹೊಳೆ, ದಾಂಡೇಲಿ ಇಲ್ಲೆಲ್ಲ ಚೂರು ಪಾರು ಅವಕಾಶಗಳು ಸಿಗುತ್ತವೆ. ಆದರೆ ಮಸಾಯ್ ಮಾರಾ ಕಾಡೆಂದರೆ, ಅದು wild life ಪಾಲಿನ ಮಹಾಗಂಗೋತ್ರಿ.

ನೋಡಿ, ಮಾತು ಎಲ್ಲಿಗೆ ಹೋಗಿ ಎಲ್ಲಿಗೆ ಬಂತು. ಮಾತು ಆರಂಭವಾಗಿದ್ದು ಕೊತ್ವಾಲ ರಾಮಚಂದ್ರನ ಕಾಲದ ಬಗ್ಗೆ. ಆಗೆಲ್ಲ photo ತೆಗೆಸಿಕೊಳ್ಳೋದು ಕಷ್ಟವಿತ್ತು. ಈ ಕೊತ್ವಾಲ ತನ್ನ ಸುಮಾರು ಹತ್ತು ಹನ್ನೊಂದು ಜನ ಶಿಷ್ಯರಿಗೆ ತಲೆಗೊಂದರಂತೆ ಆಗ ಬಹು ಚರ್ಚಿತವಾದ road king ಮೊಬೈಕ್ ಕೊಡಿಸಿದ್ದ. ಅವುಗಳ ಪೇಮೆಂಟ್ ಕಂತಿನಲ್ಲಿ. ಯಾವನು ಕಟ್ಟಿದನೋ? ಬೆಂಗಳೂರಿನ ಕೋಶೀಸ್ ಹೊಟೇಲ್ ಇದೆಯಲ್ಲ? ಅದರ ಪಕ್ಕದಲ್ಲಿ ಅದ್ಭುತ ರುಚಿಯ ಕುಲ್ಫಿ ಮಾರುತ್ತಾರೆ. ಅದರ ಹಿಂದೆಯೇ ಇನ್ನೂ ರುಚಿಕರವಾದ ಮಾಂಗಾಯ್ ಪಾನ್ ಮಾರುತ್ತಾರೆ. ಅವೆರಡನ್ನೂ ದಾಟಿ ಬಂದರೆ ಬೃಹತ್ ಗಾತ್ರದ ಬೈಕ್ ಷೋರೂಮ್ ಇದೆ. ಹಾಜೀಸ್! ಅದೀಗ ಇದೆಯೋ ಇಲ್ಲವೋ ಕಾಣೆ. ಅಲ್ಲಿ ಇಡೀ ಗ್ಯಾಂಗಿಗೆ ಬೈಕು ಕೊಡಿಸಿ ಒಂದು ಫೊಟೋ ತೆಗೆಸಿಕೊಂಡಿದ್ದನಂತೆ ಕೊತ್ವಾಲ. ಬೆಂಗಳೂರಿನಲ್ಲಿ ರೌಡಿಯಿಜಂಗೆ ಒಂದು ಖದರ್ ತಂದು ಕೊಟ್ಟೋನು ಕಣ್ರೀ ಇವ್ನು... ಕೊತ್ವಾಲ! ಅಂದಿದ್ದರಂತೆ ಲಂಕೇಶ್.

ಸಾಮಾನ್ಯವಾಗಿ ಹೊರ ಪ್ರಪಂಚಕ್ಕೆ ಗೊತ್ತಿರದ ಸಂಗತಿಯೊಂದಿದೆ. ಉದಾಹರಣೆಗೆ ಕೊತ್ವಾಲ ಅಂತಿಟ್ಕೊಳ್ಳಿ. ಅವನು ಇಡೀ ಹಿಂಡು ಕಟ್ಟಿಕೊಂಡು ಹೊರಡುವುದಿಲ್ಲ. ಕೊಂಚ ದಪ್ಪ, ರಫ್ ಆದ ಮುಖ, ಅಜಾನುಬಾಹು ದೇಹ, ಗಡುಸು ಧ್ವನಿ ಮುಂತಾದವಿರೋ ಹುಡುಗರನ್ನು choose ಮಾಡಿಕೊಳ್ತಾನೆ. ಅಂಥವರದೇ ಒಂದು team ಮಾಡಿಕೊಂಡು ಹೊರಡುತ್ತಾನೆ. ಯಾರನ್ನಾದರೂ ಹೆದರಿಸೋದು, ತಿಂಗಳ ವಸೂಲಿಯ amount fix ಮಾಡೋದು ಮುಂತಾದವುಗಳಿಗೆ ಈ teamನೊಂದಿಗೆ ಹೋಗುತ್ತಾನೆ. ಅಸಲಿಗೆ ಆ ಹುಡುಗರು fighterಗಳಲ್ಲ. ಅವರೊಂದಿಗೆ ಸುಮ್ಮನೆ ಓಡಾಡಲು ಚೆಂದ. ಅವರೊಂದಿಗೆ ಹೋಗಿ, ಹೆದರಿಕೆ ಕ್ರಿಯೇಟ್ ಮಾಡುವುದಕ್ಕೆ ಅಂತ ಒಂದು show ಕೊಡೋದು ಸರ್ವೇ ಸಾಮಾನ್ಯ. ಅವರನ್ನು ನಂಬಿಕೊಂಡು ಯಾವತ್ತಿಗೂ fight ಮಾಡೋದಿಲ್ಲ, never! ಅವರ ಕೈಲಿ ಬಡಿದಾಟ ಸಾಧ್ಯವೂ ಇಲ್ಲ. ಆದರೆ ಆ ಹುಡುಗರು ನಿಜಕ್ಕೂ ಚಾಲಾಕು. ಅವರ ಮೇಲೆ ಪೊಲೀಸ್ ಕೇಸುಗಳಿರೋದಿಲ್ಲ. ಕೊತ್ವಾಲನೊಂದಿಗೆ ಗುಂಪಾಗಿ ಹೋದರೆ ಅದು ಎಂಥವರನ್ನೂ ಹೆದರಿಸುತ್ತೆ. ಅದು ಬೇಡವಾಯ್ತಾ: ಪ್ಯಾಂಟು-ಷರಟು ಹಾಕಿಕೊಂಡು ನೀಟಾಗಿ ಹೋದರೆ same ಕಾಲೇಜು ಹುಡುಗರು!

ಆದರೆ ಕೊತ್ವಾಲ ತನ್ನ fightsಗಾಗಿ ಎರಡನೇ team ಹೊರತೆಗೆಯುತ್ತಿದ್ದನಲ್ಲ? ಅದು deadly. ಎದುರಿಗೆ ನಿಲ್ಲಿಸಿಕೊಂಡು ನೋಡಿದರೆ ಅವರು ಮನುಷ್ಯರಂತೆ ಕಾಣುವುದೇ ಇಲ್ಲ. ನಿಜವಾದ muscle power ಅದು. ಅವರಿಗೆ ಹೆದರಿಕೆ ಅಂದರೇನು ಅಂತ ಗೊತ್ತಿರೋದೇ ಇಲ್ಲ. ಅವರು ಸತ್ತರೆ ಸುತ್ತ ಕುಳಿತು ಅಳುವವರೂ ಇರುವುದಿಲ್ಲ. ಅವರು ನಿಜಕ್ಕೂ dangerous. ಅಂಥವರನ್ನೂ ಕೊತ್ವಾಲ ಸಾಕಿಕೊಂಡಿದ್ದ. ಆ ಪೈಕಿ ಒಬ್ಬನನ್ನು ನಾನು ನೋಡಿದ್ದೆ. ‘ಕರ್ಮವೀರ’ದ ಲೇಖನ ಮಾಲಿಕೆ ‘ಪಾಪಿಗಳ ಲೋಕದಲ್ಲಿ’ ಬರೆಯಲಾರಂಭಿಸಿದ ದಿನಗಳಲ್ಲಿ ನಾನು ಚಿಲ್ರೆಪಲ್ರೆಯವರನ್ನು ಹುಡುಕಿಕೊಂಡು ಹೋಗುತ್ತಿರಲಿಲ್ಲ. ಆಗೆಲ್ಲ ಇದ್ದರಲ್ಲ ಶೂರಾಧಿಶೂರರು? ಬಲರಾಮ, ಕಿಟ್ಟಿ, ಕಾಲಾಪಥ್ಥರ್, ರಾಜೇಂದ್ರ, ಪುಷ್ಪ-ಒಬ್ಬರಾ ಇಬ್ಬರಾ? ಅವರು ನನಗಿಂತ ಪಕ್ಕಾ plan ಮಾಡಿ, ನಿರ್ದಿಷ್ಟ ಜಾಗ ಗುರುತಿಸಿ ಅಲ್ಲೇ ಭೇಟಿ ಮಾಡುತ್ತಿದ್ದರು. ಒಬ್ಬ ಜೇಡರಳ್ಳಿ ಕೃಷ್ಣಪ್ಪ ಮಾತ್ರ ವಿಜಯನಗರದ ಪಾರ್ಕ್‌ನಲ್ಲಿ ತನ್ನ ಇಡೀ ಶಿಷ್ಯ ವೃಂದದ ಸಮೇತ ಭೇಟಿಯಾಗಿದ್ದ. ಅವನ ಗುಂಪಿನ dancer ಅವನ ಮಡಿಲಲ್ಲಿ ಕೈ ಬಾಂಬ್ ಸ್ಫೋಟಿಸಿ ಸತ್ತು ಹೋಗಿದ್ದ. ಅವನೊಂದಿಗೆ ಮೊಟ್ಟೆ ಕಣ್ಣ ಎಂಬ ಪರಮ ಕುರೂಪಿ ರೌಡಿಯನ್ನೂ ಭೇಟಿ ಮಾಡಿದ್ದೆ. ಅದು ಬೆಂಗಳೂರಿನ ಹಳೇ ಜೈಲಿನಲ್ಲಿ. ಅಲ್ಲೀಗ freedom park ಇದೆ.

“ಸರ್, ಇವರೆಲ್ಲ ಇವತ್ನಾಳೆಯ ಜನ. ನಿಜವಾದ fighters ಅಂದ್ರೆ ಕೊತ್ವಾಲ್ ಜಮಾನಾದವರು. ನಿಮಗೆ ಅಂಥವರೊಬ್ಬನನ್ನ meet ಮಾಡಿಸ್ತೀನಿ ಇವತ್ತು: ಸಾಯಂಕಾಲ ಬೇಗ free ಆಗಿ ವಿದ್ಯಾಪೀಠ ಸರ್ಕಲ್‌ಗೆ ಬಂದು ಬಿಡಿ" ಅಂದಿದ್ದ ಒಬ್ಬ ಹುಡುಗ. ಅವತ್ತಿಗಾಗಲೇ ಕೊತ್ವಾಲ ಸತ್ತು ಹೋಗಿದ್ದ. ಆಗ ವಿದ್ಯಾಪೀಠದ ಎದುರು, ಒಂದು ಸರ್ಕಾರಿ ಹಾಸ್ಟೆಲ್ ಇತ್ತು. ಅವನು ಆ ಹಾಸ್ಟೆಲಿನಲ್ಲಿ ಅದ್ಯಾವ ಕಾಲದಿಂದ ಇರುತ್ತಿದ್ದನೋ, ಗೊತ್ತಿಲ್ಲ. ಆಗೆಲ್ಲ ರೌಡಿಗಳಿಗೆ ಹಾಸ್ಟೆಲ್‌ಗಳೇ ಆಶ್ರಯ ತಾಣಗಳು. ಅತ್ತ cityಯಲ್ಲಿ ಕೊತ್ವಾಲನ teamಗೆ ‘ಜನರಲ್ ಹಾಸ್ಟೆಲ್’ನ ರೂಮ್ ನಂಬರ್ 108 ಸದಾ ಆಶ್ರಯ ತಾಣವಾಗಿತ್ತು. ಸ್ವತಃ ಕೊತ್ವಾಲನೇ ಅಲ್ಲಿ ಅಡ್ಡೆ ಹಾಕುತ್ತಿದ್ದ. ಅವನಿಗೆ ಹೆಂಗಸರ ಚಟ ಇತ್ತಾದರೂ ಹಾಸ್ಟೆಲಿನ ತನಕ ಅದನ್ನು ಎಳೆ ತರುತ್ತಿರಲಿಲ್ಲ. ಈ ಖರಾಬ್ ಮುಖದ ಫೈಟಿಂಗ್ ಟೀಮ್‌ನವರನ್ನೂ ಕರೆ ತರುತ್ತಿರಲಿಲ್ಲ. ಇವರದೇನಿದ್ದರೂ ಬೆಂಗಳೂರಿನಾದ್ಯಂತ ಇದ್ದ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ವಾಸ. ಅಲ್ಲೇ ಊಟ, ನಿದ್ದೆ.

“ಸರ್, ನಿಮಗಿವತ್ತು ಪಚ್ಕಾರಿ ಶೇಖರ ಸಿಕ್ತಾನೆ. ವಿಚಿತ್ರ ಗಿರಾಕಿ. ಅದೇನು ಹೇಳ್ತಾನೋ? ಅದೇನು ಬಿಡ್ತಾನೋ? ನಿಮಗೆ ಅದೇನು matter ಸಿಗುತ್ತೋ ಗೊತ್ತಿಲ್ಲ: ಅವನನ್ನು ಕಂಡು ಸುಮ್ನೆ ಮಾತಾದ್ರೂ ಆಡಿಸಿ ಅಂದಿದ್ದ. ಪಚ್ಕಾರಿ ಎಂಬುದು ತಮಿಳು ಶಬ್ದ. ಅದಕ್ಕೆ ಏನು ಅರ್ಥ, ಗೊತ್ತಿರಲಿಲ್ಲ. ಆದರೆ ಹಾಸ್ಟೆಲಿನಲ್ಲಿ ಅವನನ್ನು ಮುಖಾಮುಖಿ ನೋಡಿದ ತಕ್ಷಣ ಗೊತ್ತಾಯ್ತು... ಇವನು ಪಚ್ಕಾರಿ! ಅಂದರೆ... ಹಸೀ ಮಾಂಸ ತಿನ್ನೋನು.

ನೀವು ನಂಬ್ತೀರೋ ಇಲ್ವೋ, ಒಂದು ದಪ್ಪನೆಯ ಸಿಮೆಂಟ್ ಬ್ಲಾಕ್‌ನಂತಿತ್ತು ಅವನ ದೇಹ. ಕಾಲುಗಳಂತೂ ಕಂಬವೇ ಕಂಬ. ಅವನು ಶತದಡ್ಡ. ದೇಹ flexible ಅಲ್ಲ. ಅವಶ್ಯಕವಾದ reflexes ಇರಲಿಲ್ಲ. “ನೀವೆಲ್ಲಾ ಅಂತೀರಿ, ಕೊತ್ವಾಲನ್ನ ಕೊಲೆ ಮಾಡಿದಾರೆ ಅಂತ. ಆದರೆ ಯಾರು ಸಾರ್ ಮಾಡೋರು? ಒಬ್ರೊಬ್ರೇ ಸಿಕ್ಕಿದರೆ ಇದೇ ಶ್ರೀಧರು, ಬಚ್ಚನ್ನು ಇವರ‍್ನೆಲ್ಲ ಎಡಗೈಲಿ ಕೋಳೀನ ಮುರಧಂಗೆ ಮುರಿದು ಬಿಡ್ತಿದ್ರು" ಅಂದಿದ್ದ. ಅಷ್ಟೇ ಅವನ interview. ಬೇರೆ ಮಾತಾಡಲಿಕ್ಕೆ ಅವನಿಗೆ ಗೊತ್ತಿರಲಿಲ್ಲ. ಅಸಲಿಗೆ ಬೇರೆ ಮಾತು ಅಂತ ಏನೂ ಇರಲಿಲ್ಲ. ನಾನು ತೀರ ಎದ್ದು ಹೊರಡುವಾಗ “ಏನಾದ್ರೂ ಕೊಡಿ... ಇಂಟರ್‌ವ್ಯೂ ದುಡ್ಡು" ಅಂದ ಶೇಖರ. ಕೊಂಚ ಹಣ ಕೊಟ್ಟೆ.

ಈ ಪಚ್ಕಾರಿ ಶೇಖರನಿಗಿಂತ ಸಾಕಷ್ಟು better ಎಂಬಂತಿದ್ದವನು ಅದೇ ತ್ಯಾಗರಾಜ ನಗರ, ಬ್ಯೂಗಲ್ ರಾಕ್ ಏರಿಯಾಗಳನ್ನು ಆಳುತ್ತಿದ್ದ ಎಂ.ಸಿ. ಪ್ರಕಾಶ. ಮಂಡ್ಯದ ಚೌಡಯ್ಯನ ಮಗ ಪ್ರಕಾಶ್ ಅನ್ನೋದು ಸರಿಯಾ? ಅವನೇ ಬದುಕಿದ್ದರೆ ಹೇಳಬಹುದಿತ್ತು. ಪ್ರಕಾಶ ತನ್ನ ತಾಯಿಯ ಹೊಟ್ಟೆಯಲ್ಲಿ ಒಂದು ಹುಳುವಿನಂತೆ ಹುಟ್ಟಿದ್ದ. He was very cruel. ಆ ಬ್ಯೂಗಲ್ ರಾಕ್‌ನ ಕತ್ತಲಿನಲ್ಲಿ ಪ್ರೇಮಿಗಳು ಸಿಕ್ಕರೆ ಸಾಕು: ಹುಡುಗನಿಗೆ ನೆಲಕ್ಕೆ ಬೀಳುವಂತೆ ಡಿಚ್ಚಿ! ಬಂಡೆ ಪಕ್ಕಕ್ಕೆ ಹುಡುಗಿಯನ್ನು ಎಳೆದುಕೊಂಡು ಹೋದರೆ ಅವಳ ದೇಹ ಬಿರುಗಾಳಿಗೆ ಸಿಕ್ಕ ಎಳೆಯದಾದ ಬಾಳೆ ಎಲೆ. ಅದೊಂದು ದಿನ ಪ್ರಕಾಶನ ತಂಗಿ ಅದೇ ಏರಿಯಾದ ಚಿಲ್ಟು ರೌಡಿ ಆನೆರಾಜನನ್ನೋ, ಮತ್ಯಾವನನ್ನೋ ಕರೆದುಕೊಂಡು ಸಿನೆಮಾಕ್ಕೆ ಹೋಗಿದ್ದಳು: ಅಷ್ಟೆ. ಪ್ರಕಾಶ ಅವಳಿಗೋಸ್ಕರ ಮನೆಯ ಬಾಗಿಲಲ್ಲೇ ಕಾಯುತ್ತಿದ್ದ. ಒಳಗೆ ಕರೆದೊಯ್ದು ಕೋಣೆಯಲ್ಲಿ ಅವಳಿಂದಲೇ ಪೂರ್ತಿ ಬಟ್ಟೆ ಬಿಚ್ಚಿಸಿದ. ತತ್ತರಿಸುತ್ತಿದ್ದ ಹುಡುಗಿಯ ನಗ್ನ ದೇಹವನ್ನೇ ನೋಡುತ್ತಾ ಕುಳಿತವನು ಇಡೀ ಒಂದು ಕಟ್ಟು ಬೀಡಿ ಸೇದಿ ಮುಗಿಸಿದ. “ಗೊತ್ತಾಯ್ತಲ್ಲ? ನಿನ್ನಮ್ಮನ್... ಇನ್ನೊಂದ್ಸಲ ಟಾಕೀಸಲ್ಲಿ ಕಾಣಿಸಿಕೊಂಡ್ರೆ next ಏನಾಗುತ್ತೆ ಅಂತ ಗೊತ್ತು ತಾನೆ? ಬಟ್ಟೆ ಹಾಕ್ಕೊಂಡು ನಡಿ ಹೊರಗಡೀಕೆ!" ಅಂದಿದ್ದ.

ಅಷ್ಟೇಕೆ, ಅವನು ತಾಯಿಯನ್ನೂ care ಮಾಡುತ್ತಿರಲಿಲ್ಲ. “ನಿನ್ನಮ್ಮನ್, ಹೊರಗಡೇಕೆ ಹೋಗಿ ಬರ‍್ತೀನಿ. ಬರೋ ಹೊತ್ತಿಗೆ ಮಲ್ಲಿಗೆ ಹೂವು ಮುಡ್ಕೊಂಡು ರೆಡಿಯಾಗಿರು... ನಿನ್ನಮ್ಮನ್!" ಅನ್ನುತ್ತಿದ್ದ. ಅವನ ಜೀನ್ ಪೂಲ್ (ವಂಶವಾಹಿ) ಎಷ್ಟು ಕೆಟ್ಟದಿತ್ತೋ ಕಾಣೆ. ಅವನೊಂದು ಕೆಟ್ಟ ಹುಳುವಿನಂತೆ ಹುಟ್ಟಿದ್ದ. ಅವನಿಗೆ ಘನವಾದ್ದೇನೋ gang ಅಂತ ಇರಲಿಲ್ಲ. Fighters ಅವನಿಗೆ ಬೇಕಾಗಿಯೂ ಇರಲಿಲ್ಲ. ಅವನಿಗಿಂತ fighter ಯಾರು ಬೇಕು? ಆದರೂ ಅವನದೊಂದು ಚಿಕ್ಕ ಗ್ರೂಪ್ ಇತ್ತು: ಬರೀ ಪೊರ್ಕಿಗಳ ಗುಂಪು. ಶುದ್ಧ ಸೈಕೋಪಾತ್ ಸೃಷ್ಟಿಯಾದ ಎಂ.ಸಿ. ಪ್ರಕಾಶ ತನ್ನ ಹುಡುಗರಿಗೆ “ಒಂದು ಕೇರಂ ಬೋರ್ಡು ಕೊಡಿಸು" ಅಂತ ಕೊತ್ವಾಲನನ್ನು ಕೇಳಿದ್ದ. ಅದನ್ನು ಕೊಡಿಸಿ ಬಿಟ್ಟಿದ್ದಿದ್ದರೆ ಕೊತ್ವಾಲನ ಆ ಏರಿಯಾದ ಖದರು ಇನ್ನೂ ಭಾರೀ ಇರುತ್ತಿತ್ತು. ಕೇರಂ setಗೆ ಆಗೇನೂ ಮಹಾ ದೊಡ್ಡ ಖರ್ಚಿರಲಿಲ್ಲ. ಆದರೂ ಕೊಡಿಸಲಿಲ್ಲವಲ್ಲಾ ಎಂಬ ಮುನಿಸು ಪ್ರಕಾಶನಿಗಿತ್ತು. ಅವನ ಬಣ್ಣ ಬಿಡಿ: ಅದು ಅಚ್ಚಗಪ್ಪು. ಕೆಳ ತುಟಿ ಒಂಥರಾ ಬಾಯಿಂದ ಪೂರ್ತಿ ಹೊರಬಂದು ಅಸಹ್ಯಕರವಾಗಿ ಮಡಚಿಕೊಂಡಿತ್ತು. ಅವನಿಗೆ ತನ್ನ ಹಸುಗಳ ಬಗ್ಗೆ ಅಪಾರ ಪ್ರೀತಿ. ಬೆಳಗಿನ ಜಾವ ಹಾಲು ಹಿಂಡಿ ಕ್ಯಾನ್‌ಗಳನ್ನು ಸೈಕಲ್ಲಿಗೆ ನೇತು ಹಾಕಿಕೊಳ್ಳುತ್ತಿದ್ದ. “ಇದು ನನ್ನ ವಾಹನ! ಇದೇ ನನ್ನ ವಾಹನ... ಇದು ಬಬ್ರುವಾಹನ!" ಅನ್ನುತ್ತಿದ್ದ. ಆ ಪರಿ ಮೆರೆದಾಡಿದವನು ಬರೀ ಮೀಸೆ ಬಾರದ ಚಿಕ್ಕ ಹುಡುಗರ ಕೈಯಲ್ಲಿ ಬರ್ಬರವಾಗಿ ಕೊಲೆಯಾಗಿ ಹೋದ. ಅವತ್ತು ಎಂ.ಸಿ. ಪ್ರಕಾಶನ ತಂಗಿ ಬೀದಿಯವರಿಗೆಲ್ಲ ಹಾಲು ಹಂಚಿ ಸಂಭ್ರಮಿಸಿದಳಂತೆ!

ಭೂಗತ ಲೋಕದ ಈ ರಕ್ತಸಿಕ್ತ ಕಥೆಗಳನ್ನೆಲ್ಲ ಕೇಳುತ್ತಿದ್ದೆ. ಬರೆದುಕೊಳ್ಳುತ್ತಿದ್ದೆ. ರಾತ್ರಿ ಯಾವುದೋ ಹೊತ್ತಿನಲ್ಲಿ ಬೈಕ್ ಹತ್ತಿ ನನ್ನ ಚಿಕ್ಕ ಮನೆಗೆ ಸೇರಿಕೊಳ್ಳುತ್ತಿದ್ದೆ. ಚಿಕ್ಕದಾದ ಆ ಮನೆಗೆ ಅದೊಂದು ಬೆಳಿಗ್ಗೆ ಒಬ್ಬ ಭೂಗತ ಜೀವಿ ಬಂದು ಕುಳಿತ. “ನಮ್ ಏರಿಯಾದಲ್ಲಿ ಒಂದು ಮರ್ಡರ್ ಆಗೈತೆ! ಮಾಡಿದ್ದು ನಾನು ಮತ್ತು ನನ್ನ ಹುಡುಗ ಕಾಳ. ಪೊಲೀಸರ ಹತ್ರ ನೀವೇ ಮಾತಾಡಬೇಕು... ಅಷ್ಟೇ ಸರ್!" ಅಂದ. ಅವನಿಗೆ ಕಾಫಿ ತಂದು ಕೊಟ್ಟಿದ್ದು ನನ್ನ ಚಿಕ್ಕ ಮಗಳು ಭಾವನಾ. ಕಾಫಿ ಕೊಟ್ಟು, ಅವನನ್ನೇ ದಿಟ್ಟಿಸಿ ನೋಡಿದವಳು ಇದ್ದಕ್ಕಿದ್ದಂತೆ ಅವನನ್ನು “hat man!" ಅಂದು ಒಳಕ್ಕೆ ಹೊರಟು ಹೋದಳು. ಸಂಕೋಚವೆನ್ನಿಸಿತೇನೋ, ಬೆಕ್ಕಿನ ಕಣ್ಣು ರಾಜೇಂದ್ರ hat ತೆಗೆದ.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 May, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books