Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಕಚೇರಿಯಲ್ಲಿ ಆತ ಮುಕುಟವಿಲ್ಲದ ಮಹಾರಾಜನಂತೆ ಕುಳಿತಿದ್ದ!

ಕೆಲವು ಘಳಿಗೆಗಳಿರುತ್ತವೆ. ಅವು ಮಾಡುವಂಥ ಉಪಕಾರವನ್ನು ಮತ್ಯಾವುದೂ ಮಾಡುವುದಿಲ್ಲ. ಅಂಥ ಘಳಿಗೆಯಲ್ಲಿ ಆರಂಭಗೊಂಡದ್ದೇ ನನ್ನ ಭೂಗತ ಲೋಕದ ದಿವ್ಯಯಾತ್ರೆ. ಅದು ಕೇವಲ ನೆಪ. ‘ಹಾಯ್ ಬೆಂಗಳೂರ್!’ ಎಂಬ ಅಕ್ಷಯ ಪಾತ್ರೆ ನನ್ನ ಕೈಗೆ ಬಂದದ್ದು ಆ ಲೋಕದ ಅಕ್ಕ-ಪಕ್ಕದಿಂದಲೇ. ಒಂದು ಸಂಗತಿ ನನಗೆ ಚೆನ್ನಾಗಿ ನೆನಪಿದೆ. ‘ಹಾಯ್ ಬೆಂಗಳೂರ್!’ ತನ್ನ ಒಂದು ವರ್ಷ ಮುಗಿಸಿ ಅವತ್ತು ಹುಟ್ಟು ಹಬ್ಬ ಮಾಡಿಕೊಳ್ಳುತ್ತಿತ್ತು. ಟೌನ್‌ಹಾಲ್‌ನಲ್ಲಿ ಸಭೆ. ಕೊಂಚ ಮುಂಚೆ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಕಾರ್ಯಕ್ರಮ. ಅತಿಥಿಗಳ ಪೈಕಿ ನಾನಿದ್ದೆ. ಪಕ್ಕದಲ್ಲೇ ಬಿ.ವಿ.ವೈಕುಂಠರಾಜು ಕುಳಿತಿದ್ದರು. “ಈ ರವಿ ಬೆಳಗೆರೆ ಪತ್ರಿಕೋದ್ಯಮದ ಭಾಷೆಯ ದಿಕ್ಕನ್ನೇ ಬದಲಾಯಿಸಿ ಬಿಟ್ಟಿದ್ದಾನೆ ಕಣ್ರೀ. ಇವನು ರೌಡಿಗಳನ್ನು ವಿಪರೀತ ವೈಭವೀಕರಿಸಿ ಬರೀತಾನೆ" ಅಂದು ಬಿಟ್ಟರು ವೈಕುಂಠರಾಜು. I got annoyed. ತಕ್ಷಣ ಎದ್ದು ಮೈಕ್ ಕೈಲಿ ಹಿಡಿದು,

“ವೈಕುಂಠರಾಜು ಅವರೇ, ನೀವು ರಾಮಕೃಷ್ಣ ಹೆಗಡೆಯಿಂದ ಶುರುಮಾಡಿ ದೇವೆಗೌಡರ ತನಕ ರಾಜಕಾರಣಿಗಳ ಪಾದ ನೆಕ್ತೀರಲ್ಲ? ನೀವು ಅದನ್ನ ಬಿಡಿ; ನಾನು ಇದನ್ನ ಬಿಡ್ತೀನಿ" ಅಂದುಬಿಟ್ಟೆ. ಅನೇಕರಿಗೆ ಗೊತ್ತಿರಲಿಕ್ಕಿಲ್ಲ; ನಾನು ಮತ್ತು ವೈಕುಂಠರಾಜು ಒಂದೇ ಜಿಲ್ಲೆಯವರು.

ಅದಿರಲಿ, ಈ ಬಾರಿ ‘ಖಾಸ್‌ಬಾತ್’ನಲ್ಲಿ ಪಾಪಿಗಳ ಲೋಕ ಆರಂಭಗೊಂಡ ಬಗ್ಗೆ ಕೊಂಚ ಬರೆದಿದ್ದೇನೆ. ಅದನ್ನು ಮುಂದುವರೆಸುತ್ತೇನೆ. ಅದು ಒಂದು ಪಟ್ಟಿಗೆ ಮುಗಿಯುವಂಥದ್ದಲ್ಲ. ನಿಮ್ಮ ಸ್ವಾಗತವಿರಲಿ.

-ಆರ್.ಬಿ.

ಅದು ಹೊಸ ಪ್ರಪಂಚ.

ಬಂದ ಕೂಡಲೆ ನನಗೆ ಯಾವ ಸುಡುಗಾಡೂ ಸಿಕ್ಕಿರಲಿಲ್ಲ. ಯಥಾಪ್ರಕಾರ ಬಸ್‌ಸ್ಟ್ಯಾಂಡಿನಲ್ಲಿ ಮಲಗಿ, ರಸ್ತೆ ಪಕ್ಕದ ನಲ್ಲಿಯಲ್ಲಿ ಹುಲ್ಲುಜ್ಜಿ, ಮುಖ ತೊಳೆಯುತ್ತಿದ್ದೆ. ಆದರೆ ದಿನಗಳು ಹಾಗೇ ಇರುವುದಿಲ್ಲ ನೋಡಿ? ಒಂದು ಸ್ಥಾನಮಾನ ಅಂತ ನನಗೂ ಸಿಕ್ಕಿತ್ತು. ಅವತ್ತಿಗೆ ಟಿ.ವೆಂಕಟೇಶ್ ಅವರು ‘ಅಭಿಮಾನ’ ಅಂತೊಂದು ದಿನಪತ್ರಿಕೆ ಆರಂಭಿಸಿದ್ದರು. ನನ್ನ ಪಾಲಿಗೆ ನಾನು ಮ್ಯಾಗಝೀನ್‌ಗಳನ್ನು ನೋಡಿಕೊಳ್ಳುತ್ತಿದ್ದೆನಾದರೂ ಆಫೀಸಿಗೆ ಬಂದು ಹೋಗೋರ ದೃಷ್ಟಿಯಲ್ಲಿ ‘ರವಿ ಬೆಳಗೆರೆ’ ಆಗಿದ್ದೆ. ಕೆಲವೇ ಕೆಲವು ದಿನ ಸಂಯುಕ್ತ ಕರ್ನಾಟಕದಲ್ಲಿ, ಮುಂದೆ ಕನ್ನಡಪ್ರಭದಲ್ಲಿ ದಿನಪತ್ರಿಕೆಯ ವಿಭಾಗದಲ್ಲಿ ಕೆಲಸ ಮಾಡಿದೆನಾದರೂ ನನ್ನ ಜಾಯಮಾನಕ್ಕೆ ಆ ಕೆಲಸ ಒಗ್ಗಲಿಲ್ಲ. ಶಾಮರಾಯರಿಗೆ ನಾನು ಕಾಲಿಗೆ ಬೀಳೋದೊಂದು ಬಾಕಿ: “ನನ್ನನ್ನು ಮ್ಯಾಗಝೀನ್ ಸೆಕ್ಷನ್ನಿಗೆ ಹಾಕಿ" ಅಂತ ಕೇಳಿ ಕೇಳಿ ಹೈರಾಣಾಗಿದ್ದೆ. ಅವರಾದರೂ ಬಹಳ ಕಾಡಲಿಲ್ಲ. ಆ ವಿಭಾಗಕ್ಕೆ ಹಾಕಿದರು.

ಆದರೆ ಅಭಿಮಾನಿ ಪ್ರಕಾಶನದಲ್ಲಿ ನಾನು ಇದ್ದದ್ದೇ ಮ್ಯಾಗಝೀನ್ ಸೆಕ್ಷನ್‌ನಲ್ಲಿ, ಅಲ್ಲಿಗೆ ಅನೇಕರು ಬಂದು ಹೋಗಿ ಮಾಡುತ್ತಿದ್ದರು. ಹಾಗೆ ಬಂದವರ ಪೈಕಿ ಒಬ್ಬಾತ ರವಿ ಅಂತ ಇದ್ದ. “ಸರ್, ನಮ್ಮ ಫ್ರೆಂಡ್ ಒಬ್ನಿದಾನೆ. ಚುರುಕಾಗಿದ್ದಾನೆ. ಅವನಿಗೆ ಬರೆಯೋದೂ ಗೊತ್ತು. ನೀವೊಂದು ಮಾತು ಹೇಳಿ ಒಂದ್ ಕೆಲಸ ಕೊಡಿಸಿಬಿಡಿ ಸರ್" ಅಂದ. ಆ ಹುಡುಗನೂ ಮರುದಿನ ಬಂದ. ವೆಂಕಟೇಶ್ ಅವರಿಗೆ ಹೇಳಿ ಕೆಲಸವನ್ನೂ ಕೊಡಿಸಿದೆ. ಹುಡುಗ ಚುರುಕಾಗಿದ್ದ. ಸಂಜೆಯ ‘ಕಂಪೆನಿ’ಗೆ ಒದಗೋದೂ ಅವನಿಗೆ ಗೊತ್ತಿತ್ತು. ದಿನಪತ್ರಿಕೆ ಕೆಲಸಕ್ಕಿಂತ ಅವನು ನನ್ನ ಜೊತೆಯಲ್ಲೇ ಇರಲಿ ಅನ್ನಿಸಿತು. ‘ಆಯ್ತು, ನೀವೇ ಜೊತೇಲಿಟ್ಕೊಳ್ಳಿ’ ಅಂದಿದ್ದರು ವೆಂಕಟೇಶ್. ಅವನನ್ನು ಅಲ್ಲಿಲ್ಲಿ ವರದಿ ಮಾಡಲು ಕಳಿಸಿದೆ. He was good with it. ಉಳಿದದ್ದೆಲ್ಲಕ್ಕಿಂತ ಅವನು ಬೆಂಗಳೂರಿನ ಅಂಡರ್‌ವರ್ಲ್ಡ್ ಬಗ್ಗೆ ಆಡುತ್ತಿದ್ದ ಮಾತು ನನ್ನನ್ನು attract ಮಾಡುತ್ತಿದ್ದವು. He was well informed. ಅವನಿಗೊಂದಷ್ಟು ಭೂಗತ ಜೀವಿಗಳ ಪರಿಚಯವೂ ಇತ್ತು. “ಅಂಡರ್‌ವರ್ಲ್ಡ್ ಬಗ್ಗೆ ಇಷ್ಟೆಲ್ಲ ಮಾತಾಡ್ತೀರಲ್ಲ? ಅದಕ್ಕೆ ಸಂಬಂಧ ಪಟ್ಟ ಹಾಗೆ ಏನಾದ್ರೂ ಬರೀಬಾರದೇನ್ರೀ" ಅಂದೆ. ಅವನು ಒಂದು ಸಾಲೂ ಬರೆಯಲಿಲ್ಲ. ಅಷ್ಟರಲ್ಲಿ ನಾನು ‘ಸಂಯುಕ್ತ ಕರ್ನಾಟಕ’ದ ನೌಕರಿ ಸಿಕ್ಕು ಹುಬ್ಬಳ್ಳಿಗೆ ಹೋಗಿಯೇ ಬಿಟ್ಟೆ. ತಮಾಷೆಯೆಂದರೆ ಆ ಹುಡುಗ ಅದೊಂದು ದಿನ ಹುಬ್ಬಳ್ಳಿಗೆ ಬಂದು ಬಿಟ್ಟ ಹುಡುಕಿಕೊಂಡು. “ಈಗ್ಲಾದ್ರೂ ಅಂಡರ್‌ವರ್ಲ್ಡ್ ಬಗ್ಗೆ ಬರೀಬಾರದೇನ್ರೀ...?" ಅಂದೆ. ಹೋದ ತಕ್ಷಣ ಬರೆದು ಕಳಿಸ್ತೀನಿ ಅಂದವನು ಅಲ್ಲೇ ಬಾಕಿ!

ಇದೆಲ್ಲಕ್ಕೂ ಮುಂಚೆ ಒಂದು ಘಟನೆ ನಡೆದಿತ್ತು. ಬಳ್ಳಾರಿಯಲ್ಲಿದ್ದಾಗ ನಾನು ‘ಕ್ರೈಮ್ ಸಮಾಚಾರ’ ಅಂತೊಂದು ಪಾಕ್ಷಿಕ ಪತ್ರಿಕೆ ನಡೆಸುತ್ತಿದ್ದೆ. ಸಾಕಷ್ಟು ಚೆನ್ನಾಗಿಯೂ ಅದು ನಡೆಯುತ್ತಿತ್ತು. ಅದನ್ನು ರೆಡಿ ಮಾಡಿಕೊಂಡು ಬೆಂಗಳೂರಿಗೇ ಬಂದು ಇಲ್ಲಿ ಪ್ರಿಂಟ್ ಮಾಡಿಸಿ, ಇಲ್ಲಿಂದಲೇ distribute ಮಾಡುತ್ತಿದ್ದೆ. ಆಗ ಬಳ್ಳಾರಿಯ ಹತ್ತಿರದ ಕಲ್ಲುಕಂಬ ಎಂಬಲ್ಲಿದ್ದ ಆಪ್ತ ಗೆಳೆಯ ಪಂಪಾಪತಿ ತುಂಬ ಸಹಾಯ ಮಾಡುತ್ತಿದ್ದ. ಒಮ್ಮೆ ಪ್ರಿಂಟಿಂಗಿಗಾಗಿ ಬೆಂಗಳೂರಿಗೆ ಬಂದವನು ಕೈ ಬೀಸುತ್ತಾ ಗಾಂಧಿನಗರದಲ್ಲಿ ಹೋಗುತ್ತಿದ್ದೆ. ರಸ್ತೆಯಲ್ಲಿ ಆಗ ಇದ್ದಕ್ಕಿದ್ದಂತೆ ಸಿಕ್ಕವನು ಬಹುಪುರಾತನ ಗೆಳೆಯ ಸಚಿವ ಶ್ರೀಧರ! ನಾವು ತುಂಬ ಹಿಂದೆ ಎಸ್.ವಿ.ಜಯಶೀಲರಾವ್ ನೇತೃತ್ವದ ‘ಮುಂಜಾನೆ’ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆವು. “ಇದೇನ್ರೀ ರವೀ, ಬೆಂಗಳೂರಿಗೆ ಯಾವಾಗ ಬಂದ್ರಿ. ಬರೋದು ಬಂದಿದೀರಿ, ಆಫೀಸಿಗೆ ಬನ್ನಿ. ನಮ್ಮ ಬಾಸ್ ಕೂಡ ಇವತ್ತು ಆರಾಮಾಗಿ ಕೂತಿದಾರೆ" ಅಂದವನೇ ಅಲ್ಲೊಂದು ಆಫೀಸಿನೊಳಕ್ಕೆ ಕರೆದುಕೊಂಡು ಹೋಗಿಬಿಟ್ಟ. ಸಚಿವ ಶ್ರೀಧರ್ ಹಾಗೆ ಕರೆದೊಯ್ಯುವ ಮುನ್ನ ತನ್ನ boss ಯಾರು ಅಂತ ಹೇಳಿಯೂ ಇರಲಿಲ್ಲ. ಒಳಕ್ಕೆ ಹೋಗಿ ನೋಡ್ತಿನೀ... ಆ ವಿಗ್ರಹ! ಅದು ಬೃಹತ್ತಾದ ಕುರ್ಚಿಯೊಂದರ ಮೇಲೆ ಕುಳಿತಿತ್ತು. ಸಚಿವ ಶ್ರೀಧರ ಪರಿಚಯವನ್ನೇನೋ ಮಾಡಿಸಿದ. ಆ ವಿಗ್ರಹ ನನ್ನ ಹೆಸರನ್ನು ಕಿವಿಗೆ ಹಾಕಿಕೊಳ್ಳಲೂ ಇಲ್ಲ. ಗಮನವಿಟ್ಟು ನೋಡ ಕೂಡ ನೋಡಲಿಲ್ಲ. ಬೆಂಗಳೂರು ಭೂಗತ ಲೋಕದಲ್ಲಿ ನಾನು ಮೊಟ್ಟ ಮೊದಲನೆಯದಾಗಿ ನೋಡಿದ grand figure ಅದು. ಆ ವಿಗ್ರಹದ ಹೆಸರು.

ಎಂ.ಪಿ. ಜಯರಾಜ್!

ಆತ ನಿಜಕ್ಕೂ ಆಜಾನುಬಾಹು. ಜೊತೆಗೆ ತುಂಬ ಸುಂದರವಾಗಿದ್ದ ಮನುಷ್ಯ. ಅವತ್ತಿಗಾಗಲೇ ಕೊತ್ವಾಲ್ ರಾಮಚಂದ್ರ ಕೊಲೆಯಾಗಿದ್ದ. Mostly, ಬೂಟ್‌ಹೌಸ್ ಕುಮಾರ ಕೂಡ ಕೊಲೆಯಾಗಿದ್ದ. ಇಲ್ಲ: ಅವನಿನ್ನೂ ಸತ್ತಿರಲಿಲ್ಲ. ಅವನ ಪ್ರತಾಪ ಮಾತ್ರ ಮುಗಿದು ಹೋಗಿತ್ತು. ನಾನು ಜಯರಾಜ್‌ಗೂ, ಗೆಳೆಯನಾದ ಸಚಿವ ಶ್ರೀಧರನಿಗೂ ಒಂದೇ ಕೈಯಲ್ಲಿ ‘ಬರ‍್ತೀನಿ’ ಅಂದು ‘ಗರೀಬಿ ಹಠಾವೋ’ ಪತ್ರಿಕಾ ಕಚೇರಿಯ ಮೆಟ್ಟಿಲಿಳಿದು ಬಂದುಬಿಟ್ಟೆ. ಅದಾದ ಮೇಲೆ ಒಂದೆರಡು ಸಲ ಸಚಿವ ಶ್ರೀಧರ್ ಸಿಕ್ಕಿದ್ದ. ಅವನ ಸೋದರ ಮೋಹನ್‌ರಾಮ್ ನನ್ನ ಗೆಳೆಯರು. ಅವರ ವ್ಯಕ್ತಿತ್ವಕ್ಕೂ, ಸಚಿವ ಶ್ರೀಧರ್‌ನ ವ್ಯಕ್ತಿತ್ವಕ್ಕೂ ಸುತರಾಂ ಹೋಲಿಕೆ ಇರಲಿಲ್ಲ. ಅವರಿಬ್ಬರೂ ಖಾಸಾ ಸೋದರರು.

ನಿಜ ಹೇಳಬೇಕೆಂದರೆ, ನನ್ನನ್ನು ರೌಡಿಗಳಾಗಲೀ, ಬೇರೆ ಪಾತಕಿಗಳಾಗಲೀ ಹೆದರಿಕೆ ಹುಟ್ಟುವಂತೆ ಮಾಡುವುದಿಲ್ಲ. I am not scared. ಬಳ್ಳಾರಿಯಲ್ಲಿ ಅಥವಾ ಭೀಮಾತೀರದಲ್ಲಿ ನಾನು ನೋಡಿದ ಪಾತಕಿಗಳು ಕೊಂಚ serious ಅನ್ನಿಸಿದ್ದರು. ಅವರಿಗೆ ಹೋಲಿಸಿದರೆ ಈ ರೌಡಿಗಳು ಚೂರೂ ಹೆದರಿಕೆ ಹುಟ್ಟಿಸಲಿಲ್ಲ ನನ್ನಲ್ಲಿ. ಅದಿರಲಿ, ಸಚಿವ ಶ್ರೀಧರ್ ಮೂಲಕ ನಾನು ನೋಡಿದ ದೈತ್ಯ ದೇಹಿ ಜಯರಾಜ್, ಕೆಲವು ದಿನಗಳಲ್ಲೇ ಈ ಲಾಲ್‌ಬಾಗ್ ಪಕ್ಕದ ರಸ್ತೆಯಲ್ಲಿ ಮುತ್ತಪ್ಪ ರೈ ಕೈಗೆ ಸಿಕ್ಕು ನಿಕಾಲಿಯಾಗಿ ಹೋದ. ಅವತ್ತು ತೀರ ಕಾಕತಾಳೀಯವೆಂಬಂತೆ ನಾನು ಬೆಂಗಳೂರಿನಲ್ಲಿದ್ದೆ. ಆಗ ನನಗೆ ಮುತ್ತಪ್ಪ ರೈ ಕೂಡ ಅಪರಿಚಿತ. ನಾನು ರೈ ಹೆಸರನ್ನೂ ಕೇಳಿರಲಿಲ್ಲ. ಅವತ್ತು ‘ಸಂಜೆವಾಣಿ’ ಪತ್ರಿಕೆ ಅದ್ಭುತವಾಗಿ ಮಾರಾಟವಾಗುತ್ತಿತ್ತು. ನಾನು ಮೆಜೆಸ್ಟಿಕ್ ಬಳಿಯ wine shopನಲ್ಲಿ ಎರಡು ಕ್ವಾರ್ಟರ್ ಕುಡಿದು ಬಳ್ಳಾರಿಗೆ ಬಸ್ಸು ಹತ್ತಿದ್ದೆ.

ಮುಂದೆ ಅದೆಷ್ಟೋ ಜನರ ಬಾಯಲ್ಲಿ ನಾನು ಜಯರಾಜ್ ಬಗ್ಗೆ

ಕೇಳಿದ್ದೇನೆ. ಕೆಲವರು ಅದೊಂದು ಸ್ತುತಿಯೇನೋ ಎಂಬಂತೆ ಒಂದೊಂದನ್ನೂ ಬಣ್ಣಿಸಿ ಹೇಳುತ್ತಿದ್ದರು. ಅವನ ಕೈ ಹೆಂಗಿತ್ತು ಗೊತ್ತಾ? ಹೇಗೆ ಮಾತಾಡ್ತಿದ್ದ ಗೊತ್ತಾ? ಅವನ body ಹೆಂಗಿತ್ತು ಗೊತ್ತಾ? ಅವನ ಮನೆ ಹೆಂಗಿತ್ತು ಗೊತ್ತಾ? ಹಾಗಂತ ಒಂದೇ ಸ್ತುತಿ. ಜಯರಾಜ್ ಮನೆಯ ಬಗ್ಗೆಯೇ ನಾನು ಒಂದಿನ್ನೂರು ಕೇಜಿ ಕೇಳಿದ್ದಿರಬಹುದು! ಅದೇ ಮನೆಯಲ್ಲಿ ನಾನೊಂದೆರಡು shootingಗಳನ್ನೂ ಮಾಡಿದೆ. ಒಬ್ಬ ವ್ಯಕ್ತಿ ಸತ್ತು ಹೋದರೆ ಆತನಿಗೆ ಸಂಬಂಧಪಟ್ಟದ್ದೆಲ್ಲವೂ ಹೇಗೆ ನಗಣ್ಯವಾಗಿ ಹೋಗುತ್ತದೆ ಎಂಬುದಕ್ಕೆ ಆ ಮನೆಯೇ ಸಾಕ್ಷಿ. ಅದೇನೋ ಅಮೋಘವಾಗಿದ್ದಿರಬೇಕು ಅಂದುಕೊಂಡು ಅವನ ಮನೆಯೊಳಕ್ಕೆ ಕಾಲಿಟ್ಟೆ. Nonsense. ಅದು ತೀರ ಚಿಕ್ಕ, ಇರುಕಿನ, ಕೊಳಕಾದ ಹಾಳು ಕೊಂಪೆ ಅನ್ನಿಸಿಬಿಟ್ಟಿತು. ಒಂದು ರೆಕ್ಸಿನ್ ಹರಿದುಹೋದ ಕುರ್ಚಿ ಅಲ್ಲಿತ್ತು. I was just not impressed. ಅಲ್ಲೇ ಕುಳಿತು ನಾನು ಸಿಗರೇಟು ಸೇದಿದೆ. ಜಯರಾಜ್ ಬದುಕಿದ್ದಿದ್ದರೆ ಅದೆಲ್ಲ ಸಾಧ್ಯವಾಗುತ್ತಿತ್ತಾ? ಆ ಮನೆ ತೀರಾ ಅಷ್ಟು ordinaryಯಾಗಿ ಕಾಣಿಸುತ್ತಿತ್ತಾ? “ಎಲ್ಲವೂ ಅಷ್ಟೇ ಕಣ್ರೀ....ಮನುಷ್ಯ ಬದುಕಿರೋ ತನಕ, ಅಷ್ಟೇ!" ಅನ್ನುತ್ತಿರುತ್ತೇವೆ. ಅದು ಖಂಡಿತ ಸುಳ್ಳಲ್ಲ.

ಅದಾಯ್ತಲ್ಲ? ಆ ಹುಡುಗ ಮಹೇಶ್ ನನಗೆ ಮತ್ತೆ ಬೆಂಗಳೂರಿನಲ್ಲೇ ಸಿಕ್ಕ. ನಾನು ಹುಬ್ಬಳ್ಳಿಯಿಂದ transfer ಆಗಿ ಬೆಂಗಳೂರಿಗೆ ಬಂದಿದ್ದೆ. ಲಲಿತೆಯನ್ನು ಮಕ್ಕಳ ಸಮೇತ ಕರೆದುಕೊಂಡು ಬಂದಿದ್ದೆ. ಲಲಿತೆಯನ್ನೂ ಬೆಂಗಳೂರಿಗೇ transfer ಮಾಡಿಸಿ, ಇಲ್ಲಿ ಸಂಸಾರ ಹೂಡಿದ್ದೆ. ಆಗ ‘ಕರ್ಮವೀರ’ ಆರಂಭವಾಗಿತ್ತು. ಅದನ್ನು ಹದಿನಾಲ್ಕು ವರ್ಷದ ನಂತರ ಪುನಾರಾರಂಭ ಮಾಡುವಂತೆ ಒತ್ತಾಯಿಸಿದವನೇ ನಾನು. ಆಗೆಲ್ಲ ‘ಕರ್ಮವೀರ’ ಕೇವಲ ದೀಪಾವಳಿ ಸಂಚಿಕೆಯಾಗಿ ಹೊರಬರುತ್ತಿತ್ತು. ಕೆಲವು ವರ್ಷ ಅದನ್ನು ನಾನೇ ಹೊರತಂದೆ. ಆಗ ನೆರವು ನೀಡಿದ್ದು ಉದಯ ಮರಕಿಣಿ ಮತ್ತು ಗಣೇಶ್ ಕಾಸರಗೋಡು. ಮತ್ತೇಕೆ ಅದನ್ನು ವಾರಪತ್ರಿಕೆಯನ್ನಾಗಿ ಹೊರತರಬಾರದು ಅಂತ ಶಾಮರಾಯರನ್ನು ಪೀಡಿಸಿದೆನಲ್ಲ? ಅವರೊಂದು ದಿನ ‘ಆಯ್ತು’ ಅಂದುಬಿಟ್ಟರು. ನಾನು ಹುಬ್ಬಳ್ಳಿಯಲ್ಲೇ ಇದ್ದೆ. ‘ಕರ್ಮವೀರ’ ಬೆಂಗಳೂರಿನಲ್ಲೇ ಪ್ರಿಂಟಾಗುತ್ತಿತ್ತು. One fine day, ಶಾಮರಾಯರು ನನ್ನನ್ನು ಬೆಂಗಳೂರಿಗೆ ಕರೆತಂದು ಸ್ಥಾಪಿಸಿಬಿಟ್ಟರು. ಆಗ ‘ರವಿ ಬೆಳಗೆರೆ’ ಅಂದ್ರೆ ‘ಹೆಂಗೆ ಕೆ.ಜಿ.?’ ಎಂದು ಕೇಳುವಂತಿತ್ತು. ‘ಕಸ್ತೂರಿ’ಯ ಓದುಗರಿಗೆ ಅಲ್ಪಸ್ವಲ್ಪ ಪರಿಚಯವಿತ್ತು. ನನ್ನ ಬರಹಗಳನ್ನು ಓದಿದ್ದರು. ಅವು ಬಿಡಿ, ನಾನು ತುಂಬ ಆಪ್ತಶೈಲಿಯಲ್ಲಿ ಬರೆದ ಬರಹಗಳು. ಕೆಲವರು ಇವತ್ತಿಗೂ ಆ ಬರಹಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ‘ಕಸ್ತೂರಿ’ಗೆ ಇದ್ದ reach ಆದರೂ ಎಷ್ಟಿತ್ತು? ಹೆಚ್ಚೆಂದರೆ ಮೂವತ್ತು ಸಾವಿರ copy. ಅಂಥದೊಂದು ಸ್ಥಿತಿ ಮತ್ತು environmentನಲ್ಲಿ ‘ಕರ್ಮವೀರ’ ಆರಂಭಗೊಂಡಿತ್ತು. ನಾನು ಬೆಂಗಳೂರನ್ನೇ ಸರಿಯಾಗಿ ನೋಡಿರಲಿಲ್ಲ. ಪ್ರತೀ ರಸ್ತೆ, ಪ್ರತಿ ಬಸ್ ಸ್ಟಾಪು, ಪ್ರತಿ ಬಿಲ್ಡಿಂಗೂ ನನಗೆ ಹೊಸದೇ! ಅಪರಿಚಿತತೆ ಕೂಡ ಎಂಥ ವಿಲಕ್ಷಣವಾದ thrill ಮೂಡಿಸುತ್ತದಲ್ಲ?

ಸರಿಯಾಗಿ ಆ ದಿನಗಳಲ್ಲೇ ಶಾಮರಾಯರು ಕರೆದು “ಒಂದೆರಡು ತಿಂಗಳ ಮಟ್ಟಿಗೆ ಅಮೆರಿಕಕ್ಕೆ ಹೊರಟಿದೀನಿ, ಮಗಳ ಮನೆಗೆ. ಕರ್ಮವೀರ ಸರಿಯಾಗಿ ಸಂಭಾಳಿಸಿಕೊಂಡು ಹೋಗ್ತೀಯಾ?" ಅಂದರು. “ಹೋಗೋಕೆ ಮುಂಚೆ ಒಂದೈನೂರು ರುಪಾಯಿಯಷ್ಟು ಸಂಬಳ ಹೆಚ್ಚಿಸಿ ಹೋಗ್ರಿ.." ಅಂದೆ. “ಬಂದ ಮ್ಯಾಲೆ ನೋಡೋಣ" ಅಂದರೇ ಹೊರತು ಸಂಬಳ ಹೆಚ್ಚಿಸಲಿಲ್ಲ. ಬಹುಶಃ ನನಗೆ ಮೂರು ಸಾವಿರದ ಆರುನೂರು ರುಪಾಯಿ ಸಂಬಳ ಬರುತ್ತಿತ್ತು. ಲಲಿತೆಗೆ ಹೆಚ್ಚೆಂದರೆ ನಾಲ್ಕು ಸಾವಿರ. ಅಷ್ಟರಲ್ಲಿ ಹೊಟ್ಟೆ ತುಂಬೀತೇ? ನನ್ನಲ್ಲಿ ಉತ್ತರವಿರಲಿಲ್ಲ. ಇಲ್ಲೇ ಪದ್ಮನಾಭನಗರಕ್ಕೆ ಅಂಟಿಕೊಂಡಂತಿದ್ದ ಒಂದು ಚಿಕ್ಕ layoutನಲ್ಲಿ, tent theatre ಪಕ್ಕದಲ್ಲಿ ಚಿಕ್ಕ ಮನೆ ಮಾಡಿದ್ದೆ. ಮಕ್ಕಳು ಇಲ್ಲೇ ಹತ್ತಿರದಲ್ಲಿರುವ NSVK ಸ್ಕೂಲ್‌ಗೆ ಹೋಗುತ್ತಿದ್ದರು. ಅವೇ ದಿನಗಳಲ್ಲಿ ಒಂದು ಸಲ ಒಂದು ಘಟನೆ ನಡೆಯಿತು.

ಅದೊಂದು ಜಿಟಿ ಜಿಟಿ ಮಳೆಯ ಸಂಜೆ. ಮನಸ್ಸಿಗೆ ಏನೋ ಬೇಸರ. ಬೈಕಿನಲ್ಲಿ ಹೋದವನು ಪ್ರೆಸ್ ಕ್ಲಬ್‌ನಲ್ಲಿ ರಮ್ ಎದುರಿಗಿಟ್ಟುಕೊಂಡು ಕುಳಿತೆ. ನನ್ನ ಮನಸ್ಸಿನಲ್ಲಿ ಯಾವ ಸುಡುಗಾಡು ಐಡಿಯಾನೂ ಇರಲಿಲ್ಲ. ಕ್ಲಬ್‌ನಲ್ಲಿ ಕೆಲವು ಹುಡುಗರು ಪರಿಚಯವಿದ್ದರು. ಅವರು ಸಪ್ಲೈ ಮಾಡುವವರು. ಪಾಂಡು, ಮಲ್ಲಯ್ಯ, ರುದ್ರ, ಕೊತ್ವಾಲ, ಬೈರೇಗೌಡ - ಹೀಗೆ. ನಾನು ರಾಜಾರಾಯರ ಶಿಷ್ಯ ಅಂತಲೇ ಅವರು ಗುರುತಿಸುತ್ತಿದ್ದರು. ಅಲ್ಲಿಗೆ ಸೀತಾನದಿ ಸುರೇಂದ್ರ ಬರುತ್ತಿದ್ದ. ಬರೋದೇನು ಬಂತು? ಅವನು ಕ್ಲಬ್ಬಿನಲ್ಲೇ ಇರುತ್ತಿದ್ದ. ಹಿಂದೆ ‘ಅಭಿಮಾನ’ ಪತ್ರಿಕೆ ಆರಂಭವಾದ ಸಂಗತಿ ಹೇಳಿದೆನಲ್ಲವೆ? ಅಲ್ಲಿದ್ದಾಗಲೇ, ಒಂದು ದಿನ ಕೈಲಿ ಕೆಮೆರಾ ಹಿಡಿದುಕೊಂಡು ಬಂದ ಸುರೇಂದ್ರ ನನ್ನ ಪರಿಚಯ ಮಾಡಿಕೊಂಡಿದ್ದ. ಅವನಿಗೆ ಟಿ.ವೆಂಕಟೇಶರನ್ನು ಪರಿಚಯ ಮಾಡಿಸಿದ್ದು ನಾನು. ತುಂಬ ಬೇಗನೇ ಸುರೇಂದ್ರ ನನಗೆ ಆತ್ಮೀಯನಾದ. ನನ್ನ ರೂಮಿನಲ್ಲೇ ಅವನದು ಠಿಕಾಣಿ. ವಿಪರೀತ ಸಿಗರೇಟು ಸೇದುತ್ತಿದ್ದ. ಹೊಟ್ಟೆ ತುಂಬ ಕುಡಿಯುತ್ತಿದ್ದ. ಕೆಲವು ಸಲ ನನ್ನೊಂದಿಗೆ ಅವನು ಪ್ರೆಸ್‌ಕ್ಲಬ್‌ಗೆ ಬಂದಿದ್ದ.

ಹುಬ್ಬಳ್ಳಿಯಿಂದ finally final ಎಂಬಂತೆ ಟ್ರಾನ್ಸ್‌ಫರ್ ಆಗಿ ಬೆಂಗಳೂರಿಗೆ ಬಂದೆನಲ್ಲ? ಈ ಸುರೇಂದ್ರ ಅಲ್ಲಿ ಮೋಟು ಕಲ್ಲಿನಂತೆ ಸ್ಥಾಪಿತನಾಗಿ ಹೋಗಿದ್ದ. ಆಗ ನನಗೆ ಬೇರಿನ್ನೇನೂ ಬೇಕಾಗಿರಲಿಲ್ಲ. ಸಂಬಳದಲ್ಲಿ ಒಂದೈದು ನೂರು ಹೆಚ್ಚಾಗಿದ್ದಿದ್ದರೆ ಈ ಸ್ವಂತ ‘ಪತ್ರಿಕೆ’ಯನ್ನು ನಾನು ಆರಂಭಿಸುತ್ತಿರಲೇ ಇಲ್ಲ. ಅವತ್ತು ಜಿಟೀ ಮಳೆಯಲ್ಲಿ ಕೈಲೊಂದು ಛತ್ತರಿ ಹಿಡಿದುಕೊಂಡು ನೆಮ್ಮದಿಯಾಗಿ ನಡೆದು ಬಂದದ್ದು ಸಿದ್ದಿಕಿ ಆಲ್ದೂರಿ! I cannot forget him. ಗೆಳೆಯ ಸಿದ್ದೀಕಿ ಆಲ್ದೂರಿ ನನಗಿಂತ ಕೊಂಚ ಹಿರಿಯ. ಪಕ್ಕಾ ಶಿವಾಜಿನಗರದ ಮುಸಲ್ಮಾನರು ಆಡುವ ಉರ್ದು ಭಾಷೆ ಮಾತನಾಡುತ್ತಿದ್ದ. Actually, ಅದು ದಖ್ಖನಿ. ಅದನ್ನು ಉರ್ದು ಅನ್ನಕೂಡದು. ಈ Deccan ಪ್ರಾಂತ್ಯದಲ್ಲಿ ಮಾತನಾಡುವ ‘ದಖ್ಖನಿ’ ಅನ್ನಬೇಕು. ಸಿದ್ದಿಕಿ ಶಿವಾಜಿನಗರದಿಂದಲೇ ಹೊರಡುತ್ತಿದ್ದ. ‘ಡೈಲಿ ಸಲಾರ್’ (Daily Salar) ಪತ್ರಿಕೆಗೆ ವರದಿ ಮಾಡುತ್ತಿದ್ದ. ಅದೇನು ಶುಭ ಘಳಿಗೆಯೋ? ಆ ಮಾತು ಯಾಕಾದರೂ ಬಂತೋ? ಕಾಣೆ. ಏನೇನೂ ಸಿದ್ಧತೆ ಯೋಚನೆ ಇಲ್ಲದೆಯೇ ನಾನು “ಸಿದ್ದಿಕಿ, ನಿಮಗೆ ಶಿವಾಜಿನಗರದ ಮುರ್ಗಿ ಫಯಾಜ್ ಗೊತ್ತಾ?" ಅಂತ ಕೇಳಿಬಿಟ್ಟಿದ್ದೆ. “ರವಿ ಭಾಯ್, ನಿಮಗೆ ಗೊತ್ತಿಲ್ದೆ ಏನು? ಪ್ರತಿನಿತ್ಯ ಅವನ ಅಂಗಡಿ ದಾಟಿಕೊಂಡೇ ಬರ‍್ತೀನಿ. ಅವನ ಪರಿಚಯವೂ ಇದೆ. ಯಾಕೆ?" ಅಂದ. ಅದ್ಯಾವ ಸಾಯಂ ಸಂಧ್ಯಾ ದೇವತೆ ನನಗೋಸ್ಕರ, ಕೇವಲ ನನಗೋಸ್ಕರ ಕಣ್ಣು ತೆರೆದಳೋ ಗೊತ್ತಿಲ್ಲ. ನನ್ನ ಪಾಲಿಗದು ಬಂಗಾರದ ಘಳಿಗೆಯಾಯಿತು.

ಅಲ್ಲಿಂದ ಶುರವಾಯಿತು ನನ್ನ ಭೂಗತ ಲೋಕದ ಪಾದಯಾತ್ರೆ. ಅದು ವರ್ಷಗಟ್ಟಲೆ ನಡೆಸಿಕೊಂಡು ಹೋಯಿತು. ಎಲ್ಲಾ ಹೇಳ್ತೀನಿ. Give me time.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 April, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books