Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ದುಡಿದು ಅಲ್ಲೇ ಮಲಗಿದ ಆ ಹುಡುಗರ ತಾರುಣ್ಯವನ್ನು ಇದು ನುಂಗಿದೆ!

ಯಾರಿಗಿರಲ್ಲ ಹೇಳಿ?

ಇಂಥ ಸಂದರ್ಭಗಳಲ್ಲಿ ತುಂಬ ಭಾವುಕರಾಗುತ್ತೇವೆ. ನಾನಂತೂ ಶುದ್ಧ ಅಳುಮುಂಜಿ. ಇದು ಹೇಗಿರುತ್ತೆ ನೋಡಿ. ಚಂದ್ರಶೇಖರ ಆಲೂರ್ ನನಗೆ ತುಂಬ ಹಳೇ ಸ್ನೇಹಿತರೇನಲ್ಲ. ಅವರನ್ನು ನಾನು ಮೊದಲು ನೋಡಿದ್ದು ‘ಲಂಕೇಶ್ ಪತ್ರಿಕೆ’ಯ ಆಫೀಸಿನಲ್ಲಿ. ಅವರು ನಿಜಕ್ಕೂ ಚೆಲುವ. ಅವರ ಸಿನೆಮಾ ಬರಹಗಳಿಗೆ ಮೊದಲಿಂದಲೂ ನಾನು ‘ಫಿದಾ’. ಮುಂದೆ ಅವರು, ಸತ್ಯಮೂರ್ತಿ ಆನಂದೂರು, ಸಿದ್ದಪ್ಪ ಅರಕೆರೆ ಮುಂತಾದವರು ‘ಲಂಕೇಶ್ ಪತ್ರಿಕೆ’ಯಿಂದ ಸಿಡಿದು ಹೊರಬಿದ್ದು ‘ಈ ವಾರ’ ಎಂಬ ಪತ್ರಿಕೆ ಮಾಡಿದರು. ಅವರೊಂದಿಗೆ ಭಕ್ತರಹಳ್ಳಿ ಕಾಮರಾಜ ಕೂಡ ಇದ್ದ. ಅವರ ಪತ್ರಿಕೆಗೆ ಬೆಳೆಯುವ ಅವಕಾಶಗಳಿದ್ದವು. ಅದು ಆರಂಭಗೊಂಡಾಗ ಭಯ ಮಿಶ್ರಿತ ಕಸಿವಿಸಿ ಅನುಭವಿಸಿದ್ದು ಪಿ.ಲಂಕೇಶ್. ಇಬ್ಬರ ಮಧ್ಯದ ಸ್ಪರ್ಧೆ ಲಂಕೇಶ್‌ರನ್ನು ಕೊಂದು ಬಿಡುತ್ತದೆ ಅಂತ ನಾವೆಲ್ಲ ಮಾತನಾಡಿಕೊಂಡೆವು. ಆದದ್ದೇ ಬೇರೆ. ಲಂಕೇಶ್ ಸತ್ತರು. ‘ಈ ವಾರ’ ಉಸಿರು ಕಳಕೊಂಡಿತ್ತು: ಲಂಕೇಶ್ ಸಾವಿಗೆ ಮೊದಲೇ. ಆ ಗೆಳೆಯರ ಪೈಕಿ ನನಗೆ ಸತ್ಯಮೂರ್ತಿ ಆಪ್ತ. ಅವನಿಗಿಂತ ಮುಂಚೆ ಆಪ್ತನಾಗಿದ್ದು ಅರಕೆರೆ ಸಿದ್ದಪ್ಪ. ಆತನಿಗೆ ಬರೆಯಲು ಬರುತ್ತಿರಲಿಲ್ಲ. ಆದರೆ ಒಳ್ಳೆಯ ಆರ್ಗನೈಸರ್. ಸರ್ಕ್ಯುಲೇಷನ್ ವಿಷಯದಲ್ಲಿ old hand. ‘ಈ ವಾರ’ ಪತ್ರಿಕೆ ಆಗ ಇಲ್ಲೇ ಡಿ.ವಿ.ಜಿ. ರಸ್ತೆಯಲ್ಲಿತ್ತು. ಅದಕ್ಕೆ ಬಾಗಿಲಿರಲಿಲ್ಲ. ಬದಲಿಗೆ ಷೆಟರ್ ಇತ್ತು. ಯಾರೂ ಇಲ್ಲದಾಗ ಒಂದೆರಡು ಬಾರಿ ನನಗೆ ಸಿದ್ದಪ್ಪ ಮಾತಿಗೆ ಸಿಗುತ್ತಿದ್ದ. ನಾನಾಗ unemployed. ಸಿದ್ದಪ್ಪ “ನೀನು ನಮ್ಮ ಪತ್ರಿಕೆಗೆ ಬರೆಯೋ ಮಾರಾಯಾ" ಅನ್ನುತ್ತಿದ್ದ. ಒಂದಷ್ಟು ಕಾಸೂ ಕೈಗಿಡುತ್ತಿದ್ದ. ‘ಕರ್ಮವೀರ’ದಿಂದ ಆಗಷ್ಟೆ ಹೊರಬಿದ್ದಿದ್ದೆ. ಲಂಕೇಶ್ ವಿನಾಕಾರಣ ನನ್ನ ವಿರುದ್ಧ ಬರೆದಿದ್ದರು. ಆ ಸೇಡು ತೀರಿಸಿಕೊಳ್ಳಲಿಕ್ಕೇನೂ ನಾನು ‘ಈ ವಾರ’ ಆಫೀಸಿಗೆ ಹೋಗುತ್ತಿರಲಿಲ್ಲ. ಹೋದಾಗ ಮಾತ್ರ ಅರಕೆರೆ ಸಿದ್ದಪ್ಪ ನನಗೆ ಒಂದಷ್ಟು business tips ಕೊಡುತ್ತಿದ್ದ. “ನೀನು ಹೆಂಗೇ ಮಾಡು. ಟ್ಯಾಬೊಲಾಯ್ಡ್‌ನಲ್ಲಿ ನಷ್ಟ ಅಂತ ಇರಾದಿಲ್ಲ ನೋಡು. ಮಿನಿಮಮ್, ಒಂದು ಕಾಪಿಗೆ ಎಂಟಾಣೆಯಾದರೂ ಉಳಿಯುತ್ತೆ" ಅಂತ ಅದೊಂದು ದಿನ ಎಂಥದೋ ದಿವ್ಯ ಮುಹೂರ್ತದಲ್ಲಿ ಸಿದ್ದಪ್ಪ ನನಗೆ ಹೇಳಿದ್ದ. ಒಂದು ಪ್ರತಿಗೆ ಎಂಟಾಣೆ! ಹತ್ತು ಸಾವಿರ ಪ್ರತಿ ಮಾರಾಟವಾದರೆ? My God! ನನ್ನ ಕುರುಡು ಲೆಕ್ಕಾಚಾರ ಆರಂಭವಾದದ್ದೇ ಹಾಗೆ.

ನಾನು ಹಸಿದು ಕಂಗಾಲಾಗಿದ್ದೆ. I was unemployed. ಅಷ್ಟೇ ಅಲ್ಲ. ನನಗೊಂದು ಅಪರ ಸತ್ಯ ಗೊತ್ತಾಗಿತ್ತು. ಅದೇನೆಂದರೆ, I can not be employed. I am not employable! ನನ್ನನ್ನು ಯಾರೂ ನೌಕರಿಗೆ ಇಟ್ಟುಕೊಳ್ಳಲು ಸಾಧ್ಯವಿರಲಿಲ್ಲ. ಜಗಳಗಂಟ, ಮೂಡಿ, ಅಶಿಸ್ತಿನವನು, ಕುಡುಕ, ಸಿಡುಕ, ನೌಕರರನ್ನು ಎತ್ತಿಕಟ್ಟುವ ಕಮ್ಯುನಿಸ್ಟ... ಇವು ನನ್ನ qualifications. ಇಂಥ ನನಗೆ ಅದ್ಯಾರು ನೌಕರಿ ಕೊಟ್ಟಾರು? ಕೊಟ್ಟರೂ ಅವರೊಂದಿಗೆ ನಾನು ಉಳಿದೇನಾದರೂ ಹೇಗೆ? ಹಾಗೆ ಬೀದಿಗೆ ಬಿದ್ದಿದ್ದ ನಾನು ನನ್ನ ಸ್ವಂತದ ಪತ್ರಿಕೆ ಮಾಡಲಿದ್ದೇನೆ ಅಂತ ಸಣ್ಣ ದನಿಯ ಬಂಡಾಯದ ಬಾವುಟ ಹಾರಿಸಿದ್ದೆ. In no time I did it. ಆ ಹೊತ್ತಿಗೆ ‘ಈ ವಾರ’ ಮೆತ್ತಗಾಗಿತ್ತು. ಮುಂದೆ ಅದು ಕಣ್ಮುಚ್ಚಿತು. ಅದಾದ ಎಷ್ಟೋ ದಿನಗಳಿಗೆ ನಾನು ಆಲೂರರನ್ನು ಹುಡುಕಲಾರಂಭಿಸಿದೆ. ಅವರು ನನ್ನ ‘ಪತ್ರಿಕೆ’ಗೆ ಬರೆಯಲಿ ಎಂಬ ಆಸೆ. Surprisingly, ಆಲೂರು ಒಪ್ಪಿಯೂ ಬಿಟ್ಟರು. ಅಂಕಣ ಬರೆಯೋದು ಸುಮ್ಮನೆ ಮಾತಲ್ಲ. ಪ್ರತೀ ಬರಹಗಾರನಿಗೆ ರೆಗ್ಯುಲರ್ ಆಗಿ ಒಂದು ಅಂಕಣ ಬರೆಯೋ ಆಸೆ ಇರುತ್ತೆ. ಅನೇಕರು ಪತ್ರಿಕಾ ಸಂಪಾದಕರನ್ನು “ನಂಗೊಂದು ಕಾಲಂ ಕೊಡಿ" ಅಂತ ಕೇಳಿಯೂ ಕೇಳುತ್ತಾರೆ. ನಾನೊಮ್ಮೆ ವೈಕುಂಠ ರಾಜು ಅವರನ್ನ ಕೇಳಿದ್ದೆ. “ಮೊದಲು ಒಂದೆರಡು ಲೇಖನ ಅಥವಾ ವರದಿ ಕೊಡು. ನಂತರ ಅಂಕಣದ ವಿಷಯ ಮಾತಾಡೋಣ" ಅಂದಿದ್ದರು. ಅವರು ಅಂದಂತೆಯೇ ಆಯಿತು. ಒಂದು ಲೇಖನ ಬರೆದೆ. ಎರಡನೇದು ನನ್ನ ಕೈಲಿ ಆಗಲಿಲ್ಲ. ಈಗ್ಲೂ ಕೆಲವರು ‘ಅಂಕಣ ಬರೀಲಾ’ ಅಂತ ಕೇಳುತ್ತಾರೆ. ವೈಕುಂಠರಾಜು ನನಗೆ ಹೇಳಿದ್ದನ್ನೇ ನಾನು ಅವರಿಗೆ ಹೇಳುತ್ತೇನೆ. ಕೆಲವರಿಗೊಂದು ಚಟವಿರುತ್ತದೆ. ಒಂದೇ ಸಲಕ್ಕೆ ಮೂರ‍್ನಾಲ್ಕು ಪತ್ರಿಕೆಗಳಿಗೆ ಅಂಕಣ ಬರೀತೀನಿ ಅಂತ ಹೊರಟು ಬಿಡುತ್ತಾರೆ. ಅವರನ್ನು ತಕ್ಷಣ ನಾನು ದೂರವಿಟ್ಟು ಬಿಡುತ್ತೇನೆ. ಅದು ಆಗದ-ಹೋಗದ ಕೆಲಸ. ಒಂದು ಅಂಕಣ ಬರೆಯೋದಕ್ಕೇ ತಿಣುಕಿ ಬಿಡುತ್ತೇವೆ. ಅಂಥದರಲ್ಲಿ ಮೂರ‍್ನಾಲ್ಕು? ‘Please get out....’ ಅಂತ ನಾನೇ ಅವರ ಅಂಕಣ ನಿಲ್ಲಿಸಿ, ಕೈ ಮುಗಿದು ಕಳಿಸಿಬಿಡುತ್ತೇನೆ.

ಆದರೆ ಚಂದ್ರಶೇಖರ ಆಲೂರರಿಗೆ ಅಂಥ ಯಾವ ತೆವಲುಗಳೂ ಇರಲಿಲ್ಲ. ನಾನಾಗಿ ಕೇಳಿದಾಗ ‘ಯೋಚಿಸಿ ಹೇಳ್ತೇನೆ’ ಅಂದಿದ್ದರು. ಅವರು ಕೊಂಚ ಸೂಕ್ಷ್ಮ. ಬೇಗ hurt ಆಗಿ ಬಿಡುತ್ತಾರೆ. ಅದಕ್ಕೆಂದೇ ಪ್ರತೀ ವಾರ ಅವರಿಗೆ ಫೋನ್ ಮಾಡಿ ಬೆನ್ನು ಬೀಳೋ ಜವಾಬ್ದಾರಿಯನ್ನು ನಿವೇದಿತಾಳಿಗೆ ಕೊಟ್ಟು ಬಿಟ್ಟಿದ್ದೆ. ಇವತ್ತಿಗೂ ಅವರಿಬ್ಬರು ತುಂಬ ಒಳ್ಳೆಯ ಸ್ನೇಹಿತರು. ಅವತ್ತಿಗಾಗಲೇ ಆಲೂರು ಬ್ಯಾಂಕಿನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದರು. ಈಗ ಬಿಡಿ: he is in a high position. ಅವರ ಮನೆಯವರು ಒಳ್ಳೆಯ ನೌಕರಿಯಲ್ಲಿದ್ದಾರೆ. ಮಗಳು ಅಮೆರಿಕದಲ್ಲಿ. ಮುಖ್ಯವಾಗಿ ಆಲೂರರಿಗೆ ಚಟಗಳಿಲ್ಲ. ಅವರು ತುಂಬ ಒಳ್ಳೆಯ ಓದುಗ. ಅದಕ್ಕಿಂತ ಮಿಗಿಲಾಗಿ ತುಂಬ ಒಳ್ಳೆಯ ಬರಹಗಾರ. ಅವರಿಗೆ ಸ್ನೇಹಗಳನ್ನು ಚೆಂದಾಗಿ maintain ಮಾಡೋದು ಗೊತ್ತು. ಅವರು ಮನುಷ್ಯ ಪ್ರೀತಿಯ ಜೀವಿ. Positive ಆಗಿ ಯೋಚಿಸಬಲ್ಲ ಲೇಖಕ. ಅಂಕಣಕಾರರಾಗಿ ಅವರು ‘ಪತ್ರಿಕೆ’ಗೆ, ಓದುಗರಿಗೆ ಮತ್ತು ನನಗೆ ತುಂಬ ಉಪಕಾರ ಮಾಡಿದ್ದಾರೆ. ಈಗ ವಿದಾಯದ, ಬೇರ್ಪಡುವ ಸಮಯ. “But, ನೀವು ಓ ಮನಸೇ...ಗೆ ಬರೀಲೇಬೇಕು" ಎಂದು ಕೈ ಕುಲುಕಿ, ಒಂದು tag line ನೀಡಿದ್ದೇನೆ. I am sure, ಅವರು ಬರೆಯುತ್ತಾರೆ. ಇನ್ನು ನಾಗ್ತಿ ಹಳ್ಳಿ ಚಂದ್ರಶೇಖರ. ಅವನ ಪ್ರೀತಿ, ಮುನಿಸು, ಅಂತಃಕರಣ, ತುಂಟತನ... ಯಾವುದರ ಬಗ್ಗೆ ಬರೆಯಲಿ. A warm hearted friend he is. ಈ ಇಪ್ಪತ್ತು ವರ್ಷಗಳಲ್ಲಿ ಒಂದೇ ಒಂದು ಸಲ ‘ಇಂಥೋರ ಬಗ್ಗೆ ಬರೀಬೇಡ’ ಅಂದಿಲ್ಲ. ಯಾರ ಕುರಿತಾಗಿಯೂ ಅವನು ಶಿಫಾರಸು ಮಾಡಿಲ್ಲ. ಯಾವ ಸಹಾಯವನ್ನೂ ಅವನು ಬಯಸಲಿಲ್ಲ. ‘ಸಿನೆಮಾದಲ್ಲಿ ನನಗೆ chance ಕೊಡಿಸಿ’ ಅಂತ ಅನೇಕರು ನನ್ನಲ್ಲಿಗೆ ಬರುತ್ತಿರುತ್ತಾರೆ. ನಾನು ಅವರನ್ನು ಹತ್ತಿರಕ್ಕೇ ಬಿಟ್ಟುಕೊಳ್ಳುವುದಿಲ್ಲ. ಆದರೆ, ಅವರ ಪೈಕಿಯೇ ಕೆಲವು ಪರಮ ‘ಜಿಡ್ಡು’ ಗಿರಾಕಿಗಳಿರುತ್ತವೆ. ಆ ಪೈಕಿ ಒಬ್ಬನನ್ನು ಆಯ್ದು, ನಾಗ್ತಿಯ ವಿಳಾಸ ನೀಡಿ “ನೀನು ಹೋಗಿ ಅವರನ್ನ ಕಾಣು.." ಎಂದು ಕಳಿಸಿಬಿಡುತ್ತೇನೆ. ಅವನು ಹೋದ ಒಂದರ್ಧ ಗಂಟೆಯಲ್ಲಿ ನನಗೆ ಫೋನ್ ಬರುತ್ತದೆ. “ಮಗನೇ...ನನ್ನ ಅಡ್ರೆಸ್ ಕೊಟ್ಟು ಕಳಿಸ್ತೀಯಾ? ಸಿಗು ಕೈಗೆ ಈ ಸಲ...ನನ್ಮಗನೇ..." ಎಂದು ನಾಗ್ತಿ ಅಬ್ಬರಿಸುತ್ತಾನೆ. ಅವತ್ತಿಗೆ ಅದೇ ಖುಷಿ. We share a great relationship. '’ಒಂದು ಅಂಕಣ ಬರಿಯೋ" ಅಂತ ವಿನಂತಿಸಿದಾಗ, ಏನೇನೂ ನಖರೆ ಮಾಡದೆ ನಾಗ್ತಿ ಒಪ್ಪಿಕೊಂಡ. “ಲೋ, ನಾನು ಅದ್ಯಾವುದೋ ವಿಪರೀತ ದೂರದ ದೇಶದಲ್ಲಿರ್ತೀನಿ. ಅಲ್ಲಿಂದ fax ಮಾಡಿದರೆ ಸಾಕು. ನೀನು ಕೊಡೋ ರೆಮ್ಯುನರೇಷನ್ ಎಂಬ ಪುಡಿಗಾಸು ಅದಕ್ಕೇ ಮುಗಿದು ಹೋಗುತ್ತೆ!" ಅಂತ ಮೊದಲೆಲ್ಲ ಗೊಣಗುತ್ತಿದ್ದ. ಆದರೆ ಎಷ್ಟೇ ದುಬಾರಿಯಾದರೂ ಅವನು fax ಮಾಡುತ್ತಿದ್ದ. ಸಿನೆಮಾ productionಗೆ ಅಂತ busy ಆದಾಗ ಮಾತ್ರ ಅವನ ಅಂಕಣಕ್ಕೆ ಬ್ರೇಕ್. ಅಂಥ ಗೆಳೆಯನಿಗೆ ಅದೇನು thanks ಹೇಳಲಿ? I love him.

ಇನ್ನು ನನ್ನ ಅಣ್ಣ. ಅವರನ್ನು ನಾನು ಅಣ್ಣ ಅಂತಲೇ ಭಾವಿಸಿರೋದು. ಅವರು ಕೂಡ ನನ್ನನ್ನು ತಮ್ಮನನ್ನು ನಡೆಸಿಕೊಂಡಂತೆಯೇ ನಡೆಸಿಕೊಂಡಿದ್ದಾರೆ. ಅವರು ರೇವಣಸಿದ್ದಯ್ಯನವರು. ಮಾನನಷ್ಟ ಮೊಕದ್ದಮೆಗಳನ್ನು ಗೆಲ್ಲೋದು ಅವರಿಗೆ ಗೋಲಿಯಾಟ. ಹರಪನಹಳ್ಳಿಯಲ್ಲಿ ಡಕಾಯತರ ಮೇಲೆ ನಾನು ಗುಂಡು ಹಾರಿಸಿದೆನಲ್ಲ? ಆ ಕೇಸಿನಲ್ಲಿ ಅವರ ಜಾಣ್ಮೆ ಕಂಡು ನಾನು ದಂಗು ಬಡಿದು ಬಿಟ್ಟಿದ್ದೆ. '’ಹೌದು, ನಾವು ಬೆಳಗೆರೆಯವರಿಗೆ ಮೋಸ ಮಾಡೋಕೆ ಅಂತಲೇ ಹೋರಟಿದ್ವಿ. ಅವರನ್ನು ಹೊಡೆಯೋಕೆ ಹೋದ್ವಿ. ಅವರ ಚೈನು-ಮೊಬೈಲು ಕಿತ್ತುಕೊಂಡ್ವಿ. ಹಣ ಕಿತ್ತುಕೊಂಡ್ವಿ..." ಅಂತ ಏಕ್‌ದಮ್ ಡಕಾಯತರೇ ಒಪ್ಪಿಕೊಂಡು ಹೇಳಿಕೆ ನೀಡೋ ಹಾಗೆ ಮಾಡಿಬಿಟ್ಟಿದ್ದರು ರೇವಣಸಿದ್ದಯ್ಯನವರು. ಕಾನೂನಿನ ಬಗ್ಗೆ ಅವರಿಗಿಂತ ಚೆನ್ನಾಗಿ ಬರೆಯುವವರುಂಟೆ? He is a master. ನಾನು ಋಣಿ.

“ಇಲ್ಲ ಸರ್, ಈಗ ಸ್ವಲ್ಪ ತೆಳ್ಳಗಾಗಿದೀನಿ" ಅಂತ sheepish ಆಗಿ ನಗುವ ಡುಮ್ಮಣ್ಣ ಜೋಗಿ! ಅವರು ನನ್ನ ಇಷ್ಟದ ಬರಹಗಾರ ಮತ್ತು ಇಷ್ಟದ ಮನುಷ್ಯ. ಚೂರಂದ್ರೆ ಚೂರೂ ಇಲ್ಲದ dry ಸ್ಥಿತಿಗಳಲ್ಲೂ ಅವರು ಅದ್ಭುತವಾದ ನಗೆ ಎಬ್ಬಿಸಿ ತರಬಲ್ಲವರು. ಅನೇಕ ದಿನ ‘ಜೋಗಿ’ ನಮ್ಮಲ್ಲಿದ್ದರು. ಅವರು ನೌಕರರು ಅಂತ ನಂಗೆ ಎಂದಿಗೂ ಅನ್ನಿಸಲಿಲ್ಲ. ಇಬ್ಬರೂ ಸೇರಿ ಸಾವಿರಾರು ಕಿಲೋಮೀಟರ್ drive ಮಾಡಿದೆವು: ಸುದ್ದಿಗಳಿಗಾಗಿ. ನಾವು ಗ್ಯಾಲನ್‌ಗಟ್ಟಲೇ ಕುಡಿದವರೂ ಹೌದು. ಇವತ್ತಿಗೂ ನಮ್ಮ ಸ್ನೇಹ ಬಹುವಚನ ಬಿಟ್ಟಿಲ್ಲ. ಆತ್ಮೀಯತೆ ಮಾತ್ರ ಅಗಾಧ. ಒಂದು ದಟ್ಟ ಮಳೆಯ ಇಳಿ ಸಂಜೆ ನಾವು ಚಾರ್ಮಾಡಿ ಘಾಟ್‌ನಲ್ಲಿ ಅಲೆದದ್ದು ನನಗೆ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಇವತ್ತಿಗೂ ‘ಜೋಗಿ’ ನೂರೆಂಟು ಬರಹ ಬರೆಯುತ್ತಾರೆ: ನೂರೆಂಟು ಕಡೆಗೆ. ಎಲ್ಲೂ ಕೂಡ ‘ಜೊಳ್ಳು’ ಅನ್ನಿಸುವುದಿಲ್ಲ. ನಮಗೆ ಕಾಮನ್‌ಫ್ರೆಂಡ್ ಅಂದರೆ ಟಿ.ಎನ್.ಸೀತಾರಾಮ್. ಕುಳಿತರೆ, ನಾವು ಬೆಳತನಕ ಹರಟುವವರು. ಜೋಗಿಯವರ ಮಗಳು ‘ಪ್ರಾರ್ಥನಾ’ದಲ್ಲಿದ್ದಾಳೆ. ಅಪರೂಪಕ್ಕೊಮ್ಮೆ ಆಫೀಸಿನಲ್ಲಿ ಜ್ಯೋತಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನ ತನಕ ಜೋಗಿ ಅವರ ತಾಯಿ ಬದುಕಿದ್ದರು. ಇದ್ದಷ್ಟೂ ದಿನ ಅವರು ‘ಪತ್ರಿಕೆ’ ಓದುತ್ತಿದ್ದರು. ಇನ್ನೇನು ಅವರು ಬದುಕಲ್ಲ ಅನ್ನೋ ಸ್ಥಿತಿಯಲ್ಲಿದ್ದಾಗಲೂ ಆಕೆ “ರವಿ ಬೆಳಗೆರೇನ ಕರೆಸು" ಅನ್ನುತ್ತಿದ್ದರು. ಅವರ ಮನೆಯಂಗಳಕ್ಕೆ ಹಿಮವಂತ ನೆನ್ನೆ ಮೊನ್ನೆ ತನಕ ಆಡಲು ಹೋಗುತ್ತಿದ್ದ. ಈಗ ಅಂಗಳ ಚಿಕ್ಕದಾಗಿದೆ. ಅವನು ದೊಡ್ಡವನಾಗಿದ್ದಾನೆ. ಜೋಗಿ ನನಗೆ ಪ್ರಾಣಪ್ರಿಯರು.

ಅದೆಷ್ಟು ವರ್ಷ ಸರಿದವೋ, ನೆನಪಿಲ್ಲ. ನನಗೆ ಆಕೆ ತುಂಬ ನೆನಪಾಗುತ್ತಾರೆ. ನನ್ನ ಸ್ವಂತ ಅಕ್ಕನಂತಿದ್ದ ಅವರು ಬಿ.ಎಸ್.ವೆಂಕಟಲಕ್ಷ್ಮಿ. ಒಂದು ಚಿಕ್ಕ ನರಳಿಕೆಯೂ ಇಲ್ಲದೆ ಆಕೆ ತೀರಿಕೊಂಡವರು. ಹಾಗೆ ನಾನು ಕೆಲವು ಮಿತ್ರರ ಋಣದಲ್ಲಿದ್ದೇನೆ. ಆ ಪೈಕಿ ಕೇಶವರೆಡ್ಡಿ ಹಂದ್ರಾಳ್ ಇದ್ದಾರೆ. ನಾಗಿ ಇದ್ದಾನೆ: ನಾಗರಾಜ ಹವಲ್ದಾರ್. ತುಂಬ ದಿನ ತಪ್ಪಿಸದೆ ಬರೆದವರು ಡಾ.ವೆಂಕಟಸುಬ್ಬರಾವ್. ಇವರೆಲ್ಲರಿಗಿಂತ ಮುಂಚೆ ಬರೆಯಲಾರಂಭಿಸಿದವರು ಜಯಂತ ಕಾಯ್ಕಿಣಿ. ಇವರೆಲ್ಲರ ಮಧ್ಯೆ ಅವಳಿದ್ದಾಳೆ: ನಮ್ಮ ಹುಡುಗಿ ಎಚ್.ಡಿ.ಸುನೀತ. ಅವಳನ್ನು ಬೆದರಿಸಿ, ಕೈಯಲ್ಲಿ ಬೆತ್ತ ಹಿಡಿದು ಅಂಕಣ ಬರೆಸಿದವನು ನಾನು. ಈಗಲೂ ‘ಆಕಾಶಬುಟ್ಟಿ’ಯಲ್ಲಿದ್ದಾಳೆ. ಬಹುಶಃ ಯಾವ ಭಾಷೆಯಲ್ಲೂ ಅಷ್ಟೂ ಚಿಕ್ಕವಯಸ್ಸಿನ ಅಂಕಣಕಾರರು ಇರಲಾರರು. ಈಗ ಬಿಡಿ, ಅವಳು ಎರಡು live ಅಂಕಣಗಳ’ ತಾಯಿ. A real good writer she is. ಇತ್ತೀಚೆಗೆ ಅವಳು ನೋಡಲಿಕ್ಕೂ ಸಿಕ್ಕಿಲ್ಲ. ಅವಳ ಗಂಡ ಮಧು film maker. ಒಳ್ಳೆಯ ದಾಂಪತ್ಯ ಅವರದು.

ನನ್ನನ್ನು ಕೊಂಚ ದೂರವೇ ಇಟ್ಟವರು ವಿಕಾಸ್. ಅವರಿಗೆ ಏನೋ ಸಂಕೋಚ. “ಯಾಕಿದ್ದೀತು ಇವನ ಸಹವಾಸ" ಎಂದು ದೂರವಿದ್ದಾರಾ? ಗೊತ್ತಿಲ್ಲ. ‘ನೇವಿ’ಯನ್ನು ನಾನು ಭೇಟಿಯಾಗಿದ್ದು ಒಂದೇ ಸಲ. He is a nice person. ಅವರ ಬರಹ ನನಗೆ ಇಷ್ಟ. “ಮಾತಾಡೋಣ" ಅಂದುಕೊಳ್ಳುತ್ತೇನೆ. ಭೇಟಿಯಾದದ್ದು ಒಂದೇ ಸಲ.

ಇಪ್ಪತ್ತು ವರ್ಷ ಇವರನ್ನೆಲ್ಲ ಕಟ್ಟಿಕೊಂಡು ನಾನು ಹೆಣಗಿದೆನಾ? ಇವರೆಲ್ಲ ನನ್ನನ್ನು ಕಟ್ಟಿಕೊಂಡು ಹೆಣಗಿದರಾ? ಗೊತ್ತಿಲ್ಲ. “ಸರ್ ದಯವಿಟ್ಟು ಬರೆಯಿರಿ" ಅಂತ ನಾನು ನಿರಂತರವಾಗಿ ಗೊರಬಿದೆ. ಅವರು ಕಠಿಣವಾಗಿ “ಆಗಲ್ಲ ಕಣ್ರೀ" ಅನ್ನಲಿಲ್ಲ. ಆದರೆ ಬರೆಯಲೇ ಇಲ್ಲ. ಅವರು ನನ್ನ ಆತ್ಮೀಯ ಮಿತ್ರ ಟಿ.ಎನ್.ಸೀತಾರಾಂ. ನನ್ನನ್ನವರು ಪತ್ರಿಕೆಯ ಆರಂಭದ ದಿನಗಳಿಂದಲೇ ಸಲಹಿದ್ದಾರೆ. ಬೈದಿದ್ದಾರೆ. “ಹೀಗೆ ಬರೀರಿ" ಎಂದು ಮಾರ್ಗದರ್ಶನ ನೀಡಿದ್ದಾರೆ. ನನ್ನ ಸಂಕಟದ ದಿನಗಳಲ್ಲಿ ತುಂಬ ಹತ್ತಿರ ನಿಂತು ಮೈದಡವಿದ್ದಾರೆ. ಉಳಿದೆಲ್ಲರಿಗಿಂತ ಸುಲಭವಾಗಿ ಅವರು ಮನುಷ್ಯರಲ್ಲಿನ ‘ಖೊಟ್ಟಿ’ತನದ ಪತ್ತೆ ಹಚ್ಚುತ್ತಾರೆ. ಆಶ್ಚರ್ಯವಾಗೋದೆಂದರೆ ಅವರಿಗೆ ತುಂಬ ಹತ್ತಿರದ ಗೆಳೆಯರು ಎಚ್.ಡಿ.ದೇವೆಗೌಡ. ಅಷ್ಟೇ ಹತ್ತಿರದವರು ನಮ್ಮ ದಲಿತ ಕವಿ ಡಾ.ಸಿದ್ಧಲಿಂಗಯ್ಯ! ಇವರಿಬ್ಬರನ್ನೂ ಸೀತಾರಾಂ ಅದ್ಹೇಗೆ ನಿಭಾಯಿಸುತ್ತಾರೋ? ಭಗವಂತ ಬಲ್ಲ.

ಹಾಗೆ, ಪತ್ರಿಕೆಗೆ ಒಳ್ಳೆಯದನ್ನು ಮಾಡಿದ ಅನೇಕರಿದ್ದಾರೆ. ನಾನು ಸ್ನೇಹಿತರನ್ನು ಸುಮ್ಮಸುಮ್ಮನೆ ಕಳೆದುಕೊಳ್ಳುವುದಿಲ್ಲ. ತಂತಾನೆ ಕಳೆದು ಹೋದವರಿದ್ದಾರೆ. ಅವರನ್ನು ಕೂಡ ನಾನು ಮರೆತಿಲ್ಲ. ಅವರಲ್ಲಿ ಕೆಲವರು ಹುಟ್ಟಾ ಶತ್ರುಗಳೇನೋ ಎಂಬಂತೆ ವರ್ತಿಸಿದ್ದಾರೆ. ಬೈದಾಡಿದ್ದಾರೆ. ನನಗೆ ಕಾಂಪಿಟೇಶನ್ ನೀಡುವ ಪ್ರಯತ್ನ ಮಾಡಿದ್ದಾರೆ. ಸೋತು ಕೈ ಚೆಲ್ಲಿದ್ದಾರೆ. ಅವರನ್ನು ಪ್ರೀತಿಯಿಂದಲೇ ನೆನೆಯುತ್ತೇನೆ. ಅವರು ಅನುಭವಿಸಿದ ಆ tension, ಆ ಪಡಿಪಾಟಲು - ಅವುಗಳಿಗೆ ನಾನೇನು ಹೇಳಲಿ? ನಕ್ಕು ಬಿಡುತ್ತೇನೆ.

ನನ್ನೊಂದಿಗೆ ನಿಂತು ಪತ್ರಿಕೆಗಾಗಿ ಬಡಿದಾಡಿದವರನ್ನು ಮರೆಯಲು ಸಾಧ್ಯವೇ? ನನ್ನ ವರದಿಗಾರರ ಮಾತು ಬಿಡಿ. ಅವರಿಗೆ ನಾನು ಅರ್ಧಪ್ರಾಣ ಕೊಟ್ಟರೂ ಅದು ಕಡಿಮೆಯೇ. ಅವರ ಕುರಿತು ಮುಂದೆ ಬರೆಯುವುದಿದೆ. ಆದರೆ ಪತ್ರಿಕೆಯ ಪ್ರತಿಗಳನ್ನು ಎಣಿಸಿದವರು, ಅವುಗಳ bundle ಕಟ್ಟಿದವರು, ಹಗಲಿರುಳು ಅನ್ನದೆ ಬಸ್‌ಸ್ಟ್ಯಾಂಡಿಗೆ, ರೈಲ್ವೆ ಸ್ಟೇಷನ್ನಿಗೆ ಹೊತ್ತವರು, ಬಸ್‌ಗಳಿಗೆ ಹೇರಿದವರು -ಅವರನ್ನೆಲ್ಲ ನಾನು ಮರೆಯಕೂಡದು. ಅವರ ತಾರುಣ್ಯದ ಒಂದು ಭಾಗವನ್ನು ‘ಪತ್ರಿಕೆ’ ತಿಂದಿದೆ. ಅವರಿಗೆ ಋಣಿ. “ಅವರಿಗೆ ಹಣ ಕೊಟ್ಟೆ: ಅವರು ಕೆಲಸ ಮಾಡಿದರು" ಅಂದು ಬಿಡಬಹುದು. ಆದರೆ ಒಂದು ಕಾಲದಲ್ಲಿ ಹಳೇ ಪತ್ರಿಕೆ ಹಾಸಿಕೊಂಡು bus standನಲ್ಲಿ ಮಲಗಿದವನು ನಾನು. ಆ ಮಾತು ಹೇಗನ್ನಲಿ? I love them.

-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 05 April, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books