Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅವರೆದುರು ನಾನು ಚಿಕ್ಕವನಾಗಿ ಬಿಟ್ಟಿದ್ದೇನೆ: ನಾನು ಏನು ಮಾಡಲಿ?

ಆಯ್ತಲ್ಲ, ಇನ್ನೇನು? I am free now-ಎಂಬ ಭಾವ ನನ್ನಲ್ಲಿನ್ನೂ ಸ್ಥಿರವಾಗಿ ಬೆಳೆದು ನಿಂತಿಲ್ಲ. ಬೆಳೆದು ಬಿಡೋದು ತುಂಬ easy. ಕೆಲವು ಸಲ ಹಾಗಾಗುತ್ತೆ. ಯಾವುದಾದರೂ ಊರಿಗೆ ಹೋಗೋಣ ಅಂದುಕೊಂಡ ತಕ್ಷಣ, ನಾವಿನ್ನೂ ಸೂಟ್‌ಕೇಸ್ ರೆಡಿ ಮಾಡಿಕೊಳ್ಳೋಕೆ ಮುಂಚೇನೇ, ಮನಸ್ಸು ಹೊರಟು ನಿಂತು, ಅರ್ಧ ದಾರಿ ಕ್ರಮಿಸಿ ಬಿಡುತ್ತೆ. ಮೂಲತಃ emotional ಆದ ನನಗೆ ಆ ಥರದ possibility ಮತ್ತು ಅಪಾಯ ಖಂಡಿತ ಇದೆ. ಆದರೆ ಈ ಸಲ ತುಂಬ meticulous ಆಗಿದ್ದೇನೆ. ತುಂಬ practical ಆಗೂ ಇದ್ದೇನೆ. ಏಕೆಂದರೆ, ನನ್ನ ನಿರ್ಧಾರದ ಪರಿಣಾಮ ನನಗೆ ಗೊತ್ತು. ಅದನ್ನ ಆಧರಿಸಿರೋ ಕೆಲವು ಜೀವಗಳಿವೆ. ನನ್ನಿಂದಾಗಿ ಯಾರೂ ತೊಂದರೆಗೊಳಗಾಗಬಾರದು, ಅಲ್ವೆ?

ನೋಡಿ, ಇದು ತುಂಬ ಹಿಂದಿನ ಮಾತು. ಆಗಷ್ಟೆ ‘ಹಾಯ್ ಬೆಂಗಳೂರ್!’ ಆರಂಭವಾಗಿ ಸ್ವತಃ ನಾನೇ ಹೌಹಾರುವಂತಹ ಯಶಸ್ಸು ಕಂಡಿತ್ತು. ಅಂದಾಜು, ಪತ್ರಿಕೆ ಆರಂಭಿಸಿ ಆರು ತಿಂಗಳಾಗಿದ್ದಿರಬಹುದು. ಅಂದರೆ, ನನಗೆ ಈ ಡಯಾಬಿಟಿಸ್ ಎಂಬ ಪ್ರಾರಬ್ಧ ಗಂಟುಬಿದ್ದು ಎರಡು ವರ್ಷಗಳಾಗಿದ್ದವು. ಅದೊಂದು ಮುಂಜಾನೆ ಎದ್ದು ಕುಳಿತವನಿಗೆ ಅದು ನೆನಪಾಗಿ, ಇದನ್ನು neglect ಮಾಡಬಾರದು ಅಂತ ತೀರ್ಮಾನಿಸಿ ಹತ್ತಿರದಲ್ಲೇ ಇರುವ ಡಯಾಬಿಟಾಲಜಿಸ್ಟ್ ಒಬ್ಬರ ಬಳಿಗೆ ಹೋದೆ. ನೋಡಲಿಕ್ಕೆ ಆತ ಕೊಂಚ funnyಯಾಗೇ ಇದ್ದ. ಚಿಕ್ಕಪುಟ್ಟ testಗಳಾದ ಮೇಲೆ, “ನೀವು walk ಮಾಡಲೇ ಬೇಕು" ಅಂದ. “ಡಾಕ್ಟ್ರೇ, ಅದರದೊಂದೇ ಸಮಸ್ಯೆ. ನಾನು walk ಮಾಡೋದು practically ಕಷ್ಟ. ಒಂದೋ, ನನ್ನನ್ನು ಇಷ್ಟಪಡೋ ಓದುಗರು ದಾರೀಲಿ ಸಿಕ್ಕು ಮಾತಿಗೆಳೆದು ಬಿಡ್ತಾರೆ. Walkingಗಿಂತ talking ಜಾಸ್ತಿ ಆಗಿಬಿಡುತ್ತೆ. ಎರಡನೇದು, ನನ್ನ security problem. ಶತ್ರುಗಳು ಸಾಕಷ್ಟಿದ್ದಾರೆ. ನಾನಿನ್ನೂ ರಿವಾಲ್ವರ್ ಥರದ್ದನ್ನೇನೂ ತಗೊಂಡಿಲ್ಲ. As a journalist, ನಂಗೆ walk ಮಾಡೋದು ಕಷ್ಟ ಆಗುತ್ತೆ..." ಅಂದೆ. ಎಂಥ ರೀತಿಯ journalist ನೀವು ಅಂತ ಕೇಳಿದ. “ಹೀಗೆ, ಪತ್ರಿಕೆ ಮಾಡಿದೀನಿ" ಅಂದೆ. “ಹೌದಾ? ನೀವು ಇವಾಗಲೇ ಪತ್ರಿಕೇನ ಮುಚ್ಚಿ ಬಿಡಿ. ಪತ್ರಿಕೆ ಮುಚ್ಚಿ, ಪ್ರತೀ ದಿನ walk ಮಾಡಿ" ಅನ್ನೋದಾ? ಇವನೊಳ್ಳೆ ಡಾಕ್ಟ್ರು ಗಂಟುಬಿದ್ನಲ್ಲಾ ಅಂದುಕೊಂಡು, ಕೈ ಕುಲುಕಿ ಎದ್ದು ಬಂದು ಬಿಟ್ಟೆ. ಇರುವ ಪರಿಸ್ಥಿತಿಯಲ್ಲೇ ಚಿಕಿತ್ಸೆ ಮಾಡಿ, ಪಾಲಿಸಲು ಆಗುವಂಥ ಪಥ್ಯ ಹೇಳಿ ಕಳಿಸಬೇಕು ಡಾಕ್ಟರುಗಳು ಎಂಬ ಸಿದ್ಧಾಂತ ನನ್ನದು. ಮುಂದೆ ಆತನನ್ನ ನಾನು ಭೇಟಿ ಮಾಡಲೇ ಇಲ್ಲ. “ನಿಮ್ಮಂಥ ರೋಗಿಗಳೇ ಹಾಗೆ. ನಿಮಗೆ ಹೆಂಗೆ ಬೇಕೋ ಹಂಗೆ treat ಮಾಡೋ ಡಾಕ್ಟರು ಬೇಕು. ಒಂದೋ, ನೀವು ಔಷಧಿ ಬದಲಾಯಿಸ್ತೀರಿ. ತಪ್ಪಿದರೆ ಡಾಕ್ಟರನ್ನೇ ಬದಲಾಯಿಸ್ತೀರಿ!" ಅಂತ ಗೇಲಿ ಮಾಡಿದ್ದು ಮೈಸೂರಿನ ಡಾ.ಶಾಂತಲಾ. ಅವರು ಅಂದದ್ದು ಬಹಳ ಸತ್ಯ. ಈಗೊಂದಷ್ಟು ತಿಂಗಳುಗಳೇ ಆದವು: ನಾನು ಡಾಕ್ಟರ್ ಬಳಿಗೆ ಹೋಗಿಯೇ ಇಲ್ಲ. ಅದಕ್ಕೇನೂ ನಿಶ್ಚಿತ ಕಾರಣವಿಲ್ಲ. ಹೋಗಿಲ್ಲ ಅಷ್ಟೆ. ಇರುವಲ್ಲೇ ರಕ್ತ ಪರೀಕ್ಷೆ ಮಾಡಿಕೊಳ್ಳುತ್ತೇನೆ. ಔಷಧಿಯನ್ನ ನನಗೆ ತಿಳಿದಂತೆ ಬದಲಾಯಿಸಿಕೊಳ್ತೇನೆ. ಉದ್ಧಟ ನಾನು. Must do ಅಂತ ಒಂದು ಪಟ್ಟಿ ಮಾಡುತ್ತೇವಲ್ಲ? ಅದರಲ್ಲಿ, ‘meet the doctor’ ಅಂತ ಪಟ್ಟಿಯ ಮೊದಲ ಸಾಲಿನಲ್ಲೇ ಬರೆದಿಟ್ಟುಕೊಂಡಿದ್ದೇನೆ. ಆದರೆ meet ಮಾಡಿಯೇ ಇಲ್ಲ.

ಅದಿರಲಿ, ಹತ್ತೊಂಬತ್ತೂವರೆ ವರ್ಷಗಳ ಹಿಂದೆ ಆ ಹನುಮಂತನಂಥ ಡಾಕ್ಟರ್‌ನ ಮಾತು ಕೇಳಿ ‘ಪತ್ರಿಕೆ’ ಮುಚ್ಚಿಬಿಟ್ಟಿದ್ದಿದ್ದರೆ ಡಯಾಬಿಟಿಸ್ ಎಂಬ ಪ್ರಾರಬ್ಧ ಹೇಗಿರುತ್ತಿತ್ತೋ, ಗೊತ್ತಿಲ್ಲ. ಉಪವಾಸಬಿದ್ದು ನಾನಂತೂ ಸತ್ತಿರುತ್ತಿದ್ದೆ. ನಿವೇದಿತಾ ಅದನ್ನ ಈಗಲೂ ನೆನಪಿಸಿ ನಗುತ್ತಿರುತ್ತಾಳೆ. ತೀರ ಅಳತೆಮೀರಿ ಸಕ್ಕರೆ ರೋಗ ಬೆಳೆದು ಕಣ್ಣೋ, ಕಾಲೋ ಕಳೆದುಕೊಳ್ಳುವಷ್ಟು ಹುಂಬ ನಾನಲ್ಲ. ಕೊಂಚ ಗಾಬರಿಯಾದರೂ ಫೋನ್ ಮಾಡಿ laboratoryಯವರನ್ನು ಕರೆಸಿ, ಅಗತ್ಯವಾದ ಪರೀಕ್ಷೆಗಳನ್ನು ಮಾಡಿಸಿ, ತಗೋ ಬೇಕಾದ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡು ಬಿಡುತ್ತೇನೆ. ಸಕ್ಕರೆ ರೋಗ ಬಂದಿರಲಿ ಬಿಟ್ಟಿರಲಿ: ನಾನು ಖಂಡಿತ ಕೆಲವು ಸುಖ-ಸೌಖ್ಯಗಳನ್ನ ಕಳೆದುಕೊಂಡಿದ್ದೇನೆ. ಒಬ್ಬ ದಿನಗೂಲಿಯವನು ಕೂಡ ತನ್ನ ಹೆಂಡತಿಯನ್ನ ಕರೆದುಕೊಂಡು ಹೊಟೇಲಿಗೋ, ಧಾಬಾಕ್ಕೋ ಹೋಗಿ ತನಗೆ ಇಷ್ಟ ಬಂದುದನ್ನು ತಿಂದು ಬಂದಿರುತ್ತಾನೆ. ರಸ್ತೆ ಬದಿಯಲ್ಲಿ ನಿಂತು ಪಾನಿಪುರಿ ತಿನ್ನೋರನ್ನು ನೋಡಿದಾಗೆಲ್ಲ ಅನ್ನಿಸುತ್ತದೆ: I am not that lucky. ತೀರ ಫುಡೀ ಅಲ್ಲ ನಾನು. ಆದರೆ ನಮ್ಮ ಪುಸ್ತಕ ಮಳಿಗೆಗೆ ಅನತಿ ದೂರದಲ್ಲಿರುವ food streetಗೆ ಹೋಗಿ ಬಿಸಿಯಾಗಿ ಇಡ್ಲಿ ತಿಂದು ಬರೋ ನಸೀಬು ನನಗಿಲ್ಲ. ಇನ್ನೇನೋ ಅಪಾಯ ಆಗಿ ಬಿಡುತ್ತೆ ಅನ್ನುತ್ತಿಲ್ಲ ನಾನು. ಅವರಿವರಂತೆ ಒಂದು privacy ನಂಗೆ ಸಿಕ್ಕುವುದಿಲ್ಲ.

ಈ ತೆರನಾದ ಸ್ವಾತಂತ್ರ್ಯ ಹರಣ once again, ಡಯಾಬಿಟಿಸ್‌ನಂಥ ಪ್ರಾರಬ್ಧಗಳನ್ನ encourage ಮಾಡುತ್ತದೆ. ಸಂತಸದ ಸಂಗತಿಯೆಂದರೆ ನನ್ನ ಬ್ಲಡ್ ಪ್ರೆಷರ್ (B.P.) ನಿಯಂತ್ರಣದಲ್ಲಿದೆ. ಲಂಕೇಶ್ ಇದೇ ಕಾರಣದಿಂದಾಗಿ ಒಂದು ಕಣ್ಣು ಕಳೆದುಕೊಂಡರು. ನೆನೆಸಿಕೊಂಡರೆ ಭಯವಾಗುತ್ತದೆ. ಅವರಿಗೆ ಮಧುಮೇಹ ಮತ್ತು ರಕ್ತದ ಒತ್ತಡ ಎರಡೂ ಇದ್ದವು. ಒಂದು stroke ಆಯ್ತು. ಕಣ್ಣು ಆಗಲೇ ಹೋಯಿತು. ಅವರಿಗೆ ಕೊಂಚ ಮಟ್ಟಿಗೆ ವಯಸ್ಸಾದರೂ ಆಗಿತ್ತು. ನಮ್ಮ ಉದಯಗೆ ಏನು ಮಹಾ ವಯಸ್ಸಾಗಿತ್ತು ಹೇಳಿ? ಅವನು ನನಗಿಂತ ಚಿಕ್ಕವನು. ಐವತ್ತರ ಗಡಿಯಷ್ಟೆ ದಾಟಿದ್ದ. ಆದರೆ ಬಿ.ಪಿ. ಶುರುವಾಗಿ ಬಿಟ್ಟಿತಲ್ಲ. ಅವನು ತಕ್ಷಣ ಎಚ್ಚೆತ್ತುಕೊಂಡು ಕುಡಿಯೋದನ್ನ ನಿಲ್ಲಿಸಿದ್ದ. ಒಟ್ಟಿಗೇ ಕುಳಿತು ಸಾಲು ಸಾಲು ಬಾಟಲು ಧ್ವಂಸ ಮಾಡಿದವರು ನಾವು. ಅಂಥವನು B.P. ಶುರುವಾದ ಮೇಲೆ ಪೂರ್ತಿಯಾಗಿ ಕುಡಿತ ನಿಲ್ಲಿಸಿದ. ಆ ಪರಿ ಧಾರಾಕಾರ ಸಿಗರೇಟು ಸೇದುತ್ತಿದ್ದನಲ್ಲ? ಅದನ್ನು ‘ದಿವಸಕ್ಕೆ ಒಂದೇ ಒಂದು’ ಎಂಬ ಮಟ್ಟಿಗೆ ನಿಯಂತ್ರಿಸಿದ. “ಹೊಟ್ಟೆಕಿಚ್ಚಾಗುತ್ತೆ ನೋಡು ಉದಯ. ಬಿಡೋದು ಹಾಗಿರಲಿ: ಸಿಗರೇಟು ಕಡಿಮೆ ಮಾಡೋಕೂ ನನ್ನ ಕೈಲಿ ಆಗುತ್ತಿಲ್ಲ" ಅನ್ನುತ್ತಿದ್ದೆ. ಅದೊಂದು ರಾತ್ರಿ ತುಂಬ ಹೊತ್ತು ಓದಿ ಮಲಗಿದ್ದೆ. ಬೆಳಿಗ್ಗೆ ತಡವಾಗಿ ಎದ್ದು ಛೇಂಬರಿನಿಂದ ಹೊರಬರುತ್ತಿದ್ದಂತೆಯೇ ನಮ್ಮ ಅಕೌಂಟ್ಸ್ ವಿಭಾಗದ ರವಿಕುಮಾರ್ ಬಂದು “ಬಾಸ್, ಉದಯ ಮರಕಿಣಿಯವರಿಗೆ stroke ಆಗಿದೆಯಂತೆ" ಅಂದ. I was shattered. ಅವನದು stroke ಆಗಬಹುದಾದ ವಯಸ್ಸು ಅಲ್ಲವೇ ಅಲ್ಲ. ಸುಮಾರು ದಿನಗಳ ತನಕ ಉದಯ ಆಸ್ಪತ್ರೆಯಲ್ಲಿದ್ದ. ಅನೇಕ ದಿನ ಅವನಿಗೆ ಸ್ಪೀಚ್ ಥೆರಪಿ ಕೂಡ ಮಾಡಿಸಿದರು. ಇನ್ನಾದರೂ ಬಾಯಿ ಬಂದಿಲ್ಲ. ಅಷ್ಟೇಕೆ, ನನ್ನಲ್ಲಿ ಸಹಾಯಕನೊಬ್ಬನಿದ್ದ: ಕಾಕಾ ಅಂತ. ಅವನಿಗೆ stroke ಆಗಿ ವರ್ಷದ ಮೇಲೇ ಆಗಿದೆ. ಬಾಯಿ ಬಂದಿಲ್ಲ. ವಿಪರೀತ ಅಳುತ್ತಾನೆ. ಇದಕ್ಕಿಂತ ಸಾವೇ ಒಳ್ಳೇದು ಎಂಬ ಪರಿಸ್ಥಿತಿ. ನನ್ನ ‘ಅಭಿಮಾನಿ’ ಪತ್ರಿಕೆಯ ಒಬ್ಬ ಸಹೋದ್ಯೋಗಿ ದಿವಾಕರ್ ಅಂತ ಇದ್ದ. ಕೈಗೆ ದುಡ್ಡು ಬಂದರೆ ಇಡೀ ಆಫೀಸನ್ನ ಒಯ್ದು ಗುಂಡು ಹಾಕಿಸುತ್ತಿದ್ದ. ಅಂಥವನಿಗೆ stroke ಆಯಿತು. ‘ಚೂರು ಖರ್ಚಿಗಾದರೂ ಕೊಡು’ ಅಂತ ಆಫೀಸಿನ ಬಾಗಿಲಿಗೆ ಬಂದು ಕೇಳುತ್ತಿದ್ದ. ಇತ್ತೀಚೆಗೆ ಅವನು ಬಂದಿಲ್ಲ. ಏನಾದನೋ?

ಅಷ್ಟೇಕೆ, ಒಂದು ಅಳತೆ ತನಕ ಅಬ್ಬರಿಸಿ ಮೆರೆದ ಪತ್ರಕರ್ತ ವೈಕುಂಠರಾಜು ಏನಾಗಿಬಿಟ್ಟರು. ಯಥಾಪ್ರಕಾರ ಷುಗರು. ಅದರಲ್ಲೇ ಅವರು ಗತಿಸಿ ಹೋದರು. ಅವರಿಗಿಂತ ಅಸಾಯಕ ಸ್ಥಿತಿ ಅವರ ಮಗನಿಗೆ ಬಂತು. ಅದೇ ಷುಗರು. ಒಂದು ಕಾಲು ಕತ್ತರಿಸಿ ತೆಗೆದರು. ಅವನು ಒಬ್ಬಂಟಿಯಾಗಿ ಒಂದೆಲ್ಲೋ flatನಲ್ಲಿದ್ದವನು ಅಲ್ಲೇ ತೀರಿ ಹೋದ. ನನಗಿಂತ ಅವನು ಸಾಕಷ್ಟು ಚಿಕ್ಕವನು. “ತಿಂಗಳಿಗೆ ಆರು ಸಾವಿರ ರುಪಾಯಿ ಸಂಬಳ. ಕೂತ್ಕೊಳ್ಳೋಕೆ ಒಂದು ಕುರ್ಚಿ, ಟೇಬಲ್ಲು. ಅದಷ್ಟು ಕೊಡು. ಕೇವಲ ಬೆಂಗಳೂರಿಗೆ ಅಂತಲೇ ಒಂದು ವಾರ ಪತ್ರಿಕೆ ಮಾಡೋಣ. ಚೆನ್ನಾಗೇ ನಡೀಬಹುದು ಸನತ್..." ಅಂತ ಕೇಳೋ ಹೊತ್ತಿಗೆ ಅವತ್ತು ನನ್ನ ಜೀವ ಬಾಯಿಗೆ ಬಂದ್ಹೋಗಿತ್ತು. ಅವನು ಸನತ್ ಕುಮಾರ್. ಅದೇ ಹಿರಿಯ ಪತ್ರಕರ್ತ ವೈಕುಂಠರಾಜುರವರ ಮಗ. “ರವೀ, ಬೇಕಾದ್ರೆ ಹೇಳು. ಇನ್ನೂ ಒಂದು ಪೆಗ್ ರಮ್ ಆರ್ಡರ್ ಮಾಡ್ತೀನಿ. ಯಾಕೆ ಸುಮ್ನೆ ತಲೆ ತಿಂತೀಯ?" ಅಂದಿದ್ದ ಸನತ್ ಕುಮಾರ್. ಅವನು ಅಕಸ್ಮಾತ್ ಒಪ್ಪಿ ಬಿಟ್ಟಿದ್ದಿದ್ದರೆ ಇವತ್ತು ಇದೇ ‘ಹಾಯ್ ಬೆಂಗಳೂರ್!’ಗೆ ಅವನು ಒಡೆಯ. ನಾನು ಆ ಮುರುಕು ಕುರ್ಚಿಯಲ್ಲಿ ಕುಳಿತು ಬರೆಯುತ್ತಿದ್ದ ಪತ್ರಕರ್ತ.

ಕೇವಲ ದುರಭ್ಯಾಸಗಳು ಪತ್ರಕರ್ತರನ್ನು ಕೊಂದಿಲ್ಲ. ಹಾಗಂತ, ಕೈ ತುಂಬ ದುಡ್ಡು ಮಾಡಿದೋರು ಸತ್ತಿದ್ದಾರೆ ಅಂತ ಅನ್ನುವಂತಿಲ್ಲ. ನಮ್ಮನ್ನು ನಮ್ಮದೇ ಆದ life style ಹಣಿದು ಬಿಡುತ್ತದೆ. ಅಂಥ ಚಟ ಸಾರ್ವಭೌಮ ಬಾಲಕೃಷ್ಣ ಕಾಕತ್ಕರ್ ಇಡೀ ದೇಹ ತೂತು ಬೀಳುವಂಥ ಸ್ಥಿತಿ ತಲುಪಿ ಅದೊಂದು ದಿನ ತೀರಿಕೊಂಡು ಬಿಟ್ಟ. ಅವನನ್ನು ಬೇರೆ ಯಾರೂ ಕೊಲ್ಲಬೇಕಿರಲಿಲ್ಲ. He was capable of killing himself. ಅವನು ತೀರ ಕೊನೆಗಾಲದಲ್ಲಿ ಕುಡಿತ ಬಿಟ್ಟ. ಒಂದಷ್ಟು ಮುಂಚೆಯಾದರೂ ಬಿಟ್ಟಿದ್ದಿದ್ದರೆ ಅವನ ಹೆಂಡತಿಯಾದರೂ ಬದುಕಿಕೊಳ್ಳುತ್ತಿದ್ದಳು. ಪಾಪಿ, ಅವಳನ್ನು ಕಾಡಿ ಕಾಡಿ ಕೊಂದುಬಿಟ್ಟ. “ಅಲ್ಲಮ್ಮಾ, ತೀರ ಹಾಗೆ ಒಬ್ಬಂಟಿಗನನ್ನಾಗಿ ಮಾಡಿ ನೀನು ಬಿಟ್ಟು ಹೋದೆಯಲ್ಲ? ಅವನ ಗತಿ ಏನು? ನಿನ್ನೆ ವಿಪರೀತ ಕುಡಿದು ಆ ಡ್ರೈವರ್‌ನ shoot ಮಾಡಿಬಿಟ್ಟಿದ್ದಾನೆ..." ಅಂದೆ. “ಅಣ್ಣಾ, ನಾನು ಬಿಟ್ಟು ಬರದೆ ಹೋಗಿದ್ದಿದ್ರೆ, ಆ driver ಜಾಗದಲ್ಲಿ ನಾನಿರ‍್ತಿದ್ದೆ. ಅವನು ಪಾಪ ಬದುಕಿ ಉಳಕೊಂಡ!" ಅಂದಿದ್ದಳು ರಶ್ಮಿ. ಅದು ಕಾಕತ್ಕರ್‌ನ ಜೀವನದ ದುರಂತ. ಹೆಚ್ಚು ಕಡಿಮೆ ಅವನಿಗೆ ನನ್ನದೇ ವಯಸ್ಸು. ಕೇಳೋರಿಲ್ಲದ ಸ್ಥಿತಿಯಲ್ಲಿ ಅವನು ಸತ್ತು ಹೋದ.

ಬರೆಯಲು ಕುಳಿತರೆ ಇಂಥ ದುರಂತ ಜೀವನಗಳದೊಂದು ಪುಸ್ತಕವನ್ನೇ ಬರೆದೇನು. ಪತ್ರಕರ್ತರು ನಾವು. ಟೈಮಿಗೆ ಸರಿಯಾಗಿ ತಿನ್ನೋದಿಲ್ಲ. ತಿನ್ನಬಾರದ್ದೇ ತಿನ್ನುತ್ತೇವೆ. Walk ಮಾಡೋದಿಲ್ಲ. ಕೇವಲ ಡಾಕ್ಟರನನ್ನ ಬದಲಾಯಿಸುತ್ತೇವೆ. ನಾನಂತೂ ಮನೆಗೇ ಹೋಗಿಲ್ಲ. ಮನೆಯಿಂದ ಬರೋ ಡಬ್ಬಿ ಉಣ್ಣುತ್ತೇನೆ. “ಬೇಕಾದ್ರೆ ರವೀ, ಲಿಮಿಟ್ಟಾಗಿ ಎರಡು ಪೆಗ್ ವಿಸ್ಕಿ ತಗೊಳ್ಳಿ. ಅದನ್ನ ಪ್ರತೀದಿನ ತಗೊಳ್ಳಿ. ಆದರೆ ಈ ಸಿಗರೇಟಿದೆಯಲ್ಲ? ಅದನ್ನ ಬಿಟ್ಟು ಬಿಡಿ" ಅನ್ನುತ್ತಾರೆ ವೈದ್ಯ ಮಿತ್ರರು. ‘ಲಿಮಿಟ್ಟಾಗಿ’ ಕುಡಿಯೋದು ಸಾಧ್ಯವಾ? ಸಾಧ್ಯವಾಗಿದ್ದಿದ್ದರೆ, ಎರಡು ಪೆಗ್‌ಗಳಿಗಾಗಿ ಅದ್ಯಾವನು ಕುಡೀತಾನೆ? ಅದರ ಸಹವಾಸವೇ ಬೇಡ ಅನ್ನಿಸಿ, ನಾನು ಬಿಟ್ಟುಬಿಟ್ಟಿದ್ದೇನೆ. ಮೊನ್ನೆ ಫೆಬ್ರುವರಿ ಇಪ್ಪತ್ತಕ್ಕೆ ಕುಡಿತ ನಿಲ್ಲಿಸಿದ್ದರ ವಾರ್ಷಿಕೋತ್ಸವ ಆಚರಿಸಿದೆ: ಹೊಟ್ಟೆ ತುಂಬ ನೀರು ಕುಡಿದು.

ಬಿಡಿ, ಇದೆಲ್ಲ ಸೇರಿಸಿ ಹೇಳುವುದಾದರೆ ನಾನು ಇಂಥದರಲ್ಲೇ ನನ್ನ ತಾರುಣ್ಯ ಗತಿಸಿ ಹೋಗುವಂತೆ ಮಾಡಿಕೊಂಡೆ. ಒಂದಷ್ಟು ಬರೆದೆನೆಂಬುದು ಸತ್ಯ. ಅದು ‘ಪತ್ರಿಕೆ’ಗೆ ಬರೆದದ್ದಷ್ಟೇ ಅಲ್ಲದೆ ಬೇರೆ ಬರಹಗಳನ್ನೂ ಬರೆಯಲು ಸಾಧ್ಯವಾಯಿತು. ಕೇವಲ ಮೂರು ಅಥವಾ ನಾಲ್ಕು ದಿನದೊಳಗಾಗಿ ಒಂದಿಡೀ ಪುಸ್ತಕವನ್ನೇ ಬರೆದು ಇತಿಹಾಸ ಸೃಷ್ಟಿಸಿದವನು ನಾನು. I write like a machine. But I am master stylist. ಸುಮ್ನೆ ಹೇಳ್ಕೋತೇನೆ ಅನ್ನಬೇಡಿ. ನನ್ನ ಶೈಲಿ ಎಂಥದೆಂಬುದನ್ನು ನಾನು ಚೆನ್ನಾಗಿ ಬಲ್ಲೆ. ಉಳಿದಂತೆ, ಕೆಲವೆಲ್ಲ ಸಾಧಿಸಲು ನನ್ನಿಂದ ಈ ಇಪ್ಪತ್ತು ವರ್ಷಗಳಲ್ಲಿ ಸಾಧ್ಯವಾಗಿದೆ. ನನ್ನ ಬರವಣಿಗೆಯ ಜೊತೆಯಲ್ಲೇ ಅನೇಕ ದಿನಗಳ ತನಕ ‘ಕ್ರೈಂ ಡೈರಿ’ ಮಾಡಿದೆ. ಮೊನ್ನೆ ಅದ್ಯಾವುದೋ ಟೀವಿಯಲ್ಲಿ ಹುಡುಗನೊಬ್ಬ ಮಾತನಾಡುವುದು ಕೇಳಿಸಿತು. ‘ನಿಮ್ಮದೇ ಅನುಕರಣೆ ಅಂತ ಜೊತೇಲಿದ್ದವರು ಅಂದರು. ಅದಕ್ಕೆ ನಾನೇನೂ ಉಬ್ಬಿ ಹೋಗಿಲ್ಲ. ಒಬ್ಬರ ಕಿಸೆಯೊಳಗೆ ಮತ್ತೊಬ್ಬರ ಕೈ! ‘ಕ್ರೈಂ ಡೈರಿ’ ಕಾರ್ಯಕ್ರಮ ನನ್ನ ಅಂದಾಜು ಮೀರಿ ನನಗೆ ಹಣ ತಂದು ಕೊಟ್ಟಿತು.

ಮನಸಿಗೆ ಸಂತಸ ಕೊಟ್ಟದ್ದು ಮಾತ್ರ ‘ಈ ಟೀವಿ’ಗೆ ಮಾಡಿದ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮ. ‘'You do it really well'' ಅಂದಿದ್ದರು ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ. ನಾವಿಬ್ಬರೂ ಪಾಕಿಸ್ತಾನದ ಹೊಟೇಲೊಂದರಲ್ಲಿ ಕುಳಿತು ಮಾತನಾಡುತ್ತಿದ್ದೆವು. Once again, ಪತ್ರಿಕೋದ್ಯಮದ ಈ ಧಕ್ಕಡಿಯ ಮಧ್ಯೆಯೇ ನಾನು ಒಂದಷ್ಟು ದೇಶ ಸುತ್ತಿ ಬಂದೆ. ಇನ್ನೊಂದೆರಡು ಸಲ ಹೋಗಿ ಬಿಟ್ಟರೆ ಆ ಪಾಪಿ ಪಾಕಿಸ್ತಾನದವರು ನನಗೆ ತಮ್ಮ citizenshipನೇ ಕೊಟ್ಟು ಬಿಡುತ್ತಿದ್ದರೇನೋ? ನಮ್ಮಲ್ಲಿ ಅನೇಕರು ವಿದೇಶಗಳಿಗೆ ಹೋಗಿ ಬರುತ್ತಾರೆ. “ಅಲ್ಲಿ ಮಸಾಲೆ ದೋಸೆ ಸಿಗುತ್ತೆ. ತೊಗರಿ ಬೇಳೆ ಸಿಗುತ್ತೆ. ಅವಳ್ಯಾವಳೋ ನಮ್ಮ ಸ್ಮಾರ್ತ್ರರ ಹೆಂಗಸು ಬಂದು ಇಲ್ಲಿ ದೋಸೆ ಹುಯ್ಯೋ ಹೋಟ್ಳು ಮಾಡಿದಾಳೆ" ಎಂಬಂಥ ಬರಹ ಬರೆಯುತ್ತಾರೆ. ಎಲ್ಲಿ, ಅವರ ಕೈಲಿ ಒಂದೇ ಒಂದು ‘ ಮುಸ್ಲಿಂ’ ತರಹದ ಬರಹ ಬರೆಸಿ ನೋಡಿ? ನನಗಿನ್ನೂ ಇಸ್ರೇಲ್ ಬಗ್ಗೆ ಬರೆಯುವುದಕ್ಕಿದೆ. ‘'That will be another different writing.

ಅಂಥ ಅನೇಕ ಬರಹಗಳು ಬಾಕಿ ಇವೆ. ಇನ್ನೊಂದು ‘ಹಿಮಾಲಯನ್ ಬ್ಲಂಡರ್’ ಬರೆಯಲಿಕ್ಕಿದೆ. ನನಗೆ ಉಳಿದೆಲ್ಲ ಉಪ್ಪರಿಗೆಗಳಿಗಿಂತ ಈ ಆಫೀಸು ಆಪ್ತ. ‘ಬಾಸ್, ನಿಮಗೆ ಈ ಆಫೀಸು ಒಂಥರಾ ಶಕ್ತಿ ಪೀಠ ಇದ್ದಂಗೆ... ಅಲ್ವಾ?" ಅನ್ನುತ್ತಿರುತ್ತಾಳೆ ನಿವಿ. ಇದ್ದೀತು. ಇದು ಶಕ್ತಿ ಪೀಠವೇ ಇದ್ದೀತು. “ಜವಾಬ್ದಾರಿ ನಮಗೆ ಕೊಡಿ. ನಾವೇ ಬರೀತೇವೆ. ನೀವು ನಿಮ್ಮ ಒಂದೆರಡು ಅಂಕಣ ಕೊಡಿ. ಪತ್ರಿಕೆಯನ್ನ ಅದಷ್ಟರ ಮೇಲೆಯೇ ನಡೆಸಿಕೊಂಡು ಹೋಗೋಣ" ಅಂದವನು ನನ್ನ ಪ್ರೀತಿಯ ವರದಿಗಾರ ಲೋಕೇಶ್ ಕೊಪ್ಪದ್. ಅವನೂ ಸೇರಿದಂತೆ ನಮ್ಮ ಕೆಲವು ಹುಡುಗರು ಇವೇ ಇಪ್ಪತ್ತು ವರ್ಷಗಳಲ್ಲಿ ಸಾಕಷ್ಟು train up ಆಗಿದ್ದಾರೆ. They are very capable. ಆದರೆ ನನಗದು ಸಮ್ಮತವಾಗೋ ಸಂಗತಿಯಲ್ಲ. ಎಲ್ಲವನ್ನೂ ನಾನೇ ಮಾಡಬೇಕೆಂಬ ಹಟ. ಇದೇ ಲೋಕೇಶ್ ಕೊಪ್ಪದ್ ಕೈಗೆ ಕೊಟ್ಟರೆ ಇವನು ನಿರಾತಂಕವಾಗಿ ‘ಪತ್ರಿಕೆ’ ನಡೆಸಿಕೊಂಡು ಹೋಗಬಲ್ಲ. ಆದರೆ ಉಹುಂ, ನನಗದು ಸಮ್ಮತವಲ್ಲ. ನನ್ನ ಮಕ್ಕಳಿಗೂ ಅದನ್ನೇ ಹೇಳಿದ್ದೇನೆ. ಉಳಿದದ್ದೆಲ್ಲ ಖರೆ: ಆದರೆ ‘ಪತ್ರಿಕೆ’ಗೆ ವಾರಸುದಾರರಿರುವುದಿಲ್ಲ. ಯಾವ ಕಾರಣಕ್ಕೂ ಈ ಕಡೆ ಬರಬೇಡಿ. ಉಳಿದೆಲ್ಲಕ್ಕೂ ನೀವು ವಾರಸುದಾರರು. ಮನೆ, ಕಾರು, ಡಯಾಬಿಟೀಸು ಇತ್ಯಾದಿ. ಆದರೆ ‘ಹಾಯ್ ಬೆಂಗಳೂರ್!’ಗೆ ಅಲ್ಲ. ಬೇರೆ ಬೇಕಾದ್ದು ಮಾಡಿ. ಇದರ ತಂಟೆಗೆ ಬರಬೇಡಿ ಅಂತಲೇ ಹೇಳಿದ್ದೇನೆ.

ಮೊನ್ನೆ ಈ ನಿವೃತ್ತಿಯ ಬಗ್ಗೆ ಬರೆಯುತ್ತಿದ್ದಂತೆಯೇ ತಕರಾರುಗಳು ಶುರುವಾಗಿವೆ. ನನ್ನ ಏಜೆಂಟರು ಬಿಡಿ. ಅವರು “ಇದೊಂದು ಬಿಟ್ಟು ಬೇರೆ ಮಾತನಾಡಿ" ಅನ್ನುತ್ತಾರೆ. ನನ್ನ ಆತ್ಯಂತ ಪ್ರೀತಿಯ ಅಂಕಣಕಾರರು ಗದರಿಸುತ್ತಾರೆ. ಆದರೆ ಕೆಲವು ಓದುಗ ದೊರೆಗಳಿದ್ದಾರಲ್ಲ? ಅವರ ಪ್ರೀತಿಗೆ ಏನನ್ನಲಿ? “ಚೋದೀ ಮಗನೇ... ಕೂತು ಸುಮ್ನೆ ಬರಿ. ಪೇಪರ್ ಮಾಡು. ಇಲ್ದಿದ್ರೆ ಒದೆ ಕೊಡ್ತೀವಿ!" ಅನ್ನುವುದರಿಂದ ಹಿಡಿದು “ಇಪ್ಪತ್ತು ವರ್ಷ ಹೀಗೇ ಬರೆದೂ ಬರೆದೂ ಅಡಿಕ್ಷನ್ ಹುಟ್ಟು ಹಾಕಿದ್ದೀರಿ. ಈಗ ನಿಲ್ಲಿಸಿ ಬಿಡ್ತೇನೆ ಅಂದರೆ ಹೇಗೆ? ರವಿಯವರೇ, ನಮಗೆ ಎಲ್ಲ ಅರ್ಥವಾಗುತ್ತೆ. ಬೇರೆ ಏನೆಲ್ಲ ಬೇಕೋ ಅದನ್ನೆಲ್ಲ ಮಾಡಿ. ನಿಮ್ಮ ಆರೋಗ್ಯ ನೋಡಿಕೊಳ್ಳಿ. ನಿಮ್ಮ ಹವ್ಯಾಸಗಳನ್ನೂ ಉಳಿಸಿಕೊಳ್ಳಿ. ಆದರೆ ಪತ್ರಿಕೆ ನಿಲ್ಲಿಸಬೇಡಿ.." ಅನ್ನುವ ಸಹೃದಯಿ ಓದುಗ ದೊರೆಗಳೂ ಇದ್ದಾರೆ. ಅದನ್ನು ಕೇಳಿಸಿಕೊಂಡಾಗ ವಿಪರೀತ ಹಿಂಸೆಯಾಗುತ್ತದೆ. ಆ ದೊರೆಗಳಿಗೆ ಮುಖ ತೋರಿಸೋದಾದರೂ ಹೇಗೆ? ಅವರೂ ಸೇರಿದಂತೆ ಓದುಗ ದೊರೆಗಳೆಲ್ಲರೆದುರೂ ನಾನು ಚಿಕ್ಕವನಾಗಿದ್ದೇನೆ.

ನನಗೆ ಗೊತ್ತು. ಆದರೆ ಏನು ಮಾಡಲಿ?

-ನಿಮ್ಮವನು

ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 29 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books