Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನಿಯತ್ತು ಎಂಬ ಬೇಲಿ ಎಲ್ಲೆಲ್ಲಿ ಬಂದು ನಿಲ್ತದೆ ನೋಡಿ?

ಇದೊಂದು ಸಂಗತಿ.

ನಿಮ್ಮ ಕಿವಿಗೆ ಬೀಳೋದು ಸೂಕ್ತ ಅನ್ನಿಸಿತು. ಆದ್ದರಿಂದ ಈ ಬರಹ. ಕೆಲವೊಮ್ಮೆ ಒಂದು ಚಿಕ್ಕ ಊರಿನಲ್ಲಿ ಒಬ್ಬಾತ ಒಂದಷ್ಟು ಶ್ರೀಮಂತನಾಗುತ್ತಾನೆ: ಸಡನ್ ಆಗಿ. ತಕ್ಷಣ ಊರಿಗೆ ಊರೇ ಉದ್ಗರಿಸುತ್ತೆ: “ಅವ್ನು ಖೋಟಾ ನೋಟಲ್ಲೇ ದುಡಿದು ಬಿಟ್ಟ!" ಅವರೇನೂ ಆ ಶ್ರೀಮಂತನ ಮುಖಕ್ಕೆ ಹೇಳುವುದಿಲ್ಲ. ಇಂಥವುಗಳನ್ನು ನಂಬಿ, enjoy ಮಾಡಲೆಂದೇ ಒಂದಷ್ಟು ರಾಶಿ ಜನರಿರುತ್ತಾರೆ. ರೂಮರ್‌ಗೆ ಇರೋ ರುಚಿಯೇ ಅಂತಹುದು.

ನಿಮಗೆ ಗೊತ್ತಿರಲಿ: ಖೋಟಾ ನೋಟು ವಿಷಯದಲ್ಲಿ ಕೈ ಹಾಕಿ ಸುಟ್ಟುಕೊಂಡವರು ಕಡೆಗೆ, ಈ ರಾಷ್ಟ್ರದ ಸಂಗತಿ ಹಾಗಿರಲಿ: ಇಡೀ ಜಗತ್ತಿನಲ್ಲೇ ಎಲ್ಲೂ ಖೋಟಾ ನೋಟು ಅನ್ನೋದು ಇಲ್ಲವೇ ಇಲ್ಲ ಅನ್ನುತ್ತಾರೆ. But ಖೋಟಾ ಕರೆನ್ಸಿ ಇದ್ದೇ ಇದೆ. ರಿಸರ್ವ್ ಬ್ಯಾಂಕ್ ಮೇಲಿಂದ ಮೇಲೆ ನೋಟು, ಆಕಾರ ಇತ್ಯಾದಿಗಳನ್ನು ಬದಲಿಸಲಿಕ್ಕೆ ಕಾರಣವೇ ಇದೆ. ಪಕ್ಕದ ಪಾಕಿಸ್ತಾನದಲ್ಲಿ ಪೆಂಡಿ-ಪೆಂಡಿಗಟ್ಟಲೇ ಖೋಟಾನೋಟು ಮುದ್ರಿಸಿ ಭಾರತದತ್ತ ತಳ್ಳುತ್ತಾರೆ. ನಮ್ಮ ದೇಶದ ಆರ್ಥಿಕತೆಗೆ ಮೊಳೆ ಹೊಡೆಯೋ ಉದ್ದೇಶ ಅವರದು. Destabilising Indian Economy.

ಇದು ಒಂದು ತರಹದ್ದಾದರೆ, ಸುಳ್ಳೇ ಖೋಟಾ ನೋಟು ವ್ಯವಹಾರ ನಡೆಸುವ ಖದೀಮರದೇ ಒಂದು ಪಡೆ ಇದೆ. ಈ ಹಿಂದೆ ಗದುಗಿನಲ್ಲಿ ಬಾಕಳೆ ಎಂಬುವವನಿದ್ದ. ಬಾಬ್ಜಿ ಎಂಬ ಕಾಲಾಂತಕ ಇನ್ನೊಬ್ಬನಿದ್ದ. ಹಾಗೆ ಸಾಕಷ್ಟು ಜನ. ಅವರ ಕೈಗೆ ಅಸಲಿ ನೋಟು ಕೊಡುತ್ತೇವೆಂದು ನಂಬಿಸಿ, ಸರಿಯಾದ sizeಗೆ ಬಿಳೀ ಹಾಳೆ ಕತ್ತರಿಸಿ pack ಮಾಡಿ ಕೊಡುತ್ತಾರೆ. ಅವರಿಂದ ಅಸಲಿ ನೋಟು ಕಿತ್ತುಕೊಳ್ಳುತ್ತಾರೆ. ಹಾಗೆ ಹಣ ಹೋಯ್ತಾ? ಅದಿನ್ನು ವಾಪಸು ಬರುವುದೇ ಇಲ್ಲ. ಅವರಿಗೆ ನೀವು ತೀರಾ ಗಂಟು ಬಿದ್ದಿರಾ? ನೀವೇ ಹೋಗಿ ಇನ್ನೊಂದು ಪಾರ್ಟೀನ ಹಿಡಿದುಕೊಡಿ. ನಾವು ಮಾಡಿದಂತೆಯೇ ಮಾಡಿ ಮೋಸ ಮಾಡಿರಿ. ಅದರಿಂದ ಬರೋ ಹಣದಲ್ಲಿ ನಿಮ್ಮ ಬಾಕಿ ಹಣ ತೆಗೆದುಕೊಳ್ಳಿ ಅಂತಾರೆ. ಅವತ್ತಿನಿಂದ ನೀವು ಕೂಡ ಖೋಟಾ ನೋಟು ಮಾಡುವವರೇ. ಆ ದಂಧೆಯವರ familyಗೆ ಸೇರಿದವರೇ.

ಆದರೆ ಇದಕ್ಕಿಂತ ಬೃಹತ್ ಜಾಲವೆಂದರೆ ಪಕ್ಕಾ ಖೋಟಾ ನೋಟು ತಂದು ಚಲಾವಣೆ ಆರಂಭಿಸುವವರದು. ಆ ಜಾಲದ ಬಗ್ಗೆ ಅನೇಕ ಮಾಹಿತಿಗಳಿವೆ. ಅವು ಇಲ್ಲಿ ಅಪ್ರಸ್ತುತ. ಅಂಥವರು ಇದ್ದಾರೆ ಎಂಬುದಕ್ಕೆ ಪ್ರತಿನಿತ್ಯ ಒಂದಲ್ಲ ಒಂದು ಬ್ಯಾಂಕಿನಲ್ಲಿ ಈ ನೋಟು ಪತ್ತೆಯಾಗುತ್ತವೆ. ಇತ್ತೀಚೆಗೆ ATMನಲ್ಲಿ ಹತ್ತು ಸಾವಿರ ಡ್ರಾ ಮಾಡಿದವರಿಗೆ ಒಂದು ಸಾವಿರ ರೂಪಾಯಿ ಮೌಲ್ಯದ ಖೋಟಾ ನೋಟು ಬಂದಿದೆ. ಆಗ ಬ್ಯಾಂಕ್‌ನವರು ಕರೆಸಿ ಆ ಖೋಟಾ ನೋಟನ್ನು ಗ್ರಾಹಕನೆದುರೇ ಹರಿದು ಹಾಕುತ್ತಾರೆ. ಹಾಗೆ ಗಮನಕ್ಕೆ ಬಾರದೆ ಕೈ ಬದಲಾಗುವ ಅವೆಷ್ಟು ನೋಟುಗಳು ಸುತ್ತಾಡುತ್ತಿವೆಯೋ?

ಇನ್ನು ಚಿನ್ನದ ಬಿಸ್ಕೀಟು! ಸಾವಿರ ಬಾರಿ ಬರೆದರೂ, ಟೀವಿಗಳವರು ತೋರಿಸಿ ಬಾಯಿ ಬಡಕೊಂಡರೂ ನಕಲಿ ಬಿಸ್ಕತ್‌ನ ದಂಧೆ ನಡೆದೇ ಇದೆ. ಎಲ್ಲೋ ಕೂಲಿ ಮಾಡುತ್ತಾ, ಹಳೇ ಮನೆಯ ಪಾಯ ಅಗೆಯುವಾಗ ಚಿನ್ನದ ಬಿಸ್ಕತ್ ಸಿಕ್ಕಿವೆ. ವಿಜಯನಗರದ ಕಾಲದ ಬಿಳ್ಳೆಗಳು. ಹೊರಗೆ ಮಾರಲು ನಮಗೆ ಪೊಲೀಸರ ಭಯ. ಹೀಗಾಗಿ ನೀವು ಖರೀದಿಸಿ: ಅರ್ಧ ಬೆಲೆ ಸಾಕು ಅನ್ನುತ್ತಾರೆ. ಅವುಗಳಿಂದಲೇ ಒಂದು ತುಣುಕು ಬಂಗಾರ ಕಿತ್ತು ಕೊಡುತ್ತಾರೆ. ನೀವು ಪರೀಕ್ಷೆ ಮಾಡಿದರೆ ಅದು ಪಕ್ಕಾ Gold. ಆಸೆಗೆ ಬಿದ್ದವರು ನೀವು ಲಕ್ಷಾಂತರ ಒಯ್ಯುತ್ತೀರಿ. ಅಲ್ಲಿಂದ ತರೋದು ಕವಡೆ ಕಾಸಿನ ಹಿತ್ತಾಳೆಯ ಬಿಲ್ಲೆ!

ಈ ತರಹದ ದಂಧೆಗಳು ಇನ್ನೂ ಇದ್ದಾವು. ಆ ಬಗ್ಗೆ ಹೇಳುವುದು ನನ್ನ ಉದ್ದೇಶವಲ್ಲ. ನನ್ನದು ನಿಯತ್ತು ಪರೀಕ್ಷಿಸುವ ಉದ್ದೇಶ. “ಖೋಟಾ ನೋಟು ಕೊಡ್ತೇನೆ" ಅಂದು ಸ್ಯಾಂಪಲ್ ತೋರಿಸಿದರೆ ನಮ್ಮಲ್ಲಿ ನೂರಕ್ಕೆ ಹತ್ತು ಪರ್ಸೆಂಟ್ ಜನ ರೆಡಿ. ಉಳಿದ ಕೆಲವರಿಗೆ ಆಸೆಯುಂಟು. ಆದರೆ ಸಿಕ್ಕಿಬಿದ್ದರೆ ಗತಿ? ಅದು ಅವರ ಭಯ. ಖೋಟಾ ನೋಟು ತಂದವನಿಗೆ ನಿಯತ್ತಿಲ್ಲ. ಅದನ್ನು ನಾಶ ಮಾಡಿಯೇ ಅವನು ಈ ದಂಧೆಗಿಳಿದಿರುತ್ತಾನೆ. ಅದರಿಂದ ನಷ್ಟವಿಲ್ಲ. ನಷ್ಟವಿರೋದು ನನ್ನ-ನಿಮ್ಮಂತಹ ಸ್ವಚ್ಛ ಕೈಗಳ ಅಮಾಯಕರದು. ಚಿಕ್ಕ ಕಳ್ಳತನವನ್ನೂ ಮಾಡದ, ನಿಯತ್ತಿನ ಜನರೇ ಹಣದಾಸೆಗಾಗಿ ಬೆಳಕಾಗುವುದರೊಳಗಾಗಿ ಖೋಟಾ ನೋಟು ಚಲಾವಣೆಗೆ ಇಳಿದುಬಿಡುತ್ತಾರೆ. ಅದು ಗಂಭೀರವಾದ ಸಂಗತಿ. ಒಬ್ಬ ಪಕ್ಕಾ ಸಂಸಾರಿ, ಬೆಳಕಾಗುತ್ತಿದ್ದಂತೆಯೇ ಜಾರಿಣಿಯಾಗಿ ಬಿಡುತ್ತಾಳೆ ಅಂದರೆ ಏನರ್ಥ? ಆ ಕ್ಷಣದಲ್ಲಿ ಜೀವ ಕಸಿವಿಸಿಗೊಳ್ಳುವುದಿಲ್ಲವೆ? Why they do it? ಇದಕ್ಕೆ ಒಂದೇ ಉತ್ತರ: ಆಸೆ. ನಮ್ಮಲ್ಲಿ ಮೈ ಕಷ್ಟವಿಲ್ಲದೆ ಯಾವುದೋ ಹಣ ಬಂದು ಬಿಡಲಿದೆ ಅಂದರೆ, ತಕ್ಷಣ ಅದನ್ನು ಸ್ವೀಕರಿಸಲು ರೆಡಿಯಾಗಿ ಬಿಡುತ್ತೀವಲ್ಲ? ಅಲ್ಲಿ ನಿಯತ್ತು ಉಳಿದೆಲ್ಲಕ್ಕಿಂತ ಮುಂಚೆ ಪರಂಧಾಮಗೈದಿರುತ್ತದೆ. ಉಳಿದ ಚಿಲ್ರೆ ಸಂಗತಿಗಳು ನಗಣ್ಯ.

ಇದಾಯಿತಲ್ಲ? ಖೋಟಾ ನೋಟು, ಚಿನ್ನದ ಬಿಸ್ಕತ್ತು-ಇವುಗಳಿಗೆ ಶಿಕ್ಷೆ ಇದೆ. ಸಿಕ್ಕು ಬಿದ್ದರೆ ಹೊರಕ್ಕೆ ಬರೋದು ಕಷ್ಟ. ಆದರೆ ರೈಸ್ ಬೌಲ್? ಇಂದಿರಾಗಾಂಧಿ ನಾಣ್ಯ? ಎರಡು ತಲೆ ಹಾವು? ಭಾರಿ ಮೊತ್ತದ ಹಣ ತೋರಿಸುವ ‘ವಿನಿವಿಂಕ್’ ಮಾದರಿಯ ವಂಚನಾ ದಂಧೆ? ಇವೆಲ್ಲವೂ ಕಳ್ಳಾಟಗಳೇ. ಆದರೆ ಇವುಗಳಿಗೆ ದೊಡ್ಡ ಮಟ್ಟದ ಶಿಕ್ಷೆ ಇಲ್ಲ. ಕೈ ತುಂಬ ಬಡ್ಡಿ ಕೊಡುತ್ತೇವೆ. ಒಂದು ವರ್ಷದ ನಂತರ ನೀವು ಹೂಡಿದ ಹಣಕ್ಕೆ ಡಬಲ್ ಅಮೌಂಟ್ ಕೊಡುತ್ತೇವೆ ಅಂತ ವಿನಿವಿಂಕ್ ಶಾಸ್ತ್ರಿಯಂಥ ಒಂಟೆಲುಬಿನ ಸ್ವಚ್ಛ ಬ್ರಾಹ್ಮಣ ಹೇಳಿದಾಗ, ದೊಡ್ಡ ದೊಡ್ಡ ಪೊಲೀಸ್ ಆಫೀಸರುಗಳೂ ಸೇರಿದಂತೆ ಅನೇಕರು ಬೇಸ್ತು ಬಿದ್ದರು. ವಿನಿವಿಂಕ್ ಶಾಸ್ತ್ರಿ ಮೋಸ ಮಾಡಿ ಜೈಲು ಸೇರಿದ: ಅದೊತ್ತಟ್ಟಿಗಿರಲಿ. ಅವನ ಕೈಗೆ ದುರಾಸೆಯಿಂದ ಲಕ್ಷಗಟ್ಟಲೆ ಹಣ ಒಯ್ದು ಕೊಟ್ಟರಲ್ಲ? ಅವರ ನಿಯತ್ತು ಜೇಡಿ ಮಣ್ಣು ತಿನ್ನುತ್ತಿತ್ತಾ?

ನಾವು ಸಿಕ್ಕು ಬೀಳದಿದ್ದರೆ ಸಾಕು: ನಮಗೆ ಲಕ್ಷಗಟ್ಟಲೆ ಹಣ ಶ್ರಮವಿಲ್ಲದೆ ಬಂದು ಬಿಡುತ್ತದಲ್ಲ? ಅದು ಬರಲಿ-ಅಂತ ಯೋಚಿಸಿದವರು ಕೋಟ್ಯಧೀಶರು! ಮಗಳ ಮದುವೆ timeಗೆ ದುಪ್ಪಟ್ಟು ಹಣ ಬರಲಿ ಅಂತ ಆಸೆಪಟ್ಟು ಶಾಸ್ತ್ರಿ ಕೈಗೆ ತಮ್ಮ retirement ಕಾಲದಲ್ಲಿ ಬಂದ ಚೂರುಪಾರು ಹಣ ಒಯ್ದು ಕೊಟ್ಟವರಿದ್ದಾರಲ್ಲ? ಅವರ ಬಗ್ಗೆ ‘ಅಯ್ಯೋ’ ಅನಿಸುತ್ತದೆ. ಆದರೆ ನಿಯತ್ತು ಅವರದೂ ಕೆಟ್ಟಿತ್ತಲ್ಲವೆ?

ನನ್ನ ಪ್ರಾಣ ಹೋದರೂ ಸರಿಯೇ. ಇನ್ನೆರಡು ಗಂಟೆ ಹೆಚ್ಚು ಕೆಲಸ ಮಾಡುತ್ತೇನೆ. ಗಳಿಸುತ್ತೇನೆ ಎಂದು ದೃಢ ನಿರ್ಧಾರ ಕೈಗೊಂಡು ಬದುಕುವವನಿದ್ದಾನಲ್ಲ? ಅವನ ನಿಯತ್ತು ದೊಡ್ಡದು. ಅದು ಗಟ್ಟಿಯಾದದ್ದು. Salute ಸಲ್ಲುತ್ತವೆ ನನ್ನವು.

ನಿಮಗೆ ನನ್ನ ಸೆಲ್ಯೂಟ್ ತಲುಪಿತಾ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 23 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books