Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಬಿಡ್ರೀ, ಅದ್ಯಾರೂ ಕೂಡ ಇಷ್ಟುದ್ದದ ಇಷ್ಟು ಗಾತ್ರದ ಪತ್ರ ಬರೆಯೋದಿಲ್ಲ!

ನಲ್ಮೆಯ ದೊರೆಯೇ,

ಕಳೆದ ಇಪ್ಪತ್ತೂ ಚಿಲ್ರೆ ವರ್ಷಗಳಿಂದ ಹೀಗೇ ಬರೆಯುತ್ತಿದ್ದೇನೆ. ತಪ್ಪದೇ ಬರೆಯುತ್ತಿದ್ದೇನೆ. ಕಣ್ಣೆದುರಿಗೆ ನೀವಿದ್ದೀರಿ. ಇದ್ದೀರೆಂದು ಕೊಂಡೇ ಬರೆಯುತ್ತಿದ್ದೇನೆ. ನಿಮ್ಮನ್ನು ದೊರೆಗಳೆಂದೇ ಅಂದುಕೊಂಡಿದ್ದೇನೆ. ಇದನ್ನು ಕೆಲವರು ‘ನಾಟಕ’ ಅಂದರು. ‘ಇದು ಅತಿ ವಿನಯ’ ಅಂದರು. Unnecessarily you are humble ಅಂದರು. Being humble is not a weakness. It is the strength. ವಿನೀತನಾಗಿರೋದು ನಿಜಕ್ಕೂ ಒಂದು ತಾಕತ್ತು ಅಂದುಕೊಂಡವನು ನಾನು. ಕೆಲವರು ನನ್ನನ್ನು ಸ್ವಾರ್ಥಿ ಅಂದರು. ‘ಸುಳ್ಳ’ ಅಂದರು. ‘ಏನು ಮಾಡಿದ್ರೂ ದುಡ್ಡಿಗೋಸ್ಕರ ಮಾಡ್ತಾನೆ’ ಅಂದರು. ಜನರನ್ನು ಹೆದರಿಸಿ ಬ್ಲಾಕ್‌ಮೇಲ್ ಮಾಡ್ತಾನೆ ಅಂದರು. ಹೆಣ್ಣುಬಾಕ ಅಂದರು. ನಾನು ಬರೆದದ್ದನ್ನು ಯಾರ‍್ದೋ ಕೈಲಿ ಹೇಳಿ ಬರೆಸ್ತಾನೆ: ‘ಅವನ ಥರಾನೇ ಬರೆಯೋರನ್ನ ಇಟ್ಕೊಂಡಿದಾನೆ’ ಅಂದರು. ಆದರೆ ಈ ಇಪ್ಪತ್ತೂ ಚಿಲ್ರೆ ವರ್ಷಗಳಲ್ಲಿ ಒಬ್ಬರೇ ಒಬ್ಬರು ಕೂಡ ನನ್ನ ಅಹಂಕಾರಿ, ದುರಹಂಕಾರಿ ಅನ್ನಲಿಲ್ಲ. Of course, I am not ಅಹಂಕಾರಿ. ಯಾವುದಕ್ಕೆ ಬೇಕಾಗುತ್ತದೆ ಅಹಂಕಾರ? Yes, ಕ್ರಿಯಾಶೀಲನಾಗಿ ಬರೆಯಲಿಕ್ಕೆ ಒಂದು ತೆರನಾದ ಸಾತ್ವಿಕ ಅಹಂಕಾರ ಬೇಕು. ಇತ್ತೀಚೆಗೆ ಧಾರವಾಡಕ್ಕೆ ಹೋಗಿದ್ದೆ. ಅಲ್ಲೊಂದು ಸಭೆ. ನಾನು ಹೋಗಿ ಮೊಟ್ಟ ಮೊದಲ ಸಾಲಿನಲ್ಲಿ ಕೂರುವ ಹೊತ್ತಿಗೆ ಸಭೆ ಶುರುವಾಗಿತ್ತು. ವೇದಿಕೆಯ ಮೇಲೆ ಸಮಾರಂಭದ ಅಂದಿನ ಕೇಂದ್ರಬಿಂದು, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಬಾಲಸುಬ್ರಹ್ಮಣ್ಯ ಸಪತ್ನೀಕರಾಗಿ ಕುಳಿತಿದ್ದರು. ನಾನು ಕುಳಿತಲ್ಲಿಂದಲೇ ಅವರಿಗೆ wish ಮಾಡಿದೆ. ಹಾಗೇನೇ ವೇದಿಕೆಯ ಮೇಲಿದ್ದ ಎಲ್ಲರಿಗೂ wish ಮಾಡಿದ್ದೆ. ಅವರಲ್ಲಿ ಒಬ್ಬಾತ ಮಾತ್ರ ತಲೆಯಾಡಿಸಿದ. ಅದ್ಯಾರೋ ಒಬ್ಬ ಶಿವಶರಣ ತನ್ನ ಮೈಯ ಚರ್ಮ ಸುಲಿದು, ಅದರಿಂದಲೇ ಒಂದು ಜೊತೆ ಚಪ್ಪಲಿ ಹೊಲಿದುಕೊಂಡು ಹೋಗಿ ಅರ್ಪಿಸಿದಾಗ, ಅವುಗಳನ್ನು ದೊಡ್ಡ ಮನಸ್ಸಿನಿಂದ, ಔದಾರ್ಯದಿಂದ, ಕೊಂಚ ಅಹಂಕಾರದಿಂದ (?) ಸ್ವೀಕರಿಸಿದವನು ತಲೆಯಾಡಿಸಿದನಲ್ಲ? ಹಾಗೆ ತಲೆಯಾಡಿಸಿದ. ‘My foot, ದುರಹಂಕಾರಿಯೇ...’ ಅಂದುಕೊಂಡು ಸಭೆ ಮುಗಿದ ನಂತರ ಎದ್ದು ಬಂದೆ!

Basically, ನನಗೆ ಯಾವುದೇ ತರಹದ ಅಹಂಕಾರವಿಲ್ಲ. ಇರಲಿಕ್ಕೆ ಕಾರಣವೂ ಇಲ್ಲ. ಏನಿದೆ ಅಂತ ಅಹಂಕಾರ ಪಡಲಿ? ಒಂದಷ್ಟು ಮಾತು, ಬರವಣಿಗೆ ಬಿಟ್ಟರೆ ನನ್ನಲ್ಲಿ ಅಗಾಧವಾದದ್ದು ಏನೂ ಇಲ್ಲ: ಏನೇನೂ ಇಲ್ಲ. ನಾನು ತುಂಬ ಚೆನ್ನಾಗಿ ನನ್ನ limits and limitations ಏನು ಎಂಬುದನ್ನು ಬಲ್ಲೆ. “ನಾನು ಕಿರಿಯರಿಗಿಂತ ಕಿರಿಯನಯ್ಯಾ..." ಅಂತೇನೂ ಪದ ಹೇಳೋದಿಲ್ಲ. But I know what I am. ಅಹಂಕಾರ ಮತ್ತು ನನ್ನದಲ್ಲದ ದುಡ್ಡಿಗೆ ಕೈ ಚಾಚೋದು-ಎರಡೂ ಇಲ್ಲ ನನ್ನಲ್ಲಿ. ಹೆಂಗಸರೆಡೆಗೆ ನಾನು ಬಲಹೀನತೆ ಹೊಂದಿದವನಲ್ಲ. ಆಕೆಯನ್ನು ಪ್ರೀತಿಸಿದೆ. Yes, ಆಕೆಯೊಂದಿಗೆ ಬದುಕಿದೆ. ನನಗೆ ಮಗ ಇದ್ದಾನೆ: ಹಿಮವಂತ. ಅದೇನನ್ನೂ ನಾನು ಮುಚ್ಚಿಟ್ಟಿಲ್ಲ. ಆ ವಿಷಯಕ್ಕೆ ಸಂಬಂಧಿಸಿದಂತೆ ಲಲಿತಳ ಮುಂದೆ ನಿಂತಾಗ ಮಾತ್ರ ತಲೆ ತಗ್ಗಿಸುತ್ತೇನೆ. ನನ್ನ ಕೈ ನಡುಗುತ್ತವೆ. ಅಷ್ಟೆ.

ಇದನ್ನೆಲ್ಲ ಯಾಕೆ ಹೇಳಿದೆ? ಹ್ಞಾಂ, ಅದನ್ನೂ ಹೇಳುತ್ತೇನೆ. ದೊರೆಯೆದುರು ಏನನ್ನಾದರೂ ಮುಚ್ಚಿಡುವುದುಂಟೆ? ನಾನು 1995 ಸೆಪ್ಟಂಬರ್ 25 ರಂದು ಪತ್ರಿಕೆ ಆರಂಭಿಸಿದಾಗ ಈ ವಿಲಕ್ಷಣ ಹೆಸರಿನ ‘ಪತ್ರಿಕೆ’ಗೆ ಹದಿನಾರು ಪುಟಗಳಿದ್ದವು. ಬೆಲೆ ಅವತ್ತಿಗೆ ನಾಲ್ಕು ರುಪಾಯಿ. ಆರಂಭಿಸಿದ ಕೆಲವೇ ತಿಂಗಳಿಗೆ ಇಪ್ಪತ್ನಾಲ್ಕು ಪುಟ ಮಾಡಿದೆ. ಅವತ್ತು ‘ಲಂಕೇಶ್ ಪತ್ರಿಕೆ’ಯೊಂದಿಗೆ ಪೈಪೋಟಿ ಮಾಡಬೇಕಾಗಿತ್ತು. ಅಲ್ಲದೆ, ನಾನು ಲಂಕೇಶ್ ವಿರುದ್ಧ ಅವಡುಗಚ್ಚಿದ್ದೆ. ಅವರನ್ನು ಉಳಿದೆಲ್ಲಕ್ಕಿಂತ ಮುಂಚೆ ಸರ್ಕ್ಯುಲೇಶನ್ ವಿಷಯದಲ್ಲಿ ಹಣಿಯಬೇಕಾಗಿತ್ತು. ಅವರು ವಿನಾಕಾರಣ, ಶುದ್ಧ ಅವಿವೇಕಿಯಂತೆ ನನ್ನ ವಿರುದ್ಧ ತಮ್ಮ ಪತ್ರಿಕೆಯಲ್ಲಿ ಬರೆದಿದ್ದರು. ಅಸಲಿಗೆ ನಾನು ಸ್ವಂತದ ಪತ್ರಿಕೆ ಮಾಡಲು ಅವರೇ ಕಾರಣ: ಆ ಮತಿ ಹೀನ ಬರಹವೇ ಕಾರಣ. ಉಳಿದವರಂತೆ ಬೈಸಿಕೊಂಡು ನಾನು ಸುಮ್ಮನಿರುತ್ತೇನೆ ಅಂದುಕೊಂಡರು. ಆದರೆ ನಾನು ಎರಡೂ ಕೈಲಿ ಜಡಿಯಲು ನಿಂತೆ. ಅದ್ಯಾವ ಪರಿ ಬಡಿದು ಬಿಸಾಕಿದೆನೆಂದರೆ, ಅಂದಿನಿಂದೀವರೆಗೂ ಮತ್ತೊಬ್ಬ ಪತ್ರಕರ್ತ ನನ್ನ ವಿರುದ್ಧ ಸೆಟೆದು ನಿಲ್ಲಲಿಲ್ಲ. ನನ್ನ ಬೃಹತ್ ಸರ್ಕ್ಯುಲೇಶನ್ ಹತ್ತಿರ ಹತ್ತಿರಕ್ಕೂ ಬರಲಿಲ್ಲ. ಆ ವಿಷಯಕ್ಕೆ ಬಂದರೆ, ಗತಿಸಿದ ಈ ಎರಡು ದಶಾಬ್ದಗಳು ನನ್ನವೇ. I ruled.

Once again, ಅದಕ್ಕೆ ನಾನು ಅಹಂಕಾರ ಪಡೋದಿಲ್ಲ. ಹಾಗಾದರೆ ಈ ಎರಡು ದಶಾಬ್ದಗಳಲ್ಲಿ ಗಳಿಸಿದ್ದೇನು? Yes, ಪಟ್ಟಿ ದೊಡ್ಡದಿದೆ. ಮೊದಲನೆಯದಾಗಿ ನನ್ನ ದೊರೆಗಳಾದ ನೀವು : ನನ್ನ ಓದುಗರು. ಕೇವಲ ಕರ್ನಾಟಕದಲ್ಲಲ್ಲ. ಈ ಪತ್ರಿಕೆಗೆ ನಾನಾ ದೇಶಗಳಲ್ಲಿ ಓದುಗರಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ನಮಗೆ ಪಕ್ಕಾ ಏಜೆನ್ಸಿಗಳಿವೆ. ಬೇರೆ ಯಾವ ಪತ್ರಿಕೆಗೆ ಈ ಸೌಭಾಗ್ಯವುಂಟು? ಹಾಗೇನೇ, ಈ ನಾಡಿನಲ್ಲಿ ಯಾವ ಪತ್ರಿಕೆಯ, ಯಾವ ಸಂಪಾದಕನಿಗೂ ಆ ಸೌಭಾಗ್ಯ ದೊರೆತಿಲ್ಲ. ಅದು ನನ್ನ-ನಿಮ್ಮ ನಡುವಿನ ಸಲುಗೆ! ಯಾವ ಸಂಪಾದಕನನ್ನೂ ಓದುಗರು ‘ನೀನು-ತಾನು’ ಅಂತ ಸಂಬೋಧಿಸುವುದಿಲ್ಲ. ನೀವಷ್ಟೆ, “ರವೀ..." ಅನ್ನುತ್ತೀರಿ. ನಾನು ‘ಹ್ಞಾಂ’ ಅನ್ನುತ್ತೇನೆ. ಆ ತೆರನಾದ ಪ್ರೀತಿ ನಂದು-ನಿಮ್ಮದು. ಓದುಗರು ನನ್ನನ್ನು ಅವರ ಮನೆಗಳ ಮದುವೆ-ಮುಂಜಿಗಳಿಗೆ ಕರೆಯುತ್ತಾರೆ. ತಮ್ಮ ಚಿಕ್ಕ ಗೂಡಂಗಡಿಯಿಂದ ಹಿಡಿದು ದೊಡ್ಡ show roomಗಳ ತನಕ, ಉದ್ಘಾಟನೆಗೆ ಕರೆಯುತ್ತಾರೆ. ‘ನಿಮ್ಮದು ಲಕ್ಕಿ ಹ್ಯಾಂಡ್ ಸರ್: ಬರಲೇ ಬೇಕು ನೀವು’ ಅನ್ನುತ್ತಾರೆ. ಇದಕ್ಕಿಂತ ಸಂತಸ ಬೇರೆ ಇದೆಯೇ? ನಾನು ಹುಟ್ಟಿನಿಂದಲೂ ಏಕಾಂಗಿ. ಅಣ್ಣ ತಮ್ಮಂದಿರು ಇಲ್ಲ. ನನ್ನನ್ನು ತಮ್ಮ ಮನೆಯ ಸದಸ್ಯ, ತಮ್ಮ ಅಣ್ಣ-ತಮ್ಮ ಅಂದುಕೊಂಡು ಕರೆಯುವವರ ಋಣ ಹೇಗೆ ತೀರಿಸಲಿ? ತೀರ ಮೈ-ಕೈ ಮೇಲೆ ನನ್ನ ಹೆಸರಿನ ಹಚ್ಚೆ ಹಾಕಿಸಿಕೊಳ್ಳುತ್ತಾರೆಂದರೆ ಏನು ಹೇಳಲಿ?

‘ಸರ್, ನಾನು ಓದಲು ಆರಂಭಿಸಿದ್ದೇ ನಿಮ್ಮಿಂದ’ ಅಂತ ನನಗೆ ಸಹಸ್ರಾರು ಜನ ಹೇಳಿದ್ದಾರೆ. “ನೀವು ಅದ್ಯಾವ ಪರಿ ಹುಚ್ಚು ಹಿಡಿಸಿದೀರಿ ಅಂದರೆ, ಹತ್ತೂವರೆಗೆ exam ಇದ್ದರೆ, ಎಂಟೂವರೆ ತನಕ ನಿಮ್ಮ ಪುಸ್ತಕ ಓದಿ, ಸ್ನಾನಕ್ಕೆ ಹೋಗ್ತಿದ್ದೆ" ಅಂತ ಒಬ್ಬ ಪೊಲೀಸ್ ಅಧಿಕಾರಿ ತೀರ ಇತ್ತೀಚೆಗೆ ಹೇಳಿದರು. ಅವರ ಹೆಸರು ಕಾಂಬಳೆ. I know, ತಲೆಮಾರುಗಳ ಯುವಕರು ಪುಸ್ತಕ ಕೈಗೆತ್ತಿಕೊಳ್ಳುವಂತಾದದ್ದು ನನ್ನಿಂದ. ಈ ಮಾತು ಬರೆಯುವಾಗ ನನ್ನಲ್ಲಿ ಅಹಂಕಾರವಿಲ್ಲ-ಹೆಮ್ಮೆಯಿದೆ. ಏನೋ ಬಿಡಿ, ‘ರತಿ ವಿಜ್ಞಾನ’ ತರಹದ ಪತ್ರಿಕೆ ಮಾಡಿದರೆ ಅದಕ್ಕಿಂತ ಹೆಚ್ಚಿನ ಓದುಗರು ಲಭ್ಯವಾಗುತ್ತಿದ್ದರು ಅಂತ ಹೊಟ್ಟೆಕಿಚ್ಚುಪಡೋ ಜನರಿರಬಹುದು. ಅವರನ್ನೇ ಕೇಳಿ, ‘ಹಿಮಾಲಯನ್ ಬ್ಲಂಡರ್’ ಇವತ್ತಿಗೂ ಮಾರಾಟವಾಗುತ್ತಿದೆಯಲ್ಲ? ಹೇಗೆ? ಅದು ಕಾದಂಬರಿ ಕೂಡ ಅಲ್ಲ. ಎಂದೋ ನಡೆದ ಯುದ್ಧ ದುರಂತ. ಅದು ಯುದ್ಧೇತಿಹಾಸ. ನನ್ನ ಇತರೆ ಕಾದಂಬರಿಗಳು? ದಿ ಗಾಡ್‌ಫಾದರ್, ಒಮರ್ಟ, ಹಂತಕಿ ಐ ಲವ್ ಯೂ, ಹೇಳಿ ಹೋಗು ಕಾರಣ, ನೀ ಹಿಂಗ ನೋಡಬ್ಯಾಡ ನನ್ನ, ಮಾಟಗಾತಿ, ಸರ್ಪಸಂಬಂಧ ಮುಂತಾದವು ಇವತ್ತಿಗೂ reprint ಆಗುತ್ತವೆ. I am really blessed. ನನ್ನ ಅನುವಾದಿತ ಕೃತಿಗಳು ಕೂಡ ಅಷ್ಟೆ.

“ಅರೆ yaar, ಇಕ್ ಕಿತಾಬ್ ಕಾ ರಿಲೀಸ್ ಇತನಾ ಭಾರೀ ಹತಾ ಹೈ ಕ್ಯಾ?" (ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಈ ಪರಿ ಅದ್ದೂರಿಯಾಗಿ ನಡೆಯೋದುಂಟೆ?) ಅಂತ ಅವತ್ತು ಕೇಳಿದ್ದರು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಗ ಸುನೀಲ್ ಶಾಸ್ತ್ರಿ. ನೀವೂ ನೋಡಿದ್ದೀರಲ್ಲ? ನಿಮ್ಮ ಕಣ್ಣೆದುರಿಗೇ ನಡೆದಿವೆ ಅಷ್ಟೂ ಕಾರ್ಯಕ್ರಮಗಳು. “ರವಿ ಬೆಳಗೆರೆಯ ಕಾರ್ಯಕ್ರಮಕ್ಕೆ ಯಾವತ್ತೂ ಆವರಣವನ್ನು ಬಾಡಿಗೆಗೆ ಕೊಡಬಾರದು" ಅಂತ ಪ್ರೆಸ್‌ಕ್ಲಬ್‌ನಲ್ಲಿ ಠರಾವನ್ನೇ ಮಾಡಿದರು. ಅದು ನಿನ್ಮ ಆಗಮನದ ಪರಿ! ಇಪ್ಪತ್ತು ವರ್ಷಗಳಿಗೂ ಮುಂಚೆ ಕೇಳೋರು ಗತಿ ಇಲ್ಲದೆ, ಅಬ್ಬೇಪಾರಿಯಂತಿದ್ದ ನನ್ನನ್ನು ಅದೆಲ್ಲಿಂದ ಎಲ್ಲಿಗೆ ಎಳೆದೊಯ್ದು ಬಿಟ್ಟಿರಿ? ಋಣಿ, ಋಣಿ, ಋಣಿ ನಾನು.

ಇನ್ನೊಂದು ಸಾಧನೆ ಅಂದರೆ, ದುಡ್ಡು! My God, ಅದೇನು ಕಡಿಮೆ ಹಣ ಕೊಟ್ಟಿರಾ ನನಗೆ? It is in crores. ಅರವತ್ತೆಪ್ಪತ್ತು ಲಕ್ಷ ರುಪಾಯಿಯ income tax ಕಟ್ಟುತ್ತೇನೆಂದರೆ, ಅದು ಸುಮ್ಮನೆ ಮಾತೇ? ಈ ಪರಿ ಸಂಪಾದನೆ, ಆದಾಯ ಇರುವಾಗ ಅದೇಕೆ ನಾನು ಬ್ಲಾಕ್‌ಮೇಲ್ ಮಾಡಲಿ? ಮಾಡಿ, ಆ ಹಣ ತಂದು ಅದೆಲ್ಲಿ ಅಡಗಿಸಿಡಲಿ? ನೀವು ನನಗೆ ಆ ಅವಕಾಶ ಕೊಡಲೇ ಇಲ್ಲ. ಸ್ವಭಾವತಃ ನಾನು ಗಲೀಜು ಹಣ ಮುಟ್ಟಿದವನಲ್ಲ. ಒಂದು ಬೈ ಟೂ ಕಾಫಿ ಕುಡಿದರೆ, ಅದರಲ್ಲಿನ ಅರ್ಧ ಪಾಲು ಅಂತ ನಾಲ್ಕು ರುಪಾಯಿ ಟೇಬಲ್ ಮೇಲಿಟ್ಟು ಎದ್ದು ಬಿಡುತ್ತೇನೆ. ಹಣವನ್ನು ನಾನು ವಿನಾಕಾರಣ ಕೊಡುವವನೂ ಅಲ್ಲ. ಮುಟ್ಟುವವನೂ ಅಲ್ಲ. Well, ನೀವು ಕೊಟ್ಟ ಆ ಕೋಟ್ಯಂತರ ರುಪಾಯಿಗಳನ್ನ ನಾನು ಏನು ಮಾಡಿದೆ? ಅದರ ಲೆಕ್ಕವನ್ನೂ ಹೇಳುತ್ತೇನೆ. ನನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದೆ. ಆ ನಂತರ ಮನೆ ಕಟ್ಟಿಕೊಂಡೆ. ತೀರ ಇತ್ತೀಚೆಗೆ ಕಟ್ಟಿದ ಮನೆ ಅಗಾಧ ಗಾತ್ರದ್ದು. ಅಲ್ಲಿ ಲಲಿತೆ-ಮಗ ಮತ್ತು ಸೊಸೆ ಇರುತ್ತಾರೆ. ಇಬ್ಬರೂ ಹೆಣ್ಣುಮಕ್ಕಳಿಗೆ, ಮದುವೆ ಟೈಮಿನಲ್ಲಿ ಮನೆ ಕೊಟ್ಟಿದ್ದೇನೆ. ಅವರಿಗೆ ಅದೇ ವರದಕ್ಷಿಣೆ! ಯಾವತ್ತಿಗೂ ಒಂದು ಪೈಸೆ ಕೇಳದ ಸಂಭಾವಿತರು ನನ್ನ ಅಳಿಯಂದಿರು. ಹಾಗೇನೇ, ನನ್ನ ಮಗ ಕೂಡ ತಮ್ಮ ಮಾವನ ಮುಂದೆ ಕೈ ಚಾಚಿಲ್ಲ. ನೀವು ಬಲ್ಲಂತೆ ನಾನು ಯಾವತ್ತಿಗೂ partnership ವ್ಯಾಪಾರ ಮಾಡಿದವನಲ್ಲ. ಹೀಗಾಗಿ ಯಾವುದೇ ಕಂಪೆನಿಯ ಷೇರುಗಳು ನನ್ನಲ್ಲಿ ಇಲ್ಲ.

ಹಾಗಾದರೆ ಅಷ್ಟೆಲ್ಲ ಹಣ ಏನು ಮಾಡಿದೆ? ಒಂದೇ ಪದ: ಅದು ಪ್ರಾರ್ಥನಾ! ಪದ್ಮನಾಭನಗರದ ಒಳಕ್ಕೆ ಬಂದು ಬಿಟ್ಟರೆ, ನಿಮಗೆ ಉದ್ದಕ್ಕೂ ಕಾಣಸಿಗೋದು ‘ಪ್ರಾರ್ಥನಾ’ ಕಟ್ಟಡಗಳು. ಅವು ಎಂಟಿವೆ. ಆ ಪೈಕಿ ಎರಡು ಮಾತ್ರ ಬಾಡಿಗೆಯವು. ಆರು ಸ್ವಂತದ್ದವು. ಪ್ರಾರ್ಥನಾದಲ್ಲಿ ಅಜಮಾಸು ಎಂಟು ಸಾವಿರ ಮಕ್ಕಳು ಓದುತ್ತಿದ್ದಾರೆ; no donation, no ಜಾತಿ! ಅದರಿಂದ ನಾನು ಹಣದ ನಿರೀಕ್ಷೆ ಇಟ್ಟುಕೊಂಡೇ ಇಲ್ಲ. ಇವತ್ತು ಶಾಲೆ ಕೆಲವು ಕೋಟಿಗಳಿಗೆ ಬಾಳುತ್ತದೆ. ಅದಕ್ಕಿಂತ ಮಿಗಿಲಾಗಿ, ನನ್ನ ಜೀವನದ ಬಹು ದೊಡ್ಡ ಸಾಧನೆಯೇ ಪ್ರಾರ್ಥನಾ. ಅಲ್ಲಿ ನಾಲ್ಕು ನೂರ ಇಪ್ಪತ್ತೈದು ಜನ ಕೆಲಸ ಮಾಡುತ್ತಿದ್ದಾರೆ. They all love me, respect me. ಪ್ರಾರ್ಥನಾದಿಂದ ಹೊರಬಿದ್ದ ಅನೇಕ ಮಕ್ಕಳು ವಿದೇಶಗಳಲ್ಲಿದ್ದಾರೆ. ಈ ಬಗ್ಗೆ ನನಗೆ ಕೇಜಿ ಗಟ್ಟಲೆ ಅಹಂಕಾರವಿದೆ.

ಇವೆಲ್ಲ ಅಲ್ಲದೆ, ದಾಂಡೇಲಿಯ ಕಾಡ ಮಧ್ಯೆ ಕೊಂಚ ಜಮೀನಿದೆ. ಅದರಲ್ಲಿ ಹಣ್ಣು-ಹಂಪಲು ಬೆಳೆದರೆ, ಅದು ಹಕ್ಕಿಗಳಿಗೆ. ಅಲ್ಲೊಂದು ಮನೆ ಕಟ್ಟಿಕೊಂಡು, ಆ ಮನೆಯಲ್ಲೇ ಸಾಯೋಣವಾ ಎಂಬ ದುರಾಸೆಯಿದೆ ನನಗೆ. ಇಷ್ಟು ಬಿಟ್ಟರೆ ನನಗೆ ಬೇರೇನಿಲ್ಲ. ಲಲಿತೆ ಚೂರುಪಾರು ಚಿನ್ನ ಖರೀದಿಸಿರಬಹುದು. ಆದರೆ ಅವಳು ನನ್ನ ‘ಚಿನ್ನ’. ನಾನು ಅವಳ ‘ಚಿನ್ನ’. ಕೆಸೆಟ್ಟುಗಳು, ಸಿಡಿಗಳು, ಸಿನೆಮಾಗಳು-ಅವೆಲ್ಲ ಎಷ್ಟು ಬೇಕು ನಿಮಗೆ? I am super rich. ಅಂತೆಯೇ, ಅಂಗಿಗಳು ಮತ್ತು ಪೆನ್ನುಗಳು! ‘ಜರ್ಮನಿಯಿಂದ ಏನು ತರಲಿ ನಿಮಗೆ’ ಅಂತ ಗೆಳೆಯ ದತ್ತಾ ಹೆಗಡೆ ಕೇಳಿದರೆ ಎರಡೇ ಶಬ್ದ; ಬರೆಯಲು ಹಾಳೆ, ಪೆನ್ನು! ನಿರಂತರವಾಗಿ ನಾನು ದಿನಕ್ಕೆ ಮೂರು ಹೊತ್ತು ತಿನ್ನೋದು, ಮುದ್ದೆ ಮತ್ತು ಸೊಪ್ಪು. ಕೆಲ ಬಾರಿ ಕೊಂಚ ಮಾಂಸ. ಮಟನ್ನು ನನ್ನ ಬಲಹೀನತೆ. ಆದರೆ ತಿನ್ನಲು ಆಗೋದು ಎರಡೇ ಪೀಸು! ಉಳಿದಂತೆ ಎರಡು ಕಾರುಗಳಿವೆ; Audi, Inova.

ಇದೆಲ್ಲ ಯಾಕೆ ಹೇಳಿದೆ ಅಂದರೆ, ನನಗಿನ್ನು ನೀವು ವಿರಾಮ ನೀಡಬೇಕು. Really. ನಿನ್ನೆಗೆ ನನಗೆ ಐವತ್ತೆಂಟು ತುಂಬಿ ಐವತ್ತೊಂಬತ್ತು ವರ್ಷ. ಸಾಕಲ್ಲ? ಐವತ್ತೆಂಟಕ್ಕೆ ರಿಟೈರ್ ಆಗುತ್ತೇನೆ. ಅದಕ್ಕಿದು ಅರ್ಜಿ. ನನಗೆ ಸಾಕಷ್ಟು ದಣಿವಾಗಿದೆ. ಕಳೆದ ಇಪ್ಪತ್ತೂ ಚಿಲ್ರೆ ವರ್ಷಗಳಲ್ಲಿ ನಾನೇನು ಕಡಿಮೆ ಕಳೆದುಕೊಂಡಿಲ್ಲ. ಒಂದಿಡೀ ತಾರುಣ್ಯ ಈ ಪತ್ರಿಕೆಗಾಗಿ ಧಾರೆ ಎರೆದಿದ್ದೇನೆ. ಅದೇನೂ ಕಡಿಮೆ ಶ್ರಮ ಅಲ್ಲ. ಅವೆಷ್ಟೋ ಸಾವಿರ ಸಾವಿರ ಹಾಡುಗಳನ್ನು ನಾನು ಕೇಳಿಯೇ ಇಲ್ಲ. ಓದದೆ ಇರುವ ಪುಸ್ತಕಗಳು ಎಷ್ಟಿವೆಯೋ? ಬರೆಯದೆ ಇರುವ ಪುಸ್ತಕಗಳೆಷ್ಟೋ? ಪತ್ರಿಕೆಗಾಗಿ ಮಾಡಿದ ಇವೆಲ್ಲ ಹಣಾಹಣಿ ನಡುವೆಯೇ, gapನಲ್ಲಿ ಎಪ್ಪತ್ತೆಂಟು ಕೃತಿಗಳನ್ನು ಕೊಸರಾಡಿ ಬರೆದೆ. ನನಗೊಂದು ಅದ್ಭುತವಾದ speed ಇದೆ. ಛಲಕ್ಕೆ ಬಿದ್ದು ಅವಡುಗಚ್ಚಿ ಬರೆಯಲು ಕುಳಿತೆನೆಂದರೆ ಪುಟಗಳು ತುಂಬಿ ಹೋಗುತ್ತವೆ. Amazing ಅಂತ ನನಗೇ ಅನ್ನಿಸುತ್ತದೆ. ಅದಕ್ಕೇ ಹೇಳಿದ್ದು, ಇನ್ನು ನನಗೆ ವಿರಾಮ ಕೊಡಿ. ‘ಪತ್ರಿಕೆ’ಗಾಗಿ ಬರೆಯುವುದಿಲ್ಲ ಎಂಬುದಷ್ಟೇ ನಿಜ. ಕಾದಂಬರಿ, ಅನುವಾದ, ಇತಿಹಾಸ, ಪ್ರೇಮ, ಕಾಮ, ಯುದ್ಧ-what not? ಅದೆಲ್ಲವೂ ನಿಮಗೋಸ್ಕರವೇ ತಾನೆ? ಇನ್ನೂ ನಲವತ್ತೆರಡು ವರ್ಷ ಬದುಕಿರಬೇಕು ನಾನು. ಒಟ್ಟು ನೂರು ಕೃತಿಗಳಾದರೂ ಹೊರಬರದಿದ್ದರೆ ಹೇಗೆ?

ನಾನು ಅದೇನೇ ನಿವೃತ್ತಿ ಅಂದುಕೊಂಡರೂ ಈ ಆಫೀಸು ನನ್ನನ್ನು ಬಿಡುವುದಿಲ್ಲ. ‘ತೆಪ್ಪಗೆ ಬಂದು ಮನೇಲಿರು’ ಅಂದಿದ್ದಾಳೆ ಲಲಿತೆ. ಉಳಿದೆಲ್ಲರಿಗಿಂತ ನನ್ನ ಸೊಸೆ, ಆ ಮುದ್ದು ಹುಡುಗಿ ಗಂಟೆಗೆ ಹತ್ತು ಸಲ ‘ನೀವು ಬಂದು ಮನೇಲಿರಿ ಅಂಕಲ್...’ ಅನ್ನುತ್ತಾಳೆ. ಪ್ರೀತಿಗೆ ಮಣಿಯದೆ. ಉಂಟೆ? ಆದರೆ ನಂಗೆ ಧಾರಾಳವಾದ space ಬೇಕು. ನನ್ನ ಆಫೀಸಿಗೆ ನಾನೇ ರಾಜ! ಇಲ್ಲಿ ಕುಳಿತೇ ಬರೆಯುತ್ತೇನೆ. ಆ ಕಂಪ್ಯೂಟರು, ಜನ, ಇಂಟರ್‌ನೆಟ್ಟು-ಎಲ್ಲ ಹೀಗೇ ಇರುತ್ತವೆ. ಬಂದರೆ ಇಡಿ ಇಡಿಯಾಗಿ ನಿಮ್ಮ ಕೈಗೇ ಸಿಗುತ್ತೇನೆ.

ನಾನು ಕೊಂಚ ಅಲೆಯಬೇಕು, ಮತ್ತೆ! ಕೇರಳವೂ ಸೇರಿದಂತೆ ಕೆಲವು ರಾಜ್ಯಗಳನ್ನು ನಾನು ನೋಡಿಲ್ಲ. ಹಾಗೇನೇ, ಒಂದಷ್ಟು ದೇಶಗಳಿಗೆ ಹೋಗಬೇಕು. ಸಮುದ್ರ ಸಮುದ್ರ ದಾಟಬೇಕು. ನನ್ನ ಪ್ರೀತಿಯ ಕಾಡು ಸುತ್ತಬೇಕು. ‘ಪತ್ರಿಕೆ’ ಇಟ್ಟುಕೊಂಡು ಅದನ್ನೆಲ್ಲ ಮಾಡಲಾಗುವುದಿಲ್ಲ. ಈಗಾಗಲೇ ಒಂದಷ್ಟು ಕಥಾ ವಸ್ತುಗಳು ಮಲಗಿ ಮಗ್ಗಲು ಬದಲಿಸುತ್ತಿವೆ. ಕನ್ನಡ ಭಾಷಾ ಲೋಕಕ್ಕೆ ಒಂದಷ್ಟು ಶಬ್ದಗಳನ್ನು ಕೊಟ್ಟಿದ್ದೇನೆ. ಕಾದಂಬರಿಯಂಥದಕ್ಕೆ ಕೈ ಹಾಕಿದರೆ ಇನ್ನೊಂದಷ್ಟು ಶಬ್ದ ದೊರೆತಾವು; ಕೊಡಬಲ್ಲೆ. ಆ ಬಗ್ಗೆ ನನಗೆ ನಂಬಿಕೆ ಇದೆ. ಅತ್ಯುತ್ತಮ ಕೆಲಸಗಾರ ನಾನು. Let me work more, differently. ವಿಶ್ರಾಂತಿ ಘೋಷಿಸುವುದೆಂದರೆ, ಅದು ಹೊಸ ಜನ್ಮ ಪಡೆಯುವುದು ಅಂತ ಅರ್ಥ. I am sure about it. ನಿವೃತ್ತನಾಗಿ ಬಿಟ್ಟರೆ ನನ್ನ ಗೌರವ ಕಡಿಮೆಯಾಗುತ್ತದೇನೋ? ಜನ ನಿಕೃಷ್ಟವಾಗಿ ನೋಡುತ್ತಾರೇನೋ? ಹೋದ ಕಡೆ ಕೆಲಸಗಳಾಗುವುದಿಲ್ಲವೇನೋ? ಹಣ ಕರಗಿ ಬಿಡುತ್ತದೇನೋ? No way. ಆ ಥರದ ಯಾವ ಆತಂಕಗಳೂ ನನಗಿಲ್ಲ.

ಸದ್ಯಕ್ಕೆ ಎಲ್ಲವೂ ಸರಿಯಾಗಿವೆ. ಚೆಂದನೆಯ ಹೆಸರಿದೆ. ಸರ್ಕ್ಯುಲೇಷನ್ ಇದೆ. ಜನಕ್ಕೆ ನನ್ನಲ್ಲಿ ನಂಬಿಕೆ ಇದೆ. ಎಲ್ಲದರ ಬಗ್ಗೆ ನನಗೆ confidence ಇದೆ. ಇದಲ್ಲದೇನೂ ನನಗೆ ಕೈ ತುಂಬ ಕೆಲಸವಿದೆ. ಹೀಗೆ ಎಲ್ಲ ಸರಿಯಾಗಿ ಇರುವಾಗಲೇ, ನಿಮ್ಮಿಂದ ಅಪ್ಪಣೆ ಪಡೆಯಬೇಕು. ‘ಒಬ್ಬ ಸಂಪಾದಕನಿದ್ದ’ ಅಂತ ಮಾತಾಡಿಕೊಂಡರೆ ಅದು negative senseನಂತೆ ಕೇಳಿಸಬಾರದು. ನನ್ನ ಏಜೆಂಟರ ಹಣ ನನ್ನಲ್ಲಿದೆ. ಎಣಿಸಿ ಕಟ್ಟ ಕಡೆಯ ರುಪಾಯಿಯ ತನಕ ಎಲ್ಲವನ್ನೂ ಅವರಿಗೆ ಹಿಂತಿರುಗಿಸುತ್ತೇನೆ. ನನ್ನ ಏಜೆಂಟರು ನನ್ನನ್ನು ತುಂಬ ಪ್ರೀತಿಯಿಂದ, ಗೌರವದಿಂದ ನೋಡಿಕೊಂಡಿದ್ದಾರೆ. ನಾನೂ ಹಾಗೇ ನಡೆದುಕೊಳ್ಳಬೇಕು. ಉಳಿದ ಯಾವ ಬಾಕಿಯೂ ಇಲ್ಲ ನನಗೆ. ‘ಪತ್ರಿಕೆ’ ಮುದ್ರಿಸುವ ನಮ್ಮ ನಾಗಸುಂದರ್, ನನ್ನ ಅತ್ಯಂತ ಪ್ರೀತಿ ಪಾತ್ರರು.

ನಾನು ‘ಓಮನಸೇ’ ನಡೆಸುತ್ತೇನೆ. ಸ್ನೇಹಿತ ಉದಯ್ ಚೇತರಿಸಿಕೊಂಡು ಯಾವಾಗ ಬರುತ್ತಾನೋ ಗೊತ್ತಿಲ್ಲ. ಪತ್ರಿಕೆಯ ಕೆಲಸ ನನಗಿರಲಿ. ಲಹರಿ ಬಂದರೆ ಒಂದಷ್ಟು ಆಡಿಯೋ ಕೆಸೆಟ್ ನೀಡಿಯೇನು. ಇನ್ನು ಟೀವಿ ಕಾರ್ಯಕ್ರಮಗಳು; ಅದು ಛಾನಲ್‌ರವರ ಇಚ್ಛೆ. ಚಿಕ್ಕ ವಯಸ್ಸಿನ ಮಗನಿದ್ದಾನೆ. ಆ ಬಗ್ಗೆ ನನಗೆ ಜವಾಬ್ದಾರಿ ಇದೆ. ಮೊಮ್ಮಕ್ಕಳು ಮೂರಿವೆ. ಕರ್ಣ ಮನಸು ಮಾಡಿದರೆ ಇನ್ನೊಂದು, ಮಗದೊಂದು. ಈ ಜಮಾನಾದ ಹುಡುಗರಿಗೆ ಸರಿಯಾಗಿ ಮೀಟರ್ ಇಲ್ಲ. ನಾವೆಲ್ಲ ಎರಡಕ್ಕೆ, ಮೂರಕ್ಕೆ ಸಾಕೆಂದವರಲ್ಲ. ಈಗ ಒಂದಕ್ಕೇನೇ ಇವರು ಉಸ್ಸೆನ್ನುತ್ತಾರೆ.

ನಾನು - ನೀವು separate ಆಗೋಂಥದ್ದೇನಿಲ್ಲ. ‘ಪುಸ್ತಕ ರೆಡಿ’ ಅಂದರೆ ನೀವು ಖಂಡಿತ ಬರುತ್ತೀರಿ. ನಾನಿನ್ನು ಬಿಟ್ಟೇನೆಯೇ?

ಕೇವಲ ನಿಮ್ಮವನು

ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books