Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಆಗ ಮುಗೀತದೆ ನೋಡ್ರಿ ನಿಮ್ಮ ಲಾಸ್ಟ್ ಎರಡೂವರಿ ಅಂದಿದ್ದರು

“ನಿಮಗೀಗ ಸಾಡೇಸಾತು!"

ಅಂದವರೇ ಆತ ನನ್ನ ಮುಖ ನೋಡಿದರು. ಅವರ ಪೂರ್ತಿ ಹೆಸರು ನನಗೆ ಮರೆವಾಗಿದೆ. ಸರ್‌ನೇಮ್ ನೆನಪಿದೆ: ಬೆಂಗೇರಿ ಅಂತ. ‘ಸಂಯುಕ್ತ ಕರ್ನಾಟಕ’ದಲ್ಲಿ ಅವರಿಗಿದ್ದುದು ಪ್ರೂಫ್ ರೀಡರ್ ನೌಕರಿ. ಅವರು ವಿಶೇಷವಾಗಿ ಪ್ರೂಫ್ ಓದಿದನ್ನು ನಾನು ನೋಡಿರಲಿಲ್ಲ. ಈಗ ಬಿಡಿ, ದಿನಪತ್ರಿಕೆಗಳ ಆಫೀಸಿನಲ್ಲಿ ಅಂಥದೊಂದು ಹುದ್ದೆ, ಅದರ ಹೆಸರು ಕೇಳಿಸೈತ ಬರುವುದಿಲ್ಲ. In fact, ನಾವು ಸಂಪಾದಕೀಯ ವಿಭಾಗದವರು ಅಂತ ಇರ್ತೀವಲ್ಲ? ಸಂಪಾದಕ, ಸಹಾಯಕ ಸಂಪಾದಕ, ಸಹ ಸಂಪಾದಕ, ಸುದ್ದಿ ಸಂಪಾದಕ, ಹಿರಿಯ ಉಪ ಸಂಪಾದಕ, ಉಪ ಸಂಪಾದಕ, ವರದಿಗಾರ ಅಂತೆಲ್ಲ ಇರ್ತೀವಲ್ಲ? ನಾವು by and large, ಬರೆಯುವವರೇ. ಇದರಲ್ಲಿ ವರದಿಗಾರರನ್ನು ಹೊರತು ಪಡಿಸಿದರೆ ಉಳಿದವರೆಲ್ಲ ‘ಆರು ತಾಸು ಕೆಲಸ: ಏಳನೇ ತಾರೀಕಿಗೆ ಸಂಬಳ’ ಅನ್ನುವವರೇ. ಹಾಗೆ ಆರು ತಾಸು ಕುಳಿತು ಬರೆದುದನ್ನು ಕಂಪೋಸಿಟರ್‌ಗಳು ಕಂಪೋಸ್ ಮಾಡುತ್ತಾರೆ. ಅಂದರೆ, type ಮಾಡಿಡುತ್ತಾರೆ. ಇವತ್ತಿಗೆ ಸುಮಾರು ಇಪ್ಪತ್ತು ವರ್ಷಗಳಿಗೆ ಮುಂಚೆ ಕಂಪ್ಯೂಟರಿನಲ್ಲಿ type ಮಾಡುವ ರೂಢಿ ಇರಲಿಲ್ಲ. ಆಗ ಮೊಳೆ ಜೋಡಿಸುತ್ತಿದ್ದರು. ಹಾಗೆ ಜೋಡಿಸಿಯಾದ ಮೇಲೆ ಅವರೊಂದು proof ಕೊಡುತ್ತಾರೆ. ಅದರಲ್ಲಿನ ತಪ್ಪುಗಳನ್ನು ತಿದ್ದಿ ಸರಿ ಮಾಡುವವನು ಪ್ರೂಫ್ ರೀಡರ್. ಅಕಸ್ಮಾತ್ ಬರೆಯುವ ಅವಸರದಲ್ಲಿ ನಾವು ತಪ್ಪು ಮಾಡಿದರೂ ಪ್ರೂಫ್ ರೀಡರ್, ಅದನ್ನು ಸರಿಪಡಿಸಿ ಕೊಡಬೇಕು. ಅವನಿಗೆ ಆ ಜ್ಞಾನ ಇರಬೇಕು. ಅಪರೂಪಕ್ಕೆ ಅಂಥ ಜ್ಞಾನವಂತರನ್ನು ನಾನು ನೋಡಿದ್ದೇನೆ. ಅನೇಕ ವರ್ಷ ಇದೇ ರಂಗದಲ್ಲಿ ದುಡಿದು ದೊಡ್ಡ ಮಟ್ಟದ ಹೆಸರು ಮಾಡಿದ ಪಾ.ವೆಂ. ಆಚಾರ್ಯರು ವರ್ಷಗಟ್ಟಲೆ ಈ ಪ್ರೂಫ್ ರೀಡಿಂಗ್ (ಕರಡು ವಾಚನ) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗಿಂತ perfect ಆದ ಇನ್ನೊಬ್ಬರನ್ನು ನಾನು ನೋಡಿಲ್ಲ.

ಬಿಡಿ. ನಾನು ಹೇಳುತ್ತಿದ್ದುದು ಪ್ರೂಫ್ ರೀಡರ್ ಬೆಂಗೇರಿಯವರ ಬಗ್ಗೆ. ಅವರು ನಿಜಕ್ಕೂ ಚೆಲುವ. ನೀವು ಊಹಿಸಲಾರದಷ್ಟು ಬೆಳ್ಳಗಿದ್ದರು. ಅವರದು ವಿಶಾಲವಾದ ಲಠ್ಠ ಹಣೆ. ತಲೆಗೂದಲು ಹಿಂದಕ್ಕೆ ಬಾಚುತ್ತಿದ್ದುದರಿಂದ ಹಣೆ ಮತ್ತೂ ದೊಡ್ಡದು ಅನ್ನಿಸುತ್ತಿತ್ತು. ಸರಿಯಾಗಿ ಹಣೆಯ ಅರ್ಧಕ್ಕೆ ಅವರೊಂದು ಕಪ್ಪನೆಯ ತಿಲಕ ಬರೆದುಕೊಳ್ಳುತ್ತಿದ್ದರು. ಬೆಂಗೇರಿಯವರು ತುಂಬು ತೋಳಿನ ಅಂಗಿ ಬಿಟ್ಟು ಅದ್ಯಾವ ಕಾಲವಾಗಿತ್ತೋ? ಸದಾ half shirt. ಅವರು ಪ್ರೂಫ್ ರೀಡಿಂಗ್‌ಗಿಂತ ಶ್ರದ್ಧೆಯಿಂದ ಮಾಡುತ್ತಿದ್ದ ಕೆಲಸವೆಂದರೆ, ಪ್ರತೀ ವರ್ಷದ ‘ಸಂಯುಕ್ತ ಕರ್ನಾಟಕ’ದ ಕ್ಯಾಲೆಂಡರ್ ಸೃಷ್ಟಿ. ಅವರದನ್ನು ಚೆಂದಾಗಿಯೇ ಮಾಡುತ್ತಿದ್ದರು. ಇಷ್ಟಾಗಿ, ಅವರು ಬೇರೆ ತಂಟೆ ತಕರಾರುಗಳಿಗೆ ಹೋದವರಲ್ಲ. ಯಾರಾದರೂ ತಾವಾಗೇ ಬಂದು ಕೇಳಿದರೆ, ಹಾಗೆ ಕೇಳಿದವರು ತಮ್ಮ ಜಾತಕವನ್ನೂ ಕೊಟ್ಟರೆ, ಬೆಂಗೇರಿಯವರು ತುಂಬ ಕಡಿಮೆ ಮಾತುಗಳಲ್ಲಿ ಜ್ಯೋತಿಷ್ಯ ಹೇಳುತ್ತಿದ್ದರು. ಅದಕ್ಕಾಗಿ ಅವರೆಂದೂ ದುಡ್ಡು-ಕಾಸು ಕೇಳಿದವರಲ್ಲ. ನಾನು ಅದ್ಯಾವುದೋ ಪಾತಾಳದಲ್ಲಿದ್ದ ನನ್ನ ಜಾತಕ ಹುಡುಕಿ ಅವರಿಗೆ ಕೊಟ್ಟಿದ್ದೆ. ಕೊಡಲಿಕ್ಕೆ ನನ್ನಲ್ಲಿ ಇತ್ತಾದರೂ ಏನು? ಅವರಿಗದು ಗೊತ್ತೂ ಇತ್ತು. ಉಳಿದಂತೆ ಅವರೊಂದಿಗೆ ನಾನು ಸ್ನೇಹದಿಂದಲೇ ಇದ್ದೆ.

ಒಂದ್ಹತ್ತು ನಿಮಿಷ ಅವರು ಪ್ರಪಂಚ ಮರೆತು ನನ್ನ ಜಾತಕವನ್ನು study ಮಾಡಿದರು. ಆನಂತರ ತಲೆಯೆತ್ತಿ ನನ್ನ ಮುಖ ದಿಟ್ಟಿಸಿ, “ನಿಮಗೀಗ ಸಾಡೇಸಾತು..." ಅಂದರು. ನಾನೇನೂ ಬೆಚ್ಚಿ ಬೀಳಲಿಲ್ಲ. ಆ ಕಡೆ ಉತ್ತರ ಕರ್ನಾಟಕದಲ್ಲಿ ಅದನ್ನು ‘ಸಾಡೇ ಸಾತು’ ಅನ್ನುತ್ತಾರೆ. ಅಲ್ಲಿನ ಮಟ ಮಟ ಮಧ್ಯಾಹ್ನದಂತಹ ಚುರುಕು ನಾಲಗೆಯ ಬ್ರಾಹ್ಮಣರು ಅದಕ್ಕೆ “ಏಳುರಾಟ ಶನಿ!" ಅಂತಾರೆ. ಕೆಲವರು “ಅವನಿಗೆ ಏಳೂವರಿ ನಡೆದದ..." ಅನ್ನುತ್ತಾರೆ. ಅದರ ಅರ್ಥ ಸಿಂಪಲ್. ಏಳೂವರೆ ವರ್ಷಗಳ bad period. “ಅದರಿಂದ ಏನಾಗ್ತದ?" ಅಂತ ಅವರನ್ನು ಕೇಳಿದೆ. “ಕೆಟ್ಟದಾಗ್ತದ!" ಅಂದರಾತ. ಸ್ವಲ್ಪ ತಡೆದು “ಏನು ಮಾಡಿದರೂ ಕೆಟ್ಟದಾಗ್ತದ. ನೀವೊಂದು ನಾಯಿ ಸಾಕಿದರೆ, ಅದಕ್ಕೂ ಕೆಟ್ಟದಾಗ್ತದ. ಏನೇ ಅಂದುಕೊಂಡಿದ್ದರೂ ಅದು ನಿಮ್ಮ ಲೆಕ್ಕಾಚಾರಧಾಂಗ ಆಗೂದಿಲ್ಲ. ನಿಮಗೆ ರೊಕ್ಕ ಬರಾಂಗಿಲ್ಲ. ಬಂದರೂ ಕೈಯ್ಯಾಗ ನಿಂದ್ರಾಂಗಿಲ್ಲ. ಜಡ್ಡಿಗೆ ಬೀಳತೀರಿ? ಸಣ್ಣಪುಟ್ಟ ಆಕ್ಸಿಡೆಂಟಿನಂಥಾವು ಆಗಬಹುದು. ಹೆಸರು ಕೆಡ್ತದ. ಅದನ್ನೇ ಹೇಳಿದ್ದು: ನಿಮಗ ಕೆಟ್ಟಧಾಗ್ತದ. ಒಂದೇನು ಪುಣ್ಯ ಅಂದರ, ಈಗಾಗಲೇ ಅದರ ಮೊದಲಿನ ಪಾರ್ಟ್ ಎರಡೂವರಿ ವರ್ಷ ಏನಿತ್ತೂ... ಅದು ಮುಗದದ. ಎರಡನೇ ಪಾರ್ಟ್ ಎರಡೂವರಿ ವರ್ಷ ನಡದದ. ನೀವು ಹುಶಾರಿಲೇ ಇರ್ರಿ. ದುಡುಕಿನ ಕೆಲಸ ಮಾಡಬ್ಯಾಡ್ರಿ. ಇದು ಕಳೆದು ಮೂರನೇ partನ ಎರಡೂವರಿ start ಆಯ್ತಂದ್ರೆ ಸ್ವಲ್ಪ ಅದರ ತಾಪ ಕಡಿಮಿ ಆಗ್ತದ. ಶನಿ ಮಹಾರಾಜ ಬಿಟ್ಟು ಹೋಗೂ ಮುಂದೆ ಎಲ್ಲಾ ಕೊಟ್ಟು ಹೋಗತಾನ" ಅಂದರು.

“ಏನು ಕೊಡತಾನ?" ಅಂದೆ.

“ಏನೇನು ಕಸಗೊಂಡಾನೋ ಅದನ್ನೆಲ್ಲ return ಕೊಡ್ತಾನ. ಅದರ ಡಬಲ್ ಕೊಡ್ತಾನ. ಮನಸು ಬಂತಂದರ ಕಸಗೊಂಡದ್ದರ ಹತ್ತು ಪಟ್ಟು ಕೊಟ್ರೂ ಕೊಡ್ತಾನ!" ಅಂದರು ಬೆಂಗೇರಿ.

“ಪರವಾಗಿಲ್ಲ ಬಿಡ್ರೀ, ನಿಮ್ಮ ಶನಿ interesting ಇದ್ದಾನೆ!" ಅಂದವನೇ ಅವರ ಮುಖ ನೋಡಿ ನಕ್ಕೆ. ಬೆಂಗೇರಿ ನಗಲಿಲ್ಲ. ಜಾತಕ ನನ್ನ ಕೈಗೆ ವಾಪಸ್ ಕೊಟ್ಟರು. ಅವರು ಮುಂದೆ ನಮ್ಮ ಆಫೀಸಿನ ಕಾರ್ಮಿಕ ಚಳವಳಿಗೆ ಹೋಗಿ, ಅದರ ಪರಿಣಾಮದಿಂದಾಗಿ ನೌಕರಿ ಕಳೆದುಕೊಂಡರು. ಅವರಿಗೆ “ಸಾಡೇಸಾತು...!" ಅಂದೆ. “ಸುಮ್ನಿರು, ಹಾಗೆಲ್ಲ ಅನ್ನಬಾರ‍್ದು" ಅಂದವರು ನಮ್ಮ ಚಿತ್ರ ಕಲಾವಿದ ಪಿ.ಆರ್. ಪಾಟೀಲರು.

ಆಗ ನನ್ನ ಬದುಕು ನಿಜಕ್ಕೂ ದುರ್ಭರವಾಗಿತ್ತು. ಆಗಿನ್ನೂ ಚೇತನಾಳನ್ನು ಹುಬ್ಬಳ್ಳಿಗೆ ಕರೆಸಿಕೊಂಡಿರಲಿಲ್ಲ. ಸಮಯ ಸಿಕ್ಕಾಗ ನಾನೇ ಬಳ್ಳಾರಿಗೆ ಹೋಗಿ ಲಲಿತೆಯನ್ನ, ಮಕ್ಕಳನ್ನ ಮಾತಾಡಿಸಿ ಬರುತ್ತಿದ್ದುದು. ನನ್ನ ಬದುಕಿನ ಅತಿಕೆಟ್ಟ ದಿನಗಳು ನಡೆಯುತ್ತಿದ್ದವು. ಲಲಿತೆ ಅದೇನೇನು ಕಷ್ಟ ಅನುಭವಿಸಿದಳೋ? ಪ್ರತೀ ತಿಂಗಳು ತಪ್ಪಿಸದೆ ಹೇಗೋ ಮಾಡಿ ಎರಡು ಸಾವಿರ ರುಪಾಯಿ ಹಂದಿಸಿ ಅವಳಿಗೆ ತಲುಪಿಸುತ್ತಿದ್ದೆ. ಉಳಿದದ್ದೆಲ್ಲ ಅವಳದೇ ಕರ್ಮ. ಅವತ್ತು ಬೆಂಗೇರಿ ಜ್ಯೋತಿಷ್ಯ ಹೇಳಿದರಲ್ಲ? ಸರಿಯಾಗಿ ಅದಕ್ಕೆ ಒಂದು ವಾರದ ಮುಂಚೆ ಧಾರವಾಡದ ನನ್ನ ಮಿತ್ರ ಬಸವಪ್ರಭು ಮುಧೋಳದ ಕಡೆಯಿಂದ ನನಗೊಂದು ನಾಯಿ ಮರಿ ತಂದು ಕೊಟ್ಟಿದ್ದರು. ಇದ್ದ ಅಷ್ಟೂ ವಹಿವಾಟು, ಪ್ರಿಂಟಿಂಗ್ ಪ್ರೆಸ್ಸು, ಪತ್ರಿಕೆ (ಬಳ್ಳಾರಿ ಪತ್ರಿಕೆ) ಎಲ್ಲವನ್ನೂ close ಮಾಡಿ 1988ರ ಏಪ್ರಿಲ್ 9ರಂದು ನಾನೊಂದು ಲಾರಿ ಹಿಡಿದು ಶಾಶ್ವತವಾಗಿ ಬಳ್ಳಾರಿ ಬಿಟ್ಟುಬಿಟ್ಟಿದ್ದೆ. ಹಾಗೆ ಅವಮಾನಿತನಾಗಿ ಬಳ್ಳಾರಿಯನ್ನು ಶಾಶ್ವತವಾಗಿ ತೊರೆಯಲಿಕ್ಕೆ ಕೊಂಚ ಮಟ್ಟಿಗೆ ಕಾರಣನಾಗಿದ್ದವನು ಚಿಕ್ಕದೊಂದು ಗುಂಪಿನ ಮುಖಂಡ ಸಿರಿಗೇರಿ ಬಸವರಾಜ. ಅವನಿಗೆ ಅದೇನು ದ್ವೇಷವೋ ಕಾಣೆ: ಅವನು ಇದ್ದಕ್ಕಿದ್ದಂತೆ ನನ್ನ ಶತ್ರುವಾದ. ತೀರ ಅತಿರೇಕಕ್ಕೆ ಹೋಗಿತ್ತು ಶತೃತ್ವ. ಅವನನ್ನು ಶಪಿಸುತ್ತಲೇ ಬಳ್ಳಾರಿಯಿಂದ ಹೊರ ಬಿದ್ದಿದ್ದೆ.

ಆದರೆ ಬದುಕಿನಲ್ಲಿ ಎಂಥ ಕಾಕತಾಳೀಯಗಳು ನಡೆಯುತ್ತವೆ ನೋಡಿ. ಸದರಿ ಬಸವರಾಜ ತುಂಬು ಕುಟುಂಬದಿಂದ ಬಂದವನು. ಅವನ ಊರು ಬಳ್ಳಾರಿ ಹತ್ತಿರದ ಸಿರಿಗೇರಿ. ಅವನ ತಂದೆ ಬಗ್ಗೆ ಹಳ್ಳಿಗರು ಅಷ್ಟಿಷ್ಟು ಮಾತನಾಡುತ್ತಿದ್ದರೇ ಹೊರತು, ಅವನ ಬಗ್ಗೆ ಅಂಥದ್ದೇನೂ ಇರಲಿಲ್ಲ. ಅವನ ಖಾಸಾ ತಮ್ಮ ಜಯಣ್ಣ ನನ್ನ ಕ್ಲಾಸ್‌ಮೇಟ್ ಮತ್ತು ಹಸುವಿನಂಥ ಸಾಧು. ಇನ್ನೊಬ್ಬ ಸೋದರ ಪನ್ನಾರಾಜ್ ಸ್ಥಳೀಯ ಮುಖಂಡ. ಹಾಗೆ ಅಣ್ಣ ತಮ್ಮಂದಿರ ನಡುವೆ ಬೆಳೆದ ಸಿರಿಗೇರಿ ಬಸವರಾಜ ಆಗಷ್ಟೆ ಸ್ಫುರದ್ರೂಪಿ ಹುಡುಗಿಯನ್ನ ಮದುವೆಯಾಗಿದ್ದ. ಅವನಿಗೆ ಅನಾರೋಗ್ಯ ಖಂಡಿತ ಇರಲಿಲ್ಲ. ಆದರೆ ನಾನು ಊರು ಬಿಟ್ಟೆನಲ್ಲ? ಅದಕ್ಕೆ ಸರಿಯಾಗಿ ಇಪ್ಪತ್ನಾಲ್ಕು ಗಂಟೆಯ ನಂತರ ರಾತ್ರಿ ಮನೆಯಲ್ಲಿ ಮಲಗಿದವನು “ಎದೆ ನೋಯ್ತದೆ" ಅಂದಿದ್ದಾನೆ. ಮೂರ್ಖ ಶಿಖಾಮಣಿ ಒಂದು ಕಾರ್ ತರಿಸಿಕೊಂಡು ಆಸ್ಪತ್ರೆಗೆ ಹೋಗಿದ್ದರೆ ಆಗುತ್ತಿತ್ತು. ಸ್ವತಃ ಅವನೊಂದು ಆಟೋ ಡ್ರೈವರ್‌ಗಳ ಯೂನಿಯನ್ ಮಾಡಿದ್ದ. ಆಟೋ ತರಿಸಿದ್ದರೂ ಆಗುತ್ತಿತ್ತು. ಎರಡನ್ನೂ ಬಿಟ್ಟು ಪರಿಚಿತರೊಬ್ಬರ ಸ್ಕೂಟರಿನಲ್ಲಿ, ಹಿಂದುಗಡೆ ಸೀಟಿನಲ್ಲಿ ಕುಳಿತು ಅಜಮಾಸು ಮೂರು ಕಿಲೋ ಮೀಟರು ದೂರದ ಸರ್ಕಾರಿ ಆಸ್ಪತ್ರೆಗೆ ಹೊರಟಿದ್ದಾನೆ. ಊರು ನಿರ್ಜನ. ಸ್ಕೂಟರು ನಿಧಾನವಾಗೇ ಚಲಿಸಿದೆ. ದಾರಿಯಲ್ಲಿ ಒಂದು ಬ್ರಿಡ್ಜ್ ದಾಟಬೇಕು. ಅದನ್ನು ಅರ್ಧದಷ್ಟೂ ಕ್ರಮಿಸಿಲ್ಲ: ಹಿಂದಿನ ಸೀಟಿನಲ್ಲಿ ಕುಳಿತವನು ಹಾಗೇ ಹಿಂದಕ್ಕೆ ವಾಲಿದ್ದಾನೆ. That's all. ಅಷ್ಟೆಲ್ಲ ಧೀರ, ಶೂರ ಅಂತ ಮಾತಾಡುತ್ತಿದ್ದವನು ಹಾಗೇ ಹಿಂದಕ್ಕೆ ವಾಲಿ, ಆ ಬ್ರಿಡ್ಜ್‌ನ ಮೇಲೆ ಅಂಗಾತ ಬಿದ್ದು ಸತ್ತೇ ಹೋಗಿದ್ದಾನೆ. ಬೀಳುವ ಮೊದಲೇ ಸತ್ತಿದ್ದನಾ? ಸತ್ತ ಮೇಲೆ ಬಿದ್ದನಾ? ಯಾಂವ ಬಲ್ಲ. “ನೀನು ಸುಮ್ ಸುಮ್ನೆ ಊರು ಬಿಟ್ಟೆ. ಅವನೊಬ್ನು ಸತ್ತನಲ್ಲ? ಈಗ ಬಂದ್ರೂ ಆದೀತು. ಬೇರೆ ಶತ್ರುಗಳ್ಯಾರಿದ್ದಾರೆ? ಬರ‍್ತೀಯೇನೋ ನೋಡು. ಬಂದು ಬಿಡು" ಅಂತ ಗೆಳೆಯನೊಬ್ಬ ಅಂದ. “No way. ಬೆಂಗಳೂರಲ್ಲೇ ನೀನು settle ಆಗು" ಅಂದ ಸುರೇಶ್ ಶೆಟ್ಟಿ. ನಾನು ಕೂಡ ನಿರ್ಧರಿಸಿದ್ದೆ: Good bye to Bellary. ಅದಾದ ನಂತರ ಸಿರಿಗೇರಿ ಬಸವರಾಜನ ಮನೆಯಲ್ಲಿ ನಡೆದದ್ದು ಘೋರ. ಅವನ ಹೆಂಡತಿ ಇಡೀ ಮನೆತನದ ಮರ್ಯಾದೆ ಕಳೆದಳು. ರಂಕಲು ಮಾಡಿಕೊಂಡಳು. ಅದೊಂದು ಬಾಳಬಾರದ ಬದುಕು, ಬಿಡಿ.

ಆದರೆ ಬೆಂಗಳೂರಿಗೆ ಬಂದು ನೆಲೆಗೊಳ್ಳಲು ನಾನು ಪಟ್ಟ ಪಾಟಲು: ಒಂದೊಂದಲ್ಲ ಬಿಡಿ. ಇಲ್ಲಿ ‘ಅಭಿಮಾನಿ’ ಪ್ರಕಾಶನದಲ್ಲಿ ಕೆಲಸ ಮಾಡಿದೆ. ನನ್ನೊಂದಿಗೆ ತುಂಬ ಸ್ನೇಹದಿಂದಿದ್ದ ಗಣೇಶ್ ಕಾಸರಗೋಡು ಅಲ್ಲಿ ಜೊತೆಯಾದರು. ಅಲ್ಲಿ ದಾಸಾಶ್ರಮದ ಎದುರಿನ ಸ್ಲಮ್‌ನಲ್ಲಿ ಒಂದು ರೂಮ್ ಮಾಡಿಕೊಂಡಿದ್ದೆ. ನಾಯಕ್ ಎಂಬ ಮಿತ್ರನೊಬ್ಬ ಜೊತೆಯಾಗಿದ್ದ. ಮುಂದೆ ಸೀತಾನದಿ ಸುರೇಂದ್ರ ಬಂದು ಸೇರಿಕೊಂಡ. ಇವನು ಅನಂತ ಚಿನಿವಾರ್ ಕೂಡ ‘ಅಭಿಮಾನಿ’ ಬಳಗ ಸೇರಿಕೊಂಡ. ಕೊಂಚವೇ ಹಣವಿದ್ದರೂ ಸಾಕು: ನನ್ನ ಸುಝಕಿ ಪ್ರೆಸ್‌ಕ್ಲಬ್‌ನ ದಾರಿ ಹಿಡಿಯುತ್ತಿತ್ತು. ಅಲ್ಲಿ ದೊರೆಯುತ್ತಿದ್ದ ‘ಮನೋ ಮೃಷ್ಟಾನ್ನ’ವೆಂದರೆ, ನನ್ನನ್ನು ಕೈ ಹಿಡಿದು, ಸಲಹಿದ ಹಿರಿಯರಾದ ರಾಜಾರಾಯರು. ಅವರಿಗೆ ಗುಣಗ್ರಾಹ್ಯವಿತ್ತು. ಬುದ್ಧಿವಂತರನ್ನು ತಕ್ಷಣ ಗುರುತಿಸುತ್ತಿದ್ದರು. ಬೆಂಗಳೂರಿಗೆ ಹೋಗಿ ಅಲ್ಲೇ ನೆಲೆಗೊಳ್ಳಲು ಹವಣಿಸುತ್ತಿದ್ದ ನನ್ನನ್ನು ಕಿವಿ ಹಿಂಡಿ ಹೊಸ ನೌಕರಿಗೆ ಹಚ್ಚಿದ್ದು ಅದೇ ಗುರುವರ್ಯ ಕೆ.ರಾಜಾರಾವ್. ನೌಕರಿ ಬಿಡಿ, ಅವತ್ತೇ ಸಂಜೆಗೆ ಸಿಕ್ಕಿತ್ತು. ಆದರೆ ಹಟಮಾರಿ ಶಾಮರಾಯರು ‘ನೀನು ಅಲ್ಲಿ ಹೋಗಿ join ಆಗು. ಹುಬ್ಬಳ್ಳಿ ‘ಸಂಯುಕ್ತ ಕರ್ನಾಟಕ’ದಲ್ಲಿ’ ಅಂದರು. ಬೆಂಗಳೂರಿನ ಆ instalmentನ ಎಂಟು ತಿಂಗಳು ಹಾಗೆ ಮುಗಿದು ಹೋಗಿದ್ದವು.

ಬೆಂಗಳೂರಿನಿಂದ ಹೋದವನು ಅಲ್ಲಿನ ಪ್ರೂಫ್ ರೀಡರ್ ಬೆಂಗೇರಿಯವರಿಗೆ ಹೇಳಿದ್ದಿದ್ದರೆ “ಮೊದಲನೇ ಎರಡೂವರಿ ವರ್ಷದ ಸಾಡೇಸಾತು ಇಲ್ಲಿಗೆ ಮುಗೀತು ನೋಡ್ರಿ!" ಅಂದಿರುತ್ತಿದ್ದರೇನೋ? ಬದುಕಂತೂ ಕೊಂಚ ಸಹನೀಯ ಅನ್ನಿಸತೊಡಗಿತು. ಅಲ್ಲಿ ಸಂಪಾದಕರಾದ ಆರ್.ಎ. ಉಪಾಧ್ಯರ ಸ್ನೇಹ ದೊರಕಿತು. ಹಿರಿಯರಾದ ಪಾ.ವೆಂ. ಆಚಾರ್ಯರು ‘ಸಂಯುಕ್ತ ಕರ್ನಾಟಕ’ದಿಂದ ರಿಟೈರ್ ಆಗಿದ್ದರಾದರೂ ‘ಸಂಯುಕ್ತ ಕರ್ನಾಟಕ’ ಆಫೀಸಿಗೆ ಆಗಾಗ ಬರುತ್ತಿದ್ದರು. “ಓ... ಬೆಳಗೆರೆ ಅಂದ್ರೆ ನೀವೇನಾ? ನಿಮ್ಮದೊಂದು ಕತೆಯನ್ನ ಓದಿದ್ದೇನೆ. ಚೆನ್ನಾಗಿ ಬರೆಯುತ್ತೀರಿ" ಅಂತ ಮೊದಲ ದಿನವೇ ಅಂದಿದ್ದರು ಆಚಾರ್ಯರು. ಅವರನ್ನು ನಾನು ಸಾಕಷ್ಟು ಹಚ್ಚಿಕೊಂಡಿದ್ದೆ. ತೀರ ಸಲುಗೆ ಇರದಿದ್ದರೂ ನಾನು ಮೆಚ್ಚುಗೆಯಿಂದ ನೋಡುತ್ತಿದ್ದುದು ಸಹ ಸಂಪಾದಕರು, ಮುಂದೆ ಸಂಪಾದಕರೇ ಆದ ಎನ್.ವಿ. ಜೋಶಿ ಅವರನ್ನ. ಅವರು ಕೊನೆಗಾಲದಲ್ಲಿ ಬಂದು ಬೆಂಗಳೂರಿನಲ್ಲಿ settle ಆದರು. ಈಗ್ಗೆ ಕೆಲ ವರ್ಷಗಳ ಹಿಂದೆ ತೀರಿಕೊಂಡರು. ವಯಸ್ಸಿನಲ್ಲಿ ನಾನು ಚಿಕ್ಕವನು ನಿಜ. ಆದರೆ ಆ ಎಲ್ಲ ಹಿರಿಯರೊಂದಿಗೆ ನನ್ನ ಒಡನಾಟವಿತ್ತು. ಬಾರದ್ದನ್ನು ಅವರಿಂದ ಕಲಿತೆ. ಬಂದುದೆಲ್ಲವನ್ನೂ ಮಾಡಿದೆ. ನನ್ನ ಕುಡಿತ ಕೂಡ ಕಂಟ್ರೋಲ್ ತಪ್ಪಿರಲಿಲ್ಲ. ಅದೇನೋ ಕಾಣೆ, ನನ್ನ ವ್ಯಕ್ತಿಗತ ದುಃಖಗಳನ್ನೆಲ್ಲ ನಾನು ಮರೆತಿದ್ದು ಕುಡಿತದಿಂದಾಗಿ ಅಲ್ಲ: ನನ್ನ ಪುಸ್ತಕಗಳ ತೆಕ್ಕೆಯಲ್ಲಿ! ಆಫೀಸು ಬಿಟ್ಟಿತೆಂದರೆ, ನಾನು ನೇರವಾಗಿ ಹೋಗುತ್ತಿದ್ದುದು ಹುಬ್ಬಳ್ಳಿಯ ಮೇದಾರ ಓಣಿಯ ಸರಾಯಿ ಅಂಗಡಿಗೆ. ಅಲ್ಲೂ ಓದುತ್ತಿದ್ದೆ. ಕುಡಿಯುತ್ತಿದ್ದೆ ನಿಜ: ಕೈಯಲ್ಲಿನ ಪುಸ್ತಕದಲ್ಲಿ ಮುಳುಗಿರುತ್ತಿದ್ದೆ. ಓದುವಷ್ಟು ರಿಫ್ರೆಶನಿಂಗ್ ಮತ್ಯಾವುದೂ ಅಲ್ಲ. ಆಗಾಗ ಗೆಳೆಯ ಅಶೋಕ ಶೆಟ್ಟರ್ ಬರುತ್ತಿದ್ದ. ಅವನ ಸ್ನೇಹವನ್ನು ನಾನು ಲಡ್ಡೂ ಸವಿದಂತೆ ಸವಿಯುತ್ತೇನೆ: ಈಗಲೂ!

ಬೆಂಗೇರಿಯವರು ಹೇಳಿದ್ದು ನಿಜವೋ ಸುಳ್ಳೋ ಗೊತ್ತಿಲ್ಲ. ಒಡೆದು ಹೋಗಿದ್ದಂಥ ನಮ್ಮ ಸಂಸಾರ ಅಲ್ಲಿ ಹುಬ್ಬಳ್ಳಿಯಲ್ಲಿ ಒಂದಾಯಿತು. ಅಲ್ಲಿ ವಿದ್ಯಾ ಪರಿಚಯವಾದಳು. ಉಮೇಶ ಗೆಳೆಯನಾದ. ಅನುಪಮಾ ಇದ್ದುದು ಹೊಳೆನರಸೀಪುರದಲ್ಲಿ. ಆದರೆ ಅವಳ ಸಖ್ಯ ದೊರೆಯಿತು. One fine day, ಲಲಿತಾ ಮತ್ತು ಭಾವನಾ ಬಂದಿಳಿದರು. ಹಿಂದೆಯೇ ಕರ್ಣ ಬಂದ. ವಿಶಾಲವಾಗಿದ್ದ ಒಂದು ಮನೆಗೆ shift ಆದೆವು. ಅಲ್ಲಿ ರಜನಿ ಸಿಕ್ಕಳು. ಧಾರವಾಡದ ಬಸವಪ್ರಭು ಅವರು ತಂದುಕೊಟ್ಟ ನಾಯಿಮರಿ ಕಣ್ಣೆದುರಿಗೇ ಬೆಳೆಯಿತು. ಅದಕ್ಕೆ ‘ಸಿರಿಗೇರಿ ಬಸವರಾಜ’ ಅಂತಲೇ ಹೆಸರಿಟ್ಟಿದ್ದೆ. ಪ್ರಖ್ಯಾತ ಸಂಗೀತಗಾರರಾದ ಹಾಸಣಗಿ ಗಣಪತಿ ಭಟ್ಟರು ಗೆಳೆಯರಾದರು. ಹುಬ್ಬಳ್ಳಿಯಲ್ಲಿದ್ದಾಗ ನನಗೆ ಕೆಲವು ಪ್ರಶಸ್ತಿಗಳು ಬಂದವು. ಅಲ್ಲಿದ್ದಾಗಲೇ ನನಗೆ ಖುಷ್ವಂತ್ ಸಿಂಗ್ ಅವರ ಪರಿಚಯವಾಯಿತು. My life was good. “ಈಗ ಎರಡನೇ ಪಾರ್ಟು ಮುಗೀತು ನೋಡ್ರಿ. ಇನ್ನು ಒಳ್ಳೇದಾಗ್ತಾ ಹೋಗ್ತದೆ. ಇದು ಕೊನೀ ಎರಡೂವರಿ!" ಅಂದರು ಬೆಂಗೇರಿ.

“ಈಗ ಏನಾಗ್ತದೆ?" ಅಂದೆ.

“ಈ ಕೊನೀ ಎರಡೂವರಿ ಮುಗಿಯೋದರೊಳಗೆ ನಿಮಗೆ ಮೂವತ್ತಾರು ವರ್ಷ ವಯಸ್ಸಾಗ್ತದ. ಅಲ್ಲಿಂದ ಮುಂದೆ ಮೂವತ್ತಾರು ವರ್ಷ ನಿಮ್ಮನ್ನ ಹಿಡಿಯೋರೇ ಇರೂದಿಲ್ಲ!" ಅಂದರು.

ಯಾರಾದರೂ, ಯಾವಾಗಲಾದರೂ ನನ್ನನ್ನು ಹಿಡಿದಿದ್ದರಾ? ನಾನು ಚೆಕ್ ಮಾಡಿಕೊಂಡಿಲ್ಲ. I love the life.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 15 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books