Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಆಶ್ರಯ ಪಡೆದು ಇಲ್ಲಿ ವಾಚ್‌ಮನ್ ಆಗಿದ್ದವನೊಬ್ಬ ಇರಾನ್‌ಗೆ ಹೋಗಿದ್ದ!

Not surprised.

ಕಳೆದು ಹೋದ ವರ್ಷಗಳನ್ನು ನೆನೆಯುತ್ತ ಕುಳಿತರೆ ಜ್ಞಾಪಕಗಳ ರೈಲೊಂದು ಓಡತೊಡಗುತ್ತದೆ. ಅವರೆಲ್ಲ ಅದೆಷ್ಟು ಮಂದಿ? ಅವರನ್ನು ನಾನು exservice men ಅಂತ ಕರೆಯುತ್ತೇನೆ. ಅವರು ಒಬ್ಬಿಬ್ಬರಲ್ಲ: ನನ್ನೊಂದಿಗೆ ‘ಪತ್ರಿಕೆ’ಗಾಗಿ ಕೆಲಸ ಮಾಡಿದವರು. They are in hundreds. ಆ ಪೈಕಿ ಕೆಲವರು ನನಗೆ ಮರೆತೇ ಹೋಗಿದ್ದಾರೆ. ಕೆಲವರನ್ನು ಕಷ್ಟಪಟ್ಟು ನಾನೇ ಸ್ಮರಣೆಯಿಂದ ಹೊರಹಾಕಿದ್ದೇನೆ.

ಒಬ್ಬನಿದ್ದ ಶ್ರೀಧರ ಅಂತ. ಅವನು ಮೈಸೂರಿನವನು. ಕನ್ನಡಕ ಹಾಕಿಕೊಳ್ಳುತ್ತಿದ್ದ. ಸಿಗರೇಟಿನ ಚಟವಿತ್ತು. ಚೆನ್ನಾಗೇ ಬರೆಯುತ್ತಿದ್ದ. ಅವನು ನಮ್ಮಲ್ಲಿ sub editor. ಒಮ್ಮೆ ಬಂದವನು, “ಆಗಲ್ಲ ಸರ್, ಮನೆ ಕಡೆ ಪ್ರಾಬ್ಲಂ ಇದೆ. ನೀವು ಅಂದ್ರೆ ನನಗೆ ತುಂಬ ಪ್ರೀತಿ. ಆದರೇನು ಮಾಡಲಿ? ಕೆಲಸ ಬಿಟ್ಟು ಮೈಸೂರಿಗೆ ಹೋಗಲೇಬೇಕು" ಅಂದಿದ್ದ. ಮರುವಾರವೇ ಒಮ್ಮೆ ಕೈ ಕುಲುಕಿ ಹೊರಟು ಹೋದ. ಅದಾದ ಕೆಲವು ತಿಂಗಳಿಗೆ ಸುದ್ದಿ ಬಂತು. ಶ್ರೀಧರ two wheeler ಮೇಲೆ ಹೋಗುತ್ತಿದ್ದವನು ಲಾರಿ ಅಡಿಗೆ ಬಿದ್ದು ಸತ್ತು ಹೋಗಿದ್ದ: on the spot.

ಇನ್ನೊಬ್ಬನಿದ್ದ ದ್ವಾರಕನಾಥ್ ಅಂತ. He was funny. ಇಲ್ಲೇ ಹತ್ತಿರದಲ್ಲೆಲ್ಲೋ ಇತ್ತು ಅವನ ಮನೆ. ನಮ್ಮ ಅಕೌಂಟ್ಸ್ ವಿಭಾಗದಲ್ಲಿದ್ದ. ಅವನಿಗೆ ಇಲ್ಲಿ ಆಫೀಸಿನಲ್ಲಿ ರಾತ್ರಿ ಉಳಿದು ಕೆಲಸ ಮಾಡುವಂತಹುದೇನೂ ಇರಲಿಲ್ಲ. ಆದರೆ ಉಳಿಯುತ್ತಿದ್ದ. “ಬೇರೆ ಏನಿಲ್ಲ, ಇವತ್ತು ರಾತ್ರಿ ನೀವು ‘ಮಾಟಗಾತಿ’ ಧಾರಾವಾಹಿಯ ಕುರಿತು ಬರೆಯುತ್ತೀರಿ. ನಾನೇ first reader. ಓದಿಬಿಟ್ಟು ಮಲ್ಕೋತೀನಿ" ಅನ್ನುತ್ತಿದ್ದ. ಆಗೆಲ್ಲ ನಾನು ವರದಿಗಾಗಿ ಒಬ್ಬನೇ drive ಮಾಡಿಕೊಂಡು ಹೋಗುತ್ತಿದ್ದೆನಲ್ಲ? ಬೋರ್ ಆಗೋದ್ಯಾಕೆ ಅಂತ ಈ ಹುಡುಗರ ಪೈಕಿ ಒಬ್ಬನನ್ನು ಕರೆದುಕೊಂಡು ಹೋಗುತ್ತಿದ್ದೆ. ಕೆಲವು ಸಲ ಈ ದ್ವಾರಕನಾಥ ಬರುತ್ತಿದ್ದ. ಏನೇನೂ ಚಟಗಳಿಲ್ಲದ, ನೋಡಲಿಕ್ಕೆ ಹ್ಯಾಂಡ್‌ಸಮ್ ಆಗಿದ್ದ ಅಯ್ಯಂಗಾರ್‌ರ ಹುಡುಗ. ಕಾರಿನಲ್ಲಿ ಹೋಗುತ್ತಾ ಒಮ್ಮೆ “ಯಾರ‍್ಯಾರಿಗೋ help ಮಾಡ್ತೀರಿ. ನಂಗೆ ಮಾಡಲ್ವಾ?" ಅಂದ. “ಏನು help ಮಾಡ್ಲೋ ದ್ವಾರ್ಕಿ? ಸರಿಯಾಗಿ ಹೇಳು ಅಂದೆ. ಅವನಿಗೊಂದು affair ಇತ್ತು. ಇಲ್ಲೆಲ್ಲೋ ಗಾಂಧಿಬಜಾರ್ ಕಡೆ ಹುಡುಗಿಯ ಮನೆ ಇತ್ತು. ಅವಳಿಗೂ ಇವನಂದ್ರೆ ಇಷ್ಟ. ಆದರೆ ಹುಡುಗಿಯ ಒಬ್ಬ ಅಕ್ಕ ಇದ್ದಳಲ್ಲ: ಅವಳಿಗೆ ಏನೋ ಹಟ. ಬೇಡ ಅಂದ್ರೆ ಬೇಡವೇ ಬೇಡ! ಹಾಗೆ ಹಟ ಮಾಡಲಿಕ್ಕೆ ಅವಳಿಗೆ ಕಾರಣಗಳಿರಲೇ ಇಲ್ಲ. “ಅವಳ mental power ನಿಮಗೆ ಗೊತ್ತಿಲ್ಲ ಬಾಸ್. ತನ್ನ ತಂಗೀನ ಅದರ ಮೂಲಕ control ಮಾಡ್ತಾಳೆ. ಅವಳೊಂಥರಾ ಮಾಟಗಾತಿ. ಅವಳು ಯೋಗ ಮಾಡ್ತಾಳೆ. ಮುಖ್ಯವಾಗಿ ಧ್ಯಾನ ಮಾಡ್ತಾಳೆ. ಧ್ಯಾನ ಮಾಡ್ತಾ ಮಾಡ್ತಾ signal ಕಳಿಸ್ತಾಳೆ, ತಂಗೀಗೆ! ಅದನ್ನ ಮೀರೋಕೆ ಸಾಧ್ಯವೇ ಇಲ್ಲ. ಅದಕ್ಕೇ ಮಾಟಗಾತಿ ಅಂದಿದ್ದು" ಅಂತ ವಿವರಿಸಿದ್ದ ದ್ವಾರ್ಕಿ.

“ಲೇಯ್ ದ್ವಾರ್ಕೀ, ಅದೆಂಥ ಮಾಟವೋ ನನಗೆ ಗೊತ್ತಿಲ್ಲದ್ದು? Stupid fellow. ಹುಡುಗೀರ ಮೈಮಾಟದ ಮುಂದೆ ಅದ್ಯಾವ ಮಾಟ ನಡೆಯುತ್ತೆ? ನಿನ್ನ girl friendಗೆ ರೆಡಿಯಾಗೋಕೆ ಹೇಳು. ಸುಮ್ಮನೆ ಬಂದು ಕಾರಲ್ಲಿ ಕುಳಿತರೆ ಸಾಕು. ನಾನೇ drive ಮಾಡ್ತೀನಿ. Just kidnap. ಕರ‍್ಕೊಂಡೋಗಿ ತಾಳಿ ಕಟ್ಟಿಸ್ತೀನಿ. ಮುಂದೇನಿದೆ? ನೀನು ಮತ್ತು ಆ ಹುಡುಗಿ ಧೈರ್ಯ ಮಾಡಬೇಕು" ಅಂದಿದ್ದೆ. ದ್ವಾರ್ಕಿ ಆ ಧೈರ್ಯ ಮಾಡಲಿಲ್ಲ. ಕಡೆಗೆ ಒಂದು ಸಲ ಲಲಿತಳನ್ನು ಕರೆದುಕೊಂಡು, ನಾನೇ ಆ ಹುಡುಗಿಯ ಮನೆಗೆ ಹೋದೆ. ಕರ್ಮಠ ಬ್ರಾಹ್ಮಣರ ಮನೆ. ಹುಡುಗಿ, ಅವಳ ಅಕ್ಕ, ಅವಳ ತಾಯಿ. ಅಷ್ಟು ಬಿಟ್ಟು ಆ ಮನೆಯಲ್ಲಿ ಬೇರೆಯವರಿರಲಿಲ್ಲ. ಅಸಲು ಗಂಡಸಿನ ನೆರಳೂ ಆ ಮನೆಯ ಮೇಲೆ ಬಿದ್ದಿರಲಿಲ್ಲ. ಆದರೆ ಹೆಣ್ಣು ಕೇಳಲು ನಾವು ಹೋದೆವಲ್ಲ. ಹುಡುಗಿಯ ಮನೆಯಲ್ಲಿ ಕೂತು ಮಾತು ಆರಂಭಿಸಿದ್ದೇ ಬಂತು.

“ನೋಡಿ ಸರ್, ನೀವು ದ್ವಾರ್ಕಿಗೆ ಹೆಣ್ಣು ಕೇಳೋಕೆ ಬಂದಿದೀರಿ. ನನ್ನ ಮಗಳಿಗೆ ಹನಿ ವಿಷ ಕೊಟ್ರೂ ಕೊಟ್ಟೇನು. ಅವನಿಗೆ ಮಾಡಿಕೊಡಲ್ಲ ಅಂದಳು ಪುಣ್ಯಾತ್ಮಳಾದ ಅವಳ ಅಮ್ಮ. ‘ಬಿಡ್ರೀ, ಏನು ಮಾತು ಅಂತ ಆಡ್ತೀರಿ’ ಅಂದವನೇ ಹೇಸಿಗೆ ತುಳಿದವರು ಹೊರ ಬೀಳುವಂತೆ ಹೊರ ಬಿದ್ದು ಬಿಟ್ಟೆ. “ದ್ವಾರ್ಕೀ, ನಾನು ಹೇಳಿದ್ದೇ ಸರಿ. ಅದಕ್ಕೆ ರೆಡಿ ಆಗು" ಅಂದೆ. ಅವನು ಆಗಲಿಲ್ಲ. ಅಷ್ಟರಲ್ಲಿ ಅವನು ಪ್ರೀತಿಸಿದ ಹುಡುಗಿಗೆ ಬೇರೆ ಕಡೆ ಗಂಡು fix ಆಯ್ತು. “ಏನು ಮಾಡೋದು ಹೇಳು? ದೇವರನ್ನ ನಾನು ಕೇಳಿಕೊಂಡೆ, ನಂಗೆ ದ್ವಾರ್ಕಿ ಬೇಕು ಅಂತ. ದೇವರು ದ್ವಾರ್ಕಿಯನ್ನೇ ಕೊಟ್ಟ. ಮದುವೆ fix ಆಯ್ತಲ್ಲ? ಅವನ ಹೆಸರೂ ದ್ವಾರ್ಕೀನೇ. ಈ ದ್ವಾರ್ಕಿ ಅಲ್ಲ, ಆ ದ್ವಾರ್ಕಿ!" ಅಂದು ಬಿಟ್ಟಳು ಆ ಹುಡುಗಿ. There ended the talk and love. ಅವಳಿಗೆ ಮತ್ತು ‘ಆ ದ್ವಾರ್ಕಿ’ಗೆ ಮದುವೆ ಆಗಿ ಹೋಯ್ತು. ಇವನು deeply hurt ಅಯ್ಯಂಗಾರಿ. ಅದಾದ ಅನೇಕ ತಿಂಗಳ ನಂತರ ಅವನಿಗೆ ಬೇರೆಡೆ ಕೆಲಸ ಸಿಕ್ಕಿತು. ಹೇಳಿಯೇ ಹೋದ. ದುರಂತ ನೋಡಿ: ಅವನು two wheelerನ ಹಿಂಬದಿಗೆ ಕುಳಿತಿದ್ದ. ಗೆಳೆಯನೊಬ್ಬ ಓಡಿಸುತ್ತಿದ್ದ. ಏನೋ ಕೆಲಸಕ್ಕೆ ಅಂತ ತುಮಕೂರಿಗೆ ಹೋಗುತ್ತಿದ್ದರು. ಅನಿರೀಕ್ಷಿತವಾಗಿ ಬಂದು ತಾಕಿದ್ದು, ಒಂದು ಲಾರಿ! On the spot ಸತ್ತು ಹೋಗಿದ್ದ ದ್ವಾರ್ಕಿ. ಅಕಸ್ಮಾತ್ ಆ ಹುಡುಗೀಗೆ ಇವನೊಂದಿಗೆ ಮದುವೆ ಮಾಡಿದ್ದಿದ್ದರೆ? ಆ ಪ್ರಶ್ನೆ ಇದಿರಾದಾಗ I was nervous.

ಇನ್ನೂ ಒಬ್ಬನಿದ್ದ ಕೇಳಿ. Mostly, ಅವನು ನಮ್ಮ ಸಂಸ್ಥೆಯ ಎರಡನೇ ಉದ್ಯೋಗಿ. ಅವನು ನಿಜಕ್ಕೂ strong bodied. ತುಂಬ fit ಆಗಿದ್ದ. ಮೈಕೈ ತುಂಬಿಕೊಂಡಿತ್ತು. ಹೆಚ್ಚು ಮಾತಿಲ್ಲ. ಅವನಿಗೊಂದು ಸ್ಕೂಟರ್ ಇತ್ತು. ನನ್ನದು ಬೈಕು. ಒಂದು ಮಚ್ಚು ಅವನ ಸ್ಕೂಟರಿನಲ್ಲಿ ಇಟ್ಟಿರುತ್ತಿದ್ದೆ. ಇನ್ನೊಂದು ನನ್ನ ಬಳಿ ಇರುತ್ತಿತ್ತು. ಆಗೆಲ್ಲ ವಿಪರೀತ risky ದಿನಗಳು. ಎಲ್ಲಿ attack ಆದರೂ ಆಗಬಹುದಿತ್ತು. ನನ್ನ ಮನೆಯೂ safe ಆಗಿರಲಿಲ್ಲ. “ಇದೇನು ಸರ್, ಇಂಥ ಮನೇಲಿದೀರಿ? ಕಿಟಕಿಯೊಳಗಿನಿಂದ ಕೈ ಹಾಕಿದರೆ ನೀವೇ ಸಿಕ್ತೀರಿ. Safe ಅಲ್ಲ ಸಾರ್" ಅಂದಿದ್ದು ರೌಡಿ ಬಲರಾಮ. ಆ ಕಿಟಕಿಗೆ mesh ಹೊಡೆಸೋದಕ್ಕೂ ನನ್ನ ಬಳಿ ಹಣವಿರಲಿಲ್ಲ. ಆದರೆ ಈ ಹುಡುಗ ಸಿಕ್ಕಿದ್ದನಲ್ಲ? I was very confident. ಅವನು ಮಾತೇ ಆಡುತ್ತಿರಲಿಲ್ಲ. ಸುಮ್ಮನೆ ಬಂದು ಕೂಡುತ್ತಿದ್ದ, solid cement block ಥರಾ. ಆಗ ‘ಪತ್ರಿಕೆ’ compose ಆಗುತ್ತಿದ್ದುದು ಮಲ್ಲೇಶ್ವರದಲ್ಲಿ. ರಾತ್ರಿಯಿಡೀ ಕೂತು, ಬರೆದುಕೊಂಡು, ಬೆಳಿಗ್ಗೆ ಅಲ್ಲಿಗೆ ಹೋಗಬೇಕಿತ್ತು. ಮನೆಯಿಂದ ಹೊರಡುವಾಗಲೇ ಈ ‘ಮೌನಿ ಬಾಬಾ’ ಜೊತೆಗೆ ಬರುತ್ತಿದ್ದ. ಅವನ ಮನೆ ಅಲ್ಲೆಲ್ಲೋ ಕಾಮಾಕ್ಷಿಪಾಳ್ಯದಲ್ಲಿತ್ತು. ಅವನಿಗೆ ಚಟಗಳಿರಲಿಲ್ಲ. ಊಟಕ್ಕೆ ಕುಳಿತರೆ ಮಾತ್ರ, ಒಂದು ಸಲಕ್ಕೆ ಎರಡು ಬಿರಿಯಾನಿ. ಯಾವುದೋ ಕಾಲಕ್ಕೆ ಅವನ ಅಪ್ಪ ಒಂದು ‘ಪತ್ರಿಕೆ’ ಮಾಡಿದ್ದರಂತೆ. “ನೀವೇನ್ಸಾರ್ ಹೀಗಂತೀರಿ? ಬ್ಲಾಕ್‌ಮೇಲ್ ಮಾಡದೆ ಇದ್ರೆ ಹ್ಯಾಗೆ? ಬದುಕೋದು ಹ್ಯಾಗೆ?" ಅಂದುಬಿಟ್ಟ ಒಮ್ಮೆ. My God! “ಇನ್ನು ಕಳಚಿಕೋ. ನನಗೆ ಸಿಗಬೇಡ" ಅಂದವನೇ ಕಳಿಸಿಬಿಟ್ಟೆ. ನೀವೇನೇ ಹೇಳಿ, ಕೊಂಚ ಬುದ್ಧಿವಂತಿಕೆ, street smartness, ಯಾವುದಕ್ಕೂ ಮಣಿಯದ ಪ್ರಾಮಾಣಿಕತೆ ಮತ್ತು ಕಮಿಟೆಡ್ ಆದ ಹುಡುಗರ ಪುಟ್ಟ ಗುಂಪು ಇದ್ದು ಬಿಟ್ಟರೆ ಸಾಕು. ಬ್ಲಾಕ್‌ಮೇಲ್ ಮಾಡೋರು ಬೇಕಾಗಿಲ್ಲ ಎಂಬುದು ನನ್ನ ನಂಬಿಕೆ. ಇವತ್ತಿಗೂ ಅದು ನನ್ನನ್ನು ಕಾಯುತ್ತಿದೆ, ಕಾಪಾಡುತ್ತಿದೆ. ಆ ‘ಮೌನಿ ಬಾಬಾ’ನಂಥವರು ಸಾಕಷ್ಟು ಬಂದರು. ಒದ್ದು ಓಡಿಸಲ್ಪಟ್ಟರು.

ಅವನಿನ್ನೂ ನನ್ನೊಂದಿಗೆ ಇದ್ದ ದಿನಗಳಲ್ಲೇ ನಿವೇದಿತಾ ಬಂದು ಸೇರಿಕೊಂಡಳು. ನನಗದು ಸಾವಿರ ಆನೆಯ ಬಲ. ಪಟಾಕಿ ಸಿಡಿದಂತೆ ‘ಪತ್ರಿಕೆ’ hit ಆಯ್ತು. ಮುಂದೆ ಒಂದಷ್ಟು ವಾರ ಉರುಳಿದವು. ಗಾಂಧಿನಗರದ ಅದೊಬ್ಬ ರೌಡಿಗೆ ಹಣ ನೀಡಿ ನನ್ನನ್ನು ರಸ್ತೆಯಲ್ಲಿ ಹೊಡೆಸೋ ಪ್ರಯತ್ನ ಮಾಡಿದರು. I stood firm. ಅದೊಮ್ಮೆ ನಿವೇದಿತಾ ಒಂದ್ಯಾವುದೋ ಪತ್ರಿಕೆ ತಂದು ಎದುರಿಗಿಟ್ಟಳು. ಥೇಟು ನನ್ನ ‘ಪತ್ರಿಕೆ’ಯಂತೆಯೇ ಇತ್ತು. ಅದೇ black and white. ನೋಡಿದರೆ, ಸಂಪಾದಕನ ಸ್ಥಾನದಲ್ಲಿ ನಮ್ಮ ಈ get out ಗಿರಾಕಿ ಮೌನಿ ಬಾಬಾ! ಪರವಾಗಿಲ್ವೇ ಅಂದುಕೊಂಡೆ. ಕೆಲವು ದಿನ ಆ ಪತ್ರಿಕೆ ಹೊರಕ್ಕೂ ಬಂತು. ಅದು ತುಂಬ ಕಳಪೆಯಾಗೇನಿರಲಿಲ್ಲ. ಆದರೆ ಬ್ಲಾಕ್‌ಮೇಲ್ ಮಾಡಿದವರು ಎಂದಿಗೂ ಉದ್ಧಾರವಾಗೋದಿಲ್ಲ. ಮುಂದೆ ಕೆಲದಿನಗಳಿಗೆ ಆ ‘ಪತ್ರಿಕೆ’ ನಡೆಸುತ್ತಿದ್ದವರು ಪರಸ್ಪರ ಕಿತ್ತಾಡಿಕೊಂಡರು. ‘ಮೌನಿ ಬಾಬಾ’ ಅವರಿಂದ ದೂರವಾಗಿ ತನ್ನದೇ ಒಂದು ‘ಪತ್ರಿಕೆ’ ಮಾಡಿದ: ‘ಮೂರ್ತ’ ಅಂತ. ಯಥಾಪ್ರಕಾರದ ತಿರುಪೆ ಉದ್ಯಮ. ಆಶ್ಚರ್ಯವೆಂದರೆ ಅವನು ಕಾರಣವೇ ಇಲ್ಲದೆ ನನ್ನ ಮೇಲೆ attack ಮಾಡಿದ್ದು. ನನ್ನ ಫೊಟೋ ಹಾಕಿ ‘ಇವನು ನನ್ನ ಗುರುವೂ ಹೌದು. ನನ್ನ ಗುರಿಯೂ ಹೌದು’ ಅಂತ ಬರೆದಿದ್ದ. ‘ಗುರುವೋ, ಸುಡುಗಾಡು ಗುರಿಯೋ! ಸಾಯಿ ಅತ್ಲಾಗೆ ಅಂತ ಸುಮ್ಮನಾಗಿ ಬಿಟ್ಟೆ. ಆದರೆ ಒಂದು ಸಲ ನನ್ನ ವಿರುದ್ಧ ಅದೆಷ್ಟು ಕೆಟ್ಟದಾಗಿ ಬರೆದನೆಂದರೆ, “ರವೀ, ನಿಂಗೆ ಗೊತ್ತು. ರಾತ್ರಿ ನಾನು ದೇವರ ಮುಂದೆ ದೀಪ ಹಚ್ಚಿ ಪ್ರಾರ್ಥನೆ ಮಾಡ್ಕೋತೀನಿ. ನನ್ನ ಗಂಡನಿಗೆ, ಮಕ್ಕಳಿಗೆ ಒಳ್ಳೆಯದಾಗಲಿ ಅಂತ. ಆದರೆ ಇವತ್ತು ಮೊಟ್ಟ ಮೊದಲ ಬಾರಿಗೆ ಅವನು ಸರ್ವನಾಶವಾಗಲಿ ಅಂತ ಕೈ ಜೋಡಿಸಿದ್ದೇನೆ. ಇನ್ನು ಮುಗೀತು!" ಅಂದಳು ಲಲಿತೆ. “ಸಾಯ್ಲಿ ಬಿಡೇ" ಅಂದು ನಾನು ಸುಮ್ಮನಾದೆ. ಮುಂದೆ ಆ ಎರಡೂ ಪತ್ರಿಕೆ ಸತ್ತವು. ಅವನೇನಾದ ಮೌನಿಬಾಬಾ? ಇವತ್ತಿಗೂ ನನಗೆ ಗೊತ್ತಿಲ್ಲ. ಅನೇಕರ ಕಥೆಗಳು ಹಾಗೆ ಮುಗಿದಿವೆ.

ಈ ಸಾಲಿನಲ್ಲಿ ಶ್ರೀನಿವಾಸ ಎಂಬುವವನಿದ್ದಾನೆ. ಅವನು ತುಂಬ ದೂರದ ಬಾದರಾಯಣ ಸಂಬಂಧಿ. ಅವನ ಅಕ್ಕನ ಮದುವೆಗೆ ಪರೋಕ್ಷವಾಗಿ ನಾನು ಸಹಾಯ ಮಾಡಿದ್ದೆ. ಚಳ್ಳಕೆರೆಯಿಂದ ಬಂದ ಶ್ರೀನಿವಾಸ ನಮ್ಮಲ್ಲಿ ಸೇರಿಕೊಂಡ. ಸುಮಾರಾಗಿ ಬರೀತಿದ್ದ. ಅದಕ್ಕಿಂತ ಅವನ ತಲಹರಟೆಯೇ ಜಾಸ್ತಿ. ಚಟಗಳು ಮೈತುಂಬ ಇದ್ದವು. ‘ನೀವಿನ್ನು ಹೊರಡಿ’ ಅನ್ನಿಸಿಕೊಂಡು ಎದ್ದು ಹೋದವರೆಲ್ಲ ಒಂದು ಗುಂಪಾಗಿ ತಲೆಮಾಸಿದ್ದೊಂದು ಪತ್ರಿಕೆ ಮಾಡಿದ್ದರು. ತೆರೆದು ನೋಡಿದರೆ ಆ ಗುಂಪಿನಲ್ಲಿ ಈ ಚಳ್ಳಕೆರೆ ನೆಂಟ ಮುಂದಿನ ಸಾಲಿನಲ್ಲಿದ್ದ. ‘ಅಲೆಲೇ ಸೀನೀ...’ ಅಂದುಕೊಂಡೆ. ಆ ‘ಪತ್ರಿಕೆ’ ಸತ್ತು ಹೋಯಿತು. ಇವನು? ಅವನ ಪೋಸ್ಟ್‌ಮಾರ್ಟಂ ರಿಪೋರ್ಟ್ ಇನ್ನು ಬಂದಿಲ್ಲ!

ಇವೆಲ್ಲಾ ಸ್ಯಾಂಪಲ್‌ಗಳಷ್ಟೆ. ಬರೆಯಲು ಕುಳಿತರೆ ಗ್ರಂಥವೇ ಆದೀತು. ಒಂದು ಇಂಟರೆಸ್ಟಿಂಗ್ ಪ್ರಕರಣ ಹೇಳ್ತೀನಿ ಕೇಳಿ. ಆಗ ‘ಪ್ರಾರ್ಥನಾ’ ಹಿಂದೆ ಈಗಿರುವಂತೆ ಇನ್ನೊಂದು ಕಟ್ಟಡ ಇರಲಿಲ್ಲ. ಚಿಕ್ಕ ಬಯಲಿತ್ತು. ಅಲ್ಲಿ ಮೊದಲು ಚೆಂದನೆಯ ಹುಲ್ಲು ಹಾಕಿಸಿದೆ. ಮೂಲೆಯಲ್ಲಿ ಅಳಿಲು, ನಾಯಿ, ಆಮೆ, ಗಿಳಿ, ಮೊಲ, ಜೊತೆಗೊಂದು ಕೋತಿ ಇತ್ಯಾದಿಗಳನ್ನು ಸಾಕಿದೆ. ಶಾಲೆಯ ಕಂದಮ್ಮಗಳಿಗೆ ಅದು ರಂಜನೆ ಮತ್ತು ಬೋಧನೆ. ನಿಧಾನವಾಗಿ ಶಾಲಾ ಮಕ್ಕಳ ಸಂಖ್ಯೆ ಬೆಳೆಯಿತು. ಆ ತನಕ ಮಾಡಿಸಿದ್ದನ್ನು ಒಡೆದು ಹಾಕಿ ಅಲ್ಲೊಂದು ಕಟ್ಟಡ ಕಟ್ಟಿಸಬೇಕಾಯ್ತು. ಮೊದಲು ಅಲ್ಲೊಂದು ಖಾಲಿ ಷೆಡ್ ಇತ್ತು. ಅಲ್ಲಿ ಯಾರೂ ಇರಲಿಲ್ಲ. ತೊಂದರೆಯಲ್ಲಿದ್ದ ಒಂದು ಕುಟುಂಬ ಅಲ್ಲಿಗೆ ಬಂತು. ಆಯ್ತು, ಕೆಲವು ದಿನ ಅಲ್ಲಿ ಇರಿ ಅಂದೆ. ಗಂಡ-ಹೆಂಡತಿ-ಮಗಳು ಇದ್ದರು. ಅದೇ ವೇಳೆಗೆ ಅಲ್ಲಿಗೆ ನಮ್ಮ ಕಚೇರಿಯಲ್ಲಿ ಆಯಾಳಂತೆ ಇದ್ದ ಜಯಶ್ರೀ ಎಂಬ ಹೆಂಗಸು ಬಂದಳು. ಅವಳೊಂದಿಗೆ ಅವಳ ಒಬ್ಬ ಮಗ. ಅವರಿಬ್ಬರೂ ಮೂಲತಃ ಆಂಧ್ರದವರು. ಗಂಗಾವತಿಯ ಆಸುಪಾಸಿನ ತೆಲುಗರ ‘camp' ಒಂದರಲ್ಲಿ ಇದ್ದವರು. ಸರಿ, ತಾಯಿ-ಮಗ ವಾಸಕ್ಕಿರುತ್ತಾರೆ ಅಂದುಕೊಂಡು ಅವರಿಗೊಂದು ಜಾಗ ಕೊಟ್ಟೆ. ಆ ದಿನಗಳಲ್ಲಿ ಬಂದವನೇ ಅಬೂಬಕರ್.

ನಾನು ಏನೋ ಬರೆಯುತ್ತ ಕುಳಿತಾಗ ಅವನು ಬಂದ. ತನಗೆ ಆಶ್ರಯದಾತರಿಲ್ಲ: ಇಲ್ಲಿ ಕಾವಲು ಕಾಯ್ಕೊಂಡು ಇರುತ್ತೇನೆ ಅಂದ. ಅವನಿಗೆ ಚಟಗಳಿರಲಿಲ್ಲ. ಸರಿ, ಇರು ಅಂದೆ. ಅವನ ಊಟಕ್ಕೊಂದು ವ್ಯವಸ್ಥೆ ಮಾಡಿದೆ. ಅರೇಂಜ್‌ಮೆಂಟ್ ಆಯ್ತು ಬಿಡು ಅಂದುಕೊಂಡೆ. ಅವನು ನನ್ನನ್ನು ‘ಒಡೆಯಾ’ ಅನ್ನುತ್ತಿದ್ದ. ಸಂಕೋಚವಾಗುತ್ತಿತ್ತು. ಅದೇನಾಯಿತೋ ಏನೋ, ಅವನೊಮ್ಮೆ ಆಯಾ ಜಯಶ್ರೀ ಮೇಲೆ ರೇಗಿ ಕೆಂಡಾಮಂಡಲವಾಗಿ ಅವಳಿಗೆ ಕಲ್ಲಲ್ಲಿ ಹೊಡೆಯತೊಡಗಿದ. ಮರುದಿನ ಅವನನ್ನು ಕರೆಸಿ ಬೈದೆ. ‘ಅ ಹೆಂಗಸು ಸರಿ ಇಲ್ಲ’ ಅಂದ. ಈ ಅಬೂಬಕರ್ ರಾತ್ರಿಯಾಗುತ್ತಿದ್ದಂತೆಯೇ ಗಾಂಜಾ ಸೇದುತ್ತಾನೆ ಅಂದಳು ಜಯಶ್ರೀ. ಆಯ್ತು, ಇಬ್ಬರೂ ಅಂಥವರೇ ಇದ್ದೀರಿ. ತೆಪ್ಪಗೆ ಇರ‍್ತೀರಾ ಇರಿ. ಇಲ್ಲವಾದರೆ ಇಬ್ಬರನ್ನೂ ಆಚೆ ಹಾಕ್ತೀನಿ ಅಂದೆ. ಆಗ ನಾನು ನಿವೇದಿತಾಳಿಗಿಂತ ಹೆಚ್ಚು ನಮ್ಮಲ್ಲಿದ್ದ ಸಂತೋಷ್‌ನನ್ನು ನಂಬುತ್ತಿದ್ದೆ. “ಸರ್, ಅಬೂಬಕರ್ ಮೇಲೆ ಕೇಸ್ ಇದೆ. ಅವನು ಸರಿ ಇಲ್ಲ. ಕಳಿಸಿ ಬಿಡಿ" ಅಂದ. ಕೇಸ್ ಇರೋದಾದರೆ ಏನು ಕೇಸು? ಶಿವಮೊಗ್ಗ-ದಕ್ಷಿಣ ಕನ್ನಡಗಳಲ್ಲಿ ವಿಚಾರಿಸಿದಾಗ ಖಚಿತವಾಯಿತು: ಇದ್ದದ್ದು ಗಂಧ ಕದ್ದ ಕೇಸು. ಅದು ಚಿಕ್ಕದಲ್ಲ. ಸಿಕ್ಕು ಬಿದ್ದರೆ ಐದಾರು ವರ್ಷ ಜೈಲು. ಅಬೂಬಕರ್‌ನನ್ನು ಕರೆಸಿ ಬೈದೆ. ‘ಕೇಸ್ ಇದೆ ಅಂತ ಹೇಳಬಾರದಾ? ಹೋಗು, courtನಲ್ಲಿ ವಕೀಲರನ್ನಿಡು, case ಖುಲಾಸೆ ಮಾಡಿಸಿಕೊಂಡು ಬಾ’ ಅಂದೆ. “ಬಂದರೆ ಮತ್ತೆ ಜಾಗ ಕೊಡ್ತೀರಾ ಒಡೆಯಾ?" ಅಂದ. ಕೊಡ್ತೇನೆ ಅಂತ ಮಾತು ಕೊಟ್ಟೆ. ಈಗಿವನು ಎಲ್ಲಿಗೆ ಹೋಗ್ತಾನೆ ಅಂತ ಚಿಂತೆಯಾಯ್ತು. ಕೇಳಿದ್ದಕ್ಕೆ ‘ಮತ್ತೆಲ್ಲಿ? ಕೆಲವು ದಿನ ಇರಾನ್‌ಗೆ ಹೋಗ್ತೀನಿ’ ಅಂದ. ಎಲಾ ಇವನ, ಇರಾನಕ್ಕೆ ನಾನೇ ಹೋಗಿಲ್ಲ. ಇವನು ಹೋಗಿ ಏನು ಮಾಡ್ತಾನೆ ಅನ್ನಿಸಿತು. ಅಬೂಬಕರ್ ತನ್ನ ಪಾಸ್‌ಪೋರ್ಟ್ ತೋರಿಸಿದ. ಅದರಲ್ಲಿ ಇರಾನ್‌ನ ಏರ್‌ಪೋರ್ಟ್‌ನಲ್ಲಿ ಹಾಕಿದ stamp ಇತ್ತು. “ಪರವಾಗಿಲ್ವೇ, ಒಂದ್ಸಲ ಹೋಗಿ ಬಂದಿದೀಯ. ಅಲ್ಲಿ ಹೋಗಿ ಏನು ಮಾಡ್ತೀಯ?" ಅಂದೆ. ಮತ್ತೇನಿದೆ ಒಡೆಯಾ? “ಅಲ್ಲಿ ಅದೇ ಒಂಟೆ ಕಾಯೋ ಕೆಲಸ!" ಅಂದ. ‘ಒಂಟೆ ಕಾಯುವ ಕೆಲಸ’ ಎಂಬುದೊಂದು ಪ್ರಪಂಚದಲ್ಲಿ ಇರುತ್ತೆ ಅಂತ ಆ ತನಕ ಗೊತ್ತೇ ಇರಲಿಲ್ಲ. ನಮ್ಮಲ್ಲಿ ‘ದನ ಕಾಯೋದು’ ಅಂತ ಇರಲ್ವೇ? ‘ಕತ್ತೆ ಮೇಯ್ಸೋದು’ ಅಂತಲೂ ಇರುತ್ತೆ. ಹಾಗೇ, ಅಲ್ಲಿ ಇರಾನದಲ್ಲಿ ಒಂಟೆ ಕಾಯೋದು! ಸರಿ, ಹೋಗು ಅಂದೆ. ಹೋಗಲಿಕ್ಕಾದರೂ ಹಣ ಬೇಕಲ್ಲ. ಅದ್ಯಾರೋ ಏಜೆಂಟರು ಕೊಡುತ್ತಾರೆ ಅಂದ. ಅವನು ಹೊರಟೂ ಹೋದ. ನಿಮಗೊಂದು ತಮಾಷೆ ಗೊತ್ತಾ? ಒಮ್ಮೆ ನಾನು car park ಮಾಡಿ, ಎಂ.ಜಿ. ರಸ್ತೆಯಲ್ಲಿ ಏನೋ ಖರೀದಿಸಲು ಹೋದೆ. ಅಲ್ಲಿ Foot path ಮೇಲೆ ಸಾಲಾಗಿ ಈ ಡೂಪ್ಲಿಕೇಟ್ ಪುಸ್ತಕ ಮಾರುವವರಿರುತ್ತಾರೆ, ನೋಡಿದ್ದೀರಾ? ನಿಮಗಲ್ಲಿ ಖುಷ್ವಂತ್ ಸಿಂಗ್ ಅವರ ಪುಸ್ತಕ ಸಿಗುತ್ತೆ. ಆದರೆ ಅದು ಡೂಪ್ಲಿಕೇಟ್. ಅಗ್ಗದ ಹಾಳೆ, ಕೆಟ್ಟ ಮುದ್ರಣ, ಎರಡೇ ದಿನಕ್ಕೆ ಕಿತ್ತು ಬರೋ ರಟ್ಟು. ಅವುಗಳನ್ನು ಅಗ್ಗದ ಬೆಲೆಗೆ ಮಾರುತ್ತಾರೆ. ನೋಡಿದರೆ, ಮಾರುತ್ತಾ ನಿಂತವನು ಇದೇ ಅಬೂಬಕರ್! “ಏನಯ್ಯಾ?’ ಅಂದೆ!. ಕೇಸ್ ಮಗಿಸಿ ಬರ‍್ತೀನಿ ಒಡೆಯಾ" ಅಂದ. ಒಂದಷ್ಟು ಹಣ ಕೊಟ್ಟೆ. ಮತ್ತೆ ಈ ತನಕ ಆ ಒಂಟೆ ಕಾಯುವವನ ಮುಖ ನೋಡಿಲ್ಲ. ಪೊಲೀಸರು ಹುಡುಕುತ್ತಲೇ ಇದ್ದಾರು.

ಹಾಗೊಂದು ಆಶ್ರಯ ಕೊಟ್ಟಿದ್ದೆನಲ್ಲ. ಆಯಾ ಜಯಶ್ರೀಗೆ ಎದೆ ಎತ್ತರ ಬೆಳೆದ ಮಗನಿದ್ದ. ಅವನನ್ನು ಶಾಲೆಗೆ, tutionಗೆ ಸೇರಿಸಿದ್ದೆ. ನೋಡಿದರೆ ನಮ್ಮಲ್ಲಿದ್ದು, ಛೀಮಾರಿ ಹಾಕಿಸಿಕೊಂಡು, ಕತ್ತು ಹಿಡಿದು ನೂಕಿಸಿಕೊಂಡಿದ್ದ ‘ನಾಯಿಸೋಮ’ ಎಂಬ ಬಿರುದು ಪಡೆದು ಹೊರಹೋದ ಸೋಮನಾಥನೆಂಬ ಆಸಾಮಿ ಈ ಜಯಶ್ರೀಯನ್ನು ಪಟಾಯಿಸಿಕೊಂಡಿದ್ದ. ನನಗೆ ಅದರ ಸುಳಿವೂ ಇರಲಿಲ್ಲ. ಅದೊಮ್ಮೆ ‘ಏನ್ಸಾರ್, ನೀವು ಅದ್ಯಾರೋ ಹೆಂಗಸನ್ನ ಷೆಡ್‌ನಲ್ಲಿ ಬೀಗ ಹಾಕಿ ಇಟ್ಟಿದ್ದೀರಂತಲ್ಲ, ತೋರಿಸಿ ಬನ್ನಿ’ ಎಂದು ಸುಬ್ರಹ್ಮಣ್ಯಪುರ police stationನ ಪೊಲೀಸರು ಬಂದು ಕೇಳಿದರು. ನಾನೇ ಷೆಡ್ ಬಳಿಗೆ ಹೋದೆ. ನೋಡಿದರೆ ಅಲ್ಲಿನ ಕೋಣೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಒಳಗೆ ಕಿಟಕಿಯಲ್ಲಿ ಜಯಶ್ರೀ! ‘ಏನಮ್ಮಾ ಇದೂ? ಅಂದೆ. ಕೊಂಚ ಹೊತ್ತು ತನಿಖೆ ಮಾಡಿದ ಪೊಲೀಸರಿಗೆ ಜಯಶ್ರೀ ಡ್ರಾಮ ಮಾಡ್ತಿದಾಳೆ ಅಂತ ಗೊತ್ತಾಯಿತು. ಅವಳು ಮೊದಲು ಮಗನ ಸಹಾಯದಿಂದ ತನ್ನ ಕೋಣೆಯಾಚೆಗೆ ಬೀಗ ಹಾಕಿಸಿಕೊಂಡಿದ್ದಳು. ನಂತರ ಆ ಮಗ ಚಾವಿ ಸಮೇತ ಓಡಿ ಹೋಗಿ ಪೊಲೀಸರಿಗೆ ‘ನಮ್ಮಮ್ಮ ನನ್ನ ಕೂಡಿ ಹಾಕಿದ್ದಾರೆ' ಅಂತ ದೂರು ಕೊಟ್ಟಿದ್ದ. ನಮ್ಮ ಆಫೀಸಿನ ಹುಡುಗರಿರಲಿ, ಹುಡುಗಿಯರೂ ಸಿಟ್ಟಿಗೆದ್ದಿದ್ದರು. “ಸರ್, ಈ ದರಿದ್ರದವಳಿಗೆ ಚಪ್ಲೀಲಿ ಹೊಡೀಬೇಕು!" ಅಂದಿದ್ದಳು ಅಕೌಂಟ್ಸ್ ಕ್ಲರ್ಕ್ ಆಶಾ. ಅವಳಿಗೇ ಬಿಟ್ಟಿದ್ದರೆ ಹೊಡೆದೂ ಬಿಡುತ್ತಿದ್ದಳು. ಆದರೆ ಅರ್ಧಗಂಟೆಯೊಳಗಾಗಿ ಅವಳನ್ನು ಲಗೇಜು ಮತ್ತು ಮಗನ ಸಮೇತ ಹೊರ ಹಾಕಿದೆ. ‘ಹೀಗೆಲ್ಲ ಮಾಡು ಅಂತ ಹೇಳಿ ಕೊಟ್ಟದ್ದು ನಾಯಿ ಸೋಮ’ ಅಂದಳು. ಆ ನಂತರ ಅವಳು ಬರಲಾರಳು ಅಂದುಕೊಂಡಿದ್ದೆ. ಅವಳು ಕೆಲದಿನಗಳ ನಂತರ ಇಲ್ಲೇ slum ಒಂದರಲ್ಲಿ ರೂಮು ಅವಳದು. ಉಳಿದ ಸಂಸಾರಕ್ಕೆಲ್ಲ ನಾಯಿ ಸೋಮನೇ ಗಂಡ! ಅದೆಲ್ಲಿ ಹಾಳು ಬಿದ್ದು ಹೋದಳೋ? ಅವಳಂತೆಯೇ ಲಕ್ಷ್ಮೀ ಜೈನ್ ಎಂಬ ಹೆಂಗಸಿಗೆ ಸಂಸಾರ ಭಾಗ್ಯ ಕಲ್ಪಿಸಿದ್ದ ಸೋಮ. ಅವನ ಮೊದಲ ಪತ್ನಿ ಲಕ್ಷ್ಮೀ ಮಾತ್ರ ಸರಿಯಾಗಿ ಚಪ್ ಚಪ್ಲಿಯಲ್ಲಿ ಇವನನ್ನು ಬಡಿದು ಮೂಲೆಗಿರಿಸಿದ್ದಳು.

ಕಡೆಗೂ ಸೋಮ ಸರಿ ಹೋಗಲಿಲ್ಲ. ದುಡಿದ ಹಣದಲ್ಲಿ ತಿಂದರೆ ಅವನಿಗೆ ಫುಡ್ಡು ಅರಗುವುದಿಲ್ಲ. ಅರ್ಧ ಯೌವನ ಕಳೆದ ಕುರೂಪಿ ಹೆಂಗಸರೊಂದಿಗೆ ಸಂಸಾರ ಮಾಡದಿದ್ದರೆ ಅವನಿಗೆ ಸುಖವಿಲ್ಲ. ಇವೆರಡರ ಜೊತೆಗೆ ಅವನಿಗೆ ಬೀದಿ ನಾಯಿ ಸಾಕೋ ಐಲು. ಇವತ್ತಿಗೂ ಅವನ ಮನೆಯಲ್ಲಿ ಜನರಿಲ್ಲ. ಬರೀ ಬೀದಿ ನಾಯಿಗಳೇ. ನನ್ನ ವಿರುದ್ಧ ಕ್ರಾಂತಿಕಹಳೆ ಊದಿ ಫೌಜು ಕಟ್ಟುತ್ತೇನೆ ಅಂದ. ಮಟ್ಟಸವಾಗಿ ತಿರುಪೆ ಎತ್ತಿ, ಕೆಟ್ಟವಾಸನೆಯ ಹಳದಿ ವಸ್ತು ತಿಂದು ಮೇಲೆದ್ದ.

ಹೀಗೆ ನಮ್ಮ ex-servicement ಬಗ್ಗೆ ಬರೆಯಲು ಸಾಕಷ್ಟಿದೆ.

ಇರಲಿ, stockನಲ್ಲಿ.

ನಿಮ್ಮವನು ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books