Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅತ್ತಾರೆ ಅತ್ತು ಬಿಡು... ಹೊನಲು ಬರಲಿ ದುಃಖ

“ಏ ಕಲಬುರ್ಗಿ, ಬಾ ಇಲ್ಲೀ" ಅಂದವರೇ ಎಂ.ಎಂ. ಕಲಬುರ್ಗಿಯವರ ತೋಳು ಹಿಡಿದು ಜಗ್ಗಿದರಂತೆ ಬೇಂದ್ರೆ ಅಜ್ಜ.

“ಕಲಬುರ್ಗೀ, ನಾನು ಯಾರು ಗೊತ್ತೇನು? ನಾನು ರಾಘವಾಂಕನ ಅಪರಾವತಾರ ಇದ್ದೀನಿ ತಿಳ್ಕೋ... ಮಹಾನ್ ಕವಿ ರಾಘವಾಂಕನ ಅಪರಾವತಾರ!" ಅಂದರು. ಈ ಮಾತು ಬೇರೆ ಯಾರಾದರೂ ಅಂದಿದ್ದರೆ, ಈ ಮುದುಕನಿಗೆಲ್ಲೋ ಅರಳುಮರಳು ಅಂದುಕೊಂಡು ಕೈ ಬಿಡಿಸಿಕೊಂಡು ಹೊರಟು ಬಿಡಬಹುದಿತ್ತು. ಆದರೆ ಹಾಗಂದವರು ಈ ಯುಗದ ಮಹಾ ಕವಿ ಡಿ.ಆರ್. ಬೇಂದ್ರೆ! ಅವರಿಗೆ ಮಾತ್ರ ಹಾಗೆ claim ಮಾಡಿಕೊಳ್ಳುವ ತಾಕತ್ತು ಇತ್ತು. ಹಾಗೆ ಮಾತಾಡಲಿಕ್ಕೆ ತುಂಬ ಧೈರ್ಯ ಬೇಕಿತ್ತು. He had it.

ನಿನ್ನೆ ಅದೇಕೋ ಅಜ್ಜ ತುಂಬ ನೆನಪಾದರು. ‘ನೀ ಹಿಂಗಾ ನೋಡಬ್ಯಾಡ ನನ್ನ’ ಕವಿತೆ ಓದಿಕೊಂಡೆ. ಅದೆಂಥ ಅದ್ಭುತ ಕವಿತೆ! ಅದು ಹೆಂಡತಿಗೆ ಹೇಳಿದ ಸಮಾಧಾನ. ಅಲ್ಲಿ ಅವರ ಕೂಸು ಸತ್ತಿದೆ. ಆ ನೋವಿಗೆ, ಅದರ ತೀವ್ರತೆಗೆ ಆಕೆ ತತ್ತರಿಸಿ ಹೋಗಿದ್ದಾಳೆ. ಅವಳಿಗೆ ಸಾಂತ್ವನ ಹೇಳುವುದಾದರೂ ಹೇಗೆ? ಆ ಕೆಲಸವನ್ನು ಬೇಂದ್ರೆ ಮಾತ್ರ ಮಾಡಬಲ್ಲರು. ನನಗೆ ಈ ಭಾವಗೀತೆ ಕೇಳಿದಾಗಲೆಲ್ಲ ಗಾಲಿಬ್ ನೆನಪಾಗುತ್ತಾನೆ. Exactly ಇದೇ ಪರಿಸ್ಥಿತಿ. ಅವನಿಗೆ ಮಕ್ಕಳು ಆಗಿ ಆಗಿ ತೀರಿಕೊಂಡವು. ಆತನೇ ಎತ್ತಿಕೊಂಡು ಹೋಗಿ ಮಣ್ಣು ಮಾಡಿ ಬರುತ್ತಿದ್ದ. ನೋವು, ಮಗುವನ್ನು ಕಳೆದುಕೊಂಡ ದುಃಖ ಹೆಂಡತಿಗಷ್ಟೆ ಆಗಬೇಕು ಎಂಬ ನಿಯಮ ಎಲ್ಲಿದೆ? ಗಂಡ ಮನುಷ್ಯನಲ್ಲವೆ? ಆತನೂ ಭಾವುಕನಾಗಬಹುದಲ್ಲವೆ?

ಅದಾದ ಮೇಲೆ ಮತ್ತೆ ಪುಟ ತಿರುವಿ ಬೇಂದ್ರೆ ಅಜ್ಜನ ಇನ್ನೊಂದು ಪದ್ಯ ಓದಿದೆ. “ಆಡದಿರು ಮನದನ್ನೆ, ನನಗೆ ಇದಿರಾಡದಿರು...!" ಎಂಬ ಸಾಲು. ಅದನ್ನು ಬೇಂದ್ರೆ ಹೊರತು ಮತ್ಯಾವ ಕವಿ ಬರೆಯಲು ಸಾಧ್ಯ? ನಾವು ನಿಜಕ್ಕೂ ಪುಣ್ಯವಂತರು. ಹಾಗೆಲ್ಲ ಬರೆದ ಮಹಾನ್ ಕವಿ ಬೇಂದ್ರೆಯವರನ್ನು ಕಣ್ಣಾರೆ ನೋಡಿದೆವು. ನೋಡಲಿಕ್ಕೆ ಕುವೆಂಪು ಸಿಕ್ಕರು. ಅನಂತ ಮೂರ್ತಿ, ಕಾರಂತ, ಲಂಕೇಶ್, ತೇಜಸ್ವಿ, ನನಗೆ ಮಳಗಾಂವಕರ, ಅತ್ತ ಸತ್ಯಕಾಮ-ಒಬ್ಬರಾ ಇಬ್ಬರಾ? ಒಂದೇ ಜನ್ಮದಲ್ಲಿ ಈಸೊಂದು ಜನರನ್ನು ನೋಡಿದ್ದೇನು ಕಡಿಮೆ ಸೌಭಾಗ್ಯವೇ? We must be thankful to the fait. ಅವರು ಬರೆದದ್ದನ್ನು ನಾವು ಓದದೇನೇ ಇದ್ದರೆ ನತದೃಷ್ಟರು ಅವರಲ್ಲ ನಾವು.

ಇಲ್ಲಿ, ಈ ಬರೆಯುವ ಮನೆಯಲ್ಲಿ hectic ಅನ್ನಿಸುವಂತಹ ಕೆಲಸ ನಡೆಯುತ್ತಿದೆ. I am writing continuously. ಕಳೆದ ವಾರ ಕೊಂಚ ಜಡ್ಡಿಗೆ ಬಿದ್ದೆ. ನಮ್ಮಲ್ಲಿ ವೀಣಾ ಎಂಬ ಹುಡುಗಿಯೊಬ್ಬಳಿದ್ದಾಳೆ. ನನ್ನ ಸಹಾಯಕಿ. ನನಗೆ ನೆನಪು ಮಾಡಿಕೊಂಡು ಮಾತ್ರೆ-ಔಷಧಿ ಕೊಡುವ ಹುಡುಗಿ. ಯಾಕೋ ತುಂಬ ಮಂಕಾಗಿ ನಿಂತಿದ್ದಳು.

“ಯಾಕಮ್ಮಾ ಸಪ್ಪಗಿದ್ದೀಯ?" ಅಂದೆ.

“ಇನ್ನೇನು ಮತ್ತೆ? ನೀನು ಒಂದು ಹನಿ ನೀರೂ ಕುಡೀತಾ ಇಲ್ಲ. ಗ್ಲುಕೋಸ್ ಕೊಟ್ರೆ ಬ್ಯಾಡ ಅಂತೀಯ. ಹೀಗೆ ನೆಲ ಹಿಡಿದು ಮಲಗಿಬಿಟ್ರೆ ನಾವೆಲ್ಲ ಚಪ್ಪಾಳೆ ಹೊಡ್ಕೊಂಡು ಓಡಾಡ್ತಿರಬೇಕಾ ಅಣ್ಣ? ಆಫೀಸಿನಲ್ಲಿ ಎಲ್ರೂ ಹೀಗೇ ಆಗಿದ್ದಾರೆ..." ಅಂದವನು ಶ್ರೀನಿವಾಸ.

ಇದು ಒಂದು ಪುಟ್ಟ ಗುಂಪು. ಬೆರಳೆಣಿಕೆಯಷ್ಟು ಜನ. ಇದೇ ಒಂದು ಕುಟುಂಬದಂತೆ. Very close knit family. ಈ ಹುಡುಗ, ಹುಡುಗಿಯರೆಲ್ಲ ನನ್ನನ್ನು ಪ್ರೀತಿಯಿಂದ ನೋಡುತ್ತಾರೆ. They pamper me. ಇವರ ಮಧ್ಯೆ I am ಸುಖಿ: I am safe. ಬದುಕು ಹೀಗೇ ಸಾಗಿದೆ.

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books