Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನಿಮ್ಮ ಬರವಣಿಗೆ ನಂಗೆ ಇಷ್ಟವಾಗುತ್ತೆ

“ಒಂದ್ಕಡೆಯಿಂದ ತಿಂದು ಹಾಕೋಣ ಅನ್ನೋಷ್ಟು ಚೆಂದ ಕಾಣ್ತಿದೀಯ ಇವತ್ತು!'' ಅನ್ನುತ್ತಾನೆ ಹುಡುಗ.

'‘ಪಾಪಿ!'' ಅನ್ನುತ್ತಾಳೆ ಹುಸಿ ಮುನಿಸಿನ ಹುಡುಗಿ. ಅವನ ಮಾತು ಕೇಳಿದವಳ ಮನಸ್ಸಿನಲ್ಲೊಂದು 'ಹ್ಹ್’ ಹುಟ್ಟಿಕೊಂಡಿದೆ. ಕಣ್ಣು ಖುಷಿಯಲ್ಲಿ ಇಷ್ಟಗಲ. ತುಟಿಯಲ್ಲಿ ಒಂದು ಸಂಪಿಗೆ ನಗು. ಅವಳಿಗೆ ಗೊತ್ತು; ಅವಳಿವತ್ತು ತುಂಬ ಚೆಂದಗೆ ಡ್ರೆಸ್ ಮಾಡಿಕೊಂಡಿದ್ದಾಳೆ. ಅವನ ಮೆಚ್ಚುಗೆ ಅವಳಿಗೆ ಸ್ವೀಕೃತ. ಅಂಥದೊಂದು ಮೆಚ್ಚುಗೆಗೇಂತ ಅವಳು ಕಾದದ್ದೂ ಹೌದು. ಇವನು ತನ್ನ ಮಾತಿನ ಮೂಲಕ ತಾಕಿದ್ದು, ಅವಳ ಆ ನಿರೀಕ್ಷೆಯನ್ನೇ. ಅಂಥ ಹೊಗಳಿಕೆ ತುಂಬ apt ಮತ್ತು ಅವಶ್ಯಕ.

'‘ಇನ್ನೊಂಚೂರು ಅನ್ನ ಹಾಕಿ ಸಾರು ಹಾಕಿಬಿಡು. ಅದೆಷ್ಟು ರುಚಿಯಾಗಿ ಮಾಡಿದೀಯ. ನಿನ್ಕೈಯ ಅಡುಗೆ ಊಟ ಮಾಡೋಕೆ ಪುಣ್ಯ ಮಾಡಿರಬೇಕು'' ಅಂದವನು ಮಗ.

'‘ಬಂಗಾರದ ಹಂಗೆ ಊಟ ಮಾಡಪ್ಪ'' ಅನ್ನುತ್ತ ಎರಡನೇ ಸುತ್ತು ಅನ್ನ-ಸಾರು ಬಡಿಸಿದವಳು ತಾಯಿ. ಆಕೆಗೆ ಹೊಗಳಿಕೆ ಎಂಬುದು, ಆಮೇಲಿನ ಸಂಗತಿ. ಆದರೆ ಮಗ ಇಷ್ಟಪಟ್ಟು ಉಂಡನಲ್ಲ ಅನ್ನೋದು ಮೊದಲ ಸಂತೃಪ್ತಿ. ಪ್ರತಿನಿತ್ಯ ಹೊತ್ತೊತ್ತಿಗೆ ಅಡುಗೆ ಮಾಡಿ ಬಡಿಸುವ, ಎಲ್ಲರದೂ ಊಟವಾದ ಮೇಲೆ ಕೊನೆಯಲ್ಯಾವಾಗಲೋ ತಾನು ಊಟ ಮಾಡುವ ಅಮ್ಮ ಯಾರಿಂದಲೂ ಹೊಗಳಿಕೆ ನಿರೀಕ್ಷಿಸುವುದಿಲ್ಲ ಅಂದುಕೊಂಡರೂ, ಒಂದು ಅಕ್ಕರೆಯ ಹೊಗಳಿಕೆ, ಮೆಚ್ಚುಗೆ ಅಮ್ಮನನ್ನು ಖುಷಿ ಪಡಿಸುತ್ತದೆ ಅಂತ ಎಷ್ಟು ಜನ ಬೆಳೆದ ಮಕ್ಕಳಿಗೆ ಗೊತ್ತು, ಹೇಳಿ?

'‘ರವಿಯವರೇ, ಮೊನ್ನೆ ನಿಮ್ಮದೊಂದು ಲೇಖನ ಓದಿದೆ. ಎಷ್ಟು ಚೆನ್ನಾಗಿ ಬರ‍್ದಿದೀರ... wonderful!'' ಅನ್ನುತ್ತಾನೆ ಆತ.

‘ಹೌದಾ? Thank you. ಯಾವ ಲೇಖನ ನಿಮ್ಗೆ ಇಷ್ಟವಾಯ್ತು?' ಅಂತ ಕೇಳುತ್ತೇನೆ.

'‘ಅದೇನ್ರಪಾ... ಹಾಯ್ ಬೆಂಗ್ಳೂರಲ್ಲಿ ಬಂದಿತ್ತಲ್ಲ? ಯಾವ್ದದೂ... ತುಂಬ ಚೆನ್ನಾಗಿತ್ತು ನೋಡಿ... ಅಯ್ಯೋ... ನೆನಪೇ ಆಗ್ತಿಲ್ಲ. ನಿನ್ನೇನೂ ಒಂದ್ಸಲ ಅದನ್ನ ಮತ್ತೆ ಓದಿಕೊಂಡೆ. ನೀನೂ ಓದೇ ಅಂತ ನನ್ನ ಹೆಂಡ್ತೀಗೂ ಹೇಳ್ದೆ. ಅದೇ ಸಾರ್...'' ಆತ ನೆನಪಿನ ತಿಪ್ಪೆಗೆ ಕೈ ಹಾಕಿದವನಂತೆ ತಿಪ್ಪರಲಾಗ ಹಾಕತೊಡಗುತ್ತಾನೆ. Poor fellow, ಆ ಕ್ಷಣದಲ್ಲಿ ಎದುರಾಗಿರುವ ಲೇಖಕನನ್ನು ಒಂದು ಸಿದ್ಧತೆಯೇ ಇಲ್ಲದೆ ಹೊಗಳಿ ಸಂಪ್ರೀತಗೊಳಿಸುವ ಪ್ರಯತ್ನ ಅವನದು. ಇಂಥ ಹೊಗಳಿಕೆಗಳು unprepared ಅವಿವೇಕಗಳು ಅಂತ ಉಳಿದೆಲ್ಲರಿಗಿಂತ ಚೆನ್ನಾಗಿ ನನಗೇ ಅರ್ಥವಾಗುತ್ತಿರುತ್ತದೆ. ಅಸಲಿಗೆ ಇಂಥ ಹೊಗಳಿಕೆಗಳ ಅವಶ್ಯಕತೆಯೂ ಒಬ್ಬ ಲೇಖಕನಿಗಿರುವುದಿಲ್ಲ. ನಿಜವಾಗಿಯೂ ಇಷ್ಟಪಡುವ ಲೇಖಕನೊಬ್ಬ ಇದಿರಾದಾಗ 'ನಿಮ್ಮ ಬರವಣಿಗೆ ನಂಗೆ ಇಷ್ಟವಾಗುತ್ತೆ’ ಅಂತ ಒಂದು ಮಾತು ಹೇಳಿ ಸುಮ್ಮನಾದರೆ ಸಾಕು. ಆತನಿಗದು ಅರ್ಥವಾಗುತ್ತದೆ. ಅಥವಾ ಯಾವುದಾದರೊಂದು specific ಆದ ಆತನ ಬರವಣಿಗೆ ನಿಮಗೆ ಇಷ್ಟವಾಗಿದ್ದರೆ, ಅದನ್ನ ನೇರವಾಗಿ quote ಮಾಡಿ ಆತನಿಗೆ ಹೇಳಿ. ಬರೆಯುವ ಜೀವಕ್ಕೆ ತುಂಬ ಸಂತೋಷವಾಗುತ್ತದೆ.

ಇತ್ತೀಚೆಗೊಂದು ದಿನ ಊರೊಂದರ ರಸ್ತೆಯ ಪಕ್ಕದಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದೆ. ಯುವಕನೊಬ್ಬ ತನ್ನ ಮೊಬೈಕಿನಲ್ಲಿ ಬೆನ್ನತ್ತಿದವನಂತೆ ಬಂದು, ‘ಬೀಸು ಗಾಳಿಗೆ ಎದೆಯೊಡ್ಡದವನು ಚಂಡಮಾರುತದ ಬೆನ್ನತ್ತಲಾರ ಅನ್ನೋ ಹೆಡ್ಡಿಂಗಿನ ನಿಮ್ಮ ಬರಹವಿತ್ತಲ್ಲ? ಅದು ನನ್ನ ಬದುಕನ್ನೇ change ಮಾಡ್ತು. Thanx ನಿಮಗೆ" ಅಂದ. ದನಿಯಲ್ಲಿನ ಪ್ರೀತಿ, ಪ್ರಾಮಾಣಿಕತೆ ಬೆರಳಿಗೆ ತಾಕುವಷ್ಟು ಸತ್ಯವಾಗಿದ್ದವು. ಇಂಥ ಚಿಕ್ಕಪುಟ್ಟ ಹೊಗಳಿಕೆಗಳು, ಮೆಚ್ಚಿಗೆಗಳು ಒಬ್ಬ ಲೇಖಕನ ego boost ಮಾಡುತ್ತವೆ. ಆತನಿಂದ ಇನ್ನಷ್ಟು ಒಳ್ಳೆಯ ಬರಹಗಳನ್ನು ಮೂಡಿಸುತ್ತವೆ.

ಅಂತೆಯೇ, ಹೊಗಳಬೇಕಾದದ್ದು ಅಮ್ಮನನ್ನ, ಪ್ರಿಯತಮೆಯನ್ನ ಅಷ್ಟೆ ಅಲ್ಲ. ತೀರ ಅವಸರದಲ್ಲಿದ್ದಾಗ ನಿಮ್ಮನ್ನು ಸರಿಯಾದ ಹೊತ್ತಿಗೆ ಗಮ್ಯಕ್ಕೆ ತಲುಪಿಸಿದ ಆಟೋ ಡ್ರೈವರ್‌ನನ್ನು ಹೊಗಳಿ. ತಲುಪಿಸಿದ್ದಕ್ಕೆ ಥ್ಯಾಂಕ್ಸ್ ಹೇಳುವುದು ಬೇರೆ ಮಾತು. 'ಅಂಥ ಸ್ಪೀಡಿನಲ್ಲೂ ಅದೆಷ್ಟು ಚೆನ್ನಾಗಿ drive ಮಾಡ್ತೀರಿ!’ ಎಂಬ ಹೊಗಳಿಕೆಯ ಮಾತಿದೆಯಲ್ಲ? ಅದು ಆತನ ego booster. ನೋವಾಗದೆ ಇಂಜೆಕ್ಷನ್ ಕೊಟ್ಟ ನರ್ಸ್‌ಗೆ, ಆಗಷ್ಟೆ ಮಗಳ ಮದುವೆ ಮುಗಿಸಿ ಖಾಲಿ ಚಪ್ಪರದ ಅಡಿಯಲ್ಲಿ ದಣಿದು ಕೂತ ತಂದೆಗೆ, ಗೃಹಪ್ರವೇಶಕ್ಕೆ ಕರೆದು ಮನೆ ತೋರಿಸಿದ ಗೆಳೆಯನಿಗೆ, ಬೇಸರಿಸಿಕೊಳ್ಳದೆ ತನ್ನ ಕೆಲಸದ ಜೊತೆಯಲ್ಲೇ ನಿಮ್ಮ ಹೊರೆಯನ್ನು share ಮಾಡಿದ ಸಹೋದ್ಯೋಗಿಗೆ, ರ‍್ಯಾಂಕು ಬರಲು ಕಾರಣವಾದ ಮೇಸ್ಟ್ರಿಗೆ, ಚೆಂದಗೆ ಅಂಗಿ ಹೊಲಿದುಕೊಟ್ಟ ಟೈಲರ್‌ಗೆ, ಮದುವೆಯಾದ ನಂತರ ಮೊದಲ ಸಲ ತನ್ನ ಮನೆಗೆ ಕರೆದ ತಂಗಿಗೆ, ಅಕ್ಕನಿಗೆ-ಇವರಿಗೆಲ್ಲ ನಿಮ್ಮದೊಂದು ಮೆಚ್ಚುಗೆಯ ಹೊಗಳಿಕೆಯ ಮಾತು ಬೇಕಾಗಿರುತ್ತದೆ. ಥ್ಯಾಂಕ್ಸ್ ಹೇಳುವ ಜೊತೆ ಜೊತೆಯಲ್ಲೇ 'ನೀವು ಅದೆಂಥ skilled ನರ್ಸ್ ಅಲ್ವಾ? ಎಷ್ಟು ಕಡಿಮೆ ದುಡ್ಡಿನಲ್ಲಿ, ಚೂರು space waste ಮಾಡದೆ ಚೆಂದಗೆ ಪ್ಲಾನ್ ಮಾಡಿ ಮನೆ ಕಟ್ಸಿದೀಯ! ಜೊತೇಲಿ ನೀನು ಕೂತು ಕೆಲ್ಸ ಮಾಡ್ತಿದ್ರೆ ನಂಗೆ ಅದೆಂಥ ಭರವಸೆ ಇರುತ್ತೆ ಗೊತ್ತಾ? ಟೈಲರ್ ಅಂದ್ರೆ ನೀನು ಕಣಯ್ಯಾ! ಏನು ಮರೆತರೂ ಈ ಜೀವನದಲ್ಲಿ ನೀವು ಪಾಠ ಮಾಡೋ ಶೈಲಿ ಮರೀಲಾರೆ ಸರ್! ಮಗಳ ಮದುವೇನ ಅದೆಷ್ಟು ಚೆನ್ನಾಗಿ ಮಾಡಿ ಮುಗಿಸಿದಿರಿ! ಮನೆ ಎಷ್ಟು ಚೆನ್ನಾಗಿ ಇಟ್ಕೊಂಡಿದೀಯಲ್ಲೇ ಅಕ್ಕಾ...’ ಮುಂತಾದ ನಿಮ್ಮ ಮೆಚ್ಚುಗೆಗಳು, ಹೊಗಳಿಕೆಗಳು-ಎದುರಿನವರನ್ನು ಏಕೆ ಖುಷಿ ಪಡಿಸುತ್ತವೆಂದರೆ, ಅಲ್ಲಿ ನೀವು ಕೇವಲ thanx ಹೇಳುತ್ತಿಲ್ಲ. ಉಪಕಾರ ಸ್ಮರಿಸುತ್ತಿಲ್ಲ. ಅವರಲ್ಲಿನ ಒಂದು ಗುಣ, ಒಂದು ನೈಪುಣ್ಯ, ಒಂದು ತಾಕತ್ತು, ಎಫಿಷಿಯೆನ್ಸಿಇವೆಲ್ಲವನ್ನೂ ಗುರುತಿಸಿ ಗೌರವಿಸುತ್ತಿದ್ದೀರಿ. ಆ ಮೂಲಕ ಅವರ ಆ ಗುಣವನ್ನು ಹೆಚ್ಚಿಸುತ್ತಿದ್ದೀರಿ.

ಹೀಗೆ ಹೊಗಳಲಿಕ್ಕೆ ಅಂಥ ಬುದ್ಧಿವಂತಿಕೆ ಬೇಕಾಗಿಲ್ಲ. ಚೂರು ಒಳ್ಳೇತನ ಸಾಕು. ಗುಣವನ್ನು ಗ್ರಹಿಸುವ ಬುದ್ಧಿವಂತಿಕೆ ಸಾಕು. ಎದುರಿನವನೆಡೆಗೆ ನಿಜವಾದ ಪ್ರೀತಿ ಸಾಕು. ಚೆಂದಗೆ ಡ್ರೆಸ್ ಮಾಡಿಕೊಂಡು ಬಂದ ಗೆಳತಿಯನ್ನು ಕರಡಿಯಂತೆ ಅಡರಿಕೊಳ್ಳುವ ಮೂಲಕ ನೀವು ನಿಮ್ಮ ಆಸೆ ಮತ್ತು ಪ್ರೀತಿ ಎರಡನ್ನೇ ತೋರಿಸಿರುತ್ತೀರಿ. '‘ನೀನು ಹೀಗೆ ಡ್ರೆಸ್ ಮಾಡಿಕೊಂಡು ಬಂದಾಗ ನಿನ್ನ ಜೊತೆ ಅಷ್ಟು ದೂರ walk ಹೋಗಿ ಬಂದರೆ ಎಂಥ ಹೆಮ್ಮೆ ಅನ್ಸುತ್ತೆ ಗೊತ್ತಾ?'' ಅಂದಾಗ, ಆಕೆಯ ಚೆಂದನೆಯ egoಗೆ ಕೈಯ್ಯಾರೆ ಹೂ ಮುಡಿಸಿರುತ್ತೀರಿ. ಅದೇ ರೀತಿ, ಹೆಂಡತಿ ರುಚಿಯಾಗಿ ಅಡುಗೆ ಮಾಡಿದಾಗ ತಿಥಿ ಊಟಕ್ಕೆ ಕುಳಿತವರ ಹಾಗೆ ಜಬಡಿ ತಿಂದು ಮುಗಿಸುವುದನ್ನಷ್ಟೆ ಮಾಡಬಾರದು. ‘ನಿನ್ನ ಕೈಯಲ್ಲಿ ಅದಿನ್ನೆಂಥ ಅಮೃತವಿದೆಯೋ ಮಾರಾಯ್ತಿ. ದೇವತೆಗಳು ಮಾತ್ರ ತಿನ್ನಬಹುದಾದಂಥ ಅಡುಗೆ ಮಾಡಿದೀಯ!' ಅನ್ನಬೇಕು. ಅದನ್ನಾಕೆ ನಿರೀಕ್ಷಿಸಿರುತ್ತಾಳೆ.

ನೆನಪಿರಲಿ, ಹೊಗಳಿಕೆ ಮತ್ತು ಮೆಚ್ಚುಗೆಗೆ ಮುಂದಾದಾಗ ನೀವು ಹೊಗಳುವ ಟೈಮು ಮತ್ತು ಪರಿಸ್ಥಿತಿಗಳ ಬಗ್ಗೆ ಗಮನವಿರಲಿ. ನಿಮ್ಮ ಹೊಗಳಿಕೆ ಆ ಕ್ಷಣ instant ಆಗಿ ಬರಬೇಕು. ಮೆಚ್ಚುಗೆ ಇಮ್ಮಿಡಿಯೆಟ್ ಆದುದಾಗಿರಬೇಕು. ಇವತ್ತು ಚೆಂದಗೆ dress ಮಾಡಿಕೊಂಡ ಹೆಂಡತಿಯನ್ನು ಇನ್ಯಾವತ್ತೋ ತೊಗಲು ಬಾವಲಿಯಂಥ ನೈಟಿ ಹಾಕಿಕೊಂಡಾಗ ಹೊಗಳಿ 'ಪೆದ್ದ’ ಅನ್ನಿಸಿಕೊಳ್ಳಬೇಡಿ. ಅಂಥ ಸಮಯದಲ್ಲಿ ಬೇರೆಯೇ ತರಹದ ಹೊಗಳಿಕೆಯ ಮಾತು ನಿಮ್ಮಿಂದ ಬರಲಿ. ‘ಅದ್ಯಾವನು ಕಂಡು ಹಿಡಿದನೋ ಈ ನೈಟೀನ! ಮೊನ್ನೆ ಉಟ್ಕಂಡ ಹಾಗೆ ಅದ್ಭುತವಾಗಿ ಸೀರೆ ಉಟ್ಕೋಬಾರ್ದೆ? ಅವತ್ತೆಷ್ಟು ಚೆಂದಾಗಿ ಕಾಣ್ತಿದ್ದೆ!' ಅನ್ನೋದು ಬುದ್ಧಿವಂತ ಹೊಗಳಿಕೆ.

ಅಂತೆಯೇ ಪದೇಪದೆ ಹೊಗಳುವುದು ಅಸಹ್ಯಕರ. ವಿಪರೀತ ಎಕ್ಸಾಗರೇಟ್ ಮಾಡಿ ಹೊಗಳುವುದು-ವಾಚಾಮಗೋಚರ. ಗುಣಗಳಿಗಿಂತ ಹೆಚ್ಚಾಗಿ ದೇಹವನ್ನು ಹೊಗಳುವುದು, ಶ್ರೀಮಂತಿಕೆಯನ್ನು ಹೊಗಳುವುದು-ಅಶ್ಲೀಲ. ಅಧಿಕಾರದಲ್ಲಿರುವವರನ್ನು ಬೆನ್ನತ್ತಿ ಹೋಗಿ ಹೊಗಳುವುದು-ಚಮಚಾಗಿರಿ. ಹೊಗಳಿಕೆಗೆ ಮಾತು ಸಿಗದೆ ತಾರಾಡುವುದು-ಅದು ಪ್ರಾಮಾಣಿಕತೆ. ಮಾತು ಸಿಕ್ಕಾಗಲೂ ಹೊಗಳದೆ ಇರುವುದು-ವ್ಯಕ್ತಿತ್ವದಲ್ಲಿ ದೋಷ.

ಇವೆಲ್ಲ ಹೊಗಳಿಕೆಗಳನ್ನು ಅರಗಿಸಿಕೊಂಡು ಬೆಳೆಯುತ್ತ ಹೋಗುವುದು, ಶುದ್ಧ ಬುದ್ಧಿವಂತನ ಲಕ್ಷಣ.

ನೀವು ಕೊನೆಯ ಪಂಗಡದವರೂಂತ ನಂಗೊತ್ತು.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books