Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಚಲಪತಿಯ ಕಣ್ಣುಗಳಲ್ಲಿದ್ದುದು ಕೇವಲ ಯೌವ್ವನದ ಉದ್ಧಟತನವಲ್ಲ!

ಅವತ್ತೇ, ಅವಳನ್ನು ಎಲೆ ಮಲ್ಲೇಶ್ವರನ ಗುಡಿಯ ಮೆಟ್ಟಿಲುಗಳ ಮೇಲಿಂದ ತನ್ನ ಆರು ತಿಂಗಳ ಬಸಿರು ಹೊತ್ತು ಗಂಡನ ತೋಳು ಬಳಸಿ ಇಳಿದು ಬರುತ್ತಿದ್ದ ಮಾಂಡೋವಿಯನ್ನು ಕಂಡ ದಿನವೇ ಸೋಮಯಾಜುಲ ವೆಂಕಟಚಲಪತಿ ನಿರ್ಧರಿಸಿದ್ದ.

'ನಾನು ಮಾಂಡೋವಿಗೆ ಅರ್ಹನಾಗಬೇಕು. ಅವಳಿಗೊಬ್ಬಳಿಗೇ ಏಕೆ, ಜಗತ್ತಿನ ಯಾವ ಹೆಂಗಸಿಗಾದರೂ ಅರ್ಹನೆನಿಸುವಷ್ಟು ಹೆಸರನ್ನೂ, ಅಂತಸ್ತನ್ನೂ ಗಳಿಸಿಕೊಳ್ಳಬೇಕು!’

ಅವನ ನಿರ್ಧಾರವು ಪ್ರೇಮದಷ್ಟೇ ಕಠೋರವಾಗಿತ್ತು. ಮಾಂಡೋವಿಗೀಗಾಗಲೇ ಮದುವೆಯಾಗಿದೆಯೆಂಬ ಸತ್ಯಕ್ಕೂ ಅವನ ನಿರ್ಧಾರಕ್ಕೂ ಸಂಬಂಧವಿರಲಿಲ್ಲ. ಅಷ್ಟೇ ಅಲ್ಲ, ಅವಳನ್ನು ಹೊಂದುವ ವಿಷಯದಲ್ಲಿ ತನ್ನದೇ ನಿರ್ಣಾಯಕ ನಿರ್ಧಾರವೆಂಬಂತೆ ಅವನು 'ಈ ಡಾಕ್ಟರ್ ಚನ್ನಬಸವನಗೌಡ ಸಾಯಬೇಕು ಮತ್ತು ಸಾಯುತ್ತಾನೆ’ ಎಂದೂ ನಿರ್ಧರಿಸಿದ್ದ. ಆತ ಹೇಗೆ ಮತ್ತು ಎಲ್ಲಿ ಸಾಯುತ್ತಾನೆಂಬುದು ಚಲಪತಿಗೆ ಆ ಕ್ಷಣದಲ್ಲಿ ಗೊತ್ತಿರಲಿಲ್ಲವಾದರೂ ಅಂತಹುದೊಂದು ಅಸಾಧ್ಯವಾದ ಘಟನೆ ಘಟಿಸುವ ತನಕ ತಾನು ತಾಳ್ಮೆಯಿಂದ, ನೆಮ್ಮದಿಯಿಂದ ಯಾವುದೇ ಪಾತಕಕ್ಕೆ ಕೈ ಹಾಕದೆ ಕಾಯಲೇಬೇಕೆಂದು ಖಚಿತಪಡಿಸಿಕೊಂಡ. ಒಂದಲ್ಲ, ಹತ್ತಲ್ಲ, ನೂರಲ್ಲ.... ಈ ಅನಂತವಾದ ಕಾಲದ ಕಟ್ಟ ಕಡೆಯ ನಿಮಿಷಗಳ ತನಕ ತಾನು ಮಾಂಡೋವಿಗಾಗಿ ಮತ್ತು ಡಾಕ್ಟರ್ ಚನ್ನಬಸವನಗೌಡನ ಸಾವಿಗಾಗಿ ಕಾಯುತ್ತಾನೆಂಬುದನ್ನು ಆತ ಮನಸ್ಸಿಗೆ ತಿಳಿಯಹೇಳಿದ. ಮತ್ತು ಅದರ ಆರಂಭವನ್ನವನು ಪ್ರಾರಂಭಿಸಿದ.

ಅಂದು ಮುಂಜಾನೆಯೆದ್ದು ತನ್ನ ತಂದೆಯ ಹಳೆಯ ಸೂಟನ್ನೇ ಗರಿಗರಿಯಾಗಿ ಇಸ್ತ್ರಿ ಮಾಡಿಕೊಂಡು ಧರಿಸಿ, ಎಲ್ಲ ಮುತುವರ್ಜಿಯೊಂದಿಗೆ ಸಿದ್ಧನಾಗಿ ಸೀದಾ ಸಣ್ಣಸತ್ತೆಪ್ಪನ ಬಂಗಲೆಗೆ ಹೋದ. ತನ್ನ ಹಳೇ ಮನೆಯ ವರಾಂಡದಲ್ಲಿ ಆರಾಮ ಕುರ್ಚಿಯ ಮೇಲೆ ಕೂತು ಎದುರಿಗಿನ ಬಯಲನ್ನೇ ದಿಟ್ಟಿಸುತ್ತಿದ್ದ ಸಣ್ಣಸತ್ತೆಪ್ಪನಿಗೆ ಬಾಗಿಲಲ್ಲಿ ಬಂದು ನಿಂತ ಚಲಪತಿಯನ್ನು ನೋಡಿ ಕೆಂಡದಂತಹ ಸಿಟ್ಟು ಬಂದಿತ್ತು. ಬದರೀನಾಥದಿಂದ ಬಂದ ಎರಡು ವರ್ಷದ ನಂತರ ಮೊದಲ ಬಾರಿಗೆ ಮುಖ ತೋರಿಸುತ್ತಿದ್ದಾನೆ ಬಡವ! ಅಲ್ಲಿ ಟೆಲಿಗ್ರಾಫು ಕಚೇರಿಯ ನೌಕರಿಯನ್ನೂ ಕಳೆದುಕೊಂಡಿದ್ದಾನೆ. ವಿಧವೆ ತಾಯಿ ದುಡಿದಿಟ್ಟರೆ ಕೂತು ಉಣ್ಣುವ ಕೂಳುಕಂಟಕ. ಈಗ ಎದುರಿಗೆ ಬಂದು ನಿಂತವನನ್ನು ವಾಚಾಮಗೋಚರವಾಗಿ ಬಯ್ಯಬೇಕೆನಿಸಿದರೂ; ಯಾವ ಮನುಷ್ಯನೂ ತನ್ನ ತಾಯಿಯ ಯೋನಿಯಿಂದ ಹೊರಬಿದ್ದ ಕೂಡಲೆ ಅವನು ಹುಟ್ಟಿಬಿಟ್ಟಿದ್ದಾನೆಂದು ಘೋಷಿಸಲಾಗದು. ಬದುಕಿನ ಒಂದೊಂದು ಹಂತವೂ ಒಂದೊಂದು ಪಾಠ ಕಲಿಸುತ್ತ ಕಲಿಸುತ್ತ ಅವನನ್ನು ಮತ್ತೆ ಮತ್ತೆ ಪರಿಪೂರ್ಣವಾಗಿ ತನ್ನಲ್ಲಿ ತಾನೇ ಜನ್ಮ ತಳೆಯುವಂತೆ ಮಾಡುತ್ತದೆ ಎಂಬ ತನ್ನ ಸಿದ್ಧಾಂತವೊಂದು ನೆನಪಾಗಿ,

‘ಏನಾ... ಬಂದಿ?' ಎಂದು ಕೇಳಿದ.

ಚಲಪತಿ ತನ್ನ ನಿರ್ಧಾರವನ್ನು ಸ್ಪಷ್ಟ ಶಬ್ದಗಳಲ್ಲಿ ಉಚ್ಚರಿಸಿದ. ಕಳೆದು ಹೋದ ತನ್ನ ಇಪ್ಪತ್ತಾರು ನಿರರ್ಥಕ ವರ್ಷಗಳಿಗೆ ಕಂದಾಯ ಕಟ್ಟಬೇಕಿದೆ. ತಾನೊಬ್ಬ ದೊಡ್ಡ ಮನುಷ್ಯನಾಗಿ, ಶ್ರೀಮಂತನಾಗಿ, ಜವಾಬ್ದಾರಿಯುತ ಗಂಡಸಾಗಿ, ಸ್ವತಂತ್ರನಾಗಿ ಬೆಳೆಯಬೇಕಿದೆ. ಬದುಕಿನ ಯಾವುದೇ ಹಂತದಲ್ಲಿ ಮಾಂಡೋವಿ ತನ್ನೆಡೆಗೆ ಬಂದರೆ ಅವಳನ್ನು ಸ್ವೀಕರಿಸಬಲ್ಲ ಸ್ಥಿತಿಗೇರಬೇಕಾಗಿದೆ ಎಂಬ ರಹಸ್ಯವನ್ನು ಬಿಟ್ಟುಕೊಡಲಿಲ್ಲವಾದರೂ, ಅದಕ್ಕೆ ಪೂರಕವಾದ ಎಲ್ಲ ಆಕಾಂಕ್ಷೆಗಳನ್ನು ಸಣ್ಣಸತ್ತೆಪ್ಪನ ಮುಂದೆ ವಿವರಿಸಿದ. ಚಲಪತಿಯ ಕಣ್ಣುಗಳಲ್ಲಿದ್ದುದು ಕೇವಲ ಯೌವ್ವನದ ಉದ್ಧಟತನವಲ್ಲ. ಒಂದು ಸುದೀರ್ಘ ನಿರೀಕ್ಷಣೆಯ ಕಠೋರ ಸಿದ್ಧತೆ ಎಂಬುದು ಸಣ್ಣಸತ್ತೆಪ್ಪನ ಅರಿವಿಗೆ ಬರಲು ತಡವಾಗಲಿಲ್ಲ. ಎಷ್ಟಾದರೂ ತನ್ನ ಅಣ್ಣನ ಮಗ, ಅಣ್ಣನ ಮೊದಲ ಹೆಂಡತಿಯೂ ಸತ್ತು ಹೋಗಿದ್ದಾಳೆ. ತನಗೂ ಗಂಡು ಸಂತಾನವಿಲ್ಲ.

‘ಇರ‍್ಲಿ ನಾಳಿಂದ ಕೆಲಸಕ್ಕೆ ಬಾ' ಎಂದು ಹೇಳಿ ಮತ್ತದೇ ನಿರ್ವಿಕಾರ ದೃಷ್ಟಿಯಿಂದ ಮನೆಯೆದುರಿನ ಬಯಲು ನೋಡುತ್ತ ಕುಳಿತುಬಿಟ್ಟ. ತನ್ನ ಚಿಕ್ಕಪ್ಪನೆಂಥ ಹುಚ್ಚನೆಂಬುದು ಚಲಪತಿಗೆ ಚೆನ್ನಾಗಿ ಗೊತ್ತಿತ್ತು. ತನಗೆ ಕೊಳಲು ಕಲಿಸಿದ ಜೇಕಬ್ ಚಂದ್ರಪ್ಪನೇ ಸಣ್ಣಸತ್ತೆಪ್ಪನಿಗೂ ಬಯಲಾಟದ ಮಟ್ಟುಗಳನ್ನು ಹಾಡಲು ಕಲಿಸಿದ್ದ. ಮುಸಲರ ಗೋರಿಯ ಮೆಟ್ಟಿಲುಗಳಂತೆ ಮಡತೆ ಮಡತೆಯಾಗಿದ್ದ ಗುಂಗುರು ಕೂದಲಿನ ವಿಚಿತ್ರಾಕಾರದ ಕ್ರಾಪು ಹೊಂದಿದ್ದ ಸಣ್ಣಸತ್ತೆಪ್ಪನ ಕಣ್ಣುಗಳು ಕೀವುಗುಳ್ಳೆಗಳಂತೆ ಊದಿಕೊಂಡಿದ್ದವು. ಸದಾ ಕುರುಕು ತಿಂಡಿ ತಿನ್ನುತ್ತಲೇ ಇರುತ್ತಿದ್ದ ಆತ ಊಟಕ್ಕೆ ಕೂತರೆ ಒಂದು ಚಿಕ್ಕ ಸಂಸಾರಕ್ಕಾಗುವಷ್ಟು ರೇಷನ್ನನ್ನು ಒಬ್ಬನೇ ತಿಂದು ಮುಗಿಸುತ್ತಿದ್ದ. ಕೇವಲ ಶ್ರದ್ಧೆ ಮತ್ತು ಪ್ರಯತ್ನಗಳಿಂದಾಗಿ ಸತ್ಯನಾರಾಯಣ ಮೋಟಾರು ಸರ್ವೀಸ್ ಕಂಪೆನಿಯನ್ನು ಆ ಇಡೀ ಪ್ರಾಂತ್ಯದ ಅದ್ವಿತೀಯ ಸಂಸ್ಥೆಯನ್ನಾಗಿ ನಿರ್ಮಿಸಿದ್ದ ಸಣ್ಣಸತ್ತೆಪ್ಪನಿಗೆ ದುರದೃಷ್ಟವಶಾತ್ ಬಯಲಾಟದ ಮಟ್ಟುಗಳನ್ನು ಹಾಡುವ ಚಟ ಬಂದುಬಿಟ್ಟಿತ್ತು. ಹಲ್ಲೆಲ್ಲ ಉದುರಿಹೋಗಿದ್ದ ಬಾಯಿಯನ್ನು ಊರಗಲ ತೆರೆದುಕೊಂಡು ಕೆನ್ನೆಗಳ ತನಕ ಇಳಿಬಿದ್ದ ಗಲ್ಲಿ ಮೀಸೆಯನ್ನು ತರ್ಜನಿಯಲ್ಲಿ ಸವರಿಕೊಳ್ಳುತ್ತ ಅವನು 'ಅಲಲಲಲಾ....’ ಎಂದು ದನಿ ತೆಗೆದರೆ ಊರ ಮಕ್ಕಳೆಲ್ಲ ಒಂದೇಟಿಗೆ ಮೆಟ್ಟಿಬೀಳುವಂತಿರುತ್ತಿತ್ತು. ನಿಜಕ್ಕೂ ದೊಡ್ಡ ಸ್ವರವಿದ್ದು ಖೇಚರದಲ್ಲಿ ಕೂಗಬಲ್ಲವನಾಗಿದ್ದ ಸಣ್ಣಸತ್ತೆಪ್ಪನಿಗೆ ಅದ್ಯಾರೋ, ಪ್ರಸಿದ್ಧ ಗಾಯಕನಾದ ಪಾವಗಡದ ಕೊಂಡ್ಲಗಿರಯ್ಯನ ಅಪ್ರತಿಮ ಸಾಹಸವೊಂದನ್ನು ಕತೆ ಕಟ್ಟಿ ಹೇಳಿಬಿಟ್ಟಿದ್ದರು. ಬಯಲಾಟದ ಮಟ್ಟುಗಳನ್ನು ಕೊಂಡ್ಲಗಿರಯ್ಯ ಅದೆಷ್ಟು ಏರಿದ ದನಿಯಲ್ಲಿ ಹಾಡುತ್ತಿದ್ದನೆಂದರೆ ಬಯಲಾಟಗಳಿಗಾಗಿ ತಂದು ಸ್ಟೇಜಿನ ಮೇಲೆ ನೇತು ಹಾಕಿರುತ್ತಿದ್ದ ಲ್ಯಾಂಟರ್ನುಗಳೂ, ಕನ್ನಡಿಗಳೂ ಫಳಫಳನೆ ಸೀಳಿ ನೆರೆದ ಜನಸ್ತೋಮ ಸ್ತಂಭೀಭೂತವಾಗುತ್ತಿತ್ತಂತೆ! ಈ ಕತೆಯನ್ನು ಕೇಳಿದ ದಿನದಿಂದ ಸಣ್ಣಸತ್ತೆಪ್ಪ ಮನೆಯೊಳಗಿದ್ದ ಗಾಜಿನ ದೀಪ, ಹೂಜಿ, ಲೋಟ-ಕಡೆಗೆ ಕಿಟಕಿ ಗಾಜುಗಳ ಮುಂದೆಯೂ ಸರದಿ ಪ್ರಕಾರ ನಿಂತು ಮಟ್ಟುಗಳನ್ನು ಹಾಡೇ ಹಾಡಿದ. ಅವ್ಯಾವೂ ಒಡೆಯದಿದ್ದಾಗ ತಮ್ಮ ಬಸ್ಸಿನ ಡ್ರೈವರುಗಳಿಗೆ ಹೇಳಿ ದೂರದೂರುಗಳಿಂದ ತೆಳ್ಳನೆಯ ಗಾಜಿನ ದೀಪದ ಬುಡ್ಡಿಗಳನ್ನು ತರಿಸಿ ಅವುಗಳ ಮುಂದೆ ಹಾಡಿ ನೋಡಿದ. ಅವನ ಗಾಯನವನ್ನು ಸಹಿಸಲಾಗದೆ ಸನ್ನಿ ಬಡಿದಂತಾದ ಅವನ ಹೆಂಡತಿ ಅದೊಂದು ರಾತ್ರಿ ಎಡಗೈಯಿಂದ ಒಂದು ಬೀಸು ಬೀಸಿ ಎಲ್ಲ ಗಾಜಿನ ವಸ್ತುಗಳನ್ನೂ ಒಂದೇಟಿಗೆ ಒಡೆದು ಹಾಕಿದ ಮೇಲೆ ಬೇರೆ ದಾರಿಗಾಣದೆ ಸಣ್ಣಸತ್ತೆಪ್ಪ ಅವರಿವರು ಸತ್ತಾಗ ರಾತ್ರಿಗಳಲ್ಲಿ ಹುಡುಗರು ಮಾಡುತ್ತಿದ್ದ ಭಜನೆಗಳಿಗೆ ಹೋಗಿ ಸೇರಿಕೊಳ್ಳುತ್ತಿದ್ದ ಮತ್ತು ಅವನಿಗದು ಲಾಯಕ್ಕಾದುದೂ ಆಗಿತ್ತು.

ಅವರಿವರ ಮನೆಗಳಲ್ಲಿ ಅಡುಗೆ ಮಾಡಿಕೊಂಡಿರುತ್ತಿದ್ದ ಪಾತರದ ಯಂಕಮ್ಮನೆಂಬ ಅವಿವಾಹಿತ ಹೆಂಗಸಿನ ಮೂರು ಮಕ್ಕಳಲ್ಲಿ ಮೂವರೂ ಒಬ್ಬೊಬ್ಬ ತಂದೆಗೆ ಹುಟ್ಟಿದವರಾಗಿದ್ದರು. ಮಧ್ಯದವನೇ ಈ ಸಣ್ಣಸತ್ತೆಪ್ಪ. ದೊಡ್ಡವನು ಚಲಪತಿಯ ತಂದೆ ಸತ್ತೆಪ್ಪ. ಮೂರನೆಯವನಾದ ಪುಟ್ಟಸತ್ತೆಪ್ಪನೆಂಬುವವನು ಮೊದಲ ಕಾಲರಾ ರೋಗದ ಹಾವಳಿಯಲ್ಲಿ ಕಾಲವಶನಾಗಿದ್ದ. ಮೊದಮೊದಲು ಪಾತರದವರೆಂಬ ಅಸಡ್ಡೆಗೊಳಗಾದರೂ ಸಣ್ಣಸತ್ತೆಪ್ಪ ಕಾಲಕ್ರಮದಲ್ಲಿ ಸಾಧಿಸಿದ ಸಾಧನೆಗಳು ಅವನನ್ನು ಆ ಸೀಮೆಯ ಸಾರಿಗೆ ಪ್ರಪಂಚದ ದೊರೆಯನ್ನಾಗಿಸಿದ್ದವು. ಆಗಿನ್ನೂ ಸರಕಾರಿ ಬಸ್ಸುಗಳಿರಲಿಲ್ಲ. ಇದ್ದ ಖಾಸಗಿ ಬಸ್ಸುಗಳೆಲ್ಲ ಸಣ್ಣಸತ್ತೆಪ್ಪನವೇ. ವಡ್ಡರ ಬಂಡೆಗೆ ಆತುಕೊಂಡೇ ಇದ್ದ ನಾಲಾಗಡ್ಡವೆಂಬ ಬಯಲಿನಲ್ಲಿ ಅದೇ ಹಚ್ಚಹಳೆಯ ಮನೆಯಲ್ಲಿ ಅತ್ಯಂತ ಕಡಿಮೆ ಸಾಮಾನುಗಳೊಂದಿಗೆ ತೀರ ಸರಳವಾಗಿ ಜೀವಿಸುತ್ತಿದ್ದ ಸಣ್ಣಸತ್ತೆಪ್ಪ. ತಾನೊಬ್ಬ ಹಣವಿರುವ ಬಡವನೆಂದೇ ಹೇಳಿಕೊಳ್ಳುತ್ತಿದ್ದ. ಮನೆಯಿಂದ ನಾಲ್ಕು ಹೆಜ್ಜೆ ಹಾಕಿದರೆ ಅಲ್ಲೇ ಎಸ್.ಎಂ.ಎಸ್. ಆಫೀಸು. ಅದಾದರೂ ಹತ್ತಾರೂ ಕುರ್ಚಿ, ಮೇಜುಗಳಿದ್ದ ಸರಳ ಸಮೂಹ. ಕಟ್ಟಡದ ಎರಡನೇ ಮಹಡಿಯಲ್ಲಿ ಸತ್ತೆಪ್ಪನ ಛೇಂಬರು. ಅಲ್ಲಿ ಕೂತೇ ಆತ ಆರು ದಶಕಗಳ ಕಾಲ ಇಡೀ ಕನ್ನಡ ದೇಶದ ಸಾರಿಗೆ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದುದು. ವಿಶ್ರಾಂತಿಗೆಂದು ಕಟ್ಟಿದ ಟೆರೇಸಿನ ಮೇಲೆ ಚಿಕ್ಕ ಮಂಚವೊಂದನ್ನು ಹಾಕಿಸಿಕೊಂಡಿದ್ದ. ಆತನನ್ನು ವಿಶ್ರಾಂತಿ ಕಾಲದಲ್ಲಿ ಯಾರೂ ಮಾತಾಡಿಸುವಂತಿರಲಿಲ್ಲ. ಮತ್ತು ಆತ ಬಯಲಾಟದ ಮಟ್ಟುಗಳನ್ನು ಒಮ್ಮೆ ಹಾಡತೊಡಗಿದನೆಂದರೆ ಅಲ್ಲಿಗೆ ಹೋಗುವ ಧೈರ್ಯ ಯಾರಿಗೂ ಆಗುತ್ತಿರಲಿಲ್ಲ. ಹೀಗಾಗಿ ಎಸ್.ಎಂ.ಎಸ್ ಕಚೇರಿಯ ಟೆರೇಸನ್ನು ವರ್ಷಗಟ್ಟಲೆ ಮತ್ತೊಬ್ಬ ಮಾನವ ಜೀವಿ ತುಳಿದಾಡುತ್ತಿರಲಿಲ್ಲ.

ಚಲಪತಿಯೊಳಗಿನ ಅಂತಃಸತ್ವವನ್ನೂ, ಸೋಲದ ಹಠಮಾರಿತನವನ್ನೂ ಉಳಿದವರ‍್ಯಾರೂ ಗುರುತಿಸದ ರೀತಿಯಲ್ಲಿ ಸಣ್ಣಸತ್ತೆಪ್ಪ ಗುರುತಿಸಿದ್ದ. ಇಪ್ಪತ್ತಾರು ನಿರುಪಯುಕ್ತ ವರ್ಷಗಳನ್ನು ಬೀದಿಗಳಲ್ಲಿ ತಿರುಗಿ ಕಳೆದು ಬಂದಿದ್ದ ಅವನನ್ನು ಕೆಲಸಕ್ಕೆ ತೆಗೆದುಕೊಂಡ ಮೊದಲ ದಿನದಿಂದಲೇ ಎಂಥ ಅಸಹನೀಯವಾದ ಪರೀಕ್ಷೆಗಳಿಗೊಡ್ಡಿದನೆಂದರೆ, ಚಲಪತಿಯಲ್ಲದೆ ಬೇರ‍್ಯಾರಾದರೂ ಆಗಿದ್ದರೆ ಎಂದೋ ಅಲ್ಲಿಂದ ಓಡಿಬಿಡಬೇಕಿತ್ತು. ಹಾಗಂತ ಅವನೆಂದಿಗೂ ಚಲಪತಿಯನ್ನು ನಿರ್ಬಂಧಿಸಲಿಲ್ಲ. ಅವಮಾನಿಸಲಿಲ್ಲ. ಕಷ್ಟಪಡುವುದನ್ನು ರೂಢಿ ಮಾಡಿಸಿದ್ದ. ಕಡೆಗೊಂದು ದಿನ ಸಣ್ಣಸತ್ತೆಪ್ಪನಿಗೆ ಮನವರಿಕೆಯಾಯಿತು. ಚಲಪತಿಯ ಧೈರ್ಯ, ಅಂತಃಸತ್ವ, ಹಟ ಮತ್ತು ಕಷ್ಟ ಸಹಿಷ್ಣುತೆಗಳು ಕೇವಲ ಬದುಕಿನ ಹೋರಾಟದಿಂದ ಅವನು ರೂಢಿಸಿಕೊಂಡಂಥದ್ದಲ್ಲ. ತನ್ನಪ್ಪನಿಂದ ಸಂತರಿಸಿಕೊಂಡಂಥವೂ ಆಗಿರಲಿಲ್ಲ. ಅವು ಒಂದು ಅದಮ್ಯ ಪ್ರೇಮದ ಯಶಸ್ವೀ ಪರ್ಯವಸಾನಕ್ಕಾಗಿ ಅವನ ಜೀವಕೋಶಗಳು ಸ್ವಯಂ ಸ್ಫೂರ್ತಿಯಿಂದ ವಸರುತ್ತಿದ್ದ ಗುಣಗಳಾಗಿದ್ದವು. ಜಗತ್ತಿನ ಯಾವ ಶಕ್ತಿಯೂ ಚಲಪತಿಯ ಹಟವನ್ನು ಸೋಲಿಸಲು ಸಾಧ್ಯವಿಲ್ಲವೆಂಬುದು ಸತ್ತೆಪ್ಪನಿಗೆ ಮನವರಿಕೆಯಾಯಿತು.

ಆದರೆ ಅವರಿಬ್ಬರಿಗೆ ತಕರಾರು ಬರುತ್ತಿದ್ದುದೆಲ್ಲ ಚಲಪತಿಯ ಬರವಣಿಗೆಗೆ ಸಂಬಂಧಿಸಿದ ವಿಷಯಗಳಲ್ಲಿ.

‘ತಮ್ಮಾ, ನೀನು ಇಂಗೇ ಬರಕಂತಿದ್ರೆ ಇವತ್ತಲ್ಲ ನಾಳೆ ಯಾವ್ದನ್ನ ಬಸ್ಸು ರೂಟಿಗೆ ಕ್ಲೀನರ್ ಕೆಲಸಕ್ಕೆ ಕಳಿಸಬೇಕಾತೈತೆ ನೋಡು!' ಎಂದು ನಿರ್ದಾಕ್ಷಿಣ್ಯವಾಗಿ ಎಚ್ಚರಿಸಿದ್ದ ಸಣ್ಣಸತ್ತೆಪ್ಪ. ಸಮಸ್ಯೆಯೇನೆಂದರೆ, ಚಲಪತಿ ಒಂದು ಅಪ್ಪಟ ವ್ಯವಹಾರಿಕ ಪತ್ರ ಬರೆಯುವಲ್ಲಿ ಮೊದಲಿನಿಂದಲೂ ಸೋತಿದ್ದ. ಬರವಣಿಗೆ ಅಂದ ಕೂಡಲೆ ಅವನ ಮಿದುಳಲ್ಲಿ ಕದಲುತ್ತಿದ್ದುದು ಮಾಂಡೋವಿ! ಬಸ್ಸುಗಳ ರೂಟು ಕಾಂಟ್ರಾಕ್ಟುಗಳ ವ್ಯವಹಾರದ ಬಗ್ಗೆ ಬರೆಯುವಾಗಲೂ ಅದನ್ನೊಂದು ಪ್ರೇಮಪತ್ರದಂತೆ ಬರೆಯುತ್ತಿದ್ದ. ಸರಕಾರಕ್ಕೆ ಸಲ್ಲಿಸುವ ಅರ್ಜಿಗಳಲ್ಲೂ ಲಯ, ಪ್ರಾಸಗಳಿರುತ್ತಿದ್ದವು. ದೂರದ ಬ್ರಾಂಚುಗಳ ಮ್ಯಾನೇಜರುಗಳು ತಮಗೆ ಬಂದ ಪತ್ರಗಳು ಅದೆಷ್ಟು ಸಲ ಓದಿದರೂ ಅರ್ಥವಾಗುತ್ತಿಲ್ಲವೆಂದು ಒಂದೇ ಸವನೆ ದೂರತೊಡಗಿದರು. ಅದೊಂದು ಮುಂಜಾನೆ ಚಿಕ್ಕಪ್ಪ ಕೊಟ್ಟ ಕಟು ಎಚ್ಚರಿಕೆಯ ನಂತರ ಚಲಪತಿ ಅನಿವಾರ್ಯವಾಗಿ ಹಳೆಯ ಕಡತಗಳನ್ನು ತೆಗೆದು ಗುಮಾಸ್ತರು ಬರೆದಿಟ್ಟ ಥೇಟ್ ವ್ಯಾವಹಾರಿಕ ಪತ್ರಗಳ ನಾಲ್ಕು ನಮೂನೆಗಳನ್ನು ಆಯ್ದು ಮುಂದಿನ ಎಲ್ಲ ಪತ್ರಗಳನ್ನೂ ಅದೇ ಶೈಲಿಯಲ್ಲಿ ಅತ್ಯಂತ ಕಷ್ಟದಿಂದ ಬರೆಯತೊಡಗಿದ. ಮಾಂಡೋವಿಗೆ ಪತ್ರ ಬರೆಯುವಾಗ ಪ್ರೇಮದ ಸಾಲುಗಳಿಗಾಗಿ ಕವಿತೆಯ ಪುಸ್ತಕಗಳನ್ನು ಹುಡುಕುತ್ತಿದ್ದವನೀಗ ಪ್ರೇಮದ ಸಾಲು ಮರೆತು ಮೋಟಾರು ವ್ಯವಹಾರದ ರೂಟು, ಕಲ್ಲಿದ್ದಲು, ನಟ್ಟು, ಬೋಲ್ಟುಗಳ ಭಾಷೆ ಕಲಿಯಬೇಕಿತ್ತು.
***

ನೀವಿನ್ನೂ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ನ ‘ಲವ್ ಇನ್ ದಿ ಟೈಮ್ ಆಫ್ ಕಾಲರಾ’ ಕಾದಂಬರಿಯನ್ನು ಓದಿಲ್ಲವಾದರೆ ನೇಣು ಹಾಕ್ಕಂಡು ಸಾಯೋದು ಕ್ಷೇಮ ಅಂತ ಛೇಡಿಸಿದವರು ಹಿರಿಯ ಪತ್ರಕರ್ತ ಮತ್ತು ಪ್ರಖ್ಯಾತ ಸಣ್ಣ ಕತೆಗಾರ ಎಸ್.ದಿವಾಕರ್. ಆ ಕಾದಂಬರಿಯನ್ನು ಕನ್ನಡದಲ್ಲಿ ಹೀಗೆ ಬರೆದರೆ ಹೇಗಿರುತ್ತೆ ಅಂತ ಕೆಲವೇ ತಿಂಗಳಲ್ಲಿ ಬರೆದು ತೋರಿಸಿ ಅವರ ಎದುರಿಗಿಟ್ಟವನು ನಾನು. ಕಾದಂಬರಿಯ ಹೆಸರು ‘ಮಾಂಡೋವಿ’.

“ನಾನು ಮಾರ್ಕ್ವೆಜ್‌ನ ಮೂಲ ಕಾದಂಬರಿಯನ್ನು ಓದಿದ್ದೇನೆ. ರವಿ ಬೆಳಗೆರೆ ಬರೆದ ಮಾಂಡೋವಿಯನ್ನೂ ಓದಿದ್ದೇನೆ. ಇದು ಭಾಷಾಂತರವಲ್ಲ. ರೂಪಾಂತರವೂ ಅಲ್ಲ. ಇದು ಬೇರೆಯದೇ ಕೃತಿ ಮತ್ತು ರವಿಯ ಅತ್ಯಂತ ಉತ್ಕೃಷ್ಟ ಕೃತಿಯೂ ಹೌದು" ಎಂದು ನುಡಿದವರು ಜ್ಞಾನಪೀಠ ಪ್ರಶಸ್ತಿ ಪಡೆದ ಮಹಾನ್ ಬರಹಗಾರ ಚಂದ್ರಶೇಖರ ಕಂಬಾರ ಅವರು.

ಅದಕ್ಕಿರುವ ಕಾರಣವೆಂದರೆ, ‘ಮಾಂಡೋವಿ’ಯ ಕಥಾನಾಯಕ ಸೋಮಯಾಜುಲ ಸೀತಮ್ಮಗಾರಿ ಮಗ ಚಲಪತಿಯಲ್ಲಿ ನಾನಿದ್ದೇನೆ. ನನ್ನ ಏಳು ವರ್ಷಗಳ ವಿಲಕ್ಷಣ, ವಿಫಲ ಪ್ರೇಮವಿದೆ. ನಾನು ಹುಟ್ಟಿದ ಬಳ್ಳಾರಿಯಲ್ಲಿ ಕಥೆ ಘಟಿಸುತ್ತದೆ. ಅದರಲ್ಲಿ ನನ್ನ ಹಸಿರು ನೆರಿಗೆ ಲಂಗದ ಹುಡುಗಿಯಿದ್ದಾಳೆ. ನಾನು ಅಲೆದ ಹಿಮಾಲಯದ ಕಂದರಗಳಿವೆ. ಕಲ್ಯಾಣಿ ಎಂಬ ಮುದ್ದು ಹುಡುಗಿಯೊಬ್ಬಳ calf love ಇದೆ. ಚಲಪತಿಯ ವೃದ್ಧಾಪ್ಯವಿದೆ. ವೃದ್ಧಾಪ್ಯದ ಭಯವಿದೆ. ವೃದ್ಧಾಪ್ಯದಲ್ಲೂ ಬೆನ್ನತ್ತುವ ಒಂದು ಕಾಲದ ನಿಷ್ಕಲ ಪ್ರೇಮದ ಮರು ಚಿಗುರುವಿಕೆಯ ಆಸೆಯಿದೆ. ಇದೆಲ್ಲವನ್ನೂ ಮೀರಿ, ಚಲಪತಿಯನ್ನು ಪ್ರೀತಿಸಿಯೂ ಅದನ್ನು ಇನ್ನೊಂದು ರೀತಿಯಲ್ಲಿ ಧಾರೆಯೆರೆಯುವ ಕಾಂಚನಮಾಲಾಳ ಪಾತ್ರವಿದೆ. ಮುಖ್ಯವಾಗಿ ಬದುಕಿನ ಸಂತೆಯೆಲ್ಲ ಮುಗಿದು, ಇನ್ನೇನು ಅಂತ ಜಾರಲಿದೆ ಅನ್ನುವ ಹೊತ್ತಿಗೆ ಮತ್ತೆ ಸಿಕ್ಕು ಬಿಡುವ ಅದೇ ಮಾಂಡೋವಿಯ ಅನನ್ಯ ಪ್ರೇಮವಿದೆ. ಇವೆಲ್ಲ ಕಾರಣಗಳಿಗಾಗಿ ಕಾದಂಬರಿ different ಆಗಿದೆ.

ತಂದೆ ಯಾರೆಂಬುದು ಗೊತ್ತಿಲ್ಲದ, ಗೊತ್ತಿದ್ದರೂ ಹೇಳಿಕೊಳ್ಳಲಾಗದ ಹುಡುಗನೊಬ್ಬ ಹೇಗೆ ತನ್ನ ತಾಯಿಗೆ ಕಚ್ಚಿಕೊಂಡು ಬಿಡುತ್ತಾನೆ. ತನ್ನ ಹಸಿ-ಬಿಸಿ ಪ್ರೇಮವನ್ನು ಹೇಗೆ ಅವಳೊಂದಿಗೆ ಹಂಚಿಕೊಳ್ಳುತ್ತಾನೆ. ತಾಯಿ ಮಗ ಇಬ್ಬರೇ ಕುಳಿತು ಹೇಗೆ ಚಲಪತಿಯ ಭವಿತವ್ಯದ ಪ್ರೇಮ ಜೀವನದ ಕನಸು-ಫ್ಯಾಂಟಸಿಗಳನ್ನು ಹಂಚಿಕೊಳ್ಳುತ್ತಾರೆ. ಉಹುಂ, ಇಲ್ಲಿ ವಿವರಿಸಲಾಗದು.

ನೀವು ಮಾಂಡೋವಿಯನ್ನು ಓದಲೇಬೇಕು. ಅದಕ್ಕಾಗಿಯೇ ಅದರ ಯಥಾವತ್ತು ಅಧ್ಯಾಯವೊಂದನ್ನು ಇಲ್ಲಿ ಪ್ರಕಟಿಸಲಾಗಿದೆ.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 01 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books