Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ತೊಂಬತ್ನಾಲ್ಕೂವರೆ ವರ್ಷ ಬದುಕಿದ ಅಣ್ಣನದು ಅದೆಂತಹ ಸುಖದ ನಿರ್ಗಮನ!

ನಮ್ಮ ಶೀಲಕ್ಕ ಫೋನ್ ಮಾಡಿದಳು.“ರವೀ, ಅಣ್ಣ ಹೋಗಿಬಿಟ್ರು" ಅಂದಳು. ಆ ಕ್ಷಣಕ್ಕೆ ಏನನ್ನಬೇಕೋ ಗೊತ್ತಾಗಲಿಲ್ಲ. ಆ ಸುದ್ದಿ ಅನಿರೀಕ್ಷಿತವೇನಾಗಿರಲಿಲ್ಲ. ಅಣ್ಣಂಗೆ ಅಜಮಾಸು ತೊಂಬತ್ನಾಲ್ಕೂವರೆ ವರ್ಷ. ಅವರ ಹೆಸರು ಅರಕಲಗೂಡು ಅನಂತರಾಮಯ್ಯ ಅಂತ. ಅವರನ್ನು ನಾನು ನೋಡಿ ಮೂವತ್ತೈದು ವರ್ಷಗಳೇ ಆದವು. ತುಂಬ ಸಜ್ಜನರು. ಬ್ರಾಹ್ಮಣರ ಮನೆಗಳಲ್ಲಿ ತಂದೆಯನ್ನು ‘ಅಣ್ಣ’ ಅಂತಾರೆ. ನಾನೂ ‘ಅಣ್ಣ’ ಅಂತಲೇ ಅಂತಿದ್ದೆ. ಅವರಿಗೆ ಬಹುಶಃ ಏಳು ಮಕ್ಕಳು. ದಾವಣಗೆರೆಯ ಒಂದು private firmನಲ್ಲಿ ಕೆಲಸವಿತ್ತು ಅಣ್ಣಂಗೆ. ಅದೆಷ್ಟು ಸಂಬಳವಿತ್ತೋ ಆ ಕಾಲಕ್ಕೆ? ಎಲ್ಲ ಮಕ್ಕಳನ್ನೂ ಚೆನ್ನಾಗಿ educate ಮಾಡಿದರು. ಮಕ್ಕಳಿಗಿಂತ ಅವರ ಮೊಮ್ಮಕ್ಕಳ ಕೈಗೆ ಪೂರ್ತಿಯಾಗಿ ಸಿಕ್ಕಿದರು. ಯಾರದೇ ಮಗುವಿರಲಿ, ಕರೆದು ಕೂಡಿಸಿಕೊಂಡು ಅದರೊಂದಿಗೆ ಕವಡೆಯಾಟ, ಕೇರಂ, ಚದುರಂಗ-ಹೀಗೆ ಏನಾದರೊಂದು ಆಟ. ಅಷ್ಟೇ ಅಲ್ಲ, ಮಕ್ಕಳ knowledge ಪರೀಕ್ಷಿಸೋರು. ಅದನ್ನ improve ಮಾಡೋ ಯತ್ನ ಮಾಡೋರು. ಈಗಂತೂ ಅವರಿಗೆ ಮನೆ ತುಂಬ ಮೊಮ್ಮಕ್ಕಳು. Of course, ಕೂತು ಕವಡೆಯಾಡೋಷ್ಟು ಚಿಕ್ಕವರ‍್ಯಾರೂ ಇಲ್ಲ. ಅವರು ನಾನಾ ದೇಶಗಳಲ್ಲಿದ್ದಾರೆ. ಮೊನ್ನೆ ಮಾತ್ರ, ಅದೊಂದು ಪವಾಡವೆಂಬಂತೆ ಅನಂತರಾಮಯ್ಯನವರ ಕಡೇ ಘಳಿಗೆಯಲ್ಲಿ ಅಷ್ಟೂ ಮಕ್ಕಳು, ಮೊಮ್ಮಕ್ಕಳು ಸುತ್ತ ನೆರೆದಿದ್ದರು. ಆಸ್ಪತ್ರೆಯಲ್ಲಿ. He had a painless and comfortable end.

ಮೊದಲ ಬಾರಿಗೆ ಅವರನ್ನು ನಾನು ನೋಡಿದಾಗ ಅವರೊಂದು ಲೂನಾ ಇಟ್ಟುಕೊಂಡಿದ್ದರು. ಆಗ regular ಆಗಿ ಪ್ಯಾಂಟ್ ಹಾಕುತ್ತಿದ್ದರು. ಅಣ್ಣ ಮತ್ತು ಅಮ್ಮ ನನ್ನನ್ನು ತುಂಬಾನೇ ಚೆನ್ನಾಗಿ ನೋಡಿಕೊಂಡಿದ್ದರು. ಇವನ್ಯಾರೋ ಗುರುತು ಪರಿಚಯವಿಲ್ಲದಿರೋ ಹುಡುಗ ಅಂತ ಖಂಡಿತ ಅನ್ನಿಸಿರಲಿಲ್ಲ ಅವರಿಗೆ. ಶೀಲಕ್ಕನ ತಾಯಿ ತುಂಬ ಚೆಂದ ನೋಡಲಿಕ್ಕೆ. ಶೀಲಕ್ಕ ಶಾಲೆಗೆ ಹೋದ ನಂತರ ನಾನು-ಅಮ್ಮ ಹರಟೆಗೆ ಕೂಡುತ್ತಿದ್ದೆವು. ಆಗೆಲ್ಲ ನಾನು ರಜೆಗಳಲ್ಲಿ ದಾವಣಗೆರೆಗೆ ಹೋಗುತ್ತಿದ್ದೆ. ಆಗ ನಾನು ಧಾರವಾಡದಲ್ಲಿ ಎಂ.ಎ. ಓದುತ್ತಿದ್ದೆ. ಮುಂದೆ ಎಂ.ಎ. ಅಂತಿಮ ಪರೀಕ್ಷೆಗಳು ಮುಗಿದವು. ಅಲ್ಲಿಂದ ನೇರವಾಗಿ ನಾನು ಹೋದದ್ದು ಬಳ್ಳಾರಿಯ ಕಲ್ಯಾಣ ಮಂಟಪಕ್ಕೆ! ನಿಜ, ಮೇ 19ಕ್ಕೆ ನನ್ನ ಕೊನೆಯ ಪರೀಕ್ಷೆ. ಮೇ 23ಕ್ಕೆ ಮದುವೆ. “ಯಾಕೋ ಮದುವೆ ತುಂಬ ಬೇಗನೆ ಆದ ಹಾಗಾಯ್ತು" ಅಂತ ಕೆಲವು ಬಂಧುಗಳು ಅಂದರು.“ಯೋಚ್ನೆ ಮಾಡಬೇಡಿ, ಮಕ್ಕಳೂ ಬೇಗನೆ ಆಗ್ತವೆ" ಅಂದಿದ್ದೆ. It went true. ನಾನು 1979ರಲ್ಲಿ ಮದುವೆಯಾದೆ. ಮರುವರ್ಷ 1980ರಲ್ಲಿ ಚೇತನಾ ಹುಟ್ಟಿದಳು. ನನಗೆ ಇಪ್ಪತ್ತೇಳು ವರ್ಷ ತುಂಬುವಷ್ಟರಲ್ಲಿ ನನ್ನ ಮೂರೂ ಮಕ್ಕಳು ಹುಟ್ಟಿದರು. ಈಗೇನಿದೆ, ಇಪ್ಪತ್ತೇಳನೇ ವಯಸ್ಸಿಗೆ ಮದುವೆಗಳೇ ಆಗಿರುವುದಿಲ್ಲ. ಗಂಡಸರಿರಲಿ: ಹೆಂಗಸರಿಗೇ ಆಗಿರುವುದಿಲ್ಲ! ಹಾಂ, ನನ್ನ ಮದುವೆಗೆ ಶೀಲಕ್ಕ ಬಂದಿದ್ದಳು. ಬಂದವಳು ಸುಮಾರು ಒಂದು ವಾರ ಇದ್ದಳು ನಮ್ಮೊಂದಿಗೆ. ಅಮ್ಮನಿಗೆ ಶೀಲ ತುಂಬ ಆತ್ಮೀಯಳಾಗಿಬಿಟ್ಟಿದ್ದಳು. ನನ್ನ ದೊಡ್ಡಪ್ಪ ಆಗಿನ್ನೂ ಬದುಕಿದ್ದರು. ಅವರಿಗೂ ಶೀಲಕ್ಕನನ್ನು ಕಂಡರೆ ಅಕ್ಕರೆ. ಆಗ ನನ್ನ ದೊಡ್ಡಪ್ಪನ ಮಗ ಮದುವೆಗೆ ಬಂದಿದ್ದ. ಅವನಿಗೆ ಅದೇಕೋ ನಾನು ಲಲಿತಳನ್ನು ಮದುವೆಯಾಗೋದು ಅಷ್ಟು ಇಷ್ಟವಿರಲಿಲ್ಲ.“ನೋಡೋ, ಈಗಲೂ ಕಾಲ ಮಿಂಚಿಲ್ಲ. ಏನೋ ಸಬೂಬು ಹೇಳಬಹುದು. cancel ಮಾಡ್ಕೋತಿಯೇನೋ ನೋಡು. ಇನ್ನೂ ಒಳ್ಳೆ ಹುಡುಗಿ ಸಿಕ್ತಾಳೆ. ಯೋಚನೆ ಮಾಡು" ಅಂದಿದ್ದ. ಅವತ್ತಿಗೆ ಮದುವೆ ನಾಲ್ಕು ದಿನಗಳಷ್ಟು ಹತ್ತಿರ ಬಂದಿತ್ತು.“ನಿಂಗಿಂತ ದೊಡ್ಡೋಳು ಕಣೋ ಅವಳೂ. ಎಲ್ಲಾ ಬಿಟ್ಟು ಮುಟ್ಟು ನಿಂತು ಹೋದರೆ ಏನು ಮಾಡ್ತೀಯ?" ಅಂತ ಅಂದವಳು ನನ್ನ ಅಣ್ಣನ ಮಗಳು. ನನ್ನನ್ನು ಅದ್ಯಾವುದೂ ತಡೆಯಲಿಲ್ಲ. ಲಲಿತ ಎಂಥವಳೆಂಬುದು ನನಗೆ ಗೊತ್ತಿತ್ತು. ಅವಳ ಹೊರತು ಮತ್ಯಾವ ಹೆಣ್ಣೂ ನನ್ನನ್ನು ಭರಿಸಲಾರಳು ಎಂಬುದೂ ನನಗೆ ಗೊತ್ತಿತ್ತು. ಮೊದಲಿಗೆ ಅಮ್ಮನಿಗೂ ಹಾಗೇ ಅನ್ನಿಸಿತ್ತು. ಆದರೆ ನೆಂಟರಿಷ್ಟರು ಬಂದ ಮೇಲೆ ಅಮ್ಮ ಕೊಂಚ ಹೆಜ್ಜೆ ಹಿಂದೆಗೆದಳು. ಹಾಗಂತ ಅವಳೇನೂ ಮದುವೆ ರದ್ದು ಮಾಡೋಣ ಅಂತ ಅನ್ನಲಿಲ್ಲ. ನಾನು ಮಾತ್ರ ಶುದ್ಧ ಅಮ್ಮನ ಮಗ. ಒಮ್ಮೆ decide ಮಾಡಿದ ಮೇಲೆ, ಅದರಿಂದ ಹಿಂತೆಗೆಯೋದು ನನ್ನ ಜಾತಕದಲ್ಲಿಲ್ಲ. ಅದು ಅಮ್ಮನಿಗೂ ಗೊತ್ತಿತ್ತು.“ಅದನೆಲ್ಲ try ಮಾಡೋಕೆ ಹೋಗಬೇಡಿ. He is firm. ಅವನು ಮದುವೆಯಾಗೇ ಆಗ್ತಾನೆ" ಅಂದಿದ್ದಳು ಅಮ್ಮ. It was ture.

ಮುಂದೆ ಅದೇ ಲಲಿತೆ ಅಮ್ಮನನ್ನೂ ಸೇರಿದಂತೆ, ಬಂಧು ಬಳಗದವರೆಲ್ಲರಿಗೂ ಇಷ್ಟವಾಗಿ ಬಿಟ್ಟಳು. ಅವಳನ್ನು ಮದುವೆಯಾಗಬೇಡ ಅಂದಿದ್ದ ನನ್ನ ಅಣ್ಣ, ಮನೆಯೊಳಕ್ಕೆ ಕಾಲಿಡುತ್ತಿದ್ದುದೇ “ಲಲ್ತಮ್ಮಾ, ತುಂಬ ಹಸಿವಾಗಿದೆಯಮ್ಮಾ..." ಎಂಬ War cry ಹೊತ್ತುಕೊಂಡು. ನನ್ನ ದೊಡ್ಡಪ್ಪನಿಗಂತೂ ಲಲಿತಮ್ಮ ಅಂದರೆ ಮನೆಯ ಮಗಳೇ. ಕೊಂಚ ಪೆಡಸಾಗಿದ್ದವಳು ನನ್ನ ಅಣ್ಣನ ಮಗಳು. ಅವಳೀಗ ನಮ್ಮ ಪರಿಗಣನೆಯ listನಲ್ಲೇ ಉಳಿದಿಲ್ಲ. ಸ್ವಭಾವತಃ ಅವಳು ಕೊಂಚ ಯಡವಟ್ಟು. ಉದಾಹರಣೆ ಕೊಡ್ತೀನಿ ನೋಡಿ. ಒಮ್ಮೆ ನಾನು ಪತ್ರಿಕೆಯ ಕೆಲಸ ಮುಗಿಸಿ ಬೆಳಗಿನ ಜಾವ ಐದೂವರೆಗೆ ಮನೆಗೆ ಹೋಗಿ ಶಿವನೇ ಅಂತ ಮಲಗಿದ್ದೆ. ಅಣ್ಣನ ಮಗಳು ಏಳೂವರೆ ಎಂಟರ ಸುಮಾರಿಗೆ ಮನೆಗೆ ಬಂದಿದ್ದಾಳೆ. “ಏಯ್, ಲಲ್ತಾ....ಅವನನ್ನ ಎಬ್ಸು!" ಅಂದಿದ್ದಾಳೆ. ಇಡೀ ಮನೆಯಲ್ಲಿ ಲಲಿತೆಯನ್ನು ಹಾಗೆಲ್ಲ ಯಾರೂ ಮಾತನಾಡಿಸುವುದಿಲ್ಲ. “ನೋಡೂ, ಅವರು ಈಗಷ್ಟೇ ಮಲಗಿದ್ದಾರೆ. ಸ್ವಲ್ಪ ಹೊತ್ತು ಬಿಡು, ಅವರು ತಾವಾಗೇ ಏಳ್ತಾರೆ. ಆರಾಮಾಗಿ ಕೂತ್ಕೋ. ಕಾಫಿ-ತಿಂಡಿ ಮಾಡು. ರೆಸ್ಟ್ ತಗೋ. ಟೀವಿ ನೋಡು" ಅಂತೆಲ್ಲ ಅಂದಿದ್ದಾಳೆ ಲಲಿತಾ. “ಹಾಂ, ನಾನು ಎಬ್ಬಿಸು ಅಂದ್ರೆ ಎಬ್ಬಿಸಲ್ಲ ಅಂತೀಯಾ? ತಗೋ, ಇವತ್ತಿಂದ ಈ ಮನೆಯೊಳಕ್ಕೆ ನಾನು ಕಾಲಿಡೋದಿಲ್ಲ!" ಅಂತ ಮಂಗಮ್ಮ ದೇವತೆಯಂತೆ ಆಣೆ ಮಾಡಿ ಆಕೆ ಹೊರಟುಹೋದಳು. ಇವತ್ತಿಗೆ ಹದಿನೇಳು ವರ್ಷಗಳಾಗಿರಬೇಕು. ಅಣ್ಣನ ಮಗಳನ್ನು ನಾನು ನೋಡಿಯೇ ಇಲ್ಲ. ಕೆಲಸಕ್ಕೆ ಬಾರದ ಈ ಸೆಡವು ಆಕೆಯ ಸ್ವಭಾವದಲ್ಲಿದೆ.

ಅಷ್ಟೇಕೆ, ಅವಳ ತಮ್ಮಂದಿರ ಪೈಕಿ ಒಬ್ಬನು ಇಲ್ಲಿದ್ದಾನೆ. ಅವನು ಕೇಂದ್ರ ಸರ್ಕಾರದ ನೌಕರಿಯಲ್ಲಿದ್ದಾನೆ. ಒಮ್ಮೆ ಯಾವಾಗಲೋ ಅವನು ಫೋನ್ ಮಾಡಿದಾಗ ನಾನು ರಿಸೀವ್ ಮಾಡಲಿಲ್ಲ. ಅಷ್ಟೇ ಅಪರಾಧ. ಮೊನ್ನೆ ಕರ್ಣನ ಮದುವೆಯ ಇನ್ವಿಟೇಷನ್ ತಗೊಂಡು ಅವನ ಮನೆಗೆ ಚೇತನಾ ಹೋಗಿದ್ದಾಳೆ. ಮದುವೆ ಪತ್ರಿಕೆ ಜೊತೆಗೆ ಹೆಣ್ಣುಮಕ್ಕಳಿಗೆ ಸೀರೆ, ಗಂಡಸರಿಗೆ ಬಟ್ಟೆ ಕೊಡುವ ರೂಢಿ ನಮ್ಮ ಮನೆಯಲ್ಲಿದೆ. “No no no! ಆ ಇನ್ವಿಟೇಶನ್ ಇಲ್ಲಿಡು. ಬಟ್ಟೆ, ಹೂವು, ಹಣ್ಣು-ಎಲ್ಲಾ ತೆಗೆದು ಬಿಡು. Take them back!" ಅಂದನಂತೆ. “ಅದೊಂದನ್ನು ಯಾಕೆ ಬಿಟ್ಟೆ. ಮದುವೆ ಪತ್ರಿಕೇನೂ ವಾಪಸು ತಂದು ಬಿಡಬೇಕಾಗಿತ್ತು" ಅಂದೆ ನಾನು. ಇಂಥದನ್ನು ಏನಂತೀರಿ? ಪೆಡಸುತನ, ಮೂರ್ಖತನ, ಅರೋಗೆನ್ಸ್ stupidity ಏನು ಅಂದರೂ ಸರಿಯೇ. ಸಾವಿರ ಕೆಲಸವಿರೋನು, ಒಂದು phone ರಿಸೀವ್ ಮಾಡಲಿಲ್ಲ ಅಂದರೆ ಅದು ಅಪರಾಧವಾ? ನಾವು ಚಿಕ್ಕವರಿದ್ದಾಗ ಕೇಳಿದ್ದುಂಟು, ‘ಚಿಕ್ಕ ಕಾರಣಕ್ಕೆ ಅವನ ಮನೇಲಿ ಜನ್ಮೇಪಿ ಮಾತು ಬಿಟ್ಟಿದ್ದರಂತೆ!’ ಅಂತ. ಈಗ ಅದೆಲ್ಲ ನಮ್ಮ ಮನೆಗಳಲ್ಲೇ ಆಗುತ್ತಿದೆ. Fortunately ನನ್ನ ಅಳಿಯಂದಿರಿಗೆ, ಸೊಸೆಗೆ, ಅವರ ಮನೆಯವರಿಗೆ ಇಂಥ ಪೆಡಸುತನಗಳಿಲ್ಲ. They are all nice people. ಇಲ್ಲದಿದ್ರೆ ಗತಿ? ನಮಗೆ ಈ ಮದುವೆಗಳ ರೀತಿ ರಿವಾಜು, formalityಗಳು ಗೊತ್ತಿಲ್ಲ. ಒಬ್ಬೊಬ್ಬರು ಒಂದೊಂದು ಜಾತಿಯಲ್ಲಿ ಮದುವೆಯಾಗಿದ್ದಾರೆ. ಅವರ ಸಂಪ್ರದಾಯಗಳೆಲ್ಲ ನಮಗೆ ಎಲ್ಲಿ ಗೊತ್ತಿರುತ್ತವೆ? ಮನುಷ್ಯನ common sense ಇಂಥವುಗಳಲ್ಲಿ ಕೆಲಸ ಮಾಡಬೇಕು. ಸಣ್ಣದಕ್ಕೂ ಸೆಟಗೊಂಡು ಕುಳಿತು ಬಿಟ್ಟರೆ?

ಈ ಮಧ್ಯೆ ಮುಟ್ಟಿನ ಸಂಗತಿ ಬಂತಾದ್ದರಿಂದ ಹೇಳುತ್ತೇನೆ. ಮೊದಲೆಲ್ಲ ಒಂಬತ್ತು-ಹತ್ತನೇ ಕ್ಲಾಸುಗಳಿಗೆ ಬಂದಾಗ ಹೆಣ್ಣುಮಕ್ಕಳು ‘ದೊಡ್ಡವ’ರಾಗುತ್ತಿದ್ದರು. ಮುಂದೆ ಅದು ಐದು-ಆರನೇ ಕ್ಲಾಸಿಗೇ ಆಗತೊಡಗಿತು. Surprising ಅಂದರೆ, ನನ್ನ ಪರಿಚಿತರೊಬ್ಬರ ಮನೇಲಿ ತೀರಾ ಎರಡನೇ ಕ್ಲಾಸ್ ಓದುತ್ತಿರುವ ಮಗು ‘ದೊಡ್ಡವ’ಳಾಗಿದ್ದಾಳೆ. ಗತಿ ಏನು? ಅವಳಿಗೆ ಏನೆಲ್ಲ ಕಲಿಸಬೇಕು. ಅದೆಲ್ಲಿಯ seriousness ಬಂದೀತು ಆ ಕಂದನಿಗೆ? ಈ ದೊಡ್ಡವರಾಗುವಿಕೆ ಇದೊಂಥರಾ ಯಡವಟ್ಟಿಗೆ ಬಂದು ನಿಂತಿದೆಯಾ? ಇನ್ನೊಂದು ಅಪರೂಪದ ಅನಾಹುತವೆಂದರೆ ತೀರ ಮೂವತ್ತೆರಡು, ಮೂವತ್ತೈದರೊಳಗಾಗಿ ‘ತಿಂಗಳ ಚಕ್ರ’ ನಿಂತೇ ಹೋಗೋದು! ಎರಡೂ ಅತಿರೇಕವೇ. ಇದಕ್ಕೆ ಕಾರಣಗಳಿದ್ದಾವು. ಹೆಂಗಸರು ದಿನವಿಡೀ ಕಂಪ್ಯೂಟರಿನ ಮುಂದೆ ಕೂಡುತ್ತಾರೆ. ಅದಿರಲಿ, ಜೀನ್ಸ್ ಹಾಕುತ್ತಾರೆ. ಗಂಡಸರು ನಿರಂತರವಾಗಿ, ತುಂಬ ಬಿಗಿಯಾದ ಜೀನ್ಸ್ ಧರಿಸಿದರೆ ಅವರಲ್ಲಿ sperm ನಾಶವಾಗಿ ಬಿಡುತ್ತದೆ. ಉತ್ಪತ್ತಿಯಾಗೋದೇ ಇಲ್ಲ. ಹೆಂಗಸರಿಗೆ, ಗರ್ಭ ಧರಿಸುವ ಶಕ್ತಿಯೇ ಹೋಗಿ ಬಿಡುತ್ತದೆ. ಇನ್ನೆಲ್ಲಿಯ ಸಂತಾನ.

ಈಗ ಮೊದಲಿನ ಸಂಪ್ರದಾಯವೇ ಇಲ್ಲ. No normal delivery. ‘ಅದ್ಯಾರು ನೋವು ತಿಂತಾರೆ?’ ಎಂಬ ನಿಲುವು. ಡಾಕ್ಟರು ಕೂಡ ಸಿಝೇರಿಯನ್ ಉತ್ತೇಜಿಸುತ್ತಾರೆ. ಅವರಿಗೆ ಅದು ಬ್ಯುಸಿನೆಸ್. ಯಾವ ದಿನ, ಯಾವ ಮುಹೂರ್ತದಲ್ಲಿ, exact ಆಗಿ ಎಷ್ಟು ನಿಮಿಷ, ಎಷ್ಟು ಸೆಕೆಂಡಿಗೆ ಮಗು ಬೇಕು? ವೈದ್ಯರು ಸರಿಯಾಗಿ ಅದೇ ಹೊತ್ತಿಗೆ ಹೊಟ್ಟೆಗೆ ಈಳಿಗೆ ಹಾಕಿ ಕುಲಪುತ್ರನನ್ನು ಹೊರಕ್ಕೆ ಕರೆತರುತ್ತಾರೆ. ಅಲ್ಲಿ ಅದೆಲ್ಲ ಜ್ಯೋತಿಷ್ಯದ ಪ್ರಕಾರ ಮತ್ತು ವಾಸ್ತುಪ್ರಕಾರ. ಆಯ್ತಲ್ಲ, ಸಿಝೇರಿಯನ್ ಖರ್ಚು ನಾನೇ ಕೊಡ್ತೀನಿ ಅಂತಾಳೆ ಭಾಮಾ ಮಣಿ. ಏಕೆಂದರೆ, ಗಂಡನಿಗಿಂತ ನಾಲ್ಕು ರುಪಾಯಿ ದುಡಿಯೋಳು ಅವಳೇ. ನಾವೆಲ್ಲ ತಮಾಷೆ ಮಾಡುತ್ತಿರುತ್ತೇವೆ. ನಮ್ಮ ಗೆಳೆಯನೊಬ್ಬನ ಮನೆಯಲ್ಲಿ ಎಲ್ಲರದೂ ಸಿಝೇರಿಯನ್. ಅವನೇ ಹೇಳ್ತಾನೆ, “ನಮ್ಮನೇಲಿ ಯಾವುದೂ ಕೂಡ through the proper channel" ಅಂತ.

ಮೊದಲಿನಂತೆ ಯಾರೂ ಕೂಡ ಆ ಪರಿ ಹೊಟ್ಟೆ ಬಿಗಿಸಿಕೊಂಡು ಬಾಣಂತಿ ಖಾರ, ಲೇಹ್ಯ ತಿಂದು ತಿಂಗಳುಗಟ್ಲೆ ಬಾಣಂತಿತನ ಮಾಡಿಸಿಕೊಳ್ಳುವುದಿಲ್ಲ. ‘ಎರಡನೇ ಮಗುವು’ ಅಂತ ಅಂದು ನೋಡಿ? ಆಕೆ ಜಗಳಕ್ಕೇ ಬರುತ್ತಾಳೆ. ಇದು ಒಂದರ್ಥದಲ್ಲಿ ಸರಿಯೇ. ಆ ಪರಿ hard core ಬಾಣಂತಿತನದ ಅವಶ್ಯಕತೆ ಖಂಡಿತ ಇಲ್ಲ. ಒಂದು ಹೆರಿಗೆಗೇ ಉಸ್ಸೋ ಅಂದು ಬಿಡುವ ಹುಡುಗಿ, ಎರಡನೆಯದನ್ನು ಹೆರಲಿ ಅಂತ ಯಾರೂ ecpect ಕೂಡ ಮಾಡೋದಿಲ್ಲ. ಹುಡುಗಿಗೊಂದು ಕೆರಿಯರ್ ಇದೆ. ಮುಂದಿನ ವರ್ಷಕ್ಕೆ ಅಮೆರಿಕಕ್ಕೆ ಹೋಗಬೇಕು. ಅವಳಾದರೂ ಮೋಜು-ಮಸ್ತಿ ಮಾಡಲು ಹೋಗಲ್ಲ. ಹೋದರೆ ನೂರೆಂಟು ಅನುಕೂಲಗಳಿರುತ್ತವೆ. ಅವಳಿನ್ನು ಮಕ್ಕಳು ಹೆರೋ machine ಅಲ್ಲ. ತಾನು ಹೆರಬಲ್ಲಳು ಅಂತ ಒಮ್ಮೆ ತೋರಿಸಿ ಆಯ್ತಲ್ಲ? ಮತ್ತೇನು ಗುನುಗು? “ಅಯ್ಯೋ, ಗರ್ಭ ಧರಿಸೋ ಶಕ್ತೀನೇ ಇಲ್ವಾ? ಅವನ ವೀರ್ಯಾಣುಗಳೇ ಸತ್ತು ಹೋಗಿವೆಯಾ? Balls. ಅವೆರಡೂ ಬೇಕಿಲ್ಲ!" ಅಂತಾರೆ. Nothing is surprising.

ಅಂಥದ್ದು, ಅನಂತರಾಮಯ್ಯನವರ ಕಾಲದಲ್ಲಿ ಎಲ್ಲಿತ್ತು? ಅವರು family planningಗಿಂತ ಮುಂಚೆಯೇ ಮಕ್ಕಳನ್ನು ಹೆತ್ತರು. ಕೆಲವರಿಗೆ planning ಗೊತ್ತೇ ಇರಲಿಲ್ಲ. ಅರ್ಥವೂ ಆಗುತ್ತಿರಲಿಲ್ಲ. ಪ್ರತಿ ಮಗುವಿಗೂ ತಮ್ಮ ಶಕ್ತ್ಯಾನುಸಾರ ಚೂರು ಸವಲತ್ತು, ಓದು, ಅದಕ್ಕೊಂಚೂರು assistance ಕೊಟ್ಟರು. ಅವರೆಲ್ಲ ಬುದ್ಧಿವಂತರಾದ್ದರಿಂದ ಈಗ ಒಳ್ಳೊಳ್ಳೆಯ ಸ್ಥಾನಮಾನಗಳಲ್ಲಿದ್ದಾರೆ. ಇನ್ನು ಅವರ ಮಕ್ಕಳು. ಅವರಲ್ಲಿ ಶಾಸ್ತ್ರಕ್ಕೆ ಇರಲಿ ಅಂತ ಭಾರತದಲ್ಲಿ ಉಳಿದವರೇ ಇಲ್ಲ. ಇದ್ದರೂ, it is a small number. ಆದರೆ ಅಜ್ಜ-ಮೊಮ್ಮಕ್ಕಳು ಎಂಬ ತಂತು ಕಡಿದು ಹೋಗಿಲ್ಲ. It is a close knit family. ಕೆಲವು ವರ್ಷಗಳ ಹಿಂದೆ ಅಮ್ಮ ತೀರಿಹೋದರು. ಒಳಗೆ ಅದೇನೇನು ಯಾತನೆಯಾಯಿತೋ ಗೊತ್ತಿಲ್ಲ: ಅಣ್ಣ ಮಾತ್ರ unemotional ಆಗೇ ಮುಂದುವರೆದರು. ಶೀಲಕ್ಕ ಒಬ್ಬಂಟಿ ಎಂಬ ಕಾರಣಕ್ಕೋ ಏನೋ, ಅಣ್ಣ ಆಕೆಯೊಂದಿಗೇ ಹೆಚ್ಚು ಉಳಿದರು. ನನಗೆ ಸಂತೋಷವಾಗುತ್ತಿದ್ದುದೆಂದರೆ, ಅವರ walking. ಅದು ಅವತ್ತಿಗೂ-ಇವತ್ತಿಗೂ ಅಬಾಧಿತ ಎಂಬಂತೆ ಇದ್ದರು ಅಣ್ಣ. ನೀಟ್ ಆಗಿ ಡ್ರೆಸ್ ಮಾಡಿಕೊಂಡು, ಯಾವ ಊರುಗೋಲೂ ಇಲ್ಲದೆ ಅಣ್ಣ ಪ್ರತೀ ಸಂಜೆ walk ಮಾಡುತ್ತಿದ್ದರು. ಅಲ್ಲಿ ಪಾರ್ಕಿನಲ್ಲಿ ಅವರದೇ ತರಹದ ಅಜ್ಜಂದಿರ ಗುಂಪು. ತೊಂಬತ್ನಾಲ್ಕೂವರೆ ವರ್ಷಗಳಾದರೂ ಅಣ್ಣ ಮೆತ್ತಗಾಗಿರಲಿಲ್ಲ. ಅವರಿಗೆ ಎಂಥದೋ ಜೀವನೋತ್ಸಾಹ. ಯಾವುದಕ್ಕೂ ಅವರು ಗೊಣಗುತ್ತಿರಲಿಲ್ಲ. ಮಿಜಿ ಮಿಜಿ ಮಾಡುತ್ತಿರಲಿಲ್ಲ. ನನ್ನ ‘ಉಡುಗೊರೆ’ ಪುಸ್ತಕವನ್ನು ಅವರಿಗೆ ಅರ್ಪಿಸಿದ್ದೆ. ಒಮ್ಮೆ ಅವರನ್ನು ವೇದಿಕೆಗೇ ಕರೆದು ಗೌರವಿಸಿದ್ದೆ. ಅವರಿಗದು ತುಂಬ ಸಂತೋಷವಾಗಿತ್ತು.

ಮೊನ್ನೆ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಆದರೂ ಅಣ್ಣ ಎಲ್ಲರೊಂದಿಗೆ happy ಆಗೇ ಇದ್ದರು. ನಿಧಾನವಾಗಿ ಅವರಿಗೆ ‘ಮುಪ್ಪು’ ಬಂದಿತ್ತು. ಒಬ್ಬರೇ walkಗೆ ಹೋಗೋದು ಕಷ್ಟವಾಯಿತು. ಅವರು slow down ಆಗುತ್ತಿರೋದು ಗೊತ್ತಾಗುತ್ತಿತ್ತು. ಎಂಥ ಸ್ಥಿತಿಯಲ್ಲೂ ಅವರು ಟೀವಿಯಲ್ಲಿ ಬರುವ ಕ್ರಿಕೆಟ್ ತಪ್ಪದೆ ನೋಡಿ excite ಆಗುತ್ತಿದ್ದರು. ಶೀಲ ಮಾತ್ರ ಅಣ್ಣನನ್ನು ಇನ್ನಿಲ್ಲದ ಶ್ರದ್ಧೆ ಮತ್ತು ಪ್ರೀತಿಯಿಂದ ನೋಡಿಕೊಂಡಳು. ಇನ್ನು ಆಸ್ಪತ್ರೆ, ಆಪರೇಷನ್ನು, ಇನ್ನೆಂಥದೋ treatment-ಯಾವುದೂ ಬೇಡ ಅಂತ ಎಲ್ಲರೂ ನಿರ್ಧರಿಸಿದ್ದರು. ಇಲ್ಲೇ ಪರಿಚಯದ ಆಸ್ಪತ್ರೆಗೆ ಸೇರಿಸಿದ್ದರು. ಆ ಹೊತ್ತಿಗೆ ಅಣ್ಣ ತಮ್ಮ ತಂದೆ-ತಾಯಿಯರ ಶ್ರಾದ್ಧ ಮಾಡಿ ಮುಗಿಸಿದ್ದರು. “ಇದು ಕೊನೇದು ಕಣಮ್ಮಾ. ಇನ್ನು ಶ್ರಾದ್ಧ ಮಾಡೋ ಚೈತನ್ಯ ಇಲ್ಲ" ಅಂದಿದ್ದರಂತೆ ಅಣ್ಣ. ಅವರಿಗೆ ಯಾವುದಕ್ಕೂ ಕೊರತೆಯಾಗಲಿಲ್ಲ. ಅಷ್ಟೂ ಮಕ್ಕಳು, ಮೊಮ್ಮಕ್ಕಳು-ಎಲ್ಲ ಇದಿರಿಗಿರುವಾಗಲೇ ಅಣ್ಣ ನಿರ್ಗಮಿಸಿದರು. ಅವರು ಒಮ್ಮೆಯೂ ಪ್ರಜ್ಞೆ ತಪ್ಪಲಿಲ್ಲ. ಸುತ್ತಮುತ್ತ ನಡೆದುದೆಲ್ಲವೂ ಅವರಿಗೆ ಗೊತ್ತಾಗುತ್ತಿತ್ತು. ಒಬ್ಬ ಮೊಮ್ಮಗಳು ಪಾಪ, ಅಮೆರಿಕದಿಂದ ಓಡಿ ಬಂದಿದ್ದಳು. ಅವರ‍್ಯಾರಿಗೂ ನಿರಾಸೆಯಾಗಲಿಲ್ಲ. ಅಣ್ಣ ಎಲ್ಲರನ್ನೂ ನೋಡಿದರು. ಎಲ್ಲರಿಗೂ ವಿದಾಯ ಹೇಳಿದರು. He was ninety four and a half.

ಇದಕ್ಕಿಂತ ಸಾರ್ಥಕವೇನಿದೆ?

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 February, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books