Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಯಾವುದೇ ತರಹದ ನಿರೀಕ್ಷೆಗಳಿರದ ಆ ಸಾರ್ಥಕ ಜೀವಿಗೆ ನೂರಾ ಎರಡು ವರ್ಷ!

ಮುಕೇಶ್‌ನ ಹಾಡೊಂದು ಅಲ್ಲೇ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಆತ ಹಾಡಿದ್ದನ್ನು ಕೇಳಲಾರಂಭಿಸಿಯೇ ಸುಮಾರು ನಲವತ್ತೈದು ವರ್ಷಗಳಾಗಿವೆ. I love him. ಅವನು ಮುಕೇಶ್ ಚಂದ್ರ ಮಾಥುರ್. ಅವನಷ್ಟೇ ಸಜ್ಜನ ಮಹಮ್ಮದ್ ರಫಿ. ಅವರಿಬ್ಬರ ನಗೆ ಗಮನಿಸಿದರೆ ಸಾಕು: ಅಲ್ಲಿ ಸಜ್ಜನಿಕೆ ತುಂಬಿ ತುಳುಕುತ್ತದೆ. ರಫಿಯ ಒಂದು live ಗಾಯನವನ್ನ ಮೊನ್ನೆ ಅಕಸ್ಮಾತ್ತಾಗಿ ನೋಡಿದೆ. ಅದರಲ್ಲಿ ನೌಷಾದ್ ಸಾಹೇಬರಿದ್ದಾರೆ. “ಮನ್ ತಡ್‌ಪತ್ ಹರಿ ದರುಶನ್ ಕೋ ಆಜ್..." ಎಂಬ ಹಾಡು ‘ಬೈ ಜೂ ಬಾವರಾ’ ಸಿನೇಮಾದ್ದು. ತುಂಬು ಸೂಟ್ ಹಾಕಿಕೊಂಡು ರಫಿ ಹಾಡುತ್ತ ಹೋಗುತ್ತಾರೆ. ಅವರ ಮುಖದ ಕವಳಿಕೆಗಳಲ್ಲಿ ಒಂದು ಪ್ರೀತಿ, ನಂಬಿಕೆ, ಯಾವುದೋ ಅಗೋಚರ ಪಾದಕ್ಕೆ ನಮಸ್ತೆ... ಹೀಗೆ. ರಫಿ ಇನ್ನೂ ಬದುಕಿರಬೇಕಿತ್ತು. ಮುಕೇಶ್ ಕೂಡ ಅವಸರ ಮಾಡಿಕೊಂಡು ನಿರ್ಗಮಿಸಿದರು. ಅದು ಹಾಗಿರಲಿ: ಕಿಶೋರ್‌ನ ಸಾವು, ಅದು ನ್ಯಾಯವೇ? Mostly, ಒಂದು ಕಾರಣವಿದೆ ಆ ಸಾವುಗಳ ಹಿಂದೆ. ಗಾಯಕರು ತಮ್ಮದೊಂದು peak ಅನುಭವಿಸುತ್ತಾರೆ. ಇದು ನನ್ನ Era. ನನ್ನದೇ ಸಾಮ್ರಾಜ್ಯ. ಮತ್ತೊಬ್ಬರಿಗೆ ಇಲ್ಲಿ ಜಾಗವಿಲ್ಲ ಎಂಬಂತೆ ಬದುಕುತ್ತಾರೆ. ಅವರಿಗೆ ಬಹುಶಃ ಗೊತ್ತೇನೋ? ಇಲ್ಲಿಗೆ ನನ್ನ Era ಮುಗಿಯಿತು. ಸಾಮ್ರಾಜ್ಯವೆಂದರೆ ಇಷ್ಟೆ. ಮುಂದಿನದಕ್ಕೆ ಇನ್ನೊಬ್ಬ ಬರಲಿ ಅಂದವರೇ ಸುಮ್ಮನಾಗಿ ಬಿಡುತ್ತಾರೆ. ಮನ್ನಾ ಡೇ ಹಾಗೆ ಸುಮ್ಮನಾದರು. ಅಷ್ಟೇ ಅಲ್ಲ, ಅವರು ಚಿತ್ರರಂಗದ ಗೊಡವೆಯೇ ಬೇಡ ಅಂತ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದು ಬಿಟ್ಟರು. ಮುಂದೆ ಚಿಕ್ಕಪುಟ್ಟ ಸಮಾರಂಭಗಳಲ್ಲಿ ಹಾಡುತ್ತಿದ್ದರಾದರೂ, ಆ ಗಾಯನದಲ್ಲಿ “ನಮ್ಮ ಮನ್ನಾ ಡೇ" ಇರುತ್ತಿರಲಿಲ್ಲ. ಅಷ್ಟೇಕೆ, ಒಳಗಿನ ಹೂರಣ ಮುಗೀತು ಅಂತ ಗೊತ್ತಾದ ಕೂಡಲೆ ಶ್ರೇಷ್ಠ ಸಂಗೀತ ನಿರ್ದೇಶಕ ಓ.ಪಿ. ನಯ್ಯರ್ ತಮ್ಮ ಹಾರ್ಮೋನಿಯಂ ಎತ್ತಿಟ್ಟು ಬಿಟ್ಟರು. ಹಟಕ್ಕೆ ಬಿದ್ದು ಕೇಳುಗರ ಜೀವ ತಿಂದವರೆಂದರೆ ಪಿ.ಬಿ. ಶ್ರೀನಿವಾಸ್ ಮತ್ತು ಅದಕ್ಕಿಂತ ಘೋರ ಸ್ವರೂಪ ಪಡೆದಿದ್ದ ಲತಾ ಮಂಗೇಶ್ಕರ್. ಪಿ.ಬಿ. ಶ್ರೀನಿವಾಸ್‌ಗೆ ಸಿನಿ ಗಾಯನದ ಕಾಲ ಮುಗಿದು ಹೋಗಿತ್ತು. ಪ್ರೈವೇಟ್ ಬೈಠಕ್‌ಗಳಿಗೆ, ಟೀವಿಗಳಿಗೆ ಗಂಟೆಗಟ್ಟಲೆ, ಭಯಂಕರ ಅಪಸ್ವರದಲ್ಲಿ ಹಾಡುತ್ತಿದ್ದರು.

ಅನೇಕರು ನನ್ನೊಂದಿಗೆ ವಾದಿಸುತ್ತಾರೆ. ರಾಜ್‌ಕುಮಾರ್ ಹಾಡಲಾರಂಭಿಸಿದ್ದರಿಂದಲೇ ಪಿ.ಬಿ. ಶ್ರೀನಿವಾಸ್ ತೆರೆಯ ಮರೆಗೆ ಸರಿದು ಹೋದರು ಅಂತ. No way. ರಾಜಕುಮಾರ್ ಆ ಕಾಲಕ್ಕೆ ವರ್ಷಕ್ಕೆ ಒಂದು ಸಿನೆಮಾ ಮಾಡುತ್ತಿದ್ದರು. ಅದರಲ್ಲಿ ಎಷ್ಟು ಮಹಾ ಹಾಡು? ಆದರೆ ಪಿ.ಬಿ. ಶ್ರೀನಿವಾಸ್‌ಗೆ ನಾಲ್ಕು ಭಾಷೆಯ ಚಿತ್ರಗಳಲ್ಲಿ ಹಾಡುವ ಅವಕಾಶವಿತ್ತು. ಅವರ ದನಿಯ ಕೆಲಸ ಅಲ್ಲಿಗೆ ಮುಗಿದು ಹೋಗಿತ್ತು. ಸಿನೆಮಾ ಇಂಡಸ್ಟ್ರಿಯಲ್ಲಿ ಆ ನಿಯಮವಿದೆ. ಸರುಕು ಮುಗಿಯಿತಾ? ಅವರು ನಿಮ್ಮನ್ನು ಕರೆಯುವುದಿಲ್ಲ. ಉದಾಹರಣೆಗಳು ಬೇಕಾದಷ್ಟಿವೆ. ಈಗಾಗಲೇ ಎಸ್ಪಿ. ಬಾಲಸುಬ್ರಹ್ಮಣ್ಯಂರವರಿಗೆ ಮಾರ್ಕೆಟ್ ಮುಗಿದಿದೆ. ಅವರೀಗ ಟೀವಿಗಳಿಗೆ ಸೀಮಿತ. ಮೊಟ್ಟ ಮೊದಲ ಚಿತ್ರದಲ್ಲೇ ಸಿಕ್ಸರ್ ಬಾರಿಸಿ, ‘ಇನ್ನು ಇವರು ಚಿತ್ರರಂಗವನ್ನು ಆಳುತ್ತಾರೆ’ ಎಂಬಂಥ ಹವಾ create ಮಾಡಿದ ಜಯಂತ್ ಕಾಯ್ಕಿಣಿ-ಈಗ ಕಥೆ-ಕವಿತೆ, ಭಾಷಣಗಳಲ್ಲಿ busy. ಅವರಿಬ್ಬರೂ ಅಷ್ಟೆ: ಜಯಂತ್ ಮತ್ತು ಮನೋಮೂರ್ತಿ. ಅವರನ್ನು ಮೂರನೆಯವರ‍್ಯಾರೋ ಬಂದು ಕೊಲ್ಲಬೇಕಾಗಿಲ್ಲ. ಪರಸ್ಪರರನ್ನು ಸಲೀಸಾಗಿ ಕೊಂದುಕೊಂಡರು. ಇದೊಂದು ಭಾವ ಈಗಾಗಲೇ ಬಂದು ಹೋಗಿದೆ. ಹೊಸ ಭಾವನೆ, ಹೊಸ ಪ್ರತಿಮೆ, ಹೊಸ ಪ್ರಯೋಗ ಮಾಡಬೇಕು, ತಾವಿನ್ನು ಬೇರೆ ಗುಂಗಿನ ರಾಗ ಬಳಸಬೇಕು ಅಂತ ಅವರಿಬ್ಬರಿಗೂ ಅನ್ನಿಸಲಿಲ್ಲ. ಅಂದು ‘ಮಳೆ ಹಾಡು’ ಮಾರ್ವಲೆಸ್ ಆಗಿತ್ತು. ನಿಜ, ಅದನ್ನು ಚಳಿಗಾಲ ಬಂದರೂ ಬದಲಿಸಿಕೊಳ್ಳುವುದಿಲ್ಲ ಅಂತ ಹಟ ಹಿಡಿದರೆ ಹ್ಯಾಗೆ. “ಇಲ್ಲ ರವೀ, ಇದು ರಿಪಿಟೇಶನ್ ಅಲ್ಲ. This is a school. ಹೇಗೆ school of art ಇರುತ್ತೋ, ಸಂಗೀತಕ್ಕೂ ಒಂದು school ಅಂತ ಇರುತ್ತೆ" ಎಂಬ ವಾದ ಅಣ್ಣ ಜಯಂತ್‌ನದು. ಆದರೆ ಕೇಳಿಸಿಕೊಳ್ಳೋರಿಗೆ ಒಂದು school, ಒಂದು ಕಾಲೇಜ್ ಅಂತ ಇರುವುದಿಲ್ಲವಲ್ಲ? ಇಷ್ಟಾಗಿ, ಹಂಸಲೇಖಾರಂತಹ long standing bat's man ಪಕ್ಕದಲ್ಲೇ ಇದ್ದರಲ್ಲ?

ಅಂಥಾ ಪ್ರಚಂಡ ಜೀವಿ ಪುಟ್ಟಣ್ಣ ಕಣಗಾಲ್ ಅವರ ಸರುಕು ಮುಗಿದಿತ್ತು. ಸರುಕು ಮುಗಿದಿದೆ ಅಂತ ಗೊತ್ತು ಮಾಡಿಕೊಂಡು ಆಟ ಮುಗಿಸಿದವರು ರಾಜಕುಮಾರ್. ಆದರೆ ಕಲ್ಪನಾ ದಡ್ಡಿ. ಮಿನುಗುತಾರೆ ಅಂದದ್ದು ನಿಜ. ಆದರೆ ರಣ ಮಧ್ಯಾಹ್ನವೂ ತಾನು ಮಿನುಗುತ್ತೇನೆ ಅಂದುಕೊಂಡದ್ದು ಆಕೆಯ ತಪ್ಪಲ್ಲವೆ? ಬದುಕಿದ್ದಿದ್ದರೆ ಶಂಕರ್‌ನಾಗ್ ಕೂಡ ಮಂಕಾಗುತ್ತಿದ್ದರು. ವಿಷ್ಣುವರ್ಧನ್‌ರ ಗೂಡಂಗಡಿ ಮುಚ್ಚಿ ಹೋಗಲಿಲ್ಲವೆ. ಈ ಅಪಾಯದ ಅರಿವು ದರ್ಶನ್‌ರಂಥ ಅವಿವೇಕಿಗೆ ಅರ್ಥವಾಗುವುದಿಲ್ಲ. ಅಂದ್ಹಾಗೆ, ಅವರೆಲ್ಲಿ ಪ್ರಣಯರಾಜ ಶ್ರೀನಾಥ್? ಅದೆಲ್ಲಿಗೆ ಹೊರಟು ಹೋದರು ಎಂ.ಪಿ. ಶಂಕರ್? ಇದೊಂದು ಇಂಡಸ್ಟ್ರಿಯಲ್ಲಿ ಮಾತ್ರ ಹೀಗೆ ಅಂದುಕೊಳ್ಳಬೇಡಿ. ಜಗತ್ತಿನಲ್ಲಿ ಒಂದೇ ಒಂದು ದಿನವೂ ರಜೆ ಇರದೆ ಕೆಲಸ ಮಾಡುವ ಏಕೈಕ ಇಂಡಸ್ಟ್ರಿ ಅಂದರೆ: ವೇಶ್ಯಾವಾಟಿಕೆ. ಆದರೆ ಅಲ್ಲೂ market value ಅಂತ ಇರುತ್ತದೆ. ವಯಸ್ಸು ದಾಟಿತೋ? “Next next" ಅನ್ನುತ್ತದೆ ಸುಖದ ಮಂದಿರ. ಇಂಗ್ಲಿಷಿನಲ್ಲಿ ಒಂದು ಮಾತಿದೆ: To escape old age, one must die young! ಅಂತ ಅನೇಕರಿಗಿದು ಅರ್ಥವಾಗುವುದಿಲ್ಲ. ಆ ಪರಿ ನಲಿದು ಎಗರಾಡಿದ ದುನಿಯಾ ವಿಜಿ ಇವತ್ತು ಏನಾಗಿದ್ದಾನೆ? ವೃದ್ಧ ವೇಶ್ಯೆಯರಿಗೆ ಪಿಂಚಣಿ ಕೂಡ ಇರುವುದಿಲ್ಲ. ನಾನು ತುಂಬ ಸಲ ಜ್ಞಾಪಿಸಿಕೊಳ್ತೇನೆ ಆ ಧಾರಾವಾಹಿಯನ್ನ, ಅದರ ಹೆಸರು ‘ನಕಾಬ್’. ಆಗಿನ್ನೂ ಖಾಸಗಿ ಛಾನಲ್‌ಗಳಿರಲಿಲ್ಲ. ದೂರದರ್ಶನ್‌ನಲ್ಲಿ ‘ನಕಾಬ್’ ಬರುತ್ತಿತ್ತು. ಅದರ ಹೀರೋ ಯಾರು ಅಂತ ಗೊತ್ತಿಲ್ಲ. ಸುಲಭ ದೇಶಪಾಂಡೆಯದು ದೊಡ್ಡ ಪಾತ್ರ. ಆ ಸೀರಿಯಲ್‌ನ ಹೀರೋ ಒಬ್ಬ ಖ್ಯಾತ ನಟ. ಅವನಿಗೆ ಇದ್ದಕ್ಕಿದ್ದಂತೆ ಲಕ್ವ ಹೊಡೆಯುತ್ತದೆ. ಎಷ್ಟೋ ದಿನಗಳಿಗೆ ಎಚ್ಚರವಾದಾಗ ಮಂಚದ ಪಕ್ಕದಲ್ಲಿ ನರ್ಸ್ ಕಾಣಿಸುತ್ತಾಳೆ. ಅಷ್ಟೆ, ಅವನು ಚೀತ್ಕರಿಸುತ್ತಾನೆ: “ನಿನ್ನನ್ನು ನನ್ನ ಕೋಣೆಯೊಳಕ್ಕೆ ಬಿಟ್ಟವರ‍್ಯಾರು? ಮುದುಕೀ, get out" ಅಂತ ಅಬ್ಬರಿಸುತ್ತಾನೆ. ಎದ್ದೇಳಲು ಪ್ರಯತ್ನಿಸುತ್ತಾನೆ. ಅರ್ಧ ದೇಹ ಸತ್ತು ಹೋಗಿದೆ. ಅಲ್ಲಿಂದ ಮುಂದಕ್ಕೆ ಕಥಾನಕ ಆರಂಭ. ಈ ಸೀರಿಯಲ್‌ನ ಸಿ.ಡಿ. ಸಿಗಬಹುದಾ ಅಂತ ಕಂಡ ಕಂಡವರನ್ನು ಕೇಳಿದ್ದೇನೆ. ನನಗೆ ಸಿಕ್ಕಿಲ್ಲ. I loved it.

ತುಂಬ ಸಲ ನನಗೆ ಉಪಾಧ್ಯರು ನೆನಪಾಗುತ್ತಾರೆ. ಅವರು ನನ್ನ ಸಂಪಾದಕರಾಗಿದ್ದರು ‘ಸಂಯುಕ್ತ ಕರ್ನಾಟಕ’ದಲ್ಲಿ. ಅವರಿಗೆ ಒಂದು ಕಾಲು ಕೊಂಚ ಊನ. ಕಾಲು ಎಳೆದು ಹಾಕಿಕೊಂಡೇ ನಡೆಯುತ್ತಿದ್ದರು. ಅಪರೂಪಕ್ಕೊಂದು ಬಿಯರ್ ಕುಡಿಯುತ್ತಿದ್ದರು. ಸಿಗರೇಟು ಮಾತ್ರ ಧಾರಾಳ. ಅವರ ಪೂರ್ತಿ ಹೆಸರು ರಾಮಚಂದ್ರ ಅನಂತ ಉಪಾಧ್ಯ. ಸ್ವಂತ ಊರು ದಕ್ಷಿಣ ಕನ್ನಡದ ಕುಂಭಾಶಿ. ಅವರ ಕಾಲವೆಲ್ಲ ಹುಬ್ಬಳ್ಳಿಯಲ್ಲೇ ಕಳೆಯಿತು. ಎಂಥ ಸೌಜನ್ಯದ ಮನುಷ್ಯರೆಂದರೆ, “ಏ ರವೀ, ಇದು ನನಗೆ ತಿಳಿಯಾಂಗಿಲ್ಲ. ಕಮ್ಯುನಿಸ್ಟ್ ಮಂದಿ ನೀವು. ನಿಮಗೆ ತಿಳೀತದ. ತಗೋ, ನೀನೇ ಬರಿ!" ಅಂತ ನನ್ನ ಕೈಯಿಂದಲೇ ಬರೆಸುತ್ತಿದ್ದರು. ಅದೇ ಅವತ್ತಿನ ಸಂಪಾದಕೀಯ! ನನ್ನಂಥ ಚಿಕ್ಕವಯಸ್ಸಿನವನ ಕೈಲಿ ಆ ಕಾಲಕ್ಕೆ ‘ಸಂಯುಕ್ತ ಕರ್ನಾಟಕ’ದಂಥ ಅಂದಿನ ಹೆಸರಾಂತ ಪತ್ರಿಕೆಗೆ ಸಂಪಾದಕೀಯ ಬರೆಸುವುದೇ? ಆ ತೆರನಾದ ಸೌಜನ್ಯ ಅವರಿಗಿತ್ತು. ಕೆಲವರು ಭಯಂಕರ ego ಅದು. ಒಂದು ಹೊಸ ಪುಸ್ತಕ ಸಿಕ್ಕರೆ ಮುಗೀತು. ಅದನ್ನು ಓದಿ ನನ್ನ ಕೈಲೂ ಓದಿಸುತ್ತಿದ್ದರು. ಹಾಗಾಗಿಯೇ ನಾನು ಅನೇಕ ಇಂಗ್ಲಿಷ್ ಕಾದಂಬರಿಗಳನ್ನು ಓದುವ ಅವಕಾಶವಾಯಿತು. ಒಟ್ಟಿಗೇ ಬಿಯರ್ ಕುಡಿಯೋದು ಹಾಗಿರಲಿ; ನಾವು ಸಿಗರೇಟನ್ನು ಅವರ ಪ್ಯಾಕೇಟ್‌ನಿಂದ ತೆಗೆದುಕೊಳ್ಳಲಿಕ್ಕೆ ಅವರ ಪರ್ಮಿಶನ್ನೇ ಬೇಕಿರಲಿಲ್ಲ. ಉಳಿದಂತೆ ಆ ತೆರನಾದ ಸಲುಗೆ, ನನಗಿಂತ ಹಿರಿಯರಾದ ಲಕ್ಷಣ ಜೋಶಿಯವರಿಗಿತ್ತು. ಅವರಾದರು ಅಷ್ಟೇ; ವಿಪರೀತ ಸರಳ. ಅವರು ಸಾಕಷ್ಟು ಓದಿಕೊಂಡದ್ದೂ ಹೌದು.

ಅದಿರಲಿ; ಒಮ್ಮೆ ಉಪಾಧ್ಯರಿಗೆ ಹೃದಯ ವಿಕಾರ ಉಂಟಾಯಿತು. Massive heart attack ಅಲ್ಲದಿದ್ದರೂ ಅರವತ್ತರ ಗಡಿ ದಾಟಿದ ಅವರು ಮೆತ್ತಗಾಗಿ ಬಿಟ್ಟರು. ನಡೆಯುವುದು ನಿಜಕ್ಕೂ ದುಸ್ತರವಾಯಿತು. ತೀರ ಅಪರೂಪಕ್ಕೊಮ್ಮೆ ನಮ್ಮಿಂದಲೇ ಸಿಗರೇಟು ಇಸಿಕೊಂಡು ಸೇದುತ್ತಿದ್ದರು. ಈ ಸಮಸ್ಯೆಗೆ ಪರಿಹಾರ ಇಲ್ವೆ? ಅಂತ ಕೇಳಿದ್ದೆ. “ ನೋಡೋ ನಾನೂ ಡಾಕ್ಟರ್‌ನ ಕೇಳಿದೆ. ಸಾಕಷ್ಟು blockages ಇವೆಯಂತೆ. ಆಪರೇಷನ್ ಮಾಡಿಸಿಕೊಂಡರೆ ಇನ್ನೊಂದಷ್ಟು ವರ್ಷ ಜಗ್ಗಬಹುದು ಅಂದ್ರು. ಆಪರೇಷನ್ ಸಕ್ಸಸ್ ಆಗ್ತದಾ ಅಂತ ಕೇಳಿದೆ. ಡಾಕ್ಟರು ಅದರ ಬಗ್ಗೆ ಗ್ಯಾರಂಟಿ ಕೊಡಲಿಲ್ಲ. ಆಯ್ತಲ್ಲ? ನನಗೂ ವಯಸ್ಸಾಯ್ತು. ಈ ವಯಸ್ನಾಗೆ ಲಕ್ಷಗಟ್ಲೆ ಖರ್ಚು ಮಾಡಿ, ಆಪರೇಷನ್ ಮಾಡಿಸಿಕೊಂಡು ಕಡೆಗೆ ಮಕ್ಕಳ ತಲೆಮ್ಯಾಲೆ ಸಾಲ ಹೊರಿಸಿ ಸಾಯಬಾರ‍್ದು. ಇದು, ಅದೆಷ್ಟು ವರ್ಷ ಜಗ್ಗತದೋ ಜಗ್ಗಲಿ. ಮ್ಯಾಲಿಂದ ಫೋನ್ ಬಂದ್ರೆ ಹೋಗೋದೇ..." ಅಂದಿದ್ದರು. ಉಪಾಧ್ಯ. ಅವರು ‘ಸಂಯುಕ್ತ ಕರ್ನಾಟಕ’ದಲ್ಲಿ ರಿಟೈರ್ ಆಗಿ ಸುಮಾರು ದಿನಗಳಾಗಿದ್ದವು. ಆದರೂ ಶಾಮರಾಯರು ಅವರಿಗೆ ಎಕ್ಸ್‌ಟೆನ್ಷನ್ ಕೊಡುತ್ತಾ ಬಂದರು. “ನಾನೇ ಇನ್ನೂ ರಿಟೈರಾಗಿಲ್ಲ. ನಿಮಗೇನಾಗಿದೆ ರಿಟೈರಾಗಲಿಕ್ಕೆ" ಅನ್ನುತ್ತಿದ್ದರು. ಕಡೆಗೊಮ್ಮೆ ಉಪಾಧ್ಯರು ರಿಟೈರ್ ಆಗೇ ಬಿಟ್ಟರು. ಹುಬ್ಬಳ್ಳಿ ಬಿಟ್ಟು ಸ್ವಂತ ಊರು ಕುಂಭಾಶಿಗೆ ಹೋಗಿ ಅಲ್ಲೇ settle ಆದರು. ನಾನೊಮ್ಮೆ ಧರ್ಮಸ್ಥಳಕ್ಕೆ ಹೋದವನು, ದಾರಿಯಲ್ಲಿ ಕುಂಭಾಶಿಯಲ್ಲಿ ಇಳಿದು ಅವರ ಮನೆಗೇ ಹೋದೆ. He was very happy. ‘ಇಲ್ಲಿ ಹೇಗೆ ಹೊತ್ತು ಕಳೀತೀರಿ?’ ಅಂದದ್ದಕ್ಕೆ ಸಾಲಾಗಿ ಇಟ್ಟಿದ್ದ ಪುಸ್ತಕ ತೋರಿಸಿದರು. ಮಹತ್ವಾಕಾಂಕ್ಷೆಯ ಮಾತು ಹಾಗಿರಲಿ; ಅವರಿಗೆ ತಕ್ಷಣದ ಆಕಾಂಕ್ಷೆಗಳೂ ಇರಲಿಲ್ಲ. ಅದಾಗಿ ಕೆಲವೇ ದಿನಗಳಿಗೆ ಸುದ್ದಿ ಬಂತು; he is no more!

ಇವತ್ತಿನ ಸಂಗತಿ ಬಿಡಿ. ಹೃದಯಾಘಾತವೊಂದು ಖಾಯಿಲೆಯೇ ಅಲ್ಲ. ತೆರೆದ ಹೃದಯದ ಚಿಕಿತ್ಸೆ ಕೂಡ ತುಂಬ ಸರಳ. In fact, ಆಪರೇಷನ್ ಮಾಡಿಸಿಕೊಂಡವರು ಸಾಕಷ್ಟು ದೀರ್ಘಕಾಲ ಬದುಕಿರುತ್ತಾರೆ. ಹೃದಯದ ಬೇನೆ ಎಂಬುದು ಈ ಕಾಲಕ್ಕೆ ಗೆದ್ದ ಯುದ್ಧ. ಆದರೆ ಆ ಕಾಲಕ್ಕೆ ಉಪಾಧ್ಯರು ಯೋಚಿಸಿದ ರೀತಿ ನೋಡಿ? ಅದೇನೂ ಸಣ್ಣ ಮಾತಲ್ಲ. “ಸತ್ತರೆ ಸತ್ತೆ ಬಿಡು" ಅಂತ ಎಷ್ಟು ಜನ ಅಂದುಕೊಳ್ಳುತ್ತಾರೆ. ಜೀವವೆಂಬುದು ಯಾರಿಗೆ ಪ್ರಿಯವಲ್ಲ? ಸಾಲವೋ ಸೋಲವೋ; ಚಾನ್ಸು ಅಂತ ಬಂದಿದೆಯಾ? ಬದುಕಿ ಬಿಡೋಣ ಅಂತಲೇ ನಾವೆಲ್ಲ ಯೋಚಿಸುತ್ತೇವೆ. “ಈ ಮುದುಕ ಸತ್ತಾದ್ರೂ ಸಾಯವಲ್ಲ" ಅಂತ ಸೊಸೆ, ಮೊಮ್ಮಕ್ಕಳು ಸಿಡುಕುವುದು ಕಿವಿಗೆ ಬಿದ್ದರೂ ಸಾಯಲು ಮನಸ್ಸಾಗುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರನ್ನೇ ಗಮನಿಸಿ; ಅದೇನಿದ್ದರೂ ಯುವಕರ ನಿರ್ಣಯ. ಕೊಂಚ ವಯಸ್ಸಾದವರಾಗಲೇ ಸಾಯಲು ಒಲ್ಲರು. ‘ನನ್ನ ಮಾರ್ಕೆಟ್ ಮುಗಿದಿದೆ’ ಅಂತ ಗೊತ್ತಾದ ನಂತರವೂ ಮನುಷ್ಯ ಬದುಕಿರಲು ಬಯಸುತ್ತಾನೆ. ಅನ್ನುವವರಿಗೇನು, “ಆ ದೇವರು ಕರೆಸಿಕೊಂಡು ಬಿಟ್ರೆ ಸಾಕು" ಅಂತ ಬಾಯಿ ಮಾತಿಗೆ ಅನ್ನುವವರಿದ್ದಾರೆ.

ಜೀವ ಅಷ್ಟೆಲ್ಲ ಸಲೀಸಾಗಿ ಹೋಗುವುದಿಲ್ಲ. ನಾನು ಬಿchiಯವರ ಮಿತ್ರ ಮೆಹತಾ ಎಂಬಾತನನ್ನು ನೋಡಿದ್ದೆ. ಕುಳ್ಳಗೆ, ದಪ್ಪಗಿದ್ದ ಆತನಿಗೆ ಆರು ಸಲ ಹೃದಯಘಾತವಾಗಿತ್ತಂತೆ! ಆದರೂ ನಿರುಮ್ಮಳವಾಗಿ ಬದುಕಿದ್ದ. ಆತನ ಹೆಂಡತಿಗೆ ಮನೆಯ ಆಳು ಗೋವಿಂದನೊಂದಿಗೆ ಅಕ್ರಮ ಸಂಬಂಧವಿತ್ತು. ಆದರೆ ವಿಪರೀತ ಗೂರಲು. ಒಮ್ಮೆ ಆಕೆಯ ಮನೆಯಂಗಳದಲ್ಲಿ ಭಿಕ್ಷುಕನೊಬ್ಬ ಬಂದು ವಿಪರೀತ ಗೋಗರೆಯುತ್ತಿದ್ದ. ಅವನು ಪ್ರತೀ ದಿನ ಬಂದು ಕಾಟಕೊಡುವ ಗಿರಾಕಿ. “ಗೋವಿಂದಾ.... ಇವನನ್ನು ಓಡಿಸು" ಅಂದಳು. ಸಿಟ್ಟಿಗೆದ್ದ ಗೋವಿಂದ ಒಂದು ಸಲಾಕೆಯನ್ನ ಭಿಕ್ಷುಕನೆಡೆಗೆ ಬೀಸಿದ. ಅದಕ್ಕೆ ಆಕೆ ಅಡ್ಡ ಬಂದಳು. ಕುಳಿತಲ್ಲೇ ಆಕೆ ಖಲಾಸ್. ಮನೆಯಲ್ಲಿ ಕಣ್ಣೀರಿಟ್ಟುಕೊಂಡು ಅತ್ತವನು ಗೋವಿಂದನೊಬ್ಬನೇ! ಕೆಲವು ಸಂಗತಿಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ಉದಾಹರಣೆಗೆ, ನಮ್ಮ ಉಮೇಶ ಕೆಲಸ ಮಾಡುತ್ತಿದ್ದ ಮಳಗಿ ಗ್ರಾಮದಲ್ಲಿ ಒಂದು ಅಜ್ಜಿಯಿತ್ತು. ಅವತ್ತು ಅಜ್ಜಿ ಅಂಗಳದಲ್ಲೇ ಮಲಗಿತ್ತು. ಮೆತ್ತಗೆ ಅಂದರೇನು? ತೀರ ಮೆತ್ತಗಾಗಿತ್ತು. “ಇಂಟರೆಸ್ಟಿಂಗ್ ಸಂಗತಿ ಇದೆ ಬಾ" ಅಂತ ಉಮೇಶ ನನ್ನನ್ನು ಆ ಅಜ್ಜಿಯ ಬಳಿಗೆ ಕರೆದೊಯ್ದ. ಅವನನ್ನು ಅಜ್ಜಿ ಸಲೀಸಾಗಿ ಗುರುತು ಹಿಡಿಯಿತು. “ಅಜ್ಜೀ, ಇವರು ರವಿ ಬೆಳಗೆರೆ ಅಂತ. ನಿನ್ನನ್ನು ನೋಡೋಕೆ ಬಂದಿದ್ದಾರೆ" ಅಂದ. ಆಕೆಗೆ ಗೊತ್ತಾಗಲಿಲ್ಲ. ಅಂದುಕೊಂಡೆ. “ಇವರು ಕೇಳಬೇಕಂತೆ, ಒಂದು ಹಾಡು ಹೇಳು?" ಅಂದ. ಸರಿ, ಈ ಪರಿ ಹಣ್ಣಾದ ಮುದುಕಿ ಇನ್ನೇನು ಹಾಡಿಯಾಳು ಅಂದುಕೊಂಡೆ. ತೊಂಬತ್ತರ ಆಸುಪಾಸಿನ ಅಜ್ಜಿ, ಮಂಚದ ಮೇಲೆ ಮಲಗಿಕೊಂಡೇ ಸ್ಪಷ್ಟ ದನಿಯಲ್ಲಿ, ನಿಚ್ಚಳವಾಗಿ ಹಾಡ ತೊಡಗಿದಳಲ್ಲ?" ಒಡೆದು ಬಿದ್ದ ಕೊಳಲು ನಾನು. ನಾದ ಬರದು ನನ್ನಲೀ...!" ಅಕಸ್ಮಾತ್ ಹಾಡಿದರೂ ಎಂಥದೋ ದೇವರ ನಾಮ ಹಾಡಿಯಾಳು ಅಂದುಕೊಂಡಿದ್ದೆ. ಆ ಪರಿ ಸ್ಪಷ್ಟ ದನಿಯಲ್ಲಿ ಆಕೆ ಗೋಪಾಲಕೃಷ್ಣ ಆಡಿಗರ, ನನ್ನ ಅತ್ಯಂತ ಪ್ರೀತಿಯ ಕವಿತೆ ಹಾಡಿ ಬಿಡೋದಾ? Great!

ಇದೆಲ್ಲ ಸರಿ; ಮಾರ್ಕೆಟ್ ಮುಗೀತು ಅಂತ ಗೊತ್ತಾಗೋದು ಹೇಗೆ? Dont know. ಬಹಳ; ಹತ್ತಿರದವರೊಬ್ಬರನ್ನು ಕೇಳಿ ತಿಳಿದುಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ನಮ್ಮೊಳಗೆ ನಾವೇ ಮೇಲಿಂದ ಮೇಲೆ ಕೇಳಿಕೊಳ್ಳುತ್ತಿರಬೇಕು. ಅಂತಹುದೊಂದು ಸಮಯ ಬಂದರೆ ಅದನ್ನು ಎದುರಿಸಲಿಕ್ಕೆ ಸಿದ್ಧತೆ ಮಾಡಿಕೊಂಡಿರಬೇಕು. ಯಾವ ಕ್ಷಣ, ಯಾವ ಗಳಿಗೆ, ಯಾವ ಹೊತ್ತಾದರೇನು;" ಆಟ ಗೂಟ ಜೈ!" ಅಂದುಕೊಂಡು ಹೊರಟು ಬಿಡಬೇಕು. ನನಗೆ ನೂರಾ ಎರಡರ ಯೌವನದ ನಿಘಂಟು ನಿಪುಣ ವೆಂಕಟಸುಬ್ಬಯ್ಯನವರನ್ನು ನೋಡಿದರೆ ತುಂಬ ಖುಷಿಯಾಗುತ್ತದೆ. ಅವರಿಗೆ ಯಾವ ತರಹದ ನಿರೀಕ್ಷೆಯೂ ಇಲ್ಲ. ಅದು King size ಬದುಕು. ಅದನ್ನವರು ತುಂಬ ಅರ್ಥಪೂರ್ಣವಾಗಿ ಬದುಕಿದ್ದಾರೆ. ನಮ್ಮ ನಿಸಾರ್ ಅಹ್ಮದ್‌ರದಿನ್ನೇನು? ಅವರಿಗೆ ಎಂಬತ್ತೊಂದು. ಯಾವತ್ತಾದರೂ ನೀವು ಅವರನ್ನು ಸೂಟ್ ಹಾಕದೆ ಇರುವ ಸ್ಥಿತಿಯಲ್ಲಿ ನೋಡಿದ್ದೀರಾ? ಮಾಸ್ಟರ್ ಹಿರಣ್ಣಯ್ಯನವರಿನ್ನೇನು? ಆ ಪರಿ ಕುಡಿದು, ಆ ಪರಿ ಸೇದಿ ಅವರು ಅದೆಷ್ಟು ಹಿತವಾಗಿ, with all his humour ಬದುಕುತ್ತಿಲ್ಲವೇ?

ನನ್ನ ಗೆಳೆಯನೊಬ್ಬ ಒಮ್ಮೆ ತನ್ನ ಮನೆಗೆ ಕರೆದುಕೊಂಡು ಹೋದ. ಅವರ ತಂದೆ ಪಡಸಾಲೆಯಲ್ಲಿ ಮಲಗಿದ್ದರು. “He is eighty three. ಬದುಕಿದ್ದಷ್ಟೇ ಬಂತು. ತಗೊಂಡು ಏನು ಮಾಡ್ತೀಯ? ಬದುಕಿದ್ದೊಂದು ಬಿಟ್ರೆ ಬೇರೆ ಸಾಧನೆ ಏನೇನೂ ಇಲ್ಲ!" ಅಂದು ಬಿಟ್ಟ. ''Stupid fellow, ಎಂಬತ್ಮೂರು ವರ್ಷ ಬದುಕೋದೇ ಒಂದು ಸಾಧನೆಯಲ್ಲವಾ? ಏನು ಮಾತಾಡ್ತೀಯ" ಅಂತ ಗದರಿಕೊಂಡೆ. ನಿಮಗೆ ಇದು ತುಂಬ ಚೆಂದವಾದ ರೀತಿಯಲ್ಲಿ ಅರ್ಥವಾಗಬೇಕು ಅಂದರೆ, ಒಂದು ಪುಸ್ತಕ ಓದಬೇಕು; ‘Shit my das says’ ಅಂತ.

Try that....

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 February, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books