Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಆ ದಟ್ಟ ಬಿದಿರು ಮೆಳೆಯ ಹಿಂದಿನಿಂದ ಹಠಾತ್ತನೆ ಆನೆ ಬಂದರೆ?

ಅವನ ಋಣ?

ಅದನ್ನು ತೀರಿಸುವ ಯಾವ ದಾರಿಯೂ ನನಗೆ ಕಾಣುತ್ತಿಲ್ಲ. ಅವನು ಕೊಟ್ಟ, ಕೊಡುತ್ತಿರುವ ಸಂತಸಗಳು ಒಂದೆರಡಾ? ಆ ಕಂದನಿಗೆ ಏನಂತ ಹಿಂದಿರುಗಿಸಲಿ? ಯಾವುದೂ ಅಂತ ಹಿಂದಿರುಗಿಸಲಿ? ಅವನು ನನ್ನ ನಾಲ್ಕನೆಯ ಮಗ ಹಿಮವಂತ್!

ಹಟಕ್ಕೆ ಬಿದ್ದರೆ ವಿಪರೀತ ಹಟ ಮಾಡ್ತಾನೆ ಅನ್ನಲಾರೆ. ಅದು ಹಟದ ಕೂಸಲ್ಲ. He is very quiet. ದೊಡ್ಡ ಕಣ್ಣು, ತುಂಬುಗೆನ್ನೆ, ನಿಷ್ಕಳಂಕ ನಗೆ, ಚುರುಕ್ಕು ಮಾತು, ಅಷ್ಟೇ ಚುರುಕಾದ ನೆನಪಿನ ಶಕ್ತಿ-ಹಿಮವಂತ್‌ಗೆ ಎಲ್ಲವೂ ನೆನಪಿವೆ. ಅವನ ಚಿಕ್ಕಮ್ಮ ‘ಹಿಮವಂತಾ’ ಅಂತ ಪೂರ್ತಿ ಹೆಸರಿಟ್ಟು ಕರೆಯುತ್ತಾಳೆ. ಉಳಿದಂತೆ ನಾವೆಲ್ಲ ಅನ್ನೋದು ‘ಹಿಮ’ ಅಂತಲೇ. ನಾಳೆ ಹತ್ತು ವರ್ಷಗಳು ಉರುಳಿದರೆ ಅವನಿಗೆ ಹದಿನೆಂಟು ತುಂಬುತ್ತದೆ. ಹದಿನೆಂಟು ತುಂಬಿದ ಮಗನನ್ನು ಒಮ್ಮೆ ದಿಟ್ಟಿಸಿ ನೋಡಿ, ಬರಸೆಳೆದು, ಮುತ್ತಿಕ್ಕಿದರೆ ಸಾಕು: ನಾನಿನ್ನು ಜಗತ್ತಿನಿಂದ ಹೊರಡಬಹುದು. ಈಗಷ್ಟೆ ಅವನಿಗೆ ಎಂಟು.

ಹಿಮವಂತನಿಗೆ ಒಂದು mood ಬರಬೇಕು. ಶತಾಯ ಗತಾಯ ನನ್ನ ಡ್ರೈವರ್‌ನಿಗೆ ಫೋನ್ ಮಾಡಿ, ಕಾರು ತರಿಸಿಕೊಂಡು ‘ಅಪ್ಪನ ಆಫೀಸಿಗೆ’ ಅಂತ ಹಿಮ ಬಂದೇ ಬಿಡುತ್ತಾನೆ. ಹಗಲೊತ್ತಿನಲ್ಲಿ ಬಂದರೆ ನನಗೆ attend ಮಾಡಲು ಕಷ್ಟ. ಹೀಗಾಗಿ ರಾತ್ರಿ ಎಂಟರ ಹೊತ್ತಿಗೆ ಆಗುತ್ತದೆ ರಾಯರ ದಾಳಿ. ಬಂದವನು ಮೊದಲು ನನ್ನ ಅಲ್ಮೆರಾ, ಟೇಬಲ್, ಅದರ ಬಣಗಳು-ಎಲ್ಲ ತಡಕಾಡುತ್ತಾನೆ. ಅವನಿಗೇನು ಬೇಕೋ, ಅವೆಲ್ಲ ಅಲ್ಲಿರುತ್ತವೆ. ಅವನು ಸದಾ ಬಾಯಾಡಿಸುವ ಚಿರುತಿಂಡಿಬಾಕನಲ್ಲ. ತರಿಸಿಕೊಟ್ಟರೆ ಕೊಂಚ ಚಿಕನ್ ತಿನ್ನುತ್ತಾನೆ. ಅದಕ್ಕೂ ಹಟವಿಲ್ಲ. ಅವನ ಕಣ್ಣಿಗೆ ಕಾಣದಿರಲಿ ಎಂದು ನಾನು ಹೆದರಿ ಎತ್ತಿಡುವುದು ಕೇವಲ ಸಿಗರೇಟನ್ನ. ಮೊದಲೆಲ್ಲ ಅವನು ನನ್ನ ಕನ್ನಡಕ ಮುರಿಯುತ್ತಿದ್ದ. ಈಗ ಬೆಳೆದಿದ್ದಾನೆ. ಅದೇ ಬಂದಿರೋದು ಫಜೀತಿ: ನನ್ನ ಕೈಯಲ್ಲಿ ಸಿಗರೇಟು ಕಂಡರೆ ಸಾಕು: ‘No’ ಅಂತ ಅಬ್ಬರಿಸುತ್ತಾನೆ. ನಾನು ತಕ್ಷಣ ಆರಿಸಬೇಕು. ಕಂದನ ಅಣತಿಗೆ ಇಲ್ಲವೆನ್ನೋದು ಹೇಗೆ? ಅಪರೂಪಕ್ಕೊಮ್ಮೆ ‘ಪ್ರಾರ್ಥನಾ’ದ ಮಕ್ಕಳು ಬರುತ್ತವೆ. ಆಗಲೂ ನಾನು ಸಿಗರೇಟು, ash tray ವಗೈರೆ ಎತ್ತಿಡುತ್ತೇನೆ. Negative ಆದದ್ದು ಬಹಳ ಬೇಗ ಮಕ್ಕಳ ಕಣ್ಣಿಗೆ ಬೀಳುತ್ತವೆ. ನನ್ನ ಮೊಮ್ಮಕ್ಕಳು ಬಂದಾಗಲೂ ಈ ಮುನ್ನೆಚ್ಚರಿಕೆ ವಹಿಸುತ್ತೇನೆ.

ಮೊನ್ನೆ ಬಂದ ಹಿಮ ನಿದ್ರೆಯ moodನಲ್ಲಿದ್ದಾನಾ ಅಂತ ನೋಡಿದೆ. No chance. ಅವನು ಚಿಗರೆಯಂತಿದ್ದ. ಹೊಟೇಲಿನಿಂದ ವೆಜಿಟಬಲ್ ಬಿರಿಯಾನಿ, ಮೊಸರನ್ನ ತರಿಸಿಕೊಟ್ಟೆ. ‘ಅಪ್ಪಾ, ನಾನು ಮಲಗೋದು ಎಲ್ಲಿ?’ ಅಂದ. ಹಾಸಿಗೆ ತೋರಿಸಿದೆ. ಅವನು ಬರುವಾಗಲೇ ತೀರ್ಮಾನಿಸಿಕೊಂಡು ಬಂದಿದ್ದ: ಇವತ್ತು ಇಲ್ಲೇ ವಸತಿ! ಹಾಗಂತ ತಕ್ಷಣ ಮಲಗುವ ಮಗನಾ? No way. ಅವನ ಪಕ್ಕದಲ್ಲಿ ಮಲಗಿ, ಇಬ್ಬರಿಗೂ ಸೇರುವಂತೆ ಒಂದು ಹೊದಿಕೆ spread ಮಾಡಿದೆ. “ಕಥೆ ಹೇಳಿ" ಅಂದ. ಶುರುವಾಯಿತಲ್ಲ ನನ್ನ ತಲಾಷಿ. ಅವನಿಗೆ ನಾನು ಮೊದಲೆರಡು ಕತೆ ಹೇಳಿದೆ. ಅವು ಎಷ್ಟು ಬೇಗ ಮುಗಿದವು ಅಂದರೆ ‘ಇಷ್ಟೇನಾ ನಿನ್ನ ಯೋಗ್ಯತೆ’ ಎಂಬಂತೆ ನೋಡಿದ. ನಂತರ ಕೊಂಚ ‘ಬಂಡಲ್’ ಬಿಡಲು ಅವಕಾಶವಿರುವಂತಹ ರಾಣಾ ಪ್ರತಾಪ ಸಿಂಹನ ಕಥೆ ಆರಂಭಿಸಿದೆ. ಅವನು ಮೇವಾಡದ ದೊರೆ. ಅವನ ಆಳ್ವಿಕೆ, ಕದನ, ರಾಜ್ಯಭ್ರಷ್ಟನಾಗಿ ಅಲೆದ ದಿನಗಳು-ಹೀಗೆ ಒಂದೊಂದನ್ನೂ ಹೇಳುತ್ತ ಹೋದೆ. Hima was curious. ಆ ಕತೆ ಮುಗಿಯುತ್ತ ಬಂತಲ್ಲ? ಗಡಿಯಾರದಲ್ಲಿ ಸುಮಾರು ಹನ್ನೊಂದೂವರೆ. ಅವನಿಗೆ ಸದ್ಯಕ್ಕೆ ನಿದ್ರೆ ಬರಲಾರದು ಅನ್ನಿಸಿತು. ಅಷ್ಟು ಉದ್ದದ ಕತೆ, ಅದಕ್ಕೆ ನಾನು ಸೇರಿಸಿದ ಹೊಟ್ಟು-ತೌಡು ಎಲ್ಲ ಆದ ನಂತರವೂ ಇವನಿಗೆ ನಿದ್ರೆ ಬರಲಿಲ್ಲ ಅಂದರೆ ನನ್ನ ಗತಿ?

ಅಂಥ ಸಂದರ್ಭಗಳಲ್ಲಿ music is best. ಅವನಿಗೊಂದು ಲಾಲಿ ಕೇಳಿಸಬೇಕು ಅನ್ನಿಸಿ ‘ಸ್ವಾತಿಮುತ್ಯಂ’ ಸಿನೆಮಾದ ‘ವಟಪತ್ರ ಶಾಯಿಕೀ’ ಹಾಕಿದೆ. ಹೆಚ್ಚೆಂದರೆ ಎರಡೂವರೆ ನಿಮಿಷ. ತನ್ನದೊಂದು ಕಾಲು ನನ್ನ ಮೇಲೆ ಹಾಕಿಕೊಂಡು, ಒಂದು ಕೈಯಿಂದ ಅವಚಿಕೊಂಡು ಹಿತವಾದ ನಿದ್ರೆಗೆ ಜಾರಿಯೇ ಬಿಟ್ಟ ಹಿಮ. ನಿಧಾನವಾಗಿ ಎದ್ದು ಹಾಡು ನಿಲ್ಲಿಸಿದೆ. ಮಾಡಲಿಕ್ಕೇನು, ಭರ್ತಿ ಕೆಲಸಗಳಿದ್ದವು. ಆದರೆ ಅವನ ಪುಟ್ಟ ಪುಟ್ಟ ಕೈ-ಕಾಲು, ಶಬ್ದವಿಲ್ಲದ ನಿದ್ರೆ, ಅವಚಿಕೊಂಡ ಭಂಗಿ-ಉಹುಂ, ಅವುಗಳಿಂದ ದೂರವಾಗಲು ಮನಸು ಸಿದ್ಧವಾಗಲಿಲ್ಲ. ಅವನ ಪುಟ್ಟ ದಿವ್ಯ ಸನ್ನಿಧಿಯದು. ಒಮ್ಮೆ ಅವನ ನೆತ್ತಿ ಮೂಸಿದೆ. ಜಗತ್ತಿನ ಯಾವ ದುಬಾರಿಯ perfumeಗಿದೆ ಆ ತಾಕತ್ತು. ಕಂದ ಸಂಜೆಯಷ್ಟೆ ಸ್ನಾನ ಮಾಡಿದ್ದ. ಆನಂತರ ಆಟವಾಡಿದ್ದ. ಆಗ ಹಿತವಾಗಿ ಬೆವರಿದ್ದಾನೆ. ಒಂದಲ್ಲ ಹತ್ತಲ್ಲ: ಎಷ್ಟು ಸಲ ಅವನ ನೆತ್ತಿ ಮೂಸಿದರೂ ತೃಪ್ತಿಯಾಗುವುದಿಲ್ಲ. ನನ್ನ ಮಂಚ, ಹಾಸಿಗೆ, ಹೊದಿಕೆ, ದಿಂಬು, ನನ್ನಿಡೀ ದೇಹ ಆ ಮಧುರವಾದ ಘಮದಲ್ಲಿ ತೊಯ್ದೆದ್ದು ಬಿಟ್ಟಿವೆ ಅನ್ನಿಸತೊಡಗಿತು. I went on inhaling. Great it was. ಇನ್ನೇನು ಬೇಗ ಬೆಳೆದು ಬಿಡುತ್ತಾನೆ ಹಿಮ. ಆಗ ಈ ‘ಶಿಶುಗಂಧ’ ಇರುವುದಿಲ್ಲ. ಅವನಿನ್ನೂ ಒಂದೆರಡು ತಿಂಗಳ ಮಗುವಿದ್ದಾಗಲೇ ನನಗಿದು ರೂಢಿಯಾಗಿದೆ: ಮೂಸುವ ಹಿತ. ಅವನು ತೀರ ಕೈಗೂಸಾಗಿದ್ದಾಗಲೇ ಅವನನ್ನು ನಾನು ಮಂಚದ ಮೇಲೆ ಮಲಗಿಸಿ, ಎಲ್ಲ ಬಟ್ಟೆ ತೆಗೆದು, olive oil ಇಡೀ ದೇಹಕ್ಕೆ ಹಿತವಾಗಿ ಸವರಿ, ಅವನಿಗೊಂಚೂರೂ ನೋವಾಗದ ಹಾಗೆ ಮಸಾಜ್ ಮಾಡುತ್ತಿದ್ದೆ. ಆಗಲೇ ಅವನು ನೀಳ ದೇಹಿ. ಅವನ ನೀಳವಾದ ಕೈ ಕಾಲುಗಳಿಗೆ ಎಣ್ಣೆ ಸವರಿ ಹಿತವಾಗಿ ಎಳೆಯುತ್ತಿದ್ದರೆ ಕೂಸು ತುಂಬ relax ಆಗುತ್ತಿತ್ತು. “ನೀನೊಳ್ಳೆ ತಿಕ್ಕಲ ಕಣಯ್ಯಾ" ಅಂತ ಗೆಳೆಯರು ಮೊದಲಿಂದಲೂ ರೇಗಿಸುತ್ತಾರೆ. “ಮೊಲೆ ಒಂದಿದ್ದಿದ್ದರೆ ನೀನು ಮಗೂಗೆ ಹಾಲೂ ಕುಡಿಸಿ ಬಿಡ್ತಿದ್ದೆಯೇನೋ?" ಅಂದವರೂ ಇದ್ದಾರೆ. “ಅವನು ಹೆರಿಗೆ ಮಾಡಿಸೋದರಿಂದ ಹಿಡಿದು ಬಾಣಂತಿತನದ ತನಕ ಎಲ್ಲವನ್ನೂ ಮಾಡುತ್ತಾನೆ" ಅಂತ ಕೆಟ್ಟ ದನಿಯಲ್ಲಿ ಬರೆದವರು ಶುದ್ಧ ವಿಘ್ನ ಸಂತೋಷಿಯಾದ ಚಂಪಾ.

‘ಗಂಡಸು ಅಂದರೆ, ಹೆಂಡತಿಯನ್ನು ಹೆರಿಗೆಗೆ ರೆಡಿ ಮಾಡಿ ಕೈ ಬಿಡುವಂಥ ಧೀರನಾ?’ ಅಂತ ಅವರನ್ನು ನಿಲೆ ಹಾಕಿ ಕೇಳಬೇಕೆನ್ನಿಸುತ್ತದೆ. He is not worth it ಅಂದುಕೊಂಡು ಸುಮ್ಮನಾಗಿದ್ದೇನೆ. ಮಗುವಿಗೆ ಮಸಾಜ್ ಮಾಡೋದು, ಅದಕ್ಕೆ ಸ್ನಾನ ಮಾಡಿಸೋದು, ಮೈ ಒರೆಸೋದು, ಚೂರು ಸಾಂಬ್ರಾಣಿ ಹಾಕೋದು, ಎತ್ತಿಕೊಂಡು ತಿರುಗಾಡೋದು, ತೊಟ್ಟಿಲು ತೂಗೋದು ಮುಂತಾದ ಕೆಲಸಗಳಲ್ಲಿ ಸುಮ್ಮನೆ participate ಮಾಡಿ ನೋಡಿ. ಅದೊಂದು ಅದ್ಭುತ ಅನುಭವ. ಆ ಮಗುವಿಗೆ ಹದಿನೆಂಟು ತುಂಬಿ, ಅದು ಆಳೆತ್ತರ ಬೆಳೆದು ಎದುರಿಗೆ ನಿಂತಾಗ ಸುಮ್ಮನೆ ಪ್ರಯತ್ನಿಸಿ ನೋಡಿ? ಬೇರೆ ಯಾರ ಮಾತು ಕೇಳದಿದ್ದರೂ ಅದು ನಿಮ್ಮ ಮಾತು ಕೇಳುತ್ತದೆ! ನನ್ನ ಈ ಮಾತಿಗೆ, ಅನುಭವಕ್ಕೆ ನನ್ನಲ್ಲಿ ಮಹಾನ್ ಸೈಂಟಿಫಿಕ್ ಸಾಕ್ಷ್ಯವಿಲ್ಲ. ಆದರೆ ಅನುಭವ? Yes, ನನ್ನ ಮೂರೂ ಮಕ್ಕಳು ಈಗ ಮೂವತ್ತರ ಆಸುಪಾಸಿನಲ್ಲಿದ್ದಾರೆ. ಅವರೊಂದಿಗಿನ ನನ್ನ ಸಂಬಂಧ wonderful beyond science. ಅವರು ನನ್ನಿಂದ ಏನೇನನ್ನೂ ಮುಚ್ಚಿಡುವುದಿಲ್ಲ. ಯಾವುದಕ್ಕೂ ಹಿಂಜರಿಯುವುದಿಲ್ಲ. We are great friends. ಏಕೆಂದರೆ, ನಾನು ಅವರಿಗೆ ಸ್ನಾನ ಮಾಡಿಸಿದ್ದೇನೆ, ತಲೆ ಬಾಚಿದ್ದೇನೆ, ಎದೆಗೆ ಅವಚಿಕೊಂಡು ಬೆಳೆಸಿದ್ದೇನೆ. They remember all that.

ಹಾಗೆ ಹಿಮವಂತನ ಪಕ್ಕದಲ್ಲಿ ಮಲಗಿಕೊಂಡವನು ಒಮ್ಮೆ time ನೋಡಿಕೊಂಡೆ. ಆಗಲೇ ಐದು ಗಂಟೆ! ಮನಸು ಆನಂದದಿಂದ ಜೂಕುಯ್ಯಾಲೆ. ಬೆಳಗಿನ ಜಾವ ಅವನು ಎದ್ದು ಹೊರಡಲು ಬೇಕಾದ ವ್ಯವಸ್ಥೆಯೆಲ್ಲ ಮಾಡಿದೆ. ಆಗ ನನಗೆ ಕೊಂಚ ಮಂಪುರು. ಈ ಹುಡುಗನ ಋಣ ಹೇಗೆ ತೀರಿಸಲಿ? ಅವನು ನನ್ನದೇ ಬಾಲ್ಯವನ್ನು ನನಗೆ ಇವೆಲ್ಲವುಗಳ ಮೂಲಕ ಹಿಂತಿರುಗಿಸುತ್ತಿದ್ದಾನೆ. ಈಗ ಅವನ ತಕ್ಷಣದ demand ಅಂದರೆ ಒಂದು ದಿನ ನಾವಿಬ್ಬರೂ ಎಲ್ಲಾದರೂ ಒಂದು tree houseನಲ್ಲಿರಬೇಕು. ಇಲ್ಲೆಲ್ಲೋ ಕುಶಾಲನಗರದ ಬಳಿ ರೆಸಾರ್ಟ್ ಒಂದರಲ್ಲಿ tree house ಇದೆಯಂತೆ. ಬಿಟ್ಟರೆ, ದಾಂಡೇಲಿಯ ಸರಹದ್ದಿನಲ್ಲಿ ಒಂದು ಅದ್ಭುತವಾದ tree house ಇದೆ. ಭಾವನಾ ಮದುವೆಯಾದ ಹೊಸತರಲ್ಲಿ ಅವಳನ್ನು ಕಿಟ್ಟಿ ಸಮೇತ pack ಮಾಡಿಕೊಂಡು ದಾಂಡೇಲಿಗೆ ಹೋಗಿದ್ದೆ. ಅವರಿಗೆ ನಾನು ಚೂರೂ hint ಕೊಟ್ಟಿರಲಿಲ್ಲ. ರಾತ್ರಿ ಕರೆದೊಯ್ದೆ. ಅವರಿಗೆ ಕತ್ತಲಿನಲ್ಲಿ ಏನೂ ಕಂಡಿರಲಿಲ್ಲ. ಮೆಟ್ಟಿಲು ಹತ್ತಿಸಿ, good night ಹೇಳಿ ನಾನು ಬಂದು ಬಿಟ್ಟಿದ್ದೆ. ಅಲ್ಲಿ tree houseನ ಬುಡದಲ್ಲೇ ಸಂಭ್ರಮಿಸಿ ಹರಿಯುತ್ತದೆ ಕಾಳೀ ನದಿ. ಬೆಳಿಗ್ಗೆ ಎದ್ದ ತಕ್ಷಣ ಅವರಿಗೆ tree houseನಲ್ಲಿರುವುದು ಗೊತ್ತಾಗಿದೆ. ತುಂಬ ಎಕ್ಸೈಟ್ ಆದ ದನಿಯಲ್ಲಿ ಕೂಗಿದ್ದಳು ಬಾನಿ: “ಅಪ್ಪಾ...!".

ಇವುಗಳಿಗೇನೂ ಲಕ್ಷಾಂತರ-ಕೋಟ್ಯಂತರ ಖರ್ಚಾಗುವುದಿಲ್ಲ. ನೀವು ಕೊಂಚ time ಎತ್ತಿಡಬೇಕು. ಅದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಪ್ರೀತಿಸಬೇಕು. I love them. ಹಾಗೆ ನಾನು ಬೆಚ್ಚನೆಯದೊಂದು ಸಂಬಂಧ ಅವರೊಂದಿಗೆ ಇಟ್ಟುಕೊಳ್ಳದೆ ಹೋಗಿದ್ದಿದ್ದರೆ ಈ ಹೊತ್ತಿಗೆ ಅದೆಂತೆಂಥ ರಕ್ತಪಾತಗಳಾಗಿ ಬಿಡುತ್ತಿದ್ದವೋ ಮನೆಯಲ್ಲಿ? ಅವರಿಗೆ ಯಾವ ಚಿಕ್ಕ ಮನಸ್ತಾಪವೂ ನನ್ನೊಂದಿಗಿಲ್ಲ. ಈಗಂತೂ ನಾನು ಚೂರೂ ಕುಡಿಯೋದಿಲ್ಲವಲ್ಲ? ಅವರೊಂದಿಗೆ ತುಂಬ ಸಮಯ ಕಳೆಯುತ್ತೇನೆ. ಅವರ ಮಾತು ಬಿಡಿ: ಅವರ ಮಕ್ಕಳು ನನಗೆ ತುಂಬ ಆತ್ಮೀಯರಾಗಿ ಬಿಟ್ಟಿದ್ದಾರೆ. ಚೇತನಾಳ ಮಗಳಂತೂ ನನ್ನ ಇವತ್ತಿನ best friend. ಸರಯೂ ನದಿಯ ಹೆಸರಿಟ್ಟಿದ್ದಾನೆ ಚೇತನಾ ಗಂಡ ರಂಜಿತ್. ನಾವೆಲ್ಲ ಅವಳನ್ನು ಕರೆಯೋದು ‘ಚುಕ್ಕಿ’ ಅಂತ. ಅವತ್ತು ನಾವೆಲ್ಲ ಬೆಂಗಳೂರಿನ palaceಗೆ ಹೋಗಿದ್ದೆವು. ಬೆಳಗಾದರೆ ಕರ್ಣನ ಮದುವೆ. ಪ್ಯಾಲೇಸ್‌ನ ಅಂಗಳದಲ್ಲಿ ಇಳಿದು ನಾವೆಲ್ಲ ಎದಿರುಗೊಂಬೋ ಶಾಸ್ತ್ರಕ್ಕೆ ಅಣಿಯಾಗಿದ್ದೆವು. ಅಷ್ಟರಲ್ಲಿ ನನಗೆ ಚುಕ್ಕಿ ಅಳೋದು ಕೇಳಿಸಿತು. “ಯಾಕೆ ಪುಟ್ಟಾ, ನಿಂಗ್ ಏನು ಬೇಕು?" ಅಂದೆ. ಮರುಕ್ಷಣ ಇಡೀ ಗುಂಪು ಜೋರಾಗಿ ನಕ್ಕು ಬಿಟ್ಟಿತು. ಅವಳು ನನ್ನ ಕೈ ಹಿಡಿದುಕೊಂಡು “ನಂಗೆ ಕಬಾಬು ಬೇಕು!" ಅನ್ನೋದಾ? ಅಕಸ್ಮಾತ್ ನಮ್ಮ ಬೀಗರು ಬ್ರಾಹ್ಮಣರಾಗಿದ್ದಿದ್ದರೆ ಗತಿ? ಅವಳು ಶತಾಯಗತಾಯ ಕಬಾಬು ತಂದುಕೊಡೋ ತನಕ ತನ್ನ ‘ಕಹಳೆ’ ನಿಲ್ಲಿಸಲಿಲ್ಲ. ಅವಳಿಗೆ ನಾನು ‘ಕಬಾಬು ರಾಣಿ’ ಅಂತಲೇ ಹೆಸರಿಟ್ಟಿದ್ದೇವೆ. ಅದೊಂದು ಮುದ್ದಾದ ನಕ್ಷತ್ರಗಣ್ಣಿನ ಹುಡುಗಿ.

ಮೊನ್ನೆ ಗೋವೆಗೆ ಹೋದವನು ಅಲ್ಲಿಂದ ಜೋಯಿಡಾಕ್ಕೆ ಹೋದೆನಲ್ಲ ಘಟ್ಟ ಹತ್ತಿ? ಅಲ್ಲಿ ತುಂಬ ಹೊತ್ತು ಇರಲು ಆಗಲಿಲ್ಲ. ನನ್ನ ಹುಡುಗ ನರಸಿಂಹ ಒಂದು ಚೆಂದನೆಯ stay home ಮಾಡಿದ್ದಾನೆ. ಅದನ್ನೆಲ್ಲ ನೋಡೋದರಲ್ಲೇ time ಆಗಿ ಹೋಯಿತು. ನಿಮಗೂ ಗೊತ್ತು; ಆ ಸೀಮೆಗೆ ಹೋದರೆ ನನ್ನ ಮೊದಲ ಆದ್ಯತೆ “ಮಂದುರ‍್ಲಿ ಐ.ಬಿ.". ನಿಮಗೆಲ್ಲ ಅದು ಹೇಗನ್ನಿಸುತ್ತೋ ಕಾಣೆ. ಅದೊಂದು ರುದ್ರ ರಮಣೀಯ ತಾಣ. ಮೊದಲು ಇಂಗ್ಲಿಷರು ಬೆಳಿಗ್ಗೆಯಿಂದ ಸಂಜೆಯ ತನಕ ನಡೆಯುತ್ತಿದ್ದರು. ತಪ್ಪಿದರೆ ಕುದುರೆ ಸವಾರಿ. ದಾರಿ ಕಳೆದಂತೆಲ್ಲ, ಕತ್ತಲಾಗುತ್ತದಲ್ಲ? ಅಲ್ಲಿ ಒಂದು ದಿನ್ನೆ ಹುಡುಕಿಕೊಳ್ಳುತ್ತಿದ್ದರು. ಆ ದಿನ್ನೆಯ ಮೇಲೆ ಅವರೊಂದು ಬಂಗಲೆ ಕಟ್ಟಿಸುತ್ತಿದ್ದರು. ಅವರ stayಗಾಗಿ ಅವರು ಮಾಡಿಕೊಳ್ಳುತ್ತಿದ್ದ ಅನುಕೂಲವದು. ಮಂದುರ‍್ಲಿ ಐ.ಬಿ. ಕೂಡ ಹಾಗೆಯೇ ಇಂಗ್ಲಿಷರಿಂದ ನಿರ್ಮಾಣವಾದದ್ದು. ಅದು ಈಗ ಅರಣ್ಯ ಇಲಾಖೆಯ ಅಧೀನದಲ್ಲಿದೆ. ಇತ್ತೀಚೆಗೆ ಅರಣ್ಯಾಧಿಕಾರಿಗಳು ಅದನ್ನು ಯಾರೆಂದರೆ ಯಾರಿಗೂ ಕೊಡುತ್ತಿಲ್ಲ. ನೀವು ದಾಂಡೇಲಿಯಿಂದ ಹೊರಟು ಉಳವಿಗೆ ತಲುಪಬೇಕೆಂದರೆ ಅದೇ ದಾರಿಯಲ್ಲಿ ಹೋಗಬೇಕು. ಆ ದಾರಿಯಿಂದ ಎಡಕ್ಕೆ ತಿರುಗಿಕೊಂಡರೆ, ಅದು ಮಂದುರ‍್ಲಿ ಕಾಡು. ಅಲ್ಲಿನ ಬಂಗಲೆ ತಲುಪಲು ನಾಲ್ಕೈದು ಕಿಲೋ ಮೀಟರು ಮಣ್ಣ ರಸ್ತೆಯಲ್ಲಿ ಸಾಗಬೇಕು. ಮಳೆಗಾಲದಲ್ಲಿ ಹೋದರೆ ನಿಮಗೆ ದೇವರೇ ಗತಿ. ಈಗ, ಮೂಳೆ ನೆಕ್ಕುವ ಕ್ರೂರ ಚಳಿ.

ನಾಲ್ಕು ಕಿಲೋಮೀಟರ್ ಕಾಡಿನಲ್ಲಿ ಸಾಗುವುದೇ ರೋಮಾಂಚನ. ಕೆಲವು ಬಾರಿ ನಾನು ಕಾರಿನಿಂದಿಳಿದು ಆರಾಮ್‌ಸೆ ನಡೆದು ಬಿಡುತ್ತೇನೆ. ಮೊದಲೆಲ್ಲ ಅಲ್ಲಿ ದಟ್ಟವಾದ ಬಿದಿರಮೆಳೆಗಳಿದ್ದವು. ಕೆಲ ವರ್ಷಗಳ ಹಿಂದೆ ಬಿದಿರಿಗೆ ಹೂವು ಮೂಡಿತಲ್ಲ! finish. ಒಮ್ಮೆ ಹೂವು ಕಾಣಿಸಿಕೊಂಡರೆ ಅದು ಬಿದಿರಮೆಳೆ ಪಾಲಿಗೆ ಸೂತಕದ ಮುನ್ಸೂಚನೆ. ಇಡೀ ಮೆಳೆ ಸತ್ತು ಹೋಗುತ್ತದೆ. ಅದನ್ನು ನನಗೆ ಹೇಳಿದ್ದು ಅರಣ್ಯಾಧಿಕಾರಿ ಮನೋಜ್ ಮತ್ತು ಲಿಂಗರಾಜು. ಆಗ ನಾನು ಅವಸರಿಸಿ, ರಾತ್ರೋರಾತ್ರಿ ಮಂದುರ‍್ಲಿಗೆ ಹೋಗಿ ಇನ್ನೂ ಸತ್ತಿರದ ಬಿದಿರು ಮೆಳೆಗಳ ಫೊಟೋ ತೆಗೆದಿದ್ದೇ. ಆ ಫೊಟೋಗಳನ್ನೇ ‘ಉಡುಗೊರೆ’ ಕೃತಿಗೆ ಬಳಸಿದ್ದು. ಗೆಳೆಯ ರವಿ ಅಜ್ಜೀಪುರ ಅದಕ್ಕೆ ಅಕ್ಕರೆಯಿಂದ ಪುಟ ವಿನ್ಯಾಸ ಮಾಡಿದ್ದರು. ಅಜಮಾಸು ಮುನ್ನೂರು photoಗಳನ್ನು ತೆಗೆಯಲಿಕ್ಕಾಗಿ ಹಾಗೆ ರಾತ್ರೋರಾತ್ರಿ ಓಡಿದ್ದೇಕೆ ಅಂದರೆ, ಒಮ್ಮೆ ಹೂವು ಬಂದು ಮೆಳೆ ಸತ್ತು ಹೋದರೆ, ಅದರಲ್ಲಿ ಮತ್ತೆ ಹೂವು ಮೂಡಲಿಕ್ಕೆ ಪೂರ್ತಿ ಅರವತ್ತು ವರ್ಷಬೇಕು. ಈಗ ಹೋಗಿ ನೋಡಿ; ಜೊಯಿಡಾ ಕಾಡಿನ ಉದ್ದಗಲಕ್ಕೂ ಸತ್ತ ಬಿದಿರು ನಿಂತಿದೆ.

ಮೊದಲು ಅಲ್ಲಿ ಉದ್ದಕ್ಕೂ ಬಿದಿರುಮೆಳೆ. ಎಲ್ಲೋ ಒಂದು ಕಡೆ ಮೆಳೆಯ ಹಿಂದೆ ಆನೆ ನಿಂತಿರಬಹುದಾ ಅನ್ನಿಸಿ ಮೈಝಲ್ಲೆಂದು ಬಿಡುತ್ತದೆ. ಕಾಡುಕೋಣ? My God. ಕಾರು ಇಳಿಯಬಾರದಿತ್ತು ಅಂದುಕೊಂಡಿದ್ದೇನೆ. ಅಷ್ಟೇ ಅಲ್ಲ: ನಾನು ಮಂದುರ‍್ಲಿಗೆ ಅದೆಷ್ಟು ಸಲ ಹೋಗಿದ್ದೇನೋ, ಎಣಿಸಿಟ್ಟುಕೊಂಡಿಲ್ಲ. ಆದರೆ ಪ್ರತೀ ಸಲ ಅಲ್ಲೊಂದು ಪ್ರಾಣಿಯನ್ನು ನೋಡೇ ನೋಡಿದ್ದೇನೆ. ಆನೆ, ಕಾಡೆಮ್ಮೆ, ಚಿರತೆ, ನರಿ, ಕೆಂದಳಿಲು-ಹೀಗೆ ಒಂದಲ್ಲ ಒಂದು. ನನಗೆ ಈ ವಿಷಯದಲ್ಲಿ ಮಂದುರ‍್ಲಿ ಮೋಸ ಮಾಡಿಲ್ಲ. ನನಗೆ ಅಲ್ಲಿ ಛೇರು ಹಾಕಿಕೊಂಡು ಕೂತು ಬರೆಯಲಿಕ್ಕೆ ಅದ್ಭುತವಾದ ಅಂಗಳವಿದೆ. ಕೂಡಲು ನೆರಳಿದೆ. ಆ ಬಂಗಲೆಯ ಅಂಗಳ ದಾಟಿದರೆ ಸಾಕು: ಒಂದು ದಿವ್ಯವಾದ ಇಳಿಜಾರು. ಆ ಇಳಿಜಾರು ಹೋಗಿ conclude ಆಗುವುದು ಒಂದು ಪುಟ್ಟ ಕೆರೆಯೊಳಕ್ಕೆ. ಆ ಕೆರೆಯಲ್ಲಿ ಅನೇಕ ಸಲ ಸ್ನಾನ ಮಾಡುವ ಆನೆ ನೋಡಿದ್ದೇನೆ. ಪದನಾಗಿ ಬೆಳೆದ ಸಾಂಬಾರವನ್ನು ಬಿಡದೆ ಬೆನ್ನತ್ತಿ ಹಿಡಿಯುವ ಸೀಳುನಾಯಿ ನೋಡಿದ್ದೇನೆ. ಸೀಳು ನಾಯಿ ಮಾತ್ರ deadlly. ಅದು ಅಪಾಯಕಾರಿ. ಮಂದುರ‍್ಲಿ ಐ.ಬಿ.ಯಲ್ಲಿ ನನಗೆ ಊಟ, ತಿಂಡಿ, ಚಹ ಇತ್ಯಾದಿ ಮಾಡಿಕೊಡಲಿಕ್ಕೆ ನಾಗರಾಜ ಇದ್ದಾನೆ. ಬಂಗಲೆಯ ಅಂಗಳದಲ್ಲಿ ಒಂದ್ಯಾವುದೋ particular ಮೂಲೆಯಲ್ಲಿ mobileನ ಸಿಗ್ನಲ್ ಸಿಗುತ್ತದೆ. ಅಲ್ಲಿ ಕುಳಿತು ನಾನು ಬರೆದಿಡುವ ಪುಟಗಳನ್ನು ನಮ್ಮ ಸೀನ ದಾಂಡೇಲಿಗೆ ಒಯ್ದು, ಅಲ್ಲಿಂದಲೇ ಬೆಂಗಳೂರಿಗೆ mail ಮಾಡುತ್ತಾನೆ. ಹಾಗೆ ಹೋದವನು ದಾಂಡೇಲಿಯಿಂದ ಅದ್ಭುತವಾದ ಕಾಳೀನದಿಯ ಹೊಳೆ ಮೀನು ತರುತ್ತಾನೆ. ನೀವೇನೇ ಅನ್ನಿ; ಹೊಳೆ ಮೀನು, ಕೆರೆ ಮೀನುಗಳಿಗಿರುವ ರುಚಿ ಸಮುದ್ರದ ಮೀನಿಗಿರುವುದಿಲ್ಲ.

ಈಗ ಅರಣ್ಯಾಧಿಕಾರಿಗಳು ಐ.ಬಿ. ಕೊಡುವುದಿಲ್ಲ. ಅದಕ್ಕೂ ನೂರಾರು ವರ್ಷದಷ್ಟು ವಯಸ್ಸಾಗಿದೆ. ಕಾಡುಬಂಗಲೆಗಳ rules ಮೊದಲಿಗಿಂತ ಗಟ್ಟಿಯಾಗಿವೆ. ಅತ್ತ ನನಗೆ ಮಳಗಾಂವಕರ್‌ರ ಬಂಗಲೆಯೂ ಇಲ್ಲವಾಗಿದೆ. ಅವರ ಅಳಿಯ ಬಾಂಬೆಯಲ್ಲಿ ನೆಲ ಹಿಡಿದು ಮಲಗಿದ್ದಾನೆ. ಅವನ ಮಕ್ಕಳಿಗೆ ನನ್ನ ಪರಿಚಯವಿಲ್ಲ. ಆ ಬಂಗಲೆಗೂ ಮೊದಲಿನ ಕಳೆ-ಖದರು ಇಲ್ಲ. ಅದು ಬಿಟ್ಟರೆ ಜೊಯಿಡಾದ ನನ್ನ ಸ್ವಂತ ಮನೆ ಇನ್ನೂ ಪೂರ್ಣಗೊಂಡಿಲ್ಲ. ಉಳಿದದ್ದು ನರಸಿಂಹನ ‘ಕಾಡು ಮನೆ’ ಮಾತ್ರ. ಈ ಸಲ ಹೋದಾಗ ಅದರಲ್ಲಿ ತಂಗಬೇಕು, ಹೇಗನ್ನಿಸುತ್ತದೋ, ಗೊತ್ತಿಲ್ಲ. ಮೊನ್ನೆ ಹಿಮ ನನ್ನ ಪಕ್ಕದಲ್ಲಿ ಮಲಗಿದ್ದನಲ್ಲ? ಅವನನ್ನು ದಾಂಡೇಲಿಯ tree houseನಲ್ಲಿ ಮಲಗಿಸಬೇಕು ಎಂಬ ವಿಚಾರಬಂದು, ಇದೆಲ್ಲ ನೆನಪಾಯಿತು. ಬೆಂಗಳೂರಿನಿಂದ ‘ಈ ಕಾಡುಕೋಣ’ ಹೊರಡಬೇಕು; ಯಾವಾಗ?

-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 February, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books