Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಇವತ್ತು ಅದೇಕೋ ಆ ಹಿರಿಯ ಸತ್ಯಕಾಮರ ನೆನಪು ಒದ್ದುಕೊಂಡು ಬಂದು....

“ಯಾಕೆ ಬರೀತೀರಿ?"

“ನನ್ನ ಅಹಂಕಾರಕ್ಕಾಗಿ!" ಅಂದಿದ್ದರು ಗುರುಗಳಾದ ಸತ್ಯಕಾಮ.

“ನಮ್ಮ ಪತ್ರಿಕೆಗೆ ಬರೀರಿ. ಏನನ್ನಾದರೂ ಸರಿ..." ವಿನಂತಿಸಿದ್ದೆ.

“ನೀನು ಬರೆಸು..." ಅಂದರು. ನನಗದು ಅರ್ಥವಾಯಿತು. ಆ ಕಾಲಕ್ಕೆ ಮಣಿಪಾಲದ ಪೈಗಳು ಆ ಕೆಲಸ ಮಾಡುತ್ತಿದ್ದರು. ಉಡುಪಿಗೆ ಹೋದರೆ ಸತ್ಯಕಾಮರಿಗೆ ಹೊಟೇಲಿನ ಹರಕತ್ತು ಇರುತ್ತಿರಲಿಲ್ಲ. ಅವರಷ್ಟೇ ಪ್ರಕಾಂಡ ಪಂಡಿತರಾದ ಬನ್ನಂಜೆ ಗೋವಿಂದಾಚಾರ್ಯರ ಮನೆ ಸಾಕಿತ್ತು. ಅಲ್ಲೇ ವಾಸ: ಅಲ್ಲಿಂದ ಮುಂದೆ ಪ್ರವಾಸ. ಸತ್ಯಕಾಮರು ನಿಜಕ್ಕೂ simple person. ಅವರಿಗೆ ಚಟಗಳಿರಲಿಲ್ಲ. ಸಿಗರೇಟು, ಕುಡಿತ, ಇಸ್ಪೀಟು... ಕೇಳಲೇ ಬೇಡಿ. ಅವರು ಅಡಿಕೆಯದೊಂದು ಹೋಳೂ ತಿನ್ನುತ್ತಿರಲಿಲ್ಲ. ಅವರಿಗೆ ಸ್ನೇಹ ಬೇಕು. ಮಾತು ಬೇಕು. ಸತ್ಯಕಾಮರ ಮಾತು ಪಾಮರರಿಗೆ ಅರ್ಥವಾಗುವಂಥದ್ದಲ್ಲ. ಅದಕ್ಕೇನಿದ್ದರೂ ಬನ್ನಂಜೆ ಆಚಾರ್ಯರಂತಹ ‘ಸಮಬಲ’ರೇ ಬೇಕು. ಎದುರಾ ಎದುರು ಕುಳಿತು ಗಂಟೆಗಟ್ಟಲೆ, ದಿನಗಟ್ಟಲೆ ಮಾತನಾಡುತ್ತಿದ್ದರು. ಅವರಿಬ್ಬರಿಗೂ, ಅದೇ ದಕ್ಷಿಣ ಕನ್ನಡದ ಇನ್ನೊಬ್ಬ ಪ್ರಕಾಂಡ ಪಂಡಿತ ಲಕ್ಷ್ಮೀಶ ತೋಳ್ಪಾಡಿಯವರು ಜೊತೆಯಾಗುತ್ತಿದ್ದರು. ಅಂಥದ್ದೊಂದು gang ಉಡುಪಿಯಲ್ಲಿ ರಚಿತವಾಗುತ್ತಿತ್ತು. ನನ್ನ ಅಚ್ಚರಿಯೆಂದರೆ, ಈ ಜಮಖಂಡಿ ಹತ್ತಿರದ ಕಲ್ಲಹಳ್ಳಿಯ ಮಹಾನುಭಾವ ಶಹಾಪುರಕರ್ ಅಲಿಯಾಸ್ ಸತ್ಯಕಾಮರಿಗೂ, ಆ ಉಡುಪಿ-ಪುತ್ತೂರಿನ ಪಂಡಿತ ಶಿಖಾಮಣಿಗಳಿಗೂ ಅದೆಂಥ ದೋಸ್ತಿ?

ಉಡುಪಿಯಲ್ಲಿ ಹಾಗೆ ಬನ್ನಂಜೆಯವರ ಮನೆಯಲ್ಲಿ ಠಿಕಾಣಿ ಹೂಡಿ, ಕೆಲಕಾಲ ಅಲ್ಲಿದ್ದು, ನಂತರ ಮಣಿಪಾಲಕ್ಕೆ ಹೋಗುತ್ತಿದ್ದರು ಸತ್ಯಕಾಮ. ಅಲ್ಲಿ ಅವರಿಗೆ ಆತಿಥ್ಯ ನೀಡುತ್ತಿದ್ದವರು ಸಂತೋಷ್ ಕುಮಾರ ಗುಲ್ವಾಡಿ. ಸತ್ಯಕಾಮರನ್ನೇನೂ ಗುಲ್ವಾಡಿಯವರು ತಮ್ಮ ಮನೆಗೆ ಕರೆದೊಯ್ಯುತ್ತಿರಲಿಲ್ಲ. ‘ಉದಯವಾಣಿ’ ಗುಂಪಿಗೆ ಅಂತಲೇ ಮಣಿಪಾಲದ ಪೈಗಳು ಒಂದು ಗೆಸ್ಟ್‌ಹೌಸ್ ಸಿದ್ಧಪಡಿಸಿದ್ದರು. ಅಲ್ಲಿ ಸತ್ಯಕಾಮರಿಗೆ ರೂಮು. ಅವರನ್ನು ಸಾಕೋದು ಕಷ್ಟದ ಸಂಗತಿಯಲ್ಲ. ಒಂದು ಬ್ರೇಕ್‌ಫಾಸ್ಟ್, ಎರಡು ಊಟ. ಹೇಳಿದೆನಲ್ಲ, ಸತ್ಯಕಾಮರಿಗೆ ಈ ಲೌಕಿಕ ಪ್ರಪಂಚಕ್ಕೆ ಸಂಬಂಧಿಸಿದ ಚಟಗಳಿರಲಿಲ್ಲ. ಆದರೆ, ಅವರು ತಮ್ಮ ಕಲ್ಲಹಳ್ಳಿಯ ಮನೆಯಿಂದ ಒಮ್ಮೆ ಹೊರ ಬಿದ್ದರೋ, ನಂತರ ಅವರನ್ನು ಹುಡುಕೋದು ಎಲ್ಲಿ? ಹೇಗೆ? ಅದೊಮ್ಮೆ ನನಗೆ ಸತ್ಯಕಾಮರ ಒಂದು ಕಾಗದ ಬಂದಿತ್ತು. ಒಂದು ಮಾಮೂಲಿ post card. “ಪ್ರಿಯ ರವೀ, ಹಿಮಾಲಯ ಪರ್ವತದ ಇಳಿಜಾರಿನಲ್ಲಿ ಗುಥಿಂಗ್ ಎಂಬ ಹಳ್ಳಿಯ ಸಮೀಪ ಒಂದು ಚಿಕ್ಕ ಟೆಂಟ್ ಹಾಕಿಕೊಂಡು ಅದರಲ್ಲಿದ್ದೇನೆ. ಇಲ್ಲಿ ಎಷ್ಟು ದಿನವೋ? ನಿಮಗೆ ಬಿಡುವಿದ್ದರೆ ನನ್ನ ಈ ಮನೆಗೆ ಬಂದು ಒಂದೆರಡು ದಿನ ಇದ್ದು ಹೋಗಿ!" ಅಂತ ಹುಬ್ಬಳ್ಳಿಯ ನನ್ನ ವಿಳಾಸಕ್ಕೆ post ಮಾಡಿದ್ದರು ಪುಣ್ಯಾತ್ಮ. ಅವರ ಪತ್ರವನ್ನು ಪದೇಪದೆ ಓದಿಕೊಂಡೆ. ಎಲ್ಲಿಯ ಹುಬ್ಬಳ್ಳಿ, ಎಲ್ಲಿಯ ಹಿಮಾಲಯದ ಇಳಿಜಾರು, ಎಲ್ಲಿಯ ಗುಥಿಂಗ್? ಮನುಷ್ಯ ಮಾತ್ರರಿಗೆ ಅದೆಲ್ಲ ಸಾಧ್ಯವಾಗುವ ಮಾತೇ? “This man is crazy" ಅಂತ ನನಗೆ ನಾನೇ ಹೇಳಿಕೊಂಡೆ. ನನಗೆ ಇಷ್ಟವಾಗುತ್ತಿದ್ದುದೇ ಅದು. ಅಷ್ಟು ಹೊತ್ತಿಗೆ ಸತ್ಯಕಾಮರಿಗೆ ವಯಸ್ಸಾಗಿತ್ತು. ಎಪ್ಪತ್ತರ ಆಜುಬಾಜು. ನಿಜ ಹೇಳಬೇಕೆಂದರೆ, ಒಬ್ಬ ಬರಹಗಾರ ತನ್ನ ಗಂಟುಮೂಟೆ ಕಟ್ಟಲು ಆರಂಭಿಸಬಹುದಾದ ವಯಸ್ಸು.

ಸಾಮಾನ್ಯವಾಗಿ ಬರಹಗಾರರಿಗೆ ಅದು ಮುಟ್ಟು ನಿಲ್ಲುವ ಹೊತ್ತು. ಅಲ್ಲಿಯ ತನಕ ಭಯಂಕರ ಅಬ್ಬರದಿಂದ ಬರೆಯುವ ಲೇಖಕ, ಕ್ರಮೇಣ slow down ಆಗುತ್ತಾನೆ. ಮೊದಲೆಲ್ಲ ರಭಸದಲ್ಲಿ ಬರೆಯುವಂತೆ, ಆತ ಆ ನಂತರ ಬರೆಯಲಾರ. ‘ಬರೆಯುವಂತಹುದು ನನ್ನಲ್ಲಿ ಏನಿದೆ’ ಎಂದು ತನ್ನನ್ನು ತಾನು ಕೇಳಿಕೊಳ್ಳುತ್ತಾನೆ. ಅದು, ಮುಟ್ಟು ನಿಲ್ಲುತ್ತಿದೆಯೆಂದು ಸೂಚಿಸುವಂಥ ಮನಸ್ಥಿತಿ. ಅಂಥ ಮನೋಸ್ಥಿತಿಯಲ್ಲಿ ಹಟಕ್ಕೆ ಬಿದ್ದು ಅವನೇನಾದರೂ ಬರೆದನೋ, ಅದು ಸಗಣಿ! ಅವನು ಮಲಬದ್ಧತೆಗೆ ಒಳಗಾಗಿ ತಿಣುಕುತ್ತಿದ್ದಾನೆ ಎಂದು ಸಲೀಸಾಗಿ ಗೊತ್ತಾಗಿ ಬಿಡುತ್ತದೆ. ಒಬ್ಬ ಸತ್ಯಕಾಮರ ಹೊರತಾಗಿ ಅವರಂತೆ ಇಳಿ ವಯಸ್ಸಿನಲ್ಲೂ ಪುಂಖ ಪುಂಖ ಬರೆದ ಲೇಖಕರನ್ನು ನಾನು ನೋಡಿಲ್ಲ. ಮನುಷ್ಯ ಈ ಕಾರಣಕ್ಕಾಗಿಯೇ ಮುಪ್ಪಿಗೆ ಹೆದರುತ್ತಾನೆ. ಗಮನಿಸಿ ನೋಡಿ: ಗಾಯಕ ಪಿ.ಬಿ.ಶ್ರೀನಿವಾಸ್ ಮುಪ್ಪಿನಲ್ಲಿ ಹಾಡಿದರೆ, ಅದನ್ನು ಕೇಳಲಾಗುತ್ತಿತ್ತೆ? ಆದರೂ ಅವರು ಹಟಕ್ಕೆ ಬಿದ್ದು ಹಾಡುತ್ತಿದ್ದರು. ಅದು ಘೋರ. ಈಗಾಗಲೇ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗಾಗುತ್ತಿದ್ದಾರೆ. ಪುಣ್ಯಾತ್ಮೆ ಲತಾ ಮಂಗೇಶ್ಕರ್ ಕೈಲಿ ಇನ್ನೂ ಹಾಡಿಸುತ್ತಾರೆ. ಅದೊಂದು ನಂಬಿಕೆ: ಲತಾ ಮಂಗೇಶ್ಕರ್ ಹಾಡಿದರೆ ಆ ಸಿನೆಮಾ hit ಆಗುತ್ತೆ! ಅದಕ್ಕಿಂತ ಹೆಚ್ಚು stupidity ಇನ್ನೊಂದಿದೆಯೇ? ನಿಮಗೆ ಗೊತ್ತಿದೆಯೋ ಇಲ್ಲವೋ: ಪ್ರಕಾಂಡ ಸಂಗೀತ ನಿರ್ದೇಶಕ ಓ.ಪಿ.ನಯ್ಯರ್ ತನ್ನ ಜೀವನದಲ್ಲಿ ಒಂದೇ ಒಂದು ಹಾಡನ್ನೂ ಲತಾ ಕೈಲಿ ಹಾಡಿಸಲಿಲ್ಲ. ಆತನ ಸಿನೆಮಾಗಳು ಒಂದೆರಡಾ? ಅವು ಸಾಲುಗಟ್ಟಿ ಬಂದವು. ಸಾವಿರಾರು ಹಾಡುಗಳಾದವು. Mostly ಮದನ್ ಮೋಹನ್‌ರನ್ನು ಬಿಟ್ಟರೆ ಆ ಪರಿ ಸಾಲು ಸಾಲು hits ನೀಡಿದ್ದು ಓ.ಪಿ.ನಯ್ಯರ್ ಒಬ್ಬರೇ. ಮದನ್ ಮೋಹನ್ ಚೆಂದನೆ ಸಂಗೀತ ನಿರ್ದೇಶಕರು. ಅವರದು ಸದಾ ಲತಾ ಮಂಗೇಶ್ಕರ್‌ರನ್ನು ಬಯಸುವ ಮನಸು. ಸಮಸ್ಯೆಯೆಂದರೆ ನಯ್ಯರ್‌ರಂತೆ ಮೇಲಿಂದ ಮೇಲೆ hits ಕೊಡುತ್ತಿರಲಿಲ್ಲ ಮದನ್ ಮೋಹನ್. ಮೊದ ಮೊದಲು ಹೇಗಿತ್ತೋ ಗೊತ್ತಿಲ್ಲ: ಆದರೆ ಕ್ರಮೇಣ ಓ.ಪಿ. ನಯ್ಯರ್ ಮತ್ತು ಆಶಾ ಭೋಂಸ್ಲೆ ಪ್ರೀತಿಸುತ್ತಿದ್ದಾರೆ ಎಂಬುದು ಖಚಿತವಾಯಿತು. ಒಂದೇ ಮನೆಯಲ್ಲಿ ಅವರು ವಾಸ ಆರಂಭಿಸಿದರು.

ಸಿನೆಮಾದವರಿಗೆ ಅದನ್ನು ಕಟ್ಟಿಕೊಂಡು ಏನಾಗಬೇಕು? ಇಬ್ಬರ ಮಧ್ಯೆ ಕೆಮಿಸ್ಟ್ರಿ ಜಮಾಯಿಸಿದರೆ, ನಿಜಕ್ಕೂ super. ಹಾಗೆ ಆಶಾ ಭೋಂಸ್ಲೆಯೊಂದಿಗೆ ಸಂಸಾರ ಹೂಡಿದ ಮೇಲೆ ನಯ್ಯರ್ crazy ಅನ್ನಿಸುವಷ್ಟು ಹಾಡು ಸೃಷ್ಟಿಸಿದರು. ಅದಕ್ಕೆ ಸಂಬಂಧಿಸಿದಂತೆ ಒಂದು ಸಂಗತಿ ಇದೆ. ಅವರು ಆಶಾ ಭೋಂಸ್ಲೆಯವರನ್ನು ಪ್ರೀತಿಸಲಾರಂಭಿಸಿದ ಮೇಲೇನೂ ನಯ್ಯರ್ ಅವರು “ಲತಾ ಮಂಗೇಶ್ಕರ್‌ಳಿಂದ ಹಾಡಿಸೋದಿಲ್ಲ" ಅನ್ನಲಿಲ್ಲ. ಮೊದಲು ನಯ್ಯರ್ ಒಂದು ಹೊಟೇಲಿನಲ್ಲಿ ಒಬ್ಬಂಟಿಯಾಗಿ ರೂಮು ಮಾಡಿಕೊಂಡು ಇದ್ದರಲ್ಲ? ಅವರಿಗೆ ಕೈಯಲ್ಲಿ ಕೆಲಸವಿರಲಿಲ್ಲ. ರಾತ್ರಿಯ ಊಟಕ್ಕೂ ಕಷ್ಟ. ಹಾಗಿದ್ದಾಗ ಒಬ್ಬ ಪ್ರೊಡ್ಯೂಸರ್ ಬಂದು “ನನ್ನ ಚಿತ್ರಕ್ಕೆ ಸಂಗೀತ ಮಾಡಿಕೊಡಿ" ಅಂದ. “ಮಾಡಿ ಕೊಡ್ತೇನೆ. ಆದರೆ ಒಂದು ಸಮಸ್ಯೆ. ನಾನು ಲತಾ ಮಂಗೇಶ್ಕರ್ ಕೈಲಿ ಹಾಡಿಸೋದಿಲ್ಲ!" ಅಂದಿದ್ದರು ಓ.ಪಿ. ನಯ್ಯರ್. ಅದರರ್ಥ ಲತಾರನ್ನು ನಯ್ಯರ್ ದ್ವೇಷಿಸುತ್ತಿದ್ದರು ಅಂತೇನಲ್ಲ. ಆಕೆಯನ್ನು ದೂರವಿರಿಸಿ ಆಶಾ ಭೋಂಸ್ಲೆಯವರನ್ನು ಮೆಚ್ಚಿಸಲು ಯತ್ನಿಸಿದರು ಅಂತಲೂ ಅಲ್ಲ. He just kept her away. ‘ಅವಕಾಶ ಕೊಡಿ’ ಅಂತ ತಲಬಾಗಿಲಿನಲ್ಲಿ ನಿಂತು ಲತಾ ಕೂಡ ಅಂಗಲಾಚಲಿಲ್ಲ.

ಅವತ್ತಿಗಾಗಲೇ ಆಶಾ ಮತ್ತು ಲತಾ ಮಧ್ಯೆ minimum ಮಾತೂ ಇರಲಿಲ್ಲ. ಒಂದರ್ಥದಲ್ಲಿ ಆಶಾ ನತದೃಷ್ಟೆ. ತೀರ ಚಿಕ್ಕವಳಿದ್ದಾಗಲೇ ಆಕೆ ತನ್ನ ಗೆಳೆಯ ಭೋಂಸ್ಲೆಯೊಂದಿಗೆ ಮನೆಬಿಟ್ಟು ಹೋಗಿ ಮದುವೆಯಾದರು. ಮುಂದೆ ಭೋಂಸ್ಲೆ ಅಕಾಲ ಮರಣಕ್ಕೆ ಈಡಾದಾಗ ಆಶಾ ಆಶ್ರಯ ಪಡೆದದ್ದು ಓ.ಪಿ. ನಯ್ಯರ್‌ರೊಂದಿಗೆ. ಆ ಸ್ನೇಹ ಅನೇಕ ವರ್ಷ ಮುಂದುವರೆಯಿತು. ಒಂದರ್ಥದಲ್ಲಿ ಅದು ಸಂಸಾರವೇ. ಆ ಹೊತ್ತಿಗೆ ಓ.ಪಿ. ನಯ್ಯರ್ ಗಾಯಕಿ ಗೀತಾ ದತ್‌ಳಿಂದ ಬೇರೆಯಾಗಿದ್ದರು. ವರ್ಷಗಟ್ಲೆ ಆಶಾಳೊಂದಿಗೆ ಇದ್ದ ಆತ, ಅದೊಂದು ದಿನ studioದಲ್ಲಿ ಕೆಲಸ ಮುಗಿಸಿ ಹಿಂತಿರುಗಿದ ನಂತರ ಹಾಳೆಯೊಂದರಲ್ಲಿ ಏನೋ ಲೆಕ್ಕ ಬರೆದು, “ಮುಂದಿನ ತಿಂಗಳು ನೀನು ಈ ಮನೆಯಿಂದ ಹೊರ ಬೀಳಬೇಕು. ಅಲ್ಲಿಗೆ ಋಣ ಮುಗಿದಂತೆಯೇ" ಅಂದರು. ಪಟ್ಟು ಹಿಡಿದು ಕಾರಣ ಕೇಳಿದುದಕ್ಕೆ “ನನ್ನ ಸಂಖ್ಯಾ ಶಾಸ್ತ್ರ ಹಾಗಂತ ಹೇಳ್ತಿದೆ" ಅಂದಿದ್ದರು. ನಯ್ಯರ್‌ರಿಂದ ಹಾಗೆ ದೂರವಾದ ಮೇಲೆ ಆಶಾ ಹೋಗಿ ಆಶ್ರಯ ಪಡೆದದ್ದು ಆರ್.ಡಿ. ಬರ್ಮನ್ ಬಳಿ. ಅದು ಮತ್ತೊಂದು mega hits ಕಾಲ. ಮೂಲತಃ ಆರ್.ಡಿ. ಬರ್ಮನ್ ಕ್ರಿಯಾಶೀಲ ಮನುಷ್ಯ. ಆ ಜೋಡಿ ಅದ್ಭುತವಾಗಿ ಮೆರೆಯಿತು. ಹ್ಞಾಂ, ಆಶಾಳನ್ನು ಬಿಟ್ಟ ಹಾಗೆಯೇ, ಅದೊಂದು ದಿನ ಓ.ಪಿ. ನಯ್ಯರ್ ಸಂಗೀತ ನಿರ್ದೇಶನವನ್ನೂ ಬಿಟ್ಟರು. ಕೇಳಿದ್ದಕ್ಕೆ “ಸಂಖ್ಯಾ ಶಾಸ್ತ್ರವೇ ಹಾಗೆ" ಅಂದರು. ತಮ್ಮ ಅಭಿಮಾನಿಯೊಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇರತೊಡಗಿದರು. ಹೊಟ್ಟೆಪಾಡಿಗಾಗಿ ಅವರು ಜೀವನದ ಇಳಿಸಂಜೆಯಲ್ಲಿ ಮಾಡಿದುದೇನು ಗೊತ್ತೆ? ಅವರು ಹೋಮಿಯೋಪಥಿ ವೈದ್ಯರಾಗಿದ್ದರು!

ನಿಮಗೆ ಬೇಕು ಅಂದರೆ ಹೇಳಿ; ಇಂಥ ನೂರಾರು ಸಂಗತಿಗಳನ್ನು ಹೇಳ ಬಲ್ಲೆ. ಈ creative ಜೀವಿಗಳೇ ಹಾಗೆ. ವಿಕ್ಷಿಪ್ತ ನಡವಳಿಕೆ, ತಮಗಷ್ಟೆ ಅರ್ಥವಾಗುವಂತಹ ನಿಲುವುಗಳು, ಕೈಗೊಳ್ಳುವ ನಿರ್ಧಾರಗಳು-ಇವು ಬಡಪೆಟ್ಟಿಗೆ ಅರ್ಥವಾಗುವಂತಹ ಸಂಗತಿಗಳಲ್ಲ. ಅಷ್ಟೇಕೆ, ಖ್ಯಾತನಾಮರಾದ ಗುಲ್ಜಾರ್ ಸಾಬ್‌ರನ್ನೇ ನೋಡಿ. ಅವರು ಮೊದಲು ಮೋಹಗೊಂಡಿದ್ದು ಮೀನಾಕುಮಾರಿಯೆಡೆಗೆ. ಆಕೆಗೂ ಗುಲ್ಜಾರ್ ಇಷ್ಟವಾದರು. ಅದರಿಂದಾಗಿ ಕಮಲ್ ಅಮ್ರೋಹಿಯೊಂದಿಗಿನ ಆಕೆಯ ಸಂಸಾರ ಒಡೆದೇ ಹೋಯಿತು. ಆದರೆ ಆಕೆ ಗುಲ್ಜಾರ್‌ರನ್ನು ಮದುವೆಯಾಗಲಿಲ್ಲ. ಮುಂದೆ ಗುಲ್ಜಾರ್ ಮದುವೆಯಾದದ್ದು ಬೆಂಗಾಲ್‌ನ ರಸಗುಲ್ಲಾ ಥರ ಇದ್ದ ರಾಖಿಯನ್ನ! ಆದರೆ ಆ ದಾಂಪತ್ಯ ಬಹುಕಾಲ ಬರ್ಕತ್ತಾಗಲಿಲ್ಲ. ಅವರಿಗಾಗಲೇ ಮೇಘನಾ ಹುಟ್ಟಿದ್ದಳು. ರಾಖಿ ನಟಿಸಿ ಇನ್ನಷ್ಟು ಖ್ಯಾತಿಗೆ ಒಳಗಾಗೋದು ಗುಲ್ಜಾರ್ ಅವರಿಗೆ ಇಷ್ಟವಾಗಲಿಲ್ಲ. ಅವರು ವಿಪರೀತ ಪೊಸೆಸಿವ್ ಆದರು. ಆದ್ದರಿಂದಲೇ ರಾಖಿಯನ್ನು ದೂರ ಮಾಡಿದರು ಎಂದು ಮಾತನಾಡಿದರು ಜನ. ಇವತ್ತಿಗೂ ರಾಖಿ ಮತ್ತು ಗುಲ್ಜಾರ್ ಬೇರೆ ಬೇರೆ ಆಗಿಲ್ಲ. ಡಿವೋರ್ಸ್ ಪಡೆದಿಲ್ಲ. ಆದರೆ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ. ಅಂದ್ಹಾಗೆ, ಮೀನಾಕುಮಾರಿಯ ಬಗ್ಗೆ ಒಂದು ಸಂಗತಿ ಹೇಳಬೇಕು. ಆಕೆಯ ಪತಿ ಅಂತ ಇದ್ದುದು ಕಮಲ್ ಅಮ್ರೋಹಿ. ಆದರೆ ಪ್ರಿಯತಮ ಗುಲ್ಜಾರ್. ಆನಂತರ ಸನಿಹವಾದದ್ದು ನಟ ಧರ್ಮೇಂದ್ರ. ಈ ಮಧ್ಯೆ ಕೈ ಚಾಚಿದ್ದು ಹಿಂದಿ ನಾಯಕ ನಟ ರಾಜಕುಮಾರ್! ಕಟ್ಟಕಡೆಯ ಆಸರೆ ಅಂತ ಒದಗಿ ಬಂದದ್ದು ಕೇವಲ ವಿಸ್ಕಿ! ಆಕೆ ಕುಡಿ ಕುಡಿದೇ ಸತ್ತು ಹೋದಳು.

ಇವುಗಳನ್ನೆಲ್ಲ ವಿವರಿಸುತ್ತಿದ್ದರೆ, ಇವ್ಯಾಕೆ ಬೇಕು ಹಾದರದ ಕತೆಗಳು ಅನ್ನುತ್ತೀರೇನೋ? ‘ಹಾದರ’ ಅಂತ ನೀವು ಯಾವುದಕ್ಕೆ ಅನ್ನುತ್ತೀರೋ ಗೊತ್ತಿಲ್ಲ. ಇವೆಲ್ಲವುಗಳಿಂದ ಯಾರಿಗಾದರೂ ಅನ್ಯಾಯವಾಯಿತಾ? ಸಿನೆಮಾಗೆ, ಸಂಗೀತಕ್ಕೆ, ನಟನೆಗೆ, ಹಾಡುಗಾರಿಕೆಗೆ ಅನ್ಯಾಯವಾಯಿತೆ? No.

ಸತ್ಯಕಾಮರು ‘ಬರೆಸು’ ಅಂದದ್ದರಲ್ಲಿದ್ದ ಅರ್ಥವೇನು ಗೊತ್ತೆ? “Treat me well!" ಆದರೆ ಅಷ್ಟನ್ನೂ ಮಾಡಲಾಗದ ಸ್ಥಿತಿಯಲ್ಲಿ ನಾನಿದ್ದೆ. ಅಸಲಿಗೆ ನನಗೇ ‘ಸಂಯುಕ್ತ ಕರ್ನಾಟಕ’ದಲ್ಲಿ ಗ್ಯಾರಂಟಿಯಾದ ನೆಲೆ ಇರಲಿಲ್ಲ. ಕೆಲವು ದಶಕಗಳ ಹಿಂದೆ ಸ್ವತಃ ಸತ್ಯಕಾಮರೇ ‘ಸಂ.ಕ’ದಲ್ಲಿ ನೌಕರಿಗಿದ್ದರು. ಸಿಟ್ಟಿಗೆದ್ದು, ಅಕ್ಷರಶಃ ತಮ್ಮ ಪಂಚೆಯೊಳಕ್ಕೆ ಕೈ ಹಾಕಿ ಅಧೋರೋಮದ ಎರಡು ಎಸಳು ಕಿತ್ತು ಸಂ.ಕದ ಸರ್ವೋಚ್ಚ ಹಿರಿಯನ ಮುಂದೆ ಇರಿಸಿ ಹೊರಬಿದ್ದಿದ್ದರು ಪುಣ್ಯಾತ್ಮ. ಅದಾದ ಮೇಲೆ ಅವರ ಮತ್ತು ‘ಸಂ.ಕ’ದ ಸಂಬಂಧ ಸರಿ ಹೋಗಲೇ ಇಲ್ಲ. “ಅವರು ಇಲ್ಲೇ ಇದ್ರಲ್ವಾ? ಇಲ್ಲೇ ನೌಕರಿ ಮಾಡಿದೋರು. ಅವರಿಗೇನು extra ಮರ್ಯಾದೆ ಕೊಡೋದು?" ಎಂಬ ನಿಲುವು ‘ಸಂಯುಕ್ತ ಕರ್ನಾಟಕ’ದಲ್ಲಿತ್ತು. ನನ್ನಂಥ ಹೊಸಬ ಬಂದಾಗ, “ಇವರಿಗೆ ಇನ್ನಾದರೂ ಬುದ್ಧಿ ಬಂತೇ? ನೋಡೋಣ" ಎಂಬ ಕುತೂಹಲ ಸತ್ಯಕಾಮರದು. ಮಣಿಪಾಲದಲ್ಲಿ ಸತ್ಯಕಾಮರಿಗೆ ಅಲ್ಲಿನ guest houseನಲ್ಲಿ ಕೋಣೆ ಕೊಡುತ್ತಿದ್ದರು. ಜೊತೆಗೆ ಊಟ-ತಿಂಡಿ. ಅಲ್ಲೇ ದಿನಗಟ್ಟಲೆ ಉಳಿದು ಅದ್ಭುತವಾದ್ದೊಂದು ಕಾದಂಬರಿ ಬರೆದೆಸೆಯುತ್ತಿದ್ದರು ಆ ಹಿರಿಯ. ಅದಾದ ಐದೇ ನಿಮಿಷಕ್ಕೆ ಮಣಿಪಾಲದ ಪೈಗಳಿಂದ ಅವರಿಗೆ ಸಮೃದ್ಧವಾದ purse ಸಂದಾಯವಾಗುತ್ತಿತ್ತು. ಅದೆಲ್ಲ ಮಾಡಲು ನನ್ನಿಂದ ಸಾಧ್ಯವೇ ಇರಲಿಲ್ಲ. ಒಮ್ಮೆ ‘ಕರ್ಮವೀರ’ದ ದೀಪಾವಳಿ ಸಂಚಿಕೆ ಸಿದ್ಧಪಡಿಸಿದ್ದೆ. ಅನೇಕ ಕವಿ-ಲೇಖಕರಿಗೆ ಪತ್ರ ಬರೆದು ಕತೆ-ಕವಿತೆ ಬರೆಸಿದ್ದೆ. ಎಲ್ಲ ಮುಗಿದ ಮೇಲೆ ಕವಿ-ಲೇಖಕರಿಗೆ ಕೊಡಬೇಕಾದ ಗೌರವ ಧನದ ಪಟ್ಟಿ ಸಿದ್ಧಪಡಿಸಿ, ಶಾಮರಾಯರ ಮುಂದಿಟ್ಟೆ. “ಏಯ್ ರವೀ, ನಿಂಗೇನು ತಲೆ ಕೆಟ್ಟಿದೆಯೇನು? ಕಥೆ ಬರೆದ ಕುಂ.ವೀರಭದ್ರಪ್ಪನಿಗೆ ಐದು ನೂರಾ ಕೊಡೋದು? Non-sense!" ಅಂದವರೇ ನಾನು ಹಾಕಿದ ಐದು ನೂರು ರುಪಾಯಿ ಹೊಡೆದು ಹಾಕಿ, ಆ ಜಾಗದಲ್ಲಿ ‘ಎಪ್ಪತ್ತೈದು ರುಪಾಯಿ’ ಅಂತ ಬರೆದು ಬಿಟ್ಟಿದ್ದರು. ಗೆಳೆಯ ಕುಂ.ವೀರಭದ್ರಪ್ಪ ತಕ್ಷಣ reply ಮಾಡಿದ. “ನಿಮ್ಮ ಪತ್ರಿಕೆ ನಡೆಸುವ ಲೋಕ ಶಿಕ್ಷಣ ಟ್ರಸ್ಟ್ ಬಹುಶಃ ದಿವಾಳಿ ಎದ್ದಿರಬೇಕು. ಆರ್ಥಿಕ ಸಂಕಷ್ಟದಲ್ಲಿರುವ ನೀವು ಈ ಎಪ್ಪತ್ತೈದು ರುಪಾಯಿಗಳನ್ನು ನಿಮ್ಮದೇ ಬೊಕ್ಕಸಕ್ಕೆ ಸೇರಿಸಿರಿ!" ಅಂತ ಬರೆದಿದ್ದ. “ನೋಡು, ನೀನು ಮಾಡೋದೆಲ್ಲಾ ಹೀಗೇ! ಅವನ ಕಥೆ ಪಬ್ಲಿಷ್ ಮಾಡಿದ್ದೇ ಅಲ್ಲದೆ ಇಂಥ ಮಾತು ಕೇಳಿಸಿಕೊಳ್ಳಬೇಕಾಯ್ತು. ಇನ್ಮೇಲೆ ಇವನ ಕಥೆ ಪಬ್ಲಿಷ್ ಮಾಡಬ್ಯಾಡ!" ಅಂದರು ರಾಯರು. ನಾನು ಏನು ಮಾಡಲಿ, ಹೇಳಿ?

ಸತ್ಯಕಾಮರಿಗೆ ಆ ಪರಿವ್ರಾಜಕ ಮನಸಿತ್ತು. ಒಂದೆಡೆಗೆ ನಿಲ್ಲುವ ಜಾಯಮಾನವಲ್ಲ. ಅವರಿಗೆ ಶಾಶ್ವತವಾದ ಆಕರ್ಷಣೆ ಅಂತ ಇದ್ದುದು ಹಿಮಾಲಯದೆಡೆಗೆ. ಅಲ್ಲಿ ತಿಂಗಳುಗಟ್ಟಲೆ ಆ ಹಿಮದ ಇಳಿಜಾರಿನಲ್ಲಿ ಕುಳಿತು ಧೇನಿಸುವ ವಿದ್ಯೆ ಗೊತ್ತಿತ್ತು. ಕರ್ನಾಟಕದಲ್ಲಷ್ಟೇ ಅಲ್ಲ: ಇಡೀ ದೇಶದಲ್ಲಿ ‘ತಂತ್ರ’ ಅಂದರೇನೆಂದು ಸರಿಯಾಗಿ ತಿಳಿದುಕೊಂಡಿದ್ದವರು ಐದಾರು ಮಂದಿ ಇದ್ದಿರಬಹುದು. ಆ ಪೈಕಿ ಸತ್ಯಕಾಮರಿರುವುದು ಹೌದು. ಆದರೆ ಅಪ್ಪಿತಪ್ಪಿಯೂ ಅವರು ಯಾರದೂ ಜಾತಕ ನೋಡುತ್ತಿರಲಿಲ್ಲ. ಮಾಯ-ಮಂತ್ರ ಮಾಡಿ ತೋರಿಸುತ್ತಿರಲಿಲ್ಲ. He was not a magician. ಅವರಂತೆಯೇ ‘ತಂತ್ರ’ ಅರ್ಥ ಮಾಡಿಕೊಂಡದ್ದು, ಆಚಾರ್ಯ ರಜನೀಶ್.

“ಆದ್ರೆ ನಿಮ್ಮ ಬಗ್ಗೆ ಅಂಥ opinion ಇದೆ. ಜಮಖಂಡಿಯಲ್ಲಿ ಮತ್ತು ಹುಬ್ಬಳ್ಳಿಯಲ್ಲಿ, ಏಕಕಾಲದಲ್ಲೇ ನೀವು ಕಾಣಿಸಿಕೊಂಡಿದ್ದಿರಂತೆ..." ಅಂತ ಕೇಳಿದೆ.

“ಸುಟ್ಟಿತು!" ಅಂದರಷ್ಟೆ.

ಸತ್ಯಕಾಮರು ಇನ್ನಷ್ಟು ಕಾಲ ಬದುಕಬೇಕಾಗಿತ್ತು. At least, ಅವರೊಂದಿಗೆ ನಾನು ಇನ್ನಷ್ಟು ಕಾಲ ಕಳೆಯಬೇಕಾಗಿತ್ತು.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 January, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books