Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ವಂಶ ಪಾರಂಪರ‍್ಯ ರಾಜಕಾರಣಕ್ಕೆ ಇಂಡಸ್ಟ್ರಿ ಎಂಬ ಸ್ಥಾನಮಾನ ಕೊಟ್ಟರೆ ಹೇಗೆ?

ವಂಶ ಪಾರಂಪರ‍್ಯ ರಾಜಕಾರಣಕ್ಕೆ ಇಂಡಸ್ಟ್ರಿಯ ಸ್ಥಾನಮಾನ ಕೊಟ್ಟರೆ ಹೇಗೆ? ಅಪ್ಪನ ಗಳಿಕೆಯನ್ನು ಮಗ ಬಂಡವಾಳವಾಗಿ ಹೂಡಿ ಲಾಭ ಪಡೆಯುವುದು, ಆತ ಗಳಿಸಿದ್ದನ್ನು ಅವನ ಮಕ್ಕಳು ಬಂಡವಾಳವಾಗಿ ಹೂಡಿ ಲಾಭ ತೆಗೆದುಕೊಳ್ಳುವುದು. ಇದು ಇಂಡಸ್ಟ್ರಿಯಲ್ಲದೆ ಇನ್ನೇನು? ಹಾಗಂತ ನನ್ನ ಸ್ನೇಹಿತರೊಬ್ಬರು ಹೇಳಿದರು. ಅರೇ, ಹೌದಲ್ಲ ಎಂದೆ. ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಮುಗಿಯುತ್ತಿದ್ದಂತೆಯೇ ಒಂದು ವಿಷಯ ರಾಜ್ಯದ ಜನರಿಗೆ ಮತ್ತಷ್ಟು ಸ್ಪಷ್ಟವಾಗಲಿದೆ ನೋಡಿ ಅಂತ ಆತ ಎದ್ದು ಹೋದ. ನಾನು ಸುಮ್ಮನೆ ಯೋಚಿಸುತ್ತಾ ಕುಳಿತೆ. ಇವತ್ತು ದೇಶದ ದೊಡ್ಡ ದೊಡ್ಡ ನಾಯಕರು ಅಂತ ಯಾರಿದ್ದಾರೆ? ಈ ಪೈಕಿ ಬಹುತೇಕ ಜನ ತಾವು ಮೆರೆದಿದ್ದಲ್ಲದೆ ತಮ್ಮ ಮಕ್ಕಳು, ಮೊಮ್ಮಕ್ಕಳನ್ನೂ ಮೆರೆಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಹೋದರೆ ಪ್ರಜಾಪ್ರಭುತ್ವದ ನಿಜವಾದ ಸೊಗಡು ಉಳಿಯಲು ಸಾಧ್ಯವೇ ಅನ್ನಿಸಿತು.

ಅಂದ ಹಾಗೆ ಸಮಾಜದ ಕಟ್ಟ ಕಡೆಯ ಮನುಷ್ಯನೊಬ್ಬನಿಗೂ ಪ್ರಧಾನಿ ಹುದ್ದೆಯ ತನಕ ಏರುವ ಅವಕಾಶ ಇದುವರೆಗೂ ಬಂದಿದೆ. ಆದರೆ ವಂಶಪಾರಂಪರ‍್ಯ ರಾಜಕಾರಣ ಬೆಳೆಯುತ್ತಿರುವ, ಆವರಿಸುತ್ತಿರುವ ಪರಿ ನೋಡಿದರೆ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಈ ಸೊಗಡು ಕಳೆದು ಹೋಗುವುದು ನಿಶ್ಚಿತ. ಬದಲಿಗೆ, ಬ್ರಿಟಿಷರು ಭಾರತಕ್ಕೆ ಬಂದಾಗ ಇದ್ದಂತೆ ನೂರಾರು ಸಂಸ್ಥಾನಗಳು ಇದ್ದಂತೆ ಒಂದೊಂದು ರಾಜ್ಯದಲ್ಲೂ ಕುಟುಂಬದ ಸಂಸ್ಥಾನಗಳು ಸ್ಥಾಪನೆಯಾಗುವುದು ನಿಶ್ಚಿತ. ಈಗಿನ ರಾಜಕಾರಣದ ನಡೆಯನ್ನು ನೀವು ನೋಡಿ. ನಿಮಗೆ ಹಾಗನ್ನಿಸದಿದ್ದರೆ ಹೇಳಿ. ಅಂದ ಹಾಗೆ, ಮುಂದಿನ ದಿನಗಳಲ್ಲಿ ಸಾಮಾನ್ಯ ಕುಟುಂಬದಿಂದ ಬಂದವರು ಜನಪ್ರತಿನಿಧಿಗಳಾಗುವುದು ಕಷ್ಟವಾಗುತ್ತಾ ಹೋಗಲಿದೆ ಎಂಬುದು ಮೊನ್ನೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿಯೇ ಸ್ಪಷ್ಟವಾಗಿ ಹೋಗಿದೆ. ಈ ಚುನಾವಣೆಯಲ್ಲಿ ಕರ್ನಾಟಕದ ಮೂರು ರಾಜಕೀಯ ಪಕ್ಷಗಳು ಸೇರಿ ಒಟ್ಟಾರೆಯಾಗಿ ಐನೂರು ಕೋಟಿ ರುಪಾಯಿಗಳಿಗಿಂತ ಹೆಚ್ಚು ಹಣ ಖರ್ಚು ಮಾಡಿದವು. ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯ ಪಕ್ಷಗಳ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆದವರ ಪೈಕಿ ಬಹುತೇಕರಿಗೆ ಶಕ್ತಿಯುತ ಹಿನ್ನೆಲೆ ಇತ್ತು. ಅರ್ಥಾತ್, ಉದ್ಯಮಿಗಳು, ರಾಜಕಾರಣಿಗಳು ಹೀಗೆ ಬಹುತೇಕ ಸ್ಪರ್ಧಿಗಳು ಈ ಕೆಟಗರಿಯಿಂದಲೇ ಬಂದವರಾಗಿದ್ದರು.

ಒಂದು ಕಾಲದಲ್ಲಿ ಜವಾಹರಲಾಲ್ ನೆಹರೂ ಬಿತ್ತಿದ ವಂಶಪಾರಂಪರ‍್ಯ ರಾಜಕಾರಣದ ಬೀಜವನ್ನು ವಿರೋಧಿಸಿ ಜನತಾ ಪಕ್ಷ ರಾಷ್ಟ್ರ ರಾಜಕೀಯದಲ್ಲಿ ಮೇಲಕ್ಕೆದ್ದಿತ್ತು. ನೆಹರೂ ಅವರ ನಂತರ ಇಂದಿರಾ ಗಾಂಧಿ ಮೇಲೆದ್ದ ರೀತಿಯಿಂದ, ಎದುರಾಳಿಗಳನ್ನು ಹಣಿದ ರೀತಿಯಿಂದ ಅಸಮಾಧಾನಗೊಂಡ ಬಹುತೇಕರು ಒಂದುಗೂಡಿದರು. ಜಯಪ್ರಕಾಶ್ ನಾರಾಯಣ್‌ರ ಸರ್ವೋದಯ ಚಳವಳಿ ಮೇಲೆದ್ದು ಇಂತಹ ವಿರೋಧಗಳಿಗೆ ವೇದಿಕೆಯಾಯಿತು. ಮುಂದಿನದು ಇತಿಹಾಸ. ಅಂದ ಹಾಗೆ ರಾಷ್ಟ್ರ ರಾಜಕಾರಣದಲ್ಲಿ ವಂಶಪಾರಂಪರ‍್ಯ ರಾಜಕಾರಣವನ್ನು ವಿರೋಧಿಸಿದವರಲ್ಲಿ ದೇವೆಗೌಡ, ಮುಲಾಯಂಸಿಂಗ್ ಯಾದವ್, ಲಾಲೂಪ್ರಸಾದ್ ಯಾದವ್, ಬಿಜು ಪಾಟ್ನಾಯಕ್ ಸೇರಿದಂತೆ ಹಲವು ರಾಜಕಾರಣಿಗಳು ಪ್ರಮುಖರು. ಕುತೂಹಲದ ಸಂಗತಿ ಎಂದರೆ ಮುಂದೆ ದೇವೆಗೌಡರ ಮಗ ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾದರು. ಮತ್ತೊಬ್ಬ ಪುತ್ರ ರೇವಣ್ಣ ಸಚಿವರಾದರು. ಮುಲಾಯಂಸಿಂಗ್ ಯಾದವ್ ಅವರ ಮಗ ಅಖಿಲೇಶ್ ಯಾದವ್ ಇವತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ.

ಇನ್ನು ಮೇವು ಹಗರಣಕ್ಕೆ ಸಿಲುಕಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡ ಲಾಲೂಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿ ಹುದ್ದೆಗೆ ತಮ್ಮ ಪತ್ನಿ ರಾಬ್ಡಿ ದೇವಿ ಅವರನ್ನು ತಂದು ಕೂರಿಸಿದರು. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯ ನಂತರ ಒಬ್ಬ ಪುತ್ರನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಬಿಹಾರದಲ್ಲಿ ಬಿಜು ಪಾಟ್ನಾಯಕ್ ಅವರ ಮಗ ನವೀನ್ ಪಾಟ್ನಾಯಕ್ ಅವರೇ ಸದ್ಯದ ಮುಖ್ಯಮಂತ್ರಿ. ಹೀಗೆ ಹೇಳುತ್ತಾ ಹೋದರೆ ಹಿಂದೆ ಯಾರ‍್ಯಾರು ವಂಶಪಾರಂಪರ‍್ಯ ರಾಜಕಾರಣವನ್ನು ವಿರೋಧಿಸಿದ್ದರೋ? ಅವರೇ ಈಗ ವಂಶಪಾರಂಪರ‍್ಯ ರಾಜಕಾರಣದ ಮೊರೆ ಹೊಕ್ಕಿದ್ದಾರೆ. ಕೇಳಿದರೆ, ಅರೇಸ್ಕೀ. ತಮ್ಮ ಸ್ವಯಂ ಸಾಮರ್ಥ್ಯದ ಮೇಲೆ ಒಬ್ಬರು ರಾಜಕೀಯಕ್ಕೆ ಬರಬಾರದು ಎಂದಿದೆಯೇ? ನಮ್ಮ ಮಕ್ಕಳಾದರೇನು? ಯಾರ ಮಕ್ಕಳಾದರೇನು? ಅಂತ ಈ ಹಿಂದೆ ವಂಶಪಾರಂಪರ‍್ಯ ರಾಜಕಾರಣವನ್ನು ವಿರೋಧಿಸಿದ್ದವರೇ ಬಹಿರಂಗವಾಗಿ ಹೇಳತೊಡಗಿದರು.

ಪರಿಣಾಮವಾಗಿ ಇವತ್ತು ಎಲ್ಲ ರಾಜಕೀಯ ಪಕ್ಷಗಳೂ ವಂಶಪಾರಂಪರ‍್ಯ ರಾಜಕಾರಣವನ್ನು ಹೆಚ್ಚೆಚ್ಚಾಗಿ ಅವಲಂಬಿಸತೊಡಗಿವೆ. ಮಾಜಿ ಪ್ರಧಾನಿ ದೇವೆಗೌಡರ ಕುಟುಂಬದಿಂದ ಈಗಾಗಲೇ ರೇವಣ್ಣ ಅವರ ಪತ್ನಿ ಶ್ರೀಮತಿ ಭವಾನಿ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ವಾಸ್ತವವಾಗಿ ಮೊನ್ನೆ ಹಾಸನದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಶ್ರೀಮತಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು. ಜೆಡಿಎಸ್ ವತಿಯಿಂದ ಅವರೇ ಅಭ್ಯರ್ಥಿಯಾಗಬೇಕು ಎಂಬ ಕೂಗು ದೊಡ್ಡ ಮಟ್ಟದಲ್ಲೇ ಕೇಳಿ ಬಂತು. ಆದರೆ ದೇವೆಗೌಡರು, ಬೇರೊಬ್ಬರಿಗೆ ಟಿಕೆಟ್ ನೀಡಿದರೆ ಏನಾಗುತ್ತದೆ? ಎಂಬ ಮೆಸೇಜು ಕಾರ್ಯಕರ್ತರಿಗೆ ಹೋಗಲಿ ಎಂದೇ ಪಟೇಲ್ ಶಿವರಾಂ ಅವರಿಗೆ ಟಿಕೆಟ್ ನೀಡಿದರು. ಹಾಸನದಲ್ಲಿ ಜೆಡಿಎಸ್‌ಗಿದ್ದ ಪವರ್‌ಗೆ ಹೋಲಿಸಿದರೆ ಪಟೇಲ್ ಶಿವರಾಂ ಸೋಲುವಂತೆಯೇ ಇರಲಿಲ್ಲ. ಆದರೂ ಸೋತರು. ಯಾಕೆಂದರೆ ಜೆಡಿಎಸ್‌ನವರೇ ಮುಂಚೂಣಿಯಲ್ಲಿ ನಿಂತು ಅವರನ್ನು ಸೋಲಿಸಿದರು. ಹೀಗಾಗಿ ಶ್ರೀಮತಿ ಭವಾನಿ ರೇವಣ್ಣ ಅವರ ಮುಂದಿನ ದಾರಿ ಸುಗಮವಾಗಿದೆ. ಇದೇ ಪ್ರಜ್ವಲ್ ರೇವಣ್ಣ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇವೆಗೌಡರ ಉತ್ತರಾಧಿಕಾರಿಯನ್ನಾಗಿ ಹಾಸನದ ಕ್ಯಾಂಡಿಡೇಟ್ ಮಾಡಲು ತೀರ್ಮಾನಿಸಲಾಗಿದೆ.

ಇವತ್ತು ಚಿತ್ರರಂಗಕ್ಕೆ ಪ್ರವೇಶ ಕೊಟ್ಟಿರುವ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅವರೂ ರಾಜಕೀಯಕ್ಕೆ ಎಂಟ್ರಿ ಕೊಡುವುದು ಗ್ಯಾರಂಟಿ. ಅವರಿಗೆಂದೇ ರಾಮನಗರ ವಿಧಾನಸಭಾ ಕ್ಷೇತ್ರವನ್ನು ಕುಮಾರಸ್ವಾಮಿ ಉಳಿಸಿಕೊಳ್ಳುತ್ತಿದ್ದಾರೆ. ಹೀಗೆ ಅವಲೋಕಿಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ವಿಧಾನಸಭೆಯಲ್ಲಿ ದೇವೆಗೌಡರ ಕುಟುಂಬದ ಅರ್ಧ ಡಜನ್ ಸದಸ್ಯರು ವಿಧಾನಸಭೆಯಲ್ಲಿ, ಒಂದಿಬ್ಬರು ಲೋಕಸಭೆಯಲ್ಲಿ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ. ಹಾಗಂತ ಇದು ದೇವೆಗೌಡರ ಕುಟುಂಬಕ್ಕೆ ಮಾತ್ರವೇ ವಂಶಪಾರಂಪರ‍್ಯ ರಾಜಕಾರಣದ ಪ್ರೀತಿ ಅಂಟಿಕೊಂಡಿದೆ ಎಂದಲ್ಲ. ಬಿಜೆಪಿಯ ಸರ್ವೋಚ್ಚ ನಾಯಕ ಯಡಿಯೂರಪ್ಪನವರ ಮಗ ರಾಘವೇಂದ್ರ ವಿಧಾನಸಭೆಯ ಸದಸ್ಯರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೆಟ್ಟರ್ ಈಗ ವಿಧಾನಪರಿಷತ್ತಿನ ಸದಸ್ಯರು. ಉದಾಸಿ ಅವರ ಮಗ ಶಿವಕುಮಾರ್ ಉದಾಸಿ ಸಂಸದರು. ಉಮೇಶ್ ಕತ್ತಿ ಅವರ ಸಹೋದರ ಕೂಡ ಸಂಸದರಾಗಿದ್ದವರೇ. ಕಾಂಗ್ರೆಸ್‌ನ ಮಾತು ಬಿಡಿ. ಒಂದೇ ಕುಟುಂಬದಲ್ಲಿ ಸಂಸದರು, ಶಾಸಕರನ್ನು ಹೊಂದಿದ ಅನೇಕ ನಾಯಕರ ಕುಟುಂಬಗಳು ಕಾಂಗ್ರೆಸ್‌ನಲ್ಲಿವೆ.

ಅಂದ ಹಾಗೆ ಹಿಂದೆ ಧನವಂತರು ತಮ್ಮ ಹಣ ಬಲದ ಆಧಾರದ ಮೇಲೆ ಗೆದ್ದು ಬರುತ್ತಾರೆ ಎಂಬ ಮಾತಿತ್ತು. ಅದಕ್ಕೂ ಮುಂಚೆ ಜಾತಿಯ ಲೆಕ್ಕಾಚಾರ ಬಲಿಷ್ಠವಾಗಿತ್ತು. ಈಗ ಕುಟುಂಬದ ಲೆಕ್ಕಾಚಾರ ಜೋರಾಗಿದೆ. ಜಾತಿ, ಹಣದ ಜೊತೆ ಈಗ ವಂಶವೂ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಈ ಮೂರೂ ಬಲ ಇಲ್ಲದವರು ಜನಪ್ರತಿನಿಧಿಗಳಾಗುವುದು ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ. ಮೊನ್ನೆ ವಿಧಾನಪರಿಷತ್ ಚುನಾವಣೆ ನಡೆಯುವಾಗ ದೇವೆಗೌಡರು ಬಹಿರಂಗವಾಗಿಯೇ ಹೇಳಿದರು. ಎಲ್ಲ ರಾಜಕೀಯ ಪಕ್ಷಗಳು ಹಣವಂತರಿಗೇ ಟಿಕೆಟ್ ನೀಡುತ್ತಿರುವುದರಿಂದ ನಾವು ಕೂಡ ಹಣವಂತರನ್ನು ಹುಡುಕುತ್ತಿದ್ದೇವೆ ಅಂತ. ಇದರರ್ಥ, ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳಾಗುವವರು ಕಡ್ಡಾಯವಾಗಿ ಜಾತಿ ಬಲ ಹೊಂದಿರಬೇಕು. ಅದರೊಟ್ಟಿಗೆ ವಂಶ ಬಲವೂ ಇರಬೇಕು. ಇವೆರಡರ ಜೊತೆ ಹಣಬಲವಿದ್ದರೆ ಗೆಲ್ಲುವುದು ಸುಲಭ.

ಇವತ್ತಿನ ಕಾಲಕ್ಕಾಗಲೇ ಇದು ಈ ಮಟ್ಟದಲ್ಲಿ ಎದ್ದು ಕಾಣುತ್ತಿದೆ ಎಂದರೆ ಮುಂದಿನ ದಿನಗಳಲ್ಲಿ ಇದರ ಸ್ವರೂಪ ಯಾವ ಮಟ್ಟಕ್ಕೇರಬಹುದು? ಹಿಂದೆ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರ ಬದುಕಿನಲ್ಲಿ ನಡೆದ ಒಂದು ಘಟನೆಯನ್ನು ಉದಾಹರಣೆಯಾಗಿ ನೋಡುವ ಮೂಲಕ ಈ ವಂಶಪಾರಂಪರ‍್ಯ ರಾಜಕಾರಣಕ್ಕೆ ಮುಂದಿನ ದಿನಗಳಲ್ಲಿ ಯಾವ ಮಟ್ಟದ ತೀವ್ರತೆ ಬರಬಹುದು ಎಂಬುದನ್ನು ಗಮನಿಸೋಣ. ಅವತ್ತು ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅವರು ತಮ್ಮ ಮಗಳು ಇಂದಿರೆಯನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಹವಣಿಸುತ್ತಿದ್ದಾರೆ ಎಂದು ಹಲವರು ಆಡಿಕೊಳ್ಳುತ್ತಿದ್ದ ಮಾತು ಕೆಂಗಲ್ ಹನುಮಂತಯ್ಯನವರ ಕಿವಿಗೆ ಬಿತ್ತು. ಹಾಗಂತಲೇ ಅವರು ಒಮ್ಮೆ ನೆಹರೂ ಅವರು ಸಿಕ್ಕಾಗ, ಇದೇನು ಸಾರ್ ಜನ ಈ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ? ನಿಮ್ಮ ಮಗಳು ಇಂದಿರೆಯನ್ನೇ ಉತ್ತರಾಧಿಕಾರಿಯನ್ನಾಗಿ ಬೆಳೆಸುತ್ತಿದ್ದೀರಿ ಅಂತ? ಹಾಗೆಲ್ಲ ಮಾಡಬೇಡಿ ಸಾರ್. ವಂಶಪಾರಂಪರ‍್ಯ ರಾಜಕಾರಣಕ್ಕೆ ಒತ್ತು ನೀಡುವುದು ಸರಿಯಲ್ಲ ಎಂದರು.

ಇದರಿಂದ ನೆಹರೂ ಅವರು ಎಷ್ಟು ಕೆರಳಿದರೆಂದರೆ, ಅವರ ವಿರೋಧಿಗಳನ್ನು ಎತ್ತಿ ಕಟ್ಟಿ ಕೊಡಬಾರದ ಕಾಟ ಕೊಟ್ಟು ಅವರನ್ನು ಕೆಳಗಿಳಿಸಿದರು. ಹೀಗೆ ನೆಹರೂ ಅವರ ವಂಶಪಾರಂಪರ‍್ಯ ರಾಜಕಾರಣದ ಆಸಕ್ತಿಯ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕಾಗಿಯೇ ಮುಂದೆ ಕೆಂಗಲ್ ಹನುಮಂತಯ್ಯ ರಾಜಕಾರಣದಲ್ಲಿ ಮೂಲೆಗುಂಪಾದರು. ಇಂದಿರಾ ಗಾಂಧಿ ತಮ್ಮ ವಂಶಪಾರಂಪರ‍್ಯ ರಾಜಕಾರಣಕ್ಕೆ ಧಕ್ಕೆ ಬರಬಾರದು ಅಂತ ಏನೆಲ್ಲ ಮಾಡಿದರು ಎಂಬುದನ್ನು ಹೇಳುತ್ತಾ ಹೋದರೆ ಅದೊಂದು ಇತಿಹಾಸ. ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರ ಎಂಬ ಅಭಿದಾನಕ್ಕೆ ಪಾತ್ರರಾದ ದೇವರಾಜ ಅರಸರನ್ನೇ ಅವರು ನಿರ್ದಾಕ್ಷಿಣ್ಯವಾಗಿ ಮೂಲೆಗುಂಪು ಮಾಡಿದರು. ಕೆಂಗಲ್ ಹನುಮಂತಯ್ಯ, ದೇವರಾಜ ಅರಸು ಅವರಿಗೇ ಇಂತಹ ಪರಿಸ್ಥಿತಿ ಬಂತು ಎಂದರೆ ಇನ್ನು ಪಕ್ಷಗಳ ಮಟ್ಟದಲ್ಲಿ ಪ್ರಮುಖ ನಾಯಕರ ಕುಟುಂಬದವರೇ ಫ್ರಂಟ್ ಲೈನಿನಲ್ಲಿರುವಾಗ ಯಾರಾದರೂ ಸಾಮಾನ್ಯ ಕಾರ್ಯಕರ್ತರು ವಂಶಪಾರಂಪರ‍್ಯ ರಾಜಕಾರಣದ ಬಗ್ಗೆ ಮಾತನಾಡಲು ಸಾಧ್ಯವೇ?

ಜೆಡಿಎಸ್‌ನಲ್ಲಂತೂ ಬಿಡಿ. ಮೊದಲ ಮೂರು ಸ್ಥಾನಗಳು ಯಾರಿಗೆ ಅಂತ ನಿಕ್ಕಿಯಾಗಿವೆ. ಅಷ್ಟೇ ಅಲ್ಲ, ನಾಲ್ಕು, ಐದು ಹಾಗೂ ಆರನೇ ಸ್ಥಾನಕ್ಕೂ ಯಾರು ಎಂಬುದು ನಿಚ್ಚಳವಾಗಿದೆ. ಇದನ್ನು ಸಹಿಸಿಕೊಳ್ಳಲಾಗದೆ ಚಲುವರಾಯಸ್ವಾಮಿ, ಜಮೀರ್ ಅಹ್ಮದ್, ಮಾಗಡಿ ಬಾಲಕೃಷ್ಣ ಅವರಂತಹವರು ಒದ್ದಾಡುತ್ತಿರುವುದು ಕಣ್ಣೆದುರಿಗೇ ಇದೆ. ಹೀಗಿರುವಾಗ ವಂಶಪಾರಂಪರ‍್ಯ ರಾಜಕಾರಣವನ್ನು ಕಡಿಮೆ ಮಾಡಬಹುದು ಎಂಬುದು ಸುಳ್ಳು. ವಂಶಪಾರಂಪರ‍್ಯ ರಾಜಕಾರಣದ ಬೇರು ಕರ್ನಾಟಕದ ಮೂರೂ ಪಕ್ಷಗಳಲ್ಲಿ ಹರಡಿದ್ದರೆ, ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಅದು ನೆಮ್ಮದಿಯಾಗಿ ನೆಲೆಯೂರಿದೆ. ಅದಕ್ಕೇ ಹೇಳಿದ್ದು. ವಂಶಪಾರಂಪರ‍್ಯ ರಾಜಕಾರಣವನ್ನೂ ಇಂಡಸ್ಟ್ರಿ ಎಂದು ಘೋಷಿಸಿದರೆ, ಬಂಡವಾಳ ಹೂಡಿ ಲಾಭ ಮಾಡಿಕೊಳ್ಳುವ ಉದ್ಯಮ ಎಂದು ಪರಿಗಣಿಸಿದರೆ ಹೇಗೆ? ಇವತ್ತು ಇದನ್ನು ನಂಬುವುದು ನಮಗೆ ಕಷ್ಟವಾಗಬಹುದು. ಆದರೆ ಮುಂದಿನ ದಿನಗಳಲ್ಲಿ ಇದರ ನೆರಳು ಮತ್ತಷ್ಟು ದಟ್ಟವಾಗಲಿದೆ. ಪ್ರಜಾಪ್ರಭುತ್ವದ ಪಾಲಿಗೆ ನಿಜವಾದ ಗಂಡಾಂತರವಾಗಿ ಪರಿಣಮಿಸಲಿದೆ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 23 January, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books