Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಲಂಕೇಶರಿಂದ ಹಿಡಿದು ಜೀವರಾಜ್ ಆಳ್ವರ ತನಕ ಹರಟುತ್ತ ಓಡಿದ ಮಾತಿನ ಬಂಡಿ

ರವೀ, ಬನ್ರೀ ನೀವು: ನಿಮಗೊಂದ್ ತಮಾಷಿ ಕೊಡ್ತೀನಿ ಅಂದವರು ಪೂರ್ಣಚಂದ್ರ ತೇಜಸ್ವಿ. ಬೆಳಿಗ್ಗೆಯಿಡೀ, I mean ದಿನವಿಡೀ ಕೆಲಸ ಮಾಡಿದ್ದೆ. ಬೆಳಿಗ್ಗೆ ಇನ್ನಷ್ಟು ಕೆಲಸ. ಅದು ಮುಗಿದರೆ ‘ಪತ್ರಿಕೆ’ ಪ್ರಿಂಟಿಗೆ ಹೋಗಬಹುದು. ಅದನ್ನು ಮುಗಿಸದೆ ಹೋಗೋದಾದರೂ ಹೇಗೆ? ಸರಿ, ಬೆಳಿಗ್ಗೆ ಮಾಡೋಣ ಅಂತ ಇಟ್ಟುಕೊಂಡಿದ್ದ ಕೆಲಸವನ್ನು ರಾತ್ರಿಯೇ ಮುಗಿಸಿದೆ. ತೇಜಸ್ವಿ ತಮ್ಮ ಮೂಡಿಗೆರೆಯ ತೋಟದ ಮನೆಯಲ್ಲಿದ್ದರು. ಆಗ ನಾನಿನ್ನೂ ಡ್ರೈವರ್‌ನ ಇಟ್ಟುಕೊಂಡಿರಲಿಲ್ಲ. “ಬನ್ರೀ, ಹೋಗಿ ಬರೋಣ" ಅಂತ ಗೆಳೆಯ ಜೋಗಿಯನ್ನು ಹೊರಡಿಸಿದೆ. ಅವರ ಕೈಗೂ ನಾನು ಕಾರಿನ ಸ್ಟೀರಿಂಗ್ ಕೊಡುತ್ತಿರಲಿಲ್ಲ. ಇದ್ದುದರಲ್ಲೇ ಕೊಂಚ fresh up ಆಗಿ ಹೊರಟು ನಿಂತೆ.

ಇಂಥ ಕೆಲಸಗಳನ್ನು ಮೊದಲೆಲ್ಲ ತುಂಬ ಮಾಡುತ್ತಿದ್ದೆ. ಅದೇ ಮೂಡಿಗೆರೆಗೆ ಚಿಕ್ಕಮಗಳೂರಿನ ನಮ್ಮ ವರದಿಗಾರನನ್ನು ಕಳಿಸಬಹುದಿತ್ತು. No. ಅದು ನಾನು ಮಾಡಿದರೇನೇ ಸರಿ. ಆಗ ಚಿಕ್ಕಮಗಳೂರಿನಲ್ಲಿ ನನ್ನ ವರದಿಗಾರನೊಬ್ಬನಿದ್ದ. ಹೇಗೋ ಮಾಡಿ, ಒಂದೆರಡು ಸುದ್ದಿ ಕಳಿಸುತ್ತಿದ್ದ. ಕೆಲವು ಸಲ ನಿಜಕ್ಕೂ ಇಂಟೆಲಿಜೆಂಟ್ ಆದ ವರದಿಗಳನ್ನು ತಂದು ಎದುರಿಗಿಡುತ್ತಿದ್ದ. ಆದರೆ, ಅಂಥ ಹಿರಿಯರಾದ ತೇಜಸ್ವಿಯವರು ಖುದ್ದಾಗಿ ಕರೆದು ಏನೋ ಕೊಡ್ತೀನಿ ಅಂದಾಗ, ನನ್ನ ಬದಲು ಇನ್ಯಾರೋ ವರದಿಗಾರನನ್ನು ಕಳಿಸುವುದು ನನಗೆ ಸರಿ ಅನ್ನಿಸಲಿಲ್ಲ. ಅವನು ಕೊಂಚ ಗುಂಡು ಮಾಸ್ಟರ್. ನಾನು ಚಿಕ್ಕಮಗಳೂರಿಗೆ ಹೋದರೆ, ನೆಟ್ಟಗೆ ಎದ್ದು, ಹಲ್ಲುಜ್ಜಿ, ಮುಖ ಗಲಬರಿಸಿಕೊಂಡು ಬಂದು ನನ್ನೆದುರು ನಿಲ್ಲಲಿಕ್ಕೆ ಅವನಿಗೆ ಅರ್ಧ ದಿನ ಬೇಕಾಗುತ್ತಿತ್ತು. ನನಗೂ ಹೇಳಿ ಹೇಳಿ ಸಾಕಾಗುತ್ತಿತ್ತು: “ಅಯ್ಯಾ, ನೀನಿನ್ನು ಕೆಲಸ ಬಿಟ್ಟು ಚಿಕ್ಕಮಗಳೂರಿನ ನಿನ್ನ ಸುಖೀ ತಾಣದಲ್ಲಿ ಕಾಲು ಚಾಚು" ಅಂತ ಹೇಳಿ ಕೊನೆಗೆ ಕೈ ತೊಳೆದುಕೊಂಡೆ.

ಆಯ್ತಲ್ಲ? ಮೂಡಿಗೆರೆಗೆ ನಾವಿಬ್ಬರೇ ಹೋದೆವು. ಸ್ಕೂಟರೊಂದರ ರಿಪೇರಿ ಮಾಡುತ್ತ ಕುಳಿತಿದ್ದ ತೇಜಸ್ವಿ, “ಅಯ್ಯೋ ಶನಿಗಳಾ..." ಅಂದು ನಗುತ್ತಾ ಎದ್ದು ಕೈ ತೊಳೆದುಕೊಂಡು ಬಂದರು ತೇಜಸ್ವಿ. “ಅಲ್ರೀ, ಬೆಳಗಿನ ಜಾವ ಫೋನ್ ಮಾಡಿದರೆ, ಬೆಳಕು ಹರಿಯೋ ಹೊತ್ತಿಗಾಗಲೇ ಬಂದಿದೀರಲ್ರೀ?" ಅಂದರು ತೇಜಸ್ವಿ. “ಮೊದಲು ನಮಗೊಂದು ಕಾಫಿ ಕೊಡಿ. ಆಮೇಲೆ ಅದೇನು ತಮಾಷಿ ಕೊಡ್ತೀರೋ ಕೊಡಿ" ಅಂದೆ. ಆಗ ನನಗೂ-ಲಂಕೇಶರಿಗೂ ಜೋರು ಯುದ್ಧ ನಡೆಯುತ್ತಿತ್ತು. ಲಂಕೇಶ್ ಜೊತೆಗೆ ಅನೇಕ ವರ್ಷ ಇದ್ದರು ತೇಜಸ್ವಿ. ಅಂಥ ತೇಜಸ್ವಿಯವರನ್ನೂ, ಯಾವನೋ ರಿಯಲ್ ಎಸ್ಟೇಟ್ ಖೂಳನನ್ನು ಬಯ್ಯುವ ಧಾಟಿಯಲ್ಲಿ ಬಯ್ದು, ತಮ್ಮ ‘ಪತ್ರಿಕೆ’ಯ ಮುಖಪುಟದಲ್ಲಿ ಫೊಟೋ ಹಾಕಿ ಆನಂದಿಸಿದ್ದರು ಲಂಕೇಶ್. ಆ ಹೊತ್ತಿಗಾಗಲೇ ತೇಜಸ್ವಿಯವರು ಲಂಕೇಶರ ಗೆಳೆತನಕ್ಕೆ ಎಳ್ಳುನೀರು ಬಿಟ್ಟಿದ್ದರು. ‘ಲಂಕೇಶ್ ಪತ್ರಿಕೆ’ಯಲ್ಲೇ ಕೆಲಸ ಮಾಡುತ್ತಿದ್ದ ಗೆಳೆಯರಾದ ಸತ್ಯಮೂರ್ತಿ ಆನಂದೂರು, ಆಲೂರು ಮುಂತಾದವರು ಹೋಗಿ, “ಆಫೀಸಿನಲ್ಲಿ ವಿಪರೀತ ಹಿಂಸೆಯಾಗುತ್ತಿದೆ" ಎಂದು ತೇಜಸ್ವಿಗೆ ಹೇಳಿದ್ದರು. “ಅಲ್ರೀ, ನೀವು ಪಾಯಖಾನೆಯಲ್ಲೇ ಕಾಲು ಇಳಿಬಿಟ್ಟುಕೊಂಡು ಕೂತು, ಇಲ್ಲಿ ವಿಪರೀತ ವಾಸನೇ... ಅಂತ ಗೊಣಗಿದರೆ ಏನು ಮಾಡೋಕಾಗುತ್ತೆ?" ಅಂದಿದ್ದರು ತೇಜಸ್ವಿ. ಅವರ ಮನದಾಳ ನನಗೆ ಅರ್ಥವಾಗಿತ್ತು.

“ನೋಡ್ರೀ, ಇವ್ನು ಲಂಕೇಶ ಮುಖ್ಯಮಂತ್ರಿ ಪಟೇಲರು ಕುಡೀತಾರೆ, ತಿಂತಾರೆ, ಹೆಂಗಸರ ಹಿಂದೆ ಹೋಗ್ತಾರೆ ಅಂತೆಲ್ಲ ಬರೀತಾನಲ್ಲ? ಹಾಗಾದ್ರೆ ಇವನೇನೂ? ಇವನು ಅದೇ ಪಟೇಲರ ಪ್ರತಿರೂಪ. ಹೆಸರೊಂದು ಬದಲಾಯಿಸಬೇಕಷ್ಟೆ. ‘ಪಟೇಲ್’ ಅನ್ನೋ ಕಡೆ ‘ಲಂಕೇಶ್’ ಅಂತ ಹಾಕಿದರೆ ಸಾಕು. ಆ ವರದಿ unedited ಆಗಿ ಪ್ರಕಟಿಸಬಹುದು. ಅಂಥದರಲ್ಲಿ ಇವ್ನು ನನ್ನ ವಿರುದ್ಧ ಬರೀತಾನಾ? ಇವನ ವಿರುದ್ಧ ನಾನೊಬ್ಬನು ಬಾಯ್ತೆರೆದರೆ ಸಾಕು. ಬೊಫೋರ್ಸ್ ಫಿರಂಗಿ ಬಾಯಿ ತೆರದ ಹಂಗೇನೇ? ಆಗುತ್ತೆ!" ಅಂದರು ತೇಜಸ್ವಿ. ಅಷ್ಟೇ ಅಲ್ಲ, ಲಂಕೇಶ್ ವಿರುದ್ಧ ನಾನು ಬಳಸಬಹುದಾದ ಕೆಲವು ಅಸ್ತ್ರಗಳನ್ನೂ ಮಂತ್ರ ಸಹಿತವಾಗಿ ಕೊಟ್ಟರು. ಅವರು ಜೋಗಿಯನ್ನು ಕೂಡಿಸಿಕೊಂಡು ಕುವೆಂಪುರವರ ‘ರಾಮಾಯಣ ದರ್ಶನಂ’ ಕೃತಿಯ hand written ಪ್ರತಿಯ ಕುರಿತು ವಿವರ ನೀಡಿದರು. ಅವರ ತೋಟದಿಂದ ಹೊರಬಿದ್ದು, ಒಂದು ಹೊಟೇಲಿನಲ್ಲಿ ಊಟ ಮಾಡಿ, ಅಲ್ಲೇ ಒಂದು ಲಾಡ್ಜ್‌ನಲ್ಲಿ ರೂಮು ಪಡೆದು ನಾಲ್ಕು ತಾಸು ಗಟ್ಟಿ ನಿದ್ದೆ ಮಾಡಿ ಎದ್ದಿದ್ದೆ.

ನಿಜ ಹೇಳಬೇಕೆಂದರೆ, ಅವು ಅತ್ಯಂತ ಸಂತಸದ ದಿನಗಳು. ಆಗ ಜಗಳಗಳಿಗೆ ಒಂದು ವಜನು, ಅಭಿರುಚಿ ಮುಂತಾದವಿದ್ದವು. ಲಂಕೇಶರದೇ ಒಂದು ಘಟನೆ ಹೇಳ್ತೀನಿ ಕೇಳಿ. ಆಗಷ್ಟೆ ಲಂಕೇಶ್ ಒಂದು ಮನೆ ಕಟ್ಟಿದ್ದರು. ಅದರ ಗೃಹಪ್ರವೇಶ ಅಂತೇನೂ ಅವರು ಮಾಡಲಿಲ್ಲ. ಬದಲಿಗೆ ಒಂದು ಗ್ರೂಪ್ ಥರಾ ಮಾಡಿ ಕೆಲವರಿಗೆ ಪಾರ್ಟಿ ಕೊಡುತ್ತಿದ್ದರು. ಹಾಗೆ ‘ಗೆಳೆಯರಾಗಿ’ ಲಂಕೇಶರ ಮನೆಗೆ ಹೋದವರು ಅಂದಿನ ಅದೇ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಹಾಗೂ ಎಂ.ಪಿ. ಪ್ರಕಾಶ್. ಎಲ್ಲರೂ ಸೋಷಲಿಸ್ಟ್ ವಿಪ್ಲವಕಾರರೇ. ಆದರೆ ಪಾರ್ಟಿಗೆ ಹೋದ ಎಂ.ಪಿ. ಪ್ರಕಾಶ್ ಕುಡಿಯುತ್ತಿರಲಿಲ್ಲ. ಮೊದಲು ಮನೆ ನೋಡಿದ್ದಾಯ್ತು. ಆನಂತರ ಪಾರ್ಟಿ. ಪಟೇಲ್ ಅದ್ಭುತ ಮಾತುಗಾರರು: ಎರಡು ಪೆಗ್ ಏರಬೇಕಷ್ಟೆ. ಅವತ್ತು ಎರಡು ಪೆಗ್ ಏರುತ್ತಿದ್ದಂತೆ ಶುರುವಾಯ್ತಲ್ಲ? “ಅಲ್ಲಯ್ಯಾ ಲಂಕೇಶ್, ಸೆರಗಿನ ಹಿಂದೆ ಪಟೇಲ ಅಂತ ಬರೀತೀಯಲ್ಲ? ನೀನೇನು ಕಡಿಮೆ ಆನಂದ ಅನುಭವಿಸಿದ್ದೀಯಾ?" ಅಂದವರೇ ಕಾಲಲ್ಲಿನ ಚಪ್ಪಲಿ ಬಿಚ್ಚಿ ಲಂಕೇಶ್‌ರ ಮನೆಯ ಡೈನಿಂಗ್ ಟೇಬಲ್ಲಿನ ಮೇಲಿಟ್ಟರು. “ನೀವೆಲ್ಲ ಭಯಂಕರ ಕ್ರಾಂತಿಕಾರರಲ್ವಾ? ಎಮರ್ಜೆನ್ಸಿ ಪೀರಿಯಡ್‌ನಲ್ಲಿ ನೀವು ಎಲ್ಲಿದ್ರಯ್ಯಾ? ಸಿನೆಮಾ ಮಾಡ್ತೀನಿ ಅಂತ ಹೊರಟೆ ನೀನು: ಅಲ್ಲೊಂದು ಸೆರಗು ಹಿಡಕೊಂಡೆ. ಅವ್ನೆಲ್ಲಿದ್ದ ನಿನ್ ಫ್ರೆಂಡ್ ತೇಜಸ್ವಿ? ಅವನು ಕೆರೇಲಿ ಮೀನು ಹಿಡಕೊಂಡು ಕೂತಿದ್ದ. ಅಲೆದಾಡಿ, ಭೂಗತರಾಗಿ, ಕಡೇಗೆ ಸಿಕ್ಕಿ ಹಾಕಿಕೊಂಡೋರು, ಜೈಲಿಗೆ ಹೋದೋರು ನಾವು. ಇವತ್ತು ಸೆರಗಿನ ಹಿಂದೆ ಪಟೇಲ ಅಂತ ಬರೆದಿದ್ದೀಯಲ್ಲ? ಅದರಿಂದ ಒಳ್ಳೇದೇ ಆಗಿದೆ. ಮೊದಲೆಲ್ಲ ಹೆಂಗಸರನ್ನ ಹುಡಿಕ್ಕೊಂಡು ನಾನು ಅಲೀ ಬೇಕಿತ್ತು. ನಿನ್ ಪತ್ರಿಕೆ ಬಂದ ಮೇಲೆ ಹೆಂಗಸರೇ ನನ್ನ ಹುಡಿಕ್ಕಂಡು ಬರ‍್ತಿದಾರೆ ನೋಡು. ಭಾಂ ಛೋತ್! ಏನನ್ಕಂಡಿದ್ದೀಯ?" ಅಂತ ರೇಗಿಯೇ ಬಿಟ್ಟರಲ್ಲ? ಪಟೇಲರಿಗೆ ತಮಾಷೆ ಎಷ್ಟು ಅದ್ಭುತವಾಗಿತ್ತೋ, ಅವರ ಸಿಟ್ಟೂ ಅಷ್ಟೇ ಪ್ರಖರವಾಗಿರುತ್ತಿತ್ತು. ಅವತ್ತು ಲಂಕೇಶ್ ಸುಮ್ಮನೆ ಮುಖ ಕೆಡಿಸಿಕೊಂಡಿದ್ದರು. ಈ ಘಟನೆಯನ್ನು ನನಗೆ graphic ಆಗಿ ಹೇಳಿದವರು ಅವತ್ತಿನ ಘಟನೆಯ ಪ್ರತ್ಯಕ್ಷದರ್ಶಿ ಎಂ.ಪಿ. ಪ್ರಕಾಶ್. ಆಗಿನ್ನೂ ಪಟೇಲ್ ಬದುಕಿದ್ದರು.

ಅಂಥದ್ದೇ ಇನ್ನೊಂದು ಘಟನೆ ವಿವರಿಸ್ತೇನೆ ನೋಡಿ. ಅಧಿಕಾರದಲ್ಲಿದ್ದಾಗ ಪಟೇಲರ ಜೊತೆ ಪ್ರತೀ ಸಾಯಂಕಾಲ ಕಾಣಿಸಿಕೊಳ್ಳುತ್ತಿದ್ದುದು ನಟ ಅನಂತನಾಗ್. ಆತ ಪಟೇಲರ ಮಂತ್ರಿಮಂಡಲದಲ್ಲೂ ಇದ್ದರು. ಅದೊಮ್ಮೆ ಈ ಗುರು ಶಿಷ್ಯರು ಶಾಸಕರಾಗಿದ್ದ ಅಮರನಾಥ ಶೆಟ್ಟರ ಮನೆಗೆ ಹೋಗಿದ್ದಾರೆ. ಶೆಟ್ಟರು ಕರ್ನಾಟಕ ರಾಜ್ಯ ರಾಜಕಾರಣದಲ್ಲಿಯೇ ನಾನು ಕಂಡ ಅತ್ಯಂತ ಸಜ್ಜನ ವ್ಯಕ್ತಿ. ಈಗ ಅವರಿಗೆ ವಿಪರೀತ ಅನಾರೋಗ್ಯ. ಆತಿಥ್ಯ, ಅತಿಥಿ ಸತ್ಕಾರ ಮುಂತಾದವುಗಳಲ್ಲಿ ಅಮರನಾಥ ಶೆಟ್ಟರನ್ನು ಬಿಟ್ಟರೆ ಮತ್ತೊಬ್ಬರಿಲ್ಲ. ಇಷ್ಟಾಗಿ ಅಮರನಾಥ ಶೆಟ್ಟರು ಕುಡಿಯುವವರಲ್ಲ. ಗಟ್ಟಿಯಾಗಿ ಮಾತೂ ಆಡಿದವರಲ್ಲ. ಅವತ್ತು ಪಟೇಲ್ ಮತ್ತು ಅನಂತ್‌ರ ಸತ್ಕಾರಕ್ಕೆ ಖುದ್ದು ಶೆಟ್ಟರೇ ನಿಂತಿದ್ದರು. ಎಂದಿನಂತೆ ಪಟೇಲರು ಐದನೆಯದಕ್ಕೋ, ಆರನೇ ಪೆಗ್ಗಿಗೋ out ಆಗಿದ್ದಾರೆ. ಅವರಿಗೆ ಅದು ನಿತ್ಯದ ಕಾಯಕ. ಹಾಗೆ ವಿಪರೀತ ಕುಡಿದು ಚಿತ್ತಾದಾಗ ಅವರನ್ನು ಕಾರಿನ ತನಕ ಹೊತ್ತೊಯ್ಯಲಿಕ್ಕೆಂದೇ ಬಾಡಿಗಾರ್ಡ್ ತಿಮ್ಮೇಗೌಡ ಎಂಬುವವನೊಬ್ಬನಿದ್ದ. ಆದರೆ ವಿಪರೀತ ಕುಡಿದಿದ್ದ ಪಟೇಲರು ಕೊಂಚ ಮಲಗಿ ರೆಸ್ಟ್ ಮಾಡಲಿ ಎಂಬುದು ಶಾಸಕ ಅಮರನಾಥ ಶೆಟ್ಟರ ಅಭಿಲಾಷೆ. ತುಂಬ humble ಆಗಿ ಪಟೇಲರನ್ನು lift ಮಾಡಿ, ಮಂಚದ ಮೇಲೆ ಮಲಗಿಸೋಣ ಎಂದು ಅನಂತನಾಗ್‌ಗೆ ವಿವರಿಸಿದ್ದಾರೆ. ಈ ಪುಣ್ಯಾತ್ಮ ಅನಂತ್ ವಿಪರೀತ ಕಿಡಿಗೇಡಿ. “ಶೆಟ್ಟರೇ, ನೀವು ಪಟೇಲರ ತಲೆ ಭಾಗ ಹಿಡಿದುಕೊಳ್ಳಿ. ನಾನು ಕಾಲುಗಳನ್ನು ಹಿಡಿದು ಎತ್ತುತ್ತೇನೆ. ಮಂಚದ ಮೇಲೆ ಮಲಗಿಸುವಾಗ ಒಂದು ತಮಾಷೆ ಮಾಡೋಣ. ಪಟೇಲರನ್ನು ಹಿಂದೇ-ಮುಂದೇ ಅಂತ ತೂಗಿ ಮಂಚಕ್ಕೆ ಎಸೆದು ಬಿಡೋಣ. ಹಾಸಿಗೆ ಚೆನ್ನಾಗಿದೆ. ಏನೂ ಆಗಲ್ಲ" ಅಂದವನೇ ಅಮರನಾಥ ಶೆಟ್ಟರನ್ನು ಕಾಡಿ ಕಾಡಿ ಒಪ್ಪಿಸಿ ಬಿಟ್ಟ ಅನಂತ್.

ಸರಿ, ಅದರಂತೆಯೇ ಇಬ್ಬರೂ ಸೇರಿ ಪಟೇಲರನ್ನು ಡೈನಿಂಗ್ ಟೇಬಲ್‌ನಿಂದ ಎತ್ತಿಕೊಂಡಿದ್ದಾರೆ. ಮಂಚದ ಮೇಲೆ ಮಲಗಿಸೋಕೆ ಮುಂಚೆ ಇಬ್ಬರೂ ಪಟೇಲರ ದೇಹವನ್ನು ಹಿಂದೇ-ಮುಂದೇ ತೂಗಿ ಧೊಪ್ಪನೆ ಎಸೆದಿದ್ದಾರೆ. ಪಟೇಲರು ಆಗ ನಿಜಕ್ಕೂ tight ಆಗಿದ್ದರು. ಅವರಿಗೆ ಅದೇನು ಮಾಡಿದರೂ ಗೊತ್ತಾಗುತ್ತಿರಲಿಲ್ಲ. ಇಷ್ಟಾಗಿ, ಮಾಡಿದ್ದಾದರೂ ಏನು? ತೂಗಿ ತೂಗಿ ಮಂಚಕ್ಕೆ ಎಸೆದದ್ದಷ್ಟೇ ಅಲ್ಲವೇ? ‘ಸರಿ’ ಅಂದುಕೊಂಡಿದ್ದಾರೆ ಶೆಟ್ಟರು. ಅನಂತನಾಗ್ ಕಿಲಿಕಿಲಿ ನಗುತ್ತಿದ್ದರು. ಆದರೆ ಪಟೇಲರನ್ನು ಎಸೆದ ಮರುಕ್ಷಣವೇ ಅಮರನಾಥ ಶೆಟ್ಟರಿಗೆ ಒಂದು ಧ್ವನಿ ಕೇಳಿಸಿದೆ: “ಏಯ್ ಶೆಟ್ಟೀ, ಈ ಅನಂತ ಶುದ್ಧ ಕೋತಿ! ಆದರೆ ನಿನಗೇನು ಬಂತು ರೋಗ? ನನ್ನನ್ನ ಉಯ್ಯಾಲೆ ತೂಗಿ ಎಸೀತಿಯಾ?" ಅಂದಿದೆ ಧ್ವನಿ. ನಿಜಕ್ಕೂ ಅಮರನಾಥ ಶೆಟ್ಟರು ನಡುಗಿ ಹೋಗಿದ್ದಾರೆ. ಕುಡಿದು ಚಿತ್ತಾದ ಪಟೇಲರಿಗೆ ತಾವು ಹೀಗೆ ಮಾಡಿದ್ದು ಗೊತ್ತಾಗಲಿಕ್ಕಿಲ್ಲ ಅಂದುಕೊಂಡ ಶೆಟ್ಟರು ಥಂಡಾ ಹೊಡೆದಿದ್ದಾರೆ. ಅನಂತ್‌ನದು ಅದೇ ಕಿಲಿಕಿಲಿ. ಅನೇಕ ಕುಡುಕರಲ್ಲಿ ನಾನಿದನ್ನು ಗಮನಿಸಿದ್ದೇನೆ. ಅವರು full ಆಗಿರುತ್ತಾರೆಂಬುದು ನಿಜ. ಆದರೆ ಇಂಥ ಘಟನೆಗಳಾದಾಗ, ಅದು ಅವರಿಗೆ ಹೇಗೋ ಗೊತ್ತಾಗಿ ಬಿಡುತ್ತದೆ. ನೀವು ಅದೇ ಪಟೇಲರನ್ನು ‘ನಿನ್ನೆ ಏನಾಯ್ತು?’ ಅಂತ ಕೇಳಿದ್ದಿದ್ದರೆ, ಅವರಿಗೆ ಆ ಘಟನೆ ಪೂರ್ತಿಯಾಗಿ ನೆನಪಿರೋದೇ ಇರುತ್ತಿರಲಿಲ್ಲ! ಕೆಲವು ಕುಡುಕರಿಗೆ ಏನೆಂದರೆ ಏನೂ ನೆನಪಿರುವುದಿಲ್ಲ. ಅದು ಶುದ್ಧ ಕುಡುಕರ ಪ್ರಪಂಚ.

ಅಷ್ಟೇಕೆ, ಇದೇ ಅನಂತನಾಗ್ ಕೆಲವು ಸಲ ಬೂಟ್ ಹೌಸ್ ಕುಮಾರನೆಂಬ ಭೂಗತ ಜೀವಿಯ ಮನೆಗೆ ಹೋಗುತ್ತಿದ್ದರು. ಅವತ್ತಿಗಾಗಲೇ ಬೂಟ್ ಹೌಸ್ ಕುಮಾರ ಕೊಲೆಯಾಗಿದ್ದ. ಆದರೆ ಅವನ ಹೆಂಡತಿ ರೀಟಾ ಇದ್ದಳು. ಅವರ ಮನೆಗೆ ಹೋದ ಅನಂತ್, ಅಲ್ಲೇನು ಮಾಡ್ತಾನೆ ಅಂತ ವಿಚಾರಿಸಿದರೆ ಬರುತ್ತಿದ್ದುದು ವಿಚಿತ್ರ ಉತ್ತರ. “ಏನೂ ಇಲ್ಲ ಸರ್. ಅನಂತನಾಗ್ ಅಲ್ಲಿ ಚೆನ್ನಾಗಿ ಕುಡೀತಾರೆ. ಆಮೇಲೆ ಸುಮ್ನೆ ಅವಳ ಮುಂದೆ ಕೂತ್ಕೊಂಡು ಗಂಟೆಗಟ್ಲೆ ‘ಹೋ’ ಅಂತ ಅಳ್ತಾರೆ!" This was ture. ಅನಂತ್ ಕುರಿತಂತೆ ಇಂಥ ಹುಚ್ಚಾಟಗಳ ವರದಿಗಳು ಅನೇಕ ಇವೆ. ನಮ್ಮ ಪಾಲಿಗೆ ಅವೇನೂ ಹೇಳಿಕೊಂಡು ನಗಬಹುದಾದಂಥ ಸಂಗತಿಗಳಲ್ಲ: ಕೇಳಿ, ಕೊಂಚ ನಕ್ಕು ಮುಂದಕ್ಕೆ ನಡೆದು ಬಿಡುತ್ತೇನೆ. ಅಂಥ ಕೆಲವು ಜೋಕುಗಳು ಗುಂಡೂರಾಯರ ಬಗ್ಗೆ ಇವೆ. ಹಿರೀಸಾವೆ ಅಣ್ಣಯ್ಯ ಅಲಿಯಾಸ್ ಶ್ರೀಕಂಠಯ್ಯನ ಬಗ್ಗೆ ಇವೆ. ತುಂಬ ಚಿಕ್ಕ ವಯಸ್ಸಿನಲ್ಲೇ ತೀರಿ ಹೋದ ಮಳವಳ್ಳಿಯ ನಾಗೇಗೌಡರ ಬಗ್ಗೆ ಇವೆ. ಅವರನ್ನು ಮಳವಳ್ಳಿಯ ನಾಗೇಗೌಡ ಅಂದರೆ ಯಾರಿಗೂ ಗೊತ್ತಾಗುವುದಿಲ್ಲ. ಎಲ್ಲರೂ ಅನ್ನುತ್ತಿದ್ದುದೇ ಕುಂಟ್ ನಾಗೇಗೌಡ ಅಂತ. ಆತ ಭಯಂಕರ ರಸಿಕರು. ಹಾಗೇನೇ ಒಳ್ಳೆಯ ಮನುಷ್ಯ ಕೂಡ. ಇದ್ದ ಅಂಗವೈಕಲ್ಯವನ್ನು ಪಕ್ಕಕ್ಕಿರಿಸಿ ತುಂಬ ತಮಾಷೆಯಾಗಿ ಬದುಕಿದ್ದು ಅಕಾಲದಲ್ಲಿ ತೀರಿ ಹೋದರು ಆತ. ನೀವೊಮ್ಮೆ ಮಳವಳ್ಳಿಗೆ ಹೋದರೆ ಮುಗೀತು. ನಾಗೇಗೌಡರ ಮನೆಗೆ ಹೋಗಲೇ ಬೇಕು: ಕಡ್ಡಾಯ. ಅವರ ಪತ್ನಿ ನಿಜಕ್ಕೂ ಅನ್ನಪೂರ್ಣೆ. ಅಂಥ ಆತಿಥ್ಯವನ್ನು ನಾನು ನೇರಾನೇರ ನೋಡಿದ್ದು ಜೀವರಾಜ ಆಳ್ವರಲ್ಲಿ. It used to be amazing. ಇವತ್ತಿಗೆ ಇಬ್ಬರೂ ಬದುಕಿಲ್ಲ. ನಾಗೇಗೌಡರಿಗೆ ದಿಲ್ಲಿಯ ಕರ್ನಾಟಕ ಭವನದಲ್ಲಿ ಹೃದಯಾಘಾತವಾಯಿತು. ಅವರಿಗದು ಎರಡನೆಯ ಅಟ್ಯಾಕ್. ಅದರ ಲಕ್ಷಣಗಳು ನಾಗೇಗೌಡರಿಗೆ ತಕ್ಷಣ ಗೊತ್ತಾಗಿವೆ. ಸಿಬ್ಬಂದಿಯನ್ನು ಕೂಗಿ ಕರೆದಿದ್ದಾರೆ. ಅವರಿಗೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದರಂತೆ. “ಲೋ, ತಡ ಮಾಡಬ್ಯಾಡ್ರೋ... ನನ್ನನ್ನು ಉಳಿಸ್ಕೊಳ್ರೋ. ಹೆಂಗಾರ ಮಾಡಿ ಉಳಿಸ್ಕೊಳ್ರೋ" ಅಂತ ದಾರಿಯುದ್ದಕ್ಕೂ ಗೋಗರೆದಿದ್ದಾರೆ ಆ ಹುಡುಗರನ್ನ. ಆದರೆ ಉಳಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಆಸ್ಪತ್ರೆ ತಲುಪುವ ಹೊತ್ತಿಗೆ ನಾಗೇಗೌಡರ ದೇಹದಲ್ಲಿ ಜೀವವಿರಲಿಲ್ಲ. ನನಗೆ ಗೊತ್ತಿದ್ದಂತೆ ಗೌಡರಿಗೆ ಚಟಗಳಿರಲಿಲ್ಲ. ಸಿಗರೇಟು ಸೇದಿದವರೇ ಅಲ್ಲ ಬಿಡಿ. ಆದರೆ ಆಹಾರ? ಬೇರೇನೂ ಚಟಗಳಿಲ್ಲದವರು ವಿಪರೀತವಾಗಿ ತಿನ್ನುತ್ತಿರುತ್ತಾರೆ. “ಅದೂ ಬ್ಯಾಡ ಅಂದ್ರೆ ಬದುಕಿ ಏನು ಪ್ರಯೋಜನ?" ಅನ್ನುತ್ತಿರುತ್ತಾರೆ. ತಡೆಯುವುದು ಕಷ್ಟ. ವಿಪರೀತ, ಅದರಲ್ಲೂ ಮಾಂಸಾಹಾರಿಗಳಿಗೆ ಸಾವು ಬರುವುದೇ ಕೊಲೆಸ್ಟ್ರಾಲ್‌ನಿಂದಾಗಿ. ಮಾಂಸದಲ್ಲಿ ವಿಪರೀತ ಕೊಲೆಸ್ಟ್ರಾಲ್ ಇರುತ್ತದೆ.

ಇದಾಯಿತಲ್ಲ? ಚಟ ಚಕ್ರವರ್ತಿ ಗುಂಡೂರಾಯರದೊಂದು ಪ್ರಸಂಗವಿದೆ: ಕೇಳಿ. ಅವರು ಬಳ್ಳಾರಿ ನಗರಕ್ಕೆ ಬಂದಿದ್ದರು. ಜೊತೆಯಲ್ಲಿ ಹೆಂಗಸರಿರಲಿಲ್ಲ. ನಮ್ಮ ಪೈಕಿ ಒಂದಷ್ಟು ಜನ ಪತ್ರಕರ್ತರನ್ನು ಗುಂಡೂರಾಯರು ಬೆನ್ನಿಗೆ ಕಟ್ಟಿಕೊಂಡೇ ತಿರುಗಿದರು ಇಡೀ ದಿನ. ಅವರದು ಒಂದೇ ದಿನದ ಕಾರ್ಯಕ್ರಮ. ರಾತ್ರಿಯ ಹೊತ್ತಿಗೆ ಅವರೊಂದಿಗೆ ನಾವು ಹೊರಟೆವು. ಅಂಥ ಬಿಸಿಲ ಕೊಂಪೆ ಬಳ್ಳಾರಿಯಲ್ಲಿ ಚಿಕ್ಕದೊಂದು ಸ್ವರ್ಗವಿತ್ತೆಂದರೆ, ಅದು ದೋಣಿಮಲೈ. ಅದರಲ್ಲಿ NMDC ಸಂಸ್ಥೆಯ ಅದ್ಭುತ ಗೆಸ್ಟ್‌ಹೌಸ್ ಇದೆ. ಸಂಡೂರಿಗೆ ಹತ್ತಿರವಿದ್ದದ್ದು ದೋಣಿಮಲೈ. ರಾತ್ರಿ ಗುಂಡೂರಾಯರು ಮತ್ತು ನಾವು ಆ ಗೆಸ್ಟ್‌ಹೌಸ್‌ನಲ್ಲಿ ಉಳಿಯೋದು ಅಂತಾಯಿತು. ಸರಿ, ಬಳ್ಳಾರಿಯಿಂದ ಒಂದಷ್ಟು ದೂರಕ್ಕೆ ಹೋಗುತ್ತಿದ್ದಂತೆಯೇ ಅವಳು ಕಾಣಿಸಿದಳು: ಜಲಜ. ಕಾರಿಗೆ ಕೈ ತೋರಿಸಿದಳು. ನಾವು ನಿಂತದ್ದೂ ಆಯಿತು: ಜಲಜಳನ್ನು ಹತ್ತಿಸಿಕೊಂಡದ್ದೂ ಆಯಿತು. ‘ಸಂಡೂರಿಗೆ ಹೋಗಬೇಕಿದೆ’ ಅಂದಳು. ಸರಿ, ಹತ್ತಿರದಲ್ಲೇ ನಾವು ಉಳಿಯುವುದಿತ್ತು ದೋಣಿಮಲೈನಲ್ಲಿ. ಅಲ್ಲಿಗೆ ತಲುಪುತ್ತಿದ್ದಂತೆಯೇ ಅದೆತ್ಲಾಗೆ ಹೋದಳೋ ಜಲಜ? ಆಕೆ ಕಾರಿಳಿದು ಹೋಗಿದ್ದಳು. ನಾವು ಆಕೆಯನ್ನು ಮತ್ತೆ ನೋಡಲಿಲ್ಲ.

ತಮ್ಮ ಕೋಣೆಗೆ ಹೋದವರೇ ತುಂಬ ಬೇಗ ನಮ್ಮಲ್ಲಿಗೆ ಬಂದರು ಗುಂಡೂರಾವ್. ಅವರದು ದೊಡ್ಡ ದನಿ, ಭಾರೀ ಆಳ್ತನ. ನೆನಪಿನ ಶಕ್ತಿಯ ವಿಷಯಕ್ಕೆ ಬಂದರೆ ‘ಎನ್ನ ಸಮಾನರಾರಿಹರೂ’ ಎಂದು ಬೀಗುತ್ತಿದ್ದ ನನಗೆ ‘my god!’ ಅನ್ನಿಸಿದ್ದು ಗುಂಡೂರಾಯರ ನೆನಪಿನ ಶಕ್ತಿಯನ್ನು ಕಂಡಾಗ. ಅಂಥ ಅಗಾಧ ಸ್ಮರಣ ಶಕ್ತಿ. ಬೆಂಗಳೂರಿನಿಂದ ಬೀದರ್ ತನಕ ಕಾಂಗ್ರೆಸ್ ಪಕ್ಷದ ಯಾವ ಕಾರ್ಯಕರ್ತನನ್ನು ಬೇಕಾದರೂ ಹೆಸರ‍್ಹಿಡಿದು ಕರೆದು ಮಾತನಾಡಿಸಬಲ್ಲವರು ಆತ. ಅವರದು king size ಔತಣ. ನಮ್ಮೊಂದಿಗೇ ಕುಳಿತು ಹರಟುತ್ತಾ ಕುಡಿದರು. ಅದರಲ್ಲೂ ಧಾರಾಳವೇ. ಗುಂಡು ಹಾಕಿದ ನಂತರ ಅಲ್ಲೇ ಹುಲ್ಲು ಹಾಸಿನ ಮೇಲೆ ಕುಳಿತು ಊಟ ಮಾಡಿದರು ರಾಯರು. ಆಗಲೂ ಅವರೊಂದಿಗೆ ಹೆಂಗಸು ಇರಲಿಲ್ಲ. ಊಟವೆಲ್ಲ ಮುಗಿದ ಮೇಲೆ ನಮಗೊಂದು ಗುಡ್ ನೈಟ್ ಹೇಳಿ ತಮ್ಮ ಕೋಣೆಗೆ ರಾಯರೊಬ್ಬರೇ ನಡೆದು ಹೋದರು. No woman.

ಅಂಥ ಕಾರ್ಯಕ್ರಮವೇನಿರಲಿಲ್ಲ. ಬೆಳಿಗ್ಗೆ ಆರಾಮಾಗೇ ಎದ್ದೆವು. ಅನಿರೀಕ್ಷಿತವೆಂದರೆ, ರಾಯರು ಆ ಹೊತ್ತಿಗಾಗಲೇ ದೋಣಿಮಲೈನಿಂದ ಹೊರಬಿದ್ದು ಬೆಂಗಳೂರಿಗೆ ಅರ್ಧ ದಾರಿಯಲ್ಲಿದ್ದರು. ವಿಚಾರಿಸಿ ಕೇಳಿದಾಗ, ಅವರೊಂದಿಗೆ ಆಗಲೂ ಹೆಂಗಸಿರಲಿಲ್ಲ. ಆದರೆ ತಿಂಡಿ ಮುಗಿಸಿ, ಕಾರುಗಳಲ್ಲಿ ನಾವು ಹೊರಬಿದ್ದೆವಲ್ಲ. ದೋಣಿಮಲೈ ರಸ್ತೆಯ ತಿರುವಿನಲ್ಲಿ ಮತ್ತೆ ಪ್ರತ್ಯಕ್ಷ ಜಲಜ. She was alone. ಆಕೆ ಕೈ ತೋರಿಸಿದಳು. ನಾವು ಕಾರು ಹತ್ತಿಸಿಕೊಂಡೆವು. ಆಗಲೇ ನನಗೆ ಕಾಣಿಸಿದ್ದು, ಜಲಜಳ ಮುಖದ ತುಂಬ ಗಾಯ. ನೋಡಿದ ಯಾರೇ ಆದರೂ, ಅವು ಕಚ್ಚಿದ ಗುರುತುಗಳು ಅಂತ ಹೇಳಬಹುದಿತ್ತು.“ರವಿಯವರೇ, ರಾತ್ರಿ ಚೆನ್ನಾಗಿ ನಿದ್ದೆ ಮಾಡಿದಿರಾ? ಇಲ್ಲಿ ವಿಪರೀತ ಸೊಳ್ಳೆನಪ್ಪಾ.." ಅಂದಳು. “ಸೊಳ್ಳೆ ನೈಟ್ ಸೂಟ್ ಯಾವ ಬಣ್ಣದ್ದು ಧರಿಸಿತ್ತು?" ಅಂತ ಕೇಳೋಣವೆಂದುಕೊಂಡವನು ಸುಮ್ಮನಾದೆ. ಬಳ್ಳಾರಿಯಲ್ಲಿ ಆಕೆ ನಮ್ಮಂತೆಯೇ ಕಾರಿನಿಂದ ಇಳಿದು ಹೋದಳು.“ಅದ್ಯಾವ ಪರಿ ಕಡದಾನ್ರೀ (ಕಚ್ಚಿದಾನ್ರೀ) ಗುಂಡೂರಾಯಾ.." ಅಂದದ್ದು ನಮ್ಮಲ್ಲೇ ಒಬ್ಬನಾದ ನಿತ್ಯಾನಂದ, ಇವತ್ತು ಎಣಿಸಿದರೆ ಗುಂಡೂರಾಯರು, ನಿತ್ಯಾನಂದ, ಹಿರಿಯ ಪತ್ರಕರ್ತರಾದ ಬಿ.ಆರ್.ಜಿ. ಪ್ರಸಾದ್ ಯಲಮಂಚಲಿ ರಾವ್...ಯಾರೂ ಬದುಕಿಲ್ಲ. ಇರೋದು ನಮ್ಮ ಪೈಕಿ ಒಂದಿಬ್ಬರು ಕಿಡಿಗೇಡಿ ಪತ್ರಕರ್ತರು ಮತ್ತು ಸೊಳ್ಳೆ ಜಲಜ ಮಾತ್ರ.

ಮುಂದೆ ಎಂದೋ ಗುಂಡೂರಾಯರ night life ಬಗ್ಗೆ ಪ್ರಸ್ತಾಪ ಬಂದಿತ್ತು. ಆ ಹೊತ್ತಿಗೆ ಅವರ ಮತ್ತು ಖ್ಯಾತ ನಟಿ ಮಂಜು ಭಾರ್ಗವಿಯ ನಡುವೆ affair ಇದೆಯೆಂಬುದು ಬಹಿರಂಗವಾಗಿತ್ತು. ಹಾಗೂ ಅವರೊಂದಿಗೆ ಕೆಲವಾರು ಹೆಂಗಸರು ಕಾಣಿಸಿಕೊಂಡಿದ್ದರು. ಅಂಥ entertainment ಒದಗಿಸಲಿಕ್ಕೆ ಅವರ ಜಿಗರಿ ದೋಸ್ತ್‌ಗಳಾದ ಯಾಹ್ಯಾ, ಆ ಕಡೆ ಸಂಜಯ್ ಖಾನ್, ಫಿರೋಜ್ ಖಾನ್ ಮುಂತಾದ ಅನೇಕರಿದ್ದರು. ಅದೆಲ್ಲದರ ನಡುವೆಯೇ ಗಂಡೂರಾಯರು ಅಧಿಕಾರ ಕಳೆದುಕೊಂಡರು. ಗಿಜಿಗುಡುತ್ತಿದ್ದ ಅವರ ಬಂಗಲೆಯ ಎದುರು ಅದೆಲ್ಲ ಜಂಗುಳಿ ಕರಿಗಿ ಹೋಗಿತ್ತು. ಆದರೆ ಸಭೆಗಳಿಗೆ ಕರೆದರೆ ಅವರದು ಎಂದಿನಂತೆ ದೊಡ್ಡ ದನಿಯ ಅಬ್ಬರದ ಭಾಷಣ. ಅಧಿಕಾರ ಹೋದದ್ದು ಅವರನ್ನು ಡಿಪ್ರೆಸ್ ಮಾಡಿತ್ತು. ಆದರೆ ರಾಯರು ಅದನ್ನು ತೋರಗೊಡುತ್ತಿರಲಿಲ್ಲ.“ಬನ್ರೀ, ಮಾಡಬಾರದ ಜಾಗದಲ್ಲಿ ಮಾಡಲೇ ಬಾರದ ಕೆಲಸ ಮಾಡಿದರೆ ಇದೇ! ಆಗ ಬಾರದ್ದು ಆಗ್ತದೆ" ಅನ್ನುತ್ತಿದ್ದರು. ಕೊನೆ ತನಕ ರಾಯರ ಆ ದರ್ಪ-ದೌಲತ್ತು ಹಾಗೇ ಇದ್ದವು. ಸಾಕ್ಷಾತ್ತಾಗಿ ಗುಂಡೂರಾಯರು ಎದೆಗುಂದಿರಲಿಲ್ಲ. ಅವರನ್ನು ಇನ್ನಿಲ್ಲದಂತೆ ಧೃತಿಗೆಡಿಸಿದ್ದು ಅವರ ಖಾಯಿಲೆ. ಅದನ್ನು ರಕ್ತದ ಕ್ಯಾನ್ಸರ್ ಅಂದರು. ಅವರಿಗೆ ಏಡ್ಸ್ ಆಗಿದೆ ಅಂದರು. ವಿಮಾನದಲ್ಲಿ ಹತ್ತಿ ಹೋದದ್ದು ಭಾರೀ ಆಳ್ತನದ ಗುಂಡೂರಾವ್. ಹಿಂತಿರುಗಿದಾಗ ಚಿಕ್ಕ ಹುಡುಗನೊಬ್ಬನ ಪಾರ್ಥೀವ ಶರೀರ ಅವರದಾಗಿತ್ತು.

“ಅವರಿಗೆಲ್ರೀ ಹೆಂಗಸರ ಶೋಕಿ? ಅದು ಅವರ ಕೈಲಿ ಆಗುತ್ತಿರಲಿಲ್ಲ. ಅವರು ಶುದ್ಧ gay. ಒಳ್ಳೊಳ್ಳೆ ಹುಡುಗರು ಬೇಕು ಅವರಿಗೆ. ಹಾಗಾದರೆ ಹೆಂಗಸರು? ಅವರನ್ನ ಸುಮ್ಮನೆ entertain ಮಾಡ್ತಿದ್ರು ರಾಯರು. ಹೊರ ಜಗತ್ತಿಗೆ ತಾನು normal, ತಾನು gay ಅಲ್ಲ, ತಾನು perfect man ಅಂತ ತೋರಿಸಿಕೊಳ್ಳಬೇಕಿತ್ತಲ್ಲ? ಹೀಗಾಗಿ ಹೆಂಗಸರು. ಅದೇ ದೋಣಿಮಲೈನಲ್ಲಿ ಕಚ್ಚಿದ್ದರಲ್ಲ? ಅಷ್ಟೆ'’ ಎಂದು ಕೆಲಕಾಲ ಅವರಿಗೆ ಹತ್ತಿರದವನಾಗಿದ್ದ ಪಿಂಪ್ ಸತೀಶ ಎಂಬ ಅರೆಬೆಂದ ಪತ್ರಕರ್ತನೊಬ್ಬ ವಿವರಿಸುತ್ತಿದ್ದ. Who knows, ಗುಂಡೂರಾಯರು ಬೈಸೆಕ್ಷುಯಲ್ ಇರಬಹುದು. ಅಂಥವರು ಗಂಡು ಮತ್ತು ಹೆಣ್ಣು ಇಬ್ಬರನ್ನೂ ಬಳಸುತ್ತಾರೆ. ಗುಂಡೂರಾಯರಿಗೆ ಅದರ ಸಹವಾಸದಲ್ಲೇ ‘ಏಡ್ಸ್’ ಬಂತು ಅಂದವರಿದ್ದರು. I don't think so. ಅವರಿಗೆ blood cancer ಆಗಿತ್ತು. ಅದಷ್ಟೇ ಗೊತ್ತಿತ್ತು.

ಇವರೆಲ್ಲರಿಗಿಂತ ಪಟ್ಟಾಗಿ ಬದುಕಿ, ಸಾಯಬಾರದ ಸಾವು ಸತ್ತವರೂ ಇದ್ದಾರೆ. ಈ ಮಾತು ಬಂದಾಗ ನನಗೆ invariably ನೆನಪಾಗುವುದು ಜೀವರಾಜ ಆಳ್ವ. ಹೆಗಡೆ ಆಡಳಿತದಲ್ಲಿ defacto chief ministers ಅನಿಸಿಕೊಂಡವರು ಆಳ್ವ ಮತ್ತು ಸಿಂಧ್ಯಾ. ಅದು ಕೆಲವೇ ಕಾಲದ ವಿಜೃಂಭಣೆ. ಆಳ್ವ ಮನೆಯ ಮುಂದೆ ಭೇಟಿಯಾಗಲು ಬಂದ ಜನ ಅರ್ಧ ಮೈಲಿಯುದ್ದ ಸಾಲು ನಿಲ್ಲುತ್ತಿದ್ದರು. ಅಧಿಕಾರ ಹೋದ ನಂತರವೂ ಅದೇ ಅರ್ಧ ಮೈಲಿ! ಆಳ್ವ ಯಾರಿಗೂ ಸುಳ್ಳು ಭರವಸೆ ನೀಡುತ್ತಿರಲಿಲ್ಲ. ಸ್ನೇಹಕ್ಕೆ ಇನ್ನೊಂದು ಹೆಸರೇ ಜೀವರಾಜ್. ಅವರಿಗೆ ಸಾವು ಬಂದ ರೀತಿ ಇತ್ತಲ್ಲ? ಅದಕ್ಕಿಂತ ಘೋರ. “ಜೀವರಾಜ್‌ಗೆ ಮೊದಲು ಎಚ್.ಐ.ವಿ ಬಂತು. ಆನಂತರ ಅದು full blown AIDSಗೆ ತಿರುಗಿಕೊಂಡಿತು. ಆದರೆ ತಮಗೆ ಈ ಸೋಂಕು ತಾಕಿದೆ ಎಂಬುದು ಜೀವರಾಜ್‌ಗೆ ಗೊತ್ತಾದದ್ದು ಹೇಗೆ? ಯಾವಾಗ?" ಎಂದು ಅವರ ಆಪ್ತರೊಬ್ಬರನ್ನು ಕೇಳಿದ್ದೆ." ನೋಡಿ ರವೀ, ಒಂದೇ ಸಲಕ್ಕೆ ಯಾರಿಗೂ AIDS ಬರಲ್ಲ. ಮೊದಲು HIV ಬರುತ್ತೆ. ಅದು ಬೆಳೆಯುತ್ತೆ. ಕೊಂಚ ಹುಶಾರಾಗಿ HIV ಬಂದ ಕೂಡಲೆ ಮೈಗೆ ಕಸುವು ತುಂಬಿಕೊಂಡರೆ ಹದಿನಾಲ್ಕರಿಂದ ಇಪ್ಪತ್ತು ವರ್ಷ ಆರಾಮಾಗಿ ಬದುಕಬಹುದು. ಆದರೆ ಜೀವರಾಜ್‌ಗೆ ಅಂಥ ಯಾವುದೇ ಮನೋ ನಿಗ್ರಹ, ಹಟ ಇರಲಿಲ್ಲ.

“ಸರೀ, ಅವರಿಗೆ HIV ಇದೆ ಅಂತ ಗೊತ್ತಾದದ್ದು ಯಾವಾಗ ಮತ್ತು ಹೇಗೆ?" ಅಂತ ಅದೇ ಆತ್ಮೀಯರನ್ನು ಕೇಳಿದೆ. “ಅದು ದಕ್ಷಿಣ ಕನ್ನಡದ ಒಂದು ಬೀಚ್ ರೆಸಾರ್ಟ್. ಅಲ್ಲಿಗೆ ಆಳ್ವ ಇಬ್ಬರು ಹುಡುಗಿಯರನ್ನು ಕರೆದೊಯ್ದರು. ಇಬ್ಬಿಬ್ಬರ ಜೊತೆ ಹೋದರೆ ಎಂಥವರಿಗೂ ಆಶ್ಚರ್ಯ. ಬೀಚ್‌ನಲ್ಲಿದ್ದವರ‍್ಯಾರೋ ಆಳ್ವರನ್ನು ಛೇಡಿಸಿದ್ದಾರೆ. ಗಲಾಟೆ ಆಗಿದೆ. ಅವರಿಗೆ ಸರಿಸಮ ಜೊತೆಯಾಗಿ ಜಗಳ ಮಾಡಿದ ಆಳ್ವ, ರೂಮಿಗೆ ಹೋಗಿದ್ದಾರೆ. ಇಬ್ಬರು ಹುಡುಗಿಯರನ್ನು ಇಟ್ಟುಕೊಂಡು ರಾತ್ರಿ ಕಳೆಯುವ ಸ್ಥಿತಿಯಲ್ಲಿ ಆಳ್ವ ಇರಲಿಲ್ಲ. ಅವರಿಗೆ ಭಯಂಕರ ಜ್ವರ ಬಂತು. ಜ್ವರವೆಂದರೇನು, ಆಳ್ವರನ್ನು ಮುಟ್ಟಲಿಕ್ಕೂ ಆಗದಂಥ ಕೆಂಡಾಮಂಡಲ. ಸಾಮಾನ್ಯವಾಗಿ HIV ಬಂದು ದೇಹ ಸೇರಿಕೊಂಡಾಗ ಆ ತೆರನಾದುದೊಂದು ದೊಡ್ಡ ಜ್ವರ ಬರುತ್ತೆ ಅಂತಾರೆ. ಜ್ವರದ ಚಿಕಿತ್ಸೆ ಮಾಡಲು ಬಂದ ವೈದ್ಯರು ಅಲ್ಲೇ blood test ಮಾಡಿಸಿದ್ದಾರೆ. Yes, ಅವರಿಗೆ HIV ಆಗಿದ್ದು confirm ಆಗಿದೆ" ಎಂದು ವಿವರಿಸಿದ್ದರು. ಆರೋಗ್ಯದ ವಿಷಯದಲ್ಲಿ ಆಳ್ವ ಅತಿರೇಕದ ನಿರ್ಲಕ್ಷ್ಯ ಹೊಂದಿದ ಮನುಷ್ಯ. ಅಂಥಾ ಅತಿರೇಕದ ಡಯಾಬಿಟಿಸ್ ಇದ್ದಾಗಲೂ ಅವರು ನಿರಂತರವಾಗಿ ಕಿಟ್‌ಕ್ಯಾಟ್ ತಿನ್ನುತ್ತಿದ್ದರು. ಅವರು ಕುಡಿಯುತ್ತಿರಲಿಲ್ಲ. ಅವರ ಸಂಸಾರ ಅನೇಕ ಸಲ ಕಾರಿನ ಹಿಂದಿನ ಸೀಟಿನಲ್ಲೇ ನಡೆದೇ ಹೋಗುತ್ತಿತ್ತು. ಅವಳು ಇಂಥವಳೇ ಆಗಬೇಕೆಂದಿರಲಿಲ್ಲ. ಯಾರು ಸಿಕ್ಕರೆ ಅವರು. ಡ್ರೈವರ್ ಹಿಂದಕ್ಕೆ ತಿರುಗಿ ನೋಡುವಂತಿರಲಿಲ್ಲ. ಆಳ್ವ ಆ ಹೆಂಗಸಿನೊಂದಿಗೆ ವಿಜೃಂಭಿಸುತ್ತಿದ್ದರು. ಕಾರು ತನ್ನ ಪಾಡಿಗೆ ತಾನು ಹೋಗುತ್ತಿತ್ತು! ಅಂಥ ವಿಲಾಸಿ ಆತ.

ನಾನು ರಾಜಕೀಯ ವರದಿಗಾರಿಕೆ ಹೆಚ್ಚಾಗಿ ಮಾಡಿದವನಲ್ಲ. ನನ್ನದು ಕ್ರೈಮ್ ರಿಪೋರ್ಟಿಂಗ್. ಆದರೆ ಕ್ರೈಮ್ ರಿಪೋರ್ಟಿಂಗ್ ಅಂದರೆ, ಅದು ನಿಜವಾದ ಮಾನವನ ಅಂತರಂಗ ತೆರೆದಿಡುವಂತಹ ಪಾಠ ಶಾಲೆ. ಅದು ಅನೇಕರಿಗೆ ತಿಳಿದಿರುವುದಿಲ್ಲ. Report ಮಾಡುವಾಗ, ಹಿನ್ನೆಲೆಯಲ್ಲಿ ನನ್ನ ಧ್ವನಿಯನ್ನು fallow ಮಾಡುವಾಗ ಅವರು ನನ್ನಿಂದ ಆ ಶೈಲಿಯನ್ನಷ್ಟೇ ಇಮಿಟೇಟ್ ಮಾಡುತ್ತಾರೆ. ಆ ವಿಷಯದಲ್ಲಿ ನನ್ನನ್ನು ಇಮಿಟೇಟ್ ಮಾಡುತ್ತಾರೆ. ಅದರಲ್ಲಿ ನಾನು ನೂರಕ್ಕೆ ನೂರು trend setter. ಬರವಣಿಗೆ, ಅದರ ಶೈಲಿ-ಎಲ್ಲದರಲ್ಲೂ ನಾನು trend setter. ಹಾಗೆ ಕರ್ನಾಟಕದ ಪತ್ರಿಕಾ ಪ್ರಪಂಚವನ್ನು ನಾನು ಹದಿನೈದಿಪ್ಪತ್ತು ವರ್ಷ ಆಳಿ ಬಿಟ್ಟಿದ್ದೇನೆ. ನಾನು master stylist. ಅದನ್ನು ಯಾರು ಬೇಕಾದರೂ ಇಮಿಟೇಟ್ ಮಾಡಲಿ. ತಕರಾರಿಲ್ಲ. ಆದರೆ crimeನಲ್ಲಿ human angle ಅಂತ ಒಂದಿದೆ. ಅದನ್ನು ಮರೆಯಬಾರದು.

ಗುಂಡೂರಾವ್, ಪಟೇಲ್, ಆಳ್ವ, ಕುಂಟ ನಾಗೇಗೌಡ, ಅನಂತನಾಗ್, ಅಮರನಾಥ ಶೆಟ್ಟರು-ಹೀಗೆ ಒಂದು ಲಹರಿಯಲ್ಲಿ ಕುಳಿತು ಅವರನ್ನೆಲ್ಲ ಇವತ್ತು ಈ ಪುಟಕ್ಕೆ ಕರೆತಂದಿದ್ದೇನೆ. ಒಪ್ಪಿಸಿಕೊಂಬ ಮನಸು ನಿಮ್ಮದು.

ನಿಮ್ಮವನು
-ಆರ್.ಬಿ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 January, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books