Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಮದವೇರಿಸುವ ದಿಲ್ಲಿಯ ಮಸ್ತ್ ಚಳಿಯಲ್ಲಿ ಈ ಅಪ್ಪಯ್ಯನಿಗೆ ಆತಂಕ

“ದಿಲ್ಲಿಯಲ್ಲಿ ಚೆನ್ನಾಗಿ ಚಳಿ ಬಿಡತೊಡಗಿದೆ. ನಿಂಗೆ ಇಷ್ಟವಾದೀತು. ಆರಾಮಾಗಿ ಬಾ" ಅಂದರು ಗೆಳೆಯರು. ಚಳಿ ಇಷ್ಟ ಅನ್ನೋದು ನಿಜ. ನಾನಾ ತರಹದ ಚಳಿಗಳನ್ನು ನೋಡಿದ್ದೇನೆ. ನೀವು ಈ ಮಧ್ಯೆ ಪಠಾಣಕೋಟದಲ್ಲಿ ನಡೆದ ಕಾಳಗದ ಬಗ್ಗೆ ಓದುತ್ತಾ, ಪತ್ರಿಕೆಗಳಲ್ಲಿ ಮುಝಾರ್-ಎ-ಷರೀಫ್ ಎಂಬ ಊರಿನ ಬಗ್ಗೆ ಓದಿರುತ್ತೀರಿ. ಅದೊಂದು ಅದ್ಭುತ ಊರು. ಅಫಘನಿಸ್ತಾನದಲ್ಲಿದೆ. ಅಲ್ಲಿ ಹೊಟೇಲೊಂದರಲ್ಲಿ ನಾನು ಉಳಿದುಕೊಂಡಿದ್ದೆ. ಭಯಾನಕವಾದ ಚಳಿ ಇತ್ತು. ಹಾಗಿದ್ದಾಗ ಡ್ರೈವರನನ್ನು ‘ಕಾರಿನಲ್ಲೇ ಮಲಗು’ ಅಂದು ಕದವಿಕ್ಕಿಕೊಳ್ಳೋದು ಅಮಾನವೀಯ ಅನ್ನಿಸಿ, ಕೋಣೆಯಲ್ಲೇ ಇರು ಅಂದಿದ್ದೆ. He was very nice. “ನೀವು ಒಂದೆರಡು ಡಾಲರ್ ಕಡಿಮೆ ಕೊಟ್ಟರೂ ಸರಿ. ನನ್ನೊಂದಿಗೆ ಇಂಗ್ಲಿಷಿನಲ್ಲೇ ಮಾತನಾಡಿ. ಮನೇಲಿ ಮೊದಲು ವಿಪರೀತ ಬಡತನ ಇತ್ತು. ಶಾಲೆಗೆ ಸೇರಿಸಲಿಲ್ಲ. ಆಮೇಲೆ ಇಂಗ್ಲಿಷ್ ಕಲಿಯೋಣ ಅಂದರೆ ತಾಲಿಬಾನ್ ಆಡಳಿತ ಶುರುವಾಯ್ತು. ಆ ಸಂಗತಿ ನಿಮಗೆ ಗೊತ್ತಲ್ಲ? ಹೀಗಾಗಿ, ನಾನಿವತ್ತು ಕೇವಲ ಟ್ಯಾಕ್ಸಿ ಡ್ರೈವರ್. ಅದೃಷ್ಟಕ್ಕೊಮ್ಮೆ ನಿಮ್ಮಂಥ ಇಂಗ್ಲಿಷ್ ಬಲ್ಲ ಕಸ್ಟಮರ್ಸ್ ಸಿಗ್ತಾರೆ. ಅವರೊಂದಿಗೆ ಹೀಗೆ ಮಾತನಾಡೀ ಆಡಿ ಕೊಂಚ ಇಂಗ್ಲಿಷ್ ಕಲಿತಿದ್ದೇನೆ. ಇನ್ನೂ ಕಲಿಯಬೇಕು. ನೀವು ಇಂಗ್ಲಿಷ್‌ನಲ್ಲೇ ಮಾತಾಡಿ" ಅಂದಿದ್ದ.

ಅವನು ಚಿಕ್ಕವನು ನನಗಿಂತ. ತಾಲಿಬಾನ್ ನಾಯಕರಿಗೆ ಎಂದೂ ಬುದ್ಧಿ ಸರಿಯಿದ್ದಂತೆ ಕಾಣೆ. ಅವರು ಮಾಡಿದ ಮೊದಲ ಕೆಲಸವೆಂದರೆ, ಇಂಗ್ಲಿಷ್ ಕಲಿಸುವ ಎಲ್ಲ ಶಾಲೆಗಳನ್ನೂ ಮುಚ್ಚಿಸಿ ಕೇವಲ ಮದರಸಾಗಳನ್ನು ಬದುಕಲು ಬಿಟ್ಟಿದ್ದು. In fact, ಅಫಘಾನರು ಚೆಂದನೆಯ ಇಂಗ್ಲಿಷ್ ಮಾತನಾಡುತ್ತಿದ್ದರು. ಒಂದರ್ಥದಲ್ಲಿ ಈಚೆಗಿನ ಏಷಿಯಾ ಮತ್ತು ಆಚೆಗಿನ ಯೂರಪ್‌ಗೆ ದಿಡ್ಡಿ ಬಾಗಿಲಿನಂತಿದ್ದುದು ಅಫಘನಿಸ್ತಾನ. ಆ raceನ್ನ Indo-Europian ಅನ್ನುತ್ತಿದ್ದರು. ಯುರೇಷಿಯನ್ race ಅಂತಲೂ ಅನ್ನುತ್ತಿದ್ದರು. ಅದರಲ್ಲೂ 1969ರಿಂದ 1980ರ ತನಕ ಹಿಂಡುಗಟ್ಟಲೆ ಹಿಪ್ಪಿಗಳು Via ಕಾಬೂಲ್ ಭಾರತಕ್ಕೆ ಬಂದರು. ಒಂದು ಭಾಷೆಯನ್ನು ಕಲಿಯಬಹುದಾದ ಅದ್ಭುತ ವೃತ್ತಿ ಅಂದರೆ ವ್ಯಾಪಾರ. ಅಲ್ಲಿ ಒಳ್ಳೆ ವ್ಯಾಪಾರ ನಡೆಯುತ್ತೆ ಮತ್ತು ಲಾಭವೂ ಅಪಾರ ಅಂತ ಯಾರಾದರೂ ಹೇಳಿದರೆ ನೇರವಾಗಿ ಬಲೂಚಿಸ್ತಾನಕ್ಕೇ (ಪಾಕಿಸ್ತಾನದ ಮೂಲೆ) ಹೋಗಿ ಅಲ್ಲಿ ‘ಹಾಯ್ ಬಲೂಚ್!" ಎಂಬ ಪತ್ರಿಕೆ ಆರಂಭಿಸಿ, ನನ್ನ ಈ ಕನಸಿನಂಥ ‘ಖಾಸ್‌ಬಾತ್’ ಮಾರುತ್ತಾ ಕುಳಿತೇನು! ಹಾಗೆ ಕುಳಿತ ಕೆಲವೇ ದಿನಗಳಿಗೆ ಆ ಬಲೂಚಿ ಭಾಷೆಯೂ ಬಂದೀತು. ಅದು ಅನಿವಾರ್ಯವಲ್ಲವೇ?

ಹಾಗೆ ಅಫಘಾನರು ತಮ್ಮಲ್ಲಿಗೆ ಬಂದ ಅಪಾರ ಸಂಖ್ಯೆಯ ಬಿಳಿಯರಿಗೆ ತಟ್ಟೆ-ಲೋಟಾಗಳಿಂದ ಹಿಡಿದು, ಪಕ್ಕಾ ಮಾಲು ಅಫೀಮಿನ ತನಕ ಎಲ್ಲವನ್ನೂ ಮಾರಿದರು. ಬಿಳಿಯರಿಂದ ಅದ್ಭುತವಾದ ಇಂಗ್ಲಿಷ್ ಬಸಿದುಕೊಂಡರು. ಮೊದಲೆಲ್ಲ ಅಫಘಾನ ಹೀಗಿರಲಿಲ್ಲ. ಶಾಲೆ ಕಾಲೇಜುಗಳಿದ್ದವು. ಅದ್ಭುತ ಚಹಾ ಸಿಗುತ್ತಿತ್ತು. ಪಾಶ್ಚಿಮಾತ್ಯರಂತೆ ಹೆಂಗಸರು ಸಿಗರೇಟು ಸೇದುತ್ತಿದ್ದರು. ಅಂಥ ಅಫಘನಿಸ್ತಾನದಲ್ಲಿ ಈಗೇನಿದೆ, ಸುಡುಗಾಡು? ತಾಲಿಬಾನಿಗಳು ‘ನೀವು ಟಿ.ವಿ ನೋಡ ಕೂಡದು’ ಎಂದು ಅಪ್ಪಣೆ ಮಾಡಿದ್ದಷ್ಟೆ ಅಲ್ಲ, ಅಲ್ಲಿನ ಅಷ್ಟೂ ಊರುಗಳ ವಿದ್ಯುತ್ ಕೇಂದ್ರಗಳಾದ Power houseಗಳನ್ನು ಬಾಂಬಿಕ್ಕಿ ಉಡಾಯಿಸಿಬಿಟ್ಟರು. ಒಬ್ಬ ಹೆಣ್ಣು ಮಗಳು ರಹಸ್ಯವಾಗಿ ಮಕ್ಕಳನ್ನು ಕಲೆ ಹಾಕಿ, ಅವರಿಗೆ ಇಂಗ್ಲಿಷ್ ಹೇಳಿ ಕೊಡುತ್ತಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಶುಕ್ರವಾರದ ನಮಾಜ್‌ನ ನಂತರ ಕಲ್ಲಿನಲ್ಲಿ ಹೊಡೆದು ಸಾಯಿಸಿರಿ ಅಂತ ಘೋಷಿಸಿ ಮರಣದಂಡನೆಗೆ ಈಡು ಮಾಡಿದರು.

ಪಾಪ, ನನ್ನ ಡ್ರೈವರ್ ಇಂಗ್ಲಿಷಿನಲ್ಲಿ ಮಾತಾಡಿ ಅಂತ ಗೋಗರೆಯುತ್ತಿದ್ದ. ಅವನೊಂದಿಗೆ ಹೊಟೇಲಿನ ಕೋಣೆಯಲ್ಲಿ ಕುಳಿತು ಮಾತಾಡುತ್ತಿದ್ದ ನಾನು ಮಧ್ಯದಲ್ಲಿ ಎದ್ದು toiletಗೆ ಹೊರಟೆ. ಅವನು ಅಕ್ಷರಶಃ ಕಿರುಚಲಾರಂಭಿಸಿದ. “Don't don't go. You wash and catch cold!" ಅನ್ನುತ್ತಿದ್ದ. ಮುಝಾರ್-ಎ-ಷರೀಫ್‌ನಲ್ಲಿ ನಿಜಕ್ಕೂ ಅಬ್ಬರದ ಚಳಿ ಇತ್ತು. ಹಾಗಂತ toiletಗೇ ಹೋಗಕೂಡದಾ? ಅವನು ಏನನ್ನುತ್ತಿದ್ದನೆಂದರೆ, ನೀನು ನಿನ್ನ ವಿಸರ್ಜನೆಯ ನಂತರ ಗುದದ್ವಾರವನ್ನು ತಣ್ಣೀರಿನಲ್ಲಿ ತೊಳೆದರೆ, ನಿನಗೆ ಶೀತವಾಗಿ ಬಿಡುತ್ತದೆ! ನಿಜ, ಅಲ್ಲಿ ಬಿಸಿ ನೀರಿರಲಿಲ್ಲ. ಒರೆಸೋಣವೆಂದರೆ ಬಾತ್‌ರೂಮ್‌ನಲ್ಲಿ tissue paper ಇರಲಿಲ್ಲ. ಗುದದ್ವಾರದಿಂದ catch cold! ಅದು ಸುಳ್ಳಲ್ಲ, ಕೆಲವು ಸಲ ಶೀತ ಆಗಿಬಿಡುವುದೂ ಉಂಟು.

ಎರಡನೆಯ ತೆರನಾದ ಚಳಿ ಎಂದರೆ, ಅದು ಹಿಮಾಲಯದ ತುದಿಯ ಬದರೀನಾಥ್ ಹಾಗೂ ಕೇದಾರಗಳಲ್ಲಿ ನೋಡಿ, ಅನುಭವಿಸಿದ ಭಯಾನಕ ಚಳಿ. ಅವತ್ತಿಗಾಗಲೇ ಅಲ್ಲಿ ನಿಜವಾದ ಹಿಮಾಚ್ಛಾದನೆ ಆರಂಭವಾಗಿತ್ತು. ಅದು ಎಂಥ ಉಗ್ರ ಚಳಿ ಎಂದರೆ, ಅಲ್ಲಿ ಪಕ್ಷಿಗಳೂ ಉಳಿಯುವುದಿಲ್ಲ. ಅವು ಹಿಮಾಲಯದ ತಪ್ಪಲಿನಲ್ಲಿರುವ ಹೃಷಿಕೇಶ್-ಹರಿದ್ವಾರ್ ಕಡೆಗೆ ವಲಸೆ ಹೋಗಿಬಿಡುತ್ತವೆ. ನಾನಿದ್ದಾಗ ನೋಡ ನೋಡುತ್ತಲೇ ಹಿಮ ಸುರಿಯತೊಡಗಿತ್ತು. ನನ್ನಲ್ಲಿ ಸರಿಯಾದ ಬಟ್ಟೆಗಳಿರಲಿಲ್ಲ. ಸ್ವೀಡನ್‌ನಿಂದ ಬಂದಿದ್ದವನು, ನನ್ನ ಸಾಥಿ-ಜಾನ್ ಕ್ರುತ್. ಅವನಿಗದು ಚಳಿಯೇ ಅಲ್ಲ. ಒಂದು ಅಡ್ಡ ಪಂಚೆ-ಜುಬ್ಬಾ, ಅದರ ಮೇಲೊಂದು ಮಾಮೂಲಿ ಶಾಲು ಬಿಟ್ಟರೆ ನನ್ನ ಬಳಿ ಏನೇನೂ ಇರಲಿಲ್ಲ. ನಾವು ತಂಗಿದ್ದ ವೈಷ್ಣವ ಮಠದಲ್ಲಿ ಹೊದ್ದುಕೊಳ್ಳಲಿಕ್ಕೆ ಕೌದಿಯಂತಹ ‘ರಜಾಯಿ’ ಕೊಡುತ್ತಿದ್ದರು. ಮಠದೊಳಗೆ ಅಗ್ಗಿಷ್ಠಿಕೆಯೂ ಇತ್ತು. ಅವತ್ತಿನ ತನಕ ಆ ಪರಿ ಚಳಿ ನೋಡಿರದಿದ್ದ ನಾನು ಬದರೀನಾಥದಲ್ಲಿ ಪತರಗುಟ್ಟಿ ಹೋಗಿದ್ದೆ. ಅಸಲಿಗೆ, ನಾನು ದೇವರನ್ನು ಹುಡುಕುತ್ತೇನೆ ಎಂದು ಹೊರಟ ಹುಂಬ. ಅದಕ್ಕಾಗಿ ಬೇಕಾಗಿದ್ದ ಧ್ಯಾನ ಕಲಿಯಬೇಕು. ಅಲ್ಲಿನ ಗುರುಮಹಾರಾಜರು ಸಟ್ಟ ಸರಹೊತ್ತಿನಲ್ಲಿ ಎಬ್ಬಿಸುತ್ತಿದ್ದರು. ಬಲವಂತದಿಂದ ಕರೆದೊಯ್ದು ಅಲ್ಲಿನ ಕುಂಡದೊಳಕ್ಕೆ ನೂಕುತ್ತಿದ್ದರು. ಅದೊಂದು great relief. ಏಕೆಂದರೆ, ಅವು ಬಿಸಿನೀರಿನ ಕುಂಡಗಳು. ಅದರೊಳಕ್ಕೆ ಬೀಳುವ ತನಕ ಪರಿಸ್ಥಿತಿ ಭಯಾನಕ. ಒಮ್ಮೆ ಬಿದ್ದರೆ ಮುಗೀತು. ಕುಂಡದಿಂದ ಎದ್ದು ಬರಲೊಲ್ಲದ ನನ್ನನ್ನು ಬಯ್ದು-ಬಯ್ದು ಎಬ್ಬಿಸಿ ಹೊರಕ್ಕೆ ಎಳೆಯುತ್ತಿದ್ದರು, ಆ ಗುರುಮಹಾರಾಜರು. ಅಲ್ಲಿ ಸ್ನಾನ ಮುಗಿಸಿ ದಟ್ಟಿ ಉಟ್ಟುಕೊಳ್ಳುವ ಹೊತ್ತಿಗೆ ಚಳಿ ಕೂಡ ಸಹನೀಯ ಅನ್ನಿಸುತ್ತಿತ್ತು. ಆದರೆ ಅದು ಕೊಂಚವೇ ಹೊತ್ತಿನ ಸಂಗತಿ. ಒಮ್ಮೆ ಹಿಮ ಸುರಿಯಲಾರಂಭಿಸಿತೋ, ಮತ್ತೆ ಚಳಿಯ ಆಕ್ರಮಣ. ನಾನು ಮತ್ತು ಕ್ರುತ್ ಒಯ್ದಿದ್ದ ಸಿಗರೇಟುಗಳೂ ಮುಗಿದು ಹೋಗಿದ್ದು, ನಮ್ಮನ್ನು ದುಃಖಕ್ಕೆ ಈಡು ಮಾಡಿದ್ದವು. ಹಾಗೂ ಒಂದು ವೇಳೆ ಪತ್ತೆ ಮಾಡಿದರೆ, ಅಪರೂಪಕ್ಕೊಂದು ‘ಗುಡಗುಡಿ’ ಸೇದಲು ಸಿಗುತ್ತಿತ್ತು. ನನಗದು ಇಷ್ಟವಾಗುತ್ತಿರಲಿಲ್ಲ. ಸೇದಿ, ಒಳಕ್ಕೆ ಹೊಗೆ ಎಳೆದುಕೊಂಡರೆ ಮುಗೀತು: ಗಂಟಲೆಲ್ಲ ಗಸಗಸ, ಉರಿ.

ಈಗ ಅಷ್ಟೊಂದು ವರ್ಷಗಳ ನಂತರ ಅನ್ನಿಸುತ್ತಿರುವುದು ಏನೆಂದರೆ, ಇನ್ನೊಂದಷ್ಟು ದಿನ ಆ ಉತ್ಕಟ ಚಳಿ ಸಹಿಸಿಕೊಂಡು ಅಲ್ಲೇ ಹುಡುಕುತ್ತಾ ಅಲೆಯುತ್ತಿದ್ದಿದ್ದರೆ ಆ ಪುಣ್ಯಾತ್ಮ ದೇವರೆಂಬೋ ದೇವರು ಸಿಕ್ಕೇ ಬಿಡುತ್ತಿದ್ದನೇನೋ? ಆದರೆ ಯಃಕಶ್ಚಿತ್ ದೇವರಿಗಾಗಿ ಆ ಪರಿ ಚಳಿಯಲ್ಲಿ ಒದ್ದಾಡುವವನ್ಯಾರು?

ಆ ದಿನಗಳು ಸರಿಯಾಗಿ ಹದಿನೇಳು ದಾಟಿ ಹದಿನೆಂಟಕ್ಕೆ ಬೀಳುತ್ತಿದ್ದ ಘಳಿಗೆಯಲ್ಲಿ ನಮ್ಮ ಗುರುಮಹಾರಾಜರಿಗೆ ಹೇಳಿದ್ದೆ: ದೇವರ ಸಂಗತಿ ಹಾಗಿರಲಿ, ನಾನು ಹಿಮಾಲಯವಿಳಿದು ನನ್ನ ಊರಿಗೆ ಹೋಗುತ್ತೇನೆ! ಗೆಳೆಯ ಕ್ರುತ್‌ನನ್ನು for the last time ಒಮ್ಮೆ ಗಟ್ಟಿಯಾಗಿ ತಬ್ಬಿಕೊಂಡು ಬದರೀನಾಥದಿಂದ ಮಿಲಿಟರಿ ಟ್ರಕ್ಕೊಂದರಲ್ಲಿ ಕುಳಿತು ಹೊರಟೆ. ದಾರಿಯಲ್ಲಿ ರುದ್ರಪ್ರಯಾಗದಲ್ಲಿ ಆ ಟ್ಯಾಕ್ಸಿ ಡ್ರೈವರ್ ನನ್ನ ಮೇಲೆ ಕರುಣೆ ತೋರಿಸಿ ಒಂದು ಕ್ವಾರ್ಟರ್‌ನಷ್ಟು ‘ಠರ್ರಾ’ ಎಂಬ ಬಣ್ಣದ ಸಾರಾಯಿ ಕೊಟ್ಟಾಗಲೇ ನನಗೆ ಕೊಂಚ ಜೀವನೋತ್ಸಾಹ ಮೂಡಿದ್ದು. ಕೊಟ್ಟಿದ್ದಿದ್ದರೆ ಇನ್ನೂ ಒಂದು ಕ್ವಾರ್ಟರ್ ಆ ನಕಲಿ ಸಾರಾಯಿ ಕುಡಿಯುತ್ತಿದ್ದೆನೋ ಏನೋ? ಕುಡಿದಷ್ಟೇ ‘ಠರ್ರಾ’ ನನ್ನ ಮೈ ಬೆಚ್ಚಗಾಗಿಸಿತ್ತು. ದೇವರನ್ನ ಹುಡುಕೋ ವಿಷಯದಲ್ಲಿ ನಿರಾಶನಾಗಿದ್ದೆ. ಅದಕ್ಕಿಂತ ಹೆಚ್ಚಾಗಿ ಆ ಹಸಿರು ನೆರಿಗೆ ಲಂಗದ ಹುಡುಗಿಯ ಕ್ರೂರ ನೆನಪು ಶುದ್ಧ ಶನಿಯಂತೆ ಆವರಿಸಿಕೊಂಡಿದ್ದುದು ಹಿಮಾಲಯ ಹತ್ತಿ ಇಳಿದ ನಂತರವೂ ನನ್ನ ಮನಸ್ಸಿನ ಗೋಡೆ ಗೋಡೆಗೆ ಮೆತ್ತಿಕೊಂಡೇ ಇತ್ತು.

ನೀವು ಅದನ್ನು ಒಪ್ತೀರೋ ಇಲ್ಲವೋ ಕಾಣೆ. ನಾವು ಏನನ್ನು ತಿಂದಿರುತ್ತೇವೆ ಅಥವಾ ಏನನ್ನು ಕುಡಿದಿರುತ್ತೇವೋ-ಅದು ನಮ್ಮ ಚಳಿಯ ತೀವ್ರತೆಯನ್ನು ನಿರ್ಧರಿಸುತ್ತದೆ. ನಾವು 1999ರಲ್ಲಿ ಕಾರ್ಗಿಲ್ ಯುದ್ಧದ ವರದಿ ಮಾಡಲಿಕ್ಕಾಗಿ ಅಲ್ಲಿಗೆ ಹೋದೆ. ನಾವು ಹೋದದ್ದು ಕಾರ್ಗಿಲ್‌ನ ತಪ್ಪಲಿಗೆ. ನಾವು ನಿಂತಲ್ಲಿಂದ ಪಾಕಿಸ್ತಾನ್ ಕೇವಲ ಒಂದೂವರೆ ಕಿಲೋ ಮೀಟರಿನ ದೂರದಲ್ಲಿತ್ತು. ಶಿಖರದ ತಪ್ಪಲಿನಲ್ಲಿ ಆಗಲೇ ಬೇಸಿಗೆಯ ಸಣ್ಣ ಸೆಖೆ ಆರಂಭವಾಗಿತ್ತು. ಶಿಖರಗಳ ಮೇಲೆ ಮಾತ್ರ ಕೆಟ್ಟ ಚಳಿ. ಹಿಮಪಾತ. ಆಗಲೇ (ಅಂದರೆ ಜೂನ್ ಹೊತ್ತಿಗಾಗಲೇ) ಅಂಥ ಚಳಿ-ಹಿಮ ಇತ್ತಲ್ಲ? ಅದಕ್ಕೂ ಮೂರು ತಿಂಗಳ ಮುಂಚೆಯೇ ಪಾಕಿ ಸೈನಿಕರು ಹಾಗೂ ಉಗ್ರವಾದಿಗಳು ಪರ್ವತ ಹತ್ತಿ ಬಂದು ಬಂಕರ್‌ಗಳಲ್ಲಿ ಅಡಗಿ, ಮುದುರಿ ಕುಳಿತಿದ್ದರು. ಅವರು ಅದಿನ್ನೆಂಥ ಚಳಿ ಅನುಭವಿಸಿದ್ದರು? ಮುಂದೆ ಅವರಲ್ಲಿ ಕೆಲವರನ್ನು ಕೊಂದು, ಕೆಲವರನ್ನು ಓಡಿಸಿದ್ದಾಯ್ತಲ್ಲ? ನಮ್ಮವರು ಆಗ ಶತ್ರುಗಳಿದ್ದ ಬಂಕರ್‌ಗಳನ್ನು ಹೊಕ್ಕು ನೋಡಿದರೆ ಅಲ್ಲಿ ಇದ್ದುದಾದರೂ ಏನು? ತುಪ್ಪ, ಚೀಸ್, ಖರ್ಜೂರ, ಉತ್ತತ್ತಿ ಬರೀ ಇಂಥವೇ. ನಿಮಗೆ ಗೊತ್ತಿರಲಿ, ಚಳಿ ಎಂಬುದು ಮೈಯ್ಯೊಳಗಿನ ನೆಣ ನೆಲಕ್ಕಿಳಿಸಿ ಬಿಡುತ್ತದೆ. ಅಲ್ಲದೆ ಆ ಬಂಕರ್‌ಗಳಲ್ಲಿ ಬಿಸ್ಸಿ ಬಿಸಿ ಅಡುಗೆ ಮಾಡೋ ಪೋತಪ್ಪನ್ಯಾರು? ಶಿಖರವಿಳಿದು ಓಡುವಾಗ ಪಾಕಿಗಳು ಯುದ್ಧ ನಿಯಮವೊಂದನ್ನು ಮರೆತಿದ್ದರು. ಅದೇನೆಂದರೆ, ಜಾಗ ಬಿಟ್ಟು ಪರಾರಿಯಾಗುವಾಗ, ಹಿಂದೆಯೇ ಬೆನ್ನತ್ತಿ ಬರುವ ಶತ್ರುವಿಗೆ ಆಹಾರ, ಮದ್ದು ಗುಂಡು ಉಪಯೋಗಿಸಬಲ್ಲಂಥ ಸ್ಥಿತಿಯಲ್ಲಿ ಅವುಗಳನ್ನು ಬಿಟ್ಟು ಹೋಗಬಾರದು. ಆದರೆ ಅದನ್ನೆಲ್ಲ ಯೋಚಿಸಲಿಕ್ಕೆ ಪಾಕಿಗಳಿಗೆ time ಎಲ್ಲಿತ್ತು. ಆ ಹೊತ್ತಿಗಾಗಲೇ ಸೈನಿಕ-ಸೈನಿಕರ ಮಧ್ಯೆ hand to hand combat ಆರಂಭವಾಗಿಬಿಟ್ಟಿತ್ತು. ಇನ್ನು ಅಲ್ಲಿಂದ ಓಡಲೇಬೇಕು. ಇದಲ್ಲದೆ ನಮ್ಮ ಬೊಫೋರ್ಸ್ ಫಿರಂಗಿಗಳು ಒಂದು ನಿಮಿಷದ ಪುರುಸೊತ್ತೂ ಇಲ್ಲದೆ ಪಾಕಿ ಯೋಧರ ಮುಕಳಿಯ ಹಿಂದೆ ಪಟಾಕಿ ಸಿಡಿಸುತ್ತಿದ್ದರು. ಹೀಗಾಗಿ ಅವರು ಭಾರಿ ಪ್ರಮಾಣದ ಮದ್ದು ಗುಂಡು, ಕೆಲವು ಫೀಲ್ಡ್ ಗನ್‌ಗಳು, ಆಹಾರ, ಕಡೆಗೆ ಸತ್ತು ಹೋದ ತಮ್ಮದೇ ಸಾಥಿ ಯೋಧರ ಶವಗಳನ್ನು ಬಿಟ್ಟು ಓಡಿ ಬಿಟ್ಟಿದ್ದರು.

ನಿಜ, ನಮ್ಮ ಹೊಟ್ಟೆಯಲ್ಲಿ ಏನು stock ಇದೆ ಅನ್ನೋದರ ಮೇಲೆ ನಮ್ಮ ಚಳಿ ತಡೆಯುವ ತಾಕತ್ತು ನಿರ್ಧರಿತವಾಗುತ್ತದೆ. ಶ್ರೀನಗರ್‌ನಲ್ಲಿ ನಾನೊಂದು ಕಾಶ್ಮೀರಿ ಪಂಡಿತರ ಮನೆಯಲ್ಲಿದ್ದೆ. ಅವರು ಅಮೃತ ಸದೃಶವಾದ ಒಂದು ಬಗೆಯ ಸೊಪ್ಪು ತಿನ್ನುತ್ತಿದ್ದರು. ಅದು ಕೇವಲ ಕಾಶ್ಮೀರದ ಕಣಿವೆಯಲ್ಲಿ ಸಿಗುತ್ತದೆ. ಅದರ ಜೊತೆಗೆ ಪಂಡಿತರು ಕುರಿಯ ಮಾಂಸ ತಿನ್ನುತ್ತಿದ್ದರು. ವಿಸ್ಕಿ ಕುಡಿಯೋ ಬಗ್ಗೆಯೂ ಅವರಿಗೆ ತಕರಾರು ಇರಲಿಲ್ಲ. ಪಂಡಿತರಾಗಿ, ಬ್ರಾಹ್ಮಣರಾಗಿ ನೀವು ಮಾಂಸ ತಿನ್ನುತ್ತೀರಲ್ಲ? ಅಂತ ಕೇಳಿದರೆ, “ ಶಿವ್ ಜೀನೆ ಹಮ್ ಕೋ ಪರ‍್ಮಿಷನ್ ದಿಯೇ ಹೈ!" ಅನ್ನುತ್ತಿದ್ದರು. ಅದಲ್ಲ ವಿಷಯ, ಪ್ರಾಣ ಹೋಗುವಂಥ ಚಳಿ ಕಾಡುವಾಗ ದೇಹಕ್ಕೆ ತುಪ್ಪ - ಬೆಣ್ಣೆ ಬೇಕು. ಕುರಿ ಮಾಂಸದೊಂದಿಗಿನ ಕೊಬ್ಬೂ ಬೇಕು. ಇನ್ನು ಕುಡಿತವೆಂದರೆ, ಅದು optional. ಬೇಡದವರಿಗೆ ಒತ್ತಾಯವಿಲ್ಲ.

ಇದೆಲ್ಲಕ್ಕಿಂತ ಕ್ರೂರವಾದ ಚಳಿಯನ್ನು ನಾನು ಅನುಭವಿಸಿದ್ದು ಅಲ್ಲಿ, ಅರುಣಾಚಲ ಪ್ರದೇಶ್‌ನಲ್ಲಿ. ನನ್ನನ್ನು ಕರೆದೊಯ್ದಿದ್ದು ಕ್ಯಾಪ್ಟನ್ ಮುರಳಿ: ನನ್ನ ಪ್ರಾಣ ಸ್ನೇಹಿತ. ಬೆಂಗಳೂರಿನಿಂದ ಹೊರಟ ನಮಗೆ ಮುರಳಿಯ ವಾಸಸ್ಥಾನ ಬೂಮ್ಲಾ ತಲುಪಲಿಕ್ಕೆ ಎಷ್ಟು ದಿನ ಬೇಕಾದವು ಗೊತ್ತೆ? ಬರೋಬ್ಬರಿ ಏಳು. ನಾವು ಬೆಂಗಳೂರಿನಲ್ಲಿ train ಹತ್ತಿದ್ದೆವು. ಅಸ್ಸಾಮದ ಗೌಹಾತಿ ತಲುಪಲಿಕ್ಕೆ ಮೂರು ದಿನ. ಅಲ್ಲಿಂದ ಅಸ್ಸಾಮದ ತುದಿಯ ಊರು ತೇಜ್‌ಪುರ್‌ಗೆ ತಲುಪಿದೆವು. ಅಸಲಿ journeyಯ ಖುಷಿ ಮತ್ತು ಕಷ್ಟ ಶುರುವಾಗಿದುದೇ ತೇಜ್‌ಪುರದಿಂದ. ನೀವು ಅರುಣಾಚಲ ಪ್ರದೇಶ್‌ಗೆ ಹೊಕ್ಕ ಬೇಕೆಂದರೆ, ಅದಕ್ಕಾಗಿ ತೇಜ್‌ಪುರದಲ್ಲಿ Inner line permit ಪಡೆದುಕೊಳ್ಳಬೇಕು. ಹಾಗೆ ಆ ರಾಜ್ಯದೊಳಕ್ಕೆ ಹೊಕ್ಕು ಬೊಮ್‌ಡೀಲಾ, ದಿರಾಂಗ್, ಭಾಲುಕ್‌ಪಾಂಗ್ - ಹೀಗೆ ಒಂದೊಂದೇ ಊರು ದಾಟಬೇಕು. ನಾನೋ ಏಳನೇ ತಿಂಗಳಿಗೆ ಹುಟ್ಟಿದೋನು. ಕ್ಯಾಪ್ಟನ್ ಮುರಳಿ ಅಲ್ಲಲ್ಲಿ - ಅಲ್ಲಲ್ಲಿ journey break ಮಾಡುತ್ತಿದ್ದ. ನಂಗೆ ಸಿಟ್ಟೇ ಬರುತ್ತಿತ್ತು. “ನಿಂಗೆ ಗೊತ್ತಿಲ್ಲ ರವೀ, ಒಂದೇ ಸಲಕ್ಕೆ ಬೆಟ್ಟ ಹತ್ತಿ ಬಿಡಬಾರದು. ನಿನ್ನ ದೇಹ ಕೊಂಚ ಕೊಂಚವೇ ಹೊಂದಿಕೊಳ್ಳುತ್ತದೆ. ಅದು acclimatize ಆಗೋ ವಿಧಾನ. ಅದಾದ ನಂತರವೇ ಮೇಲಕ್ಕೆ ತಲುಪೋದು ಒಳ್ಳೆಯದು. ಮೊದಲು ಚೆನ್ನಾಗಿ ಊಟ ಮಾಡು. ನನಗೆ Rumನ full ration ಇದೆ. ಖುಷಿಯಾಗಿ ಕುಡಿ. Smoke less. ಚೀಸ್ ತಿನ್ನು" ಅನ್ನುತ್ತಿದ್ದ. ನಾನು ಹಾಗೇ ಮಾಡಿದೆ. ಆದರೆ ಒಂದು ರಾತ್ರಿ, ಅವನದೇ jeepನಲ್ಲಿ ಹೋಗುವಾಗ “ರವೀ, ನಿನ್ನ shoe ಇದೆಯಲ್ಲ? ಅವುಗಳಲ್ಲಿ ಬೆರಳುಗಳಿವೆ. ನೀನು ಒಂದೇ ಸಮನೆ ಆ ಬೆರಳು ಆಡಿಸುತ್ತಾ ಇರಬೇಕು ಇಲ್ಲಿಂದ. ಅದನ್ನು ಯಾವಾಗ ನಿಲ್ಲಿಸಬೇಕು ಅಂತ ಹೇಳ್ತೀನಿ. ಗೊತ್ತಿರಲಿ, ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿಯಾದ ಸೇ ಲಾ ಪಾಸ್ ದಾಟಲಾರಂಭಿಸಿದ್ದೇವೆ" ಅಂದಿದ್ದ ಡಾ.ಮುರಳಿ.

ಸೇ ಲಾ ಪಾಸ್ ಎಂಬುದು ಊರಲ್ಲ. ಅದು ಹಿಮಾಲಯದ್ದೇ ಆದ ಪರ್ವತ ಶ್ರೇಣಿಯಲ್ಲಿರುವ ಒಂದು peak. ಸಮುದ್ರ ಮಟ್ಟದಿಂದ ಬರೋಬ್ಬರಿ ಹದಿನಾಲ್ಕು ಸಾವಿರ ಅಡಿ ಎತ್ತರದಲ್ಲಿದೆ. ಸದರಿ ಪಾಸ್ ಬಗ್ಗೆ ರೋಚಕವಾದ ಕಥಾನಕಗಳಿವೆ. ಎಂಥ ಕಟ್ಟರ್ ಸೈನಿಕನಿಗೂ ಇಂತಹ ರೋಚಕ ಕಥಾನಕಗಳನ್ನು ನಂಬಬೇಕಿರುತ್ತದೆ. ಅಂಥ ಸೇ ಲಾ ಪಾಸ್ ದಾಟುವಾಗ ಜೀವ ಅಂಗೈಯಲ್ಲಿ ಹಿಡಿದುಕೊಂಡೇ ಕುಳಿತಿದ್ದೆ. ನಮ್ಮ ಜೀಪು ಕೊಂಚ ಜಾರಿದರೂ, ಅದರ ಟೈರು ಒಂದೇ ಒಂದು ಸಲಕ್ಕೆ ಪುಸುಗಿದರೂ finish. ನಮ್ಮ ಹೆಣಗಳು ಸಿಗುವುದು ಎಲ್ಲೋ, ಯಾವತ್ತೋ, ಅದೆಂಥ ಪ್ರಪಾತದಲ್ಲೋ, ಯಾವ ಸ್ಥಿತಿಯಲ್ಲೋ! ಮುರಳಿ ನನಗೆ ಜೀಪ್‌ನಲ್ಲಿ ಕುಳಿತಿದ್ದಾಗಲೇ ಎರಡು ಮೂರು ಬಾರಿ ರಮ್ ಬಗ್ಗಿಸಿಕೊಟ್ಟಿದ್ದ. ಸೇ ಲಾ ಪಾಸ್‌ನಲ್ಲಿ ಬಂದೂಕು ಹಿಡಿದು ನಿಂತಿದ್ದ ಯೋಧನೊಬ್ಬನ ಆರೋಗ್ಯ ಪರಿಶೀಲಿಸಿ, ಅವನಿಗೆ ಔಷಧಿ ಬರೆದುಕೊಟ್ಟಿದ್ದ. ಸೈನಿಕರ ವಿಷಯಕ್ಕೆ ಬಂದಾಗ ಡಾ.ಮುರಳಿ ಇನ್ನಿಲ್ಲದಂಥ ಕಾಳಜಿಯೊಂದಿಗೆ ಅವರನ್ನು ರಕ್ಷಿಸುತ್ತಿದ್ದ. ನಾನು ಸೇ ಲಾ ಪಾಸ್‌ನಲ್ಲಿ ಜೀಪಿನಿಂದ ಇಳಿದು ರಸ್ತೆಯ ಮೇಲೆಯೇ ಅಷ್ಟುದ್ದ ನಡೆದೆ. ನೆತ್ತಿಯ ಮೇಲೆ ಹಿಮದ ಹುಡಿ. “ರವೀ, ನೀನೊಳ್ಳೆ ಮಗೂ ಥರದ ಮನುಷ್ಯ. ನಾಳೆಯಿಂದ ಬರೀ ಇದೇ ಹಿಮ ನೋಡ್ತೀಯ ಈಗ ಜೀಪಿನೊಳಕ್ಕೆ ಬಾ. ಒಂದು small peg rum ಕೊಡ್ತೀನಿ. ಹೀಗೆ ಹುಚ್ಚಿಗೆ ಬಿದ್ದು ಸೇ ಲಾ ಪಾಸ್ ಮೇಲೆ ಓಡಾಡಬೇಡ" ಅಂದಿದ್ದ.

ಹೇಳಿದೆನಲ್ಲ? ಅದು cruel winter. ಒಂದು ಕಡೆ ಭೀಕರ ಪ್ರಪಾತ. ಇನ್ನೊಂದು ಕಡೆ ನಿರ್ದಯಿ ಬಂಡೆಗಳು. ಜೀಪು ಉರುಳಿದರೆ ಹೇಗೆ ಎಂಬ ಭಯ. ಹಿಮಪಾತದ ಮೇಲೆ ಜೀಪ್ ಓಡಿಸೋದು ಕೊಂಚ ಕಷ್ಟ. Skid ಆಗುತ್ತೆ. Pay loader ಎಂಬ ಯಂತ್ರವಿರೋ ಲಾರಿ ಬಂದು ನಮ್ಮ ದಾರಿ ಮೇಲೆ ಬಿದ್ದ ಮಂಜನ್ನು ಅಕ್ಕ-ಪಕ್ಕ ಸರಿಸಿ ದಾರಿ ಮಾಡಿಕೊಡುತ್ತದೆ. ಅದರ ಧೈರ್ಯದ ಮೇಲೆ ಜೀಪು ಸಾಗಬೇಕು. ಅವತ್ತಷ್ಟೆ ಆದ ಹಿಮಪಾತದ ಮೇಲೆ ಜೀಪು ಹೇಗೋ ಸಲೀಸಾಗಿ ಸಾಗಿಬಿಡುತ್ತದೆ. ಅದು ಬಿಟ್ಟು, ಮಾರನೇ ದಿನ ಹೊರಟಿರಾ? That's miserable ಬಿದ್ದ ಹಿಮ, ಒಂದು ದಿನದೊಳಗಾಗಿ ಕೊಚ್ಚೆಯಾಗಿಬಿಡುತ್ತದೆ. ಇಂಥವೆಲ್ಲ ಗುಮಾನಿ, ಭಯಗಳು ಸಾಲದು ಅಂತ ಜೀಪಿನ ನಮ್ಮ driver ಅದೆಲ್ಲಿ ಇಳಕೊಂಡು ಹೋಗಿ ಕುಡಿದು ಬಂದನೋ ಗೊತ್ತಿಲ್ಲ. ಚೆನ್ನಾಗಿಯೇ ಕುಡಿದಿದ್ದ. But he drove carefully.

ಮುಂದೆ ಹಿಮಪಾತದ, ಆ ಬದುಕಿನ ನಾನಾ ನಮೂನೆಗಳನ್ನು ಕಂಡೆ. ಅನುಭವಿಸಿದೆ. ಈ ಪೈಕಿ ಎಲ್ಲಕ್ಕಿಂತ cruel ಚಳಿ ಯಾವುದು? ಲೆಕ್ಕ ಸಿಗುತ್ತಿಲ್ಲ. ಅದೇನೆ ಇರಲಿ: I enjoy ಚಳಿ. ಈ ಹಿಂದೆ ಭಯಂಕರ ದಪ್ಪ ಇದ್ದೆನಲ್ಲ? ಆಗ ರೂಮಿನಲ್ಲಿ A.C. ಹಾಕಿಕೊಂಡು, ಅಂಗಿ-ಪಂಗಿ ಬಿಚ್ಚಿ ಹಾಕಿ ಆಲ್‌ಮೋಸ್ಟ್ ಬೆತ್ತಲೆ ಮಲಗುತ್ತಿದ್ದೆ: ಕೆಟ್ಟ ಚಳಿಗಾಲದಲ್ಲಿ. That was not a problem. ಆದರೆ ಈಗ ತುಂಬ ತೆಳ್ಳಗಾಗಿದ್ದೇನೆ. ತಿನ್ನುವುದೂ ಕಡಿಮೆ. ಕುಡಿತವಂತೂ ಇಲ್ಲವೇ ಇಲ್ಲ. ಹೀಗಾಗಿ ಚಳಿ ತಡೆಯುವುದು ಕಷ್ಟ! ಅತಿಯಾಗಿ ಚಳಿಯಾದರೆ hot water bag ತರಿಸಿ ಇಟ್ಟುಕೊಳ್ಳುತ್ತೇನೆ. ಅದೊಂದೇ ಹಿತ.

ಹೇಳಿದೆನಲ್ಲ, ಗೆಳೆಯರು ದಿಲ್ಲಿಗೆ ಕರೆಯುತ್ತಲೇ ಇದ್ದಾರೆ. ಈ slim slim ಅಪ್ಪಯ್ಯನಿಗೆ ಚಳಿಯದೇ ಆತಂಕ.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 12 January, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books