Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅವಳಿಗೊಂದು ಅಫೇರ್ ಇದೆಯಾ ಅಂತ ನೋಡಿದರೆ...

“ನಿಮ್ಮ ಮಕ್ಕಳನ್ನು ನೀವು ಅನುಮಾನಿಸುತ್ತೀರಾ?'' ಅಂತ ಕೇಳಿದರೆ,

‘ಇಲ್ಲ, ಅವರಿಗೆ ತಮ್ಮ ಮೇಲಿನ ನಂಬಿಕೆಯನ್ನು ಹೇಗೆ ಗಳಿಸಿಕೊಳ್ಳೋದು ಅಂತ ಹೇಳಿ ಕೊಟ್ಟಿದ್ದೇನೆ' ಎಂಬುದು ನನ್ನ ಉತ್ತರವಾಗಿರುತ್ತದೆ.

ಮಕ್ಕಳು ಹುಟ್ತಲೇ ನಂಬಿಕೆಗೆ ಅರ್ಹರಾಗಿರುವುದಿಲ್ಲ. ಅವರು ನಮ್ಮ ಮಕ್ಕಳು ಅನ್ನೋ ಕಾರಣಕ್ಕೆ ಅವರನ್ನ ನಂಬಬೇಕಿಲ್ಲ. ನಂಬಿಕೆಯನ್ನು ಅವರು ಗಳಿಸಿಕೊಳ್ಳಬೇಕು. ಅಲ್ಲಿಯ ತನಕ ಅವರನ್ನು ನಾವು ಅವಮಾನಿಸುತ್ತ ಇರಬೇಕು ಅಂತೇನಿಲ್ಲ. ಆದರೆ ಪೂರ್ತಿಯಾಗಿ ನಂಬಬಾರದು: ಅಷ್ಟೆ.

ಸಾಮಾನ್ಯವಾಗಿ ನಾನು ಎರಡು ತರಹದ parentsನ ನೋಡುತ್ತಿರುತ್ತೇನೆ. ಒಂದು ಗುಂಪಿನವರು ‘ನಮ್ಮ ಮಗಳಲ್ವಾ ಅಂತ ಎಷ್ಟು ನಂಬಿದ್ದೆ ಕಣ್ರೀ. ನೋಡನೋಡ್ತಾನೇ ಮೋಸಮಾಡಿ ಬಿಟ್ಲು...' ಅಂತ ಕಣ್ಣೀರಿಡುವವರು. ಎರಡನೇ ಗುಂಪಿನ ತಂದೆ ತಾಯಿಗಳು ‘ನೀವು ವಿಪರೀತ ನಮ್ಮನ್ನ ಅನುಮಾನಿಸ್ತೀರಿ ಅಂತ ನನ್ನ ಮಗ ಕಂಪ್ಲೇಂಟ್ ಮಾಡ್ತಾನೆ. ನಾನು ಇಲ್ದೆ ಇರೋವಾಗ ನನ್ನ ರೂಮು ಚೆಕ್ ಮಾಡಿದೀರ ಅಂತ ಸಿಟ್ಟು ಮಾಡಿಕೋತಾನೆ. ಹಾಗೆ ಚೆಕ್ ಮಾಡೋದು ತಪ್ಪಾ?'

ಈ ಎರಡೂ ಗುಂಪಿನ ತಂದೆ ತಾಯಿಯರು ಕೊಂಚ ದಡ್ಡರು! Sorry to say that. ಮಗಳು ಇನ್ನೂ ಅಪ್ರಾಪ್ತ ವಯಸ್ಕಳಾಗಿದ್ದು, affair ಇಟ್ಟುಕೊಂಡು ಸಿಕ್ಕಿ ಹಾಕಿಕೊಂಡಾಗ ಅವಳು ಮಾಡುವ ಯಾವ ಆಣೆ ಪ್ರಮಾಣಗಳನ್ನೂ ನಂಬ ಬೇಕಾಗಿಲ್ಲ. ಅವಳದು ನಿಜಕ್ಕೂ ಗೊಂದಲಕ್ಕೆ ಬಿದ್ದ ಮನಸ್ಸು. ಹೊರಗೆ ಹುಡುಗನ ಪ್ರೀತಿ ಎಳೆಯುತ್ತಿರುತ್ತದೆ. ಕನಸು ಕರೆಯುತ್ತಿರುತ್ತದೆ. ಮನೆಯಲ್ಲಿ ಅಪ್ಪ ಅಮ್ಮನ ಪ್ರೀತಿ ಕೈ ಜಗ್ಗಿ ಕೂಡಿಸುತ್ತಿರುತ್ತದೆ. ಯಾವ ಕಡೆಯ ಎಳೆತ ಹೆಚ್ಚಾದರೆ ಆ ಕಡೆಗೆ ವಾಲಿಬಿಡುವ-ದುಷ್ಟೆಯಲ್ಲದ-ಕೂಸು ಅದು. ಎಲ್ಲ ಆಣೆ ಪ್ರಮಾಣ, ನಂಬಿಕೆ-ಭರವಸೆಗಳನ್ನು ಸುಳ್ಳುಮಾಡಿ ಅವಳು ಹೊರಟುಬಿಟ್ಟರೆ ಆಶ್ಚರ್ಯಪಡಲೇ ಬೇಕಾಗಿಲ್ಲ.

ಹಾಗಂತ ಅವಳನ್ನು ದಂಡಿಸಬಾರದು. ನಿರ್ಬಂಧಿಸಬಾರದು. ವಿಪರೀತ ಮುದ್ದುಮಾಡಿ, ಗೋಗರೆದು, emotional ಆಗಿ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನೂ ಮಾಡಬಾರದು. ‘ನೋಡೂ, ಇದು ರೆಕ್ಕೆ ಬಿಚ್ಚಿ ಹೊರಡುವ ವಯಸ್ಸಲ್ಲ. ನಿನ್ನನ್ನು ನಾವು ಬಿಡುವುದೂ ಇಲ್ಲ. ಇಲ್ಲದ ಕಳ್ಳಾಟ ಆಡಬೇಡ. ನೀನು ರಹಸ್ಯವಾಗಿ ಏನೇ ಮಾಡಿದರೂ ನಮಗೆ ಗೊತ್ತಾಗುತ್ತದೆ. ಮತ್ತೆ ಮತ್ತೆ ವಂಚಿಸೋ ಪ್ರಯತ್ನ ಮಾಡಿದರೆ ಈಗಿರೋ ಪ್ರೀತೀನೂ ಕಳ್ಕೋತೀಯಾ. Stop this. ಮನೇಲಿ ನೆಮ್ಮದಿಯಾಗಿರು. ಸದ್ಯಕ್ಕೆ ಮದುವೆಯ ಮಾತು ಬಿಡು' ಅಂತ ಸ್ಪಷ್ಟವಾಗಿ ಹೇಳಬೇಕು. ಹ್ಞಾಂ, ನಮ್ಮ ವಂಶದ ಮರ್ಯಾದಿ ತೆಗೆದೆಯಾ ಅಂತ ಕೂಗೋದೂ ತಪ್ಪು. ಹಾಗೇನೇ, ಹುಡುಗಿ affair ಇಟ್ಟುಕೊಂಡಳು ಅಂದ ಮಾತ್ರಕ್ಕೆ ರಾತ್ರೋರಾತ್ರಿ ಇನ್ನೊಬ್ಬನ್ಯಾವನನ್ನೋ ನೋಡಿ, ಅವನಿಗೆ ಕಟ್ಟಲು ಹೊರಡುವುದು ಅದಕ್ಕಿಂತ ದೊಡ್ಡ ತಪ್ಪು.

ಮಗಳು ತಪ್ಪು ಮಾಡಿರೋದು ಹೌದು. ಅವಳನ್ನು ಪ್ರೀತಿಸುತ್ತಲೇ ಆ ತಪ್ಪನ್ನು ತಿದ್ದಿ. ಇನ್ನೊಂದೇ ಒಂದು ಸಲ ಕೂಡ ನಿನಗೆ ಆ ತಪ್ಪನ್ನು ಮಾಡಲು ಬಿಡುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಿ. ‘ನನ್ಮೇಲೆ ನಿಮಗೆ ನಂಬಿಕೆ ಇಲ್ವಾ?' ಎನ್ನುವಂಥ ಮಾತುಗಳನ್ನಾಡುತ್ತಾರೆ ಮಕ್ಕಳು. ‘ನಿನ್ನ ಮೇಲೆ ನಾನು ನಂಬಿಕೆ ಇಡುವುದು ಮುಖ್ಯ ಅಲ್ಲ. ಆ ನಂಬಿಕೆಯನ್ನು ನೀನು ಗಳಿಸಿಕೋ' ಅಂತ ಸ್ಪಷ್ಟವಾಗಿ ಹೇಳಿ.

ಈ ವಿಷಯದ ಬಗ್ಗೆ ಪದೇ ಪದೇ ಮಾತನಾಡುವುದು, ಬಯ್ಯುವುದು ತಪ್ಪು.

ಇದಕ್ಕಿಂತ ಮುಂಚಿನ ಹಂತ ಅಂದರೆ, ಆ ವಯಸ್ಸಿನ ಹುಡುಗಿ (ಹದಿನಾಲ್ಕು-ಹದಿನಾರರ ಮಧ್ಯದವಳು) ಹೊರಗೊಂದು affair ಇಟ್ಟುಕೊಂಡಳು ಅಂದರೆ, ಅವಳ ವರ್ತನೆಯಲ್ಲಿ ಗಣನೀಯವಾದ ಬದಲಾವಣೆಗಳಾಗುತ್ತಿರುತ್ತವೆ. ಅವನ್ನು ಗಮನಿಸಬೇಕು. ವಿನಾಕಾರಣದ ಸುಳ್ಳುಗಳನ್ನು ಹೇಳತೊಡಗುತ್ತಾಳೆ. ಕಣ್ಣಿಗೆ ಕಣ್ಣು ಕೊಟ್ಟು ಮಾತನಾಡುವುದಿಲ್ಲ. ತಂದೆ ಬರುವುದರೊಳಗಾಗಿ ಮಲಗಿಬಿಡುತ್ತಾಳೆ. ಕುಟುಂಬದವರೆಲ್ಲ ಎಲ್ಲಿಗಾದರೂ ಹೊರಟರೆ 'ನಾನು ಬರೋದಿಲ್ಲ, ಹೊಟ್ಟೆನೋವು’ ಅಂತಾಳೆ. ಒಂದಿಬ್ಬರು ಆಪ್ತಗೆಳೆಯರೊಂದಿಗೆ ವಿಪರೀತ ಗುಟ್ಟುಗುಟ್ಟಾಗಿ ಮಾತನಾಡತೊಡಗುತ್ತಾಳೆ. ಅವಳ ಕೋಣೆ, ಅಲ್ಮೇರಾ, ಪುಸ್ತಕಗಳ ಮಧ್ಯೆ ಅವಳವಲ್ಲದ, strange ಅನ್ನಿಸುವಂತಹ, 'ಇದೇನಿದು’ ಅಂತ ಕೇಳಿದರೆ ಅವಳ ಕೈಲಿ ಥಟ್ಟನೆ ಉತ್ತರಿಸಲಿಕ್ಕಾಗದಂತಹ ವಸ್ತುಗಳು ಸಿಗುತ್ತವೆ. '‘ನನ್ ಫ್ರೆಂಡ್‌ಗೆ ಈ ಹಾಡು ಇಷ್ಟ, ನನ್ ಫ್ರೆಂಡ್ ಕೊಟ್ಲು, ನನ್ ಫ್ರೆಂಡ್ ಏನಂದ್ಲು ಗೊತ್ತಾ?" ಹೀಗೆ ಫ್ರೆಂಡ್ ಯಾರು ಅಂತ ಹೇಳದೇನೇ ಅವಳು ತನ್ನ ಮಾತಿನ ಮಧ್ಯೆ ಒಂದು ರೆಫರೆನ್ಸ್ ತರುತ್ತಿರುತ್ತಾಳೆ. ಎಲ್ಲಕ್ಕಿಂತ ಹೆಚ್ಚಾಗಿ ಅವಳು ಹೇಳುವ ವಿನಾಕಾರಣದ ಸುಳ್ಳುಗಳೇ ಸಾಕು: ಅವಳಿಗೊಂದು affair ಇದೆಯಾ ಇಲ್ಲವಾ ಎಂಬುದನ್ನು ಗೊತ್ತು ಮಾಡಿ ಕೊಟ್ಟುಬಿಡುತ್ತವೆ.

ಹಾಗೆ ಮಕ್ಕಳ ಮೇಲೆ ಅನುಮಾನ ಬಂದಾಗ ಅವರ ಕೋಣೆ, ಬಟ್ಟೆ, ಪುಸ್ತಕ ಇತ್ಯಾದಿಗಳನ್ನು ಚೆಕ್ ಮಾಡುವುದು ಸರಿಯಾ, ತಪ್ಪಾ ಎಂಬುದರ ಬಗ್ಗೆ ಎಲ್ಲ ಕಾಲದಲ್ಲೂ, ಎಲ್ಲ ದೇಶಗಳಲ್ಲೂ ಚರ್ಚೆ ನಡೆದಿದೆ. ನಡೆಯುತ್ತಲೇ ಇರುತ್ತದೆ. 'ಅಪ್ಪ ಅಮ್ಮ ನಮ್ಮನ್ನು ಅಪನಂಬಿಕೆಯಿಂದ ನೋಡುತ್ತಾರೆ’ ಎಂಬ ಬೇಸರ ಮಕ್ಕಳ-ಮನೆಯ ಸಂಬಂಧವನ್ನೇ ಕೆಡಿಸಿಬಿಡುತ್ತದೆ ಎಂಬುದು ಒಂದು ಥಿಯರಿ. 'ಅವರು ಪೂರ್ತಿಯಾಗಿ ನಂಬಿಕೆಯನ್ನು ಗಳಿಸಿಕೊಳ್ಳುವ ತನಕ ಅವರ ಮೇಲೊಂದು ಕಣ್ಣಿಟ್ಟಿರುವುದು ತಪ್ಪಲ್ಲ’ ಎಂಬುದು ಇನ್ನೊಂದು ಥಿಯರಿ. ಇವೆರಡರ ನಡುವಿನ ಇನ್ನೊಂದು ಥಿಯರಿ ಅಂದರೆ, 'ಸುಮ್ಮಸುಮ್ಮನೆ ರೂಮು-ಜೇಬು ಚೆಕ್ ಮಾಡಬೇಡಿ. ಆದರೆ ಅನುಮಾನ ಬಂತೋ? ಯಾವುದೇ ಮುಲಾಜಿಟ್ಟುಕೊಳ್ಳದೆ ಚೆಕ್ ಮಾಡಿಬಿಡಿ. ನೀವು ಬುದ್ಧಿವಂತರಾಗಿದ್ದರೆ, ಹಾಗೆ ಚೆಕ್ ಮಾಡಿದ್ದೀರಿ ಎಂಬುದು ಮಕ್ಕಳಿಗೆ ಗೊತ್ತೇ ಆಗದಂತೆ ಮಾಡಿ. Why hurt them?’

ಹುಡುಗ ಸಿಗರೇಟು ಸೇದೋಕೆ ಶುರು ಮಾಡಿದ್ದಾನಾ ಅಂತ ಗೊತ್ತು ಮಾಡಿಕೊಳ್ಳುವುದಕ್ಕೆ, ಅವನ ಕಿವಿ ಹಿಡಿದು ಮೂತಿ ಮೂಸಬೇಕಿಲ್ಲ. ಅವನು ಒಗೆಯಲು ಹಾಕಿದ ಅಂಗಿಯ ಜೇಬನ್ನು ಉಲ್ಟಾ ಮಾಡಿನೋಡಿದರೆ ಸಾಕು: ತಂಬಾಕಿನ ಸಣ್ಣ ನುಸಿ ಕಾಣಿಸಿಬಿಡುತ್ತದೆ. ಈ ತರಹದ ಸೂಕ್ಷ್ಮಗಳನ್ನು ತಂದೆಯರಿಗಿಂತ ತಾಯಂದಿರು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಮಗಳ ಕತ್ತಿನ ಮೇಲೆ, ತೋಳಿನ ಮೇಲೆ ಆಗಾಗ ಕಂಡುಬರುವ unexplained ನೀಲಿಗಟ್ಟಿದ ಗುರುತುಗಳು, ಇದ್ದಕ್ಕಿದ್ದಂತೆ ಬದಲಾಗಿಬಿಡೋ ಅವಳ ಷೆಡ್ಯೂಲುಗಳು, ಸುಮ್ಮಸುಮ್ಮನೆ ಸಿಡಿಮಿಡಿಗುಟ್ಟುವಿಕೆ, ಫೋನಿಗೆ ಕಚ್ಚಿಕೊಂಡೇ ಕೂತುಬಿಡುವಿಕೆ-ಇಂಥವು ತಾಯಿಯರಿಗೆ ಎಚ್ಚರಿಕೆಯ ಸಂಕೇತಗಳಾಗಬೇಕು. ಅಷ್ಟೇ ಅಲ್ಲ: ಅನುಮಾನ ಬಂದಾಗ ಮಕ್ಕಳನ್ನು ಎದುರಾಎದುರು ನಿಲ್ಲಿಸಿಕೊಂಡು (ಪ್ರೀತಿಯಿಂದ, ಆದರೆ ಅತ್ಯಂತ ಸ್ಪಷ್ಟ ದನಿಯಲ್ಲಿ) ’ಇದೇನಿದು ನಿಂದು?’ ಅಂತ ಕೇಳಿಬಿಡಬೇಕು.

ಇದೆಲ್ಲಕ್ಕಿಂತ ಅಪಾಯಕಾರಿ ಸಂಗತಿಗಳೆಂದರೆ, ಮಗ ಕುಡಿಯಲು ಕಲಿತಿದ್ದಾನಾ? ಡ್ರಗ್ಸ್ ತಗೋತಿದ್ದಾನಾ? ಎಂಬಂಥವು. ವಿನಾಕಾರಣ ಅವನ ಬಾಯಿಂದ ಕಾಫ್ ಸಿರಪ್‌ನ ವಾಸನೆ ಬಂದರೂ ಸಾಕು, ನಿಲ್ಲಿಸಿ ಕೇಳಿಬಿಡಿ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಸುಲಭವಾಗಿ ಹರಡುತ್ತಿರುವ ಚಟವೆಂದರೆ-ಸಿರಪ್ ಕುಡಿಯೋದು! ಕೇಳಿಬಿಟ್ಟರೆ ಮಗ ಏನಂದುಕೊಳ್ಳುತ್ತಾನೋ ಅಂತ ಹಿಂಜರಿಯಲೇ ಬೇಡಿ.

ಇವಿಷ್ಟೂ ಕೊಂಚ ಬೆಳೆದ ಹುಡುಗ-ಹುಡುಗಿಯರ ಕುರಿತಾದ ಮಾತಾಯಿತು. ಮಕ್ಕಳಿನ್ನೂ ಹೈಸ್ಕೂಲಿನಲ್ಲಿದ್ದಾಗಲೇ ಅನುಮಾನಗಳು ಹುಟ್ಟಿಕೊಂಡರೆ, ಅವುಗಳನ್ನು ಬಗೆಹರಿಸಿಕೊಳ್ಳಲು ಚೀಲ-ಗೀಲ ಚೆಕ್ ಮಾಡುವುದು ಬೇಕಿಲ್ಲ. ಅವರಿಗೆ ಗೊತ್ತಾಗದಂತೆ ಅವರ ಶಾಲೆಗೆ ಹೋಗಿಬಿಡಿ. ಅಲ್ಲಿ ಅವರಿವರನ್ನು ವಿಚಾರಿಸಿದರೆ ಸಾಕು, ಕಂದನ ಬಾಲಲೀಲೆಗಳೇನಿವೆ ಎಂಬುದು ಗೊತ್ತಾಗಿಬಿಡುತ್ತದೆ.

ಇಂಟರ್‌ನೆಟ್ಟು, ಛಾಟಿಂಗು, ಸೆಕ್ಸ್ ವೆಬ್‌ಸೈಟುಗಳು, ಸಲಿಂಗಿ ಸಮೂಹಗಳು, ಕುಡಿತ, ಡ್ರಗ್ಸು, ಟೀನೇಜ್ ಕ್ರೈಮು-ಹೀಗೆ ನೂರೆಂಟು ಅಪಾಯಗಳು ನಮ್ಮ ಮನೆಗಳ ಒಳಗೆ, ಹೊರಗೆ ಗಸ್ತು ತಿರುಗುತ್ತಲೇ ಇರುವಂಥ ಕಾಲವಿದು. ಎಚ್ಚರಿಕೆ ವಹಿಸದಿದ್ದರೆ ಹೇಗೆ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 January, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books