Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಬರೆದದ್ದು ನಾನೇ ಎಂಬುದು ಪೂರ್ತಿ ಓದಿದ ಮೇಲೇ ಗೊತ್ತಾಗೋ ಚಂದ

ಇನ್ನೆರಡು ದಿನ ದಾಟಿದರೆ ತಾರೀಖು ಮೂವತ್ತು. ಅವತ್ತು ಎಂಬತ್ತರ ಸತ್ಯಕಾಮರಿಗೆ ಅಭಿನಂದನೆ. ಬೆಂಗಳೂರಿನ ಸಾಹಿತಿ ಮಿತ್ರರಲ್ಲಿ ಸತ್ಯಕಾಮರ ವ್ಯಕ್ತಿತ್ವದ ಬಗ್ಗೆಯೇ ಭಿನ್ನಾಭಿಪ್ರಾಯ. ಅವರೊಬ್ಬ ಸಾಧಕ ಅಲ್ಲ ಸಮಯ ಸಾಧಕ. ಅವರು ತಾಂತ್ರಿಕ. ಅಲ್ಲ ಕುತಂತ್ರಿ. ಸತ್ಯಕಾಮ ನಿಜವಾದ ಶ್ರೇಷ್ಠ ಸಾಹಿತಿ. ಅಲ್ಲವೇ ಅಲ್ಲ; ಅವರದು ಅರ್ಥಹೀನ ಅಧಮ ಸಾಹಿತ್ಯ!

ಹೀಗೆ ತದ್ವಿರುದ್ಧದ ಅಭಿಪ್ರಾಯಗಳನ್ನು ಹುಟ್ಟಿಕೊಳ್ಳಲು ಬಿಟ್ಟು ತಮ್ಮ ಪಾಡಿಗೆ ತಾವು ಇದ್ದುಬಿಟ್ಟಿರುವ ವಯೋವೃದ್ಧ ಅನಂತಾಚಾರ್ಯ ಕೃಷ್ಣಾಚಾರ್ಯ ಶಹಪೂರರು ಕನ್ನಡ ಸಾಹಿತ್ಯ ಕಂಡ ಅತ್ಯಂತ ಕಾಂಟ್ರೋವರ್ಷಿಯಲ್ ವ್ಯಕ್ತಿತ್ವಗಳಲ್ಲಿ ಒಬ್ಬರು. ಅವರೇಕೆ ತಮ್ಮ ಹೆಸರನ್ನು ಸತ್ಯಕಾಮ ಅಂತ ಇಟ್ಟುಕೊಂಡರೋ, ಅದೇಕೆ ಮದುವೆಯಾಗದೆ ವ್ಯವಸ್ಥಿತ ಕಾಮವನ್ನು ಧಿಕ್ಕರಿಸಿ ಬ್ರಹ್ಮಚಾರಿಯಾಗಿ ಉಳಿದರೋ, ಮೊದಲಿಂದ ತುದಿಯ ತನಕ ಅದೇಕೆ ಅಸಾಮಾಜಿಕ ಪಾತ್ರಗಳನ್ನೇ ಕೈಗೆತ್ತಿಕೊಂಡು ಸಾಮಾಜಿಕ ವಿಷಯಗಳ ಕುರಿತು ಕಾದಂಬರಿಗಳನ್ನು ಬರೆದರೋ, ತಂತ್ರದ ಬಗ್ಗೆ ಬರೆದದ್ದೇ ಅಲ್ಲದೆ ಅದರ ಆಳ ಅಗಲಗಳನ್ನು ವರ್ಷಾನುಗಟ್ಟಲೆ ಅದೇಕೆ ಅಳೆಯುತ್ತ ಕುಳಿತರೋ....ಅವರು ಉತ್ತರಿಸಿದರೇನೇ ತಿಳಿದೀತು.

ಆಗಸ್ಟ್ 30ರಂದು ನಡೆಯಲಿರುವ ಅವರ ಅಭಿನಂದನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸತ್ಯಕಾಮರನ್ನು ಪರಿಚಯಿಸುವ ಉದ್ದೇಶದಿಂದ, ಅವರನ್ನು ತೀರ ಹತ್ತಿರದಿಂದ ಬಲ್ಲ ಲಕ್ಷ್ಮೀಶ ತೋಳ್ಪಾಡಿ, ಬನ್ನಂಜೆ ಗೋವಿಂದಾಚಾರ್ಯರು ಮತ್ತು ಬನ್ನಂಜೆ ವೀಣಾ ಈ ಮೂವರೂ ಮೂರು ಲೇಖನಗಳನ್ನು ಬರೆದಿದ್ದಾರೆ. ಈ ತನಕ ಸತ್ಯಕಾಮರನ್ನು ನೀವೇನಾದರೂ ಅಷ್ಟಿಷ್ಟು ಅರ್ಥ ಮಾಡಿಕೊಂಡಿದ್ದರೆ, ಅದಿಷ್ಟನ್ನೂ confuse ಮಾಡಿ ಬಿಸಾಕುವಂಥ ಲೇಖನ ತೋಳ್ಪಾಡಿಯವರದು. ಗೋವಿಂದಾಚಾರ್ಯರು ಸತ್ಯಕಾಮರಲ್ಲಿನ ಪರಿವ್ರಾಜಕನನ್ನು ಮಾತ್ರ ಪರಿಚಯಿಸಿ ಸುಮ್ಮನಾಗಿದ್ದಾರೆ. ವೀಣಾ ಬನ್ನಂಜೆಯದು ಕನ್ನಡಿ ನೋಡಿಕೊಳ್ಳುವ ಪ್ರಯತ್ನ. ಕಳೆದ ಕೆಲ ವರ್ಷಗಳಿಂದ ಸತ್ಯಕಾಮರೊಂದಿಗೇ ಜೀವಿಸುತ್ತ ಆ ಭೂಮಿ ತೂಕದ ಬಿರುಗಾಳಿಯ ಮುಂದೆ ತತ್ತರಿಸಿರುವ ತರಗೆಲೆ ನಾನು ಎಂಬುದನ್ನಷ್ಟೇ ಆ ಹೆಣ್ಣುಮಗಳು ವಿವರಿಸಿ ಸೋತಿದ್ದಾಳೆ.

ಒಟ್ಟಿನಲ್ಲಿ ಮೂರೂ ಲೇಖನ ಮೂರು ಬಾರಿ ದಾರಿ ತಪ್ಪಿಸುತ್ತವೆ. ಕಾರಣವಿಷ್ಟೇ:

ಸತ್ಯಕಾಮರ ವ್ಯಕ್ತಿತ್ವವೇ ಅಂತಹುದು. ಅದು ಒಂದು ತೆಕ್ಕೆಗೆ, ಒಂದು ಅನುಭೂತಿಗೆ, ಒಂದು ನಿರ್ಣಯಕ್ಕೆ ಸಿಕ್ಕುವಂತಹುದಲ್ಲ. ಅದಕ್ಕೂ ಕಾರಣವಿದೆ. ಈ ಮನುಷ್ಯ ತಮ್ಮ ಎಂಟು ದಶಕಗಳ ಬದುಕನ್ನು ಎಂಟು ದಿಕ್ಕುಗಳಿಗೆ ಚೆಲ್ಲಿ ಕುಳಿತಿದ್ದಾರೆ. ಒಂಬತ್ತನೆಯ ದಿಕ್ಕು ಹುಡುಕಾಡುತ್ತಾ! ಲಕ್ಷ್ಮೀಶ ತೋಳ್ಪಾಡಿಯಂತಹವರ ಬೆರಗುಗಣ್ಣುಗಳಿಗೆ ಸತ್ಯಕಾಮ ಪವಾಡ ಪುರುಷನಂತೆ ಕಾಣಿಸುತ್ತಾರೆ. ‘ನಂದಿ ಬೆಟ್ಟಕ್ಕೆ ಸತ್ಯಕಾಮರನ್ನು ಕರೆದೊಯ್ದಿದ್ದೆ. ಅಲ್ಲಿ ಉಪನಿಷತ್ತುಗಳ ಬಗ್ಗೆ ಅವರನ್ನು ಮಾತಾಡಲು ಹೇಳಿದೆ. ಸತ್ಯಕಾಮ ತಾಸುಗಟ್ಟಲೆ ಮಾತಾಡಿದರು. ಆದರೆ ರೆಕಾರ್ಡರಿನಲ್ಲಿ ಅದು ಮೂಡಲೇ ಇಲ್ಲ’ ಎಂಬುದಾಗಿ ಬರೆಯುತ್ತಾರೆ. ಅದರ ಒಟ್ಟರ್ಥವೆಂದರೆ, ಸತ್ಯಕಾಮರಿಗೆ ತಾಂತ್ರಿಕ ವಿದ್ಯೆಗಳಿದ್ದಾವೆ ಎಂಬುದನ್ನು ಓದುಗರಿಗೆ ತಿಳಿಯಪಡಿಸುವುದು.

ಸತ್ಯಕಾಮರೇ ಆಗಲಿ, ಆ ಧಾಟಿಯ ಮತ್ಯಾವುದೇ ಲೇಖಕನಾಗಲೀ, ತಂತ್ರದಂತಹ ವಿಷಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡಾಗ ಸಹಜವಾಗಿಯೇ ಅದನ್ನು ಸಾದ್ಯಂತವಾಗಿ ಅರಿತುಕೊಳ್ಳುತ್ತಾನೆ. ಸಹನೆಯಿದ್ದಷ್ಟು ಹೊತ್ತೂ ಆ ವಿದ್ಯೆಯ ಪ್ರಯೋಗಗಳನ್ನು ಖುದ್ದಾಗಿ ಕಲಿಯಲು ಪ್ರಯತ್ನಿಸುತ್ತಾನೆ. ಒಂದು ಹಂತದಲ್ಲಿ ಈ ವಿದ್ಯೆ, ಇದರ ಆಳ ವಿಸ್ತಾರಗಳು ಇಷ್ಟೇ ಎಂದು ಗೊತ್ತಾಗಿ ಹೋದ ಮೇಲೆ ಅಲ್ಲಿಗದನ್ನು ಬಿಟ್ಟಾಕುತ್ತಾನೆ. ಆ ವಿದ್ಯೆಯಾಚೆಗಿನ ಪರಿಣತಿಗಳ ಬಗ್ಗೆ ಕುತೂಹಲ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾನೆ. ಅಷ್ಟೇ ಹೊರತು ಅಂಥ ವಿದ್ಯೆಗಳು ತನಗೆ ಬರುತ್ತವೆಂಬುದನ್ನು ಸಾಬೀತುಪಡಿಸುತ್ತಾ, performer ಮಟ್ಟದಲ್ಲಿ ಉಳಿದು ಹೋಗುವುದಿಲ್ಲ. ನನಗೆ ಗೊತ್ತಿದ್ದ ಮಟ್ಟಿಗೆ ಸತ್ಯಕಾಮ ಎಲ್ಲೂ ಪವಾಡಗಳನ್ನ, ತಂತ್ರಗಳನ್ನ, ಸಿದ್ಧಿಗಳನ್ನ, ಸಾಧನೆಗಳನ್ನ perform ಮಾಡಿಲ್ಲ. Performerಗಳ ಬಗ್ಗೆ ಮಾತಾಡಿದ್ದಾರೆ. ಬರೆದಿದ್ದಾರೆ. ಅಷ್ಟೇ. ಇನ್ನು ಅವರ ತಂತ್ರ ಸಿದ್ಧಿಯ ಬಗ್ಗೆ ಹರಡಿರುವ ವದಂತಿಗಳೆಲ್ಲ ತೋಳ್ಪಾಡಿ ಥರದವರ ಹ್ಯಾಲೂಸಿನೇಷನ್ನಿನ ಪರಿಣಾಮಗಳೇ.

ಇನ್ನು ವೀಣಾ ಬನ್ನಂಜೆಯವರ ಮನಸ್ಸು. ಅದು ಸತ್ಯಕಾಮರಲ್ಲಿ ಕರಗಿ ಹೋಗಿದೆ. ಇಪ್ಪತ್ತರ ಹುಡುಗಿ ಬದುಕಿನ ಸತ್ಯಗಳನ್ನು ಶೋಧಿಸುತ್ತಾ ಹೋಗಿ ಎಂಬತ್ತರ ವೃದ್ಧನ ರಿಯಲೈಸೇಷನ್‌ಗಳನ್ನು ತನ್ನದಾಗಿಸಿಕೊಳ್ಳುವ ತವಕಕ್ಕೆ ಬಿದ್ದಿದ್ದಾಳೆ. ಅದರಲ್ಲಿರುವುದು ಶುದ್ಧ ಆರಾಧನೆ. ಆಕೆ ಪವಾಡಗಳ ಬಗ್ಗೆ ಮಾತಾಡುವುದಿಲ್ಲ. ತಂತ್ರದ ಬಗ್ಗೆ, ಸಿದ್ಧಿಯ ಬಗ್ಗೆ ಬೆರಗಾಗುವುದಿಲ್ಲ. ಸತ್ಯಕಾಮರ ಪ್ರೀತಿಯ ಬಗ್ಗೆ ವಿವರಣೆಯಾಗುತ್ತಾಳೆ. ಅದು ತನಗೆ ದೊರೆತ ಸೌಭಾಗ್ಯದ ಬಗ್ಗೆ excite ಆಗುತ್ತಾಳೆ. ಎಂಟು ದಶಕಗಳಷ್ಟು ಹಳೆಯ ಹುತ್ತ ಹೊಕ್ಕ ನಾಗರಮರಿಯ ಸಂಭ್ರಮ ಮತ್ತು infatuationಗಳು ಆಕೆಯ ಪ್ರತಿ ಸಾಲಿನಲ್ಲೂ ಗೋಚರಿಸುತ್ತವೆ. ಆ ಸಾಲುಗಳಾದರೂ ಎಂಥವು? ಯಾವುದೋ ಮತ್ತಿನಲ್ಲಿ ಸತ್ಯಕಾಮರೇ ಬರೆದಿಟ್ಟು ಮಲಗಿದ್ದಾರೇನೋ ಎಂಬಂತಹ ಅನುಕರಣೆ. ಈ ಸತ್ಯಕಾಮರು ಇನ್ನು ನೂರಿನ್ನೂರು ವರ್ಷಗಳ ನಂತರ ಸತ್ತೇನಾದರೂ ಹೋದರೆ, ಅವರ ಸ್ತ್ರೀರೂಪವಾಗಿ ಕನ್ನಡಿಗರಿಗೆ ವೀಣಾ ಬನ್ನಂಜೆ ದೊರೆತಾಳು. ಹೇಳಿದೆನಲ್ಲ? ಆಕೆಯದು ಶುದ್ಧ ಆರಾಧನೆ. ಅದು ಪರಿಶುದ್ಧವೂ ಹೌದು. ತಮಾಷಿಯೆಂದರೆ, ಈ ಮೂರೂ ಜನ ಸತ್ಯಕಾಮರ ಪಾತ್ರ ಪರಿಚಯ ಮಾಡಿಸಲು ಹೋಗಿ ತಮ್ಮವೇ ಪರಿಚಯಗಳನ್ನು ಮಾಡಿಕೊಂಡಿರುವುದು! ಮತ್ತು ಅಸಲಿ ಪಾತ್ರವಾದ ಸತ್ಯಕಾಮರ ಕೆಲವು ಅಸಲಿ ಸಂಗತಿಗಳನ್ನು ಹೇಳದಿರುವುದು.

ಸತ್ಯಕಾಮರ ಬಗ್ಗೆ ಇವತ್ತು ಯಾರೇ ಮಾತಾಡಲಿ, ಅವರು ಆರ್.ಬಿ.ಯ ಬಗ್ಗೆ ಮಾತಾಡದೆ ಹೋದರೆ ಆ ಮಾತು ಅಪೂರ್ಣವಾಗುತ್ತವೆ. ಆರ್.ಬಿ.ಮತ್ಯಾರೂ ಅಲ್ಲ. ‘ಗ್ರಾಮಾಯಣ’ದ ರಾವ್ ಬಹದ್ದೂರರು. ಕೊಂಚ ಮುಂಚಿತವಾಗಿಯೇ ಸತ್ತು ಹೋದರೆಂಬುದನ್ನು ಬಿಟ್ಟರೆ, ರಾವ್ ಬಹದ್ದೂರರು ಸತ್ಯಕಾಮರ ಮತ್ತೊಂದು ಮುಖದಂತೆಯೇ ಬದುಕಿದ್ದವರು. ಅವರು ಸತ್ತಾಗ ಜಮಖಂಡಿಯ ಬೀದಿಗಳಲ್ಲಿ ಹೆಣದೊಡನೆ ಹೊರಟ ಯಮರಾಯ ಅವಮಾನದಿಂದ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದನಂತೆ. ಅರೆರೇ, ಒಬ್ಬನನ್ನೇ ಎಳೆದೊಯ್ಯುತ್ತಿದ್ದೇನಲ್ಲಾ ಅಂತ!

ಸತ್ಯಕಾಮರ ವ್ಯಕ್ತಿತ್ವವೇ ಅಂತಹುದು. ಅದು ಒಂಟಿಯಾಗಿ ಬೆಳೆಯುವುದಿಲ್ಲ. ಜೊತೆಗಿದ್ದವರನ್ನೂ ತಬ್ಬಿಕೊಂಡೇ ಬೆಳೆಯುತ್ತದೆ. ‘ಗ್ರಾಮಾಯಣ’ ಬರೆದು ಮುಗಿಸಿ ಖಾಲಿಯಾಗಿದ್ದ ಆರ್.ಬಿ.ಆಮೇಲೆ ಶುದ್ಧ trash ಬರೆಯಲು ಆರಂಭಿಸಿದಾಗ “ನಿನ್ನ input ಮುಗಿದಿದೆ. ಇನ್ನು ಬರೆದದ್ದು ಸಾಕು!" ಅಂತ ಎಚ್ಚರಿಸಿದ್ದೂ ಇದೇ ಸತ್ಯಕಾಮ. ಅವರಿಬ್ಬರದೂ ದಿವ್ಯ ದಾಂಪತ್ಯ! ಅಂತೆಯೇ, ಸತ್ಯಕಾಮರೊಂದಿಗೆ ನೆಲ ಉಳುತ್ತಾ, ದನ ಕಾಯುತ್ತಾ, ಈ ಬ್ರಹ್ಮಚಾರಿಯ ವಿಕ್ಷಿಪ್ತತೆ ಸಹಿಸಿಕೊಳ್ಳುತ್ತಾ ದಶಕಗಟ್ಟಲೆ ಬದುಕಿದ ಸತ್ಯಕಾಮರ ಮಿತ್ರರಾದ ಹಬ್ಬು ದಂಪತಿಗಳ ಬಗ್ಗೆ ಯಾರೂ ಪ್ರಸ್ತಾಪ ಮಾಡಿಲ್ಲ. ಬಹುಶಃ ಪ್ರಸ್ತಾಪ ಮಾಡಲು ನೆನಪಾಗಿಲ್ಲ. ಸತ್ಯಕಾಮರ ವ್ಯಕ್ತಿತ್ವವೇ ಅಂಥದ್ದು. ಅದು ಎಲ್ಲವನ್ನೂ ಆವರಿಸಿಕೊಳ್ಳುತ್ತದೆ. ಅದರಿಂದ ಬಚಾವಾಗಿ ಅವರ ಬಗ್ಗೆಯೇ ಬರೆಯುವುದು ಕಷ್ಟ ಕಷ್ಟ.

ಇಂತಹ ಸತ್ಯಕಾಮರ ಒಟ್ಟು ಸಾಹಿತ್ಯಿಕ ಸಾಧನೆಯನ್ನು ವಿಮರ್ಶಿಸಲು ನಾಳೆ ಆಗಸ್ಟ್ 30, 31ರ ಕಾರ್ಯಕ್ರಮ ಏರ್ಪಾಡಾಗಿದೆ. ಹಿರಿಯ ಪತ್ರಕರ್ತರಾದ ಜಯಶೀಲರಾವ್, ನೇಮಿನಾಥ್, ಕಿರಿಯ ಮಿತ್ರ ಯದುನಾಥ್ ಮುಂತಾದವರ ಒತ್ತಾಸೆಯ ಫಲವಿದು. ಅದೇ ಸಮಾರಂಭದಲ್ಲಿ ಸತ್ಯಕಾಮರ ‘ತಂತ್ರಯೋನಿ’ ಪುಸ್ತಕ ಬಿಡುಗಡೆ ಮಾಡುತ್ತಿದ್ದಾರೆ ಎಂಬುದೊಂದೇ ಕಿರಿಕಿರಿಯ ಸಂಗತಿ. ಸತ್ಯಕಾಮರನ್ನೇನಾದರೂ ದೇವೆಗೌಡರು ಭವಿಷ್ಯ ಹೇಳುವ ಬ್ರಾಂಬರ ಮುದುಕ ಅಂತ ಭಾವಿಸಿದ್ದರೆ ಅವರಿಗಿಂತ ದೊಡ್ಡ ಅವಿವೇಕಿಯಿಲ್ಲ.

ಸತ್ಯಕಾಮ, ತಮ್ಮ ಎಂಬತ್ತರ ಹರೆಯದಲ್ಲೂ ಭವಿಷ್ಯ ರೂಪಿಸಿಕೊಳ್ಳಲು ಹಂಬಲಿಸುತ್ತಿರುವ ಬೆಚ್ಚಗಿನ ಯುವಕ. ಅವರ ದೇಹಕ್ಕೆ ಮುಪ್ಪು, ಮನಸ್ಸಿಗೆ ಖಾಯಿಲೆ, ತಂತ್ರಕ್ಕೆ performanceನ ಗೀಳು ಮತ್ತು ಬರವಣಿಗೆಗೆ ಕೀರ್ತಿಯ ರೋಗ ಯಾವುದೂ ಹತ್ತಿಕೊಂಡಿಲ್ಲ. ಅದೊಂದು ಸಾಹಿತ್ಯಿಕ ಪರಿವ್ರಾಜಕ. ಹುಟ್ಟು ಅಲೆಮಾರಿ. ಸಾಯುತ್ತೇನೆಂಬ ಸಂದೇಹವನ್ನು ಕೂಡ ಹತ್ತಿರಕ್ಕೆ ಬಿಟ್ಟುಕೊಳ್ಳದೆ ಬದುಕಿನತ್ತ ದಾಪುಗಾಲಿಡುತ್ತಿರುವ ಸುಖ ಜೀವಿ. ಅವರು ಹಾಗೇ ಇರಲಿ!

ಇದು ಎರಡನೇ ಸಲ. ಹಿಂದೊಮ್ಮೆ ನನ್ನ ಪ್ರೀತಿಯ ಕತೆಗಾರ ಎಂ.ವ್ಯಾಸರ ಸಂಕಲನ ಕೈಗೆತ್ತಿಕೊಂಡೆ. ಮೊದಲು ಮುನ್ನುಡಿ ಓದುವ ಪರಿಪಾಠ. ನಾನು ಓದುತ್ತಾ ಹೋದೆ. ಸಾಲು ಮುಗಿದಂತೆಲ್ಲ ‘ಎಲ್ಲೋ ಓದಿದ್ದೇನೆ...’ ಅನ್ನಿಸತೊಡಗಿತು. ಇದು ಯಾರ ಶೈಲಿ ಎಂಬ ಪ್ರಶ್ನೆ. ಅಷ್ಟಾದರೂ, ಮುನ್ನುಡಿ ಮುಗಿಸೋ ತನಕ ಅದನ್ನು ಯಾರು ಬರೆದದ್ದು ಅಂತ ಇಣುಕಲಿಲ್ಲ. ಕಡೆಗಿತ್ತು ಮುನ್ನುಡಿ ಬರೆದವರ ಹೆಸರು: ರವಿ ಬೆಳಗೆರೆ! ಅದು ಎರಡನೇ ಬಾರಿಯೂ ಹಾಗೇ ಆಗಿದೆ. ವೀಣಾ ಬನ್ನಂಜೆ ಬರೆದ ಸತ್ಯಕಾಮರ ಕುರಿತಾದ memoir ತರಹದ ಪುಸ್ತಕ ಕೈಗೆತ್ತಿಕೊಂಡೆ. ‘ಮುನ್ನುಡಿ’ ಇತ್ತು. ಯಥಾಪ್ರಕಾರ ‘ಯಾರು ಬರೆದಿದ್ದು...?’ ಎಂಬ ಅನುಮಾನ. ಕಡೆ ಕಡೆಗಂತೂ ತಡೆಯಲಾಗದ ಕ್ಯೂರಿಯಾಸಿಟಿ. ಪೂರ್ತಿ ಮುಗಿಸಿ ಬರೆದವರ ಹೆಸರು ನೋಡಿದರೆ, ಅದು ನಾನೇ!

ತುಂಬ ಬರೆದರೆ ಹೀಗಾಗುತ್ತದೆ. ಹಾಗಂತ, ನಾನು ತುಂಬ ಸಂಖ್ಯೆಯ ಮುನ್ನುಡಿಗಳನ್ನು ಬರೆದಿಲ್ಲ. ಯಾರೋ ಬರೆದ ಪುಸ್ತಕ, ಅದನ್ನು ಸಾದ್ಯಂತ ಓದಿ, ಒಂದು ಮುನ್ನುಡಿ ಬರೆಯಬೇಕು. ಅಷ್ಟಕ್ಕೆಲ್ಲಿದೆ ಪೇಷನ್ಸು. ಟೈಮು? ಅಲ್ಲದೆ ನನ್ನ ಯಾವ ಪುಸ್ತಕಕ್ಕೂ ನಾನು ಮುನ್ನುಡಿ ಬರೆಸಿಲ್ಲ. ಹಿರಿಯ ಮಿತ್ರ ಸತ್ಯನಾರಾಯಣ ಅವರು ಬರೆದ ಒಂದು write upನ ‘ಪಾಪಿಗಳ ಲೋಕದಲ್ಲಿ’ ಕೃತಿಗೆ ಮುನ್ನುಡಿಯಂತೆ ಬಳಸಿದ್ದೇನೆ, ಅಷ್ಟೇ.

ಈಗ ನೀವು ಓದಿದ ಮುನ್ನುಡಿ ಬಿಟ್ಟಾಕಿ. ‘ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು’ ಪುಸ್ತಕ ಓದಿ. ಗಾಂಧಿಬಜಾರ್‌ನ ನನ್ನ B.B.Cಯಲ್ಲಿ ದೊರೆಯುತ್ತದೆ. ಸತ್ಯಕಾಮರದು ಭಿನ್ನವಾದ, ರುಚಿಕರವಾದ, ವಿಕ್ಷಿಪ್ತ ಲೋಕ. ಈಗ ನೀವು ಓದಿದ್ದು ಅದಕ್ಕೆ ನಾನೆಂದೋ ಬರೆದ ಮುನ್ನುಡಿ.

-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 December, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books