Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನಾಳೆಯಿಂದ ಫುಲ್ ಛೇಂಜಾಗ್ತೀನಿ ಅನ್ನೋದು...

ಈ ಜೀವನ ಬದಲಾಗೋದೇ ಇಲ್ವಾ? ನಾನು ಇನ್ನೂ ಎಷ್ಟು ವರ್ಷ ಹೀಗೆ ಬದುಕಬೇಕು? ಇವತ್ತು ನನಗೆ ಏನು ಇಮೇಜು ಇದೆಯೋ-ಇದು ನಾನಲ್ಲ. ನನ್ನಲ್ಲಿನ ನಿಜವಾದ ನಾನು ಯಾರಿಗೂ ಪರಿಚಯವಾಗೇ ಇಲ್ಲ. ನನ್ನ ಬದುಕು ಹೇಗಿರಬೇಕಿತ್ತು ಅಂದುಕೊಂಡಿದ್ನೋ, ಹಾಗಿಲ್ಲ. ಕನ್ನಡೀಲಿ ನೋಡಿಕೊಂಡ್ರೆ ನನಗೆ ನಾನೇ ಇಷ್ಟವಾಗ್ತಿಲ್ಲ. ನನ್ನ ಫ್ರೆಂಡ್ಸ್ ಸರಿಯಾಗಿಲ್ಲ. ಮನೆಯ ವಾತಾವರಣ ಹೀಗಿರಕೂಡದಾಗಿತ್ತು. ನಾನಿರುವ ನೌಕರಿ ನಂಗೆ ಹೇಳಿ ಮಾಡಿಸಿದ್ದಲ್ಲ. ಇನ್ನೂ ಒಳ್ಳೆಯ ನೌಕರಿಯಲ್ಲಿ ಇರಬಹುದಿತ್ತು. ಮಕ್ಕಳು ಮುದ್ದಾಗಿವೆ ನಿಜ. ಆದರೆ ಅವು ಬೆಳೀತಾ ಇರೋ ರೀತಿ ಸರಿಯಿಲ್ಲ. ಬೆಳೆಯುವಂಥ ವಾತಾವರಣವೂ ಇಲ್ಲ. ಒಟ್ಟಿನಲ್ಲಿ ಯಾವುದೂ ಸರಿಯಿಲ್ಲ. I am fed up. ಇದು ಸಂಪೂರ್ಣವಾಗಿ ಬದಲಾಗಿ, ನಂಗೊಂದು ಹೊಚ್ಚ ಹೊಸಾ ಲೈಫು ಸಿಗೋಕೆ ಸಾಧ್ಯವಿಲ್ಲವಾ?

ಪ್ರತಿನಿತ್ಯ ಹಾಗಂತ ಯೋಚಿಸುವವರು ಈ ಪ್ರಪಂಚದಲ್ಲಿ ಕೋಟ್ಯಂತರ ಜನರಿದ್ದಾರೆ. ಅವರ ಪೈಕಿ ನೀವೂ ಒಬ್ಬರಾ? ಹಾಗೆ ಯೋಚಿಸುವವರ ಪೈಕಿ ನಾನೂ ಒಬ್ಬನಾಗಿದ್ದೆನಾ? of course ಆಗಿದ್ದೆ. ಲಕ್ಷಾಂತರ ಜನರ ಪೈಕಿ, ‘ಈ ಲೈಫು ಇವತ್ತಿಂದ totally change ಆಗಲಿ' ಅಂತ ಯೋಚಿಸುವವರಲ್ಲಿ ನಾನೂ ಒಬ್ಬನಾಗಿದ್ದೆ. ಅವತ್ತು ನನ್ನೊಂದಿಗೆ ಹಾಗೆ ಯೋಚಿಸುತ್ತಿದ್ದವರ ಪೈಕಿ ಎಷ್ಟು ಜನರ ಲೈಫು ಛೇಂಜಾಯಿತು? ಗೊತ್ತಿಲ್ಲ. ನನ್ನದಂತೂ ಆಯಿತು. ಹೇಗಾಯಿತು?

ಅದನ್ನೇ ಹೇಳಲು ಕುಳಿತಿದ್ದೇನೆ.

ನೂರರಲ್ಲಿ ತೊಂಬತೊಂಬತ್ತು ಜನ, ಈ ಬದುಕು ಛೇಂಜಾಗಲಿ ಅಂತ ಬಯಸುತ್ತಿರುತ್ತಾರೆ. ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿಕ್ಕೆ ಒಂದು ಮುಹೂರ್ತ ಅಂತಿಟ್ಟುಕೊಂಡು ಕಾಯುತ್ತಾರೆ. 'ಜನವರಿ ಫಸ್ಟಿಂದ ಕುಡಿಯಲ್ಲ. ಹುಟ್ಟಿದ ಹಬ್ಬದ ದಿನದಿಂದ ಲೈಫೇ ಛೇಂಜ್ ಮಾಡ್ಕೋತೀನಿ’ ಅಂತೆಲ್ಲ ಯೋಚಿಸುತ್ತಿರುತ್ತಾರೆ. ಹಾಗೆ ಮುಹೂರ್ತಗಳಿಗಾಗಿ ಕಾದು ಕೂತುಕೊಂಡು ಯಾವ್ಯಾವಾಗ ನಾನು ಲೈಫ್‌ಛೇಂಜ್ ಮಾಡಿಕೊಳ್ಳುವಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೋ, ಆಗೆಲ್ಲ ಫೇಲಾಗಿದ್ದೇನೆ. ಏಕೆಂದರೆ ಮುಹೂರ್ತಗಳಿಗೆ ನಾವು ಕಾಯಬಹುದು. ಆದರೆ ಬದುಕು ಮುಹೂರ್ತಗಳನ್ನು ಮನ್ನಿಸುವುದಿಲ್ಲ. 'ಇವತ್ತು ಹೀಗಿದ್ದ, ನಾಳೆಗೆ ಹೇಗಾಗಿಬಿಟ್ಟ ನೋಡು’ ಅಂತ ಉದ್ಗರಿಸುವ ಹಾಗೆ ಟೋಟಲಿ ಬದುಕನ್ನು change ಮಾಡಿಕೊಂಡವರ‍್ಯಾರಾದರೂ ನಿಮಗೆ ಪರಿಚಯವಿದ್ದರೆ ಅವರನ್ನು ಕೇಳಿನೋಡಿ: ತಮ್ಮ ಬದುಕು ಯಾವುದೋ ಒಂದು ಮುಹೂರ್ತದಿಂದ change ಆಗಲು ಶುರುಮಾಡಲಿಲ್ಲ ಅಂತ ಅವರು ಖಚಿತಪಡಿಸುತ್ತಾರೆ.

ಇಡೀ ಜೀವನವೇ ಬದಲಾಗಿ ಬಿಡಬೇಕು ಅಂತ ನೀವು ಬಯಸಿದ್ದೇ ಆದರೆ ಜನವರಿ ಫಸ್ಟ್‌ನಂತಹ ಮುಹೂರ್ತಕ್ಕೆ ಕಾಯಬೇಡಿ. ಇವತ್ತಿನ ಈ ಕ್ಷಣದಿಂದಲೇ ಬದಲಾಗಲು ಆರಂಭಿಸಿ. ಬದಲಾವಣೆಯ ಬಗ್ಗೆ ತುಂಬ ಗಂಭೀರವಾಗಿ ಆಲೋಚನೆ ಮಾಡಲು ಶುರುಮಾಡಿ. ಮತ್ತು ನಿಮ್ಮದೆನ್ನುವ ಪ್ರತಿಯೊಂದನ್ನೂ ಬದಲಾಯಿಸಿಕೊಳ್ಳುತ್ತ ಹೋಗಿ. ನಾನು ಕೆಲವು ಉದಾಹರಣೆಗಳನ್ನು ಮಾತ್ರ ಕೊಡಬಲ್ಲೆ. ಇವತ್ತಿನ ತನಕ ನೀವು ಕೊತ್ಕೋತಿ ಥರಾ ಉಪೇಂದ್ರನ hair style ಇಟ್ಟುಕೊಂಡು ಓಡಾಡುತ್ತಿದ್ದರೆ, ಅದನ್ನು ಬದಲಾಯಿಸಿ ಮಟ್ಟಸವಾಗಿ hair cut ಮಾಡಿಸಿಕೊಳ್ಳಿ. ನಿಮ್ಮ ಕ್ಷೌರಿಕ ನಿಮ್ಮಲ್ಲಿನ ಮೊಟ್ಟಮೊದಲ ಬದಲಾವಣೆಯನ್ನು ಗುರುತಿಸುತ್ತಾನೆ. ನಿಮ್ಮ ಊಟದ ವಿಧಾನ ನಿಮಗಿಷ್ಟವಿಲ್ಲವಾದರೆ ಅದನ್ನೂ ಬದಲಾಯಿಸಿಕೊಳ್ಳಿ. ಬೇಗ ಮಲಗೋದು, ಬೇಗ ಏಳೋದು, ಸ್ನಾನಕ್ಕೆ ಮುಂಚೆ ಕಾಫಿ ಕುಡಿಯಲ್ಲ ಅಂತ ನಿರ್ಧರಿಸೋದು, ಎದ್ದ ತಕ್ಷಣ ಅಮ್ಮನಿಗೊಂದು ನಮಸ್ಕಾರ ಮಾಡ್ತೀನಿ ಅಂದುಕೊಳ್ಳೋದು, ನನ್ನ ಬಟ್ಟೆ ನಾನೇ ಒಗೆದುಕೊಳ್ತೀನಿ ಅಂತ ತೀರ್ಮಾನಿಸೋದು ಇವೆಲ್ಲ ಬಹಳ ದೊಡ್ಡ ನಿರ್ಧಾರಗಳಲ್ಲದಿರಬಹುದು. ಆದರೆ ಇವು ನಿಮ್ಮ ಬದುಕನ್ನು 'ಟೋಟಲಿ’ ಛೇಂಜ್ ಮಾಡಿಕೊಳ್ಳುವುದಕ್ಕೆ ಕಾರಣವಾಗುತ್ತದೆ.

ನಿಧಾನವಾಗಿ, ಈಗಿರುವ ಮನೆ ಬಿಡಲು ಸಾಧ್ಯವಾ? ಯೋಚಿಸಿ. ಈಗಿರುವ ಊರು ಬಿಡೋಕಾಗುತ್ತಾ? ಕೇಳಿಕೊಳ್ಳಿ. ಈಗಿನ ನೌಕರಿ ಬದಲಿಸಲು ಸಾಧ್ಯವಾ? At least, ಒಂದು transfer ಸಿಗುತ್ತಾ? ಪ್ರಯತ್ನಿಸಿ. ಇರುವ ಜಾಗ ಬದಲಿಸೋಕೆ ಸಾಧ್ಯ ಅಂತಾದರೆ, ಅಲ್ಲಿಗೆ ನಿಮ್ಮ ಅರ್ಧದಷ್ಟು ಬದುಕು ಬದಲಾಯಿತು ಅಂತಲೇ ಇಟ್ಟುಕೊಳ್ಳಿ. ಅವಕಾಶ ಸಿಕ್ಕಾಗ ಬೇರೆ ಯೋಚನೆ ಮಾಡದೆ cool ಆಗಿ ಊರು ಬಿಡಿ. ಮೊದಲು ನೀವೊಬ್ಬರೇ ಹೋಗಿ, ಹೊಸ ಊರಿನಲ್ಲಿ, ಹೊಸ ನೌಕರಿಯಲ್ಲಿ, ಹೊಸ ಮನೆಯಲ್ಲಿ settle ಆಗಿ. ನಿಜವಾದ ಬದಲಾವಣೆ ಆಗಬೇಕಾದ್ದೇ ಆವಾಗ. ಬದಲಾದ ಊರಿನಲ್ಲಿ ನಿಮ್ಮ ಇಮೇಜೂ ಬದಲಾಗಬೇಕು. ಅದು ಅತ್ಯಂತ ಮುಖ್ಯ ಮತ್ತು ಅತ್ಯಂತ ಸುಲಭ. ಹೊಸ ಊರಿನಲ್ಲಿ ಗೆಳೆಯರು, ಮನೆ, ಆಫೀಸು, ರೊಟೀನು-ಎಲ್ಲವೂ ಹೊಸದೇ. ಮುಂಚೆ ಇದ್ದ ಕಡೆ ಹೇಗಿದ್ದಿರೋ ಏನೋ: ಹೊಸ ಊರಿನಲ್ಲಿ ಮಾತ್ರ 'the best’ ಎಂಬಂಥದ್ದನ್ನೇ ಆರಿಸಿಕೊಳ್ಳಿ. ಯಾವ ಕಾರಣಕ್ಕೂ ಅಲ್ಲಿ ಸಣ್ಣ ಪುಟ್ಟ ಕಾಂಪ್ರಮೈಸ್‌ಗಳನ್ನ ಮಾಡಿಕೊಳ್ಳಬೇಡಿ. ಅತ್ಯುತ್ತಮ ಮನೆ, ಅತ್ಯುತ್ತಮ ದಿರಿಸು, ಅತ್ಯುತ್ತಮ ವ್ಯಕ್ತಿಗಳೊಂದಿಗೆ ಸ್ನೇಹ, ಕೆಲಸದಲ್ಲಿ ಅತ್ಯುತ್ತಮ ಶಿಸ್ತು, ಊಟಕ್ಕೆ ಅತ್ಯುತ್ತಮ ಹೊಟೇಲು-ಹೀಗೆ ಈ ಮನುಷ್ಯ ತುಂಬ ಉತ್ತಮವಾದುದನ್ನೇ ಆಯ್ದುಕೊಳ್ಳುತ್ತಾನೆ ಎಂಬ ಒಪೀನಿಯನ್ ಎಲ್ಲರಲ್ಲೂ ಉಂಟಾಗಿ ಬಿಡಲಿ. ನೀವು ಕುಡಿಯುತ್ತೀರಿ ಅಂತ ಗೊತ್ತಾದರೆ, ಯಾವ ಹೊಸ ಊರಿಗೆ ಹೋದರೂ ಥೇಟು ಹಳೇ ಕುಡುಕರು ಗಂಟು ಬಿದ್ದು ಗೆಳೆಯರಾಗುತ್ತಾರೆ. ಅಪ್ಪಿತಪ್ಪಿ ಕೂಡ ಹೊಸ ಊರಿನಲ್ಲಿ ನೀವು ಕುಡಿಯುತ್ತೀರಿ ಎಂಬುದನ್ನು ಬಹಿರಂಗ ಪಡಿಸಿಕೊಳ್ಳಬೇಡಿ. ನೀವು ಸಿಟ್ಟಿನವರು, ನೀವು ವಿಪರೀತ ಸಾಲ ಮಾಡುವವರು, ನೀವು ಹೆಂಗಸರ (ಗಂಡಸರ) ವಿಷಯದಲ್ಲಿ ಬಲಹೀನರು, ನೀವು ಮಖೇಡಿ, ನೀವು ಪುಕ್ಕಲರು-ಉಹುಂ, ಅದೆಲ್ಲ ನಿಮ್ಮ ಹಳೆಯ, ಸತ್ತು ಹೋದ ಇಮೇಜು. ಅತ್ಯಂತ ಪ್ರಯತ್ನಪೂರ್ವಕವಾಗಿ ಇಲ್ಲೊಂದು ಹೊಸ ಇಮೇಜು ಬೆಳೆಸಿಕೊಳ್ಳಿ.

ಹಿಂದಿದ್ದ ಏರಿಯಾದಲ್ಲಿ ಅಥವಾ ಊರಿನಲ್ಲಿ ಅಥವಾ ಆಫೀಸಿನಲ್ಲಿ ನಿಮ್ಮ ಮನಸ್ಸು, ಬದುಕು ಮತ್ತು ಇಮೇಜನ್ನು ಯಾವುದ್ಯಾವುದು ತೀವ್ರವಾಗಿ ಕೆಡಿಸಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಿ. ನಿಮ್ಮ ಸಿಟ್ಟು, ನಿಮ್ಮ ಸಾಲ, ನಿಮ್ಮದೊಂದು ಮದುವೆಯಾಚೆಗಿನ ಸಂಬಂಧ, ನಿಮ್ಮ ಕೈ ಸ್ವಲ್ಪ ಸುಮಾರು ಎಂಬ ಆಪಾದನೆ, ನಿಮ್ಮ ಕೆಟ್ಟ ಬಾಯಿ, ಒರಟು ವರ್ತನೆ, ತೀರ ಸಲುಗೆ ಕೊಟ್ಟು ಬಿಡುವ ನಿಮ್ಮ ಸ್ವಭಾವ, ಬಲು ಬೇಗ ಅತ್ತುಬಿಡುವಿಕೆ, ಹರುಕು ಬಾಯಿ, ಅಧೀರತೆ, ಹೇತ್ಲಾಂಡಿತನ-ಈ ಪೈಕಿ ಯಾವುದೇ ಬಲಹೀನತೆ ನಿಮ್ಮದಾಗಿರಬಹುದು. ಅದು ಈ ಹಿಂದೆ ನಿಮ್ಮ ಬದುಕು ಮತ್ತು ಇಮೇಜನ್ನು ಕೆಡಿಸಿರಬಹುದು. ಈಗ ಹೊಸ ಜಾಗಕ್ಕೆ ಬಂದಿದ್ದೀರಿ. ಅತ್ಯಂತ ಪ್ರಯತ್ನಪೂರ್ವಕವಾಗಿ ಅಂಥದ್ದೊಂದು ಬಲಹೀನತೆಯನ್ನು ಮೀರಿನಿಂತು, ಹೊಸ ಇಮೇಜು ಗಳಿಸಿಕೊಳ್ಳಿ. ಮೊದಲ ಹತ್ತು ಹದಿನೈದು ದಿನ ನೀವು ಎಂಥ image build up ಮಾಡಿಕೊಳ್ಳುತ್ತೀರಿ ಅನ್ನೋದು ತುಂಬ ತುಂಬ ಮುಖ್ಯ. ಒಮ್ಮೆ ಅಂಥದೊಂದು ಪಾಸಿಟಿವ್ ಇಮೇಜು build up ಮಾಡಿಕೊಂಡ ಮೇಲೆ ನೀವು ಅದಕ್ಕೆ ಅನುಗುಣವಾಗಿಯೇ ನಡೆದುಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ. ನೀವು ಲೂಸ್ ಕ್ಯಾರೆಕ್ಟರ್ ಅಲ್ಲ ಅಂತ ಒಂದು ಇಮೇಜ್ ಬೆಳೆಸಿಕೊಂಡು ನೋಡಿ; ನಿಮ್ಮ ತಂಟೆಗೆ ಯಾರೂ ಬರುವುದಿಲ್ಲ. ನೀವು ಶಿಸ್ತಿನ ಮನುಷ್ಯ ಅಂತ ಒಂದು get up ಕೊಟ್ಟು ನೋಡಿ: ನಿಮ್ಮ ಕೈಕೆಳಗಿನವರೆಲ್ಲ ಶಿಸ್ತಿನ ಸಿಪಾಯಿಗಳಾಗಿಬಿಡುತ್ತಾರೆ. ನೀವು ದುಡ್ಡು ತಿನ್ನುವುದೂ ಇಲ್ಲ, ತಿನ್ನಲಿಕ್ಕೆ ಬಿಡುವುದೂ ಇಲ್ಲ ಅಂತ ನಿಮ್ಮ ವರ್ತನೆಯ ಮೂಲಕವೇ ಘೋಷಿಸಿ ನೋಡಿ: ನಿಮಗೆ ಪ್ರಾಮಾಣಿಕನೆಂಬ ಇಮೇಜು ದೊರಕಿಬಿಡುತ್ತದೆ. ಮೊದಮೊದಲಿಗೆ ಇವೆಲ್ಲ ನಾಟಕೀಯ ಅನ್ನಿಸಿದರೂ, ಕ್ರಮೇಣ positive ಆದ ನಾಟಕೀಯತೆ ನಿಮಗೆ ತಂದುಕೊಟ್ಟ imageನಿಂದಾಗಿ ನಿಮಗೆ ಸಹನೀಯವಾಗುತ್ತದೆ.

ಹೀಗೆ ಕೊಂಚ ದಿನ settle ಆದ ಮೇಲೆ ನಿಮ್ಮ ಮನೆಯವರನ್ನು ಕರೆಸಿಕೊಳ್ಳಿ. ನಿಮ್ಮಲ್ಲಿನ ಬದಲಾವಣೆಯನ್ನು ಅವರೂ ಗುರುತಿಸುತ್ತಾರೆ. ಅವರೊಂದಿಗೂ ನೀವು ಬದುಕು ಬದಲಿಸಲು ಮಾಡುತ್ತಿರುವ ಯತ್ನಗಳ ಕುರಿತು ಚರ್ಚಿಸಿ. ಮನೆಯನ್ನು ಮೊದಲಿದ್ದುದಕ್ಕಿಂತಲೂ ತುಂಬ ಬೇರೆಯಾಗಿಯೇ ಇಟ್ಟುಕೊಳ್ಳಿ. ಆರಂಭದ ದಿನಗಳಲ್ಲಿ ಹಳೆಯ ಮಿತ್ರರ‍್ಯಾರನ್ನೂ ಕರೆಯಬೇಡಿ.

ಇಷ್ಟಕ್ಕೂ ಬದುಕು ಬದಲಾಗುವುದು ಅಂದರೇನು? ನಮ್ಮನ್ನು ಇನ್ನೊಬ್ಬರು ಹೇಗೆ ನೋಡುತ್ತಾರೆ ಮತ್ತು ನಮ್ಮನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆ-ಎಂಬುದಷ್ಟೇ ತಾನೆ? ಮೊದಲು ನಮ್ಮ ಬದುಕನ್ನು ನಾವು ಇವತ್ತಿಗಿಂತ ವಿಭಿನ್ನವಾಗಿ ನೋಡಲು, ಬದುಕಲು ಆರಂಭಿಸೋಣ. ಕ್ರಮೇಣ ಬದುಕೂ ನಮ್ಮನ್ನು ಬೇರೆಯದೇ ರೀತಿಯಲ್ಲಿ ನಡೆಸಿಕೊಳ್ಳುತ್ತದೆ. ಊರು ಬದಲಿಸಿ, ನೌಕರಿ ಬದಲಿಸಿ, ಮನೆ ಬದಲಿಸಿ ಅಂತೆಲ್ಲ ಹೇಳಿದ್ದು ನಿಮ್ಮ ಅನುಕೂಲದ ದೃಷ್ಟಿಯಿಂದಷ್ಟೆ. ಅದ್ಯಾವುದೂ ಬದಲಾಗದಿದ್ದರೂ ಪರವಾಗಿಲ್ಲ; ಮೊದಲು ನಾವು ಬದಲಾಗೋಣ. ಬದುಕು ತಂತಾನೆ ಬದಲಾಗುತ್ತದೆ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 15 December, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books