Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಇಷ್ಟಕ್ಕೂ ಅವತ್ತು ರಾತ್ರಿ ನಮ್ಮ ಹಮಾಲರು ಅವನನ್ನೇಕೆ ಒದ್ದರು

ಇವನೊಳ್ಳೆ ಸುರೇಶ!

ನನ್ನ ಪರಮಾಪ್ತ ಮಿತ್ರ ಸುರೇಶ್ ಶೆಟ್ಟಿ! ಇತ್ತೀಚೆಗೆ ಅವನು ಟರ್ಕಿ ದೇಶಕ್ಕೆ ಹೋಗಿದ್ದ. ಮೊನ್ನೆ ಬಳ್ಳಾರಿಗೆ ಬಂದಿದ್ದಾನೆ. ಸ್ವಲ್ಪ ರೆಸ್ಟಾದರೂ ತಗೋಬಾರದಾ? “ಇಲ್ಲ ರವೀ, ಒಂದಿನ ನೀನು ಕನಸಿಗೆ ಬಂದಿದ್ದೆ. ಅದೇನೂ ಕೆಟ್ಟ ಕನಸಲ್ಲ. ಮರುದಿನದಿಂದ ಅದೇನೋ ಎಂತೋ, ಕೂತರೆ ನಿಂತರೆ ನಿಂದೇ ನೆನಪು. ಮನಸ್ಸಿಗೆ ಏನೋ ಆತುರ. ನಿನ್ನನ್ನ ನೇರವಾಗಿ ನೋಡಿ ಮಾತನಾಡಿಸೋ ತನಕ ಸಮಾಧಾನ ಆಗಲ್ಲ ಅನ್ಸಿ ಸೀದಾ ಬಂದು ಬಿಟ್ಟೆ" ಅಂದ. ‘ಒಳ್ಳೇ ಸುರೇಶ ನೀನು’ ಅಂದೆ. ಅವನು ಯಾವ ಅರ್ಥದಲ್ಲೂ ನನ್ನ blood relative ಅಲ್ಲ. ತೀರಾ ಒಂದೇ ವಯಸ್ಸಲ್ಲ. ಜಾತಿಯ ಮಾತು ಕೇಳಬೇಡಿ. ಅವನು ಬಂಟರ ‘ಶೆಟ್ಟಿ’. ಬಾಲ್ಯ ಸ್ನೇಹಿತರೂ ಅಲ್ಲ ನಾವು. ಜೊತೆಗೆ ಬೆಳೆದವರಲ್ಲ. ಬಳ್ಳಾರಿಯಲ್ಲಿ ಅಕಸ್ಮಾತ್ ಸ್ನೇಹಿತರಾದವರು. ಎಷ್ಟು ಅಂದರೆ, ಅವನನ್ನು ಲಲಿತಾ ರಕ್ತ ಹಂಚಿಕೊಂಡು ಹುಟ್ಟಿದ ತಮ್ಮನಿಗಿಂತ ಹೆಚ್ಚಾಗಿ ನೋಡುತ್ತಾಳೆ. ನಾನು ಆಸ್ಪತ್ರೆಗೆ ಸೇರಿ, ಅಲ್ಲಿನ ವೈದ್ಯರು ‘ಬದುಕೋ ಛಾನ್ಸು fifty-fifty’ ಅಂದಾಗ ಅವಳು ಮೊಟ್ಟ ಮೊದಲು ಫೋನ್ ಮಾಡಿದ್ದೇ ಸುರೇಶ್‌ಗೆ. “ನೀನು ಹೋಗಿ ರವೀನ ನೋಡಿ ಯಾವ ಕಾಲ ಆಯ್ತು ಮಗಾ? ಹೋಗಿ ಬಾ..." ಅನ್ನೋದು ಅವನ ತಾಯಿ. ಆಕೆಯ ಹೆಸರೇ ನನಗೆ ಗೊತ್ತಿಲ್ಲ. ‘ಅಮ್ಮಾ’ ಅಂತಲೇ ಅನ್ನೋದು. ಆಕೆಯ ಪಾಲಿಗೆ ನಾನು ಮೊದಲ ಮಗ. ಹೀಗಾಗಿ ಆಕೆಗೆ ನಾಲ್ಕು ಮಕ್ಕಳು. ನನಗೆ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಮಧ್ಯರಾತ್ರಿ ಒಂದೂವರೆ ಹೊತ್ತಿಗೆ ಬಳ್ಳಾರಿಯ ಬಂಡೀಮೋಟ್‌ನಲ್ಲಿದ್ದ ಅವರ ಮನೆಗೆ ಹೋಗಿ ಕದ ತಟ್ಟುತ್ತಿದ್ದೆ. “ಮಾಡಿದ್ದು ಉಳಿದಿದ್ರೆ ಹಾಕು. ಇಲ್ಲ ಅಂದ್ರೆ ನಂಗೀಗ ಅಡುಗೆ ಮಾಡಿ ಹಾಕು" ಅನ್ನುತ್ತಿದ್ದೆ. ಅಂದವನು ಅಲ್ಲೇ ಕಂಬಕ್ಕೆ ಒರಗಿಕೊಂಡು ಕುಳಿತು ಗೊರಕೆ. ಆ ಪರಿ ಕುಡಿದಿರುತ್ತಿದ್ದೆ. ಅನ್ನ ಮಾಡಿಯಾದ ಮೇಲೆ ಅಮ್ಮ ಎಬ್ಬಿಸಿ ಊಟ ಹಾಕುತ್ತಿದ್ದಳು. ಆವತ್ತಿನ ಅರೆಹೊಟ್ಟೆ ದಿನಗಳಲ್ಲಿ ಪಾಪ ಆಕೆಯ ಬಳಿ ಕುಕ್ಕರ್ ಇತ್ತಾ? ಗ್ಯಾಸ್ ಒಲೆ ಇತ್ತಾ? ಈವಾಗ ಮೂರೂ ಮಕ್ಕಳು ಕೈತುಂಬ ದುಡಿಯುತ್ತಿದ್ದಾರೆ. ಆದರೂ ಅಮ್ಮನದು ಅದೇ ಮಮಕಾರ. ಆ ದಿನಗಳ ಸ್ನೇಹ ನನ್ನ-ಸುರೇಶನ ನಡುವೆ ಇವತ್ತಿಗೂ ಮುಕ್ಕಾಗದೆ ಉಳಿದಿದೆ. ಇವತ್ತಿಗೆ ಅಜಮಾಸು ಮೂವತ್ತು ವರ್ಷಗಳಾಗಿವೆ. ಸುರೇಶನ ಇಬ್ಬರು ತಮ್ಮಂದಿರು ಹರೀಶ-ಸತೀಶಗೆ ನನ್ನ ಕಂಡರೆ ಪಂಚಪ್ರಾಣ. ಈ ಎಲ್ಲ ಸಂಬಂಧಗಳು ಹೇಗೆ ಬೆಳೆಯುತ್ತವೆ? ಹೇಗೆ ಬೆಸೆಯುತ್ತವೆ?

ಸಾಮಾನ್ಯವಾಗಿ ಸುರೇಶ ಬೆಂಗಳೂರಿಗೆ ಬಂದರೆ ನನಗೆ ಏನೋ ಒಂದು ಕೈಲಿ ಹಿಡಿದುಕೊಂಡೇ ಬರುತ್ತಾನೆ. ಏನೂ ಇರದಿದ್ದರೆ ಕಡೆಗೆ ಮೆಜೆಸ್ಟಿಕ್ ಹತ್ತಿರ ಇರುವ ಒಂದು ದೇಸೀ ಹೊಟೇಲಿನಿಂದ ಒಂದು ರಾಶಿ ಮಾಂಸದಡುಗೆ ಕಟ್ಟಿಸಿಕೊಂಡು ಬರುತ್ತಾನೆ. ಈ ಸಲ ಅದೆಷ್ಟು ದುಗುಡದಿಂದ, ನನ್ನನ್ನು ನೋಡಲೆಂದೇ ಬಂದಿದ್ದ ಸುರೇಶ, ಏನೂ ತಂದಿರಲಿಲ್ಲ. ಬಂದು ಕುಳಿತು, ಹರಟಿ, ಮುಟ್ಟಿ ಮಾತನಾಡಿಸಿದ ಮೇಲೆಯೇ ಅವನು ಬೇರೆ moodಗೆ ಬಂದದ್ದು. Such an emotional guy. ನಾವು ಹರಟುತ್ತಾ ಕುಳಿತಾಗ ಗೆಳೆಯರೊಬ್ಬರು ನನ್ನನ್ನು ಹುಡುಕಿಕೊಂಡು ಬಂದಿದ್ದರು.

“ಇದು ಬಿಡಿ. ಈಗೆಲ್ಲ ಬಹಳ soft ಆಗಿದ್ದಾನೆ ರವಿ. ಆ ಕಾಲದಲ್ಲಿ ನೋಡಬೇಕಿತ್ತು ಸಾಹೇಬನ್ನ. ಒಂದು ಘಟನೆ ಹೇಳ್ತೀನಿ ಕೇಳಿ. ಅದೊಂದು ನಡುರಾತ್ರಿ ಈ ರವಿ ನಮ್ಮ ಬಂಡೀಮೋಟ್ ಮನೆಗೆ ಬಂದು ಬಾಗಿಲು ತಟ್ಟಿದ. ನಮಗ್ಯಾರಿಗೂ ಅದು ಹೊಸದಲ್ಲ. ಎದ್ದು ಬಂದು “ಏನ್ ರವೀ?" ಅಂದೆ. “ನೀನು ನನ್ನ ಫ್ರೆಂಡ್ ಹೌದಾ? ಅಲ್ವಾ?" ಅಂದ. ಅಲ್ಲವೆನ್ನಲು ಹೇಗೆ ಸಾಧ್ಯ? ನಮ್ಮ ಎ.ಪಿ.ಎಂ.ಸಿ (ಮಾರ್ಕೆಟ್ ಯಾರ್ಡ್) ಹಮಾಲರ ಸಂಘಕ್ಕೆ ರವಿ ಅಧ್ಯಕ್ಷ. ನಾನು ಕಾರ್ಯದರ್ಶಿ! “ಫ್ರೆಂಡೇ ಬಿಡಪ್ಪಾ. ಈಗ ಏನಾಗಬೇಕು?" ಅಂದೆ. ಅದಕ್ಕೆ ರವೀ, “ಸುರೇಶಾ, ನೀನು ಷರ್ಟ್ ಹಾಕ್ಕೊಂಡು ಈಗ ಹೊರಡು. ಹಂಗೇ ಒಂದ್ನಾಕು ಜನ ಗಟ್ಟಿಯಾಗಿರೋ ಹಮಾಲರನ್ನ ಜೊತೇಗೆ ಕರ‍್ಕೋ. ಒಬ್ಬನಿಗೆ ರಿಪೇರಿ ಮಾಡಬೇಕಿದೆ" ಅಂದ. ಸರಿ, ನಾಲ್ಕು ಹಮಾಲರನ್ನ ಕರಕೊಂಡು ರವಿ ಜೊತೇಲಿ ಹೊರಟೆ. ಅಲ್ಲೇ ಬ್ರೂಸ್ ಪೇಟೆ ಪೊಲೀಸ್ ಸ್ಟೇಶನ್‌ಗಿಂತ ಸ್ವಲ್ಪ ದೂರದಲ್ಲಿ flower street ಅಂತ ಇತ್ತು. ಹೂವಿನ ಬಜಾರ್ ಅದು. ಅದರೊಳಕ್ಕೆ ರವಿ ಮುಂದೆ ಮುಂದೆ ಹೋದ. ನಾನು-ಹಮಾಲರು fallow ಮಾಡಿದೆವು. ಸೀದಾ ಹೋದವನೇ ಒಂದು ಮನೆ ಮುಂದೆ ನಿಂತು, ಅದರ ಬಾಗಿಲು ತಟ್ಟಿದ. ಒಳಗಿಂದ ಒಬ್ಬ ಮನುಷ್ಯ ಬಂದ. ರವಿ ನನ್ನ ಕಡೆ ನೋಡಿದವನೇ ಇವ್ನೇ ನೋಡು ಸುರೇಶಾ... ಅಂದ. ಮುಂದೇನಿದೆ? ಎರಡೇಟು ನಾನು ಕೊಟ್ಟೆ. ಆಮೇಲೆ ನಮ್ಮ ಹಮಾಲರು ಶುರು ಮಾಡಿದರಲ್ಲ? ಅವರು ಒಬ್ಬೊಬ್ರೂ ಒಂದೊಂದು ಸಣ್ಣ ಬೆಟ್ಟದ ಹಾಗಿದ್ರು. ಕೊಟ್ಟ ಒದೆಗಳಿಗೆ ಆ flower street ಮಾರವಾಡಿ ಲಬೊ ಲಬೋ ಅಂತ ಹೊಯ್ಕೊಂಡ ನೋಡಿ? ಒಳಗಡೆ ಇದ್ದ ಅವನ ಮನೆ ಹೆಂಗಸರು ಅವನಿಗಿಂತ ಜೋರಾಗಿ ಹೊಯ್ಕೊಂಡು ಬಂದು ಬಿಟ್ರು. ಕೊಟ್ಟ ಒದೆಗಳು ಸಾಕೂ ಆಗಿದ್ದವು. ರವಿ ಅಲ್ಲಿಂದ ತನ್ನ ಹೀರೊ ಮೆಜೆಸ್ಟಿಕ್ ಮೊಪೆಡ್ ಹತ್ತಿಕೊಂಡು ಸತ್ಯನಾರಾಯಣ ಪೇಟೆಯ ತನ್ನ ಮನೆಗೆ ಹೋಗಿಬಿಟ್ಟ.

“ಆದರೆ ನಮ್ಮ ಕಥೆ ಹೇಳಿ ಸಾರ್? ಆ ಮಾರವಾಡಿಯ ಪರಿಚಯ ಇಲ್ಲದೆ ಹೋದ್ರೂ, ನಾವು ಅದೇ ರೋಡಲ್ಲಿ ದಿನಾ ಓಡಾಡೋರು. ಅವನಿಗೆ ಆ ಪರಿ ಯಾಕೆ ಒದ್ದೆವು? ರವೀಗೆ ಅವನು ಏನು ಮಾಡಿದ್ದ? ತೀರ ಆ ಪರಿ ನಡುರಾತ್ರೀಲಿ ಹಿಡ್ಕೊಂಡು ಹೊಡಿಯುವಂಥದ್ದು ಏನಿತ್ತು? ನಾಳೆ ಏನಾದರೂ ಆದರೆ ಗತಿ ಏನು? ಅದೇ ಯೋಚನೆ ನಂಗೆ. ಬೆಳಿಗ್ಗೆ ಎದ್ದು ಒಂಬತ್ತು ಗಂಟೆ ಸುಮಾರಿಗೆ ನಾನೇ ನೇರವಾಗಿ ರವಿ ಮನೇಗೆ ಹೋದೆ. ಲಲ್ತಕ್ಕ ಇದ್ರು. ರವಿ ಇನ್ನೂ ಎದ್ದಿರಲಿಲ್ಲ. ಹತ್ತು ಗಂಟೆಗೆ ಎದ್ದವನು ಹೊರಗೆ ಬಂದು, ಸಿಗರೇಟು ಸೇದ್ತಾ ಓ... ಏನ್ ಸುರೇಶಾ... ಬೆಳಿಗ್ಗೆ ಬೆಳಿಗ್ಗೆ ಬಂದು ಬಿಟ್ಟಿದೀಯಾ ಅಂದ. ಅದೇ ರವೀ, ರಾತ್ರಿ ಆ ಮಾಧವಿ ಡ್ರೆಸಸ್ ಅಂಗಡಿಯವನ್ನ ಹೊಡೆದೆವಲ್ಲಾ? ಅವನೇನು ನಿಂಗೆ ಬೇಜಾರು ಮಾಡಿಸಿದ್ನಾ? ಏನಾದರೂ ಅಂದ್ನಾ? ಯಾಕೆ ಒದ್ವಿ? ಅಂಥಾದ್ದೇನಾಗಿತ್ತು... ಅಂದೆ. ಅದಕ್ಕೆ ರವಿ ಏನಂದ ಗೊತ್ತಾ? ಹೇ... ಸುರೇಶಾ... ನೀನು ಎಲ್ಲೋ ಒಂದು ಗ್ಲಾಸ್ ಬೀರ್ ಕುಡಿದು ಅವರಿವರ ಹತ್ರ ಗಲಾಟೆ ಮಾಡ್ಕಂಡಿದೀಯ. ಅಷ್ಟೇ ಹೊರತು ಮಾರವಾಡಿಗೂ ನಂಗೂ ಏನು ಸಂಬಂಧ? ನೀನು ಬೆಳಿಗ್ಗೆ-ಬೆಳಿಗ್ಗೆ ಬರೀ ಇಂಥಾ ರಂಕುಗಳನ್ನ ತರಬ್ಯಾಡ ನೋಡು! ಅಂದು ಬಿಡೋದಾ..." ಎಂದ ಸುರೇಶ.

ಬಂದವರಿಗಿರಲಿ, ನಂಗೇ ನಗು ತಡೆಯಲಾಗಲಿಲ್ಲ. ನಿಮಗೊಂದು ಮಾತು honest ಆಗಿ ಹೇಳ್ತೀನಿ. ನನಗೆ ಬಳ್ಳಾರಿಯಲ್ಲಿದ್ದ ‘ಮಾಧವಿ ಡ್ರೆಸಸ್’ ಗೊತ್ತಿದೆ. ಅಸ್ಪಷ್ಟವಾಗಿ ಅದರ ಮಾಲಿಕನೂ ನೆನಪಿಗಿದ್ದಾನೆ. ಆದರೆ ಸುರೇಶನ ಮನೆಗೆ ಆ ನಡುರಾತ್ರಿ ಯಾಕೆ ಹೋದೆ? ಹಮಾಲರನ್ನು ಕರೆಸಿದ್ದು ಯಾಕೆ? ಅವನನ್ನ ಯಾಕೆ ಒದೆಸಿದೆ? Believe me. ನನಗೆ ಒಂದು ತೃಣವೂ ನೆನಪಿಲ್ಲ. ಆ ದಿನಗಳಲ್ಲಿ ನಾನು regular ಆಗಿ ಕುಡೀತಾ ಇದ್ದುದು ‘ಸಂಗೀತಾ ಬಾರ್’ನಲ್ಲಿ. ಆಗ ಗೆಳೆಯರದೊಂದು ಬ್ಯಾಚ್ ಇತ್ತು. ಅಲ್ಲಿಗೆ ‘ಮಾಧವಿ ಡ್ರೆಸೆಸ್’ನ ಸೇಟು ಬರುತ್ತಿದ್ದಿರಬಹುದು. ಆದರೆ ಅವನನ್ನ ಒದೆಸಿದ್ದು ಯಾಕೆ? God knows. ನಾನು ಇಡೀ ಜೀವಮಾನದಲ್ಲೇ ಯಾರನ್ನೂ ಒದೆಸಿದವನಲ್ಲ. Even to this day. ನಾನು ಸಿಟ್ಟು ಬಂದಾಗ ಎದ್ದು ಹೋಗಿ ಒಂದು ಕೆನ್ನೆಗೆ ಹೊಡೆದೋನು. ಅದು ಸಾಧ್ಯವಾಗದಿದ್ದರೆ ಮುಚ್ಕೊಂಡು ಸುಮ್ಮನಿರ‍್ತೇನೆ. ನನಗೆ ನೂರು ಜನ ರೌಡಿಗಳು ಗೊತ್ತು. ಆದರೆ ಅವರಿವರ ಕೈಲಿ ಯಾರನ್ನಾದರೂ ಒದೆಸೋದಿದೆಯಲ್ಲ? ಹೇಸಿಗೆಯ ಕೆಲಸ ಅದು. ಹಾಗೆ ಒದೆಸಿದ ಕ್ಷಣದಿಂದಲೇ ಹೋಗಿ ಒದ್ದು ಬಂದವನ ಮುಲಾಜಿಗೆ ಬೀಳಬೇಕು. ಅವನ black mailಗೆ ಗುರಿಯಾಗಬೇಕು. ಅದು ಒಂದು-ಎರಡು ದಿನಗಳಿಗೆ ಮುಕ್ತಾಯವಾಗುವಂಥದಲ್ಲ. ಶುದ್ಧ ನ್ಯೂಸೆನ್ಸ್. ಅಂಥದ್ದಕ್ಕೆಲ್ಲ ಸಿಕ್ಕಿಹಾಕಿಕೊಳ್ಳಲೇ ಬಾರದು. Never. ಈ ಮಧ್ಯೆ ನನಗೆ ಎದ್ದು ಹೋಗಿ ಕಪಾಳಕ್ಕೆ ಹೊಡೆಯುವಂಥ minimum ಸಿಟ್ಟು ಕೂಡ ಬರುವುದಿಲ್ಲ. ಅವೆಲ್ಲ ಡಿಸ್‌ಗಸ್ಟಿಂಗ್. ನಾನು ಓದುವ-ಬರೆಯುವ ಪ್ರಪಂಚದಲ್ಲಿ, ಸಂಗೀತದೊಂದಿಗೆ ಆರಾಮಾಗಿ ಇದ್ದು ಬಿಡುವಂಥವನು.

ಆದರೆ ‘ಮಾಧವಿ ಡ್ರೆಸೆಸ್’ನವನಿಗೂ, ನನಗೂ ಎಂಥ ಜಗಳ? ಅವನದು ಹೆಂಗಸರ ಬಟ್ಟೆ, ಲಂಗ-ಬಾಡಿ ಮಾರುವ ಚಿಕ್ಕ ಅಂಗಡಿ. ಅದರೊಳಕ್ಕೆ ಕಾಲೂ ಇಟ್ಟವನಲ್ಲ ನಾನು. ಆ ಸೇಠುವಿನ ಇನ್ನೊಂದು ದಂಧೆಯೆಂದರೆ, ಆ ಕಾಲಕ್ಕೆ ಬ್ಲೂ ಫಿಲ್ಮ್‌ಗಳು ‘ಕೆಸೆಟ್’ ಆಕಾರದಲ್ಲಿ ಬರುತ್ತಿದ್ದವು. ಸೇಠು ಅವುಗಳನ್ನು ತಂದು ಬಾಡಿಗೆಗೆ ಕೊಡುತ್ತಿದ್ದ. ಸೆಕ್ಸ್ ನ ವಿಷಯದಲ್ಲಿ ನಾನು ತೃಪ್ತ. ಬ್ಲೂ ಫಿಲ್ಮ್‌ಗಳೆಂದರೆ ಹೇಸಿಗೆ. ಮತ್ತೆ ಅವನೊಂದಿಗೆ ಏನು ಜಗಳ? ಒದೆಸಿದ್ದು ಯಾಕೆ? ಅಗಾಧವಾದ ಜ್ಞಾಪಕ ಶಕ್ತಿ ಇರೋನು ನಾನು. ಆದರೆ ಇವತ್ತಿನ ಈ ಕ್ಷಣದ ತನಕ ನನಗದು ನೆನಪಿಗೆ ಬರುತ್ತಿಲ್ಲ. ತೀರ ಆ ಪರಿ ಕುಡಿದಿದ್ದೆನಾ? ನಾನು ಪ್ರತೀನಿತ್ಯ ಆ ಪರಿಯಾಗೇ ಕುಡಿಯುತ್ತಿದ್ದೆ. ಮೊನ್ನೆ ನಾನು-ಸುರೇಶ ಅದನ್ನೆಲ್ಲ ನೆನಪಿಸಿಕೊಂಡು ಹೊಟ್ಟೆ ಬಿರಿಯೆ ನಕ್ಕೆವು. ನನಗೆ ಒಂದು ಸಂಗತಿ ಕುರಿತಂತೆ ಸಮಾಧಾನವಾದದ್ದೆಂದರೆ ಟರ್ಕಿಯಲ್ಲಿ ಆಗಿನ್ನೂ ಭಯ-ಆತಂಕ ಆರಂಭವಾಗಿರಲಿಲ್ಲ: ಸುರೇಶ ಅಲ್ಲಿಗೆ ಹೋದಾಗ. ಅಷ್ಟಾದರೂ ಸುರೇಶ ಅಲ್ಲಿದ್ದಾಗಲೇ ಅವನ್ಯಾರೋ ಉಗ್ರಗಾಮಿ ಮೈಗೆ ಬಾಂಬ್ ಕಟ್ಟಿಕೊಂಡು ಸ್ಫೋಟಿಸಿಕೊಂಡನಂತೆ.

ನನಗೊಂದು ಖಾಯಿಷ್ ಇದೆ. ಒಂದೇ ಒಂದು ಸಲ ಟರ್ಕಿಯಲ್ಲಿನ ಇಸ್ತಾನ್ ಬುಲ್ ನೋಡಬೇಕು. ಆ ದೇಶದ ಪಕ್ಕದಲ್ಲೇ ಸಿರಿಯಾ ಇದೆ: ಉಗ್ರರ ಹಾಲಿ ತವರು ಮನೆ. ಇನ್ನೊಂದು ಕಡೆ ಇರಾಕ್ ಇದೆ. “ರವೀ, ಟರ್ಕೀನ ನಾವು ಇಸ್ಲಾಮಿಕ್ ರಾಷ್ಟ್ರ ಅಂತೀವಿ. ಅಲ್ಲಿ ಯಾವ ನಿರ್ಬಂಧವೂ ಇಲ್ಲ. ಹೆಂಗಸರು ಬುರ್ಖಾ ಧರಿಸಲ್ಲ. ಡ್ರೈವ್ ಮಾಡ್ತಾರೆ. ಸಿಗರೇಟು ಸೇದ್ತಾರೆ. ಬಾರ್‌ಗಳು ಯಥೇಚ್ಛ" ಅಂದ. ಮೊದಲು ಇರಾಕ್ ಹಾಗೇ ಇದೆ. ಇವತ್ತಿಗೂ ‘ಅಮ್ಮಾನ್’ ಹಾಗೇ ಇದೆ. ಟರ್ಕಿ ಎಂಬುದು ಯೂರಪ್‌ಗೆ ನೇರವಾಗಿ ತೆರೆದುಕೊಳ್ಳುತ್ತದೆ. ಅಲ್ಲಿ ವಿದ್ಯಾಭ್ಯಾಸ ಚೆನ್ನಾಗಿದೆ. ನೀವು ನಂಬಲಿಕ್ಕಿಲ್ಲ: ಪಾಕಿಸ್ತಾನದಲ್ಲಿ ಹೆಂಗಸರು ಬುರ್ಖಾ ಹಾಕಲ್ಲ. Drive ಮಾಡ್ತಾರೆ. ಕೊಂಚ ದುಬಾರಿ ಹೋಟೆಲ್‌ಗಳಲ್ಲಿ ಕುಡಿದೂ ಕುಡಿಯುತ್ತಾರೆ. ಇನ್ನು prostitution ಅಂತೀರಾ? ಯಾವ ಬಾಂಬೇನೂ ಸಾಟಿಯಲ್ಲ: ಅಂಥ ಸೂಳೆಗಾರಿಕೆ ಕರಾಚಿಯಲ್ಲಿದೆ. ಅದ್ಯಾವುದೂ ರಹಸ್ಯವಾಗಿ ನಡೆಯೋದಲ್ಲ. ಖುಲ್ಲಂ-ಖುಲ್ಲ.

‘ಹೌದಾ ಸರ್? ಆ ದೇಶಗಳೆಲ್ಲ ಹಾಗಿವೆಯಾ?’ ಎಂದು ರೌಡಿ ಬೆಕ್ಕಿನ ಕಣ್ಣಿನ ರಾಜೇಂದ್ರ ಕೇಳುತ್ತಿದ್ದೆ. ಅವನೇನೂ ಜ್ಞಾನಿಯಲ್ಲ, ಸುಡುಗಾಡಲ್ಲ. ಸರಿಯಾಗಿ ಫುಟ್‌ಪಾತ್ ಅನ್ನಲು ಬರುತ್ತಿರಲಿಲ್ಲ. ತಾನು ಪದವೀಧರ ಅಂತ ಹೇಳಿ ಕೊಳ್ಳುತ್ತಿದ್ದ; ‘ಫುಡ್ ಬಾತ್’ ಅನ್ನುತ್ತಿದ್ದ. ಕೊಂಚ ಕುಡಿದ ಮೇಲೆ ಊಟಕ್ಕೆ ಕುಳಿತರಂತೂ ಮುಗಿದೇ ಹೋಯಿತು; ಎದುರಿಗೆ ಕುಳಿತವರ ಮುಖಕ್ಕೆ ಎಂಜಲು spray! ತನ್ನ ಛೇರ್ ಪಕ್ಕದಲ್ಲಿ ಒಂದು ದೊಡ್ಡ ಹುಲಿಯ ಪೋಸ್ಟರ್ ಹಾಕಿಕೊಂಡಿರುತ್ತಿದ್ದ. ಎಲ್ಲಿಯ ಹುಲಿ? ಅವನ ಮನೆಯಲ್ಲಿ ಒಂದು ಅರ್ಧ ಜಾತಿಯ ಡಾಬರ್‌ಮನ್ ಇತ್ತು. ಒಂದು ರಾತ್ರಿ ಮನೆಗೆ ರೇಡ್ ಬಿದ್ದ ದಕ್ಷ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಆ ನಾಯಿಯ ಬಾಯಿಯೊಳಕ್ಕೆ ಲಾಠಿ ಇಟ್ಟು ಯಾವ ತೆರನಾಗಿ ತಿರುಗಿಸಿದ್ದರೆಂದರೆ, ಬೆಳಿಗ್ಗೆ ಅದಕ್ಕೆ ಟೂಥ್ ಪೇಷ್ಟು - ಬ್ರಷ್ಷು ಎರಡೂ ಬೇಕಿರಲಿಲ್ಲ. ಬೋಳು ಬಾಯಿ; ರಾಜೇಂದ್ರನ ಪೌರುಷದಂತೆ.

In any case ನನಗೆ ಪುಷ್ಪ ಇಷ್ಟವಾಗುತ್ತಿದ್ದ; ಪುಷ್ಪರಾಜ್. ಅವನಿಗೆ ಮೀಟರ್ ಇತ್ತು. ಹಟವಿತ್ತು. ಸುಳ್ಳು ಹೇಳಲಾರದಂತಹ ಸಂಕೋಚ-ಸೌಜನ್ಯ ಈಗಲೂ ಇವೆ. ಈ ರಾಜೇಂದ್ರನಿಗೆ ಸುಮಾರು 1994ರಲ್ಲಿ ಒಂದು ಆಪತ್ತು ಬಂತು. ತಾನೇ ಒಬ್ಬ ಲಡಾಸು ಪೊಲೀಸ್ ಅಧಿಕಾರಿಯ ಕಾಲಿಗೆ ಬಿದ್ದು ಕೇಸು ಹಾಕಿಸಿಕೊಂಡು ಜೈಲು ಸೇರಿಬಿಟ್ಟ. ಪೊಲೀಸರು ಆ ಪರಿ ಬೆನ್ನತ್ತಿದ್ದರು. They were after his blood. “ನೀವು ಒಂದು ಮಾತು ರಾಮಕೃಷ್ಣ ಸಾಹೇಬರಿಗೆ ಹೇಳಿ ಸರ್. ಅವರೊಬ್ರು ಮನಸು ಮಾಡಿದರೆ ಪ್ರಾಣ ಉಳಿಯುತ್ತೆ. ನಾನು ಜಾಮೀನು ಮಾಡಿಸಿಕೊಂಡು ಆಚೆ ಬರ‍್ತೀನಿ’ ಅಂತ ದುಂಬಾಲು ಬಿದ್ದ ರಾಜೇಂದ್ರ. ಅಗತ್ಯಕ್ಕಿಂತ ಹೆಚ್ಚು ಪ್ರಾಮಾಣಿಕರಾದ, ನಿಷ್ಠುರಿಯಾದ ರಾಮಕೃಷ್ಣ ಅವರು ಡಿ.ಸಿ.ಪಿಯಾಗಿದ್ದರು. ಶಿವರಾಂರಂತಹ ನಿಯತ್ತಿನ ಕೆಲಸಗಾರರಿಗೆ ಅವರು model, ಆರಾಧ್ಯ ದೈವ. ಆದರೆ ನನಗೆ ಆ connection ಇರಲಿಲ್ಲ. ಅವರು ಪೊಲೀಸ್ ಫೋರ್ಸ್‌ಗೆ ಸೇರೋ ಮುಂಚೆ ಚಳ್ಳಕೆರೆಯಲ್ಲಿ ಲೆಕ್ಚರರ್ ಆಗಿದ್ದರು. And he was pretty close to ನಮ್ಮ ಬೆಳಗೆರೆ ಕೃಷ್ಣಶಾಸ್ತ್ರಿಗಳು. ಅವರಂಥವರ ಸೋದರಳಿಯನಾದ ನಾನು ಇವನ್ಯಾವನೋ ರೌಡಿಯ ಅರ್ಜಿ ಹಿಡಕೊಂಡು ರಾಮಕೃಷ್ಣ ಅವರ ಬಳಿಗೆ ಹೇಗೆ ಹೋಗಲಿ? ಆದರೂ ಪ್ರಾಣ ಕೈಲಿ ಹಿಡಿದುಕೊಂಡು ಹೋದೆ. ಎಲ್ಲ ಪರಿಶೀಲಿಸಿ, “ಆಯ್ತು, ರಾಜೇಂದ್ರನಿಗೆ ರೌಡಿಯಿಜಂ ಬಿಟ್ಟು, ತಿಕಮುಚ್ಚಿಕೊಂಡು ಇರೋಕೆ ಹೇಳಿ. ತೆಪ್ಪಗಿದ್ರೆ ನಾವು ಅವನ ತಂಟೆಗೆ ಹೋಗಲ್ಲ" ಅಂದರು.

ಅದರ ಮರುದಿನ ನಾನು (ಹಳೇ ಜೈಲು ಕಟ್ಟಡ) ಜೈಲಿಗೆ ಹೋದೆ. ಅಲ್ಲಿ ಆಗ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಗಿದ್ದ ಲಕ್ಷ್ಮೀನಾರಾಯಣ ಇವತ್ತಿಗೂ ಇದ್ದಾರೆ. ನಡೆದದ್ದಕ್ಕೆ ಅವರೇ ಸಾಕ್ಷಿ. ಹೇಳಿ ಕಳಿಸಿದ ಕೂಡಲೇ ರಾಜೇಂದ್ರ ಒಂದು checks ಲುಂಗಿ ಉಟ್ಟುಕೊಂಡು ಲಕ್ಷ್ಮೀನಾರಾಯಣರ ಛೇಂಬರಿಗೆ ಬಂದ. ಅವನಿಗೆ ರಾಮಕೃಷ್ಣ ಅವರು ಹೇಳಿದುದನ್ನು ಹೇಳಿದೆ. ಅವನಿಗಿನ್ನೇನು, ಮರಣ ದಂಡನೆ ತಪ್ಪಿಸಿದಂತಾಗಿತ್ತು. ‘ಇಲ್ಲಿ ಬೇಡ ಸರ್. ನೀವು ಹೊರಗೆ ಬನ್ನಿ’ ಎಂದು ಇನ್ನಿಲ್ಲದಂತೆ ಒತ್ತಾಯಿಸಿದ ರಾಜೇಂದ್ರ. ಹೊರ ಬಂದು ಬಯಲಲ್ಲಿ ನಿಂತೆ. ಜೈಲಿನಲ್ಲಿ ನೂರಾರು ಜನ ನೋಡುತ್ತಿರುವಾಗಲೇ ಬೆಕ್ಕಿನ ಕಣ್ಣು ರಾಜೇಂದ್ರ ಉದ್ದಕ್ಕೆ ನೆಲದ ಮೇಲೆ ಸಾಷ್ಟಾಂಗ ಮಲಗಿ ನನ್ನ ಕಾಲಿಗೆ ಹಣೆ ಹಚ್ಚಿ ನಮಸ್ಕಾರ ಮಾಡಿಬಿಟ್ಟ. ನನಗೆ ವಿಪರೀತ ಸಂಕೋಚ.

ಆದರೆ “ನನ್ನ ಜೀವ ಉಳಿಸಿ ಬಿಟ್ರಿ ಸರ್!" ಅಂದವನು ಕೆಲವೇ ವಾರಗಳಲ್ಲಿ ದ್ವಾರಕನಾಥ್‌ಗೆ ಹೇಳಿ ‘ಲಂಕೇಶ್ ಪತ್ರಿಕೆ’ಯಲ್ಲಿ ನನ್ನ ವಿರುದ್ಧ ಮಾರುದ್ದದ ಸುದ್ದಿ ಬರೆಸಿದ.; ‘ರೌಡಿಗಳೆಂದರೆ ಅದು’ ಅಂತ ಅವತ್ತೇ ಗೊತ್ತಾಯಿತು. ಈ ಕೆಲಸ ಮಾಡಿದವನು ಇನ್ನೊಬ್ಬ ಇದ್ದಾನೆ. ಇವರೆಲ್ಲ ಕನಿಷ್ಟ ಮಾತ್ರದ ಸೌಜನ್ಯಕ್ಕೂ ಅರ್ಹರಲ್ಲ. “ಮುಕಳಿ ಪವಿತ್ರವಲ್ಲ. ಪೊಲೀಸು ಮಿತ್ರನಲ್ಲ" ಎಂಬ ಗಾದೆ ಇದೆ. ನನಗೆ ಪೊಲೀಸರು ಸಾವಿರ ಪಾಲು better ಅನ್ನಿಸುತ್ತಾರೆ. ಅಂಥ cat ರಾಜೇಂದ್ರ ಮೈಮರೆತು ಚಾಲುಕ್ಯ ಹೊಟೇಲಿನ ಮುಂದೆ ಕಾಫಿ ಕುಡಿಯುತ್ತಾ ಗೆಳೆಯರೊಂದಿಗೆ ಹರಟುತ್ತಿದ್ದಾಗ, ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ತೀರಾ ಆಕಸ್ಮಿಕವಾಗಿ ಅವನನ್ನು ನೋಡಿ, ಹಸಿದ ಚಿರತೆಗಳಂತೆ ನುಗ್ಗಿ ತಲೆಯೊಳಗಿನ ಮಿದುಳು ಕಿತ್ತು ಈಚೆಗೆ ಬರುವಂತೆ ಹೊಡೆದು ಕೊಂದವರು ಇದೇ ಅನಾಲಿ, ಒಂಟೆ, ಸೈಲೆಂಟ್ ಸುನೀಲ ಮುಂತಾದವರು. ನನ್ನ camera man ಹೋದಾಗ ‘ಅತಿ ಬುದ್ಧಿವಂತ’ನಾದ, ಭೂಗತ ಲೋಕದ master mind ಆದ (ಹಾಗಂತ ಅನೇಕರು ಅಂದುಕೊಂಡಿದ್ದರು) ಬೆಕ್ಕಿನ ಕಣ್ಣು ರಾಜೇಂದ್ರನ ಮಿದುಳು ಒಂದು ಹೆಂಟೆ ಲದ್ದಿಯಂತೆ ಮೆಟ್ಟಿಲ ಮೇಲೆ ಬಿದ್ದಿತ್ತು. ಇವತ್ತು ರಾಜೇಂದ್ರ ಭೂಗತದಲ್ಲಿನ ಅನೇಕರಿಗೆ ನೆನಪೇ ಇಲ್ಲ.

ಯಾಕೋ ರಾಜೇಂದ್ರನ ಅಸಹ್ಯಕರ ನೆನಪು ಬಂತು: ಇದನ್ನು ಬರೆದೆ.

-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 December, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books