Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅಸಹಿಷ್ಣುತೆಯ ಕೂಗೆಬ್ಬಿಸುತ್ತಿರುವ ಕಾಂಗ್ರೆಸ್ ಮೊದಲು ತನ್ನ ಕಡೆ ನೋಡಿಕೊಳ್ಳಲಿ!

ಕಳೆದ ಹಲವು ಕಾಲದಿಂದ ದೇಶದುದ್ದ ಅಸಹಿಷ್ಣುತೆಯ ಕುರಿತು ಒಂದೇ ಸಮನೆ ಚೆನ್ನೈನಲ್ಲಿ ಮಳೆ ಸುರಿದಂತೆ ಚರ್ಚೆ ನಡೆಯುತ್ತಲೇ ಇದೆ. ಹಿಂದಿ ಚಿತ್ರ ನಟ ಆಮಿರ್ ಖಾನ್ ದೇಶ ಬಿಟ್ಟು ಹೋಗುತ್ತಾನಂತೆ ಎಂಬುದರಿಂದ ಹಿಡಿದು ಹಲವು ವಿಷಯಗಳವರೆಗೆ ಒಂದೇ ಸಮನೆ ಚರ್ಚೆ ನಡೆಯುತ್ತಿದೆ. ಅಂದ ಹಾಗೆ ನೆನಪಿಡಿ, ಅಸಹನೆ ಎಂಬುದು ಈ ದೇಶವನ್ನು ನಿರಂತರವಾಗಿ ಕಾಡಿದ ವಿಷಯ. ಒಂದೆರಡು ವರ್ಷಗಳಿಂದಲ್ಲ, ಸಾವಿರಾರು ವರ್ಷಗಳಿಂದ ಕಾಡಿದ ವಿಷಯ. ಆರ್ಥಿಕ ಹಿಡಿತಕ್ಕೆ ಸಂಬಂಧಿಸಿದಂತೆ ಸೀಮಿತ ವರ್ಗ ಈ ದೇಶದ ಬಹುಪಾಲು ಜನರನ್ನು ಅಸಹಿಷ್ಣುತೆಯತ್ತ ದೂಡಿತು. ಅವರು ಓದುವಂತಿಲ್ಲ ಎಂಬುದರಿಂದ ಹಿಡಿದು ಅಸಂಖ್ಯಾತ ಕರಾರುಗಳನ್ನು ಹಾಕಲಾಯಿತು. ಇದರ ವಿರುದ್ಧ ಸಣ್ಣ ಪುಟ್ಟ ವಿರೋಧಗಳು ಕೇಳಿ ಬಂದರೂ ಅದು ದೊಡ್ಡ ಮಟ್ಟದ ಅಸಹಿಷ್ಣುತೆಯಾಗಿ ಈ ದೇಶವನ್ನು ಕಾಡಲಿಲ್ಲ. ಬದಲಿಗೆ ಅದೊಂದು ವ್ರಣವಾಯಿತು.

ದೇಶಕ್ಕೆ ಸ್ವಾತಂತ್ರ್ಯ ತರಲು ಹುಟ್ಟಿದ ಕಾಂಗ್ರೆಸ್‌ಗೆ ಆ ಮಟ್ಟಿನ ಬೆಂಬಲ ಯಾಕೆ ವ್ಯಕ್ತವಾಯಿತು ಎಂದುಕೊಂಡಿದ್ದೀರಿ? ಅವರು ಈ ತಾರತಮ್ಯವನ್ನು ಸರಿಪಡಿಸುತ್ತಾರೆ. ಬಹುಪಾಲು ಜನರ ಮೇಲೆ ನಿರ್ದಿಷ್ಟ ಸಮುದಾಯಗಳು ವ್ಯಕ್ತಪಡಿಸುತ್ತಿರುವ ಅಸಹಿಷ್ಣುತೆಯನ್ನು ಕಡಿಮೆ ಮಾಡುತ್ತದೆ ಎಂದು ಜನ ಭಾವಿಸಿದ್ದರು. ಆದರೆ ನೆಹರೂ ಕಾಲದಿಂದ ಇಲ್ಲಿಯ ತನಕ ನೋಡಿ. ಕಾಂಗ್ರೆಸ್ ಪಕ್ಷ ನಿರಂತರವಾಗಿ ತನ್ನ ಅಸಹಿಷ್ಣುತೆಯ ಬೇರುಗಳ ಮೇಲೇ ದೇಶವನ್ನು ಕಟ್ಟಲು ಹೊರಟಿತು. ಈ ದೇಶದಲ್ಲಿ ಅಸಹಿಷ್ಣುತೆಯನ್ನು ನಿವಾರಿಸಲು ಅವಕಾಶ ಇದ್ದ ಪಾರ್ಟಿ ಎಂದರೆ ಕಾಂಗ್ರೆಸ್ ಪಾರ್ಟಿ. ಆದರೆ ಅದು ದೇಶದ ಆಂತರ್ಯದಲ್ಲಿರುವ ಅಸಹಿಷ್ಣುತೆಯನ್ನೇ ಲಾಭವನ್ನಾಗಿ ಮಾಡಿಕೊಂಡು, ಇಂತಹ ಅಸಹಿಷ್ಣುತೆ ತೊಲಗಲಿ ಎಂದು ಬಯಸಿದ್ದ ಸಮುದಾಯಗಳಿಗೆ ನಿರಾಸೆ ಉಂಟು ಮಾಡಿತು. ನೆಹರೂ ಕಾಲದಿಂದ ಹಿಡಿದು, ಈಗಿನ ಸೋನಿಯಾ ಕಾಲದ ತನಕ ನೋಡಿ. ಉದ್ದಕ್ಕೂ ಕಾಂಗ್ರೆಸ್ ಪ್ರದರ್ಶಿಸುತ್ತಾ ಬಂದಿದ್ದು ಅಸಹಿಷ್ಣುತೆಯನ್ನೇ ಹೊರತು, ಸಹಿಷ್ಣುತೆಯನ್ನಲ್ಲ. ಈ ದೇಶದ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಪಾಲಿಗೆ ಅಸಹಿಷ್ಣುತೆಯ ಝಳ ತಾಗದಂತೆ ನೋಡಿಕೊಳ್ಳುತ್ತೇವೆ ಎಂದವರು ಅವರನ್ನು ಮತಬ್ಯಾಂಕನ್ನಾಗಿ ಮಾಡಿಕೊಂಡರೇ ಹೊರತು, ಅಸಹಿಷ್ಣುತೆ ತೊಲಗಲು ದಾರಿ ಮಾಡಿಕೊಡಲಿಲ್ಲ.

ಸಾಲದೆಂಬಂತೆ ನೆಹರೂ ಯುಗದಲ್ಲಿ ಲೋಹಿಯಾ, ಅಂಬೇಡ್ಕರ್ ಅವರಂತಹ ಮಹಾನ್ ನಾಯಕರು ಭ್ರಮನಿರಸನಗೊಂಡರು. ನೆಹರೂ ಈ ದೇಶದಲ್ಲಿ ವಂಶಪಾರಂಪರ‍್ಯ ರಾಜಕಾರಣವನ್ನು ಬೆಳೆಸುವ ಮೂಲಕ ತನ್ನ ಕುಟುಂಬದ ಬೇರನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ದೇಶದ ಬೇರನ್ನಲ್ಲ ಎಂಬುದು ಅವರಿಗೆ ಮನವರಿಕೆ ಆಯಿತು. ಹೀಗಾಗಿ ನೆಹರೂ ಯುಗದಲ್ಲಿ ದೊಡ್ಡ ದೊಡ್ಡ ನಾಯಕರೆನ್ನಿಸಿಕೊಂಡವರು ಪಲ್ಲಟಗೊಂಡರು. ವಾಸ್ತವವಾಗಿ ನೆಹರೂ ಅವರಿಗೆ ಈ ದೇಶಕ್ಕೊಂದು ಸಂವಿಧಾನ ರಚಿಸಿಕೊಟ್ಟ ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮೊದಲು ತಮ್ಮ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಷ್ಟೂ ಸಹಿಷ್ಣುತೆ ಇರಲಿಲ್ಲ. ಆದರೆ ಅಂಬೇಡ್ಕರ್ ಅವರಿಲ್ಲದ ಸಚಿವ ಸಂಪುಟದ ಪಟ್ಟಿಯನ್ನು ನೋಡಿದ ಕೂಡಲೇ ಗಾಂಧಿ ಅಸಮಾಧಾನಗೊಂಡರು. ಅಂಬೇಡ್ಕರ್ ಅವರಿಲ್ಲದ ಸಂವಿಧಾನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಪಟ್ಟಿಯನ್ನೇ ತಿರಸ್ಕರಿಸಿದರು. ಆಗ ಅನಿವಾರ್ಯವಾಗಿ ನೆಹರೂ ಅವರು ಅಂಬೇಡ್ಕರ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡರೇ ಹೊರತು, ಇನ್ಯಾವ ಕಾರಣಗಳಿಗೂ ಅಲ್ಲ. ಮುಂದೆ ಅಂಬೇಡ್ಕರ್ ಕಾಂಗ್ರೆಸ್ ತೊರೆಯುವಂತಹ ವಾತಾವರಣ ಸೃಷ್ಟಿಸಲಾಯಿತು. ಚುನಾವಣೆಯಲ್ಲಿ ಸ್ಪರ್ಧಿಸಿದ ಅವರನ್ನು ಸೋಲಿಸಲು ಎಲ್ಲ ಶಕ್ತಿಯನ್ನು ಬಳಸಿ ಕಾಂಗ್ರೆಸ್ ಯಶಸ್ವಿಯಾಯಿತು.

ಹೀಗೆ ಕಾಲಕ್ರಮೇಣ ತಮ್ಮ ಭಟ್ಟಂಗಿಗಳಿಂದ ಆವೃತರಾಗಿ, ತಮ್ಮ ಮಗಳು ಇಂದಿರಾ ಗಾಂಧಿಯನ್ನೇ ಉತ್ತರಾಧಿಕಾರಿಯನ್ನಾಗಿ ಬೆಳೆಸಲು ಹೊರಟ ನೆಹರೂ ಅವರ ಮೇಲೆ ಮೊದಲು ಕಿಡಿ ಕಾರಿದವರು ನಮ್ಮ ಕರ್ನಾಟಕದ ಕೆಂಗಲ್ ಹನುಮಂತಯ್ಯ. ಇವತ್ತು ಅಸಹಿಷ್ಣುತೆ ತೊಲಗಿ, ಸಹಿಷ್ಣುತೆ ಬರಲಿ ಎಂದು ಮಾತನಾಡುವವರು ಕೆಂಗಲ್ ಹನುಮಂತಯ್ಯ ಹಾಗೂ ಜವಾಹರಲಾಲ್ ನೆಹರೂ ಅವರ ನಡುವಣ ಚರ್ಚೆಯನ್ನು ಗಮನಿಸಬೇಕು. ಆಗ ನೆಹರೂ ಈ ದೇಶದ ಪ್ರಧಾನಿಯಾದರೆ, ಕೆಂಗಲ್ ಹನುಮಂತಯ್ಯ ಕರ್ನಾಟಕದ ಮುಖ್ಯಮಂತ್ರಿ. ಒಂದು ಸಂದರ್ಭದಲ್ಲಿ ನೆಹರೂ ಅವರನ್ನು ಭೇಟಿ ಮಾಡಿದ ಕೆಂಗಲ್ ಹನುಮಂತಯ್ಯ ನೇರವಾಗಿ ಕೇಳಿದರು, ಸಾರ್, ನೀವು ನಿಮ್ಮ ಮಗಳನ್ನು ಉತ್ತರಾಧಿಕಾರಿಯನ್ನಾಗಿ ಬೆಳೆಸಲು ಹೊರಟಿರುವ ಕುರಿತು ಹಲವರಿಗೆ ಅಸಮಾಧಾನವಿದೆ. ನೀವು ಕೂಡ ಈ ಕೆಲಸ ಮಾಡಬಾರದು. ಕೆಂಗಲ್ ಹನುಮಂತಯ್ಯ ಅವರು ಈ ಮಾತು ಹೇಳಿದ್ದೇ ತಡ, ಸಹಿಷ್ಣುತೆಯ ಸಾಕಾರಮೂರ್ತಿ ನೆಹರೂಗೆ ಸಿಟ್ಟುಕ್ಕಿ ಬಂತು. ಹೀಗಾಗಿ ಕೆಂಗಲ್ ಹನುಮಂತಯ್ಯ ಅವರಿಗೆ ಕೊಡಬಾರದ ಕಿರುಕುಳ ನೀಡಿದರು. ವಿಧಾನಸೌಧ ಕಟ್ಟಿದ್ದಕ್ಕೂ ಅಸಮಾಧಾನ ವ್ಯಕ್ತಪಡಿಸಿ, ಇದನ್ನು ಕಟ್ಟುವುದರಲ್ಲಿ ಹಣದ ಅವ್ಯವಹಾರ ನಡೆದಿದೆ ಎಂಬ ದೂರು ತಮ್ಮ ಭಟ್ಟಂಗಿಗಳಿಂದಲೇ ದೆಹಲಿಗೆ ತಲುಪುವಂತೆ ಮಾಡಿ, ಅದರ ಬಗ್ಗೆ ಒಂದು ತನಿಖೆಯನ್ನು ಮಾಡಿಸಿದರೂ ಕೆಂಗಲ್ ಹನುಮಂತಯ್ಯ ಅವರ ಮೇಲೆ ಒಂದು ಚಿಕ್ಕಾಸಿನ ತಪ್ಪನ್ನೂ ಹುಡುಕಲು ಸಾಧ್ಯವಾಗಲಿಲ್ಲ.

ಹೀಗೆ ನೆಹರೂ ಅವರ ಕಾಲದಲ್ಲಿ ಉದ್ದಕ್ಕೂ ನಡೆಯುತ್ತಾ ಬಂದಿದ್ದು ಅಸಹಿಷ್ಣುತೆಯ ನೀತಿಯೇ. ರಾಜ್ಯಗಳಲ್ಲಿ ಸಹಿಷ್ಣುತಾ ಮನೋಭಾವವನ್ನು ಮೂಡಿಸುವಂತಹ ಕ್ರಮಗಳನ್ನು ಕೈಗೊಳ್ಳಲು ಅವರು ಕಾಂಗ್ರೆಸ್ ಸರ್ಕಾರಗಳಿಗೆ ಬೆಂಬಲ ಕೊಡಬೇಕಿತ್ತೇ ವಿನಾ ಅಸಹಿಷ್ಣುತೆಯನ್ನು ಬೆಳೆಸಲು ಅಗತ್ಯವಾದ ಮತಬ್ಯಾಂಕ್ ರಾಜಕಾರಣವನ್ನೇ ಹೊರತು ಬೇರೇನಲ್ಲ. ಇಂದಿರಾ ಗಾಂಧಿ ಬಂದ ನಂತರ ಆಗಿದ್ದೂ ಅದೇ. ಆಕೆ ಉದ್ದಕ್ಕೂ ಈ ದೇಶವನ್ನು ಅಸಹಿಷ್ಣುತೆಯ ವಾತಾವರಣದಲ್ಲೇ ಬೆಳೆಸಿದರು. ಇಂದಿರಾ ಗಾಂಧಿ ಕಾಲದಲ್ಲಿ ಮುಖ್ಯಮಂತ್ರಿಗಳನ್ನು ಬದಲಿಸುವುದು ಎಂದರೆ ಬಟ್ಟೆ ಬದಲಿಸಿದಷ್ಟು ಸುಲಭದ ಕೆಲಸವಾಗಿತ್ತು. ಇಂದಿರಾ ಗಾಂಧಿ ಹೇಳಿದರೆ ಕಸ ಗುಡಿಸಲೂ ಸಿದ್ಧ ಎಂದ ಮನುಷ್ಯನನ್ನು ಈ ದೇಶದ ರಾಷ್ಟ್ರಪತಿಯನ್ನಾಗಿ ಮಾಡಲಾಯಿತು. ಅದಕ್ಕೂ ಮುನ್ನ ಬರಬರುತ್ತಿದ್ದಂತೆಯೇ ಪಕ್ಷದ ಮೇಲೆ ತಮ್ಮ ಹಿಡಿತ ಸಾಧಿಸಲು ಮೊರಾರ್ಜಿ ದೇಸಾಯಿ, ನಿಜಲಿಂಗಪ್ಪ ಅವರಂತಹ ಮಹಾನ್ ನಾಯಕರನ್ನು ಸೈಡ್‌ಲೈನಿಗೆ ಸರಿಸಿಬಿಟ್ಟಿದ್ದರು ಇಂದಿರಾ. ಹೀಗೆ ಪಕ್ಷವನ್ನು ಡೆಮಾಕ್ರಟಿಕ್ ಮಾರ್ಗದಲ್ಲಿ ನಡೆಸೋಣ ಎಂದವರನ್ನೇ ಮೂಲೆಗುಂಪು ಮಾಡಿದ ಇಂದಿರಾ ಗಾಂಧಿಯನ್ನು ಖುದ್ದು ವಾಜಪೇಯಿಯೇ ‘ದುರ್ಗಾ ದೇವಿ’ ಎಂದು ಬಣ್ಣಿಸಿದರೂ, ಅದು ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದ್ದಾಗಿತ್ತು.

ಇಂತಹ ಇಂದಿರಾ ರಾಜಕೀಯವಾಗಿ ಸೋತು ಮೂಲೆಗುಂಪಾಗಿದ್ದ ಕಾಲದಲ್ಲಿ ಆಕೆಯನ್ನು ಕರೆದುಕೊಂಡು ಬಂದು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಿಸಲು ನೆರವು ನೀಡಿದವರು ಕರ್ನಾಟಕದ ಮುಖ್ಯಮಂತ್ರಿ ದೇವರಾಜ ಅರಸರು. ನೆನಪಿಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹೆಸರಿನ ಬಲವಿಲ್ಲದೆ, ಒಬ್ಬ ವ್ಯಕ್ತಿಯ ಮೂಲಕ ಅಧಿಕಾರ ಅಂತ ಹಿಡಿದಿದ್ದರೆ ಅದು ದೇವರಾಜ ಅರಸು ಕಾಲದಲ್ಲಿ ಮಾತ್ರ. ತಮ್ಮ ಸಾಮಾಜಿಕ ಕ್ರಾಂತಿಯ ಮೂಲಕ ಅಸಹಿಷ್ಣುತೆಯ ವಾತಾವರಣವನ್ನು ಕಡಿಮೆ ಮಾಡಲು ಅರಸು ಶ್ರಮಿಸಿದಷ್ಟು ಬೇರೆ ಯಾರೂ ಇದುವರೆಗೆ ಶ್ರಮಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಂದಿರಾ ಗಾಂಧಿಯ ಅಸಹನೆ ಎಂಬುದು ದೇಶದ ಮೇಲೆ ತುರ್ತು ಸ್ಥಿತಿ ಹೇರುವಂತಹ ವಾತಾವರಣವನ್ನು ಸೃಷ್ಟಿಸಿದರೂ, 1978ರಲ್ಲಿ ದೇವರಾಜ ಅರಸರು ತಮ್ಮ ಕೆಲಸಗಳ ಮೂಲಕ ಜನರ ಮನಗೆದ್ದು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರ ಹಿಡಿಯುವಂತೆ ಮಾಡಿದರು. ಆದರೆ ಯಾವಾಗ ಇಂದಿರಾ ಗಾಂಧಿಯವರ ರಾಜಕಾರಣದ ಅಸಹಿಷ್ಣುತೆ ಹೆಚ್ಚಾಗುತ್ತಾ ಹೋಯಿತೋ? ಆಗಲೇ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ತಲೆ ಎತ್ತಿದ್ದು. ತುರ್ತು ಸ್ಥಿತಿಯ ನಂತರ ಜನತಾ ಪಕ್ಷ ಮೇಲೆದ್ದು ನಿಂತಿದ್ದು.

ಆದರೆ ಜನತಾ ಪಕ್ಷದ ಸರ್ಕಾರ ತನ್ನ ಪಾಡಿಗೆ ಆಳಿಕೊಳ್ಳಲಿ ಎಂದು ಬಿಡದ ಇಂದಿರಾ ಗಾಂಧಿ, ಇದೇ ಚೌಧರಿ ಚರಣ್‌ಸಿಂಗ್ ಅವರನ್ನು ಹಿಡಿದುಕೊಂಡು ಜನತಾ ಪಕ್ಷದ ಸರ್ಕಾರವನ್ನು ಬೀಳಿಸಿದರು. ನಿಮ್ಮನ್ನೇ ಪ್ರಧಾನಿ ಮಾಡುತ್ತೇನೆ ಎಂದು ಚೌಧರಿ ಚರಣ್‌ಸಿಂಗ್ ಅವರಿಗೂ ಭರವಸೆ ನೀಡಿ, ಬಹುಮತ ಪ್ರಾಪ್ತವಾಗಬೇಕಾದ ಕಾಲದಲ್ಲಿ ಕೈ ಎತ್ತಿ ಅವರ ಸರ್ಕಾರವನ್ನೂ ಬೀಳಿಸಿದರು. ಇವತ್ತು ಅಸಹಿಷ್ಣುತೆಯ ಕುರಿತು ಮಾತನಾಡುವ ಕಾಂಗ್ರೆಸ್ ಪಕ್ಷ ತನ್ನ ಗರ್ಭದಲ್ಲಿ ಅಡಗಿರುವ ಅಸಹಿಷ್ಣುತೆ ಕೂಡ ಈ ದೇಶವನ್ನು ಯಾವ ರೀತಿ ಚಿಕಣಾ ಚೂರು ಮಾಡಿತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಲ್ಲ? ರಾಜೀವ್ ಗಾಂಧಿ ಕತೆ ಹೇಳಲು ಹೋದರೆ ಅವರದೂ ಡಿಟ್ಟೋ ಇದೇ ಕತೆ. ಕರ್ನಾಟಕದಲ್ಲಿ ಬೊಮ್ಮಾಯಿ ನೇತೃತ್ವದ ಜನತಾ ದಳ ಸರ್ಕಾರವನ್ನು ವೆಂಕಟಸುಬ್ಬಯ್ಯ ಎಂಬ ರಾಜ್ಯಪಾಲರಿಂದ ಉರುಳಿಸಿದ ರಾಜೀವ್ ಗಾಂಧಿ, ಆನಂತರ ಕರ್ನಾಟಕ ಕಂಡ ಧೀಮಂತ ನಾಯಕ ವೀರೇಂದ್ರ ಪಾಟೀಲರನ್ನು ಕಾಗದದ ಚೂರಿನಂತೆ ಬದಲಿಸಿದರು. ಆಂಧ್ರದ ಮುಖ್ಯಮಂತ್ರಿಯನ್ನು ಏರ್‌ಪೋರ್ಟಿನಲ್ಲಿ ಗುಲಾಮನಂತೆ ಅವರು ನಡೆಸಿಕೊಂಡ ಪರಿಣಾಮವಾಗಿಯೇ ಎನ್.ಟಿ.ರಾಮರಾವ್ ಅವರ ‘ತೆಲುಗು ದೇಶಂ’ ಪಕ್ಷ ಜನಿಸಿದ್ದು. ತೆಲುಗರ ಸ್ವಾಭಿಮಾನವನ್ನು ಕೆಣಕಲಾಗಿದೆ ಎಂದು ಅಬ್ಬರಿಸಿ ಅವರು ಕಣಕ್ಕಿಳಿದ ಹೊಡೆತಕ್ಕೆ ಕಾಂಗ್ರೆಸ್ ನೆಲ ಕಚ್ಚಿತು.

ಹೀಗೆ ನೋಡುತ್ತಾ ಹೋದರೆ ಕಾಂಗ್ರೆಸ್‌ನ ಜಾಯಮಾನದಲ್ಲಿ ಈ ದೇಶವನ್ನು ಅಸಹಿಷ್ಣುತೆಯಿಂದ ಸಹಿಷ್ಣುತೆಯತ್ತ ಕೊಂಡೊಯ್ಯುವ ಗುಣವೇ ಕಾಣಲಿಲ್ಲ. ಹೋಗಲಿ, ಕಳೆದ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರ ಹಿಡಿಯಿತಲ್ಲ? ಆಗ ಸೋನಿಯಾ ಮಾಡಿದ್ದೇನು? ಪ್ರಾದೇಶಿಕ ಪಕ್ಷಗಳ ಶಕ್ತಿಯನ್ನು ನಿರಂತರವಾಗಿ ಕುಗ್ಗಿಸುವ ಕೆಲಸ ಮಾಡುತ್ತಾ ಬಂದಿದ್ದು. ಹೀಗೆ ಮಾಡಿದರೆ ಪ್ರಾದೇಶಿಕ ಶಕ್ತಿಗಳ ಜೊತೆ ನಿಂತ ಮತಬ್ಯಾಂಕ್ ತಮಗೆ ಲಾಭದಾಯಕವಾಗುತ್ತದೆ ಎಂದು ಸೋನಿಯಾ ಲೆಕ್ಕ ಹಾಕಿದ್ದರು. ಆದರೆ ಅದು ಹಾಗಾಗಲಿಲ್ಲ. ಬದಲಿಗೆ ಬಿಜೆಪಿಗೆ ಲಾಭವಾಯಿತು. ಮೊದಲೇ ದೇಶದ ಬಹುಪಾಲು ಜನರನ್ನು ಅಸಹಿಷ್ಣುತೆಯತ್ತ ನೂಕಿದ ಶಕ್ತಿಗಳ ಬಲದಿಂದ ಜನಿಸಿದ ಪಕ್ಷ ಬಿಜೆಪಿ. ಹೀಗಾಗಿ ಪ್ರಾದೇಶಿಕ ಪಕ್ಷಗಳು ಎಲ್ಲೆಲ್ಲಿ ದುರ್ಬಲವಾದವೋ? ಅಲ್ಲೆಲ್ಲ ಬಿಜೆಪಿಯ ಶಕ್ತಿ ಹೆಚ್ಚಾಯಿತು. ಪರಿಣಾಮವಾಗಿ ಬಿಜೆಪಿ ಹಿಂದೆಂದಿಗಿಂತ ಹೆಚ್ಚಿನ ಶಕ್ತಿಯೊಂದಿಗೆ ತಲೆ ಎತ್ತಿ ನಿಂತಿದ್ದು. ತೆಗೆದು ನೋಡಿ. ಬ್ರಾಹ್ಮಣ-ಬನಿಯಾ ಜೋಡಿ ಒಗ್ಗೂಡಿ ಯುದ್ಧ ನಡೆಸಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲೇ ಮೊಟ್ಟ ಮೊದಲ ಸಲ.

ಹೀಗಾಗಿ ಮೂವತ್ತು ವರ್ಷಗಳ ನಂತರ ಒಂದು ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಪರಿಸ್ಥಿತಿ ಸೃಷ್ಟಿಯಾಯಿತು. ಹೀಗೆ ಸದ್ಯದ ಪರಿಸ್ಥಿತಿಗೆ ತಾನೇ ಹೊಣೆಯಾದರೂ, ಎಲ್ಲವನ್ನೂ ಬಿಜೆಪಿಯ ತಲೆಗೆ ಕಟ್ಟುವಲ್ಲಿ ಕಾಂಗ್ರೆಸ್ ನಿಷ್ಣಾತ. ಆದರೆ ಹಿಂದೆ ದೇಶದಲ್ಲಿ ಅಸಹಿಷ್ಣುತೆ ಹೊಂದಿದ ಜನ ಬಹುಪಾಲಿದ್ದರೂ ಸಹಿಷ್ಣುತೆಗೆ ಧಕ್ಕೆ ತರುವಂತೆ ವರ್ತಿಸಿರಲಿಲ್ಲ. ಆದರೆ ಆಗ ಅಸಹಿಷ್ಣುತೆ ಹುಟ್ಟಲು ಕಾರಣರಾದ ಜನ ಕೆಲವರೇ ಆದರೂ, ಈಗವರು ಮೋದಿ ಗ್ಯಾಂಗಿನ ಕೈಲಿ ನೊಂದವರು. ಹೀಗಾಗಿ ಈಗ ಹಾಹಾಕಾರ ಎಬ್ಬಿಸಿದ್ದಾರೆ. ಯಥಾ ಪ್ರಕಾರ ಅದರ ಲಾಭವನ್ನು ಪಡೆದು, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ನಂಬಿಸಲು ಹೊರಟಿದೆ. ಅದಕ್ಕೆ ಈ ದೇಶದ ಇತಿಹಾಸ ನೆನಪಿರಲಿ. ಸೀಮಿತ ವರ್ಗಗಳ ಹಿತಕ್ಕಾಗಿ ಬಹುಪಾಲು ಜನರಿಗಾದ ಅನ್ಯಾಯ. ಅದೇ ರೀತಿ ವರ್ತಕ ಸಮುದಾಯವನ್ನು ಮುಂದಿಟ್ಟುಕೊಂಡು ಬ್ರಾಹ್ಮಣರನ್ನು ತುಳಿಯಲು ಹೊರಟ ಮೋದಿ ನೀತಿಯಿಂದ ಆರೆಸ್ಸೆಸ್ ಅಸಮಾಧಾನಗೊಂಡ ಬಗೆ, ಹೀಗೆ ಎಲ್ಲದರ ಕುರಿತೂ ಅದು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಸ್ವಾತಂತ್ರ್ಯ ಬರುವ ಕಾಲಕ್ಕಾಗಲೇ ದೇಶದಲ್ಲಿ ಅಸಹಿಷ್ಣುತೆ ಮನೋಭಾವ ಹೊಂದಿದ್ದ ಜನ ಹೆಚ್ಚಿದ್ದರು ಎಂಬುದು ಗೊತ್ತಿದ್ದರೂ ಅದನ್ನು ಸರಿಪಡಿಸಲು ಇವರ ಕೈಲಿ ಆಗಲಿಲ್ಲ. ಈಗ ಉರಿಯುವ ಮನೆಯಲ್ಲಿ ಗಳ ಹಿರಿಯಲು ಹೊರಟಿದ್ದಾರೆ. ಹಾಗಂತ ಈ ನಾಟಕ ತುಂಬ ದಿನ ನಡೆಯುವುದಿಲ್ಲ ಎಂಬುದು ಗೊತ್ತಿರಲಿ. ಯಾಕೆಂದರೆ ವರ್ಗಾತೀತವಾಗಿ ಎಲ್ಲರ ಮನಸ್ಸು ಕಲುಷಿತಗೊಳ್ಳುವಂತೆ ಮಾಡಿದ್ದು ಜಾಗತೀಕರಣ. ಈ ಭೂತವನ್ನು ಮನೆಯೊಳಗೆ ಬಿಟ್ಟುಕೊಂಡಿದ್ದು ಕಾಂಗ್ರೆಸ್ ಪಕ್ಷವೇ. ಈ ಎಲ್ಲದರ ಫಲವಾಗಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡಲು ಏನು ಮಾಡಬೇಕು ಅನ್ನುವುದರ ಕಡೆ ನೋಡಬೇಕೇ ಹೊರತು, ಇನ್ನಷ್ಟು ಹಾಹಾಕಾರ ಎಬ್ಬಿಸುವುದಲ್ಲ. ಕಾಂಗ್ರೆಸ್ ಪಕ್ಷ ಇದನ್ನರ್ಥ ಮಾಡಿಕೊಳ್ಳಲಿ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 December, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books