Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಮೈಕಿನ ಎದುರಿಗೆ ಹೋಗಿ ನಿಲ್ಲುವ ಕ್ಷಣದ ತನಕ

“ಸರ್, I am Chand..." ಅಂದವನನ್ನೇ ದಿಟ್ಟಿಸಿ ನೋಡಿ, ಪರವಾಗಿಲ್ಲ ಇಲ್ಲಿಗೆ ಸಾಬಣ್ಣಗಳೂ ಬಂದ್ರಲ್ಲ ಅನ್ನುವವನಿದ್ದೆ.

“ಸರ್ ಮಂಜುನಾಥ್ ಚಾಂದ್!" ಅಂದ.

ಹಾಗೆ ಅವನು-ನಾನು ಭೇಟಿಯಾಗಿ ಸುಮಾರು ಇಪ್ಪತ್ತೆರಡು ವರ್ಷಗಳೇ ಆಗಿವೆ. ನಾವು ಸಂಯುಕ್ತ ಕರ್ನಾಟಕಿಗಳು. ಶಾಮರಾಯರ ಗುಡುಗು-ಸಿಡಿಲು ಕೇಳಿಸಿಕೊಂಡೇ ಬೆಳೆದವರು. ಅವನಿಗೆ ಆಗಷ್ಟೆ ಮುಂದಲೆ ಕೊಂಚ ಬಯಲಾಗಿತ್ತು. ಈಗ ಭರ್ತಿ ಸಿಕ್ಸ್‌ಟಿ-ಫಾರ್ಟಿ ಸೈಟನ್ನೇ ಬಿಟ್ಟಿದ್ದಾನೆ. ಬುದ್ಧಿ ಜಾಸ್ತಿಯಾದಷ್ಟೂ ನೆತ್ತಿಯ ಕೂದಲು ಖಾಲಿಯಾಗುತ್ತವೇನೋ?

ಮೊನ್ನೆ ಬಂದವನು, “ಅಣ್ಣಾ, ನೀನೇ ಬರಬೇಕು. ಬರಲೇಬೇಕು" ಅಂದ. ಅವನದು “ಕದ ತೆರೆದ ಆಕಾಶ" ಕಥಾ ಸಂಕಲನ ಬಿಡುಗಡೆ. ನಾನು ಓದಿಲ್ಲ. ಓದಿಕೊಂಡು ಬಂದು, ಪುಸ್ತಕದ ಬಗ್ಗೆ ವಿಮರ್ಶಾತ್ಮಕವಾಗಿ ಮಾತಾಡೋ ಜವಾಬ್ದಾರಿ ಬೇಡ. ಇಂದಲ್ಲ ನಾಳೆ ಪುಸ್ತಕ ಓದ್ತೀನಿ. ಪತ್ರಿಕೇಲಿ ಬರೆದೂ ಬರೀತೀನಿ, ಆದರೆ ತಕ್ಷಣಕ್ಕೆ ಆಗುವುದಿಲ್ಲ ಅಂದೆ. ಸರಿ, ಮುಖ್ಯ ಅತಿಥಿಯಾಗಿ ಬನ್ನಿ ಅಂದ.

ನೀವು ನಂಬ್ತೀರೋ ಇಲ್ವೋ, ನನಗೂ ಅಂಥದ್ದೊಂದು change ಬೇಕಾಗಿತ್ತು. ದೈಹಿಕ ಆರೋಗ್ಯಕ್ಕೆ ಏನೂ ಧಾಡಿಯಾಗಿಲ್ಲ. ಪಸಂದಾಗಿದೀನಿ. ರೂಮರ್‌ಗಳಿಗೇನಂತೆ: ಮೊದಲಿಂದಲೂ ಇವೆ. ಬಹುಶಃ ನನ್ನ ನಂತರವೂ ಇರ‍್ತವೆ. ಕಾಲು ಸ್ವಲ್ಪ ತೊಂದರೆ ಕೊಡುತ್ತದೆ. ಹಿಂದೆ ಜೊಯಿಡಾ ಸಮೀಪದ ಮಂದುರ್ಲಿ ಕಾಡಿನಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದೆ. ಆಗ ಮೊಳಕಾಲೊಳಗಿನ ಲಿಗಮೆಂಟ್ ತುಂಡಾಯಿತು. ಅದು ಜನ್ಮೇಪಿ ಸರಿ ಹೋಗುವಂತಹುದಲ್ಲ. ಹೀಗಾಗಿ ಕುಂಟುತ್ತೇನೆ, ಕೊಂಚ.

ಆದರೆ ಮನಸ್ಸಿಗೊಂದು ಬ್ರೇಕ್ ಬೇಕಾಗಿತ್ತು. ನಾನು ಸಭೆಗಳಿಗೆ ಹೋಗಿ ಭಾಷಣ ಮಾಡಿ ಕಾಲವೇ ಆಗಿದೆ. ಅದಲ್ಲದೆ ಕರೆದದ್ದು ಚಾಂದ್. ಅವನಿಗೆ ‘ಇಲ್ಲ’ ಅನ್ನಲಾರೆ. ನನ್ನ ಅತ್ಯಂತ ಪ್ರೀತಿಯ ಗೆಳೆಯ ಅವನು. ಅಲ್ಲದೆ, ಅವತ್ತು ಇನ್ನೊಂದು ವಿಶೇಷವೂ ಇತ್ತು. ಅವನ ತಂದೆ-ತಾಯಿ ಬರಲಿದ್ದರು. ಚಾಂದ್ ತಂದೆಗೆ ತೊಂಬತ್ಮೂರು ವಯಸ್ಸು. ‘ತುಂಬ ಮೆತ್ತಗಾಗಿರಬೇಕು’ ಅಂದೆ. ಅವತ್ತು ನೋಡಿದೆನಲ್ಲ? He is fine. ಈ ತನಕ ಕುಂದಾಪುರದಲ್ಲಿ ಇದ್ದವರು. “ಈಗ ಇಲ್ಲಿಗೇ ಕರೆಸಿ, ಅಪ್ಪ-ಅಮ್ಮ ಇಬ್ರನ್ನೂ ಜೊತೇಲಿಟ್ಟುಕೊಂಡಿದೀನಿ" ಅಂದ. ದೂಸರಾ ಮಾತಿಲ್ಲದೆ ಕಾರ್ಯಕ್ರಮಕ್ಕೆ ಒಪ್ಪಿಕೊಂಡೆ ಮತ್ತು ಹೋದೆ. ಇಲ್ಲೇ ವಾಡಿಯಾ ರಸ್ತೆಯಲ್ಲಿತ್ತು. ಜೊತೆಗೆ ಪ್ರಿಯರಾದ ಜೋಗಿ ಇದ್ದರು. ಬಹುಕಾಲದ ನಂತರ ಸಿಕ್ಕ ದಿನೇಶ್ ಅಮೀನ್ ಮಟ್ಟು ಇದ್ದರು. ‘ಕನ್ನಡ ಪ್ರಭ’ದ ನನ್ನ ಸಂಗಾತಿ ಪ.ಸ.ಕುಮಾರ್ ಇದ್ದರು. ಭಾಷಣಕ್ಕಿಂತ ಅಡುಗೆ ಬೇಕೆ? ಕಾರ್ಯಕ್ರಮದ ನಿರ್ವಹಣೆಗೆ ನನ್ನ ಫೇಸ್‌ಬುಕ್ ಗೆಳತಿ ಪಲ್ಲವಿ ಇದ್ದರು. ಆದರೂ ಒಂದು ಚಿಕ್ಕ ಅಳುಕು. ನಾನು ಯಾವ ಭಾಷಣಕ್ಕೂ ಪ್ರಿಪೇರ್ ಆಗಿ ಹೋದವನಲ್ಲ. ಗಂಟೆಗಟ್ಲೆ ಮಾತಾಡುತ್ತೇನೆ. ಆದರೆ ಮೊನ್ನೆ ಮೈಕಿನ ಮುಂದೆ ನಿಲ್ಲುವುದಕ್ಕೆ ಸಣ್ಣ ಅಳುಕು ಖಂಡಿತ ಇತ್ತು. But I spoke. ಆರಾಮ್‌ಸೇ ಮಾತನಾಡಿದೆ.

ಚಾಂದ್ ಬರೆದ ಕತೆಗಳನ್ನು ಬಿಡುವು ಮಾಡಿಕೊಂಡು ಓದಬೇಕಿದೆ. ಕುಡಿತ ಬಿಟ್ಟುಬಿಟ್ಟೆನಲ್ಲ? ಈಗ ಟೈಮೇ ಟೈಮು. ಓದಲೇಬೇಕು ಅಂತ ಕೆಲವು ಪುಸ್ತಕ ಎತ್ತಿಟ್ಟುಕೊಂಡಿದ್ದೇನೆ. ಅದರಲ್ಲಿ ಚಾಂದ್‌ನದೂ ಈಗ ಸೇರ್ಪಡೆಯಾಗಿದೆ. ಇದೆಲ್ಲ ಹೇಗಾಗುತ್ತದೋ ನೋಡಿ. ನಮ್ಮದೇ ದೇಹ, ನಮ್ಮದೇ ಉತ್ಸಾಹ, ಅವೇ ಕೈ ಕಾಲು, ಕಣ್ಣು ಮೂಗು. ಆದರೆ ಒಳಗೊಂದು ಮನಸಿದೆಯಲ್ಲ? ಅದಕ್ಕೆ ಆತಂಕ ಬಂದು ಬಿಟ್ಟರೆ ಈ ಉಳಿದ ಫಿಟ್ಟಿಂಗ್‌ಗಳೆಲ್ಲ ಸಡಿಲಗೊಂಡು ಲಡಲಡ ಅಂದುಬಿಡುತ್ತವೆ. ನೀವದನ್ನು ಅರ್ನೆಸ್ಟ್ ಹೆಮ್ಮಿಂಗ್‌ವೇ ಮಾತುಗಳಲ್ಲಿ ಓದಬೇಕು. ಆ ಮೀನುಗಾರ ಮುದುಕ ತನ್ನದೇ ಕೈಯನ್ನು ವಿನಂತಿಸಿಕೊಳ್ಳುತ್ತಾನೆ: ‘ಪ್ಲೀಜ್ ಸಹಕರಿಸು. ದಣಿದು ಸೋತು ಬಿಡಬೇಡ’ ಅಂತ. ಹೆಮ್ಮಿಂಗ್‌ವೇ ನನ್ನ ಬಲು ಪ್ರೀತಿಯ ಬರಹಗಾರ. ಇನ್ನೊಮ್ಮೆ ಅವನ ಕತೆ-ಕಾದಂಬರಿಗಳನ್ನೆಲ್ಲ ಓದಬೇಕು.

ಚಾಂದ್‌ನ ಪ್ರೀತಿ ನನ್ನ ತೊಳಲಾಟಗಳನ್ನೆಲ್ಲ ತೊಲಗಿಸಿದೆ. Fine now. ಮತ್ಯಾವ ಸಮಾರಂಭವಿದ್ದರೂ ಹೇಳಿ: ಭೀಕರ ಭಾಷಣಕ್ಕೆ ರೆಡಿ!

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 November, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books