Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಗುಟ್ಟೇನಲ್ಲದಿದ್ದರೂ ನಾನು ಎಂಟು ವರ್ಷ ಬರೆಯದೆ ಸುಮ್ಮನಿದ್ದೆ!

“ಏನಪ್ಪಾ ಗಿಡ್ಡಪ್ಪ?" ಅಂದೆ.

“ಹೇಳಪ್ಪಾ ಗಡ್ಡಪ್ಪಾ?" ಅಂದ ಅವನು.

ಅವನು ಹಿಮ.

ಸರಿಯಾಗಿ ಇನ್ನೊಂದು ವಾರಕ್ಕೆ, ಬರಲಿರುವ ನವೆಂಬರ್ 25ಕ್ಕೆ ಅವನಿಗೆ ಎಂಟು ವರ್ಷ! ‘ಹಿಮ’ ಅಂತಲೇ ಅವನನ್ನು ನಾನು ಕರೆಯೋದು. ಹಿಮವಂತ್.ಆರ್.ಬೆಳಗೆರೆ. ಚೆಂದಗೆ, ಬೆಳ್ಳಗಿದ್ದಾನೆ. ಅವನು ನನ್ನ ಕೊನೆಯ ಹಾಗೂ ನಾಲ್ಕನೆಯ ಮಗ. ಇಷ್ಟು ವರ್ಷ ಅವನು ತನ್ನ ಅಮ್ಮನನ್ನು ಬಿಟ್ಟಿರುತ್ತಿರಲಿಲ್ಲ. ಪ್ರತಿಯೊಂದಕ್ಕೂ ಅಮ್ಮ. ಆದರೆ ಈಗ ನಾನೆಂದರೆ ಪ್ರಾಣ. ಅವನ ಬೇಡಿಕೆಗಳನ್ನೆಲ್ಲ ಹೇಳಿಕೊಳ್ಳಬೇಕು. “ಅಪ್ಪ, ಚಿಕನ್ ತಿನ್ನೋಣ" ಅನ್ನಲಿಕ್ಕೂ ನಾನೇ ಬೇಕು: ತನ್ನ lap topಗೆ ಹೊಸ game ಹಾಕಿಕೊಡಲಿಕ್ಕೂ ನಾನೇ ಬೇಕು. ಅವನ ಮಾತು, ನಿರ್ಣಯ, ಖುಷಿ-ಎಲ್ಲ ಸ್ಪಷ್ಟ ಸ್ಪಷ್ಟ. ಅವನು ಯಶೋಮತಿಯೊಂದಿಗೆ ಇದ್ದಾನೆ: ಅವನ ತಾಯಿಯೊಂದಿಗೆ. ಅವರಿಬ್ಬರೂ ಅಲ್ಲೆಲ್ಲೋ ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್‌ನಲ್ಲಿದ್ದಾರೆ.

ಹಿಮ, ತುಂಬ ಆರೋಗ್ಯವಂತ. ಈ ಎಂಟು ವರ್ಷಗಳಲ್ಲಿ ಅವನು ಖಾಯಿಲೆ ಬಿದ್ದಿಲ್ಲ. ಶಾಲೆಯಲ್ಲೂ ಅವನು ಜಿಂಕೆಮರಿ. ಮೊದಲು ಇಲ್ಲೇ ಹತ್ತಿರದಲ್ಲಿತ್ತು ಅಪಾರ್ಟ್‌ಮೆಂಟು. ‘ನಮ್ಮದೇ ಶಾಲೆ ‘ಪ್ರಾರ್ಥನಾ’ ಇದೆಯಲ್ಲ? ಇಲ್ಲಿಗೇ ಹಾಕಿ ಬಿಡಿ’ ಅಂದರು. I said no. ಮನೆಯ ಎದುರಿಗೇ ಶಾಲೆ. ಅದು ಮೊದಲನೇ disadvantage. ಅದು ನಮ್ಮ ಶಾಲೆ: ಎರಡನೇ disadvantage. “ಅಯ್ಯೋ, ಇವನು ರವಿ ಬೆಳಗೆರೆ ಮಗ!" ಅಂತ ಒಬ್ಬ ಟೀಚರ್ ಗುನುಗಿಬಿಟ್ಟರೆ ಸಾಕು: ಅವನು ಅದೆಂಥ ಪುಂಡಾಟಿಕೆ ಮಾಡಿದರೂ ಒಂದು ಪೆಟ್ಟು ಬೀಳುವುದಿಲ್ಲ. ಅವನನ್ನು ಗದರುವುದೂ ಇಲ್ಲ. ಅಲ್ಲದೆ ‘ಪ್ರಾರ್ಥನಾ’ದಲ್ಲಿ ಒಂದು ಸ್ಪಷ್ಟವಾದ ಲಿಖಿತ ಆದೇಶವಿದೆ. ಯಾರೂ ಮಕ್ಕಳನ್ನು ಹೊಡೆಯುವಂತಿಲ್ಲ. ಅಲ್ಲಿಗೆ ಮುಗಿಯಿತಲ್ಲ? ಹಾಗಾಗಿ, ಹಿಮವಂತನನ್ನ ಕೊಂಚ ದೂರವಿರುವ ಶಾಲೆಗೆ ಸೇರಿಸಿದ್ದೇನೆ. ಒಂದು ತಮಾಷೆ ನೋಡಿ: ಜಯನಗರದ ‘Cloud 9’ ಆಸ್ಪತ್ರೆಯಲ್ಲಿ ಹಿಮ ಹುಟ್ಟಿದ. ಅವನು ಮಾತ್ರವೇ ಅಲ್ಲ. ಅದೇ ಹಿಂಚು ಮುಂಚಿನಲ್ಲಿ ರಾಧಿಕಾ ಮಗಳು ಶಮಿಕಾ ಹುಟ್ಟಿದಳು. ರಕ್ಷಿತಾಗೂ ಅಲ್ಲೇ ಹೆರಿಗೆ ಆಯಿತು. ಕಡೆಗೆ ದರ್ಶನ್ ಕೂಡ ಅಲ್ಲಿಂದಲೇ ಸಂತಾನ ಸೌಭಾಗ್ಯ ಹೊಂದಿದ. ಅಲ್ಲಿ ಪ್ರಸೂತಿ ತಜ್ಞರು ಡಾ.ಕಿಣಿ. ಅವರು ನನ್ನ ಆತ್ಮೀಯ ಸ್ನೇಹಿತರು. ಬಸಿರು ಹೊತ್ತು ಬಂದ ಹೆಣ್ಣು ಮಕ್ಕಳಿಗೆ ತಂದೆಯಂಥವರು.

ಹಿಮ ಹುಟ್ಟಿದಾಗ ನಾನು ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲೇ ಇದ್ದೆ. ಅದು ಪಶ್ಚಿಮ ರಾಷ್ಟ್ರಗಳ ನಿಯಮ. ಇಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಅದನ್ನು ಜಾರಿಗೆ ತಂದಿದ್ದಾರೆ. ಹೆರಿಗೆ ಆಗುವಾಗ ತಂದೆಯಾದವನು ಹೆರಿಗೆ ಕೋಣೆಯಲ್ಲೇ ಇರಬೇಕು: ಇದ್ದೆ. ಡಾ.ಕಿಣಿ ಅವರು ನನ್ನ ಕೈಯಲ್ಲೇ ಹೊಕ್ಕುಳ ಬಳ್ಳಿ ಕಟ್ ಮಾಡಿಸಿದರು. ಅಸಲಿಗೆ, ಹಿಮವಂತನನ್ನು ಮೊದಲು ಎತ್ತಿಕೊಂಡವನೇ ನಾನು. ಯಶೋಮತಿಗೆ ಗಂಡು ಮಗು ಹುಟ್ಟಿದೆ ಅಂತ ಹೇಳಿದವನೂ ನಾನೇ.

ಹೆರಿಗೆ ಕೋಣೆಯಿಂದ ಹೊರಬಿದ್ದು ವಾರ್ಡ್‌ಗೆ ಬರುತ್ತಿದ್ದಂತೆಯೇ ನಮ್ಮ ಸಿ.ಇ.ಓ ಉಮೇಶ್‌ನ ಕರೆದು, ಇವತ್ತೇ ಮಗುವಿನ ಹೆಸರಿನಲ್ಲಿ ಇಂತಿಷ್ಟು ಹಣ fixed deposit ಮಾಡಿಟ್ಟು ಬಿಡಿ ಅಂದೆ. ಅದು ಜವಾಬ್ದಾರಿಯುತ ಗಂಡಸು ಮಾಡಬಹುದಾದ, ಮಾಡಲೇಬೇಕಾದ ಕೆಲಸ. ಅವನಿಗೆ ಸಂಬಂಧಿಸಿದಂತೆ ನಾನು ಯಾರೊಂದಿಗೂ, ಏನನ್ನೂ ಮುಚ್ಚಿಡುತ್ತಿರಲಿಲ್ಲ. ಈಗಲೂ ಇಲ್ಲ. ಬದುಕಬೇಕಾದದ್ದು ಏನಿದೆಯೋ ಅದನ್ನು ಹೇಗೆ ಬದುಕಬೇಕೋ ಹಾಗೆ ಬದುಕಬೇಕು: ನಿಚ್ಚಳ ಜಗತ್ತಿನಲ್ಲಿ. ಯಶೋಮತಿಯನ್ನು ಬೇಕಾದರೆ ಮುಚ್ಚಿಡಬಹುದು. ಕಂದನನ್ನು ಎಲ್ಲಿ ಬಚ್ಚಿಡಲಿ? ಹೆಸರಿಗೆ ಸಂಬಂಧಿಸಿದಂತೆ ನಾನು ಮೊದಲೇ ತೀರ್ಮಾನ ಮಾಡಿದ್ದೆ. ಗಂಡು ಮಗು ಹುಟ್ಟಿದರೆ, ಹಿಮವಂತ. ಹೆಣ್ಣು ಹುಟ್ಟಿದರೆ ಗಜಲ್ ಹಿಮಾನಿ. ನನ್ನ ಕಾದಂಬರಿಯ ನಾಯಕ ಹಿಮವಂತ. I am obsessed with him. ‘ಹೇಳಿ ಹೋಗು ಕಾರಣ’ ಕಾದಂಬರಿ ಬರೆಯುವಾಗ ತುಂಬ emotional ಆಗುತ್ತಿದ್ದೆ. “ಸರ್, ಹಿಮವಂತ್‌ಗೆ ಅನ್ಯಾಯ ಮಾಡಬೇಡಿ ಸರ್" ಅಂತ ರಸ್ತೆಯಲ್ಲಿ ನಿಲ್ಲಿಸಿ ಹೇಳುತ್ತಿದ್ದ ಹುಡುಗರಿದ್ದರು. ಅವರಿಗೆ ಗೊತ್ತಿಲ್ಲ: ಹಿಮವಂತನ ಪಾತ್ರ ಬೇರೆ ಯಾರದೂ ಅಲ್ಲ. ಅದು ನಾನೇ! ಕಾದಂಬರಿಕಾರ ಹಾಗೆ ತಾನೇ ಒಂದು ಪಾತ್ರವಾಗಿ ಒಡ ಮೂಡಿದಾಗ ಆ ಕಾದಂಬರಿ ಸೋಲುವುದಿಲ್ಲ. ಬಿಡಿ, ನಾನು ಸೋಲುವುದು ಮರೆತು ಇಪ್ಪತ್ತು ವರ್ಷಗಳಾಗಿವೆ! ನೀವು ಓದುವ bottom itemನ inspirational ಬರಹಗಳಾದರೂ ಏನಂತೀರಿ? ಅವು ಕೂಡ ನನ್ನ ಜೀವನಾನುಭವಗಳೇ. Such writings never fail.

ಯಶೋಮತಿ ನನಗಿಂತ ಸಾಕಷ್ಟು ಕಿರಿಯಳು. ಅವರ ತಂದೆ ಇಲ್ಲಿಗೆ ಹತ್ತಿರದಲ್ಲೇ ಒಂದು ಚಿಕ್ಕ ಅಂಗಡಿ ಇಟ್ಟುಕೊಂಡಿದ್ದರು. ಅತ್ಯಂತ ಸಭ್ಯ ಯಜಮಾನರು. ಅವರು ತೀರಿಕೊಂಡದ್ದು ಈ ಇತ್ತೀಚೆಗೆ. ಸುಮಾರು 1997ರ ಆಗಸ್ಟ್ 15ರಂದು ಯಶೋಮತಿ ನನ್ನನ್ನು ಇಲ್ಲೇ ಆಫೀಸಿನಲ್ಲಿ ಭೇಟಿಯಾದಳು. ಅವಳಿಗೆ ಪತ್ರಿಕೋದ್ಯಮವೂ ಗೊತ್ತಿರಲಿಲ್ಲ. ಕಂಪ್ಯೂಟರ್ ಅಸಲೇ ಗೊತ್ತಿರಲಿಲ್ಲ. ಆದರೆ ಜಾಣೆ ಇದ್ದಳು. ಆರಂಭದಲ್ಲಿ ಅವಳಿಗೆ ಒಂದು ಸಾವಿರ ರುಪಾಯಿ ಸಂಬಳ fix ಮಾಡಿದ್ದೆ. ಆಗ ಅವಳು ಕಂಪ್ಯೂಟರ್ ಆಪರೇಟರ್. ಹೆಚ್ಚು ಮಾತಿನವಳಲ್ಲ. ನಾವೆಲ್ಲ ಒಟ್ಟಿಗೇ ಎಚ್ಚರವಿದ್ದು ‘ಪತ್ರಿಕೆ’ಯ ಕೆಲಸವನ್ನು ರಾತ್ರಿಯಿಡೀ ಮಾಡಿ ಮುಗಿಸುತ್ತಿದ್ದೆವು. ನಾನು ಆಗಷ್ಟೆ ನನ್ನ ಮೊದಲನೆಯ ಕಾರು ಖರೀದಿಸಿದೆ: ಮಾರುತಿ 800. ರಾತ್ರಿಯಾದರೆ, ಕೊಂಚ ತಡವಾದರೆ ನಾನು ಆಫೀಸಿನ ಹುಡುಗಿಯರನ್ನು ಅವರ ಮನೆಗಳಿಗೆ drop ಮಾಡುತ್ತಿದ್ದೆ. ಕಟ್ಟ ಕಡೆಯ ಡ್ರಾಪ್ ಯಶೋಮತಿಯದು. ಕೆಲಬಾರಿ drop ಮಾಡುವ ಬದಲು ಇಬ್ಬರೂ ಒಂದು drive ಹೋಗುತ್ತಿದ್ದೆವು. ಆಕೆಯೆಡೆಗೆ ನನ್ನಲ್ಲೊಂದು pull ಹುಟ್ಟಿ ನಿಂತಿತ್ತು. ಆದರೆ ನೂರಕ್ಕೆ ನೂರು ಪಾಲು ನನ್ನನ್ನು ಆವರಿಸಿಕೊಂಡಿರುತ್ತಿದ್ದುದು ಲಲಿತೆ. ಈಗಲೂ ಅದು ಬದಲಾಗಿಲ್ಲ.

ಯಶೋಮತಿ ಆ ದಿನಗಳಲ್ಲೇ ನನಗೆ ಸನ್ನಿಹಿತಳಾದಳು. ಆಗಲೇ ಅವರ ಮನೆಯಲ್ಲಿ ಸಣ್ಣಗೆ ಗೊಣಗು ಶುರುವಾಗಿತ್ತು. ಎಲ್ಲದರ ಮಧ್ಯೆ ನನಗೆ ಇಷ್ಟವಾದದ್ದೆಂದರೆ, ಅವಳು ದುಡ್ಡಿನ ಆಸೆಯವಳಲ್ಲ. ತನ್ನದು ಪುಟ್ಟ ಜಗತ್ತು. ಅವಳು ಕ್ಯಾರೆಕ್ಟರ್‌ಲೆಸ್ ಹುಡುಗಿಯಲ್ಲ. ಅವಳೇಕೆ, ಅವರ ಮನೆಯಲ್ಲಿ ಯಾರೂ ಕ್ಯಾರೆಕ್ಟರ್ ವಿಚಾರದಲ್ಲಿ ಹೆಸರಿಡಬಹುದಾದಂಥವರಲ್ಲ. ಅವರು ವೃತ್ತಿಯಿಂದ ಶಿಲ್ಪಿಗಳು. ಅವಳ ತಮ್ಮ ಈಗಲೂ ಶಿಲ್ಪಿಯೇ. ಅವಳಿಗೆ ಒಬ್ಬ ತಮ್ಮ, ಒಬ್ಬ ತಂಗಿ. ಅವಳ ತಾಯಿ ನೂರು ಕಷ್ಟ ಅನುಭವಿಸಿ, ಬದುಕಿನಲ್ಲಿ ಸ್ಥಿರಗೊಂಡವರು. They are nice people. ಕಡೆಗೊಂದು ದಿನ ಅವಳ ಮನೆಯವರಿಗೆ ವಿಷಯ ಹೇಳಬೇಕಾಯಿತು. At the same time, ನಾನು ಲಲಿತೆ-ಮಕ್ಕಳಿಗೂ ವಿಷಯ ತಿಳಿಸಬೇಕಾಯಿತು. ತಿಳಿಸಿದೆ. ಅವತ್ತು ಲಲಿತಳೊಂದಿಗೆ ಇದ್ದ ವಿಷಯ ಹೇಳಿ, ಒಂದು ವಿಷಾದ ಭಾವ ಹೊತ್ತು ಕೋಣೆಯಿಂದ ಹೊರಬಿದ್ದೆ. ಲಲಿತೆ ಜೊತೆಯಲ್ಲೇ ಬಂದಳು. ಲಿಫ್ಟ್‌ನಲ್ಲಿ ಇಳಿಯುವಾಗ ಅವಳು ಎದೆಯ ಮೇಲೆ ಷರ್ಟ್ ಹಿಡಿದು “ರವೀ... ಯಾಕೆ ಹೀಗೆ ಮಾಡಿದೆ?" ಅಂದಳು. “ತಪ್ಪಾಯಿತು ಲಲಿತಾ" ಅಂದೆ. ಅವಳ ಮುಂದೆ ತುಂಬ ಚಿಕ್ಕವನಾಗಿ ಹೋಗಿದ್ದೆ. ನನ್ನ ಕಣ್ಣಲ್ಲಿ ನೀರಿದ್ದವು. “ತಪ್ಪಾಯ್ತು’ ಅಂದೆ. ಅಷ್ಟೆ! ಈ ಹದಿನೆಂಟು ವರ್ಷದಲ್ಲಿ ಲಲಿತೆ ಒಂದೇ ಒಂದು ಸಲ ಆ ವಿಷಯ ಪ್ರಸ್ತಾಪಿಸಿಲ್ಲ, ಸಿಟ್ಟಿಗೆದ್ದಿಲ್ಲ, ಗೋಳಾಡಲಿಲ್ಲ: No! She is very matured.

ಅವತ್ತಿಗೂ-ಇವತ್ತಿಗೂ ನನಗೆ ಆಫೀಸೇ ಗತಿ. ಆ ದಿನಗಳಲ್ಲಿ ಯಶೋಮತಿ ಕೂಡ ಆಫೀಸಿನಲ್ಲೇ ಇರತೊಡಗಿದಳು. ನಂತರ ಇಲ್ಲೇ ಎದುರಿನಲ್ಲೇ ಇರುವ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಅವಳಿಗೊಂದು ಮನೆ ಕೊಡಿಸಿದೆ. ಮನೆ ಅಂತಾದ ಮೇಲೆ ಅವಳಿಗೆ ಶುರುವಾಯಿತು: ಮಗುವಿನ ಬಯಕೆ. ಸ್ವತಃ ಅವಳ ತಾಯಿ ಬಂದು ನಮ್ಮೊಂದಿಗೆ ನೆಲೆ ನಿಂತರು. ಈ ಮಹರಾಯ ಹಿಮವಂತ ಹುಟ್ಟಿದ್ದೇ ಆಗ. ವಿಧ್ಯುಕ್ತವಾಗಿ ಅವಳನ್ನು ನಾನು ಮದುವೆಯಾಗದಿದ್ದರೂ ಅವಳನ್ನು ಚೆನ್ನಾಗಿಯೇ ನೋಡಿಕೊಂಡೆ. ‘ಪತ್ರಿಕೆ’ಯಲ್ಲಿ ಹಿಮವಂತನ ಬಗ್ಗೆ ಬರೆಯಲು ಕೊಂಚ time ತೆಗೆದುಕೊಳ್ಳೋಣ ಅಂತ ನಾನೇ ತೀರ್ಮಾನಿಸಿದ್ದೆ. ಒಬ್ಬ ಲಲಿತೆಯನ್ನು ಹೊರತುಪಡಿಸಿ ಮಕ್ಕಳಿಗೆಲ್ಲ ಯಶೋಮತಿ ಪರಿಚಿತೆ. ಚೇತನಾ, ಭಾವನಾ, ಕರ್ಣ-ಎಲ್ಲರೂ ಮನೆಗೆ ಬಂದಿದ್ದಾರೆ. ಈ ತುಂಟ ಇವತ್ತಿಗೂ ‘ಬಾನಕ್ಕ, ಚೇತು ಅಕ್ಕ, ಕರ್ಣಣ್ಣ’ ಅಂತಲೇ ಅನ್ನುತ್ತಾನೆ. ಅವರೆಲ್ಲರೂ ಅವನನ್ನು ಎತ್ತಿಕೊಂಡು ಆಡಿಸಿದವರೇ. “He is my kid brother" ಅಂದದ್ದು ಕರ್ಣ. ನಾವು ಬಯಲು ಸೀಮೆಯವರು. ಬಹುಪತ್ನಿತ್ವ ನಮ್ಮಲ್ಲಿ ಹೊಸತಲ್ಲ. ನನ್ನ ತಂದೆಯೇ ಇದ್ದನಲ್ಲ? ಆತನಿಗೆ ನನ್ನ ಅಮ್ಮ ನಾಲ್ಕನೆಯ ಪತ್ನಿ. ಅದಕ್ಕಿಂತ ಅಚ್ಚರಿಯೆಂದರೆ ಬಳ್ಳಾರಿಗೆ ಸಮೀಪದಲ್ಲೇ ಇರುವ ದರೂರಿನಲ್ಲಿ ಮಲ್ಲಿಗೌಡ ಎಂಬಾತನಿದ್ದ. ಮಹಾನ್ ಚೆಲುವ. ಆತನಿಗೆ ಒಬ್ಬಾಕೆಯೊಂದಿಗೆ ಸ್ನೇಹವಿತ್ತು. ಮಲ್ಲಿಗೌಡ ತನ್ನ ದರೂರಿನಿಂದ ಬಳ್ಳಾರಿಗೆ ಬಂದವನು, ಅಲ್ಲಿ ಹಾಡಹಗಲೇ ಕೊಲೆಯಾಗಿ ಬಿಟ್ಟ. ಅದಾಗಿ ಈಗ ಹತ್ತತ್ತಿರ ನಲವತ್ತು ವರ್ಷಗಳೇ ಆದವು.

ಇತ್ತೀಚೆಗೆ ದರೂರು ಮಲ್ಲಿಗೌಡರ ಮಗ ಪುರುಷೋತ್ತಮ ಗೌಡ ಸಿಕ್ಕಿದ್ದ. ಯಾವುದೋ ದೇವಸ್ಥಾನದ ಸಮಾರಂಭದ ಇನ್ವಿಟೇಶನ್ ಕೊಟ್ಟ. ಅದರಲ್ಲಿ “ಶ್ರೀಮತಿ ವಿಮಲಾ" ಅಂತ ಪ್ರಿಂಟ್ ಆಗಿತ್ತು. ಅದು ದರೂರು ಮಲ್ಲಿಗೌಡ ಆ ದಿನಗಳಲ್ಲಿ ಸ್ನೇಹದಿಂದ ಇದ್ದ ಹೆಣ್ಣು ಮಗಳ ಹೆಸರು. “ಇದೇನಪ್ಪಾ, ಪುರುಷೋತ್ತಮಾ?" ಅಂದೆ. “ಹೌದಲ್ಲ ಸರ್, ಅವರು ನಮಗೆ ಮಾತೋಶ್ರೀಯವರು!" ಅಂದ. ಬಯಲು ಸೀಮೆಯ ಕರುಳಿನ ನಂಟೇ ಬೇರೆ. ನಾವು emotional fellows. ಕೊಂಚ ಮಟ್ಟಿಗೆ sentimental fellows ಕೂಡ. ಅಲ್ಲಿ ಕೊಲೆಯಾಗಲಿಕ್ಕೂ ಒಂದು ಕ್ಷುಲ್ಲಕ ಕಾರಣ ಸಾಕು: ಎರಡು ಕುಟುಂಬಗಳ ಬೀಗತನ ಬೆಳೆಯಲಿಕ್ಕೂ ಒಂದು ಕ್ಷುಲ್ಲಕ ಕಾರಣವೇ ಸಾಕಾಗಿರುತ್ತದೆ. Funny!

“ನೋಡೂ, ಈ ಸಂಬಂಧದ ವಿಷಯ ರಹಸ್ಯವಾಗಿಲ್ಲ. ಹಾಗೆ ಇರುವುದೂ ಇಲ್ಲ. ಕ್ರಮೇಣ ಗೊತ್ತಾಗುತ್ತ ಹೋಗುತ್ತದೆ" ಅಂತ ಯಶೋಮತಿಗೆ ಹೇಳಿದ್ದೆ. ಆಕೆಗೆಂದೇ ಗಾಂಧಿ ಬಜಾರ್‌ನ ಪುಸ್ತಕದ ಮಳಿಗೆ ಮಾಡಿದೆ. ಇಲ್ಲಿ ಕೆಲಸ ಬಿಡುವಾಗ ಆಕೆಗೆ ಬರೋಬ್ಬರಿ ನಲವತ್ತು ಸಾವಿರ ರುಪಾಯಿ ಸಂಬಳವಿತ್ತು. ಕಳೆದ ವರ್ಷದ ತನಕ ಎಲ್ಲವೂ ಸರಿಯಿತ್ತು. ಒಂದೆರಡಲ್ಲ, ಹದಿನೆಂಟು ವರ್ಷ ಅದು ಸರಿಯಾಗೇ ಇತ್ತು. ಆದರೆ ಕ್ರಮೇಣ ಇಬ್ಬರ ನಡುವೆ ವಿಘಟನೆ ಆರಂಭವಾಯಿತು. ಎಂಥದ್ದೋ ಸೆಡವು, ಮನಸ್ತಾಪ. ಒಟ್ಟಿನಲ್ಲಿ ಉಲ್ಲಾಸ ಉಳಿಯದಂತಾಯಿತು. ‘ನಾನು ಪ್ರತ್ಯೇಕವಾಗಿರುತ್ತೇನೆ’ ಅಂದಳು ಆಕೆ. ಇಲ್ಲಿದ್ದ ಸ್ವಂತ Flat ಬಿಟ್ಟು ಹೋದಳು. ಹತ್ತಿರದಲ್ಲೇ ಆಕೆಯ ತಂಗಿಯ ಕುಟುಂಬವಿದೆ. “ಆಯ್ತು, ಅಲ್ಲೇ ಇರಿ" ಅಂದೆ. ಅಷ್ಟೇ ಅಲ್ಲ, ಒಟ್ಟಿಗಿದ್ದಾಗ ಏನೇನಿತ್ತೋ, ಅದೆಲ್ಲವನ್ನೂ ನಾನು ಇವತ್ತಿಗೂ ನಡೆಸಿಕೊಡುತ್ತಿದ್ದೇನೆ. ಹಿಮ ಆಫೀಸಿಗೆ ಬರುತ್ತಾನೆ. ಕಾರು ಕೊಟ್ಟು ಕರೆಸುತ್ತೇನೆ. ಬಿಡುವಿದ್ದಲ್ಲಿ shoppingಗೆ ಕರೆದೊಯ್ಯುತ್ತೇನೆ. ಅವನು ಏನೇನು ಕೇಳುತ್ತಾನೋ ಎಲ್ಲವೂ ಮನಮಾನಿ! ಇತ್ತೀಚೆಗಿನ ಹಟವೆಂದರೆ, “ನಾನು ಇಲ್ಲೇ ಆಫೀಸಿನಲ್ಲಿರ‍್ತೇನೆ. ಇಲ್ಲೇ ಮಲ್ಕೊಂಡು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶಾಲೆಗೆ ಹೋಗ್ತೇನೆ" ಅನ್ನುತ್ತಾನೆ. ಅವನ ಬರ್ತ್‌ಡೇ functionನ ಬೇರೆ ಬೇರೆ ನಗರಗಳಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದೆವು. ಊಟಿ, ದೆಹಲಿ, ಮುಂಬಯಿ-ಹೀಗೆ. ಈಗದು ಸಾಧ್ಯವಿಲ್ಲ. ಮೊದಲಾದರೆ ಅವನಿಗೆ ನಾನು ಸ್ನಾನ ಮಾಡಿಸುತ್ತಿದ್ದೆ. ಕೈ ಕಾಲಿಗೆ ಎಣ್ಣೆ ಹಚ್ಚಿ ನೀವಿ ಸ್ನಾನಕ್ಕೆ ಕಳಿಸುತ್ತಿದ್ದೆ. ಪಕ್ಕದಲ್ಲಿ ಮಲಗುತ್ತಿದ್ದ. ಆಗೆಲ್ಲ ಅವನ ಮೈಯಿಂದ ಮಗುವಿನ ವಾಸನೆ. ಅಲ್ಲೆಲ್ಲೊ ಇಟಲಿಗೆ, ಜರ್ಮನಿಗೆ ಹೋದರೆ, ಅಲ್ಲಿಂದ ಅವನಿಗೆಂದೇ ರಾಶಿ ಸಾಮಾನು, ಆಟಿಗೆ ತರುತ್ತಿದ್ದೆ. ಈಗಲೂ ಅಂಥದ್ದನ್ನೆಲ್ಲ ಮಾಡುತ್ತೇನೆ. ಒಳ್ಳೆಯದೊಂದು ಮೊಸರನ್ನ ಉಂಡರೆ ನನಗೆ ಹಿಮ ನೆನಪಾಗುತ್ತಾನೆ. ಕರುಳು ಸೆಳೆಯೋದು ಅಂದರೆ ಇದೇ ಅಲ್ಲವೆ? ಇದಂತೂ ಕಡ್ಡಾಯವಾಗಿ ಒಂದು ಮಗು ತನ್ನ ಅಪ್ಪನೊಂದಿಗೇ ಬೆಳೆಯಬೇಕಾದ ವಯಸ್ಸು. ಆದರೆ ಅವನು ಅಲ್ಲೆಲ್ಲೋ ರಾಜರಾಜೇಶ್ವರಿನಗರ. ನಾನು ಕಬೋಜಿಯಂತೆ ಇಲ್ಲಿ ಪದ್ಮನಾಭನಗರದಲ್ಲಿ. I am broke.

ನನ್ನ ಯಾತನೆ ಏನು? ಅದು ನನಗಷ್ಟೆ ಗೊತ್ತು. ಅವನ ಪಾಲಿಗೆ ನಾನು ಇದ್ದೇ ಇದ್ದೇನೆ. ಆದರೆ ನನ್ನ ಪಾಲಿಗೆ ಮಗ ಕಳೆದುಹೋಗಿದ್ದಾನೆ. ಇದೇ ಚೇತನಾ, ಮಗುವಿದ್ದಾಗ ನನ್ನೊಂದಿಗೇ ಇರುತ್ತಿದ್ದಳು, ಹುಬ್ಬಳ್ಳಿಯಲ್ಲಿ. ಕರ್ಣ ಕೈಗೂಸಿದ್ದಾಗ ನನ್ನ ಎದೆ ಅವಚಿಕೊಂಡೇ ಇರುತ್ತಿದ್ದ. ಭಾವನಾಳ ವಿಷಯ ಕೇಳಲೇ ಬೇಡಿ. ಅದು ಒಂದು ಕ್ಷಣಕ್ಕೂ ಬಿಟ್ಟಿರದ ಅಂಟಂಪುರ್ಲೆ. ಆದರೆ ಹಿಮ? ಬಿಡಿ, ನಾನಾಗಲೇ ಹಿಮನ ಬರ್ತ್‌ಡೇ ಸಂಭ್ರಮದಲ್ಲಿದ್ದೇನೆ. “ನಂಗೆ ಬರ್ತ್‌ಡೇಗೆ ಐ-ಪ್ಯಾಡ್ ಕೊಡುಸ್ತೀರಾ?" ಅಂತ ಇತ್ತೀಚೆಗೆ ಕೇಳಿದ. ಬರೀ gadgetsನೊಂದಿಗೆ ಆಟವಾಗಿ ಬಿಡುತ್ತದೆ. ಅವನಿಗೊಂದು ಚೆಂದದ, handy ಆಗಿರುವ ಕೆಮರಾ ಕೊಡಿಸಲು ನಿರ್ಧರಿಸಿದ್ದೇನೆ. ಈಗ ಫೊಟೋ ತೆಗೆಯೋದು ಕಲಿ. ಆಗ ನಿನ್ನ ಬರ್ತ್‌ಡೇ ಇಂಡಿಯಾದಲ್ಲಲ್ಲ: ಕೀನ್ಯಾದಲ್ಲಿ ಮಾಡೋಣ ಅಂತ ಹೇಳಬೇಕಿದೆ. I love the boy. ನಿಮ್ಮದೊಂದು ಆಶೀಸ್ಸು ಅವನಿಗಿರಲಿ.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 24 November, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books