Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅಕ್ಕರೆಯಿಂದ ಕರೆಯುವವಳ ಮನೆಗೆ ಹೋಗುವ ತವಕ

ಮಾತಿಗೇನಂತೆ?

ನಾನಾ ಥರದ ಮಾತು ಹುಟ್ಟುತ್ತವೆ. ಮೊನ್ನೆ ಲಲಿತಳಿಗೆ ಫೋನ್ ಮಾಡಿದ್ದೆ: “ಆಹಾ... ಮೇರಿ ಮೀನಾಕುಮಾರಿ: ನಿನಗಿನ್ನೂ ಇಪ್ಪತ್ತೆರಡು ವರ್ಷ ಮುಗಿದಿಲ್ಲ ಅಂದ್ಕೊಂಡಿದೀಯಾ?" ಅನ್ನುತ್ತಿದ್ದಂತೆಯೇ ಅತ್ತಲಿಂದ ಬುಗ್ಗೆ ಬುಗ್ಗೆ ನಗು. “ಗೊತ್ತಾಗ್ಲಿಲ್ಲ ಕಣ್ರೀ..." ಅಂದಳು. ಅವಳಿಗೆ ಫೋನ್ ಮಾಡಲಿಕ್ಕೂ ಮುಂಚೆ ನನ್ನ ಸ್ನೇಹಿತರೇ ಆಗಿರುವ, ಮೂಳೆ ತಜ್ಞ ಡಾ.ನಟರಾಜ್‌ರವರಿಗೆ ಫೋನ್ ಮಾಡಿದ್ದೆ. “ಮಣಿಕಟ್ಟಿನ ಮೂಳೆ ಮುರಿದಿದೆ. Simple fracture. ಆದರೆ ಒಳಗೇನೇ ರಕ್ತ ಹರಿದಿದೆ. ನಾವು internal bleeding ಅಂತೀವಿ. ಅದರಿಂದಾಗಿಯೇ ಮಣಿಕಟ್ಟಿನಲ್ಲಿ ಊತ ಕಾಣಿಸಿಕೊಂಡಿದೆ. ಅದೇನಂಥ ಸಮಸ್ಯೆಯಲ್ಲ. ಎರಡೇ ದಿನ. ಒಮ್ಮೆ ಹರಿದಿರೋ ರಕ್ತ ಸರಿ ಹೋದರೆ ಪ್ಲಾಸ್ಟರ್ ಹಾಕಿ ಬಿಡ್ತೀನಿ. ಯೋಚನೆ ಮಾಡಬೇಡಿ" ಅಂದಿದ್ದರು ಡಾ.ನಟರಾಜ್.

ನನಗೆ ಹೊಸ ಮನೆಗೆ ಹೋದಾಗಿನಿಂದ ಒಂದು ಆತಂಕ ಇದ್ದೇ ಇತ್ತು. ಈ ತನಕ ನಾನು ಹೊಸ ಮನೆಯನ್ನು ಪೂರ್ತಿ ನೋಡಿಲ್ಲ. ನೋಡೋ ಹೊತ್ತಿಗೆ ಸುಸ್ತಾಗುತ್ತದೆ. ಮೊದಲು ಲಲಿತೆ, ಮಗ ಸೊಸೆ-ಎಲ್ಲರೂ settle ಆದ ಮೇಲೆ ಹೋಗಿ ನೋಡಿದರಾದೀತು ಅಂದುಕೊಂಡಿದ್ದೆ. ಮಗ ಸೊಸೆಯ ಹನಿಮೂನ್ ಇನ್ನೂ ಮುಗಿದಂತಿಲ್ಲ. ಇವತ್ತು ಮಡಿಕೇರಿ, ನಾಳೆ ಮೈಸೂರು ಅಂತ ಸುತ್ತುತ್ತಲೇ ಇದ್ದಾರೆ. It is natural. ಆ ವಯಸ್ಸೇ ಅಂಥದ್ದು. ನಾಳೆ ಅದೆಲ್ಲೋ ಬಾಲಿಗೆ ಹೋಗ್ತಿದೀನಿ ಅಂದ ಕರ್ಣ. ಆಗಬಹುದು ದೊರೇ... ಅಂದೆ. ಅವನು ಬಾರದ ಹೊರತು ನಾನು ಹೊಸ ಮನೆಗೆ ಹೋಗುವಂತಿಲ್ಲ. ನಾನು ಹೋಗದ ಹೊರತು, ಹೊಸ ಮನೆಯ ಪ್ರವೇಶಕ್ಕೆ ನನ್ನಾಕೆ ದನ ಕರೆಸಿದ್ದಳೋ ಇಲ್ಲವೋ ಗೊತ್ತಿಲ್ಲ. “ನೀವು ಬಂದರೆ ಅದು ದನ ಬಂದ್ಹಾಗೆ ತಾನೇ? ಬಂದು ಬಿಡಿ!" ಅಂತ ಮೊನ್ನೆ ನಕ್ಕಿದ್ದಳು.

ಉಳಿದದ್ದೇನೇ ಇರಲಿ: ನನ್ನ ಅಳಿಯ ರಂಜಿತ್ ಅದ್ಭುತ planner. ಅವನು ಕಟ್ಟಿರುವ ರೂಮುಗಳನ್ನು ನೋಡಬೇಕು. ಒಬ್ಬೊಬ್ಬರ ರೂಮು ಒಂದೊಂಥರಾ. ನನ್ನ ಕೋಣೆ superb. ಪುಸ್ತಕದ ರ‍್ಯಾಕ್‌ಗಳು, ಅಲ್ಲಿನ ನೆಳಲು-ಬೆಳಕಿನ ವ್ಯವಸ್ಥೆ, ಹೊರಗೆ ಬಾಲ್ಕನಿ, ಸುಮ್ಮನೆ ಕೂಡಲಿಕ್ಕೆ ಒಂದು ಬಿಸಿಲು ಮಚ್ಚೆ... ಎಲ್ಲ ಚೆನ್ನಾಗಿದೆ. “ಇನ್ನೂ ಯಾಕೆ ಆಫೀಸಲ್ಲಿ ಮಲಗ್ತೀರಾ? ನಿಮ್ಗೆ ಅಂತಲೇ ರೂಮು ಅಷ್ಟು ಚೆನ್ನಾಗಿ design ಮಾಡಿರೋದು. ಸುಮ್ನೆ ಬಂದು ಆರಾಮಾಗಿ ಇರಿ" ಅಂದ.

ಅಲ್ಲವಾ? ಇಲ್ಯಾಕೆ ಕಿಷ್ಕ ಕಿಷ್ಕ ರೂಮು? ಗೊತ್ತಿಲ್ಲ. ಹೆಚ್ಚು ಕಡಿಮೆ ಹದಿನಾರು-ಹದಿನೇಳು ವರ್ಷಗಳಾದವು: ನಾನು ಮನೆ ಬಿಟ್ಟು. Actually ನಾನು ಅಂಥಾ family person ಅಲ್ಲ. ಮೊದಲಿಂದ ಹೀಗೆ ಒಬ್ಬೊಬ್ಬನೇ ಇರೋ ಜಾಯಮಾನ. I think 1961ರಿಂದಲೇ ಈ ಅಭ್ಯಾಸ ಬಿಟ್ಟು ಬಿಟ್ಟಿದೆ. ಮನೆ, ಮನೇಲಿ ಅಮ್ಮ-ಎಲ್ಲಾ ಇದ್ದರೂ-ಅಲ್ಲಿರೋದು ಬಿಟ್ಟು, ಹತ್ತಿರವಿದ್ದ ಆಯುರ್ವೇದಿಕ್ ಕಾಲೇಜಿನ ಹಾಸ್ಟೆಲ್‌ನಲ್ಲಿ settle ಆಗುತ್ತಿದ್ದೆ. ಆನಂತರ ಮುನಿಸಿಪಲ್ ಕಾಲೇಜಿನಲ್ಲಿ ನನ್ನ ಜಮಖಾನ. ಕಡೆಗೆ ನನ್ನ ಅಮ್ಮನಿಗೆ ರೋಸಿ ಹೋಗಿ, “ಇಲ್ಲೇ ಇನ್ನೊಂದು ರೂಮಿದೆಯಲ್ಲ? ಇಲ್ಲೇ ಬೀಳು. ನೀನು ಹಾಗೆ ಕಂಡ ಕಂಡಲ್ಲಿಗೆ ಹೋಗಿ ಮಲಗೋದು ಯಾಕೆ ಅಂತ ಗೊತ್ತಿದೆ ನಂಗೆ. ಅದೇನು ಸುಡುಗಾಡು ಬೀಡಿ ಸಿಗರೇಟು ಸೇದ್ತೀಯೋ, ಅದನ್ನ ಇಲ್ಲೇ ಸೇದಿ ಸಾಯಿ" ಅಂದಿದ್ದಳು. She was very correct.

ಆದರೆ ಈಗ ಆಗಿರೋದು ಅದಲ್ಲ. ಒಂದರ್ಥದಲ್ಲಿ ಇದು ನಾನೇ ಮಾಡಿಕೊಂಡ ವ್ಯವಸ್ಥೆ. ಇಲ್ಲಿ ಮೊದಲು ಭರ್ಜರಿ ಪಾರ್ಟಿಗಳಾಗುತ್ತಿದ್ದವು. ಅವೆಷ್ಟು ಬಾಟಲುಗಳು ಉರುಳುತ್ತಿದ್ದವೋ? ಗೆಳೆಯ ಅವಿನಾಶ್ ಬರುತ್ತಿದ್ದರು. ಬೆನ್ನಲ್ಲೇ ಮಾಳವಿಕಾ. ಒಮ್ಮೊಮ್ಮೆ ಪ್ರಕಾಶ್ ರೈ ಬರುತ್ತಿದ್ದ. ಬರಹಗಾರರು, ಹಾಡುವವರು ಬರುತ್ತಿದ್ದರು. ಅದೆಷ್ಟು ಚಂದದ ದಿನಗಳವು. ಮೊನ್ನೆ ಜೋಗಿ ಬಂದಾಗ ಫಕ್ಕನೆ ನೆನಪಾದವು ಅವೆಲ್ಲ. ಜೋಗಿಯ ಜೊತೆ ಟಿ.ಎನ್.ಸೀತಾರಾಮ್ ಬಂದಿದ್ದರು. ಕುಡಿತ ಮಾತ್ರ ಇರಲಿಲ್ಲ. ತುಂಬ ಕಠೋರ ನಿರ್ಧಾರ ಮಾಡಿ ಅದನ್ನು ಬಿಟ್ಟು ಬಿಟ್ಟಿದ್ದೇನೆ. “ನಿನ್ನನ್ನು ಮತ್ತೆ ಈ I.C.U. ವಾರ್ಡ್‌ನಲ್ಲಿ ನಾನು ನೋಡೋ ಹಾಗಾಗಬಾರದು ರವೀ..." ಅಂದವರು ತುಂಬ ದೊಡ್ಡ ಹೆಸರು ಮಾಡಿರುವಂತಹ ಡಾ. ಸೊನಾಲ್. ಆ ಮಾತು ಪದೇಪದೆ ಎಚ್ಚರಿಸುತ್ತಿರುತ್ತದೆ. ಯಾಕಿದ್ದೀತು? ಸಾಯುವುದರ ಬಗ್ಗೆ ನನಗೆ ತಕರಾರಿಲ್ಲ. ಆದರೆ ಆ ಪಾಟಿ ನರಳಿಕೊಂಡು ಸಾಯಬೇಕಾ? ಅದೂ for a stupid and silly habit?

ಈಗ ಮೊದಲಿನಂತೆ ಆಫೀಸಿನಲ್ಲಿ ಇಳಿ ಸಂಜೆಯ ಗೋಷ್ಠಿಗಳಿಲ್ಲ. ಸೀತಾರಾಮ್‌ರಂತಹ ಗೆಳೆಯರು ಬರುತ್ತಾರಾಗಲೀ, ಅವರು ಕುಡಿಯಲು ಕರೆಯುವುದಿಲ್ಲ. I am fine. But I miss my friends. ಆಗ ಹಾಗೆ ಭರ್ತಿಯಾಗಿ ಕುಡಿದು ಇಲ್ಲೇ ರೂಮಿನಲ್ಲಿ ಮಲಗಿ ಬಿಡುತ್ತಿದ್ದೆ. ಕುಡಿತವೇನೋ ಬಿಟ್ಟುಹೋಯಿತು. ಆದರೆ ಈ ಕಿಷ್ಕ ರೂಮಿನಲ್ಲಿ ಮುದುರಿಕೊಳ್ಳುವ ಚಟ? ಇದು ಉಳಿದುಕೊಂಡಿದೆ. ಹೇಗಾದರೂ ಮಾಡಿ ಇದನ್ನು ಕಳೆದುಕೊಂಡು ಲಲಿತೆಯ ಮನೆ ಸೇರಿಕೊಳ್ಳಬೇಕು. I think that gives pleasure.

ನನಗಾದರೂ ಇನ್ನೆಷ್ಟಿವೆ ಬದುಕ ಬೇಕಾದ ದಿನಗಳು? ಅಲ್ವೆ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 10 November, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books