Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಆಕೆ ಟಿಕೆಟ್ ಕೌಂಟರ್‌ನ ಮುಂದೆ ನಿಂತು ಸಿನೆಮಾ ಚೆನ್ನಾಗಿದೆಯಾ ಅಂತ ಕೇಳಿದ್ದಳು

ಅಲರ್ಜಿ ನಂಗೆ.

ಅವರೆಂದರೇನೇ ಅಲರ್ಜಿ. ವಿಪರೀತ ಶೃಂಗಾರ ಮಾಡಿಕೊಳ್ಳುವ, ದಪ್ಪಗಿರುವ, ನಲವತ್ತು ದಾಟಿದ, ಮೈತುಂಬ ಪರ್‌ಫ್ಯೂಮ್ ಹಾಕಿಕೊಳ್ಳುವ ಹೆಂಗಸರು ಅಂದರೆ ನಿಜಕ್ಕೂ ಅಲರ್ಜಿ. ಆದರೆ ಆಕೆ ಅದ್ಹೇಗೆ ನನಗೆ ಪರಿಚಯವಾದಳೋ? ಈಗ ನೆನಪಾಗುತ್ತಿಲ್ಲ. ಆಕೆ ಮುಸ್ಲಿಮಳು ಅಂದುಕೊಂಡಿದ್ದೆ. ಆದರೆ ಮಾರವಾಡಿ ಕೂಡ ಅಲ್ಲದ, ಸಿಂಧಿ ಹೆಂಗಸು ಅದು. ಪರಿಚಯವನ್ನು ಯಾರೂ ಮಾಡಿಸಬೇಕಿರಲಿಲ್ಲ. ಅದಕ್ಕೆ Eye contact ಸಾಕು. ಆಗ ನಾನು ಪಿಯು ಮುಗಿಸಿ ಕಾಲೇಜಿಗೆ ಸೇರಿಕೊಂಡಿದ್ದೆ. ಕೆಂಪಗೆ, ಚೆನ್ನಾಗಿದ್ದೆ. ಸೈಕಲ್ ತುಳಿಯುತ್ತಿದ್ದೆ. ಹೀಗಾಗಿ ತೊಡೆಗಳು ಮಸ್ತ್. ಈಗಿನಂತೆ ಬೆನ್ನು ಬಾಗಿರಲಿಲ್ಲ. ಸಣ್ಣಗೆ ರೇಗಿದರೂ ಸಾಕು, ನಿಂತ ನಿಲುವಿನಲ್ಲೇ ಫೈಟ್‌ಗೆ ಇಳಿದು ಬಿಡುತ್ತಿದ್ದೆ. ಆ ತೆರನಾದ macho image ಹುಡುಗೀರಿಗೆ ಇಷ್ಟವಾಗುತ್ತಿತ್ತು. ಆದರೆ ಅವಳು ಹುಡುಗಿಯಲ್ಲ. ಆದರೂ ಇಷ್ಟದಿಂದ ಕರೆದಿದ್ದಳು. ಬಂಗಲೆಯಲ್ಲಿ ಯಮಗಾತ್ರದ ನಾಯಿ ಇತ್ತು: ಬಾಕ್ಸರ್. ಗಂಡನಿಗೆ ಸದಾ ತಿರುಗಾಟದ ಅನಿವಾರ್ಯತೆ. ಆತ ಅಡಿಕೆ, ಅಡಿಕೆ ಪುಡಿ ಮುಂತಾದವುಗಳ ವ್ಯಾಪಾರ ಮಾಡುತ್ತಿದ್ದ. ದಾಂಪತ್ಯದಲ್ಲಿ ಇಬ್ಬರಿಗೂ ಮಜಾ ಇರಲಿಲ್ಲ. “ಒಂದ್ಸಲ ಮನೇಗೆ ಬಾ. ಆದರೆ ರಾತ್ರಿ ಹತ್ತರ ನಂತರವೇ ಬರಬೇಕು. ನೀನು ಬರೋದು ಗ್ಯಾರಂಟಿಯಾದರೆ ನಾಯೀನ ಹಿತ್ತಿಲಲ್ಲಿ ಕಟ್ಟಿರುತ್ತೇನೆ. ಅದೇನೂ ಕಚ್ಚಲ್ಲ. ಆದರೆ ಒಮ್ಮೆ ಶುರುವಾದರೆ ರಾತ್ರಿಯಿಡೀ ಬೊಗಳುತ್ತೆ" ಅಂದಿದ್ದಳು.

ನಂತರ ಗೊತ್ತಾದದ್ದು ಹಣದ ವಿಷಯ. ಆಕೆ ತನ್ನೊಂದಿಗೆ ಸದಾ ಹಣ ಇಟ್ಟುಕೊಂಡಿರುತ್ತಿದ್ದಳು. ಹತ್ತತ್ತು ರುಪಾಯಿಗಳ ಎಷ್ಟೊಂದು ನೋಟುಗಳು. ಅವತ್ತಿಗೆ ಹತ್ತು ರುಪಾಯಿಯೇ ನನಗೆ. ರಾತ್ರಿ ಅಮ್ಮ ಬಡಿಸಿದ್ದು ಊಟ ಮಾಡಿ ಸೈಕಲ್ ಎಳೆದುಕೊಂಡು, ಸುಮಾರು ಎರಡು ಮೈಲು ದೂರದ ಅವಳ ಬಂಗಲೆಗೆ ಹೊರಡುತ್ತಿದ್ದೆ. ಕಾಲೇಜಿಗೆ ಹೋಗುವಾಗ ಪ್ಯಾಂಟು: ಉಳಿದ ಕಡೆಗೆ ನಿಕ್ಕರ್! ದಾರಿಯಲ್ಲಿ ‘ಲಕ್ಕೀ’ ಹೊಟೇಲಿನಲ್ಲಿ ಪಟ್ಟಾಗಿ ಒಂದು ಮಾಂಸದ ಊಟ. ಕೇವಲ ದೇವತೆಗಳು ಮಾತ್ರವೇ ತಿನ್ನುವಂಥ, ಪರಮ ರುಚಿಯಾದ ಮಟನ್ ಮಸಾಲಾ ಮತ್ತು ಸಿಲೋನ್ ಪರಾಠಾ ಮಾಡುತ್ತಿದ್ದ ಹೊಟೇಲಿನವನು. ತಿನ್ನೋದಕ್ಕೆ ಮುಂಚೆ ಅವನೇ ತರಿಸಿ ಕೊಡುತ್ತಿದ್ದ: ಪಂಪಾಸರ್! ಒಂದು ಕ್ವಾರ್ಟರ್‌ಗೆ ಬರೀ ಎರಡೂವರೆ ರುಪಾಯಿ. ಊಟಕ್ಕೆ ಇನ್ನೊಂದೆರಡೂವರೆ. ಪಂಪಾಸರ್ ಎಂಬುದು ಶುದ್ಧ ಸಾರಾಯಿ. ಅದು ಹೊಸಪೇಟೆ-ಮುನಿರಾಬಾದ್ ಕಡೆಯಿಂದ ಬರುತ್ತಿತ್ತು. ಮೊದಲ ಪೆಗ್ ಮುಗಿಸುವ ಹೊತ್ತಿಗೆ ತಲೆ ಗಿಮ್! ಕೊಂಚ ನಿಂಬೆ ಹಣ್ಣು ಹಿಂಡಿಕೊಳ್ಳುತ್ತಿದ್ದೆ. ಜೊತೆಗೆರಡು ಚಿಟಿಕೆ ಉಪ್ಪು. ಬರೀ ಎರಡೂವರೆ ರುಪಾಯಿಗಳಲ್ಲಿ ಸಿಗುತ್ತಿದ್ದ ಆ ದೈವಸಮಾನವಾದ ಡ್ರಿಂಕು ಮತ್ತು ಅದೇ ಮೊತ್ತದ ಆ ಪರೋಠಾ ಮತ್ತು ಮಟನ್ ಮಸಾಲಾ! ಅದೇ dosage ಮುಂದುವರೆಸಿದ್ದಿದ್ದರೆ ಆರೋಗ್ಯ ಇವತ್ತಿಗೂ ದಿವಿನಾಗಿರುತ್ತಿತ್ತೇನೋ? ಆದರೆ ಒಂದು ಪೆಗ್‌ಗೆ ಯಾವನು ನಿಲ್ಲಿಸುತ್ತಾನೆ? One peg want's another peg. ಒಂದು ಹಂತದಲ್ಲಂತೂ ನಾನು ಹಾಡಹಗಲೇ ಕುಡಿಯಲಾರಂಭಿಸುತ್ತಿದ್ದೆ. ಬೆಳಿಗ್ಗೆ ಎಂಟೆಂಟೂವರೆಗೆ ಎದ್ದು ಹಲ್ಲುಜ್ಜಿದವನೇ ಹೊರ ಬಂದು “ಸೀನಾ, ಒಂದು ಪೆಗ್ ಮಾಡೋ..." ಅಂತ ಅಪ್ಪಣೆ. ಅವನು ವಿರುದ್ಧ ನಿಂತು ಎಂದಿಗೂ ಮಾತಾಡಿದವನಲ್ಲ. ಅದಕ್ಕಿಂತ ಮುಖ್ಯ: ಅವನು ವಿಷ ಕುಡಿದರೂ ಕುಡಿಯಬಹುದು. ವಿಸ್ಕಿ ಕೈಲಿ ಮುಟ್ಟುವವನಲ್ಲ. ಏಕೆಂದರೆ, ಅವನು ತನ್ನ ತಂದೆಯ ಕುಡಿತವನ್ನು ವರ್ಷಗಟ್ಟಲೆ ನೋಡಿದ್ದಾನೆ. ಕಣ್ಣೆದುರಿಗೇ ತನ್ನ ಚಿಕ್ಕಪ್ಪ-ದೊಡ್ಡಪ್ಪಗಳು ಕುಡಿದು ನಾಶವಾದುದನ್ನು ನೋಡಿದ್ದಾನೆ. ಅವರನ್ನು ಬಿಡಿ, ನಾನೇ ವರ್ಷಗಟ್ಟಲೆ ಕುಡಿದದನ್ನು ನೋಡಿ ರೋಸಿ ಹೋಗಿದ್ದಾನೆ. ಇನ್ನೇನು ಕುಡಿದಾನು? ಅಲ್ಲದೆ ಸೀನನಿಗೆ ನನ್ನ ಮೇಲೆ ತುಂಬ ಪ್ರೀತಿ. ತಂದೆಯನ್ನು ಮಗ ಪ್ರೀತಿಸಿದಷ್ಟು, ನನ್ನನ್ನು ಪ್ರೀತಿಸುತ್ತಾನೆ. ನಾನು ಕುಡಿದರೆ ಅವನಿಗೆ ನನ್ನನ್ನು ಕಾಯೋದೇ ಕೆಲಸ. Nice fellow.

ಈಗ ಬಿಡಿ: ಅವನು ಹತ್ತು ಗಂಟೆಗೆ ನೆಮ್ಮದಿಯಾಗಿ ಎದ್ದು ಮನೆಗೆ ಹೋಗುತ್ತಾನೆ. ಅವನಿಗೆ ಪುಟ್ಟ ಕುಟುಂಬವಿದೆ. ತಾಯಿ, ಹೆಂಡತಿ, ಇಬ್ಬರು ಮಕ್ಕಳು. ಅವನಿಗೆ ಈಗ ಇರೋ ಬುದ್ಧಿವಂತಿಕೆ ನನಗೆಲ್ಲಿತ್ತು. ಪಂಪಾಸರ್‌ನ ಮತ್ತಿನಲ್ಲಿ ಅನಾಯಾಸವಾಗಿ ಎರಡು ಮೈಲಿ ಸೈಕಲ್ ತುಳಿಯುತ್ತಿದ್ದೆ. ಆಕೆ ಕಾದಿರುತ್ತಿದ್ದಳು. ಆಕೆಗೆ ಬ್ರಾಂಡಿ ಇಷ್ಟ. ಅದರೊಂದಿಗೆ ನೆಂಚಿಕೊಳ್ಳಲಿಕ್ಕೆ ಬಾದಾಮ್, ಗೋಡಂಬಿ, ಒಣಗಿದ ದ್ರಾಕ್ಷಿ... ಒಂದೆರಡಲ್ಲ. ಕೆಲವು ಸಲ ಬಿರಿಯಾನಿ ಕೂಡ ತೆಗೆದಿಟ್ಟಿರುತ್ತಿದ್ದಳು. ಹಸೀ ಹೊಟ್ಟೆಯಲ್ಲಿ ಕುಡೀಬಾರ‍್ದು. ಚೆನ್ನಾಗಿ ತಿನ್ನು. ನೀನು ತಿಂದಷ್ಟೂ ಆಟ ಚೆನ್ನಾಗಿರುತ್ತೆ ಅಂದು ಸಣ್ಣಗೆ ನಗುತ್ತಿದ್ದಳು. ಎರಡು ಮೈಲಿ ಸೈಕಲ್ ತುಳಿಯುವ ಹೊತ್ತಿಗೆ ಪಂಪಾಸರ್ ತನ್ನ ಕೆಲಸ ಮಗಿಸಿರುತ್ತಿತ್ತು. ಮತ್ತೆ ಬೀಳುತ್ತಿದ್ದ ಬ್ರಾಂಡಿಗೆ ಜಾಗವೋ ಜಾಗ. ಪಂಪಾಸರ್ ಸರಾಯಿ ಅದೊಂಥರಾ Rumನಂತಹುದು. ಕುಡಿದು ಗ್ಲಾಸ್ ಕೆಳಗಿಡುತ್ತಿದ್ದಂತೆಯೇ, ನಶಾ ನೆತ್ತಿಗೇರುತ್ತಿತ್ತು. ಅಲ್ಲೇ ನೆತ್ತಿಯ ಮೇಲೆ ಹಳೇ ಫ್ಯಾನ್‌ನಂತೆ ಗಿರಕಿ ಹೊಡೆಯೋ ಕೆಲಸ. ಅದೊಂದಷ್ಟು ಟೈಂ ಇರುತ್ತದೆ. ಅದು ಮುಗಿಯಿತೆಂದರೆ, ನಶಾ ಢಮಾರ್! ಹೇಳದೆ ಕೇಳದೆ ನಶೆ ಇಳಿದು ಹೋಗುತ್ತದೆ. ಸರಾಯಿ ಕೂಡ ಅಷ್ಟೆ. ಅದು ವಿಸ್ಕಿಯಂತೆ ಗಂಟೆಗಟ್ಟಲೆ ಇದ್ದು, ಮಾರನೇ ಹಗಲು ವಿಪರೀತ hangover ಕೈಗಿಟ್ಟು ಹೋಗುವುದಿಲ್ಲ. ಆ ಕಾರಣಕ್ಕೆ ನಾನು ಪಂಪಾಸರ್ ಕುಡಿಯುತ್ತಿದ್ದೆ. ಅದು ತುಂಬ ವರ್ಷ ಜೊತೆಗಿರಲಿಲ್ಲ. ಮುನಿರಾಬಾದ್ ಅಥವಾ ಹೊಸಪೇಟೆಯ ಕಬ್ಬಿನ ಫ್ಯಾಕ್ಟರಿಗಳು ಬಂದ್ ಆದುವೇನೋ? ಸಕ್ಕರೆ ತಯಾರಾಗದಿದ್ದರೆ ಸಾರಾಯಿ ಎಲ್ಲಿಂದ ಹುಟ್ಟೀತು? ನಾನು ಮುಂದೆ ನೇರಾನೇರ ಸರ್ಕಾರಿ ಸಾರಾಯಿ ಕುಡಿಯಲಾರಂಭಿಸಿದೆ. ಆದರೆ ದಿನಗಳೆದು ಕಾಲ ಉರುಳಿದ ಮೇಲೆ ಸಾರಾಯಿಯೂ ಕಣ್ಣು ಮುಚ್ಚಿತು. ಸಾರಾಯಿ ತಯಾರಿಕೆಯೇ ನಿಂತು ಹಯಿತು.

ಅದೆಲ್ಲಕ್ಕಿಂತ ಮುಂಚೆ ಆ ಹೆಂಗಸು ಕಳಚಿಕೊಂಡಳು. ಬ್ರಾಂಡಿ ಕುಡಿಯಲು ಕುಳಿತರೆ ಅವಳು ಇಬ್ಬರು ಗಂಡಸರಿಗೆ ಸಮ. ನಿಧಾನವಾಗಿ, ಆದರೆ ಕರುಳು ತುಂಬುವಂತೆ ಕುಡಿಯುತ್ತಿದ್ದಳು. ಚೆಂದದ ಮಾಂಸದಡುಗೆ ತಾನೇ ನಿಂತು ಬಡಿಸುತ್ತಿದ್ದಳು. ಅಪರೂಪಕ್ಕೊಂದು ವಿಲ್ಸ್ ಸಿಗರೇಟು. ಆಮೇಲೇನಿದೆ? ಒಂದು ಭರ್ತಿ game. ಬ್ರಾಂಡಿ ಕುಡಿಯುವಲ್ಲಿ ನಾನು ಬೇಕೆಂದೇ ಕಡಿಮೆ ಕುಡಿಯುತ್ತಿದ್ದೆ. ವಾಪಸು ಎರಡು ಮೈಲಿ ಸೈಕಲ್ ತುಳಿಯಬೇಕಲ್ಲ? ತುಂಬ ಬಿಮ್ಮಗೆ ಊಟವನ್ನೂ ಮಾಡುತ್ತಿರಲಿಲ್ಲ. ಅದು gameಗೆ ತೊಂದರೆ ಕೊಡುತ್ತದೆ. ಹೊರಡುವ ಹೊತ್ತಿಗೆ ಕರಾರುವಾಕ್ಕಾಗಿ ಅವಳು ಹತ್ತು ರುಪಾಯಿ ತಂದು ಕಿಸೆಯಲ್ಲಿಡುತ್ತಿದ್ದಳು. ಕೆಲವೊಮ್ಮೆ ಹೆಚ್ಚಿನ ಖರ್ಚು ಬಂದರೆ ಅದಕ್ಕೂ ಸಾಲ ಕೊಡುತ್ತಿದ್ದಳು. ಲೆಕ್ಕಾಚಾರದಲ್ಲಿ ಅವಳು ಯಾವ ಮಾರವಾಡಿಗಾದರೂ ಸಮ. ಹಾಗಂತ ಜಿಪುಣೆಯಲ್ಲ. ಖುಷಿ ಬಂದರೆ gamej rules ಮೀರಿ ಇಪ್ಪತ್ತು-ಮೂವತ್ತು ರುಪಾಯಿ ಕೊಡುತ್ತಿದ್ದಳು. ಶುದ್ಧ ಹೊಟ್ಟೆಬಾಕ ಗಂಡಸಿಗೆ ಬಡಿಸುವಂತೆ ಮನಸೋಯಿಚ್ಛೆ ಪೂರ್ತಿಯಾಗುವಂತೆ ಬಡಿಸುತ್ತಿದ್ದಳು. ಒಮ್ಮೊಮ್ಮೆ ಬಿರಿಯಾನಿ ಕೇಳಿ ಕಟ್ಟಿಸಿಕೊಂಡು ಬರುತ್ತಿದ್ದೆ. ಮೊದಲಿಂದಲೂ ನಾನು ಕೊಂಚ ‘ಹೊಟ್ಟೆ ಹುಡುಗ’ನೇ. ನಾನಾಗೇ ಊಟದ ಮೇಲೆ ನಿರ್ಬಂಧ ಮಾಡಿಕೊಂಡದ್ದು ಈ ಇತ್ತೀಚೆಗಿನ ಇಪ್ಪತ್ತು ವರ್ಷಗಳ ಮಾತು. ಹಿಂದೆ ಪೂರ್ತಿ ಎರಡು ಒಬ್ಬೆಯಷ್ಟು, ಅಂದರೆ ಮೂವತ್ತೆರಡು ಇಡ್ಲಿ ತಿನ್ನುತ್ತಿದ್ದವನು ನಾನು. ಈಗ ಬಂದು ನೋಡಿ: ಎರಡು-ಎರಡೂವರೆ ಇಡ್ಲಿಗೆ ತಿಂಡಿ ಖಲಾಸ್.

ಹಾಗೆ ರಾತ್ರಿಯ ಸಾಹಸ ಸಾಕಷ್ಟು ಕಾಲ ನಡೆಯಿತು. ನಾನು ಗಮನಿಸಿದ್ದೆಂದರೆ, ಆಕೆಯ ಕುಡಿತ ಕೊಂಚ ಮಿತಿಮೀರಲಾರಂಭಿಸಿತು. ನಾನಲ್ಲದೆಯೂ ಆಕೆಗೆ ಬೇರೆ ಗೆಳೆಯರಿದ್ದಾರಾ? ಇದ್ದಾರೆ ಅನ್ನುವುದೇ ಆದರೆ ನನ್ನ ಆರೋಗ್ಯದ ಕಥೆ? ಆಗೆಲ್ಲ ಇನ್ನೂ ಈ ಔಷಧಿಯಿಲ್ಲದ ರೋಗ ದಾಳಿ ಮಾಡಿರಲಿಲ್ಲ. ಆದರೂ ಭಯ. ಆಕೆಗೆ ಮೊದಲಿನಷ್ಟು ಉತ್ಸಾಹ ಇಲ್ಲದಂತಾಗತೊಡಗಿತು. ಮೊದಲಿನಂತೆ ಆಸಕ್ತಿ, ಔದಾರ್ಯಗಳೆರಡೂ ಕಡಿಮೆಯಾದವು. ಮೊದಲೆಲ್ಲ, ವಾರಕ್ಕೆ ಒಮ್ಮೆಯಾದರೂ ಸೈಕಲ್ಲೇರಿ ಹೋಗುತ್ತಿದ್ದೆ. ಬರಬರುತ್ತಾ ಅದು ಹದಿನೈದು ದಿನಕ್ಕೊಮ್ಮೆ ಎಂಬಂತಾಯಿತು. ಕೆಲವು ಸಲ ಆಕೆ ಎಷ್ಟು ಕುಡಿದಿರುತ್ತಿದ್ದಳೆಂದರೆ, ಎದ್ದು ಬಂದು ಬಾಗಿಲು ತೆರೆಯಲಿಕ್ಕೇ ಅವಳಿಗಾಗುತ್ತಿರಲಿಲ್ಲ. ಅಸಲಿಗೆ ಏನಾಯಿತು ಎಂಬುದೂ ಹೇಳಲಾಗದಂಥ ರೀತಿಯಲ್ಲಿ ಆ ಸಂಬಂಧ ಬಿಟ್ಟು ಹೋಯಿತು. ನನ್ನ ಪಾಲಿಗೆ ಆ ಸಂಬಂಧವೂ ತಪ್ಪಿ ಹೋಯಿತು: ನನಗಿದ್ದ ಆದಾಯವೂ ನಿಂತು ಹೋಯಿತು. ಆನಂತರವೇ ನಾನು ಸಂಗಮ್ ಟಾಕೀಸಿನಲ್ಲಿ ಟಿಕೀಟು ಹರಿಯುವ ನೌಕರಿಗೆ ಸೇರಿದ್ದು. ಹಿಂದೆ ನಾನು ಹೇಳಿದೆನಲ್ಲ? ಜೋರಾಗಿ ಮಾತಾಡುವ, ದೊಡ್ಡಗೆ ನಗುವ, ತುಂಬ ಸಿಂಗಾರ ಮಾಡಿಕೊಳ್ಳುವ, ಡುಮ್ಮನೆಯ ಅರೆ ಮುದುಕಿ ಹೆಂಗಸರು ನನಗೆ ಇಷ್ಟವಾಗುವುದಿಲ್ಲ ಅಂತ? ಈಕೆಯ ವಿಷಯದಲ್ಲಿ ಅದೇ ಆಯಿತು.

ಅದಿನ್ನೂ ಮಧ್ಯಾಹ್ನ. ನಾನು ಟಿಕೆಟ್ ಕೊಡುವ ಕೌಂಟರ್‌ನಲ್ಲಿ ಕುಳಿತಿದ್ದೆ. ಅಸಲು ಜನರೇ ಇರಲಿಲ್ಲ. ಸಿನೆಮಾ ಪ್ರಾರಂಭವಾಗಿತ್ತು. ಅದೆಲ್ಲಿತ್ತೋ ಆ ಕಾರು. ಶಬ್ದ ಮಾಡಿಕೊಂಡು ಬಂದು ಥೇಟರಿನೆದುರಿಗೇ ನಿಂತಿತು. ಅದರಿಂದ ಇಳಿದದ್ದು... my God! ಅದೇ ಹೆಂಗಸು. ಆ ಹೊತ್ತಿಗೇ ಜಾಸ್ತಿ ಕುಡಿದು ಬಿಟ್ಟಿದ್ದಳು. ತಾರಾಡುತ್ತಲೇ ಮೆಟ್ಟಿಲು ಹತ್ತಿ ಬಂದಳು. ಕೌಂಟರ್‌ನಲ್ಲಿದ್ದ ನಾನು ಕೊಂಚ ಮರೆ ಮಾಡಿಕೊಂಡೆ. ಆಕೆ ನನ್ನನ್ನು ಗುರುತು ಹಿಡಿಯುವ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲಿ ಕೆಲಸಕ್ಕೆ ಸೇರಿದ್ದು ಅವಳಿಗೆ ಗೊತ್ತಿರಲಿಲ್ಲವಾದ್ದರಿಂದ ಅಲ್ಲಿ ನನ್ನನ್ನಾಕೆ expect ಮಾಡಿಯೂ ಇರಲಿಲ್ಲ. ಕೌಂಟರ್‌ನೆಡೆಗೆ ತೂರಾಡುತ್ತ ಬಂದು, “ಸಿನೆಮಾ ಕೌನ್ಸಾ ಹೈ?" ಅಂದಳು. ನಾನು ಹೇಳಿದೆ. ಒಂದು ಟಿಕೆಟ್ ಕೊಡು ಎಂದು ಹಣ ಕೊಟ್ಟಳು. “ನಾಮ್ ಅಚ್ಛಾ ಹೈ... ಸಿನೆಮಾ ಅಚ್ಛಾ ಹೈ ಕ್ಯಾ?" ಅಂದವಳೇ ವಿಪರೀತ ಜೋರಾಗಿ ನಕ್ಕು ಬಿಟ್ಟಳು.

ಅದರ ಹಿಂದೆಯೇ ಕೇಳಿಸಿತು: ಆ ಹೆಂಗಸು ಉಚ್ಚೆ ಮಾಡಿಕೊಂಡ ಸದ್ದು. ಸೀರೆಯುಟ್ಟುಕೊಂಡಿದ್ದ ಆಕೆ ನಿಂತ ನಿಲುವಿನಲ್ಲಿ, ಸೀರೆಯಲ್ಲೇ ಉಚ್ಚೆ ಮಾಡಿಕೊಂಡು ಬಿಟ್ಟಳು. ಮುಂದೇನಿದೆ? ಕೊಟ್ಟ ಟಿಕೆಟ್ ಇಸಿದುಕೊಂಡು ಥೇಟರಿನೊಳಕ್ಕೆ ಆಕೆ ನಡೆದು ಹೋದಳು. ಆ ನಂತರ ಕಕ್ಕಸ್ಸು ಗುಡಿಸುವವರು ಬಂದು ಚೆನ್ನಾಗಿ ನೀರು ಹಾಕಿ ಆ ಅಸಹ್ಯವನ್ನು ತೊಳೆದರು. ನನಗೆ ಅದೆಷ್ಟು ಹೇಸಿಗೆಯಾಗಿತ್ತೆಂದರೆ, next showಗೆ ನಾನು ಟಿಕೆಟ್ ಹರಿಯಲು ಹೋಗಲೇ ಇಲ್ಲ. ಈ ಘಟನೆ ನಡೆದ ಸುಮಾರು ಒಂದು ವರ್ಷದ ನಂತರ ವಾರ್ತೆ ಬಂತು: ಆಕೆ ಸತ್ತು ಹೋದಳು! ಇವತ್ತಿಗೂ ಅದೆಲ್ಲ ನೆನೆಸಿಕೊಂಡರೆ ನನ್ನ ಮೇಲೆ ನನಗೇ ಜಿಗುಪ್ಸೆ ಮೂಡುತ್ತದೆ. ಈಗ ಸಂಗಮ್ ಟಾಕೀಸ್ ಮುಚ್ಚಿಹೋಗಿದೆ. ಆಕೆಯ ಗಂಡನೂ ಸತ್ತ. ಆತನ ವ್ಯವಹಾರವೂ ನಿಂತು ಹೋಗಿದೆ. ನೆನಪು ಮಾಡಿಕೊಂಡು ಹೋಗಿ ನೋಡಿ ಬರೋಣವೆಂದರೆ, ನೋಡಲಿಕ್ಕೆ ಅಲ್ಲೇನಿದೆ?

ನನ್ನೊಳಗೊಂದು ಅಸಹ್ಯ ಮಾತ್ರ ಉಳಿದಿದೆ, ನನ್ನ ಬಗ್ಗೆ.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 12 October, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books