Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅವನ ಪ್ರೇಯಸಿ ಮಾಡಿಸಿದ ಕೊಲೆಯ ಬಗ್ಗೆ ಪತ್ರವಾ?

ಬದುಕು ಅಂದ್ರೆ ಏನ್ಸಾರ್?

ಬದುಕು ಅಂದ್ರೆ ಐದು ಲೀಟರ್ ಬಾಲ್ಯ, ಇಪ್ಪತ್ತೈದು ಲೀಟರ್ ಯೌವನ, ಐವತ್ತು ಲೀಟರ್ ಆಕಾಂಕ್ಷೆ, ಎರಡು ಲೀಟರ್ ಕಣ್ಣೀರು, ಮತ್ತೆರಡು ಲೀಟರ್ ಹಾಸ್ಯ, ಹತ್ತು ಲೀಟರ್ ಸ್ನೇಹ, ಒಂದು ಲೀಟರ್ ಆತ್ಮವಿಮರ್ಶೆ, ಅರ್ಧ ಲೀಟರ್ ದೈವಭಕ್ತಿ, ಅರ್ಧ ಲೀಟರ್ ದೇಶಭಕ್ತಿ, ಎರಡು ಲೀಟರ್ ಪ್ರಾಮಾಣಿಕತೆ ಮತ್ತು ಇನ್ನೆರಡು ಲೀಟರಿನಷ್ಟು unexplained ಆಗುಹೋಗುಗಳು!

ಸರಿಯಾಗಿ ಅಳತೆ ಹಾಕಿದರೆ ಬದುಕೆಂಬ ಬ್ಯಾರಲ್ಲು ಈ ನೂರು ಲೀಟರುಗಳ ಸಾಮಗ್ರಿಯೊಂದಿಗೆ ತುಂಬಿ ಹೋಗಬೇಕು.

ತುಂಬಿಹೋದರೆ ಸಾಕಾ ಸಾರ್?

ಬದುಕು ಅನ್ನೋದು ತುಂಬಿ ತುಳುಕಬೇಕಲ್ವೆ? ಎಂಬುದು ನಿಮ್ಮ ಪ್ರಶ್ನೆಯಾದರೆ ಆ ನೂರು ಲೀಟರುಗಳ ಬ್ಯಾರಲ್‌ನೊಳಕ್ಕೆ ಅರಪಾವಿನಷ್ಟು ಅವಿವೇಕ, ಚಟಾಕಿನಷ್ಟು ವ್ಯಾಮೋಹ, ಎರಡು ಬೊಗಸೆಯಷ್ಟು ದುರಾಸೆ, ಒಂದು ತಂಬಿಗೆ ಸುಳ್ಳು, ಅರ್ಧ ಕೊಡದಷ್ಟು ಅಸೂಯೆ, ಮೂರು ಮಗ್ ಸ್ವಾರ್ಥ, ಒಂದು ಲೋಟ ವಂಚನೆ, ಎರಡು ಟೀ ಸ್ಪೂನ್ ಮಿತ್ರದ್ರೋಹ. ಇವಿಷ್ಟನ್ನು ಬೆರೆಸಿ ನೋಡಿ. ಅಲ್ಲಿಗೂ ಬದುಕೆಂಬುದು ತುಂಬಿ ತುಳುಕಾಡದಿದ್ದಲ್ಲಿ, ಅದರೊಳಕ್ಕೆ ಒಂದೇ ಒಂದು ಚಿಟಿಕೆಯಷ್ಟು ಆತ್ಮದ್ರೋಹವನ್ನು ಸುರಿದು ನೋಡಿ; ನೂರು ಲೀಟರುಗಳ ಆ ಸಮೃದ್ಧ ಬದುಕು ಇದ್ದಕ್ಕಿದ್ದಂತೆ ಬುರಬುರನೆ ಉಬ್ಬಿ, ಉಕ್ಕಿ, ಹೊರಕ್ಕೆ ಬಿದ್ದು, ಜುಳ್ಳನೆ ಸದ್ದು ಮಾಡುತ್ತ, ರಸ್ತೆಗೆ ಬಿದ್ದು, ಉದ್ದೋ ಉದ್ದಕ್ಕೆ ರಾತ್ರಿಯಿಡೀ ಹರಿದು ಬೆಳಗಾಗುವುದರೊಳಗಾಗಿ ಗಟಾರ ಸೇರದೆ ಇದ್ದರೆ ಕೇಳಿ!

ಆತ್ಮದ್ರೋಹಕ್ಕಿರುವ ತಾಕತ್ತೇ ಅಂತಹುದು. ಅದೆಂಥ ತುಂಬಿದ ಕೊಡದಂತಹ ಬದುಕೇ ಆಗಿದ್ದರೂ, ಅದನ್ನು ಗಟಾರದ ಪಾಲು ಮಾಡಿಬಿಡುತ್ತದೆ. ಬರೀ ಒಂದಿಷ್ಟು ವಿಸ್ಕಿಗಾಗಿ, ಹಣಕ್ಕಾಗಿ, ಹೆಂಗಸಿಗಾಗಿ ದೇಶದ ಘನಗಂಭೀರ ರಹಸ್ಯಗಳನ್ನೇ ಮಾರಿಕೊಂಡು ಬಿಡುವ ಸೈಂಟಿಸ್ಟುಗಳು, ಕ್ಷುದ್ರ ಕಾಮಕ್ಕಾಗಿ ಹಾಲು ಕುಡಿಯುವ ಮಗುವನ್ನೇ ಬೀದಿಗೆಸೆದು ಹೋಗಿಬಿಡುವ ತಾಯಂದಿರು, ಒಂದೇ ಒಂದು ಪ್ರಮೋಶನ್‌ಗಾಗಿ ಹೆಂಡತಿಯನ್ನು ಬಾಸ್ ಮನೆಗೆ ತಲುಪಿಸಿ ಬರುವ ಆಫೀಸರುಗಳು, ಬಾಯಿ ಚಪಲದ ಪರಾಕಾಷ್ಠೆ ಮುಟ್ಟಿ ತಾವು ತಂದುಕೊಂಡ ತಿಂಡಿಯನ್ನು ಮಕ್ಕಳಿಗೂ ಕೊಡದಂತೆ ಬಾಗಿಲು ಹಾಕಿಕೊಂಡು ತಿಂದು ಮುಗಿಸುವ ತಂದೆಯರು, ಆಸ್ಪತ್ರೆಯಲ್ಲಿ ಮಲಗಿದ ಅಂತಿಮ ಕ್ಷಣಗಳ ತಾಯಿಯನ್ನು ತಿರಸ್ಕರಿಸಿ ಶುಶ್ರೂಷೆಗೆ ಬಂದ ನರ್ಸ್‌ಗಳೊಂದಿಗೆ ಸರಸಕ್ಕಿಳಿಯುವ ಮಹಾ ಪುರುಷರು, ಖರ್ಚಾದರೆ ಸಾಕೆಂಬ ಅವಸರದಲ್ಲಿ ಮಗಳನ್ನು ಪರಮ ಮೂರ್ಖನೊಬ್ಬನಿಗೆ ಮದುವೆ ಮಾಡಿಕೊಡುವ ಹೆತ್ತವರು, ಯುದ್ಧಕ್ಕೆ ಹೋದ ಮಗ ತಿರುಗಿ ಬರುವ ಮೊದಲೇ ಸೊಸೆಯೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುವ ಮಾವಂದಿರು...

I am surprised! ಇವರು ಇಂಥ ಕೆಲಸಗಳಿಗೆ ಕೈ ಹಾಕುವಾಗ, ಮೊದಲೇ ತಮ್ಮೊಳಗಿನವನನ್ನು ಕೊಂದು ಕೊಂಡಿರುತ್ತಾರಾ? ಅಥವಾ ಇಂಥ ಕೆಲಸ ಘಟಿಸಿಹೋದ ತಕ್ಷಣ ಇವರೊಳಗಿನ ಮನುಷ್ಯ ಸತ್ತು ಹೋಗುತ್ತಾನಾ? ಗೊತ್ತಿಲ್ಲ.

ಆದರೆ ನನ್ನ ವಿಲಕ್ಷಣ ಬದುಕಿನ ನೂರೆಂಟು ತಿರುವುಗಳಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಮುಖಗಳನ್ನು ತೀರ ಹತ್ತಿರದಿಂದ ನೋಡಿದ್ದೇನೆ.

ಅವು 1983-84ರ ದಿನಗಳಿರಬೇಕು. ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ ಮಾಸ್ತರಿಕೆ ಮಾಡುತ್ತಿದ್ದ ಕಾಲವದು. ಅಷ್ಟು ಹೊತ್ತಿಗಾಗಲೇ ಪತ್ರಿಕೋದ್ಯಮದ ಮೊಟ್ಟ ಮೊದಲ ಮೊಳಕೆ ನನ್ನಲ್ಲಿ ಮೂಗೊಡೆದಿತ್ತು. ನಾವೇ ಕೆಲವರು ಗೆಳೆಯರು ಕಟ್ಟಿ ಬೆಳೆಸಿದ ಸಂಘಟನೆಯ ಪರವಾಗಿ ‘ಪ್ರಜಾ ಜಾಗೃತಿ’ ಎಂಬ ಹೆಸರಿನ ಕೈ ಬರಹದ ಪತ್ರಿಕೆ ಆರಂಭಿಸಿದ್ದೆವು. As usually ನಾನದರ ಸಂಪಾದಕ. ಲಲಿತೆಯ ತಮ್ಮ ಸತೀಶ ಅದನ್ನು ತನ್ನ ಅಪರೂಪದ ಕೈ ಬರಹದಲ್ಲಿ ಸಿದ್ಧಪಡಿಸುತ್ತಿದ್ದ. ನಂತರ ಅದನ್ನು ಸೈಕಲೋಸ್ಟೆಯಿಲ್ ಮಾಡಿಸಿ ಬಳ್ಳಾರಿಯ ಬೀದಿ ಬೀದಿಗಳಲ್ಲಿ ಐವತ್ತು ಪೈಸೆಗೊಂದರಂತೆ ಮಾರುತ್ತಿದ್ದೆವು. ಬಳ್ಳಾರಿಯ ಸಮಸ್ಯೆಗಳು, ನಮ್ಮ ಹೋರಾಟಗಳು, ಅವುಗಳ ವರದಿಗಳು, ಕೆಲವಾರು ಘಟನೆಗಳು ಇತ್ಯಾದಿಗಳನ್ನು ಸ್ಥೂಲವಾಗಿ ವಿವರಿಸುವ ಪುಟ್ಟ ಪತ್ರಿಕೆಯದು. ಅದರ ಸಲುವಾಗಿ ವರದಿಯೊಂದನ್ನು ಸಿದ್ಧಪಡಿಸಲೆಂದು ಬಳ್ಳಾರಿಯ ಜೈಲಿಗೆ ಹೋದಾಗಲೇ ನನಗೆ ಆ ಹೆಂಗಸು ಕಾಣಿಸಿದ್ದು. ಆಕೆಯ ಹೆಸರು ಹಂಪಮ್ಮ ಅಂತ ಇರಬೇಕು. ತೆಳ್ಳಗೆ, ಎತ್ತರಕ್ಕೆ, ಕೆಂಪಗಿದ್ದಳು. ತಾರುಣ್ಯ ಮುಗಿದುಹೋಗಿದೆಯೆಂಬುದಕ್ಕೆ ಮುಖದ ಮೇಲೆ ವೃದ್ಧಾಪ್ಯದ ಸಿಗ್ನೇಚರುಗಳಿದ್ದವು. ಖೈದಿಗಳನ್ನೆಲ್ಲ ಸಾಲಾಗಿ ಪರಿಚಯಿಸುತ್ತಿದ್ದ ಜೈಲರ್ ಈಕೆಯನ್ನು ತೋರಿಸಿ ಸಣ್ಣ ದನಿಯಲ್ಲಿ ಪಿಸುಗುಟ್ಟಿದ್ದ:

‘ಈಕೆ ಮಗನನ್ನು ಮರ್ಡರು ಮಾಡಿಸಿದ್ದಾಳೆ!’

ಹಂಪಮ್ಮ ಅಳುತ್ತಿದ್ದಳು. ಮುಖದಲ್ಲಿದ್ದ ವೇದನೆ ಮಗನ ಸಾವಿಗೆ ಸಂಬಂಧಿಸಿದ್ದು ಅಂತೇನೂ ಅನ್ನಿಸಲಿಲ್ಲ. ಆಕೆಗೆ ಜೈಲಿನಿಂದ ಹೊರಬಿದ್ದರೆ ಸಾಕಿತ್ತು. ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿದ್ದ ಬ್ಯಾಂಕ್ ನೌಕರನೊಬ್ಬನ ಹೆಂಡತಿ ಆಕೆ. ಇಬ್ಬರು ಮಕ್ಕಳ ತಾಯಿ. ಹಿರಿಯ ಮಗ ಆಗಲೇ ವಯಸ್ಸಿಗೆ ಬಂದಿದ್ದ. ಎರಡನೆಯ ಮಗಳಿಗಿನ್ನೂ ಐದು ವರ್ಷ. ಹಂಪಮ್ಮನಲ್ಲಿ ಹಣವಿತ್ತು, ನೆಮ್ಮದಿಯಿತ್ತು, ಸಾಮಾಜಿಕ ಸ್ಥಾನಮಾನಗಳಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಮಾತೃ ಸುಖವಿತ್ತು. ಆದರೆ ಹಂಪಮ್ಮ ಆಸೆಗೆ ಬಿದ್ದಳು. ತನ್ನ ಮಗನ ವಯಸ್ಸಿನವನೇ ಆದ ಹುಡುಗನೊಬ್ಬನೊಂದಿಗೆ ಸಂಬಂಧವಿಟ್ಟುಕೊಂಡು ಬಿಟ್ಟಳು. ಅದನ್ನು ಕಣ್ಣಾರೆ ನೋಡಿದ್ದೇ ಕಾರಣವಾಗಿ, ಮಗನ ವಿರುದ್ಧ ಮರಣ ಶಾಸನ ಬರೆದು ಸಹಿ ಮಾಡಿಬಿಟ್ಟಳು ಹಂಪಮ್ಮ. ಎಂಥ ಕ್ರೂರಿಯೆಂದರೆ ಆಕೆ, ಹೊಲಕ್ಕೆ ಬಂದ ಮಗನನ್ನು ತಾನೇ ಎದುರಿಗೆ ನಿಂತು ತನ್ನ ಇನಿಯನ ಕೈಗೆ ಕೊಡಲಿ ಕೊಟ್ಟು ಕತ್ತರಿಸಿ ಹಾಕಿಸಿದ್ದಳು. ಆಮೇಲೆ ಅತ್ಯಂತ ಸಹನೆಯಿಂದ ಅಲ್ಲೇ ನಿಂತು, ಹೊಲದಲ್ಲಿ ಗುಂಡಿ ತೆಗೆಯಿಸಿ ಮಗನ ಹೆಣ ಅದರೊಳಕ್ಕೆ ಕೆಡವಿ, ಸಂಜೆ ಮುಗಿದು ಕತ್ತಲು ದಟ್ಟವಾಗುವ ಹೊತ್ತಿಗೆ ಸಮಾಧಿ ಮಾಡಿಯೇ ಬಿಟ್ಟಿದ್ದಳು. ಎಲ್ಲಕ್ಕಿಂತ ದುರಂತವೆಂದರೆ, ಇಡೀ ಕೃತ್ಯಕ್ಕೆ ಆಕೆ ತನ್ನ ಐದು ವರ್ಷದ ಹಾಲುಗಲ್ಲದ ಮಗಳನ್ನು ಸಾಕ್ಷಿಯಾಗಿ ಇರಿಸಿಕೊಂಡಿದ್ದಳು. ಅದರ ಕಣ್ಣೆದುರಿನಲ್ಲೇ ಇದಿಷ್ಟೂ ನಡೆದುಹೋಗಿತ್ತು. ಆಮೇಲೆ ಏನಾಯಿತೆಂಬುದರ ವಿವರಗಳು ನನಗೆ ನೆನಪಿಲ್ಲ. ಅನಾಮಧೇಯ ವ್ಯಕ್ತಿಯೊಬ್ಬ ಬರೆದ ಸಿಗ್ನೇಚರ್ ಇಲ್ಲದ ಪತ್ರವೊಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿಗೆ ತಲುಪಿತ್ತು. ಹೆಣ ಹುಗಿದ ಜಾಗದಿಂದ ಹಿಡಿದು, ಕೊಲೆ ನಡೆದ ಕ್ಷಣದವರೆಗಿನ ಪ್ರತಿಯೊಂದನ್ನೂ ಅತ್ಯಂತ ವಿವರವಾಗಿ ಅದರಲ್ಲಿ ಬರೆಯಲಾಗಿತ್ತು. ಬಳ್ಳಾರಿಯ ಪೊಲೀಸರು ಹಂಪಮ್ಮನನ್ನು ಬಂಧಿಸಿದರು. ಅವಳೊಂದಿಗೆ ಸಂಬಂಧವಿರಿಸಿಕೊಂಡಿದ್ದ, ಅವಳ ಅಪ್ಪಣೆಯ ಮೇರೆಗೆ ಅವಳ ಮಗನನ್ನೇ ಕೊಲೆ ಮಾಡಿದ್ದ ಹುಡುಗನನ್ನು ಬಂಧಿಸಿದರು. ಹಾಲುಗಲ್ಲದ ಹುಡುಗಿ, ಹಂಪಮ್ಮನ ಮಗಳು ಆ ಕೊಲೆಗೆ ಸಾಕ್ಷಿಯಾದಳು. ನಾನು ಬಳ್ಳಾರಿಯ ಜೈಲಿಗೆ ವರದಿಗಾಗಿ ಹೋಗಿದ್ದಾಗ ಹಂತಕರಿಬ್ಬರೂ ಅಲ್ಲೇ ಇದ್ದರು. ಎರಡು ಕ್ಷಣಕ್ಕೊಮ್ಮೆ “ನಾನು ಮರ್ಡರು ಮಾಡಿಸಿಲ್ರೀ" ಅನ್ನುತ್ತಿದ್ದಳು ಹಂಪಮ್ಮ. ಮುಗಿಲು ಹರಕೊಂಡು ನೆಲಕ್ಕೆ ಬಿದ್ದವಳಂತೆ ಅಳುತ್ತಿದ್ದಳು.

ಅದು ಮಾತ್ರ ಪ್ರೇಮದ ಪಶ್ಚಾತ್ತಾಪವೇ?

ಗೊತ್ತಿಲ್ಲ. ಅವಳ ಇನಿಯ ಮಾತ್ರ ಜೈಲಿನ ಸರಳುಗಳ ಹಿಂದೆ ತೆಪ್ಪಗೆ, ಸ್ಥಿರವಾಗಿ ನಿಂತಿದ್ದ. ಕೊಲೆಗೆ ಸಂಬಂಧಿಸಿದಂತೆ ಯಾವುದೇ ಸಮಜಾಯಿಷಿ ಕೊಡಲು ಸಿದ್ಧನಿರಲಿಲ್ಲ. “ನಾನದನ್ನು ಮಾಡಿಯೇ ಇಲ್ಲ" ಎಂದು ವಿವರಿಸುವ ಪ್ರಯತ್ನ ಕೂಡ ಮಾಡಲಿಲ್ಲ. ವಯಸ್ಸಾದ ಪ್ರೇಯಸಿಯೊಬ್ಬಳಿಗಾಗಿ ಅವಳ ಮಗನನ್ನೇ ಹೊಲದಲ್ಲಿ ಕತ್ತರಿಸಿ ಮಣ್ಣು ಮಾಡಿಬಿಟ್ಟಿದ್ದ ಮಹಾ ಪಾತಕಿ. ಅವನಲ್ಲಿ ಪಶ್ಚಾತ್ತಾಪದ ತೇವವನ್ನು ಹುಡುಕುವುದರಲ್ಲಿ ಅರ್ಥವೇ ಇರಲಿಲ್ಲ. ಪಕ್ಕದಲ್ಲಿ ನಿಂತು ಅಪ್ಪಣೆ ಕೊಟ್ಟಿದ್ದಿದ್ದರೆ, ಅವನು ಹಂಪಮ್ಮನ ಮಗನೊಬ್ಬನನ್ನೇ ಏಕೆ; ಹಾಲುಗಲ್ಲದ ಆ ಐದು ವರ್ಷದ ಹುಡುಗಿಯನ್ನೂ ಕೊಂದು ಅದೇ ತೆಗ್ಗಿನೊಳಗೆ ಹೂತುಬಿಟ್ಟಿರುತ್ತಿದ್ದ. ಅವನನ್ನೇನು ಮಾತನಾಡಿಸುವುದಿದೆ? ನನಗೆ ಹಂಪಮ್ಮನ ಮಾತೃ ಹೃದಯದ ಪಶ್ಚಾತ್ತಾಪವನ್ನಷ್ಟೆ ನೋಡಬೇಕಿತ್ತು. ಹೆಂಗಸು ಶಾಶ್ವತವಾಗಿ ದುಷ್ಟಳಾಗಿರಲಾರಳು ಅಂದುಕೊಂಡಿದ್ದೆ. ಅದನ್ನು ಶಾಶ್ವತವಾಗಿ ನಂಬುವುದಕ್ಕಾಗಿ ನನಗೊಂದು ಪುರಾವೆ ಬೇಕಿತ್ತು. ಹಂಪಮ್ಮನ ಕಣ್ಣುಗಳಲ್ಲಿ ಪಶ್ಚಾತ್ತಾಪವನ್ನು ಹುಡುಕಿ ವಾಪಸ್ಸಾಗುತ್ತಿದ್ದೆ.

“ಇವನನ್ನ ಮಾತಾಡಿಸಿ ನೋಡಿ!" ಅಂದರು ಜೈಲರ್.

ಏನು ಮಾತಾಡಿಸಲಿ? ಹೆಂಗಸಿನ ಮೋಹಕ್ಕೆ ಬಿದ್ದು ಕೊಲೆ ಮಾಡಿದವನನ್ನ ಏನಂತ ಮಾತಾಡಿಸಲಿ? ಸುಮ್ಮನೆ ಅವನ ಸೆಲ್ ಎದುರಿಗೆ ನಿಂತೆ.

“ಕೊಲೆ ಬಗ್ಗೆ, ಹೂತು ಹಾಕಿದ ಹೆಣದ ಬಗ್ಗೆ ಪೊಲೀಸರಿಗೊಂದು ಪತ್ರ ಬಂದಿತ್ತಲ್ಲ? ಅದರ ಬಗ್ಗೆ ಕೇಳಿ" ಅಂದರು ಜೈಲರ್.

ಸರಳ ಹಿಂದೆ ನಿಂತ ಹುಡುಗನ ನಿರ್ಭಾವುಕ ಮುಖದಲ್ಲಿ ಇದ್ದಕ್ಕಿದ್ದಂತೆ ನೂರೆಂಟು ನೆರಳು ಸರಿದಾಡಿದವು. ಹೌದಲ್ಲ? ನಾನದನ್ನು ಮರೆತೇ ಬಿಟ್ಟಿದ್ದೇನೆ. ಪೊಲೀಸರಿಗೆ ಪತ್ರ ಬರೆದದ್ದಾರೂ ಯಾರು? ಆ ಕೊಲೆಗಿದ್ದ ಒಂದೇ ಒಂದು ಸಾಕ್ಷಿಯೆಂದರೆ; ಆ ಐದು ವರ್ಷದ ಹುಡುಗಿ. ಅವಳು ಬರೆದಿರುವ ಸಾಧ್ಯತೆಯಿರಲಿಲ್ಲ. ಅವಳು ಯಾರ ಮುಂದಾದರೂ ಹೇಳಿಕೊಂಡು, ಅದನ್ನು ಕೇಳಿಸಿಕೊಂಡವರು ಬರೆದಿದ್ದಾರೆಯೇ? ಅದಕ್ಕೂ ಅವಕಾಶವಿರಲಿಲ್ಲ. ಕೊಲೆ ನಡೆದ ದಿನದಿಂದ ಆ ಹುಡುಗಿಯನ್ನು ಮನುಷ್ಯರ ಸಂಪರ್ಕವೇ ದೊರಕದಂತೆ ಇಟ್ಟು ಬಿಟ್ಟಿದ್ದಳು ಹಂಪಮ್ಮ. ಅವಳನ್ನು ಕರೆದುಕೊಂಡು ಊರೂರು ತಿರುಗಿಬಿಟ್ಟಿದ್ದಳು. ಅವಳದು ಟಿಪಿಕಲ್ ಹಂತಕಿಯ ಮನಸ್ಸಿನಂತೆ ಕೆಲಸ ಮಾಡಿತ್ತು. ನೀವು ಬೇಕಾದರೆ ಹತ್ತು ಮರ್ಡರು ಕೇಸುಗಳನ್ನು ಅಭ್ಯಾಸ ಮಾಡಿ ನೋಡಿ; ಕೊಲೆಯಾಗುವ ತನಕ ಇರುವ ಧೈರ್ಯ ಕೊಲೆಯಾದ ನಂತರ ಕುಸಿದು ಹೋಗಿರುತ್ತದೆ. ಹಂತಕರು ತಕ್ಷಣ ಊರು ಬಿಡುತ್ತಾರೆ. ಗೊತ್ತು ಗುರಿಯಿಲ್ಲದೆ ಊರೂರು ಅಲೆಯುತ್ತಾರೆ. ಎಲ್ಲಕ್ಕಿಂತ ವಿಚಿತ್ರವೆಂದರೆ; ಅನೇಕ ಪ್ರಕರಣಗಳಲ್ಲಿ ಕೊಲೆಗಡುಕರು ಧರ್ಮಸ್ಥಳ, ಮಂತ್ರಾಲಯ, ಉಡುಪಿ, ಕೊಲ್ಲೂರು ಮುಂತಾದ ಧಾರ್ಮಿಕ ಕೇಂದ್ರಗಳಿಗೆ, ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಟ್ಟಿರುತ್ತಾರೆ.

ಪಾಪ ಭೀತಿಯಾ?

ಗೊತ್ತಿಲ್ಲ. ಹಂಪಮ್ಮ ಕೂಡ ಮಗಳನ್ನು ಕಟ್ಟಿಕೊಂಡು ಊರೂರು ಸುತ್ತಿದ್ದಳು. ಬಹುಶಃ ಕಣ್ಣಾರೆ ಕಂಡ ದೃಶ್ಯವನ್ನು ಮಗು ಮರೆತುಹೋಗಲಿ ಎಂಬ ಕಾರಣಕ್ಕಿರಬೇಕು. ಆದರೆ ಅವಳ ಇನಿಯ ಮಾತ್ರ ಊರು ಬಿಟ್ಟಿರಲಿಲ್ಲ. ಹೊಲದಲ್ಲಿ ಹುಡುಗನ ಹೆಣ ಹೂತುಹಾಕಿ ಬಂದವನು ತನ್ನ ಮನೆಯಲ್ಲಿ ಕದಲದೆ ಕುಳಿತು ಬಿಟ್ಟಿದ್ದ. ಅದು ಸುಲಭದ ಮಾತಲ್ಲ. ದೊಡ್ಡ mental preparation ಬೇಕು. ಪಕ್ಕದಲ್ಲಿ ಮಲಗಿದ ಹೆಂಡತಿಯ ಕತ್ತು ಹಿಸುಕಿ, ಅದೇ ಮನೆಯಲ್ಲಿ ಬದುಕು continue ಮಾಡುವುದಕ್ಕೆ ಅಳತೆ ಮೀರಿದ ದುಷ್ಟತನ ಬೇಕು. ವರದಕ್ಷಿಣೆಯ ಆಸೆಗಾಗಿ ಸೊಸೆಯನ್ನು ಸುಟ್ಟು ಹಾಕುವ ಅತ್ತೆಯರು, ಕೊಲೆಯ ನಂತರದ ದಿನಗಳಲ್ಲಿ ಶುದ್ಧ ಮನೋರೋಗಿಗಳಾಗಿ ಆ ಮನೆಯಲ್ಲಿ ಚಿಟಿಚಿಟಿ ಚೀರುತ್ತ ಓಡಾಡುವುದನ್ನು ನಾನು ಕಂಡಿದ್ದೇನೆ. ಆದರೆ ಈ ಹುಡುಗ ಏನೇನೂ ಆಗಿಲ್ಲವೆಂಬಂತೆ ದಿವ್ಯವಾಗಿ ಕುಳಿತು ಬಿಟ್ಟಿದ್ದ.

ಅದು ಹಾಳಾಗಿ ಹೋಗಲಿ.

“ಪೊಲೀಸರಿಗೆ ಪತ್ರ ಬರೆದದ್ದು ಯಾರು?" ಸರಳ ಮುಂದೆ ನಿಂತು ಕೇಳಿದೆ. ಹುಡುಗ ಕೊಂಚ ವಿಚಲಿತನಾದ. ನಿಂತಲ್ಲೇ ತುಳಿದಾಡಿದ. ಇಳಿಸಂಜೆಯ ಮಬ್ಬು ಬೆಳಕಿನಲ್ಲಿ ನನ್ನ ಕಣ್ಣುಗಳನ್ನೇ ನೋಡುತ್ತ,

“ನಾನೇ ಬರೆದೆ!" ಅಂದುಬಿಟ್ಟ.

ಬದುಕಿನ ನೂರು ಲೀಟರುಗಳ ಬ್ಯಾರಲ್ಲಿನೊಳಗಿನಿಂದ ಒಂದು ಚಿಟಿಕೆ ಆತ್ಮದ್ರೋಹವನ್ನು ಎತ್ತಿ ಈಚೆಗೆಸೆದವನೆಂದರೆ, ಅವನು! ಫಕ್ಕನೆ ಸರಳಿನಾಚೆಗೆ ನಿಂತವನ ಕೈ ಹಿಡಿದುಕೊಂಡೆ. ಅಲ್ಲಿ ಹಂತಕನೊಬ್ಬನ ನಿರ್ದಯಿ ತಂಪು ಇರಲಿಲ್ಲ. ಮನುಷ್ಯತ್ವಕ್ಕೆ ವಾಪಸು ಬಂದವನ warmth ಇತ್ತು. ನನ್ನನ್ನು ಬದುಕು ಆಶ್ಚರ್ಯಗಳಿಗೆ ಒಳಪಡಿಸುವುದೇ ಇಂತಹ ವಿಲಕ್ಷಣ ಸಂದರ್ಭಗಳಲ್ಲಿ! ಒಬ್ಬ ಕೊಲೆಗಾರನಂತಹ ಕೊಲೆಗಾರ ಕೂಡ ಹೇಗೆ ಒಳಗಿಂದೊಳಗೇ ಜೀವರಸಗಳ ಭಯಾನಕ reactionಗೆ ಒಳಗಾಗಿ, ತಾನೇ ಮಾಡಿದ ಪಾತಕವನ್ನು ನುಂಗಿ ಸುಮ್ಮನೆ ಕೂಡಲಾಗದೆ, ತಾನೇ ಅದನ್ನು ಹೊರಕ್ಕೆ ಹಾಕಿ ಜೈಲು ತಲುಪಿಬಿಡುವ ವಿಲಕ್ಷಣ ಪ್ರಕ್ರಿಯೆ ನಡೆದುಬಿಡುತ್ತದೆ ನೋಡಿ? ಹೆಣ ಹೂತು ಹಾಕಿದ ನಂತರ, ಇಳಿಸಂಜೆಯಲ್ಲಿ ಹಂಪಮ್ಮನ ಮಗು ಹೊಲದಲ್ಲೇ ಮಲಗಿ ನಿದ್ದೆ ಹೋಗಿದೆ. ಕೊಂದವನ ಮುಖದಲ್ಲಿ ಆಯಾಸವಿತ್ತೇನೋ, ಗೊತ್ತಿಲ್ಲ. ಹಂಪಮ್ಮನಲ್ಲಿ ಮಾತ್ರ ಮೃಗೀಯ ವಾಂಛೆಗಳು ಎದ್ದು ನಿಂತಿವೆ. ಹೆತ್ತ ಮಗನನ್ನು ಸಮಾಧಿ ಮಾಡಿದ ರಾತ್ರಿ ಕೂಡ ಆಕೆ, ಅದೇ ಹೊಲದಲ್ಲಿ ತನ್ನ ಇನಿಯನೊಂದಿಗೆ ಪಾಶವಿಕವಾದ ಸೆಕ್ಸನ್ನು ಅನುಭವಿಸಿದ್ದಾಳೆ. ಅನಂತರ ಅವನಿಗೊಂದಿಷ್ಟು ಹಣ ಕೊಟ್ಟು, ಮಗಳನ್ನು ಕರೆದುಕೊಂಡು ಊರು ಬಿಟ್ಟಿದ್ದಾಳೆ. ಹಿಂತಿರುಗುವ ಹೊತ್ತಿಗೆ ಎಲ್ಲವೂ ಮುಗಿದುಹೋಗಿ, ಎಲ್ಲವೂ ಮರೆತುಹೋಗಿ, ಮತ್ತೆ ದೇಹ ಸುಖದ ಹೊಸ ಅಧ್ಯಾಯ ಆರಂಭವಾಗಬಹುದು ಅಂದುಕೊಂಡಿದ್ದಾಳೆ. ಆದರೆ ಕೊಲೆ ಮಾಡಿ ಮನೆ ಸೇರಿದ ಹುಡುಗನಲ್ಲಿ ಇದ್ದಕ್ಕಿದ್ದಂತೆ ಮನುಷ್ಯ ಹುಟ್ಟಿಕೊಂಡು ಬಿಟ್ಟಿದ್ದಾನೆ. ಅವನು ಒಮ್ಮೆ ಹುಟ್ಟಿಕೊಂಡು ಬಿಟ್ಟರೆ ಮುಗಿಯಿತು; ನಿಮ್ಮನ್ನು ಸುಮ್ಮನಿರಲು ಬಿಡುವುದೇ ಇಲ್ಲ. ಮಾಡಿದ ಅತಿ ಸಣ್ಣ ತಪ್ಪಿಗೂ, ಕಡೇ ಪಕ್ಷ ಬಾಯಿಲ್ಲದ ಭಗವಂತನ ಮುಂದೆ ನಿಂತುಕೊಂಡು ಗಲ್ಲಗಲ್ಲ ಬಡಿದುಕೊಳ್ಳುವ ಮಟ್ಟಿಗಿನ ಪಶ್ಚಾತ್ತಾಪಕ್ಕಾದರೂ ಪ್ರೇರೇಪಿಸುತ್ತಾನೆ. ನಮ್ಮೊಳಗಿನ ಮನುಷ್ಯನಿಗೆ ಕಪಟ ಗೊತ್ತಿರುವುದಿಲ್ಲ. ಅವನು ನ್ಯಾಯಾಧೀಶನಿಗಿಂತ ನಿಷ್ಠುರಿ. ಯಾವುದಕ್ಕೂ ಒಣ ಸಾಕ್ಷ ಕೇಳುವುದಿಲ್ಲ. ಪುರಾವೆಗಾಗಿ ಹುಡುಕಾಡುವುದಿಲ್ಲ. ನಮ್ಮ ಕೈಗೆ ಹತ್ತಿದ ಮೊದಲ ರಕ್ತದ ಹನಿ ಕೂಡ ಅವನ ಗಮನಕ್ಕೆ ಬಿದ್ದು ಬಿಡುತ್ತದೆ. ಒಳಗಿನ ಮನುಷ್ಯ ಒಂದೇ ಸಮನೆ, ಮಾಡಿದ ಪಾಪಕ್ಕೆ ಕಂದಾಯ ಕೇಳತೊಡಗುತ್ತಾನೆ. ಒಂದು ಕ್ಷಣ ಸುಮ್ಮನೆ ಕೂಡಲು ಬಿಡಲಾರ. ಈ ಬಗ್ಗೆ ನಾನು ಸಂದರ್ಶಿಸಿದ ಪ್ರತಿಯೊಬ್ಬ ರೌಡಿಯನ್ನೂ ಕೇಳಿದ್ದೇನೆ: ಕೊಲೆ ಮಾಡಿದ ರಾತ್ರಿ ಯಾವನೂ ಕಣ್ತುಂಬ ನಿದ್ರೆ ಮಾಡಿದ ದಾಖಲೆಗಳಿಲ್ಲ. ಏಕೆಂದರೆ, ಒಳಗಿನ ಮನುಷ್ಯ ಎದ್ದು ಕುಳಿತಿರುತ್ತಾನೆ. ಅವನ ಜಿದ್ದು ದೊಡ್ಡದು. ಬೆನ್ನತ್ತಿ ಗಿರಮಿಟ್ಟು ತಿರುವುತ್ತಾನೆ. ಕಡೆಗೊಂದು ದಿನ, ತನ್ನಿಂದ ತಾನು ತಪ್ಪಿಸಿಕೊಳ್ಳುವ ದಾರಿಯೇ ಕಾಣದೆ ಅತ್ಯಂತ ರಹಸ್ಯವಾಗಿ, ಶ್ರದ್ಧೆಯಿಂದ ಕುಳಿತು ಪೊಲೀಸರಿಗೊಂದು ಅನಾಮಧೇಯ ಪತ್ರ ಬರೆದು ತಾನೇ ಜೈಲಿನತನಕ ನಡೆದು ಬಂದು ಬಿಡುತ್ತಾನೆ. ಒಳಗಿನ ಮನುಷ್ಯನಿನ್ನೂ ಬದುಕಿದ್ದಾನೆಂಬುದಕ್ಕೆ ಅದೊಂದೇ ಸಾಕ್ಷ ಸಾಕು. ಅವನನ್ನೂ ಕೊಂದು ಬಿಟ್ಟರೆ ಅದು ಎರಡನೇ ಕೊಲೆ. ಹಂಪಮ್ಮ ಆ ಎರಡನೇ ಕೊಲೆಯನ್ನು ಯಾವಾಗ ಮಾಡಿದ್ದಳು? ತನ್ನೊಳಗಿನ ಮನುಷ್ಯನನ್ನು ಯಾವಾಗ ಕೊಂದಿದ್ದಳು. ಮಗನ ಹತ್ಯೆಗೆ ಮುಂಚೆಯೋ? ಮಗನ ಹತ್ಯೆಯ ಕ್ಷಣದಲ್ಲೋ? ಹತ್ಯೆಯಾದ ನಂತರ ಇರುಳು ಕವಿದ ಹೊಲದಲ್ಲಿ ಅನುಭವಿಸಿದ ಮೈಥುನ ಸುಖದ ಕ್ಷಣಗಳಲ್ಲೋ? ಮಗಳನ್ನು ಕರೆದುಕೊಂಡು ಹಂಪೆಗೆ ಹೋಗಿ ವಿರೂಪಾಕ್ಷೇಶ್ವರನ ಮುಂದಕ್ಕೆ ಕೈ ಮುಗಿದು ನಿಂತು, “ನನ್ನನ್ನು ಪೊಲೀಸರಿಂದ ರಕ್ಷಿಸು" ಎಂದು ಕೇಳಿಕೊಂಡಳಲ್ಲ; ಆವಾಗಲೋ?

ಮುಂದೇನಾಯಿತೆಂಬುದು ನನಗೆ ಗೊತ್ತಿಲ್ಲ. ಅವರಿಬ್ಬರೂ ಖುಲಾಸೆಯಾದರೋ, ಅವರಿಗೆ ಶಿಕ್ಷೆಯಾಯಿತೋ ಗೊತ್ತಾಗಲಿಲ್ಲ. ಆದರೆ ನಾನು ಮಾತ್ರ ಮಾಡಿದ ತಪ್ಪುಗಳೆಡೆಗೆ ಒಂದು ನಿಚ್ಚಳವಾದ ದೃಷ್ಟಿ ಬೆಳೆಸಿಕೊಳ್ಳುತ್ತ ಬಂದುಬಿಟ್ಟೆ.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 October, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books