Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನಾವು ಏನೇ ನಖರೆ ಮಾಡಿದರೂ ಅವನ ಮನೆ ಬಾಗಿಲಿಗೆ ಹೋಗಬೇಕಾಗುತ್ತೆ!

ಇತ್ತೀಚೆಗೊಂದು ಮಧ್ಯಾಹ್ನ ದಾವಣಗೆರೆಯಿಂದ ರವೀಂದ್ರನಾಥ್ ಬಂದಿದ್ದ. ಬಾಲ್ಯದ ಗೆಳೆಯ. ಬಳ್ಳಾರಿಯಲ್ಲಿದ್ದವನು. ನಮ್ಮೆಲ್ಲರಿಗಿಂತ ಮುಂಚಿತವಾಗಿಯೇ ಅವನಿಗೆ ಮೀಸೆ ಬಂದಿದ್ದವು. ಅವನ ತಮ್ಮ ಶಶಿಗೆ ಪ್ರಿಡಾಮಿನೆಂಟ್ ಆಗಿ ಕಾಣುತ್ತಿದ್ದುದೊಂದು ಮಚ್ಚೆ ಇತ್ತು. ಅವರಿಬ್ಬರೂ ಈಗ ದಾವಣಗೆರೆಯಲ್ಲಿ ಸ್ಥಿರವಾಗಿದ್ದಾರೆ. ರವೀಂದ್ರ ಎಣ್ಣೆ ವ್ಯಾಪಾರ ಮಾಡುತ್ತಾನೆ. ಶಶಿಗೆ ಎಲ್.ಐ.ಸಿ.ಯ ವ್ಯಾಪಾರ. ಸುಮಾರು ಮೂವತ್ತು ವರ್ಷಗಳ ಹಿಂದಿನ ಗೆಳೆಯರು. ಮಾತಾಡುತ್ತ ಕುಳಿತಾಗ ಯಾವ್ಯಾವುದೋ ನೆನಪುಗಳ ಕದಲಿಕೆ. ಕಾಲದ ತಿರುಗಣಿಗೆ ಬಿದ್ದು ಮರೆತೇ ಹೋದ ಗೆಳೆಯರನೇಕರು ನೆನಪಿನ ದೋಣಿ ಹತ್ತಿ ತೇಲಿ ಬಂದಿದ್ದರು. ಅವರೆಲ್ಲರ ಬಗ್ಗೆ ಅಲ್ಲದಿದ್ದರೂ, ಅವರಲ್ಲಿ ಕೆಲವರ ಬಗ್ಗೆಯಾದರೂ ನಿಮಗೆ ಹೇಳಬೇಕು. ಹೇಳೇಳುತ್ತಲೇ ನಿಮಗೆ ನನ್ನ ಪರಿಚಯವಾಗಬೇಕು. ‘ನಿನ್ನ ಗೆಳೆಯರ‍್ಯಾರು ಎಂಬುದನ್ನು ಹೇಳು. ನೀನು ಎಂಥವನು ಅಂತ ಹೇಳ್ತೀನಿ!’ ಎಂಬುದೊಂದು ಇಂಗ್ಲಿಷ್ ಗಾದೆಯಂತೆ. ಗೊತ್ತಿಲ್ಲ. ಗಾದೆಗಳನ್ನು ಯಾರು ಸೃಷ್ಟಿ ಮಾಡುತ್ತಾರೋ ಸರಿಯಾಗಿ ಗೊತ್ತಿಲ್ಲ. ಸೃಷ್ಟಿಯಾದ ಗಾದೆಗಳೆಲ್ಲ ಸರಿಯಾದಂಥವಲ್ಲ ಅಂತ ಮಾತ್ರ ಖಂಡಿತ ಹೇಳಬಲ್ಲೆ! ನಿಮಗೆ ಬೇಸರವಾಗಬಹುದೇನೋ; ನನ್ನ ಗೆಳೆಯರನ್ನು ನೋಡಿ. ನಾನೆಂಥವನು ಅಂತ ಮಾತ್ರ ನೀವು ಖಂಡಿತ ಹೇಳಲಾರಿರಿ.

ಅವರಲ್ಲಿ ಮಹಾನ್ ಮೇಧಾವಿಗಳಿದ್ದರು. ಪರಮ ಪೆದ್ದರಿದ್ದರು. ಹುಟ್ಟಾ ಕ್ರಿಮಿನಲ್‌ಗಳಿದ್ದರು. ಜನ್ಮತಃ ಸಂಭಾವಿತರಿದ್ದರು. ನಿಜಕ್ಕೂ ಪರಾಕ್ರಮಿಗಳಿದ್ದರು. ಯಾವತ್ತಿಗೂ ಸೋಲದ ಆಟಗಾರರಿದ್ದರು. ಆಗರ್ಭ ಶ್ರೀಮಂತರಿದ್ದರು. ನನಗಿಂತ ದೈನೇಸಿಯಾದ ಬಡವರಿದ್ದರು. ವೃತ್ತಿ ನಿರತ ವೇಶ್ಯೆಯರ ಮಕ್ಕಳಿದ್ದರು. ಶುದ್ಧ ಆಚಾರ್ಯರ ಪರಿಶುದ್ಧ ಸಂತಾನಗಳಾಗಿದ್ದವರಿದ್ದರು. ನನ್ನ ಗೆಳೆಯರ ರೇಂಜು ದೊಡ್ಡದು. ವೆರೈಟಿ ಮತ್ತೂ ದೊಡ್ಡದು. ಒಂದು ಊರಲ್ಲ. ಒಂದು ಕೇರಿಯಲ್ಲ. ಬಳ್ಳಾರಿ, ತುಮಕೂರು, ಧಾರವಾಡ, ಹುಬ್ಬಳ್ಳಿ, ಹರಿದ್ವಾರ, ಬೆಂಗಳೂರು, ಗೌಹಾತಿ, ಅರುಣಾಚಲ ಪ್ರದೇಶ, ರಾಯಚೂರು, ಗುಲಬರ್ಗಾ, ಅಮೆರಿಕ, ಅಬುದಬಿ.....ಹೀಗೆ ಎಲ್ಲಿ ಕೈ ಇಟ್ಟರೂ ಅಲ್ಲೊಂದು ಗೆಳೆತನದ ಗುರುತಿದೆ. ನಾನು ಗುರುತಿಸಬಲ್ಲುದೊಂದು ವಿಳಾಸವಿದೆ. ನನ್ನನ್ನು ಗುರುತಿಸಬಲ್ಲ, ಆದರಿಸಬಲ್ಲ ಮಿತ್ರ ಹೃದಯವೊಂದಿದೆ. ಹೀಗಾಗಿ ನಾನು ಸಂತುಷ್ಟ. ಆ ಕಾರಣಕ್ಕಾಗಿಯೇ ಅದೃಷ್ಟವಂತ.

Buy this book

ತಮಾಷೆಯೆಂದರೆ, ಇವತ್ತು ದಿನ ಬೆಳಗಾದರೆ ನಡುರಾತ್ರಿಯ ತನಕ ಅಕ್ಷರಗಳಲ್ಲೇ ಮುಳುಗಿಹೋಗಿರುವ ನನಗೆ, ಈಗೊಂದು ನಲವತ್ತು ವರ್ಷಗಳ ಕೆಳಗೆ, ಅಂದರೆ ನನ್ನ ತಾರುಣ್ಯದ ಮೊದಲ ಜಾವದ ತನಕ ಒಬ್ಬೇ ಒಬ್ಬ ಸಾಹಿತಿಯ ಗೆಳೆತನವೂ ಇರಲಿಲ್ಲ. ನನ್ನ ಓರಗೆಯ ಲೇಖಕರಾದ ನಾಗತಿಹಳ್ಳಿ, ಮಾವಿನಕುಳಿ, ಜಯಂತ್, ಬಿ.ಎಲ್. ವೇಣು, ಪ್ರತಿಭಾ, ನೇಮಿಚಂದ್ರ ಮುಂತಾದವರನ್ನೆಲ್ಲ ನಾನು ನೋಡಿ ಹೆಚ್ಚೆಂದರೆ ಮೂವತ್ತು ವರ್ಷಗಳಾಗಿರಬಹುದು. ನಾವೆಲ್ಲ ಹೆಚ್ಚು ಕಡಿಮೆ ಒಟ್ಟಿಗೇ ಬರೆಯಲಾರಂಭಿಸಿದವರು. ಆದರೆ 1983-84ರ ತನಕ ಅಪ್ಪಿತಪ್ಪಿ ಕೂಡ ಸಾಹಿತ್ಯ ಸಮ್ಮೇಳನಗಳಿಗೆ, ಸೆಮಿನಾರು ಕವಿಗೋಷ್ಠಿಗಳಿಗೆ ಕಾಲಿಡದ ನನಗೆ ಈ ಎಲ್ಲ ಹೆಸರುಗಳೂ ಬಹುದೂರದ ಅಚ್ಚರಿಗಳೆ. ಇವರೆಲ್ಲ ನನಗಿಂತ ಶ್ರೇಷ್ಠರು, ತುಂಬ ಓದಿಕೊಂಡವರು, ನನಗಿಂತ ಚೆನ್ನಾಗಿ ಬರೆಯಬಲ್ಲವರು, ಸಾಹಸಿಗಳು, ದೊಡ್ಡ ಊರುಗಳಲ್ಲಿರುವವರು! ಇವರ ಮುಂದೆ ನಾನೇನು, ನನ್ನ ತಾಕತ್ತಾದರೂ ಏನು ಅಂದುಕೊಳ್ಳುತ್ತಿದ್ದೆ. ನಾನು ಅಸ್ತಿತ್ವದಲ್ಲಿದ್ದ ಸಮಾಜಕ್ಕೆ, ನಾನು ವ್ಯವಹರಿಸುತ್ತಿದ್ದ ಗೆಳೆಯರಿಗೆ ಈ ಅಕ್ಷರ ಲೋಕವೆಂಬುದು, ಅದು ಬೇರೆಯೇ ಗ್ರಹದ ಮಾತು. ನಾನೀಗ ಧಾರವಾಡದಲ್ಲಿ ಎಂ.ಎ. ಮಾಡ್ತಿದೀನಿ ಎಂದು ಬಳ್ಳಾರಿಯ ಗೆಳೆಯನೊಬ್ಬನಿಗೆ ಹೇಳಿದಾಗ “ಹೌದಾ, ಅಬ್ಬ! ಎಷ್ಟು ಕೊಡ್ತಾರೆ?" ಎಂದು ಕಣ್ಣರಳಿಸಿ ಕೇಳಿದ್ದ. ಅಂಥ ಗೆಳೆಯರು ನನ್ನವರು.

ಅವರ ಪೈಕಿ ನಂದಕುಮಾರ್ ಮತ್ತು ತಾಜುದ್ದೀನ್ ಎಂಬಿಬ್ಬರು ಮಿತ್ರರಿಗೆ ಬಳ್ಳಾರಿಯ ಸೆಶನ್ಸ್ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಾಗ ಕೋರ್ಟಿನ ಆವರಣದಲ್ಲಿ ನಿಂತು ನಂದುವಿನ ಕೈ ಹಿಡಿದು ಮಗುವಿನಂತೆ ಅತ್ತು ಬಿಟ್ಟಿದ್ದೆ. ಅವರಿಬ್ಬರೂ ಸೇರಿಕೊಂಡು ನನ್ನ ಇನ್ನೊಬ್ಬ ಗೆಳೆಯನಾದ ಮಲ್ಲಿಕಾರ್ಜುನ ಎನ್ನುವವನನ್ನು ಕೇವಲ ನೂರ ಹತ್ತು ರುಪಾಯಿಗಳಿಗಾಗಿ ಇರಿದು ಕೊಲೆ ಮಾಡಿಬಿಟ್ಟಿದ್ದರು. ಆ ಕೇಸು ಮುಗಿದು ಅದೆಷ್ಟೋ ವರ್ಷಗಳ ನಂತರ ನಂದು, ಜೈಲಿನಿಂದ ಈಚೆಗೆ ಬರುವ ಹೊತ್ತಿಗೆ ಕೇವಲ ‘ರವಿ’ಯಾಗಿದ್ದ ನಾನು, ರವಿ ಬೆಳಗೆರೆಯಾಗಿ ಬಿಟ್ಟಿದ್ದೆ. ನಂದುವೂ ತುಂಬ ಬದಲಾಗಿದ್ದ. ಒಂದು ಎಳ್ಳುಕಾಳಿನಷ್ಟೂ ಬದಲಾಗದೆ ಇದ್ದವನು ತಾಜುದ್ದೀನ್ ಮಾತ್ರ. ಭೇಟಿಯಾದ ಮರುಕ್ಷಣವೆ ‘ನಂಬರ್ ಮಾರೇಂಗೆ ಚಲ್’ ಅಂದಿದ್ದ. ಬಳ್ಳಾರಿಯ ಭಾಷೆಯಲ್ಲಿ ಹಾಗೆಂದರೆ, ವೇಶ್ಯಾವಾಟಿಕೆಗೆ ಹೋಗೋಣ ಅಂತ. ಇವತ್ತಿಗಾದರೂ ತಾಜ್ ಬದಲಾಗಿದ್ದಾನೆ ಅಂತ ನನಗನ್ನಿಸುವುದೇ ಇಲ್ಲ.

ಹಾಗೆ ಕೊಲೆಗಡುಕರಾಗಿ ಹೋದ ಇಬ್ಬರು ಮಿತ್ರರಿಂದ ಬೇರ್ಪಟ್ಟ ನಾನು ಕೆಲವೊಮ್ಮೆ ಅವರಿಗಾಗಿ ಹಲುಬುತ್ತ, ಸಂಕಟಪಡುತ್ತಾ ಹೊಸಗೆಳೆಯರನ್ನು ಹುಡುಕುತ್ತಾ ಓಡಾಡಿಕೊಂಡಿದ್ದೆ. ಪ್ರತಿನಿತ್ಯ ಸಿಗುವ ‘ಹಾಯ್ ಬಾಯ್’ ಗೆಳೆಯರು ಹೇರಳವಾಗಿದ್ದರು. ಅವರಲ್ಲಿ ಕೆಲವರು ನಿಜಕ್ಕೂ ಸಭ್ಯರಾಗಿದ್ದರು. ನಾನು ಕದ್ದು ಕುಡಿಯುತ್ತೇನೆ ಎಂಬ ವಿಷಯವೇ ಅವರ ಪಾಲಿಗೆ ದೊಡ್ಡ ಆಘಾತ. “ರವಿ ಮಾಂಸ ತಿಂತಾನಂತೆ" ಎಂಬುದನ್ನು ಸತ್ಯನಾರಾಯಣ ಪೇಟೆಯ ಖಾಲಿ ಜಗುಲಿಯ ಮೇಲೆ ಅವರೆಲ್ಲ ಕುಳಿತು ದಿನಗಟ್ಟಲೆ ಮಾತನಾಡಿಕೊಳ್ಳುತ್ತಿದ್ದರು. ಅವರಲ್ಲಿ ಕೆಲವರಿಗೆ ನನ್ನೊಂದಿಗೆ ಬಂದು ಒಂದು ಸಲಕ್ಕಾದರೂ ಮಾಂಸದ ರುಚಿ ನೋಡುವ ಆಸೆಯಿತ್ತು. ಧೈರ್ಯವಿರಲಿಲ್ಲ. ಧೈರ್ಯ ಅಲ್ಪಸ್ವಲ್ಪ ಪ್ರಮಾಣದಲ್ಲಿದ್ದವರಿಗೆ ದುಡ್ಡಿರಲಿಲ್ಲ. ಅಂಥ ದಿನಗಳಲ್ಲಿ ನನಗೆ ತೀರ ಅನಿರೀಕ್ಷಿತವಾಗಿ ಜೊತೆಯಾದವನು ರತ್ನ! ಅವನ ಪೂರ್ತಿ ಹೆಸರು ರತ್ನಾಕರ್. ನನ್ನ ಜೀವನದಲ್ಲಿ ನಾನು ನೋಡಿದ ಮೊದಲ ರೌಡಿ. ಬಳ್ಳಾರಿಯ ರೈಲ್ವೆ ಕಾಲನಿಯಲ್ಲಿ ಬಹುಶಃ ಇವತ್ತಿಗೂ ಅವನ ಪರಾಕ್ರಮಗಳ ಕಥೆಗಳನ್ನು ಹೇಳುವವರಿದ್ದಾರೆ. ಅವನು ಕುಳ್ಳಕ್ಕಿದ್ದ. ಆದರೆ ಬಂಡೆಯಂತೆ ಸ್ಥಿರವಾಗಿದ್ದ. ಮೊಟ್ಟಮೊದಲ ಬಾರಿಗೆ ಅವನನ್ನು ನಾನು ಸಂಧಿಸಿದ್ದು ಬಳ್ಳಾರಿಯ ವಾರ್ಡ್ ಲಾ ಹೈಸ್ಕೂಲಿನ ಕಂಪೋಂಡು ಕಟ್ಟೆಯ ಮೇಲೆ. ಕಪ್ಪಗಿನ ಆಳು. ನೆತ್ತಿಯ ಕೂದಲು ಚೇಳುಕೊಂಡಿಗಳಂತೆ ಸುಳಿ ತಿರುಗಿರುತ್ತಿದ್ದವು. ಯಾರೇ ಆದರೂ ನಿಂತು ನೋಡುವಷ್ಟು ಅದ್ಭುತವಾಗಿ ಕಬ್ಬಡ್ಡಿ ಆಡುತ್ತಿದ್ದ. ಕಾಲಲ್ಲಿ ಸದಾ ಸವೆದುಹೋದ ರಬ್ಬರು ಚಪ್ಪಲಿ. ಜೊತೆಗೊಂದು ಸೈಕಲ್ಲು. ಅದರ ಜೊತೆಗಿಬ್ಬರು ಸ್ನೇಹಿತರು. ಅವನಿಗೆ ಒಂದಿಬ್ಬರು ಪ್ರೇಯಸಿಯರೂ ಇದ್ದರು. ಪರಿಚಯವಾದ ಕೆಲವೇ ದಿನಗಳಲ್ಲಿ ರತ್ನಾಕರ್ ನನ್ನನ್ನು ತನ್ನ ಆಪ್ತವಲಯದ ಹುಡುಗನನ್ನಾಗಿಸಿಕೊಂಡು ಬಿಟ್ಟ. ಮಹಾನ್ ಮಡಿವಂತರ ಸತ್ಯನಾರಾಯಣ ಪೇಟೆಯನ್ನು ಧಿಕ್ಕರಿಸಿ ನಾನು ರೈಲ್ವೆ ಕಾಲನಿಯ ಪರಿಶಿಷ್ಟ ಗುಡಿಸಲುಗಳಿಗೆ ವಲಸೆ ಹೋಗಿಬಿಟ್ಟೆ. ಹೆಚ್ಚು ಕಡಿಮೆ ಅಲ್ಲೇ ಇರತೊಡಗಿದೆ. ಬಹುಶಃ ನಾನು ಪಕ್ಕಾ ಮಾಂಸಹಾರಿಯಾದದ್ದೇ ಆವಾಗ. ಬೆಳಗಿನ ಜಾವಕ್ಕೇ ಹೋಗಿ ರತ್ನನನ್ನು ಎಬ್ಬಿಸುತ್ತಿದ್ದೆ. ರಾತ್ರಿಯಿಡೀ ಮರದ ಮೊದ್ದು(log)ಗಳನ್ನು ಸುಟ್ಟು ಕುದಿಸಿರುತ್ತಿದ್ದ ಮೂಳೆಗಳ ಸೂಪ್, ಮಣ್ಣಿನ ಗಡಿಗೆಗಳಿಂದ ಬಸಿದುಕೊಂಡು ಕುಡಿಯುತ್ತಿದ್ದೆವು. ಆಮೇಲೆ ಸೈಕಲ್ಲು ಹತ್ತಿಕೊಂಡು ಹತ್ತಿರದ ಯಾವುದಾದರೂ ಬಾವಿಗೆ ಹೋಗಿ ಈಸು ಬಿದ್ದರೆ ಅದೊಂದು ದೊಡ್ಡ ವ್ಯಾಯಾಮ. ಆಮೇಲೆ ಮತ್ತೆ ಸೈಕಲ್ಲು ಹತ್ತಿ ಕೌಲ್ ಬಜಾರಕ್ಕೆ ನುಗ್ಗಿದರೆ, ಅಲ್ಲಿ ಎತ್ತಿನ ಮಾಂಸದ ಬಿಸಿ ಬಿಸಿ ಹಬೆಯಾಡುವ ಬಿರಿಯಾನಿ! ಕಾಲೇಜಿಗೆ ಹೋದರೂ ಆದೀತು. ಹೋಗದಿದ್ದರೂ ಆದೀತು. ಜೊತೆಗಿದ್ದಷ್ಟು ದಿವಸ ರೈಲ್ವೆ ರತ್ನಾಕರ್ ನನಗೆ ವ್ಯಾಯಾಮ ಕಲಿಸಿದ. ಸಮೃದ್ಧವಾಗಿ ತಿನ್ನುವುದನ್ನು ಕಲಿಸಿದ. ಎಲ್ಲಕ್ಕಿಂತ ಮಿಗಿಲಾಗಿ ಧೈರ್ಯವಾಗಿರುವುದನ್ನು ಕಲಿಸಿದ. ಮಹಾ ಅಳುಕಿನ, ಅಂಜುಬುರುಕ ಸ್ವಭಾವದವನಾಗಿದ್ದ ನನಗೆ ಆ ಧೈರ್ಯ ಅದೆಲ್ಲಿಂದ ಬಂತೋ ಕಾಣೆ. ಸತ್ಯನಾರಾಯಣ ಪೇಟೆಯ ಹುಡುಗರನ್ನು ಸಲೀಸಾಗಿ ಬೆದರಿಸಿಕೊಂಡು ಓಡಾಡತೊಡಗಿದೆ. ರತ್ನಾಕರ್ ನನ್ನಿಂದ ಯಾವ ಪಾತಕವನ್ನೂ ಮಾಡಿಸಲಿಲ್ಲ. ಅವನೊಬ್ಬ ಶುದ್ಧ ಒರಟನೇ ಹೊರತು ಪಾತಕಿಯಲ್ಲ. ಬಳ್ಳಾರಿಯ ಆಗಿನ ಶಾಸಕ ಭಾಸ್ಕರ್‌ನಾಯ್ಡುವಿನ ಪರಮ ರೌಡಿ ಮಗನೊಬ್ಬನನ್ನು ಅವನ ಅಡ್ಡೆಗೇ ನುಗ್ಗಿ ತಾರಾಮಾರಿ ಬಾರಿಸಿ ಬಂದಿದ್ದ. ನಮಗೆ ಅದೇ ಖುಷಿ! ಅಕ್ಷರಶಃ ಅರ್ಧ ಬಳ್ಳಾರಿಯನ್ನಾಳುತ್ತಿದ್ದ ಶಾಸಕನೊಬ್ಬನ ಮಗನನ್ನು ಈ ರೈಲ್ವೆ ಕಾಲನಿಯ ದಲಿತರ ಹುಡುಗ ಬರಿಗೈಲೇ ನುಗ್ಗಿ ಬಡಿದು ಹಾಕಿದನಲ್ಲಾ ಎಂಬ ಸಂತೋಷ. ರತ್ನಾಕರ್‌ನೊಂದಿಗೆ ಹಾಗೆಯೇ ಮುಂದುವರೆದಿದ್ದಿದ್ದರೆ ಬದುಕು ಎಲ್ಲಿಗೆ ಹೋಗಿ ತಲುಪುತ್ತಿತ್ತೋ ಹೇಳಲಾರೆ. ಕಾಲೇಜಿಗೆ ಹೋಗಲಿ, ಬಿಡಲಿ, ಫೆಬ್ರುವರಿ ಮಾರ್ಚ್ ಬಂತೆಂದರೆ ಸಾಕು ಉಳಿದೆಲ್ಲ ಚಟುವಟಿಕೆ ಗಂಟು ಕಟ್ಟಿಟ್ಟು ಓದಲು ಕೂತು ಬಿಡುತ್ತಿದ್ದೆ. ಹೀಗಾಗಿ ಎಲ್ಲಿಯೂ ಫೇಲಾಗದೆ ಬಿ.ಎ. ಮುಗಿಸಿದೆ. ಇದೆಲ್ಲದರ ಮಧ್ಯೆ ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದ ಪ್ರೇಮದ ಬದುಕು ಅನಿರೀಕ್ಷಿತವಾಗಿ ಕತ್ತರಿಸಿಕೊಂಡು ಬಿತ್ತು. ಹಿಮಾಲಯದ ಮೇಲೆ ಬೆವರಿಳಿಸಿ ವಾಪಸು ಬಂದಿದ್ದೂ ಆಯಿತು. ಬಂದವನೇ ಎಂ.ಎ. ಡಿಗ್ರಿಗಾಗಿ ಧಾರವಾಡಕ್ಕೆ ಹೊರಟು ಹೋದೆ. ಮಧ್ಯೆ ಒಮ್ಮೆ ರಜೆಗೆಂದು ಬಳ್ಳಾರಿಗೆ ಬಂದಾಗಲೇ ರತ್ನಾಕರ್ ಸಿಕ್ಕು,

“ಎಲ್ಲಿ ಮರಿ ಕಾಣಿಸ್ತಾನೇ ಇಲ್ಲ?" ಅಂದದ್ದು.

“ಧಾರವಾಡದಲ್ಲಿ ಎಂ.ಎ. ಮಾಡ್ತಿದೀನಿ" ಅಂದೆ.

“ಅಬ್ಬ! ಎಂ.ಎ.? ಎಷ್ಟು ಕೊಡ್ತಾರಲೆ?" ಕಣ್ಣರಳಿಸಿ ಕೇಳಿದ್ದ ಅಮಾಯಕ ರತ್ನಾಕರ್. ಆಮೇಲೆ ಅವನ ರೌಡಿತನದ ಸದ್ದೂ ಅಡಗಿಹೋಯಿತು. ನಾಯ್ಡುವಿನ ಮಕ್ಕಳು ಅವನ ಮೇಲೆ ಸೇಡು ತೀರಿಸಿಕೊಂಡರು. ಬಿರುಸಾದ ಬಂಡೆಯಂತಿದ್ದ ರತ್ನಾಕರ್‌ನ ಆರೋಗ್ಯವೂ ಕುಗ್ಗಿ ಹೋಯಿತು. ಇಷ್ಟೆಲ್ಲ ಆಗುವುದರೊಳಗಾಗಿ ನಾನು ಮತ್ತೆ ಬಳ್ಳಾರಿಗೆ ಬಂದು ಲೆಕ್ಚರರ್ ನೌಕರಿ ದೊರಕಿಸಿಕೊಂಡು, ಪ್ರಜಾ ಜಾಗೃತಿ ಸಂಘ ಕಟ್ಟಿಕೊಂಡು ಒಂದರ್ಥದಲ್ಲಿ ನಾಯಕನೇ ಆಗಿಹೋಗಿದ್ದೆ. ಅದೊಂದು ದಿನ ಸಂಘದ ವತಿಯಿಂದ ಹಂಪೆ ಎಕ್ಸ್‌ಪ್ರೆಸ್ಸಿಗಾಗಿ ಹೋರಾಟ ಮಾಡುತ್ತಾ ಒಂದು ರೈಲ್ ರೋಕೋ ಕಾರ್ಯಕ್ರಮ ಮಾಡಿದೆವು. ನನ್ನೊಂದಿಗೆ ನೂರಾರು ಜನರ ದಂಡು. ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲಿಸಿ ಭರ್ಜರಿ ಭಾಷಣ ಜಡಿದು ವಿಜಯೋತ್ಸಾಹದಿಂದ ಹಿಂತಿರುಗುತ್ತಿದ್ದಾಗ ಬಾಗಿಲಲ್ಲೊಂದು ಆಕೃತಿ ಕಾಣಿಸಿತು.

“ಅರೆ ರತ್ನಾ...!" ಅನ್ನುತ್ತ ಹತ್ತಿರಕ್ಕೆ ಹೋದೆ.

“ಏನ್ಸಾರ್ ಚೆನ್ನಾಗಿದ್ದೀರಾ?" ರತ್ನಾಕರ್ ಹಿಂಜರಿಯುತ್ತ ಮೆಲು ದನಿಯಲ್ಲಿ ಕೇಳಿದ.

“ಏನ್ ರತ್ನಾ? ನನ್ನನ್ಯಾಕೆ ಸಾರ್ ಅಂತೀದಿ?" ದೊಡ್ಡ ದನಿಯಲ್ಲಿ ಕೇಳಿದೆ.

“ಷ್! ನೀವಿವಾಗ ದೊಡ್ಡ ಲೀಡರು ಸಾರ್. ನಮ್ಮಂಥೋರ ಹತ್ರ ಹಿಂಗೆಲ್ಲಾ ನಿಂತು ಮಾತಾಡಬಾರದು. ನಾನಿವಾಗ ರೈಲ್ವೆ ಕೆಲಸದಲ್ಲಿದೀನಿ..." ರತ್ನಾಕರ್ ಸಂಕೋಚದಿಂದ ಗೊಣಗಿದ. ಅವನು ನಿಂತ ಭಂಗಿ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಮೈಮೇಲೆ ರೈಲ್ವೆ ಯೂನಿಫಾರ‍್ಮ್ ಇತ್ತು. ಆರೋಗ್ಯ ದಿಗಿಲು ಬಿದ್ದ ಮಗುವಿನ ಮುಖದಂತಿತ್ತು. ಅಕ್ಕರೆಯಿಂದ ಪಕ್ಕದಲ್ಲಿ ನಿಂತು ಹೆಗಲ ಮೇಲೆ ಕೈ ಹಾಕಿ ಜೊತೆಗಿದ್ದ ಗೆಳೆಯರಿಗೆಲ್ಲ, “ಒಂದು ಕಾಲಕ್ಕೆ ನಮ್ಮ ಗುರೂ ಕಣ್ರಯ್ಯಾ" ಅಂತ ಪರಿಚಯಿಸಿದೆ.

“ಆ ಕಾಲ ಮುಗೀತಲ್ಲ ಸಾರ್?" ಅಂದವನೇ ನನ್ನ ಕೈ ಕುಲುಕಿ ರತ್ನಾಕರ್ ಆಗಷ್ಟೇ ಬಂದ ರೈಲೊಂದರ crowdನಲ್ಲಿ ಕಣ್ಮರೆಯಾಗಿ ಹೋದ. ಬದಲಾಗಿದ್ದು ನಾನೋ? ಅವನೋ? ಕಾಲವೋ?

ಇನ್ನೊಬ್ಬ ಗೆಳೆಯನಿದ್ದ. ಏನಂತ ಬರೆಯಲಿ? ತುಂಬ ಸಭ್ಯ ತಂದೆಯ ಸಭ್ಯ ಮಗ. ಅವನ ತಾಯಿ ದೇವರಂಥ ಹೆಣ್ಣು ಮಗಳು. ತಂಗಿ ಬಂಗಾರದಂಥವಳು. ಹೆಸರು ಮಂಜುನಾಥ ಅಂತ ಇಟ್ಟುಕೊಳ್ಳಿ. ಅವನನ್ನು ಮೊಟ್ಟ ಮೊದಲ ಬಾರಿಗೆ ನಾನು ನೋಡಿದ್ದು ಬಳ್ಳಾರಿಯ ಮುನಿಸಿಪಲ್ ಹೈಸ್ಕೂಲ್ ಗ್ರೌಂಡಿನಲ್ಲಿ. ಅಲ್ಲೊಂದು ಇಂದ್ರಾಗಾಂಧಿಕಟ್ಟೆ ಅಂತ ಇತ್ತು. ಯಾವಾಗಲೋ ಇಂದಿರಾಗಾಂಧಿ ಬಂದಿದ್ದಾಗ ಆಕೆಯ ಭಾಷಣಕ್ಕಾಗಿ ಕಟ್ಟಿಸಿದ ವೇದಿಕೆಯದು. ಈ ಬೆಳ್ಳಗಿನ ಸುಕೋಮಲ ಹುಡುಗ ಆ ಕಟ್ಟೆಯ ಮೇಲೆ ಮೈ ಮರೆತು ನಿದ್ದೆಹೋಗಿದ್ದ. ಆಗಾಗ ಸಾಯಂಕಾಲಗಳಲ್ಲಿ ಸಿಗರೇಟು ಸುಡಲಿಕ್ಕೆಂದೇ ಹೋಗಿ ಆ ಕಟ್ಟೆಯ ಮೇಲೆ ಕೂಡುತ್ತಿದ್ದೆ. ಅವತ್ತು ಮಂಜುನಾಥನ ಪರಿಚಯವಾಯಿತು. ಎಲ್ಲಿಯವನೋ, ಯಾವ ಊರಿನವನೋ ಒಂದೂ ಗೊತ್ತಿಲ್ಲ. ಹೊಸಪೇಟೆಯವನೆಂದು ಹೇಳಿಕೊಂಡ. ಬ್ಯಾಂಕ್ ಆಫೀಸರನ ಮಗನೆಂದು ವಿವರಿಸಿದ. ತಂದೆಯೊಂದಿಗೆ ಜಗಳವಾಗಿ ಮನೆಯಲ್ಲಿ ಅರವತ್ತು ರುಪಾಯಿ ಕದ್ದು ಓಡಿ ಬಂದು ಬಿಟ್ಟಿದ್ದೇನೆಂದ. ಎಲ್ಲವನ್ನೂ ನಂಬಿದೆ. ನಂಬಿ ಮನೆಗೆ ಕರೆದುಕೊಂಡು ಹೋದೆ. ಮಂಜು ನನ್ನ ಮನೆಯಲ್ಲಿ ಸುಮಾರು ಹದಿನೈದು ದಿನ ಇದ್ದ. ಅಮ್ಮ ನನಗಿಂತ ಹೆಚ್ಚಾಗಿ ಅವನನ್ನು ನಂಬಿದ್ದಳು. ನನ್ನನ್ನು ನೋಡಿಕೊಂಡಷ್ಟೇ ಚೆನ್ನಾಗಿ ನೋಡಿಕೊಂಡಳು. ಹದಿನಾರನೆಯ ದಿನ ಆ ಹುಡುಗ ಈಗ ಬರುತ್ತೇನೆಂದು ಹೋದವನು ಎಷ್ಟು ಹೊತ್ತಾದರೂ ಹಿಂತಿರುಗಿ ಬರಲಿಲ್ಲ. ಅವತ್ತು ನಮ್ಮ ಮನೆಯಲ್ಲಿದ್ದ ಒಂದೇ ಒಂದು ರಿಸ್ಟ್ ವಾಚು ಮತ್ತು ಅಮ್ಮನದೊಂದು ಎರಡೆಳೆಯ ಚಿನ್ನದ ಸರ ಕಣ್ಮರೆಯಾದವು.

“ನೀನು ಅವನನ್ನು ಅಷ್ಟೊಂದು ನಂಬಿ, ಅಷ್ಟೊಂದು ಪ್ರೀತಿಯಿಂದ ಕಾಣಬಾರದಾಗಿತ್ತು!" ಅಂತ ಅಮ್ಮನ ಮೇಲೆ ರೇಗಿದೆ.

“ಹೋಗಲಿ ಬಿಡು, ನಿಯತ್ತಿನಿಂದ ದುಡಿದದ್ದಾದರೆ ಇವತ್ತಲ್ಲ ನಾಳೆ ವಾಪಸು ಕೊಡ್ತಾನೆ. ತೊಂದರೆಯಲ್ಲಿರೋ ಹುಡುಗ!" ಅಂದುಬಿಟ್ಟಳು ಅಮ್ಮ. ಅವತ್ತೇ ನಾನು ಹೊಸಪೇಟೆಗೆ ಹೋದೆ. ಅವನು ಹೇಳಿದ ಮನೆ ಸಿಕ್ಕಿತು. ಅಲ್ಲೊಬ್ಬ ಬ್ಯಾಂಕ್ ಆಫೀಸರನೂ ಸಿಕ್ಕಿದ. ಆದರೆ ಅವರಿಗೆ ಮಗನೇ ಇರಲಿಲ್ಲ. ತುಂಬ ದಿನ ನಾನು ಈ ಬಗ್ಗೆ ತಳಮಳಗೊಂಡಿದ್ದೆ. ಎದುರಿಗೆ ಸಿಕ್ಕರೆ ಮಂಜುವನ್ನು ಸಿಗಿದೇ ಹಾಕುತ್ತೇನೆಂದುಕೊಂಡು ಓಡಾಡುತ್ತಿದ್ದೆ. ಆಮೇಲೆ ಅದನ್ನೆಲ್ಲ ಮರೆತೇ ಹೋದೆ.

ಮುಂದೆ ಎಷ್ಟೋ ವರ್ಷಗಳ ನಂತರ ಹೆಚ್ಚು ಕಡಿಮೆ ಮಂಜು ಬಂದ ರೀತಿಯಲ್ಲೇ ಒಂದು ಹುಡುಗಿ ಬಂತು. ಆ ಹೊತ್ತಿಗೆ ನಮ್ಮ ಮನೆ ಚಿಕ್ಕದೊಂದು ಸಂತೆಯಂತಾಗಿ ಬಿಟ್ಟಿತ್ತು. ಮನೆ ಬಿಟ್ಟು ಬಂದವರು, ಆಸ್ಪತ್ರೆಗಳಿಗೆ ತೋರಿಸಿಕೊಳ್ಳಲೆಂದು ಹಳ್ಳಿಗಳಿಂದ ಬರುತ್ತಿದ್ದವರು, ವಂಚಿತರು, ಲೋಕನಿಂದಿತರು, ನಮ್ಮಂತೆಯೇ ಹತಭಾಗ್ಯರು, ಶಾಲೆಗೆ ಹೋಗುತ್ತಿದ್ದ ಹುಡುಗರು ಹೀಗೆ ನಾನಾ ತರಹದ ಜನ. ಎಲ್ಲರೂ ನಮಗಿಂತ ಹೆಚ್ಚು ಬಡವರು ಅನ್ನುವುದನ್ನು ಬಿಟ್ಟರೆ ನಾವಾದರೂ ಅವರನ್ನೆಲ್ಲ ಸಾಕುವ ಸ್ಥಿತಿಯಲ್ಲಿರಲಿಲ್ಲ. ಆದರೂ ಹೇಗೋ ದಿನ ಕಳೆದು ಹೋಗುತ್ತಿದ್ದವು. ಇದ್ದಾಗ ಹೊಟ್ಟೆ ತುಂಬ ಉಣ್ಣುತ್ತಿದ್ದೆವು. ಇಲ್ಲದಿದ್ದಾಗ, ಹೇಳಿಕೊಳ್ಳಲು ಕತೆಗಳಿರುತ್ತಿದ್ದವು. ಹಂಚಿಕೊಳ್ಳಲು ವ್ಯಥೆಗಳಿರುತ್ತಿದ್ದವು. “ಸಹಾಯ ಕೇಳಿ ಮನೆತನಕ ಬಂದವರಿಗೆ ಇಲ್ಲಾ ಅನ್ನಬೇಡ. ಅವರಿಗೆ ತೊಂದರೆ ಪದೇ ಪದೇ ಬರುವುದಿಲ್ಲ. ಯಾವತ್ತೋ ಒಂದು ದಿನ ಸಹಾಯ ಮಾಡಬೇಕು ಅಂತ ನಿನಗೇ ಅನ್ನಿಸಬಹುದು. ಅವತ್ತು ನೀನು ಸಹಾಯ ಮಾಡಲಿಕ್ಕೇಂತ ಅವರ ಮನೆತನಕ ಹೋದೀಯ. ಅವರು ಬೇಡ ಅಂದು ಬಿಟ್ರೆ?" ಇದು ನಮ್ಮಮ್ಮನ ಸಿದ್ಧಾಂತ. ಅದೆಷ್ಟು ಹುಡುಗಿಯರನ್ನು ತಂದಿಟ್ಟುಕೊಂಡು ಓದಿಸಿದಳೋ, ಅದೆಷ್ಟು ಹುಡುಗಿಯರಿಗೆ ಮದುವೆ ಮಾಡಿಸಿದಳೋ? ಹುಚ್ಚು ತಾಯಿ. ಆಕೆಯ ನೆಮ್ಮದಿಯ ಮೂಲಗಳಿದ್ದುದೇ ಅಂಥ ಕೆಲಸಗಳಲ್ಲಿ.

ಆಶ್ರಯ ಕೇಳಿಕೊಂಡು ಮನೆಗೆ ಬಂದ ಪ್ರತಿ ಹುಡುಗಿಗೂ ಆಕೆಯದೊಂದು ಆರಂಭಿಕ ಬೋಧನೆಯಿರುತ್ತಿತ್ತು. “ಮೊದಲು ನಾಲ್ಕು ಅಕ್ಷರ ಕಲಿ. ನಿನ್ನ ಅನ್ನ ನೀನು ಸಂಪಾದಿಸು. ಯಾವ ಕಾರಣಕ್ಕೂ ಗಂಡಸಿನ ಆಧೀನಳಾಗಬೇಡ. ಕೈಯಲ್ಲಿರುವ ನೌಕರಿ ಬಿಡಬೇಡ. ಮತ್ತು ನನ್ನ ಮಗ ಶುದ್ಧ ಕುಡುಕ. ಅವನನ್ನು ಪ್ರೀತಿಸಬೇಡ!"

ನಿಮಗೆ ಆಶ್ಚರ್ಯವಾಗಬಹುದು. ಈ ಅದ್ಭುತವಾದ ಬೋಧನೆಯನ್ನು ನನ್ನ ತಾಯಿ, ನನ್ನ ಗೆಳತಿಯಾಗಿ ಮನೆಗೆ ಬಂದ ಲಲಿತೆಗೂ ನೀಡಿದ್ದಳು. ಇವಳು ಕೇಳಲಿಲ್ಲ. ಆ ಮಾತು ಬೇರೆ. ಅದೊಂದು ಸಂಜೆ ಮಂಜುವಿನಂತೆಯೇ ನಿರಾಶ್ರಿತಳಾಗಿ, ಮನೆ ಬಿಟ್ಟು ಓಡಿ ಬಂದಿದ್ದ ಹುಡುಗಿಯೊಬ್ಬಳನ್ನು ಕೂಡಿಸಿಕೊಂಡು ಅಮ್ಮ ನೀಡುತ್ತಿದ್ದ ಹಿತೋಪದೇಶವನ್ನು ಕೇಳಿಸಿಕೊಂಡೆ. ನನಗದು ಕುಡಿಯುವ ಹೊತ್ತು. ಯಾರಿಂದಲೋ ಅಷ್ಟು ದ್ರವ ತರಿಸಿಕೊಂಡು ನನ್ನ ಹಂದಿಗೂಡಿನಂತಹ ಕೊಳಕು ಕೋಣೆಯ ಬಾಗಿಲು ಹಾಕಿಕೊಂಡು ಕುಡಿಯುತ್ತ, ಹಾಡು ಕೇಳುತ್ತ, ಆಗಿಷ್ಟು ಈಗಿಷ್ಟು ಅಳುತ್ತ ಉಳಿದು ಬಿಟ್ಟೆ. ಮಾರನೆಯ ದಿನ ಆ ಹುಡುಗಿಯನ್ನು ಸುಮಿತ್ರ ಎಂಬುದಾಗಿ ಪರಿಚಯ ಮಾಡಿಸಿದಳು ಅಮ್ಮ. ಅವಳಿಗೊಂದು ಎಲ್ಲಾದರೂ ಕೆಲಸ ಕೊಡಿಸು ಅಂದಳು. ಅವಳನ್ನು ಹೊರಕ್ಕೆ ಕಳಿಸಿ ಅತ್ಯಂತ ರಹಸ್ಯವಾಗಿ ಹಿಂದಿಯಲ್ಲಿ ಹೇಳಿದಳು. ‘ಆ ಹುಡುಗಿ ಗರ್ಭವತಿಯಾಗಿದ್ದಾಳೆ!’

ಇನ್ನೆಲ್ಲಿಯ ಕೆಲಸ? ಮೊದಲು ಅವಳಿಗೆ ಮದುವೆ ಮಾಡೋಣವೆಂದೆ. ಸುಮಿತ್ರಳನ್ನೇ ಕರೆಸಿ ಸಾದ್ಯಂತವಾಗಿ ವಿಚಾರಿಸಿದೆ. ಅಂಥ ಬುದ್ಧಿವಂತಳಲ್ಲದ, ಆದರೆ ನಿಜಕ್ಕೂ ಸಭ್ಯ ಮನಸ್ಸಿನ ಹುಡುಗಿ. ಅವಳು ಪ್ರೀತಿಸಿದ ಹುಡುಗ ಸರ್ಕಾರಿ ನೌಕರಿಯಲ್ಲಿದ್ದ. ಸದ್ದಿಲ್ಲದೆ ಬಸಿರು ಮಾಡಿ ತನಗೆ ಸಂಬಂಧವೇ ಇಲ್ಲವೆಂಬಂತೆ ಕುಳಿತಿದ್ದ. ಸುಮಿತ್ರಳ ಮನೆಯಲ್ಲಿ, ಅವರು ಈ ಸಂಬಂಧವನ್ನು ಒಪ್ಪುವ ಛಾನ್ಸೇ ಇರಲಿಲ್ಲ. ಹೇಳದೆ ಕೇಳದೆ ಬಸಿರು ಹೊತ್ತು ಓಡಿ ಬಂದಿದ್ದಳು. ಗರ್ಭವಿಳಿಸಿಕೊಂಡು, ಸಿಕ್ಕ ನೌಕರಿ ಮಾಡಿಕೊಂಡು ಎಲ್ಲಾದರೂ ಬದುಕು ಕಳೆಯುತ್ತೇನೆ ಅಂದಳು. ಕಳೆಯಲಿಕ್ಕೆ ಬದುಕೇನು ಚಿಲ್ಲರೆಯಾ? ಅವಳಿಗಿನ್ನೂ ಇಪ್ಪತ್ತೊಂದು ವರ್ಷ. ಇನ್ನೂ ಎಪ್ಪತ್ತೊಂಬತ್ತು ವರ್ಷ ಬದುಕಿರಬೇಕು. ಗರ್ಭ ಇಳಿಸಿಕೊಳ್ಳುವುದು ಹಾಗಿರಲಿ; ಗರ್ಭಕೋಶವನ್ನೇ ಹರಿದ ಊಟದೆಲೆಯಂತೆ ಮಾಡಿಬಿಡುತ್ತದೆ ಸಮಾಜ. ಅಮ್ಮ, ನೀನು ಸುಮ್ಮನಿರು ಅಂದವನೇ ಸುಮಿತ್ರಳಿಂದ ಅವಳ ಪ್ರಿಯಕರನ ಆಫೀಸು ವಿಳಾಸ ಪಡೆದುಕೊಂಡು ನೇರವಾಗಿ ಮುನಿರಾಬಾದಕ್ಕೆ ಹೋದೆ. ಆಫೀಸಿನಲ್ಲಿ ಗೆಳೆಯರೊಂದಿಗೆ ಹರಟುತ್ತ ಕುಳಿತಿದ್ದ ಸುಂದರಾಂಗ. ಶಶಿಧರ ಅಂತ ಅವನ ಹೆಸರು. ‘ತೆಪ್ಪಗೆ ನನ್ನೊಂದಿಗೆ ಇಳಿದು ಈಚೆಗೆ ಬರದೆ ಹೋದರೆ ರಸ್ತೆಯ ಮೇಲೆ ನಿಂತಿರುವ ಮೆಟಡೋರಿನಲ್ಲಿ ಕೂತಿರುವ ನನ್ನ ಜನ ಆಫೀಸಿನೊಳಕ್ಕೆ ನುಗ್ಗಿ ಹೊತ್ತೊಯ್ಯುತ್ತಾರೆ. ಎಲ್ಲರ ಮುಂದೆ ಅಸಹ್ಯ ಮಾಡಿಕೊಳ್ಳಬೇಡ’ ಅಂತ ವಿವರಿಸಿದೆ. ಬೇರೆ ಮಾತೇ ಆಡದೆ ಎದ್ದು ಬಂದ ಶಶಿಧರ. ಮೆಟಡೋರು ಹತ್ತಿಸಿಕೊಂಡು ಬಳ್ಳಾರಿಗೆ ಕರೆತಂದೆ. ಮಾರನೆಯ ಮಧ್ಯಾಹ್ನದೊಳಗಾಗಿ ಅವರಿಬ್ಬರ ಮದುವೆಯೂ ನಡೆದು ಹೋಯಿತು. ಸುಮಿತ್ರಳ ಮುಖ ಊರಗಲ.

“ಮಾಡೋದು ಮಾಡಿದಿರಿ. ನಂಗೂ ಅವಳನ್ನು ಬೀದಿಗೆ ಬಿಡೋ ಉದ್ದೇಶವಿರಲಿಲ್ಲ. ಈಗೇನಂತೆ, ಸಂಸಾರ ಮಾಡ್ತೀನಿ. ಆದರೆ ಹುಡುಗಿ ಕಡೆಯವರಿಂದ ಏನಾದ್ರೂ ಕೊಡಸರಿ" ಎಂದು ಶುರುವಿಟ್ಟ ಶಶಿಧರ. ನನಗೂ ಅದರಲ್ಲಿ ಅಂಥಾ ತಪ್ಪು ಕಾಣಲಿಲ್ಲ. ಮತ್ತದೇ ಮೆಟಡೋರು ಹೊರಡಿಸಿಕೊಂಡು ಹೊರಟೆ. ಈ ಬಾರಿ ಹೊಸಪೇಟೆಗೆ. ಇವರಿಬ್ಬರ ಪ್ರೇಮ ಮೊಳಕೆಯೊಡೆದು ಮೊಟ್ಟೆಯಿಟ್ಟದ್ದೇ ಅಲ್ಲಿ! ಸುಮಿತ್ರಳ ಮನೆಯ ಮುಂದೆ ಮೆಟಡೋರ್ ನಿಲ್ಲಿಸಿ ದಿಬ್ಬಣದ ಸಮೇತ ಇಳಿದು ಹೋಗಿ ಬಾಗಿಲು ತಟ್ಟಿದಾಗ ಜಗತ್ತಿನ ಪರಮಾಶ್ಚರ್ಯಗಳಲ್ಲಿ ಒಂದು ಎಂಬಂತಹ ಘಟನೆ ನಡೆಯಿತು.

ಬಾಗಿಲು ತೆರೆದವನು ಮಂಜು!

ಏಳೆಂಟು ವರ್ಷಗಳ ಹಿಂದೆ ಅಮ್ಮನ ವಾಚು ಕದ್ದವನು. ಅಮ್ಮನ ಎರಡೆಳೆ ಚೈನು ಕದ್ದವನು. ಸುಮಿತ್ರಳ ಖಾಸಾ ಅಣ್ಣ. ಅದೆಲ್ಲ details ಬರೆಯುತ್ತ ಕುಳಿತರೆ ಮಂಜುವಿಗೆ ಇವತ್ತು ಮತ್ತೆ ನೋವಾಗುತ್ತದೆ. ಅದೆಲ್ಲ ಬೇಡ. ಸುಮಿತ್ರಳನ್ನು ಶಶಿಧರನ ಮುನಿರಾಬಾದದ ಮನೆಗೆ ತಲುಪಿಸಿ, ಅವನ ತಂದೆ ತಾಯಿ ಮನೆ ತುಂಬಿಸಿಕೊಂಡು ಎಲ್ಲವೂ ‘ಶುಭಂ’ ಎಂಬ ಮುಕ್ತಾಯಕ್ಕೆ ಬಂದ ನಂತರ ಮೆಟಡೋರಿನ ಪಕ್ಕದಲ್ಲಿ ಬಿಗಿಯಾಗಿ ನನ್ನ ಕೈ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಿದ್ದ ಮಂಜು. ಅಣ್ಣನ ಸ್ಥಾನದಲ್ಲಿ ನಿಂತು ನೀನೇ ಎಲ್ಲ ಮಾಡಿದೆ. ಇವಳು ಮನೆ ಬಿಟ್ಟು ಹೋದ ಮೇಲೆ ಮನೆಮಂದಿಯೆಲ್ಲ ವಿಷ ಕುಡಿದು ಸಾಯಬೇಕೆಂದಿದ್ದೆವು. ದೇವರ ಹಾಗೆ ಬಂದು ಮರ್ಯಾದೆ ಉಳಿಸಿದೆ. ನಿಮ್ಮ ಮನೆಯ ವಾಚು, ಸರ ಅವತ್ತೇ ಮಾರಿಬಿಟ್ಟೆ. ಇನ್ನೊಂದೆರಡು ವಾರ ಟೈಮು ಕೊಡು, ನಾನೇ ಖುದ್ದಾಗಿ ಬಂದು ಅಮ್ಮನ ಕಾಲಲ್ಲಿ ಬಿದ್ದು ಕ್ಷಮೆ ಕೇಳುತ್ತೇನೆ, ಅಂದ. ವಾಪಸು ಬಂದು ಅಮ್ಮನಿಗೆ ಹೇಳಿದೆ. ಅಮ್ಮ ಕಾಲು ನೋಡಿಕೊಂಡಳು. ಕಡೆತನಕ ನೋಡಿಕೊಳ್ಳುತ್ತಲೇ ಉಳಿದಳು. ಮಂಜು ಬರಲೇ ಇಲ್ಲ.

ಇವತ್ತು ಮಂಜು, ಸುಮಿತ್ರ, ಶಶಿಧರ ಎಲ್ಲರೂ ಬೆಂಗಳೂರಿನಲ್ಲೇ ಇದ್ದಾರೆ. ರವಿಯಣ್ಣಾ ಅನ್ನುತ್ತ ಸುಮಿತ್ರ ಎಲ್ಲಿದ್ದರೂ ಓಡಿ ಬರುತ್ತಾಳೆ. ಶಶಿಧರ ಇವತ್ತಿಗೂ ಪ್ರೀತಿಯಿಂದ ಮಾತಾಡಿಸುತ್ತಾನೆ. ತನ್ನ ಪ್ರಮೋಷನ್ನು, ಪರಾಕ್ರಮ, ಲಂಚ, ಗಂಡ-ಹೆಂಡಿರ ಅನ್ಯೋನ್ಯತೆ, ಮಕ್ಕಳ ಬುದ್ಧಿವಂತಿಕೆ ಎಲ್ಲವುಗಳ ವರದಿಯನ್ನೂ ಕಾಲದಿಂದ ಕಾಲಕ್ಕೆ ಒಪ್ಪಿಸುತ್ತಾನೆ. ಮಂಜುವಿನದೇ ಸಮಸ್ಯೆ. ಅವನು ಅಕಸ್ಮಾತ್ತಾಗಿ ಇದಿರಾಗುತ್ತಾನೆ. ಒಮ್ಮೆ ನಕ್ಕು ತಲೆ ಬಗ್ಗಿಸುತ್ತಾನೆ. ಕೊಡಲಾರದ ಸ್ಥಿತಿಯಲ್ಲೇನಿಲ್ಲ. ಹಳೆಯ ವಾಚಿಗೆ ಇವತ್ತು ಹೆಚ್ಚೆಂದರೆ ಐದುನೂರು ರುಪಾಯಿ. ಎರಡೆಳೆ ಸರಕ್ಕೊಂದು ಐದು ಸಾವಿರ. ಮಂಜುವಿಗದು ದೊಡ್ಡ ಮೊತ್ತವಲ್ಲ. ಆದರೆ ಅವನು ಕೊಡಲಾರ.

ಇಸಿದುಕೊಂಡು ‘ಹೋಗಲಿ ಬಿಡಯ್ಯ’ ಅಂತ ಬೆನ್ನು ತಟ್ಟಬೇಕಾದಾಕೆ ಈ ಜಗತ್ತಿನಲ್ಲೇ ಇಲ್ಲ.

ಇದ್ದಿದ್ದರೂ ಆಕೆಯೇ ಹಿಂದೊಮ್ಮೆ ಹೇಳಿದಂತೆ, ಮನೆ ಬಾಗಿಲ ತನಕ ಬಂದಾಗ ಇಸಿದುಕೊಳ್ಳಬೇಕಾದ ವ್ಯಕ್ತಿ ಬೇಡ ಅಂದುಬಿಟ್ಟಿದ್ದರೆ?

ಅಮ್ಮ ಏನನ್ನುತ್ತಿದ್ದಳೋ ಈಗ ಹೇಳಲಾರೆ.

ಈ ಪ್ರಕರಣದ ಎಲ್ಲರ ಹೆಸರುಗಳನ್ನೂ ಬದಲಿಸಿದ್ದೇನೆ. ನಾನು ಮಾಡಬಹುದಾದ್ದು ಅಷ್ಟೇ.

ಮನುಷ್ಯರನ್ನು ಬದಲಿಸಲು ಸಾಧ್ಯವೇ?

ನಿಮ್ಮವನು
ಆರ್.ಬಿ.

 

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 29 September, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books