Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಮನಸನ್ನು ತುಂಬ ಹಿಡಿತದಲ್ಲಿಟ್ಟುಕೊಂಡ ಗಟ್ಟಿಗ ಅವನು: ನನ್ನ ಪ್ರಾಣ ಮಿತ್ರ ಉದಯ

ಅವನು ಛಟ್ಟನೆ ಎದ್ದು ನಿಂತ.

ಗೆಳೆಯರು ಅವನನ್ನೇ ಆಶ್ಚರ್ಯದಿಂದ ನೋಡಿದರು. ಟೇಬಲ್‌ನ ಮೇಲೆ ಅವನು ಅರ್ಧದಷ್ಟೇ ಕುಡಿದಿದ್ದ ವಿಸ್ಕಿ ಗ್ಲಾಸ್ ಇತ್ತು. “This is the last drink. Take a bet!" ಅಂದುಬಿಟ್ಟ. ಅದೇ ಕೊನೆ. ಸರಿ ಸುಮಾರು ನಲವತ್ತು-ಐವತ್ತು ವರ್ಷಗಳ ಹಿಂದಿನ ಮಾತು. ಆತ ಮತ್ತೆ ಕುಡಿದಿಲ್ಲ. ಆತನ ಹೆಸರು ಅಮಿತಾಬ್ ಬಚ್ಚನ್. ಅಷ್ಟೇಕೆ ನಾನು-ನನ್ನ ಕೆಲವು ಮಿತ್ರರು ವರ್ಷಗಟ್ಟಲೆ ಧಾರಾಕಾರ ಕುಡಿದಿದ್ದೇವೆ. ಹೀಗೇ ಹಟಕ್ಕೆ ಬಿದ್ದು ಒಂದು ಕ್ಷಣದಲ್ಲಿ ನಿರ್ಧಾರ ಮಾಡಿ ಆ ಅಭ್ಯಾಸವನ್ನು ಅಸಹ್ಯವೆಂಬಂತೆ ಕೊಡವಿಯೂ ಬಿಟ್ಟಿದ್ದೇವೆ. ಅಮಿತಾಬ್ ಗೆಳೆಯರೊಂದಿಗೆ ಕುಡಿಯುತ್ತಿದ್ದ. ಅವರಲ್ಲಿ ಯಾರೋ ಕೆಣಕಿದರು. “ನಿನ್ನ ಕೈಲೆಲ್ಲಾಗುತ್ತೆ ಕುಡಿತ ಬಿಡೋದು?" ಅಂದಿದ್ದಿರಬೇಕು. ಅಷ್ಟು ಸಾಕಲ್ಲವೇ? Hurt ಆಗಲಿಕ್ಕೆ, ಛಲಕ್ಕೆ, ಹ್ಯಾಂವಕ್ಕೆ ಇನ್ನೇನು ಬೇಕು? ಅಮಿತ್ ಛಲಕ್ಕೆ ಬಿದ್ದ. ಇವತ್ತಿನ ಈ ಘಳಿಗೆಯ ತನಕ ಆತ ವಿಸ್ಕಿ ಮುಟ್ಟಿಲ್ಲ. That is the end.

ಅವತ್ತು ಅವನಿಗೆ ನನ್ನ ಕುರಿತು ಒಂದು ಕುತೂಹಲವಿತ್ತು. “ರವೀ, ನಿಜವಾಗ್ಲೂ ಕುಡಿಯೋದು ಬಿಟ್ಟುಬಿಟ್ಟಿದ್ದೀಯಾ?" ಅಂತ ಕೇಳಿದ್ದ.

ಇವತ್ತು ಆ ಮಿತ್ರ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಐ.ಸಿ.ಯುನಲ್ಲಿ ಸುಮ್ಮನೆ ಮಲಗಿದ್ದಾನೆ. ಅವನು ಎಚ್ಚರದಲ್ಲಿದ್ದಾನಾ? ಅವನಿಗೆ ಎಲ್ಲವೂ ಗೊತ್ತಾಗುತ್ತಿದೆಯಾ? ನೋಡಲು ಹೋದವರನ್ನು ಗುರುತು ಹಿಡಿಯುತ್ತಾನಾ? ಎಲ್ಲವೂ ಪ್ರಶ್ನೆಗಳೇ. ಯಾವ ಉತ್ತರವನ್ನು ನಂಬೋದು? ಆ ನನ್ನ ಜೀವನ್ಮಿತ್ರನ ಹೆಸರು,

ಉದಯ ಮರಕಿಣಿ.

ಅವತ್ತು ಮಧ್ಯಾಹ್ನ ಅಂತ ಕಾಣುತ್ತೆ. ನನ್ನ ನಿದ್ರೆ ಇನ್ನೂ ಪೂರ್ತಿಯಾಗಿ ಮುಗಿದಿರಲಿಲ್ಲ. ಛೇಂಬರಿನಿಂದ ಆ ಮಂಪರಿನಲ್ಲೇ ಎದ್ದು ಬಂದವನಿಗೆ ಅಕೌಂಟ್ಸ್ ವಿಭಾಗದ ಹುಡುಗ ಎದಿರಾದ. “ಸರ್, ಫೋನ್ ಬಂದಿತ್ತು. ಉದಯ್ ಸರ್‌ಗೆ ಬೆಳಿಗ್ಗೆ stroke ಥರಾ ಏನೋ ಆಗಿದೆಯಂತೆ. ಆಸ್ಪತ್ರೆಗೆ ಸೇರಿಸಿದ್ದಾರಂತೆ...." ಅಂದ.

ನಾನು ಛೇಂಬರಿನೊಳಕ್ಕೆ ವಾಪಸು ಬಂದು ಏನೇನೂ ತೋಚದವನಾಗಿ ಸುಮ್ಮನೆ ಕುಳಿತುಬಿಟ್ಟೆ. ಏನಾಯಿತು ಉದಯನಿಗೆ? ಯಾರನ್ನು ಕೇಳೋದು? ಗಾಯತ್ರಿಗೆ ವಿವರ ಗೊತ್ತಿರಬಹುದಾ? ಆಕೆಯ ನಂಬರ್ ನನ್ನಲ್ಲಿಲ್ಲ. ಏನು ಮಾಡಬೇಕು ಅಂತಾನೇ ತೋಚದ ಹಾಗಾಗಿತ್ತು. ತಕ್ಷಣಕ್ಕೆ ಹೋಗಿ ನೋಡಿ ಬರೋಣಾ ಅಂದ್ರೆ, ಅದು ವಿಪರೀತ ದೂರ. ಹೋಗೋದು-ಬರೋದು ಸೇರಿಸಿದರೆ ಹತ್ತತ್ತಿರ ಆರು ತಾಸು. ಕೆಟ್ಟ ಟ್ರಾಫಿಕ್‌ನಲ್ಲಿ ಹತ್ತು ಮಾರು ಹೋಗೋದೇ ದುಸ್ತರ. ಅಲ್ಲಿ ಇಂತಿಷ್ಟು ಹೊತ್ತಿಗೆ ಎಂಬಂತೆ ನೋಡಲು ಬಿಡುತ್ತಾರಂತೆ. ಈ ಸಂಚಿಕೆ ಮುಗಿದದ್ದೇ ತಡ, ಹೋಗಿ ಅವನೊಂದಿಗೆ ಇದ್ದು ಬರ‍್ತೀನಿ.

ಎಷ್ಟಾದವು ವರ್ಷ? ಬರೋಬ್ಬರಿ ಇಪ್ಪತ್ತೈದಾಗಿವೆ ನಾನು ಮತ್ತು ಉದಯ meet ಆಗಿ. ಆಗ ನಾನು ಹುಬ್ಬಳ್ಳಿಯಲ್ಲಿದ್ದೆ. ಉದಯ ಇಲ್ಲೇ ಬೆಂಗಳೂರಿನಲ್ಲಿದ್ದ. ಏಕಾಂಗಿಯಾಗಿ ಅವನು ‘ಸಂಯುಕ್ತ ಕರ್ನಾಟಕ’ದ ಸಿನೆಮಾ ಪುರವಣಿ ನೋಡಿಕೊಳ್ಳುತ್ತಿದ್ದ. ಸಂಚಿಕೆಗೆ ವರದಿಗಾರನೂ ಅವನೇ, ಸಂಪಾದಕನೂ ಅವನೇ. ಈಗಿರುವಷ್ಟು film reporters ಆಗ ಇರಲಿಲ್ಲ. ಎಲ್ಲ ಸೇರಿದರೆ ಏಳೆಂಟು ಜನ. ಆಗ ಲಂಕೇಶ್ ಪತ್ರಿಕೆಗೆ ವರದಿ ಮಾಡುತ್ತಿದ್ದುದು ಸದಾಶಿವ ಶೆಣೈ. ‘ಕನ್ನಡ ಪ್ರಭ’ಕ್ಕೆ ಸಿ.ಸೀತಾರಾಮ್ ಮತ್ತು ಶ್ಯಾಮಿ ಇದ್ದರು. ಶ್ಯಾಮಿ ಅಂದರೆ, ಈಗ that's kannada.com ಮುಖ್ಯಸ್ಥನಾದ ಎಸ್.ಕೆ. ಶಾಮಸುಂದರ್. ‘ಸಂಜೆವಾಣಿ’ಗೆ ಇದೇ ನಮ್ಮ ಕೆ.ಬಿ. ಪಂಕಜ ಇದ್ದರು. ಆವತ್ತಿಗೆ ಲಿಂಗೇನಹಳ್ಳಿ ಸುರೇಶ್ಚಂದ್ರನೂ ಇದ್ದ. ಆಗಿನ್ನೂ ಟಿ.ವಿಗಳ ಅಬ್ಬರವಿರಲಿಲ್ಲ. ಹೀಗಾಗಿ ‘ಈ ಸಂಜೆ’ಗೆ ಸತ್ಯ ಇದ್ದ. ಆಗ ಶಮಂತ ಕೂಡ ವರದಿಗಾಗಿ ಬರುತ್ತಿದ್ದರು. ಮಹಿಳಾ ಮಣಿಗಳ ಪೈಕಿ ಸರಸ್ವತಿ ಜಾಗೀರ್‌ದಾರ್ ಇದ್ದರು. ಲಂಕೇಶ್‌ಗೆ ಆಗಾಗ ವರದಿ ಮಾಡಲು ರೇಖಾರಾಣಿ ಬರುತ್ತಿದ್ದರು. ಪರಮ ಪುರಾತನ ಪತ್ರಕರ್ತರಾದ ಎ.ಎಸ್. ಮೂರ್ತಿ ಕಾಣಿಸಿಕೊಳ್ಳುತ್ತಿದ್ದರು. ಮೊನ್ನೆ ತೀರಿಹೋದ ಬಾಲಕೃಷ್ಣ ಕಾಕತ್ಕರ್ ಇದ್ದ. ಅಪರೂಪಕ್ಕೆ ಎಂಬಂತೆ ಬೆಲಗೂರು ಸಮೀಉಲ್ಲಾ ಇದ್ದ. ಇದೆಲ್ಲದಕ್ಕಿಂತ ಹೆಚ್ಚೆಂದರೆ, ನಮ್ಮೆಲ್ಲರಿಗೂ ತುಂಬ ಹಿರಿಯರಾದ, ನಮ್ಮೆಲ್ಲರ ಪಾಲಿಗೆ ಶುದ್ಧ ಅಮ್ಮನೇ ಆದ ವಿಜಯಮ್ಮ ಆಗ ‘ರೂಪತಾರಾ’ಗೆ ವರದಿ, ವಿಮರ್ಶೆ, Studio Round up ಇತ್ಯಾದಿ ಬರೆಯುತ್ತಿದ್ದರು. ನಾನು ‘ಆಸ್ಥಾನ ನರ್ತಕಿ’ ಅಂತ ಗೇಲಿ ಮಾಡುತ್ತಿದ್ದ ವಿ.ಎನ್. ಸುಬ್ಬರಾವ್ ಸಿಗುತ್ತಿದ್ದರು. ಅವತ್ತಿಗಾಗಲೇ ‘ಚಿತ್ರತಾರಾ’ ಮುಚ್ಚಿ ಹೋಗಿ, ಅದರ ಸಂಪಾದಕರಾದ ನರಸಿಂಹ ನಿವೃತ್ತರಾಗಿದ್ದರು. ನಮ್ಮ ಗಣೇಶ್ ಕಾಸರಗೋಡು ಆಗಲೂ ಇದ್ದರು. ಈಗಲೂ ಅವರು ನಿವೃತ್ತಿ ಘೋಷಿಸಿರಲಿಲ್ಲ. ಅವರ ಸಂಬಂಧಿಕ ಸುಬ್ಬ ಎಂಬುವವನಿದ್ದ.

ಇಷ್ಟೆ: ಅವತ್ತಿನ ಪತ್ರಿಕೋದ್ಯಮಕ್ಕೆ ಇಷ್ಟೇ ಜನರಿದ್ದರು. ಫೊಟೋಗ್ರಾಫರ್ ಸುವರ್ಣ ಇದ್ದ. ಮೈಸೂರು ಹರೀಶ ಆನಂತರ ಲಗಾಮು ಹಿಡಿದು ಕುಳಿತ. We enjoyed a lot. ಸಿನೆಮಾ ಪತ್ರಿಕಾಗೋಷ್ಠಿ ಅಂದರೆ ಆ ದಿನಗಳಲ್ಲಿ ಪುಷ್ಕಳ ಗುಂಡು. ಅದು ಬಿದ್ದ ನಂತರ ಊಟ ಯಾವನಿಗೆ ಬೇಕು? ನಮ್ಮೆಲ್ಲರ ‘ಜನ ಜೀವನ’ ಆ ಮಟ್ಟಿಗೆ ಸುಖವಾಗೇ ಇತ್ತು. ಆದರೆ ಅವರಿದ್ದರಲ್ಲ, ನಮ್ಮ ಪಾಲಿನ ಜಮದಗ್ನಿ: ಕೆ. ಶಾಮರಾಯರು? ಅವರಿಗೆ ಅದೇಕೆ ಈ ಉದಯ ಮರಕಿಣಿ ಎಂಬ ಬಾಲಕನ ಮೇಲೆ ಸಿಟ್ಟು ಬಂತೋ ಗೊತ್ತಿಲ್ಲ. ಅವರು ಉದಯನನ್ನು ಅನಾಮತ್ತಾಗಿ ಇಲ್ಲಿಂದ ಎತ್ತಿ ಹುಬ್ಬಳ್ಳಿಗೆ ವರ್ಗಾ ಮಾಡಿಬಿಟ್ಟರು! ಅವತ್ತಿನ ಮಟ್ಟಿಗೆ ಒಂದು ವರ್ಗಾವಣೆಯೇ ನಮ್ಮ ಪಾಲಿಗೆ ಭಯಾನಕ. ಅದರಲ್ಲೂ ಶಾಮರಾಯರ ಅವಕೃಪೆಗೆ ಈಡಾಗಿ ವರ್ಗಾವಣೆಗೊಂಡಿದ್ದಾನೆ ಅಂದರಂತೂ ಖಲಾಸ್! ಅವನನ್ನು ಇಡೀ ಆಫೀಸಿನಲ್ಲಿ ಯಾರೂ ಮಾತೇ ಆಡಿಸುತ್ತಿರಲಿಲ್ಲ. ಶಾಮರಾಯರು ಉದಯನನ್ನು ಏಕೆ ವರ್ಗಾ ಮಾಡಿದ್ದರು ಎಂಬುದು ಇವತ್ತಿಗೂ ನಿಗೂಢ. ಆ ತನಕ ಉದಯ ಮತ್ತು ನಾನು ತುಂಬ ಹತ್ತಿರದವರೇನಲ್ಲ. ಎದುರಿಗೆ ಸಿಕ್ಕಾಗ ಹಾಯ್-ಬಾಯ್ ಎಂಬಂತಿದ್ದೆವು. ಅವನ ಬರಹಗಳನ್ನು ನಾನು ಮೆಚ್ಚಿಕೊಂಡಿದ್ದೆ. ಅವತ್ತಿಗಾಗಲೇ ನಾನು powerful ಆಸಾಮಿ. ಚೆನ್ನಾಗಿ ಬರೀತಾನೆ ಎಂಬುದಕ್ಕಿಂತ, ‘ಅವನು ರಾಯರಿಗೆ ಹತ್ತಿರ’ ಎಂಬುದು ಹೆಚ್ಚು count ಆಗುತ್ತಿತ್ತು.

ಉದಯ ನಿಜಕ್ಕೂ ಗಾಬರಿಯಾಗಿದ್ದ. ಹುಬ್ಬಳ್ಳಿಯ ಹೆಸರು ಗೊತ್ತಿತ್ತೇ ಹೊರತು ಅದರ ಚೆಕ್ಕುಬಂದಿ ಅವನಿಗೆ ಗೊತ್ತಿರಲಿಲ್ಲ. ಅವನಾಗ ಶುದ್ಧ ಬ್ರಹ್ಮಚಾರಿ. ಮೂಲತಃ ದಕ್ಷಿಣ ಕನ್ನಡದ ತುದಿಯಲ್ಲಿರುವ ‘ಮರಕಿಣಿ’ ಎಂಬ ಗ್ರಾಮದವನು. ಅವನ ಮನೆ ಮುಂದಿನ ರಸ್ತೆ ದಾಟಿದರೆ, ಅದು ಕೇರಳ! ಅವನದು ದೊಡ್ಡ ಕುಟುಂಬ: ಸಂಖ್ಯೆಯಲ್ಲಿ. ಒಟ್ಟು ಆರು ಜನ ಗಂಡು ಮಕ್ಕಳು. ಎಲ್ಲರಿಗಿಂತ ಹಿರಿಯಳು ಒಬ್ಬ ಅಕ್ಕ. ನನಗೆ ಉದಯನ ತಾಯಿ ತುಂಬ ಇಷ್ಟವಾಗಿದ್ದರು. ಬಲು ಲಕ್ಷಣವಾದ ಹಿರೀ ಮುತ್ತೈದೆ. ಬೆಂಗಳೂರಿನಲ್ಲಿ ಆಗ ಉದಯನ ಅಣ್ಣನಾದ ಸತ್ಯ ಒಂದು ಮನೆ ಮಾಡಿಕೊಂಡಿದ್ದ. ಅವನ ಹೆಂಡತಿಯ ಹೆಸರು ಸರಸ್ವತಿ. ಉದಯನಿಗೆ ಆಗಲೇ ಇಪ್ಪತ್ತೈದು ದಾಟಿತ್ತು. ಮದುವೆ ಬಾಕಿ. ಇಷ್ಟರ ಹೊರತಾಗಿ ಅವನ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿರಲಿಲ್ಲ. ಆದರೆ ರಾಜಾರಾಯರಿಗೆ ಗೊತ್ತಿತ್ತಲ್ಲ. ಅವರು ನನ್ನ God Father. ‘ಸಂಯುಕ್ತ ಕರ್ನಾಟಕ’ದಲ್ಲಿ ನನಗೆ ಕೆಲಸ ಕೊಡಿಸಿದವರೇ ಅವರು. “ಏಯ್ ಉದಯ ಸುಮ್ನೆ ಬಸ್ ಹತ್ಕೊಂಡು ಹುಬ್ಬಳ್ಳಿಗೆ ಹೋಗಿ. ಅಲ್ಲಿ ರವಿ ಬೆಳಗೆರೆ ಇದಾನೆ. ಅವನಿಗೆ ನಾನು ಹೇಳ್ತೀನಿ. ಆರಾಮಾಗಿ, ಅವನ ಜೊತೆ ಗುಂಡು-ಗಿಂಡು ಹಾಕ್ಕೊಂಡು ಹಾಯಾಗಿರಿ. ಶಾಮರಾಯರ ಕೋಪಾಗ್ನಿ ಮುಗಿದ ಮೇಲೆ ವಾಪಸು ಕರೆಸಿಕೊಳ್ತೀನಿ!" ಅಂದಿದ್ದರು. ನಾವ್ಯಾರಾದರೂ ರಾಜಾರಾಯರ ಮಾತು ಮೀರುವುದುಂಟೆ? “ಆರಾಮಾಗಿ ಬರ‍್ಲಿ ಬಿಡಿ. ನಾವು ತಿನ್ನೋ ರೊಟ್ಟೀಲಿ, ಉದಯ ಅರ್ಧ ತಿಂತಾನೆ" ಅಂದಿದ್ದೆ.

ಉದಯ ಮರಕಿಣಿ ಹುಬ್ಬಳ್ಳಿಗೆ ಬಂದ. Instant ಆಗಿ, ಮುಖ ನೋಡಿದ ಕೂಡಲೆ ಅವನು ನನಗೆ ಇಷ್ಟವಾಗಿಬಿಟ್ಟಿದ್ದ. ಬಹುವಚನದ ಮಾತೆಲ್ಲಿ ಬಂತು? ಅವತ್ತಿಗೂ-ಇವತ್ತಿಗೂ ನಾವು ವಚನ ಸಾಹಿತ್ಯದವರಲ್ಲ. “ಬಾರೋ" ಅಂದೆ. “ಬಂದಿದೀನಿ" ಅಂದ. ಅವನು ಒಂದೇ ಒಂದು ದಿನಕ್ಕೂ ಹೊಟೇಲಿನಲ್ಲಿ ಉಳಿಯಲಿಲ್ಲ. ಸೀದಾ ನಮ್ಮ ಮನೆಗೇ ಕರೆದೊಯ್ದೆ. ಮೊದಲೇ ಚಿಕ್ಕ ಕಿಷ್ಕಿಂಧದಂಥ ನೆಲಮಾಳಿಗೆಯ ಮನೆ. ಇವು ಮಕ್ಕಳು, ಆಗಿನ್ನೂ ಚಿಕ್ಕವು. ಲಲಿತೆಗೆ ನೌಕರಿಯೊಂದಿಗೆ ನಮ್ಮನ್ನೆಲ್ಲ ಸಾಕುವ ಹೊಣೆ. “ನಮ್ಮ ಜೊತೆಗೆ ಇವ್ನೊಬ್ನು ಸೇರ‍್ಕೊಂಡಿದಾನೆ" ಅಂದೆ. ಮಾತಾನ್ನಪೂರ್ಣೇಶ್ವರಿ ನಕ್ಕಳು. ಮನೆಯಲ್ಲಿ ಅವನನ್ನು ತುಂಬ ಹಚ್ಚಿಕೊಂಡವರೇ ಇಬ್ಬರು: ಲಲಿತೆ ಮತ್ತು ಚೇತನಾ. ಈ ಉದಯ ಏನೇನೂ ನಖರೆ ಮಾಡಿದೆ ನಮ್ಮ ಮನೆಗೆ ಹೊಂದಿಕೊಂಡು ಬಿಟ್ಟ. “ನಂಗೆ ಉಪಚಾರ ಮಾಡೋಕೆಲ್ಲ ಬರೋಲ್ಲ. ನೀವು ಸಂಕೋಚ ಮಾಡಿಕೊಳ್ಳದೆ ಇರಿ" ಅಂದಳು ಲಲಿತಾ. “ಆಯ್ತು ಅತ್ತಿಗೇ" ಅಂದ ಉದಯ.
“ಆಯ್ತೂ, ಉದಯನನ್ನ ಕಳಿಸಿದೀರಲ್ಲಾ? ಅವನನ್ನ ಏನು ಮಾಡೋದು?" ಅಂತ ರಾಯರನ್ನು ನೇರವಾಗಿ ಕೇಳಿದೆ. “ಮ್ಯಾಗಝೀನ್ ವರ್ಕ್‌ಗೆ ಹಾಕ್ಕೋ" ಅಂದರು ರಾಯರು. And Uday was excellent for that. ಅವನು ನನ್ನ ಹಾಗೆ ವಿಪರೀತ ಬರೆಯುವವನಲ್ಲ. ಹೀಗೆ ಹಗಲು-ರಾತ್ರಿ ಏಕಮಾಡಿ ಕೆಲಸ ಮಾಡುವವನೂ ಅಲ್ಲ. ಮಾಡಿದ್ದನ್ನು ಮಾತ್ರ perfect ಆಗಿ ಮಾಡಿರುತ್ತಿದ್ದ. ನನಗೆ ಅಷ್ಟು ಸಾಕಿತ್ತು. ಅವನು ಬಂದ ಕೆಲವೇ ದಿನಗಳಿಗೆ ‘ಕರ್ಮವೀರ’ದ ದೀಪಾವಳಿ ಸಂಚಿಕೆ ನನ್ನ ನೆತ್ತಿಯ ಮೇಲೆ ಬಿತ್ತು. ಏನೇನೂ ಸಿದ್ಧತೆ ಇಲ್ಲದೆ ಉದಯ ಅದಕ್ಕೆ fit ಆಗಿಬಿಟ್ಟ. ಅವನು ಬರೆಯುವುದಷ್ಟೆ ಅಲ್ಲ: ಉಳಿದ ಟೆಕ್ನಿಕಲ್ ಸಂಗತಿಗಳಲ್ಲಿ ನಿಪುಣ. ಅವನನ್ನು ಅದಕ್ಕೆ ಹಾಕಿ, ನಾನು ಕೇವಲ ಬರಹಕ್ಕೆ ನಿಂತೆ. ಅನಾಯಾಸವಾಗಿ ದೀಪಾವಳಿ ಸಂಚಿಕೆ ಮಾಡಿ ಮುಗಿಸಿದೆವು.

ಮುಗಿಸಿದರೆ ಆಯ್ತೇ? ಖುಷಿಗೆ? ಖುಷಿಗೆ ಮತ್ತೇನೂ ಬೇಕಿಲ್ಲ. ಅವತ್ತಿನದು ಅವತ್ತಿಗೆ. ಕೈಲಿ ಕಾಸಿದ್ರೆ ರಮ್ಮು. ಇಲ್ಲವಾದ್ರೆ ಸಾಲ. ಅದೂ ಹುಟ್ಟದಿದ್ರೆ ಇದ್ದೇ ಇದೆ: ಶುದ್ಧ ಸಾರಾಯಿ. ಆಶ್ಚರ್ಯವೆಂದರೆ, ಈ ಇಪ್ಪತ್ತೈದು ವರ್ಷಗಳಲ್ಲಿ ನಾವು ಒಂದೇ ಒಂದು ಜಗಳ ಮಾಡಿಲ್ಲ. ಅದಿರಲಿ, ಚಿಕ್ಕ ಮುನಿಸು, ಭಿನ್ನಾಭಿಪ್ರಾಯ, ego-ಉಹುಂ. ಯಾವುದೂ ಇಲ್ಲ. ಪರಸ್ಪರರು ಬೇಸರಿಸಿಕೊಂಡೂ ಇಲ್ಲ. ನಮ್ಮನ್ನು ಯಾರೂ separate ಮಾಡಲಾರರು. ಹಾಗಿದ್ದೇವೆ. ಅದೊಂದು ಘಟನೆ ನಂಗೆ ಸದಾ ನೆನಪಾಗುತ್ತಿರುತ್ತದೆ. ಅವತ್ತು ನಾವು ಯಥಾಪ್ರಕಾರ ಹುಬ್ಬಳ್ಳಿಯ ಮ್ಯಾದಾರ ಓಣಿಯ ಸಾರಾಯಿ ಅಂಗಡಿಗೆ ಹೋದೆವು. ಅದರ ಮಾಲೀಕ ನಮ್ಮ ಪರಮಭಕ್ತ. ಅಂಗಡಿ ನಡೆಸೋದು ಹಾಗಿರಲಿ. ಅವನೂ ನಮ್ಮೊಂದಿಗೆ ಕುಳಿತು ಕುಡಿದು, ನಮಗಿಂತ ಹೆಚ್ಚು tight ಆಗಿ ಬಿಡುತ್ತಿದ್ದ! ಅವನ ಹೆಸರು ‘ಪಾಂಡು’ ಇದ್ದಿರಬೇಕು. Nice fellow. ವಿಪರೀತ ಮೆಳ್ಳಗಣ್ಣು. ದಪ್ಪಕ್ಕಿದ್ದ. ನೋಡಿದರೆ ನಗು ಬರುವಂತಿದ್ದ. But he was good. ಹಾಗಿದ್ದವನ ಅಂಗಡಿಯಲ್ಲಿ ನಾವು ಕುಳಿತು ಅವತ್ತು ಬಿಮ್ಮನಾಗಿಯೇ ಕುಡಿದೆವು. ಬಿಲ್ ಹಣದ ಅರ್ಧ ಪಾಂಡುವಿಗೆ ಕೊಟ್ಟು ಹೊರಬಿದ್ದೆವು. ಉದಯ ಹಿಂದೆ ಕುಳಿತ. ನಾನು ಎಂದಿನಂತೆ ಸಾರಥಿ. ಅವತ್ತು ಒಂದು ಗಜದಷ್ಟೂ ಮುಂದಕ್ಕೆ ಹೋಗಿರಲಿಲ್ಲ. ಆಗೋ ಯಡವಟ್ಟು ಆಗಿ ಧಬಲ್ಲನೆ ಹೊತಗೊಂಡು ಬಿದ್ದುಬಿಟ್ಟೆವು ರೋಡಿನ ಮೇಲೆ, ದೊಡ್ಡ ಚರಂಡಿಯ ಪಕ್ಕದಲ್ಲಿ! ತೀರ ಕೆಳಗೆ ಬಿದ್ದದ್ದು ಉದಯ. ಅವನ ಮೇಲೆ ಬೈಕು. ಬೈಕಿನ ಮೇಲೆ ಭಯಂಕರ ಗಾತ್ರಕ್ಕಿದ್ದ ನಾನು! ಅವರಿವರು ಬಂದು ನನ್ನನ್ನು ಮೇಲಕ್ಕೆತ್ತಿದರು. ಅವರಿಗೆ ಬೈಕಿನ ಕೆಳಗೆ ಅಂಗಾತವಾಗಿ ಬಿದ್ದ ಉದಯ ಕಾಣಿಸಿಯೇ ಇರಲಿಲ್ಲ. ಅವನಾದರೂ ಕೂಗಬೇಡವಾ? ಅವನದು ತುಂಬ low volume. ಕಡೆಗೆ ನಾನೇ ಕೈ ಮಾಡಿ ತೋರಿಸಿದೆ. ಅವರು ಗಾಡಿ ಎತ್ತಿಟ್ಟರು. ಉದಯ ತಾನೇ ಎದ್ದು ನಿಂತ. ‘ಇನ್ನು ಮೇಲೆ ನಿನ್ನ ಬೈಕಿನಲ್ಲಿ ಕೂಡೋದೇ ಇಲ್ಲ’ ಅಂದ. ಅಂದವನು ಮತ್ತೆ ಆರಾಮಾಗಿಯೇ ಕುಳಿತ. ಮನೆಗೆ ಹೋಗಿ ನೋಡಿಕೊಂಡರೆ ಅವನ ಪ್ಯಾಂಟು just ತೊಡೆಯಿಂದ-ಪಾದದ ತನಕ ಹರಿದಿತ್ತು. ಆಗಲೇ ಉದಯನಿಗೆ ಬಂದದ್ದು: ದೊಡ್ಡ ನಗೆ!

ಇಂಥವು ಅವೆಷ್ಟಿವೆಯೋ? ನಾವು ಅಂಥ ದರಿದ್ರ ಸ್ಥಿತಿಯಲ್ಲೂ ಖುಷಿಯಾಗೇ ಇದ್ದೆವು. ನಮ್ಮೊಂದಿಗೆ ಮೊದಲು ಜಿ.ಎಚ್. ರಾಘವೇಂದ್ರ ಸೇರಿಕೊಂಡ. ನಮ್ಮೆಡೆಗೆ ಇನ್ನಿಲ್ಲದಂತೆ attract ಆಗಿ ಹತ್ತಿರಕ್ಕೆ ಬಂದವನು ಎಂ.ಟಿ. ಹೆಗಡೆ. ಅವನಿಗೆ ಯಾವ ಚಟಗಳೂ ಇರಲಿಲ್ಲ. ಆಫೀಸಿನ ಅಕೌಂಟ್ಸ್ ಡಿಪಾರ್ಟ್‌ಮೆಂಟಿನಲ್ಲಿದ್ದ. ನಮ್ಮೆಡೆಗೆ ಮಹಾನ್ ಭಕ್ತಿ. ಸುಖಾಸುಮ್ಮನೆ ಸಾಯಂಕಾಲಗಳಲ್ಲಿ ನಾವಿದ್ದಲ್ಲಿಗೆ ಬರುತ್ತಿದ್ದ. ಒಂದು ಗುಕ್ಕೂ ಕುಡಿಯುತ್ತಿರಲಿಲ್ಲ. ಭಕ್ತಿ ಮಿಶ್ರಿತ attractionಗೆ ಒಳಗಾಗಿ ನಮಗವನು ಚಿಕ್ಕ ಅಮೌಂಟಿನ ಸಾಲ ಕೊಡುತ್ತಿದ್ದ! ಕುಳ್ಳಗೆ, ಮುದ್ದಾಗಿದ್ದ ಹುಡುಗ ಎಂ.ಟಿ. ಹೆಗಡೆ. “ನಿಮ್ಮ ಕುಡಿತ ಬಿಡಿಸೇ ಬಿಡ್ತೀನಿ!" ಅಂತ ಶಪಥ ಮಾಡಿ ರಾಘವೇಂದ್ರನ ಬೆನ್ನತ್ತಿ ಬರುತ್ತಿದ್ದವನು ಎಲ್.ಐ.ಸಿ.ನೌಕರ ಸುರೇಶ್ ಜಕಾತಿ. ಬಿಡಿಸುತ್ತೇನೆ ಅಂತ ಬಂದ ಅವನು ನಿಧಾನವಾಗಿ ತಾನೇ ಕುಡಿಯತೊಡಗಿದ. ಮುಂದಿನ ದಿನಗಳಲ್ಲಿ ಬಂದು ಸೇರಿಕೊಂಡವರು ಗಣೇಶ್ ಕಾಸರಗೋಡು. ಸದ್ಯ, ಅವರು ಹಾಗೆ ಧಾರಾಕಾರವಾಗಿ ಕುಡಿಯುತ್ತಿರಲಿಲ್ಲ. ಆದರೆ ತೇಜಪಾಲು? ತೇಜಪಾಲು ಕುಡಿಯುತ್ತಿದ್ದ. ಅವನದೂ ಅಕೌಂಟ್ಸ್ ವಿಭಾಗವೇ. ಉದಾರವಾಗಿ ಸಾಲ ಕೊಡುತ್ತಿದ್ದ. ಹಿಂತಿರುಗಿಸುವುದು ನಮಗಷ್ಟೇ ಅಲ್ಲ, ಅವನಿಗೂ ಮರೆತು ಹೋಗುತ್ತಿತ್ತು.

ನಮ್ಮ ಒಡನಾಟ, ನಿಷ್ಕಪಟ ಮನೋಸ್ಥಿತಿ ಮುಂತಾದವೆಲ್ಲ ಜೊತೆಯಾದವು. ಕಡೆಗೆ ಪರಿಸ್ಥಿತಿ ಎಲ್ಲಿಗೆ ಬಂತೆಂದರೆ “ರಾಯರೇ, ಉದಯನನ್ನು ಮತ್ತೆ ಬೆಂಗಳೂರಿಗೆ ಕರೆಸಿಕೊಳ್ಳಬೇಡಿ" ಅಂತ ಕೇಳುವ ಸ್ಥಿತಿಗೆ ಬಂದಿದ್ದೆವು. ಅವತ್ತಿಗಾಗಲೇ “ನಾನು ಮತ್ತು ಉದಯ ಕೇವಲ ಸ್ನೇಹಿತರಲ್ಲ: ನಾವು ಸಂಬಂಧಿಕರೂ ಹೌದು" ಎಂಬುದು ಗೊತ್ತಾಗಿತ್ತು. ಅವನ ಅಣ್ಣನ ಹೆಂಡತಿ ಸರಸ್ವತಿ, ನನ್ನ ಭಾವಮೈದುನನ ಹೆಂಡತಿಗೆ ಸಂಬಂಧಿಕಳು. ಹೇಗೆ ನೀವು ಸಂಬಂಧಿಕರು ಅಂತ ಕೇಳಿದರೆ ವಿವರಿಸಲು ಅವನಿಗೂ ಆಗುತ್ತಿರಲಿಲ್ಲ. ನನ್ನನ್ನಂತೂ ಕೇಳಲೇ ಬೇಡಿ. ಹಾಗಂತ ಸಂಬಂಧಿಕರು ಎಂಬ ಕಾರಣಕ್ಕೆ ನಾವು ಹತ್ತಿರಾದವರಲ್ಲ. It is absolutely emotional relationship ಮುಂದೆ ಒಂದು ವರ್ಷದ ನಂತರ ಉದಯನನ್ನು ರಾಯರು ಬೆಂಗಳೂರಿಗೆ ವರ್ಗಾ ಮಾಡಿದರು. ಕೆಲ ದಿನಗಳ ನಂತರ

ಅವರು ನನ್ನನ್ನೂ ಬೆಂಗಳೂರಿಗೆ ಹಾಕಿದರು. ಆಗ ಒಬ್ಬಂಟಿಯಾಗಿ ಬಂದ ನಾನು ಉದಯನ ಮನೆಯಲ್ಲಿ ಇಡೀ ವರ್ಷ ಉಳಿದುಕೊಂಡೆ. ಒಂಥರಾ Tit for tat ಎಂಬ ಸ್ಥಿತಿ. ಮುಂದೆ ಅವನು ‘ಕನ್ನಡ ಪ್ರಭ’ ಸೇರಿಕೊಂಡ. ಹಿಂದೆಯೇ ನಾನೂ ಸೇರಿಕೊಂಡೆ. ಆಗಲೂ ನಮ್ಮ ‘ಸಾಯಂ ಸಂಧ್ಯಾ ವಂದನೆ’ ಅದ್ಭುತವಾಗಿ ಮುನ್ಸಾಗಿತು. ‘ಪತ್ರಿಕೆ’ ಮಾಡಿದ ಮೇಲೆ ನಾನು ವಿಪರೀತ busy ಆದೆ. ಆಗ ಉದಯ ಮತ್ತು ಜೋಗಿ ಜೊತೆಯಾದರು. ಕೆಲ ದಿನ ಅವರು ‘ಸುವರ್ಣ ನ್ಯೂಸ್’ನಲ್ಲಿದ್ದರು. ಒಟ್ಟಿಗೇ ಎಂತೆಂಥವೋ ಸಿನೆಮಾಗಳಿಗೆ, ಧಾರಾವಾಹಿಗಳಿಗೆ ಅವರು script ಬರೆದರು. ಉದಯನಿಗೆ ಟೀವಿ ನೌಕರಿ ಅಷ್ಟಾಗಿ ಹಿಡಿಸಲಿಲ್ಲ. ಅದಕ್ಕಿಂತ ವಿಶ್ವೇಶ್ವರ ಭಟ್ಟನ ಮನಸು ಇಷ್ಟವಾಗಲಿಲ್ಲ. ಅವನು ಅಸಹ್ಯಪಟ್ಟು ಅಲ್ಲಿಂದ ಹೊರಬಿದ್ದ. ಆವಾಗಲೇ ನಾನು ಕೇಳಿದ್ದು; “ಜೊತೆಯಾಗಿ ‘ಓ ಮನಸೇ...’ ಮಾಡೋಣವಾ? ನೀನು ಒಪ್ಪಿದರೆ ಅದನ್ನು ಮತ್ತೆ ಆರಂಭಿಸುತ್ತೇನೆ".

ಉದಯ ಒಪ್ಪಿಕೊಂಡ. ಉಳಿದದ್ದು ನಿಮಗೆ ಗೊತ್ತಿದೆ. ಅವನು ಅದಕ್ಕೆ ಸಂಪಾದಕನಾದ. ಎಲ್ಲವನ್ನೂ ತೂಗಿಸಿಕೊಂಡು ಬಂದ. ನಾನು ಕೇವಲ ಅಂಕಣಕಾರ ಎಂಬಂತಾಯಿತು. ಅವತ್ತಿಗಾಗಲೇ ಕೆಲವು ಸುದ್ದಿಗಳು ನಮ್ಮನ್ನು shockಗೆ ಈಡು ಮಾಡಿದ್ದವು. ತುಂಬ ಆತ್ಮೀಯನಾಗಿದ್ದ ಜಿ.ಎಚ್.ರಾಘವೇಂದ್ರ ಕ್ಯಾನ್ಸರ್‌ಗೆ ಬಲಿಯಾದ. ಸದಾ ಜೊತೆಗೆ ಬರುತ್ತಿದ್ದ ಎಂ.ಟಿ.ಹೆಗಡೆ ಕೇವಲ ಕುಡಿತವಲ್ಲ: ಜೊತೆಗೆ ನಾನಾ ಚಟಗಳನ್ನು ಕಲಿತ. ತಂಬಾಕು ತಿನ್ನುತ್ತಿದ್ದ. ಅದನ್ನು ಉಗುಳಿದ ಮರುಕ್ಷಣ ಸಿಗರೇಟು. ಅವೆರಡಕ್ಕಿಂತ ಹೆಚ್ಚಾಗಿ ಅವನು ಮಟ್ಕಾ ಆಡಿದ. ಸಿಂಗಲ್ ನಂಬರ್ ಲಾಟರಿಗೆ ಬಿದ್ದ. ವಿಪರೀತ ಸಾಲ ಮಾಡಿಕೊಂಡ. ಅದನ್ನು ತೀರಿಸಲಿಕ್ಕೆ ಅಂತ ಆಫೀಸಿನಲ್ಲಿ ಹಣ ತಿನ್ನಲು ಹೋದ. ಸಿಕ್ಕು ಬಿದ್ದು ನೌಕರಿ ಕಳೆದುಕೊಂಡ. ಹೆಂಗಸರ ಖಯಾಲಿಗೆ ಬಿದ್ದ. ಕಡೆಗೆ ಆ ಮುದ್ದಾದ ಹುಡುಗ ಏಡ್ಸ್ ಬಂದು ತೀರಿಕೊಂಡ! ಇದರ ಆಸುಪಾಸಿನಲ್ಲೇ ಕುಡಿತ ಬಿಡಿಸಲು ಬಂದ ಸುರೇಶ್ ಜಕಾತಿ, ವಿಪರೀತ ಸಾಲಗಾರನಾಗಿ, ತನ್ನದೇ ಆಫೀಸಿನ ಛೇಂಬರಿನಲ್ಲಿ ಉರುಲು ಹಾಕಿಕೊಂಡು ಸತ್ತು ಬಿಟ್ಟ. ಇಂಥ ಯಾವ ಚಟಗಳೂ ಇರದಿದ್ದ ಗುರುರಾಜ ಜೋಶಿಯವರಿಗೆ ಕ್ಯಾನ್ಸರ್ ಬಂತು. ಖಾಯಿಲೆಯಾಗಿದೆ ಅಂತ ಗೊತ್ತಾದ ಹದಿನೈದೇ ದಿನಗಳಿಗೆ ಅವರು ಕಣ್ಣು ಮುಚ್ಚಿ ಬಿಟ್ಟರು. ಮದುವೆ-ಸಂಸಾರ ಯಾತರದೂ ಇಲ್ಲದೆ ಒಂಟಿ ಗೋವಿಯಂತಿದ್ದ ತೇಜಪಾಲು ಏಕೆ ಸತ್ತ ಎಂಬುದು ಗೊತ್ತೇ ಆಗಲಿಲ್ಲ. He passed away. ಹಿಂತಿರುಗಿ ನೋಡಿದರೆ ಸಾಲು ಸಾಲು ಗೆಳೆಯರ ಶವಗಳೇ!

ಆದರೆ ಉದಯ ಮನಸ್ಸನ್ನು ನಿಯಂತ್ರಿಸ ಬಲ್ಲವನು. ಇತ್ತೀಚೆಗೆ ಅವನು ಒಂದೇ ಒಂದು peg ಕುಡಿಯುತ್ತಿರಲಿಲ್ಲ. ಮಧ್ಯಾಹ್ನ ನನ್ನ ಕೋಣೆಗೆ ಬಂದು ಕುಳಿತು ಒಂದೇ ಒಂದು ಸಿಗರೇಟು ಸೇದುತ್ತಿದ್ದ. ನಾನಿರದಿದ್ದರೆ ಅದೂ ಇಲ್ಲ. ಅವನದು ನನ್ನ ಕೋಣೆಯ ಪಕ್ಕದ್ದೇ ಛೇಂಬರು. ಕೆಲ ಬಾರಿ ನಾವು ದಿನಗಟ್ಟಲೆ ಭೇಟಿಯಾಗುತ್ತಿರಲಿಲ್ಲ. ಅವನು ಹನ್ನೆರಡೂವರೆಯ ಸುಮಾರಿಗೆ ಆಫೀಸಿಗೆ ಬರುತ್ತಿದ್ದ. ರಾತ್ರಿ ಎಂಟಕ್ಕೆ ವಾಪಸು. ವಿಪರೀತ ದೂರದ ಸಹಕಾರ ನಗರದಲ್ಲಿ ಮನೆ. ಅವನದೇ car ಇತ್ತು. ಬೈಕೂ ಇತ್ತು. ಎರಡನ್ನೂ ಅವನು ಹೆಚ್ಚು ಬಳಸುತ್ತಿರಲಿಲ್ಲ. ಇತ್ತೀಚೆಗೆ ಅವನು ಕೊಂಚ ತೊದಲುವುದನ್ನು ಗಮನಿಸಿದ್ದೆ. ಚಿಕ್ಕಂದಿನಲ್ಲೊಮ್ಮೆ ಹೀಗೆ mild ಆಗಿ stroke ಆಗಿತ್ತು ಅಂತ ಅವನೇ ಹೇಳಿದ್ದ. ವಿಪರೀತ ಕೈ ನೋವು ಅಂದವನು ಮೊನ್ನೆ ಕೆಲಕಾಲ ಫಿಜಿಯೋ ಥೆರಪಿ ಮಾಡಿಸಿಕೊಂಡ. ಅವನಿಗೆ ಸಕ್ಕರೆ ಖಾಯಿಲೆ ಇಲ್ಲ. ಆದರೆ ಬ್ಲಡ್‌ಪ್ರೆಷರ್ ಕಾಡುತ್ತಿತ್ತು. ಹಾಗಂತ, ಅವನು ವಿಪರೀತ emotional ಆಗುತ್ತಿರಲಿಲ್ಲ. ಮೊದಲಿಂದಲೂ ಅವನು ಮಿತಭಾಷಿ. ಅವನ ಬಾಯಲ್ಲಿ ಒಂದೇ ಒಂದು ಅಪಶಬ್ದ, ಇತರರ ಬಗ್ಗೆ ಕುಹಕ, ಚಾಡಿ-ಯಾವುದನ್ನು ನಾನು ಕೇಳಿಲ್ಲ.

ಮೊನ್ನೆ ಶನಿವಾರ ಬೆಳಿಗ್ಗೆ ಎದ್ದವನು ಮನೆಯ ನಾಯಿಯನ್ನು ಕರೆದುಕೊಂಡು walkಗೆ ಹೊರಟಿದ್ದಾನೆ. ಪಿಯು ಓದುತ್ತಿರುವ ಇಬ್ಬರೂ ಮಕ್ಕಳು ಇನ್ನೂ ಮಲಗಿದ್ದರು. ಇವನು ಹೊರಬಿದ್ದುದು ಗಾಯತ್ರಿಗೆ ಗೊತ್ತಾಗಿದೆ. ಹೆಚ್ಚು ಹೊತ್ತೇನಲ್ಲ. ಸುಮಾರು ಮೂರು ನಿಮಿಷದೊಳಗಾಗಿ ನಾಯಿ ವಾಪಸ್ ಬಂದಿದೆ. ‘ಅರೆ, ಇದೇನಿದು’ ಅಂದುಕೊಂಡು ಹೊರಕ್ಕೆ ಹೋದವಳಿಗೆ “ಅಲ್ಲಿ ಅಂಕಲ್ ಬಿದ್ದು ಬಿಟ್ಟಿದ್ದಾರೆ'' ಅಂತ ಹತ್ತಿರದ ಮನೆಯ ಹುಡುಗ ಹೇಳಿದ್ದಾನೆ. ಹೋಗುವ ಹೊತ್ತಿಗೆ ಅಕ್ಕಪಕ್ಕದವರು ಸೇರಿದ್ದಾರೆ. ಅಲ್ಲೇ ಲೈಟು ಕಂಬ ಹಿಡಿದು ಏಳಲು ಪ್ರಯತ್ನಿಸುತ್ತಿದ್ದನಂತೆ ಉದಯ. ಅವನಿಗೆ ಏನಾಗಿದೆ ಎಂಬುದು ಗಾಯತ್ರಿಗೆ ಗೊತ್ತಾಗಿದೆ. ಆಕೆ ತುಂಬ ಸಮಚಿತ್ತದ, capable ಹೆಣ್ಣು ಮಗಳು. ಉದಯನಿಗೆ ಪ್ರಾಣದ ಆಪತ್ತೇನೂ ಇಲ್ಲ. ಕೊಂಚ ಟೈಮು ಹಿಡಿಯಲಿದೆ, ರಿಕವರ್ ಆಗಲಿಕ್ಕೆ. ಎಷ್ಟರಮಟ್ಟಿಗೆ ಮಿದುಳು ಹೊಡೆತ ತಿಂದಿದೆ ಎಂಬುದರ ಮೇಲೆ, ಎಷ್ಟು ಬೇಗ ಮತ್ತು perfect ಆಗಿ recover ಆಗಲಿದ್ದಾನೆ ಎಂಬುದು ಆಧಾರ ಪಟ್ಟಿದೆ. ಆ ಖಾಯಿಲೆ ಎಂಥದೆಂಬುದು ಒಬ್ಬ doctorಗೆ ಎಷ್ಟು ಗೊತ್ತಿರಬಹುದೋ, ಅದರ ಮುಕ್ಕಾಲು ಪಾಲು ನನಗೆ ಗೊತ್ತಿದೆ. Stroke ಹೊಡೆದ ಕ್ಷಣದಿಂದ ಮುಂದಿನ ಹದಿನೆಂಟು ವರ್ಷ ನನ್ನ ಅಮ್ಮ ಅನುಭವಿಸಿದ್ದು ನನ್ನ ಕಣ್ಣೆದುರಿನಲ್ಲೇ. Fortunately ಉದಯ ಇನ್ನೂ ಚಿಕ್ಕವನು. ಐವತ್ನಾಲ್ಕು ವರ್ಷವಿರಬೇಕು. ಮಕ್ಕಳು ಚಿಕ್ಕವು. ಮುಂದಿನ ಹಾದಿ ಸರಿಯಿರಬೇಕು, ಅಷ್ಟೆ. ನಾನು ಕರುವಿನಂತೆ ಹಂಬಲಿಸುತ್ತಿದ್ದೇನೆ, ಅವನಿಗೋಸ್ಕರ. ಅವನ ಹೊರತಾಗಿ ಆಫೀಸಿನಲ್ಲಿ ನನಗೆ ಬೇರೆ ಯಾರೂ ಇಲ್ಲ. ಶುದ್ಧ friendlessness ಕಾಡುತ್ತಿದೆ. ‘ಉದಯ ಬರಲಿ’ ಅಂತ ಒಮ್ಮೆ ನೀವೂ ಅನ್ನಿ. Please.

ನಿಮ್ಮವನು
ಅರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 September, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books