Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಸದ್ಯಕ್ಕೀಗ ಅವರು ಅಧಿಕಾರದಲ್ಲಿ ಇಲ್ಲವಲ್ಲ?

ಅವರೊಂದಿಗಿನ ನನ್ನ ಸ್ನೇಹ ಸುಮಾರು ಇಪ್ಪತ್ತು ವರ್ಷಗಳದು. ಅವರು ಎಚ್.ವಿಶ್ವನಾಥ್. ವಿಪರೀತ ನಗೆ, ಸಾಹಿತ್ಯ, ಸಂಗೀತ ಇತ್ಯಾದಿಗಳ ಮನುಷ್ಯ ಅವರು. ಕೆಲವೊಮ್ಮೆ ಕಡ್ಡಿಮುರಿದಂತೆ ನಿಷ್ಠುರದ ಮಾತು ಆಡಿ ಬಿಡುತ್ತಾರೆ. ಅವರು ಕಾಂಗ್ರೆಸ್‌ನಲ್ಲಿರೋದು ನಿಜ. ಆದರೆ ತಮ್ಮದೇ ಪಕ್ಷದ ಅನೇಕರನ್ನು ಟೀಕಿಸಿಬಿಡುತ್ತಾರೆ. ಕಲಿತರೆ ಗೇಲಿ ಮಾಡುವುದನ್ನು ಅವರಿಂದಲೇ ಕಲಿಯಬೇಕು. ಅವರು ತಮ್ಮನ್ನೂ ಕೆಲವೊಮ್ಮೆ ಗೇಲಿ ಮಾಡಿಕೊಳ್ಳುವುದುಂಟು. ಎಲ್ಲವನ್ನೂ ಮೀರಿದುದು, ಅವರ ಕಾಳಜಿ. ಅದರಲ್ಲೂ ಕೆಳವರ್ಗದವರೆಡೆಗೆ ವಿಶ್ವನಾಥ್‌ಗೆ ಅಪಾರವಾದ ಮತ್ತು ನಿಜವಾದ ಕಾಳಜಿ ಇದೆ. ಅದು ಸಹಜ. ವಿಶ್ವನಾಥ್ ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದವರು.

ನಾನು ಆಗಷ್ಟೆ ‘ಪತ್ರಿಕೆ’ ಆರಂಭಿಸಿದ್ದೆ. ಆಗಿನ್ನೂ ಮೊಬೈಲ್‌ಗಳಿರಲಿಲ್ಲ. ಬದಲಿಗೆ ಪೇಜರ್‌ಗಳಿದ್ದವು. ಅದರ ಮೂಲಕವೇ ನಾನು-ವಿಶ್ವನಾಥ್ ಮಾತಾಡಿಕೊಳ್ಳುತ್ತಿದ್ದೆವು. ಒಮ್ಮೆ ವಿಶ್ವನಾಥ್ ಪದ್ಮನಾಭನಗರಕ್ಕೆ ಬಂದವರು “ನಿಮ್ಮ ಮನೆಗೆ ಬರಬೇಕು. ಹೇಗೆ?" ಅಂದರು. ನಾನು ಬೈಕ್ ಹತ್ತಿ ಅವರಿದ್ದಲ್ಲಿಗೇ ಹೋದೆ. ಅವರೇನೂ ಸುಮ್ಮನೆ ಅಲ್ಲ: ಅವತ್ತಿಗಾಗಲೇ ಮಂತ್ರಿಯಾಗಿ, ಮಾಜಿಯಾಗಿದ್ದವರು. ಒಂದು ಪ್ರಶ್ನೆ ಕೂಡ ಕೇಳದೆ ನನ್ನ ಬೈಕ್‌ನಲ್ಲಿ ಹಿಂದಿನ ಸೀಟು ಹತ್ತಿ ಕುಳಿತರು. ನಾನು ಎರಡು ಅಂಗೈಯಗಲದ ಬಾಡಿಗೆ ಮನೆಯಲ್ಲಿದ್ದೆ. ಅವರಿಗೆ ‘ಪತ್ರಿಕೆ’ ತುಂಬ ಇಷ್ಟವಾಗಿಬಿಟ್ಟಿತ್ತು. “ಆದರೆ ಒಮ್ಮೆಮ್ಮೆ ತುಂಬ ಆತಂಕವಾಗುತ್ತದೆ ರವೀ. ನೀವು ಮುಖ-ಮೂತಿ ನೋಡದೆ ಯಾರೆಂದರೆ ಅವರ ವಿರುದ್ಧ ಬರೀತೀರಿ. ನೀವು ಒಂದು ರಿವಾಲ್ವರ್ ತಗೋಬೇಕು" ಅಂದವರೇ ಹತ್ತು ಸಾವಿರ ರುಪಾಯಿಗಳ ಒಂದು ಕಂತೆ ತೆಗೆದು ಕೈಗಿತ್ತರು. ನನಗೆ ಮಾತೇ ಹೊರಡದಂತಾಗಿತ್ತು. ಹತ್ತು ಸಾವಿರ ರುಪಾಯಿಗಳಿಗೆ ರಿವಾಲ್ವರ್ ಬರೋದಿಲ್ಲ ಅಂತ ನನಗೂ ಗೊತ್ತಿರಲಿಲ್ಲ. ಬಹುಶಃ ಅವರಿಗೂ ಗೊತ್ತಿರಲಿಲ್ಲ. ಅದೊಂದು ಶುದ್ಧ ಕಳಕಳಿ.

ನನಗೆ ಆಶ್ಚರ್ಯವಾದ ಇನ್ನೊಂದು ಸಂಗತಿ ಇತ್ತು. ವಿಶ್ವನಾಥ್ ರೈಲ್ವೆ ನಿಲ್ದಾಣಕ್ಕೆ ಹೋದವರೇ ಸುಮಾರು ಐವತ್ತು ಪ್ರತಿಗಳಷ್ಟು ‘ಹಾಯ್ ಬೆಂಗಳೂರು!’ ಪತ್ರಿಕೆ ಖರೀದಿಸುತ್ತಿದ್ದರು. ಅವರೇ ಆ ಬಂಡ್ಲ್ ಕೈಯಲ್ಲಿಟ್ಟುಕೊಂಡು ಮೈಸೂರಿಗೆ ಹೋಗೋ ರೈಲಿನ ಪ್ರತಿಯೊಂದು ಬೋಗಿಯಲ್ಲೂ ಅದರ ಕಿಟಕಿಗಳೊಳಕ್ಕೆ ‘ಪತ್ರಿಕೆ’ ಎರಚಿ ಹೋಗುತ್ತಿದ್ದರು! ಈ ಕೆಲಸ ಅದ್ಯಾವ ರಾಜಕಾರಣಿ ಮಾಡುತ್ತಾನೆ? ವಿಶ್ವನಾಥ್‌ಗೆ ‘ಪತ್ರಿಕೆ’ಯ ಮೇಲೆ ಮತ್ತು ನನ್ನ ಮೇಲೆ ಅಂಥದೊಂದು ಕಾಳಜಿ ಇತ್ತು. ಅದು ಈಗಲೂ ಇದೆ.

ಅವರಿಗೆ ಕೇವಲ ರಾಜಕಾರಣಿಗಳೊಂದಿಗೆ ಮೈತ್ರಿ ಇದೆ ಅಂದುಕೊಳ್ಳುವಂತಿಲ್ಲ. ಅಲ್ಲೆಲ್ಲೋ ಫುಟ್‌ಪಾತ್‌ನ ಮೇಲೆ ಕುಳಿತ ಲಾಳಾಸಾಬಿಯಿಂದ ಹಿಡಿದು ಜ್ಞಾನಪೀಠ ಸಾಹಿತಿಗಳ ತನಕ ಎಲ್ಲರೊಡನೆಯೂ ಗೆಳೆತನವೇ. ಗಮನಿಸಬೇಕಾದ ಸಂಗತಿಯೆಂದರೆ ವಿಶ್ವನಾಥ್ ನಿಜಕ್ಕೂ ಚೆನ್ನಾಗಿ ಬರೆಯುತ್ತಾರೆ. ಅವರು ಹಾಡುತ್ತಾರೆ. ಚುನಾವಣೆಯಲ್ಲಿ ಸೋತರೆ ಇಷ್ಟಗಲ ನಕ್ಕು ಅಂಡು ಕೊಡವಿಕೊಳ್ಳುತ್ತಾರೆ. ನಮ್ಮೊಂದಿಗೆ ಪೋಲಿಜೋಕು ಹಂಚಿಕೊಳ್ಳುತ್ತಾರೆ. ಲಿಮಿಟ್ಟಾಗಿ ಗುಂಡು ಹಾಕಿ ಒಮ್ಮೊಮ್ಮೆ tight ಆಗುತ್ತಾರೆ. ನನ್ನಂಥ ಗೆಳೆಯರಿಗೆ ಅದೆಲ್ಲವೂ ಚೆಂದವೇ. ಮುಂದೆ ಅವರು ಮಂತ್ರಿಯಾದರಲ್ಲ? ಅವರಿಂದ ನಾನು ಯಾವ ಕೆಲಸವನ್ನೂ ಮಾಡಿಸಿಕೊಳ್ಳಲಿಲ್ಲ. We were Just friends.

ಅದೊಮ್ಮೆ ಅವರಿಗೆ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಅನಂತ ಮೂರ್ತಿಯವರು ಸಿಕ್ಕಿದ್ದಾರೆ. ಇಬ್ಬರೂ ಹರಟೆ ಮಲ್ಲರೇ. ಮಾತಿನ ಮಧ್ಯೆ ಬಹುಶಃ ವಿಶ್ವನಾಥ್ ಬರೆದ ಪುಸ್ತಕದ ಪ್ರಸ್ತಾಪ ಬಂದಿದೆ. ಅಂಥ ಹಿರಿಯ ಲೇಖಕರಾದ ಯು.ಆರ್.ಅನಂತಮೂರ್ತಿಯವರು “ಅದೆಷ್ಟು ಚೆನ್ನಾಗಿ ಬರೀತೀರಿ ವಿಶ್ವನಾಥ್! ಒಳ್ಳೆ ನಮ್ಮ ರವಿ ಬೆಳಗೆರೆಯ ‘ಹಾಯ್ ಬೆಂಗಳೂರ್!’ ಪತ್ರಿಕೆ ಓದಿಸಿಕೊಂಡು ಹೋಗೋಥರ ನಿಮ್ಮ ಪುಸ್ತಕ ಓದಿಸಿಕೊಂಡು ಹೋಗುತ್ತೆ..."ಅಂದರಂತೆ.

ಅದೇಕೋ ಇವತ್ತು ವಿಶ್ವನಾಥ್ ತುಂಬ ನೆನಪಾಗುತ್ತಿದ್ದಾರೆ. ಸದ್ಯಕ್ಕೀಗ ಅವರು ಅಧಿಕಾರದಲ್ಲಿಲ್ಲ. ಪ್ರೀತಿಯಿಂದ ನಾಲ್ಕು ಮಾತು ಬರೆಯಲು ಅಡ್ಡಿಯಿಲ್ಲ. ಅಲ್ವಾ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 15 September, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books