Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ದೋರಗಾಯಿ ಪ್ರೇಮಿಗಳೇಕೆ ದೂರವಾಗಿ ಬಿಡುತ್ತಾರೆ?

ಕ್ಲಾಸಿನಲ್ಲಿರೋದೇ ಮೂರೂ ಮುಕ್ಕಾಲು ಜನ. ಅವರ ಪೈಕಿಯೇ ಒಬ್ಬನನ್ನು ಪ್ರೀತಿಸಿಬಿಡಬೇಕು. ಪ್ರೀತಿಸಲೇಬೇಕು. ಏಕೆಂದರೆ, ಉಳಿದ ಎರಡೂ ಮುಕ್ಕಾಲು ಜನಕ್ಕಾಗಲೇ ಗೆಳೆಯ ಗೆಳತಿಯರಿದ್ದಾರೆ. ತೀರ ಒಬ್ಬ ಬಾಯ್ ಫ್ರೆಂಡೂ ಇಲ್ಲದ ಮೇಲೆ ಅದೂ ಒಂದು ಬದುಕೇನಾ? ಹೈಸ್ಕೂಲಿನ ಕೊನೆಯಲ್ಲಿ, ಪಿಯು ಕಾಲೇಜಿನ ಹೊಸ್ತಿಲಲ್ಲಿ ‘ಟೀನ್ ಲವ್’ ತರಹದ್ದೊಂದು ಆರಂಭವಾಗುವುದೇ ಹಾಗೆ.

ಈಗೊಂದು ವರ್ಷದ ಹಿಂದೆ ನನ್ನನ್ನು ಕಾಣಲು ಇಬ್ಬರು ಹುಡುಗರು ಬಂದಿದ್ದರು. ಇಬ್ಬರಿಗೂ ಹೆಚ್ಚೆಂದರೆ ಹದಿನೇಳು ವರ್ಷ ವಯಸ್ಸು. ನೌಕರಿಯಿಲ್ಲ. ಆ ಇಬ್ಬರ ಪೈಕಿ ಒಬ್ಬನು ಅಮರ ಪ್ರೇಮಿ. ಹುಡುಗಿಯ ತಂದೆ ತಾಯಿ ಶತಾಯಗತಾಯ ಒಪ್ಪುತ್ತಿಲ್ಲವಾದ್ದರಿಂದ, ನೀವೇ ನಮಗೆ ಸಹಾಯ ಮಾಡಿ ನನ್ನ ಮದುವೆ ಮಾಡಬೇಕು ಅಂತ ವಿನಂತಿಸಿದ. ಕಣ್ಣೀರಿಟ್ಟುಕೊಂಡ. ಅವಳಿಲ್ಲದೆ ಅಸಲು ನಾನು ಬದುಕಿಯೇ ಇರಲಾರೆ ಅಂದ. ‘ಅದಿರಲಿ ಕಣಯ್ಯಾ, ನಿನ್ನ ಹುಡುಗಿ ಎಲ್ಲಿ?’ ಅಂತ ಕೇಳಿದುದಕ್ಕೆ,

“ಹೊರಗಡೆ ನಿಮ್ಮಾಫೀಸಿನ ವಿಸಿಟರ್ಸ್ ರೂಮಿನಲ್ಲಿ ಕೂತಿದ್ದಾಳೆ" ಅಂದ. ಎದ್ದು ಹೋಗಿ ನೋಡಿದೆ. ಎದೆ ಒಡೆಯುವಂಥ ದೃಶ್ಯ ಕಾದಿತ್ತು.

ಆ ಹುಡುಗಿ ತನ್ನ ಸ್ಕೂಲ್ ಯೂನಿಫಾರ್ಮ್ ನಲ್ಲಿ ಇದ್ದಳು. ಒಂದು ರಾಶಿ ಪುಸ್ತಕಗಳಿರೋ ದೊಡ್ಡ ಸ್ಕೂಲ್ ಬ್ಯಾಗನ್ನು ಪಕ್ಕದ ಛೇರಿನ ಮೇಲಿಟ್ಟುಕೊಂಡು, ಅದಕ್ಕೆ ಆನಿಕೊಂಡು ನಿದ್ದೆ ಹೋಗಿ ಬಿಟ್ಟಿದ್ದಳು.

ಅವಳು ಇನ್ನೆರಡು ದಿನದಲ್ಲಿ ಮದುವೆಯಾಗಬೇಕಾದ ಹುಡುಗಿ!

ಹೆಚ್ಚೆಂದರೆ ಹದಿನಾರು ವರ್ಷ ವಯಸ್ಸಿರಬಹುದು. ಅಷ್ಟು ಚಿಕ್ಕವಳಿಗೆ ಮದುವೆ ಮಾಡಲಿಕ್ಕಾಗುತ್ತದಾ? ಕಾನೂನಿನ ವಿಷಯ ಒತ್ತಟ್ಟಿಗಿರಲಿ; ಅವಳ ಮದುವೆ ಕಡೆತನಕ ನಿಲ್ಲುತ್ತದಾ? ಟಿಕಾಯಿಸುತ್ತದಾ? ಬರಕತ್ತಾಗುತ್ತದಾ?

“ಖಂಡಿತ ಆಗೇ ಆಗುತ್ತದೆ" ಎಂಬ ಉತ್ತರ ಬಂತು. ಆ ಉತ್ತರ ಕೊಟ್ಟಿದ್ದು ಹುಡುಗನಲ್ಲ. ಹುಡುಗಿಯಲ್ಲ. ಉತ್ತರ ಕೊಟ್ಟದ್ದು ಅವರ ವಯಸ್ಸು. The teenage! ಆ ವಯಸ್ಸಿನ ದುಡುಕೇ ಅಂತಹುದು. ಹೈಸ್ಕೂಲಿನ ತುದಿ ತಲುಪುವ ಹೊತ್ತಿಗಾಗಲೇ ಅವರ ಮನಸ್ಸುಗಳಲ್ಲಿ ಒಬ್ಬ ಕಾಲ್ಪನಿಕ ಗೆಳತಿ ಅಥವಾ ಗೆಳೆಯನ ಅಸ್ಪಷ್ಟ ಚಿತ್ರವೊಂದು ಮೂಡಿಬಿಟ್ಟಿರುತ್ತದೆ. ತನ್ನ ಹುಡುಗ ಹೀಗಿರಬೇಕು ಅಂತ ಅಂದುಕೊಂಡುಬಿಟ್ಟಿರುತ್ತಾಳೆ. ಕ್ಲಾಸಿನಲ್ಲಿ ಹುಡುಗನೊಬ್ಬ ಕೈ ಚಾಚಿದ ಕೂಡಲೇ ಅವನಿಗಿಲ್ಲದ ಎಲ್ಲ ಗುಣಗಳನ್ನು ಆರೋಪಿಸಿ, ತಾನೇ ಕಲ್ಪಿಸಿಕೊಂಡು, ಕನಸಿನ ಹೀರೋ ಸಿಕ್ಕೇ ಬಿಟ್ಟ ಎಂದು ಸಂಭ್ರಮಿಸಿ ಬಿಡುತ್ತಾಳೆ. ತನ್ನ ಒಪ್ಪಿಗೆ ಕೊಟ್ಟು ಬಿಡುತ್ತಾಳೆ. ಅವತ್ತಿನಿಂದ ಆ ಹದಿನಾರರ ಹುಡುಗಿ ಈಸ್ ಅಫಿಷಿಯಲಿ ಇನ್ ಲವ್!

ಆ ಹಂತದಲ್ಲಿ ಅವಳಿಗೆ ತಮ್ಮೆಲ್ಲ ಕನಸುಗಳೂ ಖಂಡಿತ ನನಸಾಗುತ್ತವೆ ಎನಿಸುತ್ತದೆ. ಈ ಪ್ರೀತಿ ಶಾಶ್ವತ ಅಂದುಕೊಳ್ಳುತ್ತಾರೆ. ಒಂದೇ ಕಡೆ ಓದುತ್ತಿರುತ್ತಾರೆ. ಒಂದೇ ತರಹದ ವಾತಾವರಣ. ಒಂದೇ ಕಾಲೇಜು. ಇಬ್ಬರಿಗೂ ಅವರೇ ಕಾಮನ್ ಗೆಳೆಯ ಗೆಳತಿಯರು. ಮನೆಗಳ ವಾತಾವರಣವೂ ಒಂದೇ ತೆರನಾಗಿರುತ್ತವೆ. ಕೆಲವೊಮ್ಮೆ ಸಮಸ್ಯೆಗಳು ಕೂಡ.

ಪ್ರೇಮ ಸಾಮ್ರಾಜ್ಯದ ನಿಯಮದ ಪ್ರಕಾರ ‘ಒಂದೇ ವೇದಿಕೆಯ ಮೇಲೆ ಹುಟ್ಟುವ ಪ್ರೇಮ ಬಲು ಬೇಗ ಬೆಳೆದು ಬಿಡುತ್ತದೆ!’ ಅವರಿಬ್ಬರಿಗೆ, ಪ್ರೀತಿಸಲು ಶುರುವಾದ ತಕ್ಷಣ ಭಗವಂತನು ನಮ್ಮಿಬ್ಬರನ್ನೂ ಗಂಡ ಹೆಂಡತಿಯಾಗಲೆಂದೇ ಸೃಷ್ಟಿಸಿದ ಎಂಬಂತಹ ಭ್ರಮೆ ಮೂಡಿರುತ್ತದೆ. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಜೀವಿಸಲು ಸಾಧ್ಯವೇ ಇಲ್ಲ ಮತ್ತು ಜೀವಿಸ ಕೂಡದು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಅಕಸ್ಮಾತ್ ಆ ಹಂತದಲ್ಲಿ ಅವರೇನಾದರೂ ಮನೆಗಳಿಂದ ಓಡಿ ಬಿಟ್ಟರೆ, ಮದುವೆಯಾಗಿ ಬಿಟ್ಟರೆ, ಮಗು ಮಾಡಿಕೊಂಡು ಬಿಟ್ಟರೆ-ಫಿನಿಷ್. ಅವರನ್ನು ಬೇರ್ಪಡಿಸುವುದು ಭಗವಂತನಿಂದಲೂ ಸಾಧ್ಯವಾಗಲಾರದು. ಆದರೆ, ಆ ಅವಧಿಯಲ್ಲಿ ಅಂಥದ್ದೇನೂ ಆಗದಂತೆ ಅವರಿಬ್ಬರೂ ತಂತಮ್ಮ ಹೊಸ್ತಿಲುಗಳ ಒಳಗೇ ಉಳಿದರೋ?

ಕಾದು ನೋಡಿ: ಅವರನ್ನು ಅವರೇ ಬೇರ್ಪಡಿಸಿಕೊಂಡು ಬಿಡುತ್ತಾರೆ. ಈಗಿದ್ದರು, ಈಗಿಲ್ಲ ಎಂಬಂತೆ ಮರೆತು ಬಿಡುತ್ತಾರೆ. ಒಂದೇ ಒಂದು ಸಣ್ಣ ಬದಲಾವಣೆ ಸಾಕು: ಅವರ ಅಮರ ಪ್ರೇಮ ಮುನ್ಸೂಚನೆ ಕೂಡ ಕೊಡದಂತೆ ಕರಗಿ ಹೋಗುತ್ತದೆ.

“ಒಂದೇ ಶಾಲೆ, ಒಂದೇ ಟ್ಯೂಷನ್ ಕ್ಲಾಸು, ಒಂದೇ ಏರಿಯಾದಲ್ಲಿ ಮನೆ, ಫ್ರೆಂಡ್ಸ್ ಎಲ್ಲಾ ನಮ್ಮ ಥರದವರೇ ಇದ್ದರು. ಆದರೆ ಹೈಸ್ಕೂಲು ಮುಗಿದು ಅವನು ಬೇರೆ ಕಾಲೇಜಿಗೆ ಹದ. ಅದೇ ಕೊನೆ. ನಮಗೇ ಗೊತ್ತಿಲ್ಲದೆ ಒಬ್ಬರನ್ನೊಬ್ಬರು ಬಿಟ್ಕೋತ ಬಂದು ಬಿಟ್ವಿ. ಅವನಿಗೆ ಬೇರೆ ಫ್ರೆಂಡ್ಸ್ ಸಿಕ್ಕರು. ನಂಗೂ ಬೇರೆ ವಾತಾವರಣ. ಖಚಿತವಾಗಿ ಇಂಥ ದಿನದಿಂದಲೇ ನಾನು-ಅವನು split ಆದ್ವಿ, ಬೇರೆ ಬೇರೆ ಆದ್ವಿ ಅಂತ ಹೇಳಲಾರೆ. ಆದರೆ ಕ್ರಮೇಣ ಇಬ್ಬರಿಗೂ ಆಸಕ್ತಿ ಹೊರಟು ಹೋಗಿದ್ದು ನಿಜ. ಮತ್ತೆ ಯಾವತ್ತಾದರೂ ಸರಿ ಹೋಗುತ್ತೇನೋ ಅಂತ ಕಾದು ನೋಡಿದೆ. ಉಹುಂ, ಸರಿ ಹೋಗಲೇ ಇಲ್ಲ." ಟೀನೇಜ್ ಪ್ರೀತಿಯನ್ನು ಕಾಲೇಜಿನ ಮೆಟ್ಟಿಲ ಮೇಲೆ ಕಳೆದುಕೊಂಡ ಎಷ್ಟೋ ವರ್ಷಗಳ ನಂತರ ಸ್ತ್ರೀಯೊಬ್ಬಳು ತನ್ನ ಸ್ವಗತಕ್ಕೆಂಬಂತೆ ಆಡಿಕೊಂಡ ಮಾತುಗಳಿವು.

ಹಾಗೆ ಬೆಳೆಯುತ್ತ ಬೆಳೆಯುತ್ತ ಬೇರೆ ಬೇರೆಯಾದುದಕ್ಕೆ ಇಬ್ಬರೂ ಬೇಸರಪಟ್ಟುಕೊಳ್ಳಲಿಲ್ಲ. ನಾಳೆಯಿಂದ ನಿಂಗೂ ನಂಗೂ ಸಂಬಂಧವಿಲ್ಲ ಅಂತ ಎದುರಾಬದುರಾ ನಿಂತು ಹೇಳಿಕೊಳ್ಳಲಿಲ್ಲವಾದರೂ-ಅವರಿಬ್ಬರಿಗೂ ತಾವು split ಆಗುತ್ತಿರುವುದು ಸ್ಪಷ್ಟವಿತ್ತು. ಅದರ ಬಗ್ಗೆ ಇಬ್ಬರಿಗೂ ತಕರಾರಿರಲಿಲ್ಲ. ಆದರೆ ಎಲ್ಲರೂ ಇಷ್ಟು ನಿರಾಯಾಸವಾಗಿ ಒಬ್ಬರನ್ನೊಬ್ಬರು ಕಳೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ಹುಡುಗರು ಹಠಕ್ಕೆ ಬೀಳುತ್ತಾರೆ. ನಿನ್ನೆ ತನಕ ಇದ್ದ ಪ್ರೇಮ ಇವತ್ತೇನಾಯಿತು? ನಿನ್ನ ಮೇಲೆ ಎಷ್ಟೊಂದು ವರ್ಷ, ಎಷ್ಟೊಂದು ಕನಸುಗಳನ್ನು ಖರ್ಚು ಮಾಡಿದ್ದೆ. ನನ್ನ ಯಾವ ಕನಸಿಗೆ ಎಷ್ಟು ಕಿಮ್ಮತ್ತು ಕಟ್ಟುತ್ತೀ ಎಂದೆಲ್ಲ ಲೆಕ್ಕ ಕೇಳುತ್ತಾರೆ. ನಮ್ಮಿಬ್ಬರ ಪ್ರೀತಿ ಸುಳ್ಳಾಗುವುದು ಸಾಧ್ಯವೇ ಇಲ್ಲ ಅಂತ ವಾದಿಸುತ್ತಾರೆ. ಆದರೆ ವಾತಾವರಣದ ಬದಲಾವಣೆ ಎನ್ನುವುದು ಎಲ್ಲವನ್ನೂ ಸುಳ್ಳಾಗಿಸುತ್ತ ಹೋಗುತ್ತದೆ.

“ಹುಬ್ಬಳ್ಳಿಯಲ್ಲಿರೋ ತಂಕಾ ನಮ್ಮ ಪ್ರೀತಿಗೆ ಒಂದೇ ಒಂದೂ ತೊಂದರೆ ಇರಲಿಲ್ಲ. ಆದರೆ ನಿತಿನ್ ಬೆಂಗಳೂರಿಗೆ ಹೋಗಿಬಿಟ್ಟ. ಆಗಾಗ ಬರುತ್ತಿದ್ದ. ಪತ್ರ ಬರೀತಿದ್ದ. ಫೋನ್‌ನಲ್ಲಿ ಗಂಟೆಗಟ್ಲೆ ಮಾತಾಡ್ತಿದ್ದ. ಆದರೆ ಕ್ರಮೇಣ ಹುಬ್ಬಳ್ಳಿಗೆ ಬರೋದನ್ನೇ ಬಿಟ್ಟು ಬಿಟ್ಟ. ಪತ್ರಗಳು ಅಪರೂಪ ಆದವು. ಬೇಗ ಫೋನಿಟ್ಟು ಬಿಡೋಕೆ ಶುರು ಮಾಡ್ದ. I am sure, ಅವನನ್ನ ಬೆಂಗಳೂರು ತಿಂದು ಹಾಕಿ ಬಿಡ್ತು" ಅಂತ ರಮ್ಯ ಬರೆದಿದ್ದಾಳೆ.

ಅದು ನಿಜ. ಊರು ಬದಲಾದರೆ, ಪ್ರಪಂಚ ಬದಲಾಗುತ್ತೆ. ಹೊಸ ಪ್ರಪಂಚದಲ್ಲಿ ಹೊಸ ಆಕರ್ಷಣೆಗಳು. ಹಳೆಯವೆಲ್ಲ ರುಚಿಹೀನ ಅನ್ನಿಸೋಕೆ ಶುರುವಾಗ್ತವೆ.

ತೀರ ಹದಿನೇಳು-ಹದಿನೆಂಟು ವರ್ಷಕ್ಕೇನೇ ಒಬ್ಬಳಿಗೆ ಕಮಿಟ್ ಆಗಿ ಅವಳ ಜೊತೇಲೇ ಸಾಯೋತಂಕಾ ಬದುಕಿರಬೇಕು ಅನ್ನೋ ಕಲ್ಪನೆ ಇದೆಯಲ್ಲ? ಅದು ಬಂಧನ ಅನ್ನಿಸೋಕೆ ಶುರುವಾಗುತ್ತೆ. ಯಾರ ಜೊತೇಲಿ ನಾವು ಬದುಕು ಕಳೀಬೇಕು ಅಂತ ನಿರ್ಧರಿಸೋದಿದೆಯಲ್ಲ? ಅದು ತುಂಬ ದೊಡ್ಡ ನಿರ್ಧಾರವಾಗಿರುತ್ತೆ. ತೀರ ಚಿಕ್ಕ ವಯಸ್ಸಿನಲ್ಲಿ ಅವಸರಕ್ಕೆ ಬಿದ್ದು ಅಂಥ ನಿರ್ಧಾರ ಮಾಡಿದಾಗ, ಜೀವನದುದ್ದಕ್ಕೂ ನಮಗೆ ಸಿಗೋ ಬೇರೆ ಬೇರೆ ಅವಕಾಶಗಳನ್ನ, choiceಗಳನ್ನ ಕಳ್ಕೊಂಡು ಬಿಡಬೇಕಾಗುತ್ತೆ. ಬರ‍್ತಾ ಬರ‍್ತಾ, ದೋರಗಾಯಿ ವಯಸ್ಸಿನ ಪ್ರೇಮಕ್ಕೆ ಯಾಕಾದರೂ ಬಿದ್ದೆನೋ ಅಂತ ಚಡಪಡಿಸೋ ಹಾಗಾಗುತ್ತೆ. ಅಂಥ ಸನ್ನಿವೇಶದಲ್ಲಿ ಗಂಡು ಮತ್ತು ಹೆಣ್ಣು-ಇಬ್ಬರೂ ಬೇರೆ ಬೇರೆ ಅವಕಾಶಗಳಿಗಾಗಿ ಕಣ್ಣರಳಿಸ್ತೀವಿ. ದೋರಗಾಯಿ ಪ್ರೇಮ ಪಕ್ವವಾಗೋ ಮೊದಲೇ ಸತ್ತು ಹೋಗಿರುತ್ತೆ."

ಇದು ಮನಶ್ಶಾಸ್ತ್ರ ತಜ್ಞರ ಅಭಿಪ್ರಾಯ.

ತುಂಬ ದಿನ ಒಬ್ಬರಿಂದ ಒಬ್ಬರು ಅಗಲಿರೋದು ಕೂಡ ಈ ದೋರಗಾಯಿ ವಯಸ್ಸಿನ ಪ್ರೇಮವನ್ನು ಕೊಂದು ಹಾಕಿ ಬಿಡುತ್ತೆ. ಬಿಟ್ಟು ಹೋಗಿರೋ ಹುಡುಗ ಎಷ್ಟು ದಿನವಾದರೂ ಹಿಂತಿರುಗದಿದ್ದಾಗ, ಅವಳು ಮೊದಲು ಚಡಪಡಿಸುತ್ತಾಳೆ. ಸಾಯೋತನಕಾ ನಿಂಗೋಸ್ಕರ ಕಾಯ್ತಿರ‍್ತೀನಿ ಅಂತ ಆಣೆ ಮಾಡಿದವಳು “ಎರಡು ವರ್ಷ ಕಾದುಬಿಟ್ಟೆ: ಇನ್ನೆಷ್ಟು ದಿನ?" ಅಂತ ತನ್ನನ್ನು ತಾನೇ ಕೇಳಿಕೊಳ್ಳಲಾರಂಭಿಸುತ್ತಾಳೆ. ಅಷ್ಟೇ ಅಲ್ಲ, ಬಿಟ್ಟು ಹೋದವನನ್ನು ಮರೆಯಲೇ ಬೇಕಾದಂತಹ ಒತ್ತಡಗಳು ಅವಳ ಮೇಲೆ ಬೀಳೋಕೆ ಶುರುವಾಗ್ತವೆ. ಇನ್ಯಾರೋ ಹುಡುಗ, ಮತ್ಯಾವುದೋ ಆಕರ್ಷಣೆ, ಅಪ್ಪ-ಅಮ್ಮನ ಗದರಿಕೆಗಳು... ಒಂದು ದೋರಗಾಯಿ ಪ್ರೀತಿಯನ್ನ ಕೊಂದು ಬಿಡೋಕೆ ಅಷ್ಟು ಸಾಕು!

ಹೀಗೆ ಹದಿಹರೆಯ ಪ್ರೇಮಗಳ ಕೊಂಡಿ ಕಳಚಿ ಹೋಗೋಕೆ ಮತ್ತೂ ಒಂದು ಕಾರಣವಿದೆ. ಆ ವಯಸ್ಸಿನಲ್ಲಿ ಪ್ರೀತಿಸಿದ್ದು ನಿಜ. ಏನೇ ಕಷ್ಟ ಬಂದರೂ ಒಂದಾಗ್ತೀವಿ ಅಂದುಕೊಂಡಿದ್ದೂ ನಿಜ. ಆದರೆ ಕಾಲೇಜಿಗೆ ಹೋಗ್ತಾ ಇದ್ದಷ್ಟು ದಿನ ಕಷ್ಟಗಳಾದರೂ ಎಲ್ಲಿ ಬಂದವು? ಹೊರಡುವಾಗ ಮನೇಲಿ ತಿಂಡಿ, ಹಸಿವಾದರೆ ಕ್ಯಾಂಟೀನು, ದುಡ್ಡು ಕಡಿಮೆ ಬಿದ್ರೆ ಸಾಲ ಕೊಡೋ ಗೆಳೆಯರು. ಸಾಯಂಕಾಲದ ಹೊತ್ತಿಗೆ ಅವಳು ಸಿಕ್ಕೇ ಸಿಗ್ತಾಳೆ. ಹೀಗಾಗಿ ಲೈಫ್ ಈಸ್ ಬ್ಯೂಟಿಫುಲ್! ಆದರೆ ಕಾಲೇಜು ಮುಗಿದ ಮಾರನೆ ದಿನದಿಂದಲೇ ಬದುಕು ಧುತ್ತೆಂದು ತನ್ನ ಅಸಲಿ ರೂಪದೊಂದಿಗೆ ಪ್ರತ್ಯಕ್ಷವಾಗುತ್ತದೆ. “ನಮ್ಮಿಬ್ಬರ ಭವಿಷ್ಯದ ಬಗ್ಗೆ ಏನು ಯೋಚನೆ ಮಾಡಿದಿ?" ಅಂತ ಕೇಳಲು ಶುರುವಿಡುತ್ತಾಳೆ ಹುಡುಗಿ. ಅವನಿನ್ನೂ ‘ತನ್ನೊಬ್ಬನ’ ಭವಿಷ್ಯದ ಬಗ್ಗೆಯೇ ಯೋಚಿಸಿರುವುದಿಲ್ಲ. ಇನ್ನು ‘ತಮ್ಮಿಬ್ಬರ’ ಬಗ್ಗೆ ಯೋಚಿಸುವುದೆಲ್ಲಿಂದ ಬಂತು? ಇನ್ನೂ ಕೆಲವು ವರ್ಷ ಕಾಯೋಣ ಅನ್ನುತ್ತಾನೆ. ದನಿಯಲ್ಲಿ ಭರವಸೆ ಇರುವುದಿಲ್ಲ. ಹುಡುಗಿ ತಾನಿನ್ನು ಕಾಯಕೂಡದು ಎಂದು ನಿರ್ಧರಿಸುತ್ತಾಳೆ.

ದೋರ ಪ್ರೇಮಿಗಳು ದೂರವಾಗಿ ಬಿಡುತ್ತಾರೆ.

ಕೆಲವೊಮ್ಮೆ ಅದು ಇಬ್ಬರಿಗೂ ಒಳ್ಳೆಯದೇ ಆಗಿರುತ್ತದೆ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 September, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books