Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಕೊಂದು ಹೋದ ಆಗುಂತುಕನಲ್ಲಿ ಅಸಲು ಲಾಜಿಕ್ ಎಂಬುದಿರುವುದಿಲ್ಲ!

ತುಂಬ ಕಸಿವಿಸಿ.

ನಾನು ವಿಪರೀತ disturb ಆಗಿದ್ದೇನೆ. ಸುದ್ದಿ ಕೇಳಿದ ತಕ್ಷಣ ಧಾರವಾಡಕ್ಕೆ ಹೊರಡಲು ಸಿದ್ಧನಾದೆ. ಫೋನ್ ಮಾಡಿದರೆ ಅಶೋಕ ಶೆಟ್ಟರ್ ರಿಸೀವ್ ಮಾಡಲಿಲ್ಲ. ಅವನಷ್ಟೇ ಅಲ್ಲ: ಧಾರವಾಡದ ನನ್ನ ಅನೇಕ ಗೆಳೆಯರ ಮನಸ್ಥಿತಿ ಏನಾಗಿರಬಹುದು ಎಂಬುದು ನನ್ನ ಅಂದಾಜಿಗಿದೆ. It is a nasty thing. ಸತ್ತು ಹೋಗಿರುವುದು, ನಮ್ಮ ಪಾಲಿಗೆ ಗುರುವೂ, ಮಿತ್ರರೂ, ಆತ್ಮೀಯರೂ ಆದ ಎಂ.ಎಂ.ಕಲಬುರ್ಗಿಯವರು. ಬೇಸರವಾಗಲಿಕ್ಕೆ ಬೇರೆ ಇನ್ನೇನು ಬೇಕು? ಅದಾದರೂ ಮತ್ತೆಲ್ಲೋ ಆದ ಹತ್ಯೆಯಲ್ಲ. ಅತ್ಯಂತ ನೆಮ್ಮದಿಯಾದ, ನಿವೃತ್ತ ಪ್ರೊಫೆಸರುಗಳಿಗೆ ಹೇಳಿ ಮಾಡಿಸಿದಂತಿರುವ ಕಲ್ಯಾಣನಗರದಲ್ಲಿ. ನಾನು ಅನೇಕ ಸಲ ಒಂದು ಮಾತು ಅನ್ನುತ್ತಿರುತ್ತೇನೆ. “ಬ್ಯಾರೆ ಊರು ಕೆಟ್ಟ ಹಾಗೆ ಈ ಧಾರವಾಡ ಕೆಟ್ಟಿಲ್ಲ. ಇವತ್ತಿಗೂ ಅದು calm and quiet" ಅಂತ. ನನಗೆ ಆ ರಸ್ತೆ, ಕಲಬುರ್ಗಿಯವರ ಮನೆ-ಎಲ್ಲವೂ ಕಣ್ಣಿಗೆ ಕಟ್ಟಿದಂತೆ ನೆನಪಿವೆ. ಕಲಬುರ್ಗಿಯವರು ತರಗತಿಯಲ್ಲಿ ನಿಂತು ಪಾಠ ಮಾಡಿದವರಲ್ಲ ನನಗೆ. ಆದರೆ ಅತ್ಯಂತ ಅಕ್ಕರೆಯ ಮನುಷ್ಯ. ನಮ್ಮ ಚಂಪಾ, ಗಿರಡ್ಡಿ ಗೋವಿಂದರಾಜ, ಸಿದ್ದಲಿಂಗ ಪಟ್ಟಣಶೆಟ್ಟಿ, ತೋಂಟದಾರ್ಯ, ಇಮ್ರಾಪುರ ಮುಂತಾದವರೆಲ್ಲ ಪ್ರೊ.ಕಲಬುರ್ಗಿಯವರಿಗೆ ಹಿಂಚುಮುಂಚು ಓರಗೆಯವರು. ಆ ಸಾಲಿಗೆ ನಮ್ಮ ಚನ್ನವೀರ ಕಣವಿಯವರೂ ಸೇರುತ್ತಾರೆ. ಇವರು ನನ್ನಂಥ ಕಿರಿಯರಿಗೆ ಪ್ರಾತಃಸ್ಮರಣೀಯರು. ‘ಎಪ್ಪತ್ತು ದಾಟಿವೆ: ಎಂಬತ್ತಕ್ಕೆ ತಲುಪಿಲ್ಲ’ ಅನ್ನಬಹುದಾದ age groupನವರಿವರು. ನಾವು ನಿಜಕ್ಕೂ ಗೌರವಿಸುವ, ಆತ್ಮೀಯರಾದ, ಮನಬಿಚ್ಚಿ ಮಾತನಾಡಬಲ್ಲಂತಹ ಮನೆ ಹಿರಿಯರು. ಈಗೊಂದು ವರ್ಷದ ಹಿಂದೆ ಕಲಬುರ್ಗಿಯವರಿಗೆ ನಾನೇ ಫೋನ್ ಮಾಡಿದ್ದೆ. ಯಾವುದೋ ಜಿಜ್ಞಾಸೆ. ಧರ್ಮಕ್ಕೆ ಸಂಬಂಧಿಸಿದ ವಿಷಯ. ಅವರಾದರೂ ಬಿಡುವಾಗಿದ್ದಿರಬೇಕು. ಸಾಕಷ್ಟು ಹೊತ್ತು ಹರಟಿದರು. ಅವರು ನನ್ನನ್ನು ಏಕವಚನದಲ್ಲೇ ಸಂಬೋಧಿಸುತ್ತಿದ್ದರು. “ಭೀಮಾತೀರದ ಹಂತಕರು" ಸೀರೀಸ್ ಬರೆಯುತ್ತಿದ್ದಾಗ “ನಮ್ದೇ ಊರಿನ ಸುದ್ದಿ ಬರಿಯಾಕ ಕುಂತೀಯಲ್ಲೋ" ಅಂದಿದ್ದರು. ಅವರು ಸಿಂದಗಿ ತಾಲೂಕಿನವರು. ಕರಾರುವಾಕ್ಕಾಗಿ ಇಂಥದೇ ಊರಿನವರು ಅಂತ ಗೊತ್ತಿರಲಿಲ್ಲ.

ನಾನು ಹುಟ್ಟಿ ಬೆಳೆದದ್ದು ಬಳ್ಳಾರಿಯಲ್ಲಿ. ಆದರೆ ಎರಡು ವರ್ಷ ಧಾರವಾಡದಲ್ಲಿ ಇದ್ದು ಎಂ.ಎ., ಪದವಿ ಮಾಡಿದೆ. ಮುಂದೆ ‘ಸಂಯುಕ್ತ ಕರ್ನಾಟಕ’ಕ್ಕಾಗಿ ಆರು ವರ್ಷ ಹುಬ್ಬಳ್ಳಿಯಲ್ಲಿ ನೌಕರಿ ಮಾಡಿದೆ. ಹೀಗಾಗಿ ಆ ಸೀಮೆಯೆಂದರೆ ವಿಶೇಷ ಪ್ರೀತಿ. ಒಟ್ಟಾರೆಯಾಗಿ ನನ್ನ ರೂಟ್ಸ್ ಇರುವುದೇ ಉತ್ತರ ಕರ್ನಾಟಕದಲ್ಲಿ. I love the places. ಕಲಬುರ್ಗಿಯವರು ಎಲ್ಲೋ ಕುಳಿತು ಕತೆ-ಕಾದಂಬರಿ ಬರೆದವರಲ್ಲ. ಅವರು ಶುದ್ಧಾಂಗ ಸಂಶೋಧಕರು. ಅವರು ತುಂಬ ಸ್ಫುಟವಾದ ಕಮ್ಯುನಿಸ್ಟರೂ ಅಲ್ಲ. ಆದರೆ ಏನನ್ನು ಬೇಕಾದರೂ ಬೆನ್ನು ಹತ್ತಿ ಅದರ ಬುಡ ತಲುಪಲು ಹೇಳಿ ಮಾಡಿಸಿದಂತಹ ಪಂಡಿತರು. ಒಂದು ನಿರ್ದಿಷ್ಟ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡಬಹುದಾಗಿದ್ದವರು. He was very honest. ಕೆಲವು ವಿವಾದಗಳಿಗೆ ಅವರು ಈಡಾದರು. ಆದರೆ ವ್ಯಕ್ತಿಗತವಾಗಿ ಪ್ರತಿ ವಿಷಯದಲ್ಲೂ ನಿಚ್ಚಳವಾಗಿದ್ದವರು. ಹಂಪೆಯಲ್ಲಿ ನನಗೊಂದು ಸಲ ಸಿಕ್ಕಿದ್ದರು. ಆಗ ಅವರು ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಹಣದ ವಿಷಯದಲ್ಲಿ ಅವರು ಖಂಡ ತುಂಡ. ಹೆಂಗಸರ ವಿಷಯಕ್ಕೆ ಹೆಸರು ಕೆಡಿಸಿಕೊಂಡವರಲ್ಲ. ಕುಡಿತಕ್ಕೆ ಕೈ ಹಚ್ಚಿದವರಲ್ಲ. ಖಾಲಿ ಪುಗಸಟ್ಟೆ ಏನನ್ನೋ ಬರೆದು, ಅದೇ ಸಂಶೋಧನೆ ಅಂದವರೂ ಅಲ್ಲ. ಧಾರವಾಡದಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಪ್ರೊಫೆಸರ್ ಕಲಬುರ್ಗಿ ಕನ್ನಡ ವಿಭಾಗದ ಪ್ರೊಫೆಸರ್ ಆಗಿದ್ದರು. ನಾನು ಇತಿಹಾಸದ ವಿದ್ಯಾರ್ಥಿ. ನನ್ನ ಚಟುವಟಿಕೆಗಳ ವ್ಯಾಪ್ತಿ ದೊಡ್ಡದಿತ್ತಲ್ಲ? ಬೆಳಗಾದರೆ ಸಾಕು, ಕನ್ನಡ ಡಿಪಾರ್ಟ್‌ಮೆಂಟ್‌ಗೆ ಎಡತಾಕುತ್ತಿದ್ದೆ. ಆಗ ನಮಗೆ ನಾಟಕ ಕಲಿಸುತ್ತಿದ್ದವರು ಪ್ರೊ. ತೋಂಟದಾರ್ಯರು. ಅವರೊಂದಿಗೇ ಸದಾ ಇರುತ್ತಿದ್ದವರು, ಪ್ರೊ. ಮುರಿಗೆಪ್ಪ. ತೀರ ಇತ್ತೀಚೆಗೆ ಮುರಿಗೆಪ್ಪನವರು ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಿವೃತ್ತರಾದರು. ಇನ್ನು ಇಂಗ್ಲಿಷ್ ವಿಭಾಗಕ್ಕೆ ಕಾಲಿಟ್ಟರೆ ಸಿಗುತ್ತಿದ್ದವರು ಚಂಪಾ. ಆಗ ನಾನು ಶಾಲ್ಮಲಾ ಹಾಸ್ಟೆಲ್ ಮತ್ತು ನಿಜಲಿಂಗಪ್ಪ ಹಾಸ್ಟೆಲುಗಳಲ್ಲಿ ವಾಸ ಮಾಡುತ್ತಿದ್ದೆ. ಅವೆರಡೂ ಅಲ್ಲದೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದಲ್ಲೂ ನಾನು ಚಟುವಟಿಕೆಯಿಂದ ಇರುತ್ತಿದ್ದೆ. ಈ ಮೂರಕ್ಕೂ ನಾನು ಕಲ್ಚುರಲ್ ಸೆಕ್ರೆಟರಿ. ಹೀಗಾಗಿ ಅಷ್ಟು ಪ್ರೊಫೆಸರುಗಳೂ ಪರಿಚಿತರೇ. ಒಂದರ್ಥದಲ್ಲಿ ಅವರೆಲ್ಲರೂ ನನ್ನ ಗುರುಗಳೇ. ಬಿಟ್ಟರೆ, ನನಗೆ ನೇರವಾಗಿ ಪಾಠ ಮಾಡಿದವರು ಡಾ. ಷ.ಶೆಟ್ಟರ್, ಡಾ. ಸಿಂದಗಿ ರಾಜಶೇಖರ್ ಮುಂತಾದವರು. ಅವತ್ತಿನ ದಿನಗಳಲ್ಲಿ ಪ್ರೊ. ರಂಗಸ್ವಾಮಿ ಹಾಗೂ ಪ್ರೊ. ಕುಪ್ಪುಸ್ವಾಮಿ ನನಗೆ ಗುರುಗಳಾಗಿದ್ದರು. ನಿಜಕ್ಕೂ ಅಪರೂಪದ ಸೌಂದರ್ಯವತಿಯಾದ ಮೇಡಂ ಫರೀದಾ ಗಣಿಹಾರ್ ನಮಗೆ ಹೊಯ್ಸಳರ ಕುರಿತು ಪಾಠ ಮಾಡುತ್ತಿದ್ದರು. ಅವರ ಪಾಠ ಕೇಳಿಸಿಕೊಂಡದ್ದೊಂದು ಬಿಟ್ಟು ಉಳಿದೆಲ್ಲ ಅಧ್ಯಯನವನ್ನೂ ಮಾಡುತ್ತಿದ್ದೆವು. ನೋಡಲಿಕ್ಕೆ ಆಕೆ ಕೊಂಚ ಹಿಂದಿ ನಟಿ ನೀತೂ ಸಿಂಗ್ ಥರಾ ಇದ್ದರು ಎಂಬುದು ಇವತ್ತಿಗೂ ನೆನಪಿದೆ.

“ಏ ರವೀ, ಬಾ ಇಲ್ಲೀ..." ಅಂತ ಕರೆದರೆಂದರೆ ಅವರು ಕಲಬುರ್ಗಿಯವರೇ! ಅಂತಹ ಪ್ರೀತಿ, ಸಲುಗೆ ಅವರಿಗಿದ್ದವು. ಮೊದಲು ಅವರನ್ನು ನೋಡಿದ್ದು 1977ರಲ್ಲಿ. ಆಗ ಹೇಗಿದ್ದರೋ, ಈ ಮೂವತ್ತು ಚಿಲ್ಲರೆ ವರ್ಷಗಳ ನಂತರವೂ ಅವರು ಹಾಗೇ ಇದ್ದರು. ಅವರ ತೂಕ ಅರಪಾವು ಕಡಿಮೆಯಾಗಲಿಲ್ಲ. ಅರಪಾವು ಕಡಿಮೆಯೂ ಆಗಿರಲಿಲ್ಲ. ಧ್ವನಿಯೂ ಹಾಗೇ ಇತ್ತು. ಮಾತಿಗೆ ನಿಂತರೆ ಓತಪ್ರೋತ. ಎಂದಿಗೂ ಅವರು ಗೊಡ್ಡು ಭಾಷಣ ಮಾಡಿದವರಲ್ಲ. ಅದಕ್ಕಿಂತ ಮಿಗಿಲಾಗಿ ಕಲಬುರ್ಗಿಯವರು ಲಾಬಿ-ಗೀಬಿ ಮಾಡಿದವರಲ್ಲ. ಬದುಕಿನ ಅಷ್ಟೂ ವರ್ಷಗಳನ್ನು ಅವರು ವಿನೋದವಾಗಿಯೇ ಕಳೆದರು. ಮೊನ್ನೆ ನಿರ್ದಯಿ ಹಂತಕ ಅವರಿಗೆ ಗುಂಡು ಹಾಕಿದಾಗ, ಬಹುಶಃ ಕಲಬುರ್ಗಿಯವರಿಗೆ ತಮ್ಮ ಕೊಲೆಯಾಗುತ್ತಿದೆ ಅಂತ ಅನ್ನಿಸಿರಲಿಕ್ಕೂ ಇಲ್ಲ. ಅಂಥ ನಿರುಮ್ಮಳ ಸಾವು.

ಅವರು ಮೊದಲು ವಿವಾದಕ್ಕೆ ಈಡಾದದ್ದು ತಮ್ಮ ‘ಮಾರ್ಗ’ ಕೃತಿಯಿಂದಾಗಿ. ತೀರಾ ಸಣ್ಣಗೆ ಶುರುವಾದ ಆ ವಿವಾದ ಮುಂದೆ ಸಾಕಷ್ಟು ದೊಡ್ಡ ತಲೆ ನೋವೇ ಆಯಿತು. ಅದರಿಂದಾಗಿ ಪ್ರೊ. ಕಲಬುರ್ಗಿ ಸಾಕಷ್ಟು humiliate ಆಗಿದ್ದರು. ನನಗೆ ನೆನಪಿದ್ದ ಮಟ್ಟಿಗೆ ಕಲಬುರ್ಗಿ ತಮ್ಮ ‘ಮಾರ್ಗ’ ಕೃತಿಯಲ್ಲಿ ಹೆಸರಾಂತ ಶರಣ ಚೆನ್ನಬಸವಣ್ಣನ ಬಗ್ಗೆ, ಚೆನ್ನಬಸವಣ್ಣನ ಹುಟ್ಟಿನ ಬಗ್ಗೆ ಬರೆದಿದ್ದರು. ಬೇರೆಯವರಾಗಿದ್ದಿದ್ದರೆ ಅವತ್ತಿನ ಆ ವಿವಾದವನ್ನು ಅರಗಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. Fortunately ಅವರು ಲಿಂಗಾಯತ ಸಮುದಾಯದವರಾಗಿದ್ದರು. ಹಾಗಿದ್ದೂ ಅವರು ತೊಂದರೆ ಅನುಭವಿಸಬೇಕಾಯಿತು. ಸಾಲದೆಂಬಂತೆ, ಅದರ ಬೆನ್ನ ಹಿಂದೆಯೇ ಅವರು ‘ಮಾರ್ಗ-2’ ಕೃತಿಯನ್ನು ಬಿಡುಗಡೆ ಮಾಡಲಿಕ್ಕಿದ್ದರು.

ಆ ವಿವಾದ ನಡೆಯುತ್ತಿದ್ದ ದಿನಗಳಲ್ಲೇ ನಾನೊಮ್ಮೆ ಧಾರವಾಡಕ್ಕೆ ಹೋದೆ. ಅಲ್ಲಿ ಅನಿರೀಕ್ಷಿತವಾಗಿ ಇವನು ಸಿಕ್ಕ: ಪುಂಡಲೀಕ ಶೇಠ. ಅವನನ್ನು ನಾನು ‘ಭೂಲೋಕದಲ್ಲಿ ಯಮರಾಜ’ ಅಂತಲೇ ಅನ್ನುತ್ತಿದ್ದೆ. ಅವನ ಪರ್ಸನಾಲಿಟಿ ಹಾಗಿತ್ತು. ಬರವಣಿಗೆ ನಡುವೆಯೇ ಅವನಿಗೆ ಸಿನೆಮಾದಲ್ಲಿ ನಟಿಸುವ ಖಯಾಲಿ. ಜೊತೆಗೊಂದು ಸೆಕ್ಸ್ ಮ್ಯಾಗಝೀನ್ ಮಾಡಿದ್ದ. ಅದರ ಹೆಸರು ‘ವಯಸ್ಕರಿಗಾಗಿ’ ಅಂತೇನೋ ಇರಿಸಿದ್ದ. ಅಂಥ ಕೊಳಕು ಪತ್ರಿಕೆ ಯಾಕೆ ಆರಂಭಿಸಿದೆ ಎಂದು ಗೆಳೆಯನೊಬ್ಬ ಪುಂಡಲೀಕನಿಗೆ ಗಂಟು ಬಿದ್ದ. ಬೈಯ್ಯುತ್ತಿದ್ದ. ಅದಕ್ಕೆ ಇವನೇನಂದ ಗೊತ್ತೆ? “ಏ ಭಾಳ ಮನಸಿಗೆ ಹಚಗೋ ಬ್ಯಾಡ ದೋಸ್ತ ಬಂದಿದ್ರಾಗ ಎಲ್ಲರೂ ಹಂಚಿಕೊಂಡು ತಿನ್ನೋಣ" ಅಂದು ಬಿಡುವುದಾ? ಹಾಸ್ಯ ಎಂಬುದು ಪುಂಡಲೀಕನ ವ್ಯಕ್ತಿತ್ವದಲ್ಲೇ ಇತ್ತು. ‘ಲಂಕೇಶ್ ಪತ್ರಿಕೆ’ಗೆ ಅವನು ‘ಹುಬ್ಬಳ್ಳಿಯಂವ’ ಅಂಕಣ ಬರೆಯುತ್ತಿದ್ದ. ಆಗ ನಾವು ಮೂರೂ ಜನ ಪರಮಾಪ್ತರು. ನಾನು, ಪುಂಡ ಮತ್ತು ಜಿ.ಎಚ್.ರಾಘವೇಂದ್ರ. ನಾವು ಸೇರಿದೆವು ಅಂದರೆ ಸಾಕು: ನಗೆಯೋ ನಗೆ. ಅವತ್ತು ನನಗೆ ಧಾರವಾಡದಲ್ಲಿ ಪುಂಡ ಸಿಕ್ಕನಲ್ಲ? ಏನೋ ಮಾತನಾಡುತ್ತ ನಡೆಯುತ್ತಿದ್ದವರಿಗೆ ಹಠಾತ್ತನೆ ಪ್ರೊ.ಕಲಬುರ್ಗಿ ಸಿಕ್ಕುಬಿಟ್ಟರು. ಅವರ ‘ಮಾರ್ಗ’ ವಿವಾದ ಆಗಷ್ಟೆ ನಡೆದಿತ್ತು. ಅವರಿಗೆ ಪುಂಡ ಏನು ಹೇಳಿದ ಗೊತ್ತೆ?

‘'ಸರ್, ನೀವು ಅದಕ್ಕೆ ಹಕ್ಕುದಾರರು. ಮಾರ್ಗ-ಒಂದು, ಮಾರ್ಗ-ಎರಡು ಅಂತ ಬರೆದೀರಿ. ಅಷ್ಟು ಸಾಕು: ‘ದುಮಾರ್ಗ-ಮೂರು’ ಅಂತ ನಾನು-ರವಿ ಸೇರಿ ಬರೀತೀವಿ!" ಅಂದು ಬಿಡೋದಾ? ಕಲಬುರ್ಗಿಯವರು ದೊಡ್ಡ ನಗೆ ನಕ್ಕಿದ್ದರು.

ಅದಕ್ಕಿಂತ ತಮಾಷೆ ಎಂದರೆ ಆಗೊಬ್ಬರು ಮಟ್ಟಿ ಮಾಸ್ತರ್ ಅಂತೊಬ್ಬರಿದ್ದರು-ನಿವೃತ್ತ ಶಿಕ್ಷಕರಿರಬೇಕು. ಎರಡೂ ಕಾಲು ಬಿಲ್ಲಿನಂತೆ ಬಾಗಿದ್ದವು-ಆದರೂ ಸಾಕಷ್ಟು ತಿರುಗಾಡಿ ‘ಸಂಯುಕ್ತ ಕರ್ನಾಟಕ’ಕ್ಕೆ ಚಿಕ್ಕಪುಟ್ಟ ಜಾಹೀರಾತು ತರುತ್ತಿದ್ದರು. ಅವರನ್ನು ಕಾಡುವುದೆಂದರೆ ನಮಗೆ ಏನೋ ವಿನೋದ. ಅದೊಂದು ಸಂಜೆ ನಾವು ತ್ರಿಮೂರ್ತಿಗಳು ಸೇರಿದೆವಲ್ಲ? ಮೂರು ಜನರ ಜೇಬು ಖಾಲಿ. ಯಾರಾದರೂ ‘ಗುಂಡು’ ಕೊಡಿಸುವವರು ಸಿಗುತ್ತಾರಾ ಅಂತ ನಿರೀಕ್ಷಿಸುತ್ತಿದ್ದೆವು. ಸಿಕ್ಕವರು ಪಾಪ ಮಟ್ಟಿ ಮಾಸ್ತರು. ಪಾಪ, ಹಾಕಿಸುವುದಿರಲಿ. ಅವರು ವಿಸ್ಕಿ ವಾಸನೆಯನ್ನೂ ನೋಡಿದವರಲ್ಲ. ಅವರನ್ನು ಮಾತನಾಡಿಸಲು ನಿಂತೆವು. “ನೀವು ಸಿಕ್ಕಿದ್ದು ಸರೀ ಆಯ್ತು ನೋಡ್ರೆಪ್ಪಾ....ಊರಿಗೆ ಅಮ್ಮಾ ಅವರು ಬಂದಾರ!" ಎಂದರು ಮಟ್ಟಿ ಮಾಸ್ತರ್.

“ಹೌದಾ? ಎಂಥಾ ಸುದ್ದಿ ಹೇಳಿದ್ರಲ್ಲ...ನಮಗೆ ಗೊತ್ತೇ ಇರಲಿಲ್ಲ" ಅಂತ ಜಿ.ಎಚ್.ರಾಘವೇಂದ್ರ ಉದ್ಗರಿಸಿದ.

‘'ಹಂಗಾರ ಬಂದು ಬಿಡ್ರೆಪಾ...ಭೆಟ್ಟಿ ಮಾಡಸ್ತೀನಿ!" ಅಂದರು ಮಾಸ್ತರ್. ಸರಿ ನಡೀರಿ ಅಂತ ಮೂರೂ ಜನ ಆಕೆ ಇದ್ದೆಡೆಗೆ ಹೊರಟೆವು. ಆ ದಿನಗಳಲ್ಲಿ ಅದೂ ಒಂದು ಕಾರ್ಯಕ್ರಮವೇ. ಕಂಡ ಕಂಡ ಮಠಾಧೀಶರನ್ನು ಭೇಟಿಯಾಗುತ್ತಿದ್ದೆವು. ಮತ್ತೇನಿಲ್ಲ, ಪತ್ರಕರ್ತರು ಭೇಟಿಗೆ ಹೋದರೆ ಸಾಕು: ಮಠಾಧೀಶರು ಒಂದು ಶಾಲು ಹೊದೆಸುತ್ತಿದ್ದರು. ಒಂದು ಹಾರ. ಕೊನೆಯಲ್ಲಿ ಒಂದು ಚಿಕ್ಕ ಕವರ್! ಅದರಲ್ಲಿ ಹತ್ತಿಪ್ಪತ್ತು ರೂಪಾಯಿಗಳಿರುತ್ತಿದ್ದವು-ಅಷ್ಟು ಸಾಕಲ್ಲ ನಮಗೆ? ಅವತ್ತು ಆ ಮಾತೆಯನ್ನು ನೋಡಲು ನಾನು, ಪುಂಡ, ರಾಘವೇಂದ್ರ ಹೋದೆವು. ಮಟ್ಟಿ ಮಾಸ್ತರರೇ ನಮ್ಮನ್ನು ಕರೆದೊಯ್ದರು. ಹೋದ ತಕ್ಷಣ ಪೀಠದಲ್ಲಿ ಕೂತಿದ್ದ ಮಾತೆ ಮುಂದ ಕೈ ಕಾಲು ಚಾಚಿದಳು. ನಾನು ಕಾಲಿಗೆ ಬೀಳಲಿಲ್ಲ. ರಾಘವೇಂದ್ರನೂ ಬೀಳಲಿಲ್ಲ. ಆದರೆ ಪುಂಡಲೀಕ? ಅವನು ತನ್ನ ರಾಕ್ಷಸ ದೇಹದ ಸಮೇತ ಆಕೆಯ ಕಾಲಿಗೆ ಸಾಷ್ಠಾಂಗ ಬಿದ್ದ! ನಮಗೆ ಕೆಟ್ಟ ನಗೆ. ಕೊಂಚ ಹೊತ್ತು ಮಾತನಾಡಿದಳು ಮಾತೆ. ಇನ್ನೇನು ನಾವು ಹೊರಡಬೇಕು. ಅಷ್ಟರಲ್ಲಿ ಆಕೆ ಶಾಲು ಹೊದೆಸಿದಳು. ಗಂಧದ ಹಾರ ಹಾಕಿದಳು. ನಿರೀಕ್ಷಿಸಿದಂತೆಯೇ ತಲಾ ಒಂದು ಕವರು. ಇಸಿದುಕೊಂಡು ಹೊರಬಿದ್ದು ಆ ಮೆಟ್ಟಿಲುಗಳನ್ನು ಇಳಿಯತೊಡಗಿದೆವು. ಬೆನ್ನಲ್ಲೇ ಹೊರಟು ಬಂದರು ಮಟ್ಟಿ ಮಾಸ್ತರು.

“ಹೆಂಗ ಅನ್ನಿಸಿತ್ರೆಪ್ಪಾ ಭೇಟಿ...ಮಾತಾಜಿಯವರದು?" ಅಂದರಾತ.

“ಭಾರೀ ಆತು ಬಿಡ್ರೀ...ಆಕಿ ಮೊಣಕಾಲು...ಮೀನಖಂಡ ಅದ್ಭುತ ಇದ್ವು ನೋಡ್ರಿ!" ಅಂದು ಬಿಟ್ಟ ಪುಂಡ. ಮಟ್ಟಿ ಮಾಸ್ತರು ಎರಡೂ ಕೈಗಳನ್ನು ಕಿವಿಯ ಮೇಲಿಟ್ಟುಕೊಂಡು “ಶಿವ ಶಿವ ಶಿವ" ಅಂದವರೇ ಮೆಟ್ಟಿಲ ಮೇಲೆ ಕುಳಿತು ಬಿಟ್ಟರು. ನಮ್ಮದೇನಿದೆ? ಕವರಿನಲ್ಲಿ ಐವತ್ತರ ಒಂದೊಂದು ನೋಟುಗಳಿದ್ದುದನ್ನು confirm ಮಾಡಿಕೊಂಡು ಪಡಖಾನೆಗೆ ನಡೆದೇ ಬಿಟ್ಟಿದ್ದೆವು. ಹೀಗೆ ನೋಡಿ, ದಿನಗಳು ತಮಾಷೆಯಲ್ಲಿ ಉರುಳಿದ್ದವು ಅಲ್ಲಿ. “ಯಾಕೋ ರವೀ, ಮಾತಾಜಿ ಬಂದಿದ್ದರೇನು ಮತ್ತೆ?" ಅನ್ನುತ್ತಿದ್ದರು ಪ್ರೊ.ಕಲಬುರ್ಗಿ. ದುರಂತವೆಂದರೆ ಪುಂಡಲೀಕ ಶೇಠ ಒಂದು ಅಪಘಾತದಲ್ಲಿ ತುಂಬ painful ಆಗಿ ಸತ್ತು ಹೋದ. ರಾಘವೇಂದ್ರ ಕ್ಯಾನ್ಸರ್ ಆಗಿ ತೀರಿಕೊಂಡ. ನಮ್ಮೆಲ್ಲರಿಗಿಂತ ಹಿರಿಯರು ಪ್ರೊ.ಕಲಬುರ್ಗಿ. ಅವರದು ಇಂತಹ ಅಂತ್ಯ.

ಅವರು ಕೊಲೆಯಾದ ಸುದ್ದಿ ಕೇಳಿದವನೇ ನಮ್ಮ ವರದಿಗಾರ ಶಿರಸಂಗಿಗೆ ಫೋನು ಮಾಡಿದೆ. ‘ಧಾರವಾಡಕ್ಕೆ ಹೊರಡಿ’ ಅಂದೆ. ಹೋದರೆ ಏನಿದೆ? ಹಂತಕರು ಯಾರೆಂಬುದೇ ಖಚಿತವಾಗಿಲ್ಲ. ಹತ್ಯೆಯ ಬಗ್ಗೆ ಬರೆಯುವಂತಹುದು ಏನೂ ಇಲ್ಲ. ಟೀವಿ ಹಾಕಿದರೆ ಸಾಕು: ದೊಡ್ಡ ಮನೆಯ ಮದುವೆಯದೇ ಸುದ್ದಿ. ಕಲಬುರ್ಗಿಯವರಿಗೆ threat ಇತ್ತು. ರಕ್ಷಣೆಗೆ ಪೊಲೀಸರಿದ್ದರು. ಕಲಬುರ್ಗಿ ಎಂಥ ಅಮಾಯಕರೆಂದರೆ ರಕ್ಷಣೆ ಬೇಡ ಅಂತ ವಿನಂತಿಸಿ, ಅವರನ್ನು ವಾಪಸು ಕಳಿಸಿದ್ದರು. Threat ಎಂಬುದರ ಜಾಯಮಾನವೇ ಹಾಗೆ. ಪ್ರಾಣ ತೆಗೆಯುವವರು ತಮ್ಮ ಕೆಲಸ ಮಾಡಲಿ, ಬಿಡಲಿ. ರಕ್ಷಣೆಯಲ್ಲಿಯೇ ಬದುಕಬೇಕು.

ಹಿಂದೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಒಂದು gang ಹುಟ್ಟಿಕೊಂಡಿತ್ತು: ಟೈಗರ್ ಗ್ರೂಪ್! ಆ ಹುಡುಗರು ಒಂದು ಸೀರಿಯಲ್ ಕಿಲ್ಲಿಂಗ್ ಆರಂಭಿಸಿ ಬಿಟ್ಟಿದ್ದರು. ಅವರ‍್ಯಾರಿಗೂ ಚಟಗಳಿರಲಿಲ್ಲ. ಹಣ ಒಟ್ಟು ಮಾಡಲಿಕ್ಕಾಗಿ ಕೊಲ್ಲುತ್ತಿದ್ದರು. ಕಡೆಗೆ ಪೊಲೀಸರಿಗೆ ಸಿಕ್ಕುಬಿದ್ದರು. ಆ ಗ್ರೂಪ್‌ನ ಮುಖಂಡನನ್ನು ಜೈಲಿನಲ್ಲೇ ಬಡಿದು ಕೊಲ್ಲಲಾಯಿತು. ಕಡೆಗೆ ಅವರ‍್ಯಾರು ಅಂತ ತನಿಖೆಗಿಳಿದಾಗ, ಅವರೆಲ್ಲರೂ ಈ ಪ್ರಮೋದ್ ಮುತಾಲಿಕನ ಶಿಷ್ಯರೇ ಎಂಬುದು ಖಚಿತವಾಯಿತು! ಸಾಕಷ್ಟು ಹಣ ಒಟ್ಟು ಮಾಡಿದರೆ, ಅದರಿಂದ ಹಿಂದೂ ರಾಷ್ಟ್ರ ಕಟ್ಟಬಹುದು ಎಂಬ ಇರಾದೆ. ಇದರಲ್ಲಿ ಮುತಾಲಿಕ ಭಾಗಿಯಾಗಿರಲಿಲ್ಲ.

ಈಗ? ಆ ತೆರನಾದ ಪಾಪಿ ಸಂತಾನವೇ ಕಲಬುರ್ಗಿಯವರ ಪ್ರಾಣ ತೆಗೆಯಿತಾ? Not very sure.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 September, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books