Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನಾವು ಅದೆಷ್ಟು ದಿಕ್ಕುಗಳಿಂದ ಎಚ್ಚರವಾಗಿರಬೇಕು?

ಯಾವುದಕ್ಕೆ ತೆತ್ತ ಕಂದಾಯ?

ಜಾತಿಗಾ? ಮಾತಿಗಾ? ಅಷ್ಟು ದೊಡ್ಡ ಸಾಧಕರು ಅವರು. ಇನ್ನೇನು ಎಂಬತ್ತಕ್ಕೆ ಹತ್ತಿರವಿದ್ದವರು. ಅವರಿಗೆ ನಾನೆಂದರೆ ಪ್ರೀತಿ. ಒಂದು ಸಲುಗೆ. ಅವರದು ಅಧ್ಯಯನಶೀಲ ಮನಸ್ಸು. ದೈಹಿಕವಾಗಿ ಸಾಕಷ್ಟು ಸ್ಥಿರವಾಗಿದ್ದರು. “ಏ ರವೀ, ಬಾರೋ. ಅದೇನೋ ಜೋಕ್ ಹೇಳ್ತೀಯಂತಲ್ಲ? ಕೂಡು ಇಲ್ಲಿ" ಅನ್ನುತ್ತಿದ್ದರು. ಮನೆಗೆ ಹೋದರೆ ಅವಲಕ್ಕಿ, ಚಹ. ಅವರು ಅದೆಲ್ಲೋ ಮೂಲೆಯಲ್ಲಿ ಕುಳಿತು ಕತೆ-ಕಾದಂಬರಿ ಬರೆದವರಲ್ಲ. ಏನು ಬರೆದರೂ ಅದೊಂದು ರಿಸರ್ಚ್. ಅಪಾರವಾದ ಪಾಂಡಿತ್ಯ. ಅಂಥದ್ದು ಎಂಥ ದುರ್ಮರಣ ಕಂಡು ಬಿಟ್ಟರಲ್ಲ? I am depressed.

ನಾನು ಅನೇಕ ವರ್ಷಗಳ ಹಿಂದೆಯೇ ನಿರ್ಧರಿಸಿದೆ. ‘ಉಹುಂ, ಇದರ ಬಗ್ಗೆ ಬರೆಯಬಾರದು’ ಅಂತ. ನೀವೇ ಗಮನಿಸಿ. ನಾನು ಜಾತಿಗಳ ಬಗ್ಗೆ ಬರೆಯುವುದಿಲ್ಲ. ಮತಗಳ ಕುರಿತು ಬರೆಯಲ್ಲ. ಇನ್ನೊಬ್ಬರ ಊಟ-ಆಹಾರಗಳ ಬಗ್ಗೆ ಬರೆಯುವುದಿಲ್ಲ. ಯಾರದೇ ಧರ್ಮಾಚರಣೆಯ ಕುರಿತು ಬರೆಯುವುದಿಲ್ಲ. ಮೂವತ್ತು ವರ್ಷಗಳಿಂದ ಪತ್ರಿಕೋದ್ಯಮವನ್ನೇ ಅಲ್ವಾ ಮಾಡುತ್ತ ಬಂದಿರುವುದು? ಅನೇಕರನ್ನು ಬೈದಿದ್ದೇನೆ. ಅದು ಕೇವಲ individual ಲೆಕ್ಕದಲ್ಲಿ. ನೀವು ತೆರೆದು ನೋಡಿ. ಇಡೀ ತಿಂಗಳು ಅಫಘನಿಸ್ತಾನದುದ್ದಗಲ ಅಲೆದು ಬಂದೆ. ಬಂದು ಕುಳಿತವನು ‘ಮುಸ್ಲಿಂ’ ಅಂತಲೇ ಒಂದು ಪುಸ್ತಕ ಬರೆದೆ. ನನಗೆ ಒಬ್ಬೇ ಒಬ್ಬ ಮುಸಲ್ಮಾನ ಫೋನು ಮಾಡಿ ಬಯ್ಯಲಿಲ್ಲ. ಕರೆದು ಕಪಾಳಕ್ಕೆ ಹೊಡೆಯಲಿಲ್ಲ. ಯಾಕೆ ಹೇಳಿ?

“ಈ ಸಿ.ಎಂ. ಇಬ್ರಾಹಿಂ ಕಳ್ಳ ಕಣ್ರೀ" ಅಂತ ಬರೆದೆ. ಅಷ್ಟೇ ಹೊರತು ‘ಮುಸ್ಲಿಮನಾದ ಈ ಇಬ್ರಾಹಿಂ ಕಳ್ಳ ಕಣ್ರೀ" ಅಂತ ಯಾವತ್ತಿಗೂ ಬರೆಯಲಿಲ್ಲ. Never. “ಈ ಜಾತಿ ಉತ್ತಮ: ಇದು ನೀಚ" ಅಂತ ನಾನು ಎಂದಿಗೂ ನಿರ್ಧರಿಸುವುದಿಲ್ಲ. ‘ವಿಶ್ವೇಶ್ವರಪುರಂನ ಶೆಟ್ಟರು’ ಅಂತ ಮುಖಪುಟ ಲೇಖನವನ್ನೇ ಬರೆದೆ. ಯಾವ ಕೋಮಟರೂ ಸಿಟ್ಟಾಗಲಿಲ್ಲ. ಏಕೆಂದರೆ, ನಾನು ಉದ್ದೇಶಪೂರ್ವಕವಾಗಿ ಯಾರನ್ನೂ, ಯಾವ ಜಾತಿಯನ್ನೂ ಜರಿಯಲಿಲ್ಲ. ನೀವು ಹುಡುಕಿ ನೋಡಿ. “ಥೂ, ಅವರು ದನದ ಮಾಂಸ ತಿಂತಾರೆ" ಎಂದು ನಾನು ಎಂದಿಗೂ ಬರೆದಿಲ್ಲ. ನನ್ನ ಕಾದಂಬರಿಗಳನ್ನು ತಿರುವಿ ಹಾಕಿ. ಅವುಗಳಲ್ಲಿನ ಯಾವ ಪಾತ್ರಗಳಿಗೂ ಜಾತಿ ಇಲ್ಲ. I am very clear about that.

ಅಂಥ ಹಿರಿಯರಾದ ಅನಂತಮೂರ್ತಿಯವರು, ಅನೇಕ ವರ್ಷಗಳ ಹಿಂದೆ “ನಾನು ದೇವರ ವಿಗ್ರಹದ ಮೇಲೆ ಉಚ್ಚೆ ಮಾಡಿದೆ. ಆದರೂ ನನಗೆ ಏನೂ ಆಗಿಲ್ಲ" ಅಂತ ಯಾಕೆ ಬರೆದರು? ಅಲ್ಲಿಗೆ ಅದು ಮುಗಿಯಲಿಲ್ಲ.

“ಅನಂತಮೂರ್ತಿಯವರು ಹಾಗಂತ ಬರೆದಿದ್ದಾರೆ. ದೇವರ ವಿಗ್ರಹವೆಂಬುದು ಬರೀ ಕಲ್ಲು. ಉಚ್ಚೆ ಹುಯ್ದರೆ ಅದರಿಂದ ಕೆಟ್ಟದೇನೂ ಆಗುವುದಿಲ್ಲ. ಕೆಟ್ಟದಾಗುವುದಿಲ್ಲವಾದ್ದರಿಂದ ಅದನ್ನು ಪೂಜಿಸುವುದರಿಂದ ಒಳ್ಳೆಯದೂ ಆಗುವುದಿಲ್ಲ" ಎಂಬ ಮಾತನ್ನು ಪ್ರೊ. ಕಲಬುರ್ಗಿ ಯಾಕಾದರೂ ಅಂದರು. ಎಲ್ಲ ಬಿಟ್ಟು ಆ ಉಚ್ಚೆ ಹುಯ್ಯುವ ಕುರಿತಾದ ಮಾತು ಬಂತಾದರೂ ಏಕೆ? I feel sorry. ಅಷ್ಟು ಕ್ಷುಲಕವಾದ ಸಂಗತಿಗೆ, ಮಾತಿಗೆ ಅಂಥ ಹಿರಿಯರು ಇದೆಂಥ ರೀತಿಯಲ್ಲಿ ಜೀವ ತೆರಬೇಕಾಯಿತು?

ಹಿಂದೆ ಅವರು ‘ಮಾರ್ಗ’ ಕೃತಿಯನ್ನು ಬರೆದಾಗ ವಿವಾದವಾಯಿತು. ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ದೊಡ್ಡ ಪಂಚಾಯ್ತಿ-ರಾದ್ಧಾಂತ ನಡೆಯಿತು. ಕಲಬುರ್ಗಿಯವರ ಮೇಲೆ ಕೆಂಡ ಕಾರಿದರು. ಹಾಗಂತ ಕೇವಲ ವಿವಾದಗಳನ್ನೆಬ್ಬಿಸುವುದನ್ನೇ ಕಸುಬು ಮಾಡಿಕೊಂಡವರಾಗಿರಲಿಲ್ಲ ಕಲಬುರ್ಗಿಯವರು. ಆ ಚಟ ಕೆಲವರಿಗಿರುತ್ತದೆ. ಆದರೆ ಅವರು ವಿವಾದಪ್ರಿಯರಲ್ಲ. ಅಂಥ ಕರ್ಮಠ ನಾಸ್ತಿಕತೆಯೂ ಅವರಲ್ಲಿ ಇರಲಿಲ್ಲ. ಕೆಲವು ಸಲ ಬಾಯ್ತಪ್ಪಿ ಮಾತು ಆಡಿಬಿಡುತ್ತೇವೆ. ಅದನ್ನು ಕೆಲವರು ಸಹಿಸುವುದಿಲ್ಲ. ಬಾಯ್ತಪ್ಪಿ ಅಂದದ್ದಕ್ಕೆ ಪ್ರಾಣ ತೆಗೆಯುತ್ತೇನೆ ಅಂತ ಹೊರಡುವವರೂ ಈ ಸಮಾಜದಲ್ಲಿ ಇದ್ದಾರೆ. ಹಾಗಿರುವಾಗ ಒಂದು ಚಿಕ್ಕ ಸಂಗತಿಯನ್ನು ದೊಡ್ಡ ಗುಡ್ಡ ಮಾಡಲು ನಾವು ಮೀಡಿಯಾದವರೂ ಹೊರಡಬಾರದು. We should ignore. ಕಲಬುರ್ಗಿಯವರಂಥ ಅಲೌಕಿಕ ಚಿಂತನೆಯ ಹಿರಿಯರು ಆಡಿದ ಮಾತಿನಿಂದ ಅವರಿಗೆ ತೊಂದರೆಯಾಗುತ್ತದೆ ಅನ್ನಿಸಿದರೆ ಅದನ್ನು ಚರ್ಚೆಗೆ ಎಳೆತರಲೇಬಾರದು. ಅದರಲ್ಲೂ ಟಿ.ವಿ.ಗಳವರು ಈ ಕುರಿತು ಜಾಗರೂಕರಾಗಿರಬೇಕು. ಏಕೆಂದರೆ, ಈ ತರಹದ ಸನ್ನಿವೇಶಗಳಿಗಾಗಿಯೇ ಕಾಯುವ ಹೀನರು ಸುತ್ತ ಇರುತ್ತಾರೆ.

ಅನಂತಮೂರ್ತಿಯವರಂತಹ ಹಿರಿಯರು ತೀರಿಕೊಂಡಾಗ ಪಟಾಕಿ ಹೊಡೆದು ಆನಂದಿಸಿದವರಿಗೆ ಏನು ಹೇಳುತ್ತೀರಿ? ಕೊನೆಯ ದಿನಗಳಲ್ಲಿ ಅವರು ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿದ್ದರು. “ಅವರು ಮೂತ್ರ ಮಾಡಿದರು: ದೇವರ ವಿಗ್ರಹದ ಮೇಲೆ. ಆದ್ದರಿಂದಲೇ ಅವರಿಗೆ ಮೂತ್ರಪಿಂಡ ವೈಫಲ್ಯ ಆಯಿತು" ಎಂದು ಗೇಲಿ ಮಾಡಿದವರಿದ್ದರು. “ಇಲ್ಲ, ನಾನು ಹಾಗೆ ಮಾತನಾಡೋದನ್ನ ಬಿಡುವುದಿಲ್ಲ. ಅಲ್ಲಿ ನನ್ನ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹೊರಟು ಹೋದಂತಾಗುತ್ತದೆ!" ಅಂದರೆ ಏನು ಮಾಡೋದು?

ಈ ಹಿಂದೆ ಅಂಥ ಪ್ರಕರಣಗಳಾಗಿವೆ. ಪೋಲಂಕಿ ರಾಮಮೂರ್ತಿಯವರು ಅನುಭವಿಸಿದ್ದನ್ನು ನೋಡಿದ್ದೇವೆ. ಕೆಲವು ದಿನ ‘ಧರ್ಮಕಾರಣ’ದ ಗದ್ದಲವೆದ್ದಿತು. ಪ್ರೊ.ಭಗವಾನ್ ಅನೇಕ ಸಲ ಈ ತೆರನಾದ ವಿವಾದಗಳಿಗೆ ಸಿಲುಕುತ್ತಾರೆ. ಮೊದಲೆಲ್ಲ ಹಲ್ಲೆ, ಪ್ರತಿಭಟನೆ, ಬೈಗುಳ-ಇಷ್ಟೇ ಆಗುತ್ತಿದ್ದವು. ಈಗ ಪರಿಸ್ಥಿತಿ ಉಲ್ಬಣಗೊಂಡಿದೆ. One must be careful.

ಒಂದು ಸಂಗತಿ ಇದೆ. ದೇವರನ್ನು ನಾನು ನಂಬೋದಿಲ್ಲ. ಆದರೆ ಮತ್ತೊಬ್ಬರು ವಿಪರೀತ ನಂಬಿಕೆ ಇರಿಸಿಕೊಂಡಿರುತ್ತಾರೆ. Why hurt them? ಅದನ್ನು ignore ಮಾಡಿ ಮುಂದಕ್ಕೆ ಹೋಗಬೇಕಷ್ಟೆ. ಯಾರದೇ ನಂಬುಗೆ, ಶ್ರದ್ಧಾ ಕೇಂದ್ರ ಇತ್ಯಾದಿಗಳನ್ನು ಏಕೆ ಕೆಣಕಬೇಕು?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 September, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books