Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಒಳ್ಳೆಯವರನ್ನು ಹುಡುಕುವುದು ಒಳ್ಳೆಯ ಕೆಲಸ ಅಲ್ವಾ?

ಇತ್ತೀಚೆಗೆ ಹಿರಿಯ ಪತ್ರಕರ್ತರೊಬ್ಬರು ತೀರಿಕೊಂಡರು. ಒಬ್ಬ ಪತ್ರಕರ್ತನ angleನಿಂದ ಯೋಚನೆ ಮಾಡಿದರೆ ಅವರನ್ನು ನೆನೆಸಿಕೊಳ್ಳುವುದಕ್ಕೆ ಅಂಥಾ ಪ್ರಬಲ ಕಾರಣವೇನೂ ಇಲ್ಲ. ಆದರೆ ಒಬ್ಬ ಮನುಷ್ಯನಾಗಿ ಯೋಚಿಸಿದರೆ ಕಾರಣಗಳು ಉಂಟು. ಅವರನ್ನು ನಾನು ಹಲವಾರು ವರ್ಷದಿಂದ ಬಲ್ಲೆ. ಹಾಗಂತ ಅವರು ನನ್ನ ಹಿತೈಷಿಯೇನೂ ಅಲ್ಲ, ಸ್ನೇಹಿತರೂ ಅಲ್ಲ, ಅಷ್ಟಕ್ಕೂ ಅವರು ‘ಕಾರ್ಯನಿರತ’ ಪತ್ರಕರ್ತರೇ ಅಲ್ಲ, ಅವರು ಬರೆದ ಒಂದಕ್ಷರವನ್ನೂ ನಾನು ಇಲ್ಲಿತನಕ ನೋಡಿಲ್ಲ. ಆದರೂ ಆಗಾಗ ಅವರ ಮುಖದರ್ಶನವಾಗುತ್ತಿತ್ತು. ಪರಭಾಷಾ ಸ್ಟಾರುಗಳು, ರಾಷ್ಟ್ರಮಟ್ಟದ ರಾಜಕಾರಣಿಗಳು ಬೆಂಗಳೂರಿಗೆ ಬಂದಾಗ ಈ ಹಿರಿಯರು ತಪ್ಪದೇ ಅಲ್ಲಿ ಹಾಜರಿರುತ್ತಿದ್ದರು. ಅದನ್ನು ಶೋಕಿಯೆಂದು ಕರೆದರೆ ತಪ್ಪಾದೀತು, ಖಾಯಿಶ್ ಅನ್ನಬಹುದೇನೋ (ಖ್ಯಾತರ ಜೊತೆ ಕಾಣಿಸಿಕೊಳ್ಳುವ ವಿಚಾರ ಬಂದಾಗ ಅಭಿಮಾನಿಗಳಿಗೂ ಪತ್ರಕರ್ತರಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ). ಅವರ ಹಿರಿತನ, ಸಣಬು ನಾರಿನ ಹಗ್ಗದಂಥ ದಪ್ಪಮೀಸೆ, ಎತ್ತರದ ಆಳ್ತನದಿಂದಾಗಿ ಅವರು ಪತ್ರಕರ್ತರ ಗುಂಪಲ್ಲಿ ಎದ್ದು ಕಾಣುತ್ತಿದ್ದರು. ಆ ಕಾರಣಕ್ಕೆ ಅತಿಥಿಯಾಗಿ ಬಂದ ದೊಡ್ಡ ಮನುಷ್ಯರು ಈ ಮನುಷ್ಯನನ್ನು ಲೋಕಲ್ ಪತ್ರಕರ್ತರ ಗುಂಪಿನ ನಾಯಕನೆಂದೇ ಭಾವಿಸುವ ಎಲ್ಲಾ ಅಪಾಯಗಳೂ ಇದ್ದವು. ಈ ಹಿರಿಯರು ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ಶೈಲಿಯೂ ಹಾಗೇ ಇತ್ತು. ನಮ್ಮೆಲ್ಲರಿಗಿಂತ ಮೊದಲು ಅವರೇ ಹಲೋ ಅನ್ನುತ್ತಾ ಕೈಚಾಚುತ್ತಿದ್ದರು, ಅದರ ಬೆನ್ನಿಗೇ ‘ಐಯಾಮ್ ಸೋ ಅಂಡ್ ಸೋ ಫ್ರಮ್’ ಅನ್ನುತ್ತಾ ಎರಡು ಆಂಗ್ಲ ಪತ್ರಿಕೆಗಳ ಹೆಸರು ಹೇಳುತ್ತಿದ್ದರು. ವಾಸ್ತವದಲ್ಲಿ ಅವರೆಡು ಪತ್ರಿಕೆಗಳೂ ಆಸ್ತಿತ್ವದಲ್ಲೇ ಇರಲಿಲ್ಲ ಅನ್ನುವುದು ನಮ್ಮೆಲ್ಲರಿಗೂ ಗೊತ್ತಿತ್ತು. ಆದರೂ ಆ ಸಂದರ್ಭದಲ್ಲಿ ಒತ್ತರಿಸಿ ಬರುವ ನಗುವನ್ನು ತಡೆದುಕೊಳ್ಳುವ ಹೊರತಾಗಿ ಬೇರೇನೂ ಮಾಡುವ ಹಾಗಿರಲಿಲ್ಲ. ಅದಾದ ಬಳಿಕ ಸದರಿ ಹಿರಿಯರು ಒಂದು ಪ್ರಶ್ನೆ ಕೇಳುತ್ತಿದ್ದರು. How is Bangalore weather? ಅದು ಅವರ ಸ್ಟಾಂಡರ್ಡ್ ಪ್ರಶ್ನೆ, ಸುಮಾರು ಹದಿನೈದು ವರ್ಷಗಳಿಂದಲೂ ಅದೇ ಪ್ರಶ್ನೆಯನ್ನು ಅವರು ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಹಾಗಾಗಿ ಅದರ ಕಾಪಿರೈಟ್ ಅವರದೇ ಆಗಿತ್ತು. ಆ ಪ್ರಶ್ನೆಗೆ ಪರಭಾಷಾ ನಟ-ನಟಿಯರು ನೀಡುವ ಉತ್ತರವೂ ಸ್ಟಾಂಡರ್ಡ್ ಆಗಿಯೇ ಇರುತ್ತಿತ್ತು. It is so beautiful, so cool. That's why I like Bangalore. ಬ್ಲಾ ಬ್ಲಾ. ಹಾಗಂದಾಕ್ಷಣ ಹಿರಿಯರ ಮೀಸೆ ಧನ್ಯತಾಭಾವದಿಂದ ಕುಣಿದು ಕುಪ್ಪಳಿಸುತ್ತಿತ್ತು. ಅದಾದ ನಂತರ ಅವರೇನಿದ್ದರೂ ಮೂಕಚಿತ್ರ, ತನ್ನ ಕೆಲಸ ಮುಗಿಯಿತು ಎಂಬ ತೃಪ್ತಭಾವ.

ಅವರದ್ದು ತುಂಬು ಬದುಕು, ಎಪ್ಪತ್ತು ವರ್ಷ ಅನಾಯಾಸವಾಗಿ ಬದುಕಿದರು. ಪತ್ರಕರ್ತನೆಂಬ ಲೇಬಲ್‌ನ ಜೊತೆಗೇ ಬರುವ ಯಾವ ಚಟಗಳೂ ಅವರಿಗೆ ಇರಲಿಲ್ಲ, ಹಾಗಾಗಿ ಯಾವ ಖಾಯಿಲೆಗಳೂ ಬರಲಿಲ್ಲ. ಪ್ರೆಸ್ ಕ್ಲಬ್ಬಲ್ಲಿ ಕುಳಿತು ಇನ್ನೊಬ್ಬರ ಬಗ್ಗೆ ಗಾಸಿಪ್ ಮಾಡುವ ದುರಭ್ಯಾಸವೂ ಇರಲಿಲ್ಲ. ಇವೆಲ್ಲ ಕಾರಣಗಳಿಂದಾಗಿ ಅವರಲ್ಲಿ ಅಹಂಕಾರವೂ ಇರಲಿಲ್ಲ. ತನಗಿಂತ ಇಪ್ಪತ್ತು ವರ್ಷ ಕಿರಿಯರನ್ನೂ ತಾವಾಗಿಯೇ ಮಾತಾಡಿಸುತ್ತಿದ್ದರು. ಹೀಗಾಗಿ ಒಳ್ಳೇ ಮನುಷ್ಯ ಎಂದು ಇಡೀ ಪತ್ರಕರ್ತರ ಸಮೂಹದಿಂದ ಸರ್ಟಿಫಿಕೇಟ್ ಪಡೆದಿದ್ದ ಈ ಹಿರಿಯರು ತೀರಿಕೊಂಡಾಗ ನಾವೆಲ್ಲರೂ ನೊಂದುಕೊಂಡಿದ್ದೆವು. ಪಾಪ, ಎಂಥಾ ಸಂಭಾವಿತ ಎಂದು ಲೊಚಗುಟ್ಟಿದ್ದೆವು. ಅಪ್ಪಿತಪ್ಪಿಯೂ ಯಾರ ಬಾಯಿಂದಲೂ ಒಬ್ಬ ಒಳ್ಳೆಯ ಪತ್ರಕರ್ತನನ್ನು ಕಳಕೊಂಡೆವು ಎಂಬ ಮಾತು ಬರಲಿಲ್ಲ. ನೀತಿಯೇನಪ್ಪ ಅಂದರೆ ಒಳ್ಳೇ ಮನುಷ್ಯನೊಬ್ಬ ಒಳ್ಳೇ ಪತ್ರಕರ್ತನೂ ಆಗಬೇಕೆಂಬ ರೂಲ್ಸ್ ಏನೂ ಇಲ್ಲ, ಅದೇ ರೀತಿ ಒಳ್ಳೇ ಪತ್ರಕರ್ತನೊಬ್ಬ ಒಳ್ಳೆಯ ಮನುಷ್ಯನಾಗಬೇಕು ಎಂಬ ರೂಲ್ಸು ಕೂಡಾ ಇಲ್ಲ.

ಈ ಮಾತನ್ನು ಪತ್ರಿಕೋದ್ಯಮಕ್ಕಷ್ಟೇ ಅಲ್ಲ, ಚಿತ್ರರಂಗ ಮತ್ತು ರಾಜಕೀಯ ರಂಗಕ್ಕೂ ಅನ್ವಯಿಸಬಹುದು. ಚಿತ್ರರಂಗದಲ್ಲೂ ನನಗೆ ತುಂಬಾ ಒಳ್ಳೇ ಸ್ನೇಹಿತರಿದ್ದಾರೆ. ದುರದೃಷ್ಟವಶಾತ್ ಅವರು ನಿರ್ದೇಶಕರಾಗಿದ್ದಾರೆ. ಅವರ ಅದೃಷ್ಟಕ್ಕೆ ನಿರ್ಮಾಪಕರು ಅವರನ್ನು ಒಳ್ಳೆಯ ನಿರ್ದೇಶಕರು ಎಂದೇ ಭಾವಿಸಿದ್ದಾರೆ, ಪ್ರೇಕ್ಷಕರ ದುರದೃಷ್ಟಕ್ಕೆ ಆ ನಿರ್ದೇಶಕರಿಗೆ ಅವಕಾಶಗಳು ಸಿಗುತ್ತಲೇ ಇವೆ. ಅವರ ಸಿನಿಮಾಗಳು ಗೆಲ್ಲುವ ಮಾತಿರಲಿ, ಅಸಲನ್ನೇ ವಾಪಸ್ ತಂದುಕೊಡುವುದಿಲ್ಲ. ಆದರೂ ಅವರು ತಮ್ಮನ್ನು ತಾವು ಪ್ರತಿಭಾನ್ವಿತರೆಂದೂ, ತಮ್ಮ ಚಿತ್ರಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಕನ್ನಡ ಪ್ರೇಕ್ಷಕರಿಗೆ ಇಲ್ಲವೆಂದೂ ಭಾವಿಸಿಕೊಂಡಿದ್ದಾರೆ. ಆ ಮಿಥ್‌ಅನ್ನು ಒಡೆಯುವ ಕೆಲಸವನ್ನು ನಾನು ಮಾಡುವುದಿಲ್ಲ. ಯಾಕೆಂದರೆ ಬಹುಪಾಲು ಮಂದಿ ಇಂಥವರೇ ಚಿತ್ರರಂಗದಲ್ಲಿ ತುಂಬಿಕೊಂಡಿದ್ದಾರೆ. ನಾನ್ಯಾಕೆ ಅವರನ್ನು ಕೆಣಕುವುದಕ್ಕೆ ಹೋಗಿ ಸುಮ್ಮಸುಮ್ಮನೇ ಕೆಟ್ಟವನಾಗಬೇಕು! ಆ ಕೆಲಸವನ್ನು ಸಿನಿಮಾ ಪತ್ರಕರ್ತರು ಮಾಡಲಿ. ಆದರೆ ಇಂಥಾ ರೆಕಾರ್ಡ್ ಹೊಂದಿರುವ ನಿರ್ದೇಶಕರಿಗೆ ನಿರ್ಮಾಪಕರು ಹೇಗೆ ಸಿಗುತ್ತಾರೆ ಅನ್ನೋದು ಇಂದಿಗೂ ನನಗೆ ಬಗೆಹರಿಯದ ಪ್ರಶ್ನೆಯಾಗಿದೆ. ನಮ್ಮ ಸಿನಿಮಾ ವರದಿಗಾರರ ಪ್ರಕಾರ ಅಂಥಾ ನಿರ್ದೇಶಕರಿಗೆ ನಿರ್ಮಾಪಕರನ್ನು ‘ಹಿಡಿಯುವ’ ವಿದ್ಯೆ ಗೊತ್ತು.

ಇದೇ ಥರದ ಒಳ್ಳೆಯವರ ಕೆಟಗರಿಗೆ ಬರುವ ಸಹಾಯಕ ನಿರ್ದೇಶಕರೊಬ್ಬರು ನನಗೆ ಅಚಾನಕ್ಕಾಗಿ ಪರಿಚಯವಾದರು. ಅವರು ಹದಿಮೂರು ವರ್ಷಗಳಿಂದ ನೂರಾರು ಸಿನಿಮಾಗಳಿಗೆ ಸಹಾಯಕರಾಗಿಯೇ ದುಡಿಯುತ್ತಾ ಹಿರಿಯರಾಗಿಬಿಟ್ಟಿದ್ದರು. ‘ನಿನ್ನೆ ಮೊನ್ನೆ ಬಂದವರೆಲ್ಲಾ ನಿರ್ದೇಶಕರಾಗುತ್ತಿದ್ದಾರೆ, ನನ್ನಂಥ ಅನುಭವಿಗೆ ಮಾತ್ರ ಅವಕಾಶಗಳೇ ಸಿಗುತ್ತಿಲ್ಲ’ ಅನ್ನುವುದು ಅವರ ನಿತ್ಯ ಕೊರಗಾಗಿತ್ತು. ಕೊನೆಗೂ ಯಾರೋ ಪುಣ್ಯಾತ್ಮನೊಬ್ಬ ಅವರಿಗೆ ನಿರ್ದೇಶಕನಾಗಿ ಬಡ್ತಿ ಕೊಟ್ಟ. ಆ ಸಿನಿಮಾ ಕೆಟ್ಟದಾಗಿತ್ತು ಹಾಗೂ ಅದಾದ ನಂತರ ಯಥಾಪ್ರಕಾರ ಅವರು ಸಹಾಯಕನಾಗಿಯೇ ಮುಂದುವರಿದರು. ನೀತಿ: ಸಿನಿಮಾ ತಂತ್ರಜ್ಞಾನವನ್ನು ಅರೆದು ಕುಡಿದಿದ್ದಾನೆ ಎಂಬ ಮಾತ್ರಕ್ಕೆ ಅವನೊಳಗೊಬ್ಬ ಪ್ರತಿಭಾನ್ವಿತ ನಿರ್ದೇಶಕನಿದ್ದಾನೆ ಎಂದು ಅಂದುಕೊಳ್ಳುವುದು ತಪ್ಪು. ಇಂಥಾ ಸಹಾಯಕ ನಿರ್ದೇಶಕರ ದುರಂತವೇನೆಂದರೆ ನಿರ್ದೇಶಕನ ಅಣತಿಯನ್ನು ಪಾಲಿಸುತ್ತಾ ಸ್ವಂತ ಯೋಚನೆ ಮಾಡುವ ಶಕ್ತಿಯನ್ನೇ ಕಳಕೊಂಡಿರುತ್ತಾರೆ ಅಥವಾ ಹಲವಾರು ನಿರ್ದೇಶಕರ ಶೈಲಿಗಳು ಇವರ ಮಿದುಳಲ್ಲಿ ಚೌಚೌ ಆಗಿ ತಾನೇನು ಅನ್ನುವುದೇ ಮರೆತುಹೋಗಿರುತ್ತದೆ. ಆದರೇನು ಮಾಡೋಕ್ಕಾಗುತ್ತದೆ, ಅವರು ತುಂಬಾ ಒಳ್ಳೆಯವರು.

ವಿಚಿತ್ರ ಅಂದರೆ ಇಷ್ಟೆಲ್ಲಾ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರಿದ್ದರೂ ಕನ್ನಡದಲ್ಲಿ ಗುರುಪರಂಪರೆ ಅನ್ನುವುದು ಕಾಣಿಸದೇ ಇರುವುದು ನನಗೆ ಅಚ್ಚರಿಯನ್ನುಂಟು ಮಾಡುತ್ತದೆ. ಅಂಥಾ ಗುರುಪರಂಪರೆ ಇದ್ದಾಗಲಷ್ಟೇ ಒಂದು ಶೈಲಿಯ ಸೃಷ್ಟಿಯಾಗುತ್ತದೆ. ಉದಾಹರಣೆಗೆ ಪುಟ್ಟಣ್ಣ ಕಣಗಾಲ್ ತೀರಿಕೊಂಡ ಕೆಲವೇ ದಿನಗಳಲ್ಲಿ ಅವರ ಸ್ವಯಂಘೋಷಿತ ಶಿಷ್ಯರ ದೊಡ್ಡ ಪಡೆಯೇ ಹುಟ್ಟಿಕೊಂಡಿತ್ತು. ಇವನು ನನ್ನ ಶಿಷ್ಯನಲ್ಲ ಎಂದು ಹೇಳುವುದಕ್ಕೆ ಪುಟ್ಟಣ್ಣ ಇರಲಿಲ್ಲ! ಹಾಗಾಗಿ ಈ ಶಿಷ್ಯರ ಹಾವಳಿ ವಿಪರೀತವಾಗಿ ಪ್ರೇಕ್ಷಕರು ಎಲ್ಲರನ್ನೂ ಸಾರಾಸಗಟಾಗಿ ತಿರಸ್ಕರಿಸಬೇಕಾಯಿತು. ಅದೇ ಕಾರಣಕ್ಕೆ ಪುಟ್ಟಣ್ಣ ಶೈಲಿಯ ಸಿನಿಮಾಗಳು ಬರಲೇ ಇಲ್ಲ. ನಾನು ಕಂಡಂತೆ ನಿರ್ದೇಶಕ ಪಿ.ಎಚ್.ವಿಶ್ವನಾಥ್ ಅವರ ಚಿತ್ರಗಳಲ್ಲಷ್ಟೇ ಪುಟ್ಟಣ್ಣ ಶೈಲಿ ಕೊಂಚ ಮಟ್ಟಿಗಾದರೂ ಕಾಣಿಸುತ್ತಿತ್ತು. ಅದನ್ನು ನಾನು ಪುಟ್ಟಣ್ಣ ಶೈಲಿಯ ಇಂಪ್ರೊವೈಸ್ಡ್ ವರ್ಷನ್ ಎಂದು ಕರೆಯುವುದಕ್ಕೆ ಇಷ್ಟಪಡುತ್ತೇನೆ. ಪುಟ್ಟಣ್ಣ ಚಿತ್ರಗಳು ಸಾಮಾನ್ಯವಾಗಿ ಮಹಿಳಾಪ್ರಧಾನವಾಗಿದ್ದರೂ ಅಲ್ಲಿ ಮಹಿಳೆಯ ಹಕ್ಕೊತ್ತಾಯಗಳನ್ನು ಸೂಕ್ಷ್ಮವಾಗಿ ತುಳಿಯವ ಪ್ರಯತ್ನ ಕಾಣಿಸುತ್ತಿತ್ತು. ಆದರೆ ಪಿ.ಎಚ್.ವಿಶ್ವನಾಥ್ ಚಿತ್ರಗಳ ಹೆಣ್ಣಿನ ಪಾತ್ರ ಸ್ವಾವಲಂಬಿಗಳಾಗಿದ್ದವು ಮತ್ತು ಗಟ್ಟಿತನದಿಂದ ಕೂಡಿದ್ದವು. ಪಂಚಮವೇದ, ಅರಗಿಣಿ ಮತ್ತು ಶ್ರೀಗಂಧ ಚಿತ್ರಗಳ ನಾಯಕಿ ಪಾತ್ರಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಪಿ.ಎಚ್.ವಿಶ್ವನಾಥ್ ಕೂಡಾ ಒಳ್ಳೆಯವರ ಕೆಟಗರಿಗೇ ಸೇರುತ್ತಾರಾದರೂ ಸುದೈವವಶಾತ್ ಕೆಟ್ಟ ಸಿನಿಮಾಗಳನ್ನು ನಿರ್ದೇಶಿಸಲಿಲ್ಲ. ಅವರೀಗ ಸ್ವಯಂ ನಿವೃತ್ತಿ ಘೋಷಿಸಿದಂತಿದೆ ಅಥವಾ ಈಗಿನ ನಿರ್ಮಾಪಕರಿಗೆ ಅವರು ಬೇಕಾಗಿಲ್ಲವೇನೋ.

ರಾಜಕೀಯ ರಂಗದಲ್ಲೂ ಒಳ್ಳೆಯವರಿದ್ದಾರೆ. ಹಲವಾರು ವರ್ಷಗಳಿಂದ ಒಂದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಯಾಕೆಂದರೆ ಅವರಿಗೆ ಟಿಕೆಟ್ ಸಿಗುವುದೇ ಕಷ್ಟ. ಯಾವುದೇ ನಿಗಮ-ಮಂಡಳಿಯ ಪದವಿಗಾಗಿ ಅವರು ಹಾತೊರೆಯುವುದಿಲ್ಲ. ಅವರ ಕೈಯಲ್ಲಿ ಯಾವುದೇ ಅಧಿಕಾರ ಇಲ್ಲದೇ ಇರುವುದರಿಂದ ಜನರು ಕೂಡಾ ಅವರ ಬಳಿ ಹೋಗುವುದಿಲ್ಲ. ಹಾಗಂತ ಅವರು ವೇಸ್ಟ್ ಬಾಡಿಗಳಲ್ಲ. ಚೆನ್ನಾಗಿ ಓದಿಕೊಂಡಿದ್ದಾರೆ, ಶುದ್ಧ ರಾಜಕಾರಣಿಗೆ ಇರಬೇಕಾದ ಎಲ್ಲಾ ಗುಣಗಳೂ ಅವರಲ್ಲಿವೆ. ಆದರೆ ಏನು ಮಾಡೋಣ, ರಾಜಕೀಯ ಮಾಡೋದಕ್ಕೇ ಬರೋಲ್ವೇ ಎಂದು ಅವರ ಪಕ್ಷದವರೇ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಾರೆ.

ಇಂಥಾ ಒಳ್ಳೆಯವರಿಂದ ಈ ಕಾಲದಲ್ಲಿ ಯಾರಿಗೆ ಉಪಯೋಗವಾಗುತ್ತದೆ? ಒಬ್ಬ ಪತ್ರಕರ್ತ ತನ್ನ ಸಂಚಲನ ಹುಟ್ಟಿಸುವ ವರದಿಗಳಿಂದ ಪ್ರಸಿದ್ಧನಾಗುತ್ತಾನೆ. ಒಬ್ಬ ನಿರ್ದೇಶಕ ತನ್ನ ಪ್ರಖರ ಪ್ರತಿಭೆಯಿಂದ ಒಂದು ಒಳ್ಳೆಯ ಸಿನಿಮಾವನ್ನು ಕಟ್ಟುತ್ತಾನೆ. ಒಬ್ಬ ರಾಜಕಾರಣಿ ತನ್ನ ಜನಪರ ಕೆಲಸಗಳಿಂದ ಅಥವಾ ಜನವಿರೋಧಿ ಕೆಲಸಗಳಿಂದ ಜನಪ್ರಿಯನಾಗುತ್ತಾನೆ. ಇದ್ಯಾವುದನ್ನೂ ಮಾಡದೇ ಕೇವಲ ಒಳ್ಳೆಯವರಾಗಿ ಬದುಕುವುದು ಯಾವ ಪುರುಷಾರ್ಥಕ್ಕೆ? ಅಂಥಾ ಪ್ರಶ್ನೆ ಕೇಳುವುದು ತಪ್ಪು.

ಕೆಲವು ವರ್ಷಗಳ ಹಿಂದೆ ಸಂಗೀತ ನಿರ್ದೇಶಕ ಸಿ.ಅಶ್ವತ್ಥ್ ಮತ್ತು ನಾಟಕಕಾರ ಎ.ಎಸ್.ಮೂರ್ತಿ ಅವರು ಪಾರ್ಟಿಯೊಂದರಲ್ಲಿ ಕುಳಿತು ಮನುಷ್ಯನ ವಯಸ್ಸು ಮತ್ತು ಆತ ಅರ್ಥಪೂರ್ಣವಾಗಿ ಬದುಕುವುದರ ಬಗ್ಗೆ ಚರ್ಚೆ ಮಾಡುತ್ತಿದ್ದರು. ಇಬ್ಬರ ವಯಸ್ಸೂ ಆಗ ಎಪ್ಪತ್ತರ ಅಂಚಿಗೆ ಬಂದು ನಿಂತಿತ್ತೇನೋ. ಒಬ್ಬ ಮನುಷ್ಯ ಸಾಧನೆ ಮಾಡಬೇಕಾಗಿಲ್ಲ, ಜಗತ್ ಪ್ರಸಿದ್ಧನೂ ಆಗಬೇಕಾಗಿಲ್ಲ, ಯಾರ ಹಂಗೂ ಇಲ್ಲದೇ ಯಾವ ಖ್ಯಾತಿಗೂ ಹಪಹಪಿಸದೆ ತನ್ನಷ್ಟಕ್ಕೇ ಸುದೀರ್ಘಕಾಲ ಬದುಕುವುದೂ ಕೂಡಾ ಒಂದು ಸಾಧನೆಯೇ ಎಂಬ ವಾದ ಮಂಡಿಸುತ್ತಿದ್ದರು ಅಶ್ವತ್ಥ್. ಆತನಿಂದ ಲೋಕಕ್ಕೇನೂ ಉಪಯೋಗವಾಗದೇ ಇರಬಹುದು, ಹಾಗಂತ ಉಪದ್ರವೂ ಇಲ್ವಲ್ಲ. ತಾನೇನೂ ಸಾಧನೆ ಮಾಡಲಿಲ್ಲ, ತನ್ನಿಂದ ಯಾರಿಗೇನೂ ಉಪಯೋಗ ಆಗಲಿಲ್ಲ ಎಂಬ ಕೊರಗು ಕಾಡದೇ ಇದ್ದರೆ ಅವನೇ ಸುಖಪುರುಷ ಎಂಬ ಮುತ್ತಿನಂಥ ಮಾತು ಹೇಳಿದರು ಅಶ್ವತ್ಥ್.

ಇಂಥಾ ಒಳ್ಳೆಯವರು ನಮ್ಮ ಸುತ್ತ ಹುಡುಕಿದರೆ ಸಿಗುತ್ತಾರೆ. ಅವರಿಂದ ನಾವು ಏನನ್ನೂ ನಿರೀಕ್ಷಿಸಲೂ ಬೇಕಾಗಿಲ್ಲ, ಅವರ ಮೇಲೆ ಜವಾಬ್ದಾರಿಯ ಮೂಟೆ ಹೊರಿಸಬೇಕಾಗಿಲ್ಲ. ತಮ್ಮಷ್ಟಕ್ಕೆ ಅವರನ್ನು ಬದುಕುವುದಕ್ಕೆ ಬಿಡಿ. ಎದುರು ಸಿಕ್ಕರೆ ಹಲೋ ಅನ್ನಿ. ಅವರ ಜೀವಾನುಭವ ದೊಡ್ಡದು. ಅದರಿಂದ ನಾವೇನಾದರೂ ಕಲಿಯಬಹುದು. ಬೆಳಿಗ್ಗೆ ಕಬ್ಬನ್ ಪಾರ್ಕಿನಲ್ಲಿ ವಾಕ್ ಹೋಗುತ್ತಿದ್ದಾಗ ಇಂಥವರು ಅಚಾನಕ್ ಆಗಿ ಭೇಟಿಯಾಗಬಹುದು, ಯಾವುದೋ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಒಂದು ಮೂಲೆಯಲ್ಲಿ ಇವರು ಕುಳಿತಿರಬಹುದು. ಅವರ ಕೈಕಾಲುಗಳು ಗಟ್ಟಿಯಾಗಿವೆ, ಅಂತಃಕರಣ ಶುದ್ಧವಾಗಿದೆ. ಯಾವ ನೆಗೆಟಿವ್ ಚಿಂತನೆಗಳು ಅವರ ಹತ್ತಿರ ಸುಳಿಯುವುದಿಲ್ಲ. ಹೀಗಾಗಿ ಅವರ ವಯಸ್ಸು ಎಪ್ಪತ್ತೈದು ದಾಟಿದ್ದರೂ ನೆಮ್ಮದಿಯಿಂದ ಬದುಕುತ್ತಿದ್ದಾರೆ.

ಇವೆಲ್ಲಕ್ಕಿಂತ ಮುಖ್ಯವಾಗಿ ಅವರು ಸಿನಿಮಾ ನಿರ್ದೇಶಕರಲ್ಲ, ರಾಜಕಾರಣಿಯಲ್ಲ, ಪತ್ರಕರ್ತ ಅಥವಾ ಸಾಹಿತಿಯೂ ಅಲ್ಲ. ಇಂಥಾ ಅತೃಪ್ತ ಒಳ್ಳೆಯವರಿಗಿಂತ ಯಾವ ಡೆಸಿಗ್ನೇಷನ್ನುಗಳ ಹಂಗಿಲ್ಲದೇ ಬದುಕುವ ಒಳ್ಳೆಯವರು ನನಗಿಷ್ಟ ಆಗುತ್ತಾರೆ. ನಿಮಗೂ ಅಂಥವರು ಯಾರಾದರೂ ಸಿಕ್ಕರೆ ಹೇಳಿ, ಒಂದ್ಸಾರಿ ಭೇಟಿಯಾಗೋಣವಂತೆ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 September, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books