Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅದು ಒಬ್ಬನಾದ ಮೇಲೊಬ್ಬನು ನೀಡಿದ ಕಾರ್ಕೋಟಕ ಗರಳ : ಕುಡಿದೂ ಬದುಕಿದ್ದೇನೆ

ಅವನನ್ನ ಮುಗಿಸ್ತೀನಿ!

ಹಾಗಂತ ಆಣೆ ಮಾಡಿ ಮನೆಯಿಂದ ಹೊರಬಿದ್ದಿರಬೇಕು ವಿಶ್ವೇಶ್ವರ ಭಟ್ಟರು. ಅದು 2012ರ ಮಾತು. ನನ್ನ ಮತ್ತು ಚಿತ್ರರಂಗದ ಕೆಲವರ ನಡುವೆ ‘ಭೀಮಾತೀರ’ದ ತಗಾದೆ ಆರಂಭವಾಗಿತ್ತು. ಅವನು ಓಂಪ್ರಕಾಶ್ ರಾವ್, ಅವನು ಅಸಲಿ ಕಳ್ಳ. ಚರ್ಚೆಗೇ ಬರಲಿಲ್ಲ. ಬಂದದ್ದು ನಿರ್ಮಾಪಕ ಅಣಜಿ ನಾಗರಾಜ್. ಜೊತೆಯಲ್ಲಿ ವಿಜಿಯೂ ಬಂದ. ಚರ್ಚೆ, ಗೇಲಿ, ಬೈಗುಳ-ಎಲ್ಲವೂ ಆದವು. ಅಷ್ಟೆ ಆದದ್ದು. ಆದರೆ ಅದರ ಒಂದೇ ಒಂದು ಎಳೆಯನ್ನಿಟ್ಟುಕೊಂಡು ವಿಶ್ವೇಶ್ವರ ಭಟ್ಟ ನೇಣು ಕುಣಿಕೆಯ ಹಗ್ಗ ಪೇಡಲು ಕುಳಿತುಕೊಂಡ. ಅದಕ್ಕಾಗಿ ಫಂಗು ಫಂಗನೆ ಕುಣಿಯುತ್ತ ಬಂದದ್ದು ಸಿಮ್ಮ. ಅಫಘನಿಸ್ತಾನಕ್ಕೆ ರವಿ ಬೆಳಗೆರೆ ಹೋಗಿದ್ದೇ ಸುಳ್ಳು ಅಂದ. ಒಂದೋ, ಅಫಘನಿಸ್ತಾನಕ್ಕೆ ಪಾಕೀಸ್ತಾನ ದಾಟಿ ಹೋಗಬೇಕು. ಅದು ಬಿಟ್ಟರೆ ಇರಾನ್ ಮುಖಾಂತರ ಹೋಗಬೇಕು. ಪಾಕಿಸ್ತಾನವಂತೂ ವೀಸಾ ಕೊಡುವುದಿಲ್ಲ. ವಯಾ ಇರಾನ್ ಪ್ರಯಾಣ ಮಾಡುವುದು ಸಾಧ್ಯವೇ ಇಲ್ಲ. ಹಾಗಾದರೆ ರವಿ ಬೆಳಗೆರೆ ಅಫಘಾನಕ್ಕೆ ಹೋದದ್ದೇ ಸುಳ್ಳು ಅಂದ! I was surprised. ಈತನಿಗೆ ಭೂಗೋಳವೇ ಗೊತ್ತಿಲ್ಲವಾ ಅಂದುಕೊಂಡೆ. ಏಕೆಂದರೆ ಅಫಘಾನಕ್ಕೆ ಮತ್ತೊಂದು ರೋಮಾಂಚಕಾರಿ ನೆರೆಹೊರೆ ಇದೆ. ಅದು ರಷಿಯಾ. ಈಗ ರಷಿಯಾ ಇಲ್ಲ. ಅದರ ವಿಭಜಿತ ದೇಶಗಳು ಆರಾಮಾಗಿ ಇವೆ. ಮೊದಲು ಇಲ್ಲಿಂದ ದಿಲ್ಲಿಗೆ ಹೋಗಬೇಕು. ಅಲ್ಲಿಂದ ವಿಮಾನ ಬದಲಿಸಿ ಉಜ್ಜೆಕಿಸ್ತಾನಕ್ಕೆ ಹೋಗಬೇಕು. ಅದು ನಮ್ಮ ಲಾಲ ಬಹದ್ದೂರ್ ಶಾಸ್ತ್ರಿಯವರು ಕೊನೆಯುಸಿರೆಳೆದ ದೇಶ. ಅದರ ರಾಜಧಾನಿಯಾದ ತಾಷ್ಕೆಂಟ್‌ನಲ್ಲಿ ಅವರು ತೀರಿಕೊಂಡರು. ಅಲ್ಲಿಂದ ನೀವು ತಝಿಕಿಸ್ತಾನಕ್ಕೆ ಹೋಗಬೇಕು. ಅದರ ರಾಜಧಾನಿ ದುಷಾನ್ಯೆ. ಅಲ್ಲಿ ನಾನು ತಿರುಗಿದ್ದೇನೆ, stay ಮಾಡಿದ್ದೇನೆ. ಅಲ್ಲಿಂದಲೇ ಅಮು ದರಿಯಾ ಎಂಬ ನದಿ ದಾಟಿ ಅಫಘನಿಸ್ತಾನಕ್ಕೆ ಆರಾಮ್ ಸೇ ಹೋಗಬಹುದು. ಭೂಗೋಳ ಗೊತ್ತಿಲ್ಲದವನಿಗೆ ಏನು ಹೇಳೋದು? ಮುಂದೆ TV 9ನಲ್ಲಿ ನಾನು ಪಾಸ್‌ಪೋರ್ಟ್ ತೋರಿಸಿದೆ. ಅದರಲ್ಲಿ ಅಫಘಾನದ ಸಿಕ್ಕಾ ಕೂಡ ಇತ್ತು. ಅಲ್ಲಿಂದ ಬಂದವನು ಪಕ್ಕಾ ಒಂದು ಯಾತ್ರಾ ಕಥನ ಬರೆದೆ: ‘ಮುಸ್ಲಿಂ’ ಅಂತ. ನೀವು ಹೋಗದೇನೇ ಇಲ್ಲೆಲ್ಲೋ ಕುಳಿತು ‘ಆ ದೇಶದಲ್ಲಿ ಉದ್ದಿನ ಬೇಳೆ, ಕಡ್ಲೆ ಬೇಳೆ ಸಿಗುತ್ತವೆ ಅಂತೆಲ್ಲ ಬರೆಯಲಾಗುವುದಿಲ್ಲ. ಅಂಥ ಕೃತಿಗಳು ಪಕ್ಕಾ ಅನುಭವ ಮತ್ತು ಎವಿಡೆನ್ಸ್-ಎರಡನ್ನೂ ಬೇಡುತ್ತವೆ. ನಾನು ಅಫಘಾನದ ಸೈನಿಕರ ನಡುವೆಯೇ ನಿಂತಿರುವ ಫೊಟೋ ಪ್ರಕಟಿಸಿದೆ. ಇವತ್ತಿಗೂ ‘ಮುಸ್ಲಿಂ’ ಪುಸ್ತಕ ಭರಪೂರ ಮಾರಾಟವಾಗುತ್ತದೆ. ಬರಿಗೈಲಿ ಬುಗುರಿ ಆಡಿಸಿದರೆ ಆಗುವುದಿಲ್ಲ.

ಇದೆಲ್ಲ ನನಗೆ ಸಿಟ್ಟು ತರಿಸಲಿಲ್ಲ. ನೋವೂ ಆಗಲಿಲ್ಲ. ದಡ್ಡ ಶಿಖಾಮಣಿಗಳ ಪಡೆ ನೋಡಿ ನಕ್ಕೆ. ಆದರೆ ಭಟ್ಟರು ಸಿದ್ದೇಗೌಡ ಎಂಬುವವನನ್ನು ತಂದು ಕೂಡಿಸಿದರು. ಸರಿಯಾಗಿ ನಾನವನ ಮುಖವನ್ನೂ ನೋಡಿರಲಿಲ್ಲ. ಇಳಿ ಸಂಜೆ ಹೊತ್ತಿನಲ್ಲಿ ಅವನ ಅಂಗೈ ದಪ್ಪದ ಚಾಳೀಸು ತೆಗೆದು ಬಿಟ್ಟರೆ ಸಿದ್ದೇಗೌಡನೆಂಬಾತ ದಾರಿ ಕಳೆದುಕೊಂಡ ಕಾಡು ಬೆಕ್ಕಿನಂತೆ ಕಾಣುವುದು ಹೌದು. ಅಂಥವನು ಚರ್ಚೆಗೆ ಕರೆಸಲ್ಪಟ್ಟ. ಅವನೊಂದು ಪತ್ರಿಕೆ ನಡೆಸುತ್ತಿದ್ದ. ಮೂಲತಃ ಅವನು ನಾನಾ ಪತ್ರಿಕೆಗಳ ಏಜೆಂಟ್. ಪತ್ರಿಕೋದ್ಯಮ ಹಾಗಿರಲಿ: ಅವನು ಒಂದು ಸಾಲೂ ಬರೆದವನಲ್ಲ. ಚರ್ಚೆಗೆಂದು ಬಂದು ಕುಳಿತವನು “ಅಲ್ಲ ಸಾರ್, ರವಿ ಬೆಳಗೆರೆಯವರು ತಮ್ಮ ಮಗಳನ್ನು ನಿಮಗೆ ಮದುವೆ ಮಾಡಿಕೊಡಬೇಕು ಅಂತಿದ್ದರಾ? ನೀವು ಏನೆಂದಿರಿ?" ಅಂತ ಕೇಳಿದ.

“ಅದೆಲ್ಲ ಮುಗೀತಲ್ಲ? ಮುಗಿದು ಹೋದ ಸಂಗತಿ..." ಅಂದು ಬಿಟ್ಟ ಸುವರ್ಣ ನ್ಯೂಸ್‌ನ ಆಂಕರ್. ಅವನ ಹೆಸರು ಅಜಿತ್ ಹನುಮಕ್ಕನವರ್. ಅದೇ ಮಾತು ನನ್ನನ್ನು ಕೇಳಿದ್ದಿದ್ದರೆ, ಅವನ ಸ್ಥಾನದಲ್ಲಿ ನಾನು ಇದ್ದಿದ್ದರೆ,

“ಮುಚ್ರೀ ಬಾಯಿ... ತಲಹರಟೆ ಮಾಡಬೇಡಿ" ಅನ್ನುತ್ತಿದ್ದೆ. ಅಜಿತನಿಗೂ ನನಗೂ ಆ ಘಳಿಗೆಯ ತನಕ ಭಿನ್ನಾಭಿಪ್ರಾಯವಿರಲಿಲ್ಲ. ಅವನು ನನ್ನ ಹುಡುಗ. ಹುಬ್ಬಳ್ಳಿಯಿಂದ ಪತ್ರ ಬರೆಯುತ್ತಿದ್ದ. ವಿದ್ಯಾರ್ಥಿಯಾಗಿದ್ದ ಅವನು ಪರೀಕ್ಷೆ ಮುಗಿದ ಮರುದಿನ ಬಂದು ಇಳಿದದ್ದು ಪತ್ರಿಕೆಯ ಆಫೀಸಿನ ಮುಂದೆ. He was good. ಅವನಿಗೆ ಬರವಣಿಗೆ ಇತ್ತು. ಪತ್ರಿಕೋದ್ಯಮವನ್ನು ಪರಿಚಯಿಸಿದ್ದು ನಾನು. ಒಂದೂ ದುರಭ್ಯಾಸವಿರಲಿಲ್ಲ. ನನ್ನೊಂದಿಗೆ ಇದ್ದುಕೊಂಡೇ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ. ಮುಂದೊಂದು ದಿನ, “ನಾನು ಟೀವಿ ಛಾನಲ್ ಸೇರ‍್ತೀನಿ" ಅಂದ. ನಾನು ಗೌರವದಿಂದಲೇ ಕಳಿಸಿಕೊಟ್ಟೆ. ಅವನದು ಹುಬ್ಬಳ್ಳಿ ಹತ್ತಿರದ ವರೂರು. ಜಾತಿಯಿಂದ ಜೈನರವನು. ತುಂಬ ಸುಂದರವಾದ ಇಬ್ಬರು ತಂಗಿಯರಿದ್ದರು. ಅವನೂ ಚೆನ್ನಾಗಿ ಇದ್ದ. ಅವನ ವರೂರಿನ ಮನೆಗೊಮ್ಮೆ ಹೋಗಿದ್ದೆ. ನಿಜಕ್ಕೂ ಅಜಿತ ನನ್ನ ಮನೆಯ ಮಗನಂತಿದ್ದ. ನಾನು ಹಾಗೇ ನೋಡಿಕೊಂಡೆ. ಆದರೆ ಸಿದ್ದೇಗೌಡನೆಂಬ ಕ್ರಿಮಿಗೆ ಅವನು ಹಾಗೆ ಉತ್ತರಿಸಬೇಕೆ? ‘ತೆಪ್ಪಗಿರಯ್ಯಾ ಸಾಕು’ ಅಂದಿದ್ದರೆ ಅವನಿಗೆ ಅಭಿನಂದನೆ ಸಲ್ಲಿಸುತ್ತಿದ್ದೆ. ಅವನು ನನ್ನೊಂದಿಗೆ ಇದ್ದಾಗ ಚೇತನಾಳ ಮದುವೆಯಾಗಿತ್ತು. ಇನ್ನು ಭಾವನಾ. ಆ ಮಾತು ಕೇಳಿಸಿಕೊಂಡಿದ್ದಿದ್ದರೆ ಎಡಗಾಲಿನ ಚಪ್ಪಲಿ ತೆಗೆದು ಮುಖ ಸಾಪಾಟು ಸವೆದು ಹೋಗುವಂತೆ ಬಡಿದಿರುತ್ತಿದ್ದಳು. ಮಕ್ಕಳಿಬ್ಬರಿಗೂ ನಾನು ಅವರ ಇಚ್ಛೆಯಂತೆಯೇ ಮದುವೆ ಮಾಡಿದ್ದೇನೆ. ಅವರು ನೆಮ್ಮದಿಯಾಗಿದ್ದಾರೆ. ವಿನಾಕಾರಣ ದ್ವೇಷಿಸಿದ್ದಕ್ಕೆ ಅವನಿಗೇನು ಮಾಡಲಿ?

ಇಷ್ಟಾಗಿ, ಅವನು ಒತ್ತಾಯ ಮಾಡಿ ಕರೆದ ಅಂತ, ಅವನ ಮದುವೆಯ ಆರತಿಗೂ ಹೋದೆ. “ಇದೇನ್ರೀ ಹುಡುಗಿ ಹೀಗಿದ್ದಾಳೆ? ಹಲ್ಲು ನೋಡಿದರೆ ಸಾಕು: ಒಂದೊಂದೂ ಒಳ್ಳೆ ಕೊಡಲಿಯ ಹಾಗಿವೆ" ಅಂತ ಒಬ್ಬರು ಅಂದರು. “ಹಾಗೆ ಮಾತನಾಡಬಾರದು" ಅಂದೆ. ಆಕೆಯನ್ನು ಅಜಿತ ಹೇಗೆ ಮದುವೆಯಾದ ಅಂತ ನನಗೆ ಗೊತ್ತು. ತಪ್ಪಿಸಿಕೊಳ್ಳಲಿಕ್ಕೆ ಅವನಿಗೆ ದಾರಿಯೇ ಇರಲಿಲ್ಲ. ಬಿಡಿ, ಅವತ್ತು ರಿಸೆಪ್ಷನ್‌ನಲ್ಲಿ ನಾನವನನ್ನು ನೋಡಿದೆ. ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಅಜಿತ್ ಇವನಲ್ಲವೇ ಅನ್ನಿಸಿತು. ಮುಖ ಓಲ್ಡ್ ಮಾಂಕ್ ರಮ್ ಬಾಟಲಿಯಂತಾಗಿದೆ ಕುಡಿದೂ ಕುಡಿದು. ಉಳಿದ ಅಷ್ಟೂ ಚಟಗಳನ್ನು ರೂಢಿಸಿಕೊಂಡಿದ್ದಾನೆ. ಗೆಳೆಯನ ಪತ್ನಿಯ ಜೊತೆಯಲ್ಲಿ ತಾನಿದ್ದುದನ್ನು ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದಾನೆ. ಅವನು ಖಂಡಿತ ಹಾಗಿರಲಿಲ್ಲ. ಮೊದಲು ಅವನನ್ನು ಸುವರ್ಣ ನ್ಯೂಸ್‌ನ ಒಂದು sectionನಿಂದ ತೆಗೆದರು. ಆನಂತರ ಕಚೇರಿಯಿಂದಲೇ ಹೊರದಬ್ಬಿದರು. ಈಗ ಮನೆಯಲ್ಲೇ ‘ತಾಚಿ’. ಪುಸ್ತಕ ಬರೆಯುತ್ತೇನೆ ಅಂದ. ಬರೆಯಲೂಬಹುದು. ಅವನ ಒಬ್ಬ ತಂಗಿಗೆ ಅದೇನೋ ಆಯಿತು ಅಂದರು. ಮತ್ತೆ ಅವನ ಸುದ್ದಿ ಇಲ್ಲ. ವಿಶ್ವೇಶ್ವರ ಭಟ್ಟ ಸ್ವಂತ ಛಾನಲ್ ಮಾಡಿದರೆ ಅದಕ್ಕೆ ಸೇರಬೇಕು ಎಂದು ಕಾದು ಕುಳಿತಂತಿದೆ. ಭಟ್ಟನದು ಕೋಣದ ಪ್ರಸವದಂತಹುದು. ಕೋಣ ಈಯ್ದರೆ ಮೊದಲ ಸೌಟು ಗಿಣ್ಣ ಅಜಿತನಿಗೇ ಖಾಯಂ.

ಸುವರ್ಣ ನ್ಯೂಸ್ ಮಾಲಿಕರು ಭಟ್ಟನನ್ನು ‘ನೀನಾಗಿ ಹೋಗ್ತಿಯಾ? ಕತ್ತು ಹಿಡಿದು ನೂಕ ಬೇಕಾ’ ಎಂಬಂತೆ ಶಬ್ದ ಹೊರಡಿಸಿ ಕಡೆಗೆ ಹೊರ ಹಾಕಿದರು. ಸತ್ತದ್ದು ಒಬ್ಬ ಗಂಡ. ಅನೇಕರಿಗೆ ವೈಧವ್ಯ ಬಂತು ಎಂಬಂತೆ ಭಟ್ಟನ ಜೊತೆಯಲ್ಲಿ ಭಡ್ತಿ ಎಂಬ ಗಿಂಡಿ ಮಾಣಿ ಹೊರಬಿದ್ದ. ಅವನು ಆಫೀಸಿನಿಂದ ಆಫೀಸಿಗೆ ನಕನಕ ತಿರುಗುತ್ತಾನೆ. “ಎಲ್ಲಿ ನಮ್ಮ ಭಟ್ಟರೋ ಅಲ್ಲೇ ಮೂತ್ರಾಲಯ!" ಎಂಬ ಹಾಡಿಗೆ ಅವನದೇ ವಾಯ್ಸು. ಅದ್ಯಾರನ್ನೋ ತಂದು ಮನೆಯಲ್ಲಿ ಇರಿಸಿಕೊಂಡಿದ್ದಾನೆ ಅಂದರು. ಅದ್ಯಾರೊಂದಿಗೋ ಕುಳಿತ ಭಡ್ತಿ, ಅದಕ್ಕೆ ‘ಸಾಕುಪ್ರಾಣಿಗಳು’ ಎಂಬ caption ಕೊಟ್ಟು ಫೇಸ್ ಬುಕ್‌ಗೆ ಹಾಕಿದ್ದಾನೆ. ಇಷ್ಟಾಗಿ, ಭಟ್ಟರ ಪರ್ಸನಲ್ ವಿಧವೆಯರ ಪೈಕಿ ಅವನೇ ಬೆಟರು. ತೀರ ಮಧ್ಯಾಹ್ನದ ತನಕ ಯಾರೂ ಕರೆಯದಿದ್ದರೆ, ನೇರವಾಗಿ ಗಿರಿನಗರಕ್ಕೆ ಬರಿಗಾಲಲ್ಲಿ ನಡೆದು ಹೋಗಿ ರಾಮಚಂದ್ರಾಪುರ ಮಠದಲ್ಲಿ ತಿಳಿಸಾರು, ಮಜ್ಜಿಗೆ ಅನ್ನ ತಿಂದು ಬರುತ್ತಾನೆ.

ಈಗ ಭಟ್ಟರು ಎದುರಿಗೆ ಬಂದರೆ ಮುಖ ತಪ್ಪಿಸಿ, ಗಲ್ಲಿಗೆ ಬಿದ್ದು ಪಾರಾಗುವವರೇ ಜಾಸ್ತಿ. ಅವರು ರಾಮಚಂದ್ರಾಪುರ ಮಠದಲ್ಲಿ ತಿನ್ನಲಿಕ್ಕೆ ಬೇರೇನೂ ಉಳಿದಂತಿಲ್ಲ. ಅಲ್ಲೆಲ್ಲೋ ಕುಳಿತ ನರೇಂದ್ರ ಮೋದಿಯಿಂದ ನೆರವು ಸಿಗುವ ಸಾಧ್ಯತೆಗಳಿಲ್ಲ. ವಕೀಲರೇನೋ ‘ಕೇಸು ನಡೆಸೋಣ’ಅನ್ನುತ್ತಾರೆ. ಆದರೆ ಸಗಣಿ ಸ್ವಾಮಿಗೆ ಒಳಗೇ ಡುಕು ಡುಕು. ಭಟ್ಟನಿಗೇ ನಿಗದಿತ ಊಟವಿಲ್ಲ. ಅವನೀಗ ಮಾಜಿ ಎಡಿಟರು. ಒಂದರ್ಥದಲ್ಲಿ ದಿವಂಗತ ಪತ್ನಿಯ ಖಾಸಾಗಂಡ. ಹಿಂದೆ ‘ವಿಜಯ ಕರ್ನಾಟಕ’ದಿಂದ ಹೊರ ನೂಕಿಸಿಕೊಂಡಾಗ ‘ನಂಗೆ ಫೆಲೋಷಿಪ್ ಸಿಕ್ಕಿದೆ. ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ಹೋಗ್ತೀನಿ’ ಎಂದು ಟಿಂಗಿದ್ದ. ಈಗ ಸ್ಕಾಲರ್‌ಷಿಪ್ಪು ಇಲ್ಲ; ಉನ್ನತವಾದ್ದು ಯಾವುದೂ ಇಲ್ಲ. ‘ಪತ್ರಿಕೆ ಮತ್ತು ಟೀವಿ ಹೇಗೆ ನಡೆಸಬೇಕು ಎಂಬ ಬಗ್ಗೆ ನಿಮ್ಮ ಮಾರ್ಗದರ್ಶನ ಬೇಕು. ನೀವು ಮನೆಗೇ ಬಂದು ಬಿಡಿ. ಒಂದು ಸಾಯಂಕಾಲ ಕುಳಿತು ಡಿಸ್ಕಸ್ ಮಾಡೋಣ’ ಅಂತ ಕೆಲವು ಹಿರಿಯ ಪತ್ರಕರ್ತರಿಗೆ ಗಂಟು ಬಿದ್ದಿದ್ದಾನೆ. ಆದರೆ ಹೋಗೋರು ಯಾರು? ಪಾಪ, ವೈಯನ್ಕೆ ಸತ್ತೇ ಹೋದರು. ‘ಪುಗಸಟ್ಟೆ ಹೆಂಡ ಕುಡಿಯಲು ಬರ‍್ತಾರ್ರೀ...’ ಅಂತ ಭಟ್ಟ ಅಂದದ್ದನ್ನ ಕೇಳಿಸಿಕೊಂಡವರು ಅನೇಕರಿದ್ದಾರೆ. ಅವರು ಹೋದಾರಾದರೂ ಯಾಕೆ? ಮೊನ್ನೆ ಆಗಸ್ಟ್ 15ಕ್ಕೆ ಭಟ್ಟನ ಹೊಸ ದಿನ ಪತ್ರಿಕೆ ಬಂದೇ ಬಿಟ್ಟಿತು ಅಂದರು. ಬಂದದ್ದು ಖಾಲಿ ಬಾವುಟ: ಒಂದು ಹಿಡಿ ಒಣಗಿದ ಕಳ್ಳೆಪುರಿ. ಇನ್ನು ಛಾನಲ್ ಎಲ್ಲಿದೆ? ಕಂಡವರ ಪತ್ರಿಕೆ, ಛಾನಲ್‌ಗಳಲ್ಲೇ ಕುಳಿತು ಬೆಣ್ಣೆ ಮುರುಕು ತಿಂದಷ್ಟು ಇವು ಸುಲಭವಲ್ಲ. ಅಲ್ಲದೆ ಭಟ್ಟ ಏಕಾಂಗಿಯಾಗಿ ಎಲ್ಲಿಗೂ ಹೋಗುವುದಿಲ್ಲ. ಎಲ್ಲಿಗೆ ಹೋದರೂ ಲಗೇಜ್ ಸಮೇತ ಹೋಗುತ್ತಾನೆ. ಸ್ವತಃ ಅವನಿಗೇ ಬರೆಯೋದು ಮರೆತಿದೆ. ಭಡ್ತಿ, ಚೈತನ್ಯ ಹೆಗಡೆಯಂಥವರ ತೌಡು ಎಂಥದೆಂಬುದು ಎಲ್ಲರಿಗೂ ಗೊತ್ತು. ಜಲ, ಮಲ, ನೆಲ ಪತ್ರಕರ್ತರು ಯಾರಿಗೂ ಬೇಡ. ಬಾಯ್ತೆರೆದು ನೌಕರಿ ಕೇಳಲಿಕ್ಕೆ ಭಟ್ಟನಿಗೆ ಸಾಧ್ಯವಿಲ್ಲ. ಕೊಂಚ ಹೆಚ್ಚು ಕಡಿಮೆ ಭಟ್ಟನಿಗೂ ಅನಂತನೆಂಬ ಚಿನಿವಾರನಿಗೂ ಇದೊಂದು ವಿಷಯದಲ್ಲಿ ಪಕ್ಕಾ ಸಾಮ್ಯವಿದೆ. ಒಬ್ಬನನ್ನು ಕರೆದರೆ ಸಾಕು; ಹೆಣ ಹೊರುವವರಂತೆ, ಒಂದು ಹಿಂಡು ಜನ ಇಬ್ಬರ ಬೆನ್ನಲ್ಲೂ ಬರುತ್ತಾರೆ. ಅವರಿವರಂತೆ ಪಿಗ್ಗಿ ಬೀಳಲು ಪಬ್ಲಿಕ್ ಟಿವಿಯ ರಂಗಣ್ಣ ದಡ್ಡನಲ್ಲ. ಅನಂತನ ಆರಂಭಿಕ ಅವತಾರವನ್ನು ಛಕ್ಕನೆ ಗುರುತಿಸಿ ‘ಎದ್ನಡಿ’ ಅಂದು ಬಿಟ್ಟ.

ಅದನ್ಯಾರೋ ಅಜಿತ ಅಂದೆನಲ್ಲ? ಅವನಂತೆಯೇ ನನ್ನೊಂದಿಗಿದ್ದು ಹೋದವನು ಅನಂತ. ಒಂದು ಸಂಜೆ ನಮ್ಮಲ್ಲಿ ಸಭೆ ನಡೆದಿತ್ತು: ಸಾರ್ವಜನಿಕ ಸಭೆ. ಅದರಲ್ಲಿ ಅನಂತನ ಬಗ್ಗೆ ನೂರು ಒಳ್ಳೆಯ ಮಾತಾಡಿ, ಗೌರವ ತೋರ್ಪಡಿಸಿ, ಅಪರೂಪದ ಒಂದು ಪೆನ್ ಕೂಡ ಗೆಳೆತನದ ಕುರುಹಾಗಿ ಕೊಟ್ಟು “ಇನ್ಮೇಲೆ ಓ ಮನಸೇ ಪತ್ರಿಕೆಗೆ ಅನಂತ ಚಿನಿವಾರ್ ಅವರೇ ಸರ್ವ ಸ್ವತಂತ್ರ ಸಂಪಾದಕರು" ಎಂದು ಬಹಿರಂಗವಾಗಿ ಹೇಳಿದೆ. ಆ ಸಭೆ ಮುಗಿಯಿತು. ಅನಂತ ನನ್ನ ಬೆನ್ನ ಹಿಂದೆಯೇ ಆಫೀಸಿನ ಮೆಟ್ಟಿಲು ಹತ್ತಿ ಬಂದ. ಅವತ್ತು ನಾನು ಸಂತಸದ ಮೂಡ್‌ನಲ್ಲಿದ್ದೆ. ‘ಓ ಮನಸೇ’ ನನ್ನ ಅತ್ಯಂತ ಪ್ರೀತಿಯ ಪತ್ರಿಕೆ. ಜವಾಬ್ದಾರಿ ಹೊರಲಿಕ್ಕೆ ಅನಂತ ಇದ್ದಾನಲ್ಲ ಅಂತ ಸಂತಸದಲ್ಲಿದ್ದೆ.

“ರವೀ, ನಾನು ಓ ಮನಸೇ ಪತ್ರಿಕೆಗೆ ರಾಜೀನಾಮೆ ಕೊಡ್ತಿದೀನಿ!" ಅಂತ ನೇರವಾಗಿ ಆತ್ಮಹತ್ಯಾ ಬಾಂಬರ್‌ನಂತೆ ಹೇಳಿದ. ಅವನ ಬಗ್ಗೆ ಆ ಪರಿ ನಂಬಿಕೆಯಿಟ್ಟು ಮಾತನಾಡಿ ಹದಿನೈದು ನಿಮಿಷ ಕೂಡ ಆಗಿರಲಿಲ್ಲ. ಅವನು ನನಗೆ ಹೊಸಬನೇನಲ್ಲ. ಅವನ ಅಣ್ಣ ಮತ್ತು ನಾನು ತುಂಬ ಆತ್ಮೀಯರು. ಬಳ್ಳಾರಿಯ ಕಾಲದ ಗೆಳೆಯರು ನಾವು. ಅನಂತ, ಆಗಲೂ ನನ್ನ ‘ಬಳ್ಳಾರಿ ಪತ್ರಿಕೆ’ಗಾಗಿ ಕೆಲಸ ಮಾಡಿದ್ದ. ಅವನು ಅದಿನ್ನೆಂಥ ವಕ್ರ ಎಂಬುದು ಉಳಿದವರೆಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತು. ಹೊಚ್ಚ ಹೊಸದಾಗಿ ಕೆಲಸಕ್ಕೆ ಸೇರಿದ ದಿನವೇ ನಾನು ಕೆಲಸ ಬಿಟ್ಟು ಹೋಗ್ತೀನಿ ಎಂಬ ರಾಗ ತೆಗೆಯುವ ವಿಭಿನ್ನ ಜೀವಿ ಅವನು.

ಬಿಡಿ, ಹೀಗೆ ನೆನಪು ಮಾಡಿಕೊಂಡರೆ ಅನೇಕರು ಸಿಗುತ್ತಾರೆ. ಅದರಲ್ಲಿ ಕೆಲವರಿಗಂತೂ ನನ್ನ ವಿರುದ್ಧ ಮಾತಾಡಲಿಕ್ಕೆ, ಬರೆಯಲಿಕ್ಕೆ ಏನೇನೂ ಕಾರಣವಿರಲಿಲ್ಲ. Of all the fellows ಆ ಸಿದ್ದೇಗೌಡನಿಗೆ ನಾನೇನು ಕೆಡುಕು ಮಾಡಿದ್ದೆ? “ಮುಗಿಸ್ತೀನ್ನೋಡಿ ಬೆಳಗೆರೇನ..."ಎಂದು ದಿನ ಬೆಳಗಾದರೆ ಅನ್ನುತ್ತಿದ್ದನಂತೆ. ವಾರಪತ್ರಿಕೆ ಮಾಡಿ, ಅದರ ನೆರವಿನಿಂದಲೇ ನನ್ನನ್ನು ಮುಗಿಸಲು ನಿಂತ. ಅದು ಬರ್ಕತ್ತಾಗಲಿಲ್ಲ. - “ಈಗ ದಿನಪತ್ರಿಕೆ ಮಾಡ್ತೀನಿ ನೋಡ್ತಿರಿ" ಅಂದ. ಆ ಹೊತ್ತಿಗೆ ಸಿದ್ದೇಗೌಡ ಸಾಕಷ್ಟು ಕಳೆದುಕೊಂಡಿದ್ದ. ಸಾಲಗಳಾಗಿದ್ದವು. ಇದ್ದ ಸೈಟುಗಳನ್ನು ಮಾರಿಕೊಂಡಿದ್ದ. ಅವನ ಪತ್ನಿ ನಿಜಕ್ಕೂ ಗಾಬರಿಯಾಗಿದ್ದಿರಬೇಕು. ಜೊತೆಗೆ ಮಗಳದೂ ಏನೋ ಸಮಸ್ಯೆ. “ಡೈಲಿ ಪೇಪರ್ ತಂಟೆಗೆ ಹೋಗಬೇಡಿ. ಎಷ್ಟಾದರೂ ರವಿ ಬೆಳಗೆರೆ ಪತ್ರಕರ್ತ. ಅವರ ಉಸಾಬರಿ ನಿಮಗೇಕೆ?" ಎಂದು ಆಕೆ ಮೇಲಿಂದ ಮೇಲೆ ಅಂದಿದ್ದರಂತೆ. ಶುದ್ಧ ಅವಿವೇಕಿ ಸಿದ್ದೇಗೌಡ ದಿನ ಪತ್ರಿಕೆ ಮಾಡಿಯೇ ಬಿಟ್ಟ. ಅವತ್ತು ಒಂದೆಡೆ ಅವನ ದಿನಪತ್ರಿಕೆಯ ಬಿಡುಗಡೆ. ಇನ್ನೊಂದೆಡೆ ಸಿದ್ದೇಗೌಡನ ಪತ್ನಿ ಉರುಳು ಹಾಕಿಕೊಂಡು ಇಳೇಬಿದ್ದು ಬಿಟ್ಟಳು. ಅವನಿಗೀಗ ಗಂಜಿ ಬೇಕು. ಅವನನ್ನು ಅವತ್ತಿನ ಮಟ್ಟಿಗೆ ಬಳಸಿಕೊಂಡ ಭಟ್ಟ, ಹತ್ತಿರಕ್ಕೆ ಕರೆದು ಸಿಂಗಲ್ ಚಹ ಕೂಡ ಕೊಡಿಸುವುದಿಲ್ಲ. ಇಂಥವರು ಸಾಕಷ್ಟಿದ್ದಾರೆ ಉದಾಹರಣೆಗೆ. ಎಲ್ಲರೂ ನನಗೆ ವಿಷಪ್ರಾಶನ ಮಾಡಲು ಬಂದವರೇ. ಅವರು ಕೊಟ್ಟ ಆ ಗರಳ ಕುಡಿದೆ, ನೀಲಕಂಠ ಕುಡಿದಂತೆ.

ಅದಿರಲಿ, ನೀವೇ ಒಮ್ಮೆ ಶಬ್ದ ಮಾಡದೆ ಬೆನ್ನ ಹಿಂದೆ ನಡೆದು ಹೋಗಿ, “ಸರ್, ನಿಮ್ಮ ಅಪ್ಪನಿಗೆ ಒಟ್ಟು ಎಷ್ಟು ಜನ ಪತ್ನಿಯರು..?" ಅಂತ ಕೇಳಿ ಬಿಡಿ. ಭಟ್ಟ ಅದೇ ಶುದ್ಧ ಬೇವರ್ಸಿ ನಗೆ ನಗುತ್ತಾನೆ. ಇವನಪ್ಪ ರಾಮಚಂದ್ರ ಭಟ್ಟನಿಗೆ ಅಧಿಕೃತವಾಗಿ ಪತ್ನಿಯರು ಮೂವರು. ಭಟ್ಟನಿಗೆ ಅದೆಷ್ಟು ಜನ ಅಕ್ಕ-ಅಣ್ಣಂದಿರೋ? “ಹೋಗಲಿ ನಿಮಗೆಷ್ಟು ಮದುವೆಗಳಾಗಿವೆ ಸಾರ್?" ಅಂತ ಕೇಳಿಬಿಡಿ. ಭಟ್ಟ ಗ್ಲೋಬಲ್ ಮಟ್ಟದ ಪತ್ರಿಕೋದ್ಯಮದ ಕುರಿತು ಮಾತನಾಡಿ, “ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗಬೇಕಿತ್ತು ಕಣ್ರೀ...ಅಷ್ಟರಲ್ಲಿ ಎರಡನೇ ಮದುವೆ ಆಗಿ ಹೋಯ್ತು" ಅನ್ನುತ್ತಾನೆ. ಅವನಿಗೆ ವಿಧ್ಯುಕ್ತವಾಗಿ ಇಬ್ಬರು ಪತ್ನಿಯರು. “ನೀನು ಹೂಂ ಅನ್ನು. ಈಗ ನನ್ನ ಪತ್ನಿ ಇದ್ದಾಳಲ್ಲ? ಅವಳನ್ನ ನೋಡಿಕೊಂಡ ಹಾಗೇನೇ ನಿನ್ನನ್ನೂ ನೋಡಿಕೊಳ್ತೇನೆ" ಎಂದು ನಿರಾಶ್ರಿತ ಹೆಂಗಸರಿಗೆ, ಡಿವೋರ್ಸ್ ಆದವರಿಗೆ, ನಿಸ್ಸಹಾಯಕ ಹೆಣ್ಣುಮಕ್ಕಳಿಗೆ ಕಾಳು ಹಾಕುತ್ತಿರುತ್ತಾನೆ. ವಿಶ್ವೇಶ್ವರ ಭಟ್ಟ ಸ್ನೇಹಕ್ಕೆ, ಪ್ರೀತಿಗೆ, ಸಂಸಾರಕ್ಕೆ-ಯಾವುದಕ್ಕೂ ಅರ್ಹನಲ್ಲ. ಈ ಮಾತುಗಳೆಲ್ಲವನ್ನು ಅವತ್ತು ಕೆಂಡಾಮಂಡಲವಾಗಿದ್ದ ವಕೀಲರು ಕೇಳಿದರು. ಅದಕ್ಕೆ ಉತ್ತರ ನೀಡಲು ಭಟ್ಟ ತಡಬಡಿಸಿದಾಗ, ತಮ್ಮ ಮಧ್ಯಕ್ಕೆ ಎಳೆದುಕೊಂಡು ಹಂದಿಗೆ ಒದ್ದಂತೆ ಒದ್ದು ಅವನ ಚುಂಗು ಬಿಡಿಸಿದರು. ಒಬ್ಬ ಪತ್ರಕರ್ತನ ಮೇಲೆ ಆ ಪರಿಯ ಆಕ್ರೋಶ ಹೊರಬಿದ್ದುದನ್ನ ಆತನಕ ನಾನು ಖಂಡಿತ ನೋಡಿರಲಿಲ್ಲ. ಆ ದೃಶ್ಯ ನನಗೆ ಚೆಕ್ಕು ಚೆದುರದೆ ಕಣ್ಣಿಗೆ ಕಟ್ಟಿದೆ.

ಇದೆಲ್ಲಕ್ಕಿಂತ ನಗೆಪಾಟಲಾಗಿದ್ದು ಸುವರ್ಣನ್ಯೂಸ್‌ನ ಬೆಳಗೆರೆ ವಿರೋಧಿ ಅಭಿಯಾನದಲ್ಲಿ ಈ ಮಹಾಶಯ announce ಮಾಡಿದ ಸಂಗತಿ. “ಬೆಳಗೆರೆಯಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದವರು ಬಂದು ನಮ್ಮನ್ನ ಸಂಪರ್ಕಿಸಿ" ಎಂದು scroll ಹಾಕಿದರು. ಅದನ್ನ ನೋಡಿ ನಕ್ಕು ಬಿಟ್ಟೆ. ಅವರೆಲ್ಲಿದ್ದಾರೆ ಲೈಂಗಿಕ ಶೋಷಿತೆಯರು? ಎಲ್ಲಿಂದ ಬರುತ್ತಾರೆ? ನಾನೇನು ಮದನ ಕಾಮರಾಜನಾ? ಹೋಗಲಿ ಅಮೆರಿಕದ ಅವಸರಗೇಡಿ ಕ್ಲಿಂಟನ್ನನಾ?ಅಷ್ಟೆಲ್ಲ ಪ್ರಚಾರ ಮಾಡಿದರೂ ಒಬ್ಬೇ ಒಬ್ಬರು ಶೋಷಿತೆ ಅಂತ ಹೇಳಿಕೊಂಡು ಸುವರ್ಣ ಆಫೀಸಿಗೆ ಬರಲಿಲ್ಲ. ಉಳಿದಂತೆ ಸ್ವತಃ ವಿಶ್ವೇಶ್ವರ ಭಟ್ಟ, ರಾಧಾಕೃಷ್ಣ ಭಡ್ತಿ, ಸಿಮ್ಮ ಮುಂತಾದವರಿಗೆ ನಾನು ಲೈಂಗಿಕ ಕಿರುಕುಳ ನೀಡಿಲ್ಲ. ಆ ಕಸುಬೇನಿದ್ದರೂ ಭಟ್ಟನದು. ಅವನಿಗೆ ಅದೂ ವರ್ಜವಲ್ಲ. ವೈಯೆನ್ಕೆ ಬದುಕಿದ್ದ ಕಾಲದಲ್ಲೇ “ವಿಶ್ವೇಶ್ವರ ಭಟ್ಟನ ಬಾಟಮ್ ಐಟಮ್ ಜಖಂ ಆಗಿದೆ" ಎಂದು ‘ಕನ್ನಡಪ್ರಭ’ದಲ್ಲಿ ತಮಾಷೆಯಾಗಿ ಮಾತನಾಡುವವರಿದ್ದರು.

ಈಗ ಭಟ್ಟರು ರಾಜರಾಜೇಶ್ವರಿ ನಗರದ ಮಟ್ಟಿಗೆ ಒಂದು ಪತ್ರಿಕೆ ಮಾಡಿ ಅದಕ್ಕೆ ಎಡಿಟರ್ ಇನ್ ಛೀಫ್ ಆಗಬಹುದು! ಅವರಿಗೆ ಬೇರೆ ನೌಕರಿಯಿಲ್ಲ. ಭಡ್ತಿಗೆ ಆಗಲೇ ‘ಮಠದ ಊಟ ನೋಡಿಕೋ’ ಎಂದು ಹೇಳಿದ್ದಾರೆಂಬ ಸುದ್ದಿಯಿದೆ. ಅಜಿತ ದಂಪತಿಗಳು ಸಲ್ಲೇಖನ ವ್ರತ ಹಿಡಿದಿದ್ದಾರೆ. ಸಿದ್ದೇಗೌಡ ಎರಡನೇ ಕ್ವಾರ್ಟರಿಗೇ ‘ಅಂಬೋ’ ಅನ್ನುವಂಥ ಪರಿಸ್ಥಿತಿಯಲ್ಲಿದ್ದಾನೆ. ಹೆಂಡತಿ ಬದುಕಿದ್ದಿದ್ದರೆ ಒಪ್ಪತ್ತು ಊಟವನ್ನಾದರೂ ಕಾಣುತ್ತಿದ್ದರು. ಅವನ ಮಕ್ಕಳಿಗೆ ಸಿದ್ದೇಗೌಡನ ಬಗ್ಗೆ ಅರಪಾವು ಗೌರವವುಳಿದಿಲ್ಲ. ಈ ಮಧ್ಯೆ ಅವನ್ಯಾರೋ ಶಶಿಶರ್ಮ ಅಂತ ಇದ್ದ. ಪ್ರೀತಿಸಿದ ಹುಡುಗೀನ ಮದುವೆಯಾಗುವ ಮುನ್ನ, “ನಿನ್ನ ಕನ್ಯತ್ವ ರುಜು ಮಾಡು" ಅಂತ ತಕರಾರು ತೆಗೆದಿದ್ದ. ಅವನಿಗೆಂಥದೋ ಬೈಪೋಲಾರ್ ಖಾಯಿಲೆ ಇದೆ ಅಂದರು. ರಾತ್ರಿಯಲ್ಲಿ ಫಕ್ಕನೆ ನೋಡಿದರೆ ಮಕ್ಕಳು ‘ಕಿಟಾರ್’ ಕಿರುಚುತ್ತಾರೆ. ಬರೀ ಇಂಥ ವೇಸ್ಟ್ ಬಾಡಿಗಳೇ ಆದರೆ ಭಟ್ಟನ ಸ್ವಂತ ಪತ್ರಿಕೆ ಮತ್ತು ಛಾನಲ್ ಹುಟ್ಟುವುದಕ್ಕೆ ಮುಂಚೆಯೇ ಕಾಲೆತ್ತಿ ಕೊಳ್ಳುತ್ತದೆ. “ಏನೇನ್ ಮಾಡ್ತೀವೋ ನೋಡಿ" ಎಂಬ ಸಾಲನ್ನು ‘ಕನ್ನಡಪ್ರಭ’ದ ಮುಖಪುಟಕ್ಕೆ ಘೋಷ ವಾಕ್ಯದಂತೆ ಮುದ್ರಿಸಿ ಭಟ್ಟ ನಗೆಪಾಟಲೆದ್ದು ಹೋದ. ಸದ್ಯಕ್ಕಂತೂ ಅವನು ‘ಚಂದಾಮಾಮ’. ಚಂದಾ ಎತ್ತದೆ ಬೇರೆ ದಾರಿ ಉಳಿದಿಲ್ಲ. ಇರೋ ಮೂರು ಮುಕ್ಕಾಲು ರಾಜಕಾರಣಿಗಳನ್ನ ಮೊದಲೇ skin out ಮಾಡಿಸಿ ತಿಂದು ಮುಗಿಸಿದ್ದಾನೆ.

ಈಗ ಹೇಳಿ: ಕಾಲವೆಂಬುದು ಹೀಗೂ ಉರುಳುತ್ತದೆ, ಅಲ್ಲವೇ?
ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 31 August, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books