Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅಕ್ಕಪಕ್ಕದಲ್ಲೇ ಮಲಗಿ ಸುಖಿಸುವ ಜೀವನ ಯಾನ

ಒಂದು ಹಿಂಟ್ ಕೂಡ ಕೊಡದೆ ಸರ್ಪ್‌ರೈಸ್ ಕೊಡೋದು ಈ ಹುಡುಗಿ ನಿವೇದಿತಾಳಿಂದಲೇ ಕಲೀಬೇಕು. ಕೆಲ ದಿನಗಳ ಹಿಂದೆ ಅವಳು ಗುಲ್ಜಾರ್ ಸಾಹೇಬರ ‘ಪ್ಲೂಟೋ' ಕವನ ಸಂಕಲನ ನನಗೋಸ್ಕರ ಖರೀದಿಸಿ ತಂದುಕೊಟ್ಟಿದ್ದಳು. ಪುಸ್ತಕ ಕೊಟ್ಟರೆ ಯಾವತ್ತಿಗೂ ನನಗದು ಇಷ್ಟವೇ. ಆದರೆ ಕೈಲಿ ಹಿಡಿದ ತಕ್ಷಣ ಬೆಚ್ಚಿಬಿದ್ದೆ. ಮೊಟ್ಟ ಮೊದಲ ಪುಟದಲ್ಲೇ ಗುಲ್ಜಾರ್ ಅವರ ಸಹಿ !

‘Yes boss. ಅವರದೇ ಸಿಗ್ನೇಚರ್. ಅವರಿಗೋಸ್ಕರವೇ ಮದ್ರಾಸಿಗೆ ಹೋಗಿದ್ದೆ. ಅಲ್ಲಿ ಕವಿ ಸಮ್ಮೇಳನಕ್ಕೆ ಅವರು ಬಂದಿದ್ದರು. ಶುಭ್ರಕ್ಕಿಂತ ಶುಭ್ರವಾದ ಬಿಳೀ ಪಾಯಜಾಮಾ ಜುಬ್ಬಾ ಹಾಕ್ಕೊಂಡಿದ್ರು. He was looking great. ನೀವು ಸಾವಿರ ಸಲ ನೆನಪಾದಿರಿ' ಅಂದಳು. ಅವಳ ಗಂಡನ ಮನೆ ಇರೋದು ಆಂಧ್ರದ ಗೂಡೂರಿನಲ್ಲಿ. ಅದು ಶ್ರೀಹರಿಕೋಟದ ಪಕ್ಕದಲ್ಲಿದೆ. ಅಲ್ಲಿಂದ ನಲವತ್ತು ಕಿಲೋಮೀಟರ್ ದೂರಲ್ಲಿ ಮದ್ರಾಸು. ನಿವೀಗೆ ಒಂದು 'ಶುಭಾಶೀರ್ವಾದ’ ಅಂದೆ. ಅರ್ಧ ದಿನಕ್ಕೆ ಮುಂಚಿತವಾಗಿ ಹೇಳಿದ್ದಿದ್ದರೆ ನಾನೂ ಹೋಗಿಬಿಡುತ್ತಿದ್ದೆ.

ನಿನ್ನೆ, ಅವರದು birthday. ಅದನ್ನೂ ಅವಳೇ ನೆನಪಿಸಿದಳು. ನನ್ನ Facebook ಮಿತ್ರರೊಬ್ಬರು ಕೂಡ ನೆನಪಿಸಿದ್ದರು. ನನಗೆ ಒಂದು ಅಚ್ಚರಿ ಇದೆ. ಗುಲ್ಜಾರ್ ಸಾಹೇಬರು ಒಬ್ಬರೇ ವಾಸವಿರುತ್ತಾರಾ? ಅವರು ಡಿವೋರ್ಸ್ ಪಡೆದಿಲ್ಲ. ರಾಖೀ ಗುಲ್ಜಾರ್ ಪ್ರತ್ಯೇಕವಾಗಿರುತ್ತಾರೆ. ಮಗಳು ಗಂಡನ ಮನೆಯಲ್ಲಿ. ಈ ವಯಸ್ಸಿನಲ್ಲೂ ಸಾಹೇಬರು active ಆಗಿದ್ದಾರೆ. ನನ್ನಲ್ಲಿ ಒಂದು ವಿಡಿಯೋ ಕ್ಲಿಪ್ ಇದೆ. ಅಮೃತಾಪ್ರೀತಂ ಮತ್ತು ಗುಲ್ಜಾರ್ ನೆಮ್ಮದಿಯಾಗಿ ಕುಳಿತು ಮಾತನಾಡಿದ್ದಾರೆ. ಜೊತೆಗೆ ಅಮೃತಾ ಅವರ ಜೀವಸಖ ಇಮ್ರೋಜ್ ಇದ್ದಾರೆ. ಮೊದಲು ಕೊಂಚ ಮಾತು. ನಂತರ ಒಂದು ಅಪ್ಪುಗೆ. ಅದಾದ ಮೇಲೆ ಮಾತುಗಳ ಮುಂದುವರಿಕೆ. ಬೇಜಾರಾದಾಗ ಅದನ್ನು play ಮಾಡಿಕೊಳ್ಳುತ್ತೇನೆ. ಅಮೃತಾ ಪ್ರೀತಂ ಅದೆಷ್ಟು ಸುಂದರವಾಗಿ ಕಾಣುತ್ತಾರಲ್ಲವಾ ಅದರಲ್ಲಿ ? ಆಕೆ ಬಹುಶಃ ಸಿಗರೇಟು ಬಿಟ್ಟಿದ್ದಿರಬೇಕು. ಊಹಿಸಿದ್ದಕ್ಕಿಂತ ಚೆಂದ ಕಾಣುತ್ತಾರೆ. ಆಕೆಗಿಂತ ಚೆಂದಗೆ ಕಾಣೋದು ಗುಲ್ಜಾರ್. I love him.

ಏಕಾಂಗಿಯಾಗಿ ಬದುಕುವ ಗುಲ್ಜಾರ್, ಈ ತನಕ ತಮ್ಮ ಜೀವಿತಗಾಥೆ ಬರೆದಿಲ್ಲ. ಎಂದಾದರೂ ಬರೆಯುತ್ತಾರೇನೋ? ಈ ಸಂಜೆಗಾಲದಲ್ಲಿ ಅವರು ಹೇಗೆ ಬದುಕುತ್ತಿದ್ದಾರೋ? ನನಗೆ ಅಂದಾಜಿಲ್ಲ. ನನ್ನ ಫೇಸ್‌ಬುಕ್ ಮಿತ್ರರು ಹಾಕಿದ ಫೊಟೋದಲ್ಲಿ ಕೊಂಚ ಹಣ್ಣಾದಂತೆ ಕಾಣುತ್ತಾರೆ. ಯಾರಾದರೂ ಸಹಾಯಕರು ಜೊತೆಗಿರುತ್ತಾರೇನೋ, ಅಲ್ಲವಾ? ದಾಂಪತ್ಯದಲ್ಲಿ ಚೆಂದದ ಹಂತವೆಂದರೆ ಹನಿಮೂನ್ ಅಲ್ಲ. ಅದು ವೃದ್ಧಾಪ್ಯ. ಪರಸ್ಪರರ ಮೇಲೆ ಅಗಾಧ ಪ್ರೀತಿ ಇರದೆ ಹೋದರೆ, ಸುಮ್ಮನೆ ದುಡ್ಡು ಕಾಸು ಇಟ್ಟುಕೊಂಡು ವಿಲಪಿಸುವುದರಲ್ಲಿ ಅರ್ಥವಿಲ್ಲ. ಹಾಗೆ, ಸಾಯೋ ಹಿಂದಿನ ದಿನವೂ ಪ್ರೀತಿಯಿಂದ ಸುಖವಾಗಿ ಬದುಕೋ ದಂಪತಿಗಳನ್ನ ನಾನು ನೋಡಿದ್ದೇನೆ. ಪತ್ನಿ ತೀರಿಕೊಂಡಿದ್ದಾಳೆ ಅಂತ ಗೊತ್ತೇ ಇಲ್ಲದೆ ಮಲಗಿದ ಪತಿ, ಆ ಸ್ಥಿತಿಯಲ್ಲೇ ಕೊನೆಯುಸಿರು ಎಳೆದದ್ದನ್ನೂ ನೋಡಿದ್ದೇನೆ. ಅಷ್ಟೇಕೆ, ಮಹಾನ್ ಚಿಂತಕ ಶಂ.ಬಾ. ಜೋಶಿ ಅದೆಷ್ಟು ನೆಮ್ಮದಿಯಾಗಿ ಜೀವಿಸಿದರು! ಅವರನ್ನು ಅವರ ಪತ್ನಿಯ ಪಕ್ಕದಲ್ಲೇ ಇನ್ನೊಂದು ಚಿತೆ ಮಾಡಿ ಅಂತಿಮ ಸಂಸ್ಕಾರ ಮಾಡಲಾಯಿತು. ಧಾರವಾಡದ ಕೀರ್ತಿನಾಥ ಕುರ್ತಕೋಟಿಯವರದೂ, ಸತಿಯೊಡನೆ ಸಹಗಮನ. ಇಬ್ಬರಿಗೂ ಅಕ್ಕಪಕ್ಕದಲ್ಲೇ ಚಿತೆ. ಅದೇನು ವರ ಬೇಡಿಕೊಂಡು ಬಂದಿದ್ದರೋ? ಒಮ್ಮೊಮ್ಮೆ ಅನ್ನಿಸುತ್ತದೆ. ಅವರು ಬರೆದದ್ದಕ್ಕಿಂತ ಚೆಂದಗೆ ಬದುಕಿದರೇನೋ-ಅಂತ. ಅದು ಸುಮ್ಮನೆ ಒಂಟಿಗೋವಿಯಂತೆ ಬದುಕಿದವರಿಗೆ ಅರ್ಥವಾಗುವುದಿಲ್ಲ.

ಇವತ್ತು ಬರೆಯಲು ಕುಳಿತವನಿಗೆ ಹಿರಿಯರಾದ ಮಳಗಾಂವಕರ್ ತುಂಬ ನೆನಪಾದರು. ಅವರ ಬಗ್ಗೆಯೇ ಬರೆದಿದ್ದೇನೆ. ಆ ತಲೆಮಾರಿನವರಿಗೆ, ಬದುಕನ್ನು ತುಂಬ ವಿಭಿನ್ನವಾಗಿ ಸ್ವೀಕರಿಸುವ, ಅದರಂತೆಯೇ ಪ್ಯಾಶನೇಟ್ ಆಗಿ ಬದುಕುವ ತಾಕತ್ತು ಇತ್ತು ಅನಿಸುತ್ತದೆ. ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ.

ಇವತ್ತು ಬೆಳಗ್ಗೆ ಸೀತಾರಾಂ ಅವರಿಗೆ ಫೋನ್ ಮಾಡಿದ್ದೆ. ‘ಮಾರಾಯರೇ, ಇದೇನು ತಂದುಕೊಂಡಿರಿ?' ಅಂದೆ. ಅವರಿಗೆ ಚಿಕೂನ್ ಗುನ್ಯಾ ಆಗಿದೆ. ಪೀಡೆ ಅದು. ಜ್ವರ ಇಳಿದು ಹೋದ ನಂತರವೂ ತಿಂಗಳುಗಟ್ಟಲೆ ಕಾಡಿ ಹಣ್ಣು ಮಾಡುತ್ತದೆ. ವಿಪರೀತ ಮೈ-ಕೈ ನೋವು. ಯಾಕೋ ಫೋನ್‌ನಲ್ಲಿ ಮಾತನಾಡಿದ್ದು ಸಮಾಧಾನವಾಗಲಿಲ್ಲ. ಅವರನ್ನ ತುಂಬ ಪ್ರೀತಿಸುತ್ತೇನೆ. ಅವರಾದರೂ ಅಷ್ಟೆ. ನನ್ನನ್ನು ಬೆನ್ನಲ್ಲಿ ಹುಟ್ಟಿದ ತಮ್ಮನಂತೆ ನೋಡಿಕೊಳ್ಳುತ್ತಾರೆ. ನೋಡಲು ಹೊರಟಿದ್ದೇನೆ.

ಉಳಿದಂತೆ ಎಲ್ಲವೂ ಸಾಂಪ್ರತಾ:
-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 August, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books