Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಬೇರೆ ಏನನ್ನಾದರೂ ಬಿಡ್ತಾರೆ ತಮ್ಮ ಇಮೇಜ್‌ನ ಹೊರತು!

ಪ್ರಾಣ್ ಇಷ್ಟ.

ನನಗೆ ನಿಜಕ್ಕೂ ಇಷ್ಟ. ಒಂದು ಸಿನೆಮಾ ಇತ್ತು: ಜಿಸ್ ದೇಶ್ ಮೆ ಗಂಗಾ ಬೆಹತೀ ಹೈ! ಅದರ ನಾಯಕ ರಾಜಕಪೂರ್. ಖಳನಾಯಕ ಪ್ರಾಣ್. ಬಳ್ಳಾರಿಯ ರಾಯಲ್ ಟಾಕೀಸ್‌ನಲ್ಲಿ ಅಮ್ಮನೊಂದಿಗೆ ಕುಳಿತು ನೋಡುತ್ತಿದ್ದೆ. ಆಗ ತುಂಬ ಚಿಕ್ಕವನು ನಾನು. ಪಕ್ಕದಲ್ಲಿ ಕುಳಿತ ಅಮ್ಮ ವಿಪರೀತ ದೇಶ ಭಕ್ತಳು. ಚಿಕ್ಕದೊಂದು ಎಮೋಶನಲ್ ಸೀನ್ ಬಂದರೂ ಸಾಕು: ಅಮ್ಮನ ಕಣ್ಣು ಒದ್ದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ನಾನು ವಿಲನ್‌ಗಳ ದಿವ್ಯಾಭಿಮಾನಿ. 'ಜಿಸ್ ದೇಶ್ ಮೆ' ಸಿನೆಮಾದಲ್ಲಿ ಪ್ರಾಣ್ ತುಂಬ ದುಷ್ಟ. ಅದರಲ್ಲಿ ಆತ ಅದೆಷ್ಟು ಚೆಂದಗೆ ನಟಿಸಿದ್ದನೆಂದರೆ, ಆತನಕ ನನಗೆ ರಾಜ್‌ಕಪೂರ್ ಬಗ್ಗೆ ಚೂರೋ ಪಾರೋ ಪ್ರೀತಿಯಿತ್ತಲ್ಲ? ಅದಿಷ್ಟು ಮಟಾಷ್. ''ನಿಂಗೆ ಬರೀ negative things ಇಷ್ಟವಾಗ್ತವೆ ನೋಡು!'' ಅಂತ ಗದರಿದ್ದಳು ಅಮ್ಮ. ಇರಬಹುದೇನೋ? ದೇಶಭಕ್ತಿಯ ಹಲವಾರು ಸಿನೆಮಾಗಳನ್ನು ನಾನು ನೋಡಿದ್ದೇನೆ. ಚೀನಾದ ವಂಚನೆಯಿಂದಾಗಿ ನಾವು ಸಾವಿರಾರು ಯೋಧರನ್ನು 1962ರಲ್ಲಿ ಕಳೆದುಕೊಂಡೆವಲ್ಲ? ಹಿಂದಿಯಲ್ಲಿ ಅದೇ ''ಹಕೀಕತ್'' ಆಯಿತು. ಅದನ್ನು ನೋಡಿದಾಗ ನಾನಿನ್ನೂ ಬ್ರಿಗೇಡಿಯರ್ ಜಾನ್ ಪರಶುರಾಮ ದಳವಿ ಅವರ 'ಹಿಮಾಲಯನ್ ಬ್ಲಂಡರ್‌' ಓದಿರಲಿಲ್ಲ. 'ಹಕೀಕತ್‌' ಚಿತ್ರವನ್ನು ಅದೆಷ್ಟು ಸಲ ನೋಡಿದ್ದೇನೆಂದರೆ ಅದರ ಪಾತ್ರಗಳ ಡೈಲಾಗ್‌ಗಳು ನನಗೆ ಇವತ್ತಿಗೂ ನೆನಪಿಗಿವೆ. ಆಯ್ತಲ್ಲ? ಅದರಲ್ಲಿ ವಿಲನ್ ರೋಲ್ ಇರಲೇ ಇಲ್ಲ. ವಿಲನ್ ಅಂದರೆ ಇಡೀ ಚೈನಾ! ಆಗ ಚೀನಕ್ಕೆ ಅಧ್ಯಕ್ಷರ‍್ಯಾರಿದ್ದರು ಎಂಬುದೂ ಗೊತ್ತಿರಲಿಲ್ಲ. ನಾಯಕರಾದರೂ ಅಷ್ಟೆ. ಒಬ್ಬಿಬ್ಬರಿರಲಿಲ್ಲ. ನನ್ನ ಅತ್ಯಂತ ಪ್ರೀತಿಯ ನಟ ಬಾಲರಾಜ್ ಸಹನಿ ಆ ಚಿತ್ರದಲ್ಲಿ ಬ್ರಿಗೇಡಿಯರ್ ದಳವಿ ಅವರ ಪಾತ್ರ ಮಾಡಿದ್ದರು. ನಿಮಗೆ ಗೊತ್ತಿರಲಿ: ಬಾಲರಾಜ್ ಸಹನಿ ಹಿಂದಿ ಚಲನಚಿತ್ರರಂಗದ ಮೊದಲನೆಯ declared ಕಮ್ಯುನಿಸ್ಟ್. ಆಗೆಲ್ಲ ಕಮ್ಯುನಿಸ್ಟ್ ಹವಾ ಬೀಸುತ್ತಿತ್ತು. ನನ್ನ ಪಾಲಿಗೆ ಜೀವವೇ ಆದ ಗೀತ ರಚನೆಕಾರ ಸಾಹಿರ್ ಲುಧಿಯಾನವಿ ಪಕ್ಕಾ ಕಮ್ಯುನಿಸ್ಟರು. ಇನ್ನೊಬ್ಬ ಕವಿ ಕೈಫಿ ಅಜ್ಮಿ ಬಹುದೊಡ್ಡ ಕಮ್ಯುನಿಸ್ಟರು. ಈ ಹಿಂದಿ ಸಿನೆಮಾದ ಕಮ್ಯುನಿಸ್ಟ್ 'ಹಾವಳಿ'ಗೆ ಬಂಗಾಲಿಗಳು ಕಾರಣವಿರಬಹುದೇನೋ? ಆಗ ತುಂಬ ಜನ ಇದ್ದರು ಬಂಗಾಲಿಗಳು: ಬಿಮಲ್ ರಾಯ್, ಬಸು ಭಟ್ಟಾಚಾರ್ಯ, ಸತ್ಯಜಿತ್ ರೇ, ಮಹಾನ್ ಗಾಯಕ ಮನ್ನಾಡೇ-ಹೀಗೆ ಅದೆಷ್ಟು ಜನವೋ. ನಮ್ಮ ಗುಲ್ಜಾರ್ ಸಾಹೇಬರು ಪಂಜಾಬದವರು. ಆದರೆ ರಸ್ತೆ ಪಕ್ಕದ ರದ್ದಿ ಅಂಗಡಿಯಲ್ಲಿ ಟ್ಯಾಗೋರ್‌ರ ಪುಸ್ತಕ ಸಿಕ್ಕು, ಅದನ್ನು ಓದಿ, ಸೀದಾ ಬಂಗಾಲಕ್ಕೇ ಹೋಗಿ, ಅದರ ಭಾಷೆ ಕಲಿತು ಆ ನಂತರ ಹಿಂದಿ ಚಿತ್ರರಂಗಕ್ಕೆ ಬಂದವರು. ಈಗಲೂ ಗುಲ್ಜಾರ್‌ರ ಬಂಗಾಲಿ ಮಾತು ನಿರರ್ಗಳ. ಅವರ ಪತ್ನಿ ರಾಖಿ ಕೂಡ ಬಹುಶಃ ಬಂಗಾಲಿಯಾ? ಇರಬಹುದು.

ಹ್ಞಾಂ, ಹಿಂದಿ ಚಿತ್ರರಂಗದ ಬಹು ಖ್ಯಾತ ವಿಲನ್ ಪ್ರಾಣ್ ಬಗ್ಗೆ ಹೇಳುತ್ತಿದ್ದೆ. ಅವರ ಹೆಸರು ಪ್ರಾಣ್ ಕಿಶನ್ ಸಿಕಂದ್. ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು 'ಬ್ರಾ'ಗಳನ್ನು ಹರಿದವರು ಅವರೇ ಇರಬೇಕು. ಹಾಗೆ ನೋಡಿದರೆ ಶಾಶ್ವತವಾಗಿ ಖಳನಾಯಕನ ಪಾತ್ರಕ್ಕೆ stick ಆಗುವಂಥ ಸಂಗತಿ ಅವರಲ್ಲಿ, ಅವರ ವ್ಯಕ್ತಿತ್ವದಲ್ಲಿ ಏನೂ ಇರಲಿಲ್ಲ. ವಿಪರೀತ ದಪ್ಪಗಿರಲಿಲ್ಲ. ಮುಖದ ಮೇಲೆ ಅಂಥ ಕ್ರೌರ್ಯವೂ ಇರಲಿಲ್ಲ. ಪ್ರಾಣ್ ಸಾಹೇಬರ ಧ್ವನಿಯಲ್ಲೂ ವಿಶೇಷವಾದ ಗಡಸು ಇರಲಿಲ್ಲ. ಅವರು ಆರಂಭದಲ್ಲಿ ಒಂದೆರಡು ಪಾತ್ರ ಮಾಡಿದ್ದರು. ಅವರ ಮೂರನೇ ಸಿನೆಮಾಕ್ಕೆ ಅವರೇ ಹೀರೋ. ಮುಂದಿನದು ಬಿಡಿ: ಸಿನೆಮಾಕ್ಕೆ ಹೀರೋ ಇರಬಹುದು; ಇರದೇ ಹೋಗಬಹುದು. ವಿಲನ್ ಮಾತ್ರ ಇರಬೇಕು! ಅದು ಪ್ರಾಣ್ ಅವರೇ ಆಗಿರಬೇಕು ಎಂಬಂತಾಗಿ ಬಿಟ್ಟಿತು. ನಿಮಗೆ ನಂಬಲು ಕಷ್ಟವಾದೀತು. ಪ್ರಾಣ್ ಅದೆಷ್ಟು ಗಾಢವಾಗಿ 'ವಿಲನ್‌' ಅನ್ನಿಸಿಬಿಟ್ಟಿದ್ದರೆಂದರೆ, ಅಜಮಾಸು ಇಪ್ಪತ್ತು ವರ್ಷ ಭಾರತದಲ್ಲಿ ಯಾವ ತಂದೆ ತಾಯಿಯೂ ತಮ್ಮ ಮಗುವಿಗೆ ಪ್ರಾಣ್ ಅಂತ ಹೆಸರಿಟ್ಟಿರಲಿಲ್ಲ. ಇದು ತಮಾಷೆಯ, ಊಹೆಯ ಸಂಗತಿಯಲ್ಲ. ''Please hate me. Hate me more. ನೀವು ದ್ವೇಷಿಸಿದಷ್ಟೂ ನನ್ನ ಮನೆಯಲ್ಲಿ ಒಲೆ ಬಿರುಸಾಗಿ ಉರಿಯುತ್ತದೆ...'' ಅಂದಿದ್ದರು ಪ್ರಾಣ್.

ಅಷ್ಟು ದೀರ್ಘಕಾಲ ವಿಲನ್ ಪಾತ್ರ ಮಾಡಿ, ಬ್ರಾ ಹರಿಯುವ ಜವಾಬ್ದಾರಿ ನಿರ್ವಹಿಸಿ, ಎಲ್ಲರಿಂದಲೂ 'ದ್ವೇಷ'ಕ್ಕೆ ಒಳಗಾಗಿದ್ದ ಪ್ರಾಣ್‌ಗೆ ಇದ್ದಕ್ಕಿದ್ದಂತೆ ಒಂದು ಹೊಸ get up ತಂದುಕೊಟ್ಟದ್ದು, ಹಿಂದಿ ಚಿತ್ರರಂಗದ ಪರಮನೆಂಟ್ 'ಭಾರತ್ ಕುಮಾರ್‌' ಆಗಿದ್ದ ಮನೋಜ್ ಕುಮಾರ್. ಆ ಚಿತ್ರದ ಹೆಸರು 'ಉಪಕಾರ್‌'. ಅದರಲ್ಲಿ ಪ್ರಾಣ್ ಕಾಲಿಲ್ಲದ, ಕೊಂಚ ವಯಸ್ಸಾದ ಮಲಂಗ್ ಚಾಚಾ. ಇಲ್ಲ ಬಿಡಿ: ಆ ಪಾತ್ರವನ್ನೂ, ಅದನ್ನು ಪ್ರಾಣ್ ನಿರ್ವಹಿಸಿದ ರೀತಿಯನ್ನೂ ನಮ್ಮ ದೇಶ ಮರೆಯಬಾರದು. ಅದನ್ನು ನಾವು ಮೆಚ್ಚುತ್ತಿದ್ದ ಘಳಿಗೆಯಲ್ಲಿ ಇಡೀ ದೇಶದಲ್ಲಿ ಒಂದು ಬದಲಾವಣೆ ಬಂತು. ಪ್ರಾಣ್ ಶಾಶ್ವತವಾಗಿ ವಿಲನ್ ಪಾತ್ರ ಕೈ ಬಿಟ್ಟು ಕ್ಯಾರೆಕ್ಟರ್ ಆಕ್ಟರ್ ಆಗಿ ಬಿಟ್ಟರು. ನಂತರ ಬಂದ 'ಜಂಝೀರ್‌'ನಲ್ಲಿ ಕೆಲವೆಡೆ ಖುದ್ದು ಅಮಿತಾಬ್ ಬಚ್ಚನ್ ಪೇಲವವಾದನಾ ಅನ್ನಿಸಿ ಬಿಡುವಂತಿತ್ತು ಪ್ರಾಣ್ ನಟನೆ.

ಅಂಥದೊಂದು ಬದಲಾವಣೆ ಅವರ ಕೆರೀರ್‌ನಲ್ಲಿ ಸಾಕಷ್ಟು ತಡವಾಗಿ ಬಂದಿತ್ತು. And that's the real problem. ಒಂದಷ್ಟು ಕಾಲ ಒಂದ್ಯಾವುದೋ image ಇಟ್ಟುಕೊಂಡು ಬದುಕುತ್ತೇವೆ. ನಮ್ಮ image ಹೇಗಿದೆ ಅಂತ ನಮಗೆ ಗೊತ್ತಿರುತ್ತದೆ. ಅದಕ್ಕೆ ಅನುಗುಣವಾಗಿಯೇ ವರ್ತಿಸುತ್ತಿರುತ್ತೇವೆ. ಅಂಥದರಲ್ಲಿ ಅದನ್ನು ಬದಲಾಯಿಸಿಕೊಳ್ಳಿ ಅಂದುಬಿಟ್ಟರೆ, ನಿಜಕ್ಕೂ ಭಯವೇ ಆಗುತ್ತದೆ. ಸರಿಯಾಗಿ ಒಂದು ವರ್ಷದ ಹಿಂದೆ, ಒಂದು ಚರ್ಚೆ ನಡೆಯಿತು ಆಫೀಸಿನಲ್ಲಿ. ಇದು ಪತ್ರಿಕೆಯ ಇಪ್ಪತ್ತನೇ ಬರ್ತ್‌ಡೇ. ಈ ಸಲದ ಸಂಚಿಕೆಗೆ ಬಣ್ಣದ ಅಂಗಿ ತೊಡಿಸಿದರೆ ಹೇಗೆ? At least ಮುಖಪುಟ ಕಲರ್‌ನಲ್ಲಿ print ಮಾಡಿಸಬಹುದಲ್ವಾ? ಅಂದೆ. ''No! ಹಾಯ್ ಬೆಂಗಳೂರ್! ಅಂದರೇನೇ ಬ್ಲ್ಯಾಕ್ ಅಂಡ್ ವೈಟ್. ಅದನ್ನ ಬದಲಾಯಿಸಬೇಡಿ'' ಅಂದು ಬಿಟ್ಟರು ಒಬ್ಬ ಕಲೀಗ್. ನಾನು ತಲೆಯಾಡಿಸಿದೆ. ಆ ಸಭೆಯಲ್ಲಿ ಇದ್ದವರೆಲ್ಲರೂ ಹಳಬರೇನಲ್ಲ. ಒಂದು ಸಂಗತಿ ಹಳಬರಿಗೆ ಗೊತ್ತು. ತುಂಬ ಹಿಂದೊಮ್ಮೆ ನನಗೇ ಹುಳು ಕಚ್ಚಿತ್ತು. ಮೊಟ್ಟ ಮೊದಲ ಸಂಚಿಕೆಯಿಂದಲೂ ಎರಡನೇ ಪುಟದಲ್ಲಿ ಮುದ್ರಿತವಾಗುತ್ತಿದ್ದ 'ಖಾಸ್‌ಬಾತ್‌' ಅಂಕಣವನ್ನು ಸುಮ್ನೆ ನೋಡೋಣ ಅಂತ ಮಧ್ಯದ ಪುಟಕ್ಕೆ shift ಮಾಡಿಬಿಟ್ಟಿದ್ದೆ. It was just a trial. ಅದ್ಯಾವ ಪರಿ ಓದುಗರು ರೇಗಿದರು ಗೊತ್ತಾ? ''ಇಂಥದ್ದನ್ನೆಲ್ಲ ಮಾಡಬೇಡ: ತಲಹರಟೆ ನೀನು. 'ಪತ್ರಿಕೆ' ಬಿಚ್ಚಿದ ತಕ್ಷಣ ನಮಗೆ 'ಖಾಸ್‌ಬಾತ್‌' ಓದಲು ಸಿಗಬೇಕು'' ಅಂದರು.

ಈ ಮಾತು ಬಹುಶಃ ಎಲ್ಲ ಸಂಗತಿಗಳಿಗೂ ಅನ್ವಯಿಸುತ್ತದೆ. ಒಂದೇ ಒಂದು ಸಿನೆಮಾದಲ್ಲಿ, ಅದೂ ತುಂಬ ಹಿಂದೆ ರಾಜಕುಮಾರ್ ಬೀಡಿ ಸೇದಿದ್ದರು. ಅವರಿಂದ ಅಂಥಾ ರಾಮಾಯಣವೇನೂ ಆಗಲಿಲ್ಲ. But, ಜನಕ್ಕೆ ಇಷ್ಟವಾಗಲಿಲ್ಲ. ಅದಾದ ಮೇಲೆ ರಾಜ್ ಇನ್ಯಾವ ಸಿನೆಮಾದಲ್ಲೂ ಬೀಡಿ-ಪಾಡಿ ಸೇದಲಿಲ್ಲ. 'ಮಂತ್ರಾಲಯ ಮಹಾತ್ಮೆ' ಷೂಟಿಂಗ್ ನಡೀತಿದ್ದ ದಿನಗಳಲ್ಲಿ ಅವರು ಮಾಂಸ ತಿನ್ನಲಿಲ್ಲ ಎಂಬ ಮಾತಿದೆ. ಕೆಲವು ನಟರು ಹಾಗೆಲ್ಲ ಮಾಡುತ್ತಾರೆ. ಈಗಲೂ ಒಂದು ಸಿನೆಮಾದಲ್ಲಿ ತೆಳ್ಳಗೆ ಕಾಣಬೇಕು ಅಂದರೆ, ಅದಕ್ಕಾಗಿ ಕಸರತ್ತು ಮಾಡುತ್ತಾರೆ. ಹಾಗೇನೇ ದಪ್ಪವಾಗೋಕೂ ಸಿದ್ಧರಾಗುತ್ತಾರೆ. ನನಗೆ ನೆನಪಿದ್ದ ಮಟ್ಟಿಗೆ, ಆ ದಿನಗಳಲ್ಲಿ ಶಶಿ ಕಪೂರ್ slim ಆಗಿದ್ದರು. ಅವರಿಗೆ 'ಉತ್ಸವ್‌' ಚಿತ್ರದಲ್ಲಿ ಕೊಂಚ ಸ್ಥೂಲಕಾಯದ 'ಶಕಾರ'ನ ಪಾತ್ರ ಮಾಡಬೇಕಾಗಿ ಬಂತು. ಅದಕ್ಕೆಂದೇ ಶಶಿ ಕಪೂರ್ ದಪ್ಪವಾದರು. ದುರಂತವೆಂದರೆ, ಆ ನಂತರ ಶಶಿ ಕಪೂರ್ ತೆಳ್ಳಗಾಗಲೇ ಇಲ್ಲ. ಈಗ ಬದುಕಿನ ಕೊನೇ ಮೆಟ್ಟಿಲ ಮೇಲಿದ್ದಾರೆ. I feel sorry for him.

''ನೋಡಿ ಸರ್, ಈ ರವಿ ಬೆಳಗೆರೆಯವರು ಏನು ಮಾಡ್ತಾರೆ ಗೊತ್ತಾ? ನಮ್ಮ ಸಿನೆಮಾಗಳ ವಿರುದ್ಧ ಮುಖ್ಯವಾಗಿ ಅವುಗಳ ಹೀರೋಗಳ ವಿರುದ್ಧ ಬರೀತಾರೆ. ನಟರ ಸ್ಕ್ಯಾಂಡಲ್ಸ್ ಬಗ್ಗೆ ಬರೀತಾರೆ. ಅದು ನಮ್ಮ ಸಿನೆಮಾಗಳಿಗೆ ಹೊಡ್ತ ಕೊಟ್ಟು ಬಿಡ್ತದೆ...'' ಅಂದದ್ದು ಮತ್ಯಾರಲ್ಲ: ನಿರ್ಮಾಪಕ ರಾಮು. ಅವತ್ತು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅವರ ವಿರುದ್ಧದ ಬರಹವನ್ನು ಪ್ರತಿಭಟಿಸಲೆಂದೇ ಸುಮಾರು ನಲವತ್ತು ಪ್ರೊಡ್ಯೂಸರುಗಳು ನನ್ನ ಆಫೀಸಿಗೆ ಬಂದಿದ್ದರು. ಚಲನಚಿತ್ರರಂಗದ ಇಂಥ ಅನೇಕ ಘಟನೆ-ಪ್ರತಿಭಟನೆಗಳನ್ನ ನಾನು ನೋಡಿದ್ದೇನೆ.

ಇನ್ನೊಂದು ತಮಾಷೆ ಕೇಳಿ. ಆಗಿನ್ನೂ ಮಾಸ್ಟರ್ ಹಿರಣ್ಣಯ್ಯ ಆಗಿರಲಿಲ್ಲ ಇವರು. ತಂದೆಯ ಹೆಸರು ಹಿರಣ್ಣಯ್ಯ. ಅವರದೇ ಕಂಪೆನಿಯಿತ್ತು. ಅವರು ನಿತ್ಯ ಕುಡಿಯುತ್ತಿದ್ದರು. ಆ ಬಾಟಲಿಯಿಂದಲೇ ಇವರು ಬ್ರಾಂಡಿ ಕದ್ದು, ಅದು ಗೊತ್ತಾಗಬಾರದು ಅಂತ ಬಾಟಲಿಯೊಳಕ್ಕೆ ನೀರು ಸೇರಿಸಿ ಬಿಡುತ್ತಿದ್ದರು. ''ಬೇಕು ಅನ್ಸಿದ್ರೆ ಕುಡಿ. ಆದರೆ ನೀರು ಸೇರಿಸಬೇಡ. ಅದು ತಲೆ ಹಿಡಿಯುತ್ತೆ. ದಿನವಿಡೀ ತಲೆ ನೋವು!'' ಅಂದಿದ್ದರು ತಂದೆ ಹಿರಣ್ಣಯ್ಯ. ಅಷ್ಟೇ ಅಲ್ಲ: ಅವತ್ತು ಇನ್ನೂ ಒಂದು ಮಾತು ಹೇಳಿದ್ದರು. ''ನೋಡೂ, ನಿನಗೆ ಬೇಕಾದದ್ದನ್ನ ಇಲ್ಲಿಗೇ (ಅಂದರೆ ನಾಟಕ ಕಂಪೆನಿಯವರ ತಾತ್ಕಾಲಿಕ ಮನೆಗೆ) ತರಿಸಿಕೋ. ಅದು ಬಿಟ್ಟು, ಪಾಯಜಾಮಾ-ಷರಟು ಹಾಕ್ಕೊಂಡು, ಬರಿಗಾಲಲ್ಲಿ ಬೀಡಿ ಸೇದ್ತಾ ಊರಲ್ಲಿ ಓಡಾಡಬೇಡ. ನೋಡಿದ ಜನ, ರಾತ್ರಿ ನೀನು ಹಾಕೋ ರಾಮನ ಪಾತ್ರವನ್ನ ಪ್ರೀತಿಸ್ತಾ ಇರ‍್ತಾರೆ. ಅವರಿಗೆ ಬೀಡಿ ಸೇದೋ ರಾಮ ಇಷ್ಟವಾಗಲ್ಲ!'' ಅಂದಿದ್ದರಂತೆ. ಆಗ ಮಾಸ್ಟರ್ ಹಿರಣ್ಣಯ್ಯನವರ ಹೆಸರು ನರಸಿಂಹ ಮೂರ್ತಿ. ಮುಂದೆ ತಮ್ಮ ತಂದೆ ತೀರಿ ಹೋದ ನಂತರ 'ಮಾಸ್ಟರ್ ಹಿರಣ್ಣಯ್ಯ' ಅಂತ ಹೆಸರಿಟ್ಟುಕೊಂಡರು. ಇವತ್ತು ನರಸಿಂಹ ಮೂರ್ತಿ ಅಂತ ಕೂಗಿದರೆ, ಅವರೇ ತಿರುಗಿ ನೋಡಲ್ಲ!

ಒಂದು image ಅಂತ ಧೃಡವಾದ ಮೇಲೆ ಯಾರೂ ಅದನ್ನು ಬಿಟ್ಟುಕೊಡಲು ಸಿದ್ಧರಾಗುವುದಿಲ್ಲ. ನಮ್ಮ ಉದಯ ಕುಮಾರ್, ನರಸಿಂಹ ರಾಜು ಮುಂತಾದವರು ಒಂದರ್ಥದಲ್ಲಿ ಕುಡಿ ಕುಡಿದೇ ಗತಿಸಿ ಹೋದರು. ಆದರೆ ಅವರ demand ಕಡಿಮೆಯಾದದ್ದಕ್ಕೆ ಅದೊಂದೇ ಕಾರಣವಲ್ಲ. ಉದಯ ಕುಮಾರ್ ಅದೇಕೆ ಆ ಕೆಲಸ ಮಾಡಿದರೋ ಕಾಣೆ. ಅಷ್ಟು ವರ್ಷ ಮದರಾಸಿನಲ್ಲಿ ಇದ್ದವರು ಇದ್ದಕ್ಕಿದ್ದಂತೆ ಬೆಂಗಳೂರಿಗೆ shift ಆಗಿಬಿಟ್ಟರು! ಒಬ್ಬ ಅಪರೂಪದ ನಟ, ಇಲ್ಲೇ ಮೆಜೆಸ್ಟಿಕ್‌ನಲ್ಲಿ ಸಿಗರೇಟು ಸೇದ್ತಾ ಕಾಣಿಸತೊಡಗಿದರೆ, ಅವರ ಅಭಿಮಾನಿಗಳಿಗದು ಇಷ್ಟವಾಗುವುದಿಲ್ಲ. ಈ ತಪ್ಪನ್ನು ರಾಜಕುಮಾರ್ ಮಾಡಲಿಲ್ಲ. ಅವರು ಬೆಂಗಳೂರಿಗೆ shift ಆಗೋ ಹೊತ್ತಿಗೆ ಅವರ ಚಿತ್ರ ಜೀವನ ಸಾಕಷ್ಟು ಮುಗಿದಿತ್ತು.

ಕೇವಲ ಸಿನೆಮಾ-ನಾಟಕಗಳ ಪ್ರಸಂಗವಲ್ಲ ಇದು. ಸಾರ್ವಜನಿಕ ಜೀವನದಲ್ಲಿರುವವರನ್ನು ಈ 'image' ಪ್ರಶ್ನೆ ನಿರಂತರವಾಗಿ ಕಾಡುತ್ತೆ. ಗಮನಿಸಿ ನೋಡಿ; ಪುಟ್ಟಪರ್ತಿ ಸತ್ಯ ಸಾಯಿ ಬಾಬಾಗೆ, ಅವರು ಬರಿಗೈಲಿ ಬೂದಿ, ಉಂಗುರ ಇತ್ಯಾದಿಗಳನ್ನು ತೆಗೆದುಕೊಡುತ್ತಿದ್ದ ಕಾಲದಲ್ಲಿ ಇದ್ದಷ್ಟು ಭಕ್ತರು ಆ 'ಪವಾಡ' ನಿಲ್ಲಿಸಿ ಮಕ್ಕಳಿಗೆ ಶಿಕ್ಷಣ, ಊರು-ಹಳ್ಳಿಗಳಿಗೆ ನೀರು ಕೊಡಲಾರಂಭಿಸಿದ ಮೇಲೆ ಇರಲಿಲ್ಲ. ಭಕ್ತರಿಗೆ ಮೊದಲಿನ 'ಪವಾಡ ಬಾಬಾ' ಬೇಕಾಗಿತ್ತು. ಸಾಕಷ್ಟು ರೌಡಿಗಳನ್ನು ನೋಡಿದ್ದೇನಲ್ಲ? ಅವರು ಫೀಲ್ಡ್ ಬಿಟ್ಟು, ಮಚ್ಚು ಕೆಳಗಿಟ್ಟ ನಂತರ ಮೊದಲಿನ ಡಿಮ್ಯಾಂಡ್ ಇರುವುದಿಲ್ಲ. ಕೆಲವರಂತೂ ಮಚ್ಚು ಕೆಳಗಿಡುತ್ತಿದ್ದಂತೆಯೇ ಕೊಲೆಯಾಗಿ ಬಿಡುತ್ತಾರೆ! ಅದನ್ನೂ ನಾನು ಕಂಡಿದ್ದೇನೆ. ತಮಾಷೆಯೆಂದರೆ, ಒಂದು ಹಂತದ ನಂತರ ಸೀನಿಯರ್ ರೌಡಿಗಳು ಸಣ್ಣಪುಟ್ಟವರಿಗೂ ಹೆದರಲಾರಂಭಿಸುತ್ತಾರೆ. ಸರಿಯಾಗಿ ಅವನೊಂದು ಹಲ್ಲೆಯನ್ನೂ, ಅವರಿವರ ಮೇಲೆ ಮಾಡಿರುವುದಿಲ್ಲ. ಅಂಥ ಚುಲ್ಟು ರೌಡಿ ಎದುರಿಗೆ ಬಂದರೆ ಈ ಮಹಾ ಮಹಿಮ ರೌಡಿಗಳು ಥಂಡಾ! ಏಕೆಂದರೆ, ಇವರಿಗೆ ಗೊತ್ತು. ಚುಲ್ಟುರೌಡಿ ತನಗೊಂದು ಹೆಸರು ಬರಲಿ ಅಂತಲೇ ಚಡಪಡಿಸುತ್ತಿರುತ್ತಾನೆ. ಹಿರಿಯ ರೌಡಿಯನ್ನು ಕೊಂದರೆ ಅವನಿಗೆ ಸಕತ್ ಹೆಸರು.

ಅಂಥಾ ನಟೋರಿಯಸ್ ರೌಡಿ ಬಲರಾಮನನ್ನು ಜೈಲಿನಲ್ಲಿ ಅವನು ಮಲಗಿದ್ದಾಗಲೇ ಇರಿದು ಕೊಂದವರು ಯಾರು? ಅವರೆಲ್ಲರೂ ಅನಾಮಧೇಯ ರೌಡಿಗಳೇ. ಮಂಗಳೂರಿನ ಸಾಮೀ ರೌಡಿ ಅಮರ್ ಆಳ್ವನನ್ನು ಕೊಂದದ್ದು, ಆಗಿನ್ನೂ ಹೆಸರೇ ಮಾಡಿದ್ದಿರದ ಯತೀಶ, ಶ್ರೀಕರ ಮತ್ತು ಮುರಳಿ! ಜಯರಾಜ್‌ನನ್ನು ಕೊಂದಾಗ ಮುತ್ತಪ್ಪ ರೈ ಮತ್ತು ಜಯಂತ್‌ಗೆ ಅಂಥ ಹೆಸರೇನಿರಲಿಲ್ಲ. ಕೊಲೆಯ ನಂತರ ಱಹೆಸರುೞ ಬರುತ್ತದೆ. ಮುಂದೆ 'ಆ ಹೆಸರು, ಬೇಡವೇ ಬೇಡ' ಅಂದು ಕೊಳ್ಳುತ್ತಾನೆ ರೌಡಿ. ಆಗ ಒಂದೇ ಕಂತಿನಲ್ಲಿ ಸಾವು ಬರುತ್ತದೆ! ಏಕೆಂದರೆ, ಹೆಸರು ಬರೋದು ಅವನ್ಯಾರೋ ಚುಲ್ಟು ರೌಡಿಗೆ ಬೇಕಾಗಿರುತ್ತದೆ. ಇದು ಉಳಿದ ಎಲ್ಲಾ ರಂಗಗಳಿಗೂ ಅನ್ವಯಿಸುವುದಿಲ್ಲ.

''ನೀವೇನೇ ಹೇಳಿ, ರಾಜಕುಮಾರ್ ಹಾಡೋಕೆ ನಿರ್ಧರಿಸಬಾರದಿತ್ತು. ಅವರು ಹಾಡೋಕೆ ಶುರು ಮಾಡಿದ್ದರಿಂದಲೇ ಪಿ.ಬಿ.ಶ್ರೀನಿವಾಸ್‌ಗೆ ಮಾರ್ಕೆಟ್ ಹೋಯ್ತು!'' ಅನ್ನುವವರಿದ್ದಾರೆ. ಅದು ಖಂಡಿತ ತಪ್ಪು. ಸ್ವತಃ ರಾಜ್ ಹಾಡೋದಕ್ಕಿಂತ, ಅವರಿಗೆ ಪಿ.ಬಿ.ಶ್ರೀನಿವಾಸ್ ಹಾಡಿದರೇನೇ ಹೆಚ್ಚು suit ಆಗುತ್ತಿತ್ತು: ಆ ಮಾತು ಬೇರೆ. ಅವತ್ತಿನ ದಿನಗಳಲ್ಲಿ ರಾಜ್ ವರ್ಷದಲ್ಲಿ ಎಷ್ಟು ಮಹಾ ಚಿತ್ರಗಳಲ್ಲಿ ನಟಿಸುತ್ತಿದ್ದರು? ಹೆಚ್ಚೆಂದರೆ ಒಂದೂವರೆ ಸಿನಿಮಾ. ಅದೊಂದರಿಂದಲೇ ಪಿ.ಬಿ.ಶ್ರೀನಿವಾಸ್‌ರ ಹೊಟ್ಟೆ ತುಂಬುತ್ತಿತ್ತಾ? No way. ಮಾರ್ಕೆಟ್ ತಪ್ಪಿಹೋದದ್ದಕ್ಕೆ ಬೇರೆ ಬೇರೆ ಕಾರಣಗಳಿದ್ದವು. ತೂಫಾನಿನಂತೆ ಎಸ್.ಪಿ.ಬಾಲಸುಬ್ರಮಣ್ಯಂ ಬಂದರು. ಪಿ.ಬಿ.ಶ್ರೀನಿವಾಸ್‌ಗೆ ವಯಸ್ಸಾಯಿತು. ಹಂಸಲೇಖಾ ತರಹದವರಿಗೆ ಅವರವೇ ಆಯ್ಕೆ. optionಗಳಿದ್ದವು. ರಾಜ್ ಅವರ ಅಭಿಮಾನಿಗಳು ನಮಗೆ ಪಿ.ಬಿ.ಶ್ರೀನಿವಾಸ್ ಅವರೇ ಬೇಕು ಎಂದು ಹಟ ಮಾಡಲಿಲ್ಲ. ಹೊಸದಾಗಿ ಬಂದ ಹೀರೋಗಳಿಗೆ ಪಿ.ಬಿ.ಶ್ರೀನಿವಾಸ್ ಅವರ ದನಿ ಹೊಂದಿಕೆಯಾಗುತ್ತಿರಲಿಲ್ಲ. ಇಂಥ ಕಾರಣಗಳಿಂದಾಗಿ ಮಾರ್ಕೆಟ್ ಕ್ಷೀಣವಾಯಿತು: ಅಷ್ಟೇ.

ಇದೇ ಸಂದರ್ಭದಲ್ಲಿ ನೆನಪಾದ ಒಂದು ಸಂಗತಿ ಹೇಳುತ್ತೇನೆ. ಇತ್ತೀಚಿನ ವರ್ಷಗಳಲ್ಲಿ ನೀವು ಲತಾ ಮಂಗೇಶ್ವರ ಹಾಡಿದ್ದು ಕೇಳಿದ್ದೀರಾ? ದಯವಿಟ್ಟು ಕೇಳಬೇಡಿ. ಅದರಲ್ಲಿನ ಹಾಡುಗಳು ಕೇಳಿಸಿ ಕೊಂಡರೆ ಸಾಕು, ಲತಾ ದೀದಿಯ ಕಾಲ ಮುಗಿದ್ಹೋಗಿದೆ ಅಂತ ನೀವು ನಿರ್ಧರಿಸುತ್ತೀರಿ. ಅಷ್ಟು ಅಪಸ್ವರದ ಛಾಯೆಗಳಿವೆ ಅದರಲ್ಲಿ. ಅದಾದ ನಂತರ ಅವರು ತೆರೆಗೆ ಸರಿದಿದ್ದರೆ ಆ ಮಾತು ಬೇರೆಯಿತ್ತು-ಸುಡುಗಾಡು ಚಿತ್ರರಂಗವೇ ಹಾಗೆ. ಅದಕ್ಕೆ ನೂರು ಮೂಢನಂಬಿಕೆಗಳು. ಲತಾ ಮಂಗೇಶ್ವರ್ ಹಾಡಿದರೇನೇ ತಮ್ಮ ಸಿನೆಮಾ Super hit ಆಗುತ್ತೆ ಎಂಬ ನಂಬಿಕೆ ಅನೇಕ ಪ್ರೊಡ್ಯೂಸರ್‌ಗಳಿಗಿದೆ. 'ಅಯ್ಯಾ...ಆಕೆಯ ಸರುಕು ಮುಗಿದಿದೆ' ಅಂತ ಬುದ್ಧಿ ಹೇಳಬಲ್ಲವರು ಅಕ್ಕಪಕ್ಕ ಕಾಣುತ್ತಿಲ್ಲ. ಈಗ ಬಿಡಿ: ಲತಾ ಅವರಂತೆಯೇ ಆಶಾ ಭೋಂಸ್ಲೆ ಕಸುವು ಕಳೆದುಕೊಂಡಿದ್ದಾರೆ. ಆದರೂ ನಾನು ಹಾಡುತ್ತೇನೆ ಎಂಬ ಉಮೇದಿ ಅವರಲ್ಲಿದೆ.

ಆರಂಭದಲ್ಲಿ ಪ್ರಾಣ್ ಬಗ್ಗೆ ಹೇಳುತ್ತಿದ್ದೆ. ಹೇಗೆ ಒಂದು ಚಿತ್ರದಲ್ಲಿ ಹೀರೋಗೆ ಪ್ರಾಮುಖ್ಯತೆ ಇರುತ್ತದೋ, ಅಂಥದೇ ಪ್ರಾಮುಖ್ಯತೆ ಖಳನಾಯಕನಿಗೂ ಇರುತ್ತದೆ. ಅಂಥಾ ಕೆಟ್ಟ ವಿಲನ್‌ನನ್ನು ಹೊಡೀತಾನೆ ಅಂದಾಗಲೇ ಹೀರೋಗೆ ಇಂಪಾರ್ಟೆನ್ಸ್ ಸಿಗುತ್ತದಲ್ಲವಾ? ರಾವಣ ಕೆಟ್ಟವನಾದಷ್ಟು ಶ್ರೀರಾಮಚಂದ್ರನಿಗೆ ಕೀರ್ತಿ ಹೆಚ್ಚು. ಅಂತಹುದೊಂದು ರಿಸ್ಕ್ ಇಟ್ಟುಕೊಂಡೇ ತಮ್ಮ image ಪಕ್ಕಕ್ಕೆಸೆದು 'ಮಲಂಗ್ ಚಾಚಾ'ನ ಗೆಟಪ್ಪು ಧರಿಸಿದ ಪ್ರಾಣ್ ಬಹುದೊಡ್ಡ ಛಾಲೆಂಜ್ ಇರಿಸಿದ್ದರು. ಹೊಸ ಇಮೇಜ್ ಕಟ್ಟಿಕೊಂಡು ಅವರು ಅನೇಕ ಚಿತ್ರಗಳಲ್ಲಿ ಯಶಸ್ವಿಯಾದರು. ಪಾತ್ರ ಯಾವುದಾದರೇನು? He was capable of doing. ನಮ್ಮ ಕನ್ನಡ ರಂಗದಲ್ಲಿ ಪಕ್ಕಾ ವಿಲನ್ ಆಗಿದ್ದ ನಟ ದಿನೇಶ್, ಬ್ರಾ ಹರಿಯೋದನ್ನ ನಿಲ್ಲಿಸಿ ಕ್ಯಾರೆಕ್ಟರ್ ಪಾರ್ಟ್ ಮಾಡಲು ರೆಡಿಯಾದದ್ದು ಕೂಡ ಆ ದಿನೇಶ್‌ರ ರಿಸ್ಕಿ ಸಾಹಸವೇ. ಇದು ಸಂಪೂರ್ಣವಾಗಿ ಉಲ್ಟಾ ಆದದ್ದು ನಮ್ಮ ಅನೇಕ ಆಕ್ಟರುಗಳ ವಿಷಯದಲ್ಲಿ. ಗೆಲುವು-ಸೋಲಿನ ಮಾತು ಬಿಡಿ: ನಮಗೆ ಹಾಸ್ಯ ನಟ ಜಗ್ಗೇಶ್ ನೆನಪಿರುವಷ್ಟು, ಹೀರೋ 'ಜಗ್ಗೇಶ್‌' ಇಷ್ಟವಾಗುವುದಿಲ್ಲ. ದೇವರಾಜ್‌ಗೆ ಪರಮನೆಂಟ್ ಆಗಿ ಪೊಲೀಸ್ ಇನ್ಸ್‌ಪೆಕ್ಟರ್‌ನ ಪೋಷಾಕು ಹೊಲಿಸಿಕೊಟ್ಟು ಬಿಟ್ಟಿದೆ ಫಿಲ್ಮ್ ಫೀಲ್ಡ್. ಬದಲಿಸಿಕೊಂಡ ನಂತರ, ನಟಿಸಿದ ಸಿನೆಮಾದಲ್ಲಿ ಆತ ಕ್ಲಿಕ್ ಆದನಾ? ಉಳಕೊಂಡ. ಇಲ್ಲದಿದ್ದರೆ ಅದು ಜೀವಾವಧಿ ಶಿಕ್ಷೆಯೇ. Better ನಟಿ ಲೀಲಾವತಿ. ಹಿರೋಯಿನ್ ಆಗಿ ರಾಜಕುಮಾರ್ ಜೊತೆಗೆ ಅನೇಕ ಚಿತ್ರಗಳಲ್ಲಿ ನಟಿಸಿ ಮೆರೆದ ಲೀಲಾವತಿಯವರು, ಅದೇ ರಾಜ್ ಜೊತೆಗೆ ಕ್ಯಾರೆಕ್ಟರ್ ಆಕ್ಟರ್ ಆಗಿ ನಟಿಸುವ ಕಾಲ ಬಂತು-ಹತ್ತಿರದ ಗೆಳತಿ ಕಲ್ಪನಾಗೆ ಅವರು ತಾಯಿಯಾಗಬೇಕಾಗಿ ಬಂತು. ಸಂತಸದ ಸಂಗತಿಯೆಂದರೆ, ಅವರು ಆದರು. Great she was.

ಸಾಮಾನ್ಯವಾಗಿ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅವರಿಗದು ಇಷ್ಟವಿರುವುದಿಲ್ಲ ಎಂಬ ಅಂಶ ಒಂದಾದರೆ, ಈಗಿರುವುದಕ್ಕಿಂತ ವಿಭಿನ್ನವಾಗಿ ಒಂದು ಪಾತ್ರ ನಿರ್ವಹಿಸುವುದು ಅವರ ಕೈಯಲ್ಲಾಗುವುದಿಲ್ಲ ಎಂಬ ಅಂಶ ಇನ್ನೊಂದು-ಎರಡಕ್ಕೂ ರೆಡಿ ಅನ್ನುವವನು ದಡ ದಾಟಿಕೊಳ್ಳುತ್ತಾನೆ. ದುನಿಯಾ ವಿಜಿಯಂತಹ ಗೊಬ್ಬರಗಳಿಗೆ ಅದೆಲ್ಲಿ ಸಾಧ್ಯವಾದೀತು. Image ವಿಷಯಕ್ಕೆ ಬಂದರೆ, ನನಗಿದ್ದುದು ಪತ್ರಕರ್ತನ ಇಮೇಜು. ಅದನ್ನು ಜೊತೆಯಲ್ಲಿಟ್ಟುಕೊಂಡೇ educationist ಆದೆ. ನನ್ನನ್ನು 'ಪ್ರಾರ್ಥನಾ' ಗೆಲ್ಲಿಸಿತು. ಅಂತಿಮವಾಗಿ ಹೇಳುವುದಾದರೆ ಒಂದು ಇಮೇಜ್ ಬಂದ ತಕ್ಷಣ, ಕಡೆತನಕ ಅದರಲ್ಲೇ ತೇಲಿ ಮುಳುಗುತ್ತೇವೆ ಅಂದುಕೊಳ್ಳಬಾರದು.
ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 19 August, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books