Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಪರಮಪದ ಸಂಪಾದನೆಗೆ ಫೇಸ್‌ಬುಕ್ ಸೋಪಾನವಾದೀತಾ?

ನಾನೊಂದು ಹೊಸ ಕಾರು ತೆಗೊಂಡೆ, ನಮ್ಮನೆ ಬೆಕ್ಕು ಮರಿ ಹಾಕಿದೆ, ನಿನ್ನೆಯಷ್ಟೇ ಹೇರ್ ಕಟ್ ಮಾಡಿಸಿಕೊಂಡೆ, ಇದು ನನ್ನ ಹೊಸ ಹೇರ್ ಸ್ಟೈಲ್, ನನ್ನ ಹಿಂಭಾಗದಲ್ಲಿ ಆಗಿದ್ದ ಕುರು ನಿಮ್ಮೆಲ್ಲರ ಹಾರೈಕೆಯಿಂದ ಮಾಗುತ್ತಿದೆ, ನನ್ನ ಮಗ ಇವತ್ತು ಸ್ಕೂಲಿಗೆ ಹೋಗಿಲ್ಲ.

ಹೀಗೆಲ್ಲಾ ತಮ್ಮ ‘ಆತ್ಮಕಥನ’ಗಳನ್ನು ಸ್ಟೇಟಸ್ಸಲ್ಲಿ ಹಾಕಿಕೊಂಡು ಲೈಕ್‌ಗೋಸ್ಕರ ಕಾಯುವ ಫೇಸ್‌ಬುಕ್ ಸದಸ್ಯರ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಏನಾದರೂ ಬರೆಯಬೇಕು ಎಂಬ ಹಟಕ್ಕೆ ತಮ್ಮ ದೈನಂದಿನ ಚಟುವಟಿಕೆಗಳನ್ನೆಲ್ಲಾ ಫೇಸ್‌ಬುಕ್ಕಲ್ಲಿ ದಾಖಲಿಸುತ್ತಾ ಹೋಗುವ ಈ ಅಗೋಚರ ಶತ್ರುಗಳ ಕಾಟದಿಂದ ಪಾರಾಗುವುದಕ್ಕೆ ಅಂಥವರನ್ನು ಅನ್ ಫ್ರೆಂಡ್ ಮಾಡಿದ್ದೂ ಉಂಟು. ಹೊಸ ತಂತ್ರಜ್ಞಾನ ಅಥವಾ ಮಾಧ್ಯಮವೊಂದು ಕೈಗೆ ಸಿಕ್ಕಾಗ ಅದನ್ನು ಹೇಗೆ ಬಳಸಿಕೊಳ್ಳಬೇಕು ಅನ್ನುವುದರ ಬಗ್ಗೆ ನಮಗೆ ಗೊಂದಲ ಉಂಟಾಗುವುದು ಸಹಜ. ಆದರೆ ಫೇಸ್‌ಬುಕ್ ಈಗ ಹೊಸ ಮಾಧ್ಯಮವಾಗಿ ಉಳಿದಿಲ್ಲ, ಅದು ನಮ್ಮ ದೈನಿಕದ ಒಂದು ಭಾಗವಾಗಿ ಕೆಲವು ವರ್ಷಗಳೇ ಕಳೆದಿವೆ. ಆದರೆ ಅದರ ಸಾಧ್ಯತೆ ಮತ್ತು ಬಳಕೆಯ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸುತ್ತಿಲ್ಲ ಎಂಬ ವ್ಯಥೆ ನನ್ನನ್ನು ಕಾಡಿದೆ. ಕೆಲವರಂತೂ ಫೇಸ್‌ಬುಕ್ಕನ್ನು ಮೊಬೈಲ್ ಫೋನ್ ಥರ ಬಳಸುತ್ತಿದ್ದಾರೆ. ಕಾಫಿ ಆಯ್ತಾ, ತಿಂಡಿ ಆಯ್ತಾ, ಮಧ್ಯಾಹ್ನದ ಊಟಕ್ಕೆ ಏನು ತಿಂದ್ರಿ, ಆಮೇಲೆ ಇನ್ನೇನು ಸಮಾಚಾರ? ಹೀಗೇ ಕುಶಲೋಪರಿ ಸಾಗುತ್ತದೆ.

ಇತ್ತೀಚಿನ ಇನ್ನೊಂದು ಅಪಾಯಕಾರಿ ಬೆಳವಣಿಗೆಯೆಂದರೆ ತಮಗಾಗದೇ ಇರುವವರನ್ನು ಹಣಿಯುವುದಕ್ಕೆ ಫೇಸ್‌ಬುಕ್ ಬಳಕೆಯಾಗುತ್ತಿರುವುದು. ಜಾತಿ, ಪಂಥ, ಧರ್ಮ ಇತ್ಯಾದಿಗಳ ಹೆಸರಲ್ಲಿ ಈ ನಿಂದನಾಸ್ತುತಿ ನಡೆಯುತ್ತದೆ. ಕವಿಗಳು, ಸಾಹಿತಿಗಳು ಅನಿಸಿಕೊಂಡವರೂ ಇಂಥಾ ಬೈಯ್ಯೋ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇವರೆಲ್ಲರಿಂದ ದೂರ ನಿಂತು ಫೇಸ್‌ಬುಕ್ಕನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ?

ಇವತ್ತು ನನ್ನ ಹಳೇ ಗೆಳೆಯ ಶಾಮಿ (ಎಸ್.ಕೆ. ಶಾಮಸುಂದರ್) ಹಾಕಿದ ಪೋಸ್ಟ್ ಒಂದನ್ನು ಓದುತ್ತಿದ್ದೆ. ಫೇಸ್‌ಬುಕ್ಕಲ್ಲಿ ಯಾವ ರೀತಿಯ ಸ್ಟೇಟಸ್ಸುಗಳನ್ನು ಹಾಕಬೇಕು ಅನ್ನುವುದಕ್ಕೆ ಇದೊಂದು ಸೊಗಸಾದ ಉದಾಹರಣೆಯಾದೀತು. ಒಂದು ಸಾರಿ ಈ ಸಾಲುಗಳನ್ನು ಓದಿಕೊಳ್ಳಿ (ಒಂದೆರಡು ಪ್ಯಾರಾಗಳನ್ನು ಎಡಿಟ್ ಮಾಡಿದ್ದೇನೆ).

“ಮೊನ್ನೆ ಒಂದು ಸ್ಟೇಟಸ್ ಹಾಕಿದ್ದೆ. ಸುಮಾರು ಇನ್ನೂರೈವತ್ತು ಪದಗಳ ಟಿಪ್ಪಣಿ. ಕನ್ನಡದಲ್ಲೇ ಬರೆದಿದ್ದೆ. ಮಧ್ಯೆ ಮಧ್ಯೆ, ಅಲ್ಲಲ್ಲಿ ಕೆಲವು ಇಂಗ್ಲಿಷ್ ಪದಗಳನ್ನು ಬಳಸಿದ್ದೆ. ಅದಕ್ಕೆ ಒಬ್ಬ ಕನ್ನಡಿಗರು ಕಾಮೆಂಟ್ ಹಾಕಿದ್ದರು-“ನಿಮ್ಮ ಬರಹ ಸಂಪೂರ್ಣವಾಗಿ ಕನ್ನಡದಲ್ಲೇ ಇದ್ದಿದ್ದರೆ ಚೆನ್ನಾಗಿರ್ತಿತ್ತು" ಎಂದು. ಅವರ ಕನ್ನಡಾಭಿಮಾನಕ್ಕೆ ಕೆಲವು ನಮಸ್ಕಾರಗಳು.

ನಾನು ಬರೆಯುವುದೇ ಇಲ್ಲ, ಬರೆದರೆ ಬರೆಯುವುದು ಕನ್ನಡದಲ್ಲೇ. ಸಮಯ, ಸಂದರ್ಭ, ವಿಷಯ, ವಿಚಾರದ ಓಟಕ್ಕೆ ಧಕ್ಕೆ ಆಗದಿರಲೆಂದು ಇಂಗ್ಲಿಷ್ ಪದ ಅಥವಾ ವಾಕ್ಯವನ್ನು ಆಗಾಗ ಅಲ್ಲಲ್ಲಿ ಪೋಣಿಸುತ್ತೇನೆ. ನನ್ನ ಅನೇಕ ಓದುಗರಿಗೆ ಕನ್ನಡ ಭಾಷಾಜ್ಞಾನ, ಶಬ್ದ ಸಂಪತ್ತು, ವಾಕ್ಯರಚನೆ, ವ್ಯಾಕರಣ, ಸಮಾಸ, ಸಂಧಿ, ಅರ್ಥವಿನ್ಯಾಸಗಳ ಅರಿವಿದೆ ಎಂದು ಗೊತ್ತಿದ್ದೂ ಸಹ.

ಸರ್ವೇ ಸಾಮಾನ್ಯವಾಗಿ ನಾನು ಬರೆಯುವುದು ಕನ್ನಡ ಓದುವುದನ್ನೇ ಮರೆತವರಿಗೆ, ಅಕ್ಷರ ಅಕ್ಷರಗಳನ್ನು ಜೋಡಿಸಿಕೊಂಡು, ನಿಧಾನವಾಗಿ, ಕಷ್ಟಪಟ್ಟು ಓದಲು ಇಷ್ಟಪಡುವವರಿಗೆ. ಒತ್ತಕ್ಷರಗಳನ್ನು, ಅಪರೂಪವಾಗುತ್ತಿರುವ ಶಬ್ದಗಳನ್ನು ಅವರ ಮೇಲೆ ಹೇರದೆ, ಸರಳವಾಗಿ ಬರೆಯಬೇಕೆಂಬುದು ನನ್ನ ಆಸೆ.

ಕನ್ನಡ ಚೆನ್ನಾಗಿ ಗೊತ್ತಿದ್ದೂ ಕನ್ನಡದಲ್ಲಿ ಒಂದು ಮಾತನ್ನೂ ಬರೆಯದ ಮಾತೃಭಾಷಾ ಪ್ರೇಮಿಗಳಿದ್ದಾರೆ. ಯಾರನ್ನೋ ಮೆಚ್ಚಿಸಲು ಅವರು ಇಂಗ್ಲಿಷ್ ಭಾಷೆಗೆ ಮೊರೆ ಹೋಗುತ್ತಾರೆ. ಈ ಸಾಲಿನಲ್ಲಿ ಕನ್ನಡ ಹೋರಾಟಗಾರರು, ರಾಜಕಾರಣಿಗಳು, ಪ್ರತಿಭಾ ಸಂಪನ್ನರು ಇದ್ದಾರೆ. ಅವರೆಲ್ಲರಿಗೂ ನಾನು ಇಲ್ಲಿಂದಲೇ ಮಾಡುತ್ತಿರುವ ಮಂಗಳವಾರದ ನಮಸ್ಕಾರಗಳು.

ಬೇರೆ ಯಾರಾದರೂ ಕನ್ನಡದಲ್ಲಿ ಬರೆಯುತ್ತಲೇ ಇರಲಿ, ಕನ್ನಡಮ್ಮನ ಸೇವೆ ಮಾಡ್ತಾಯಿರಲಿ, ನಾನು ಮಾತ್ರ ಓದಿ enjoy ಮಾಡುತ್ತೇನೆ ಎಂಬ ನಿಲುವಿಗೆ ಅಂಟಿಕೊಂಡಿರುವವರು ಜಾಸ್ತಿ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಅಂತರ್‌ಜಾಲದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ವಿಶೇಷವಾಗಿ ಫೇಸ್‌ಬುಕ್ಕಿನಲ್ಲಿ ಕನ್ನಡದಲ್ಲೇ ಬರೆದುಕೊಂಡರೆ ತಮ್ಮ status ಕಡಿಮೆ ಆಗುತ್ತದೆ ಎಂದು ಭಾವಿಸುವವರೂ ಇದ್ದಾರೆ. ಬೇಕಾದ್ರೆ ತಾವು ಅಂಥವರ ಫೇಸ್‌ಬುಕ್ ಪುಟಕ್ಕೆ ಹೋಗಿ ನೋಡಿ. ಫೇಸ್‌ಬುಕ್ಕಿನ ಎದೆ ಸೀಳಿದರೂ ಅಲ್ಲಿ ನಿಮಗೆ ಒಂದು ಕನ್ನಡ ಪದ ನೋಡಕ್ಕೆ ಸಿಗಲ್ಲ.

ನೀವು ಈಗ ಮಾಡಬೇಕಾದುದಿಷ್ಟೆ. ಆಗಾಗ ನಿಮ್ಮ statusಗಳನ್ನು, ಕಾಮೆಂಟುಗಳನ್ನು ಕನ್ನಡದಲ್ಲಿ ಬರೆಯಲು ಇಂದೇ ಶುರುಮಾಡಿ, ಪ್ರಯತ್ನಪಡಿ. ಇಂಗ್ಲಿಷ್ ಓದಕ್ಕೆ, ಅರ್ಥಮಾಡಿಕೊಳ್ಳುವುದಕ್ಕೆ ಬಾರದ ಲಕ್ಷಾಂತರ ಕನ್ನಡಿಗರು ಇವತ್ತು ಫೇಸ್‌ಬುಕ್ ಖಾತೆ ತೆರೆದುಕೊಂಡಿದ್ದಾರೆ. ಅವರಲ್ಲಿ ಅದೃಶ್ಯ ಓದುಗರ ಜತೆಗೆ ನಿಮ್ಮ ತಂದೆ, ತಾಯಿ, ಅಜ್ಜ, ಅಜ್ಜಿ, ಕರುಳುಬಳ್ಳಿಗಳಿವೆ.

Desk Top, iPad, iPhone, Laptop, Smart Phone ಯಾವುದೇ ಇರಲಿ. ಅದರಲ್ಲಿ ಕನ್ನಡ ಓದುವುದರ ಜತೆಗೆ, ಕನ್ನಡದಲ್ಲಿ ನಾಲಕ್ಕಕ್ಷರ ಬರೆಯುವುದು ಹೇಗೆ ಅಂತ ಪಕ್ಕದಲ್ಲಿರುವ ಯಾರನ್ನಾದರೂ ಕೇಳಿ, ಕಲಿಸಿ ಕೊಡುತ್ತಾರೆ. ಕನ್ನಡ keyboard ಬಳಸಲು ಬಂದರೆ ನಿಮಗೆ ಕನ್ನಡ ಬರೆಯಲು ಬಂದಂತೆ.

ನಿಧಾನಕ್ಕೆ ಆರಂಭಿಸಿ. ಮೊದಲಿಗೆ ಸರಳ ಪದಗಳನ್ನು ಆಯ್ಕೆ ಮಾಡಿಕೊಳ್ಳಿರಿ. ಉದಾಹರಣೆಗೆ-ಅವನು, ಅವಳು, ಕಮಲ, ಬಸವ, ತಂಗಿ. ಆನಂತರ ವಾಕ್ಯ ರಚನೆಗೆ ಕೈ ಹಾಕಿರಿ. ಕಮಲ ಬಸವನ ತಂಗಿ.

ದೊಡ್ಡ ದೊಡ್ಡ ಲೇಖಕ-ಲೇಖಕಿಯರ ಥರ ನನಗೆ ಬರೆಯಕ್ಕೆ ಬರಲ್ಲ ಅಂತ ಸಂಕೋಚ, ಭಯ ಬೇಡ. Inferiority complexಗೆ ಎಳ್ಳು ನೀರು ಬಿಡಿ. ತಮಗೆ ಅನಿಸಿದ ಏನನ್ನಾದರೂ ನಾಲಕ್ಕು, ನಾಲಕ್ಕೇ ವಾಕ್ಯಗಳಲ್ಲಿ ದಾಖಲಿಸಿ. ಹಾಡುತ್ತಾ ಹಾಡುತ್ತಾ ರಾಗ, ಬರೆಯುತ್ತಾ ಬರೆಯುತ್ತಾ ಜ್ಞಾನಪೀಠ.

ಕನ್ನಡದಲ್ಲಿ ಬರೆಯುವುದರಿಂದ ಅನೇಕ ಪ್ರಯೋಜನಗಳಿವೆ. ಕನ್ನಡ ಭಾಷೆಯಲ್ಲಿ ಓದುವುದನ್ನೇ ನಂಬಿಕೊಂಡಿರುವ ಜನಕ್ಕೆ ಮತ್ತು ಅದನ್ನು ಪ್ರೀತಿಸುವವರಿಗೆ ನೀವು ಇನ್ನಷ್ಟು ಹತ್ತಿರವಾಗುತ್ತೀರಿ. Likeಗಳು ಜಾಸ್ತಿ ಬರತ್ತೆ. ಕೆಲವು ಸಂಗತಿಗಳು, ವಿಚಾರಗಳು ನಮ್ಮ ಭಾಷೆಯಲ್ಲೇ ಇದ್ದರೆ ಅವರ ಮಜಾನೇ ಬೇರೆ.

ಇಲ್ಲಿ ತಮಾಷೆಯಿದೆ, ವ್ಯಂಗ್ಯವಿದೆ, ಸಲಹೆಯಿದೆ, ಟೀಕೆಯಿದೆ, ಅನುಭಾವಮೃತವಿದೆ, ಅತಿರೇಕವೆನಿಸದ ಭಾಷಾಪ್ರೀತಿಯಿದೆ, ಕಳಕಳಿಯಿದೆ. ಹಾಗಾಗಿ ಶಾಮಿ ಅಭಿಪ್ರಾಯಕ್ಕೆ ನನ್ನ ಸಹಮತವಿದೆ, ಜೊತೆಗೆ ಸಾವಿರ ಲೈಕ್ಸ್.

ಶಾಮಿ ಸ್ಟೇಟಸ್ ನನಗೆ ಇಷ್ಟವಾಗುವುದಕ್ಕೆ ಇನ್ನೂ ಒಂದು ಕಾರಣವಿದೆ. ಅವರು ಹೇಳಿದ ಹಾಗೆ ನಾನು ಕೂಡ ಬರೆಯುವಾಗ ಅಲ್ಲಲ್ಲಿ ಇಂಗ್ಲಿಷ್ ಪದಗಳನ್ನು ಬಳಸುತ್ತೇನೆ-ಸಮಯ, ಸಂದರ್ಭ, ವಿಚಾರ ಮತ್ತು ಲೇಖನದ ಓಟಕ್ಕೆ ಧಕ್ಕೆಯಾಗದಂತೆ. ನಾನು ಹೇಳಬೇಕಾಗಿರುವುದನ್ನು ಓದುಗರಿಗೆ ಸುಲಭವಾಗಿ ದಾಟಿಸುವುದಕ್ಕೆ ಸಹಾಯವಾಗುತ್ತದೆ ಅನ್ನುವ ಕಾರಣಕ್ಕಾಗಿ ಈ ತಂತ್ರ ಬಳಸುತ್ತೇನೆಯಷ್ಟೇ: ಹೊರತಾಗಿ ಅದು ನನ್ನ ಭಾಷಾಪಾಂಡಿತ್ಯ ಪ್ರದರ್ಶನಕ್ಕಂತೂ ಅಲ್ಲ. ಅಷ್ಟಕ್ಕೂ ಭಾಷಾಭಿಮಾನ ಅಂದರೆ ಇನ್ನೊಂದು ಭಾಷೆಯ ನಿರಾಕರಣೆ ಅಲ್ವಲ್ಲ. ಬರವಣಿಗೆ ಅನ್ನುವುದು ಭಾಷಾ ಕಸರತ್ತೂ ಅಲ್ಲ. ಅದೊಂದು ಆಪ್ತ ಸಂವಾದವಾಗಿರಬೇಕು. ಓದುಗ ನಮ್ಮ ಮುಂದೆಯೇ ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡು ನಾವು ಹೇಳುವುದನ್ನು ಶ್ರದ್ಧೆಯಿಂದ ಆಲಿಸುತ್ತಿದ್ದಾನೆ ಅಂದುಕೊಂಡೇ ಬರೆಯಬೇಕು. ಕೆಲವು ಟೆಕ್ನಿಕಲ್ ಸಂಗತಿಗಳನ್ನು ಹೇಳುವಾಗ ಇಂಗ್ಲಿಷ್ ನುಸುಳುವುದು ಅನಿವಾರ್ಯವಾಗುತ್ತದೆ. ಅದಕ್ಕೊಂದು ಕ್ಲಿಷ್ಟ ಕನ್ನಡ ಪದವನ್ನು ಹಾಕಿ ರಸಭಂಗಗೊಳಿಸುವುದು ನನಗಿಷ್ಟವಾಗುವುದಿಲ್ಲ. ಉದಾಹರಣೆಗೆ ಫೇಸ್‌ಬುಕ್ಕನ್ನೇ ತೆಗೆದುಕೊಳ್ಳಿ. ಕೆಲವರು ಇದಕ್ಕೆ ಮುಖಪುಟ ಎಂದು ಬಳಸುತ್ತಾರೆ. ಒಬ್ಬ ವ್ಯಕ್ತಿ, ಪತ್ರಿಕೆ, ಸಂಸ್ಥೆಯ ಹೆಸರನ್ನು ಅನುವಾದ ಮಾಡುವುದು ಆಭಾಸವಾಗುತ್ತದೆ ಅನ್ನುವುದು ನನ್ನ ಭಾವನೆ. ಅದು ನಾಮಪದ ಅಷ್ಟೆ.

ಫೇಸ್‌ಬುಕ್ಕಲ್ಲಿ ಸ್ಟೇಟಸ್ ಹಾಕುವುದೂ ಕೂಡ ಒಂದು ಕಲೆ. ಇಲ್ಲಿ ಉದ್ದುದ್ದ ವಾಕ್ಯಗಳ ಅಗತ್ಯವಿಲ್ಲ. ಒಂದು ಕಾಲದಲ್ಲಿ ಟೆಲಿಗ್ರಾಮ್ ಕಳಿಸುವಾಗ ಪದಗಳ ಬಳಕೆ ಬಗ್ಗೆ ನಾವು ಎಷ್ಟೊಂದು ಚೌಕಾಸಿ ಮಾಡುತ್ತಿದ್ದೆವು ಅನ್ನುವುದನ್ನು ನೆನಪಿಸಿಕೊಳ್ಳಿ. ಅದೇ ತಂತ್ರವನ್ನು ಇಲ್ಲಿಗೂ ಅಪ್ಲೈ ಮಾಡಿಕೊಳ್ಳಿ. ಸುದೀರ್ಘ ಲೇಖನಗಳನ್ನು ಓದುವುದಕ್ಕೆ ಪತ್ರಿಕೆಗಳಿವೆ, ಸುದ್ದಿ ‘ನೋಡುವುದಕ್ಕೆ’ ಟೀವಿ ನ್ಯೂಸ್ ಛಾನೆಲ್ಲುಗಳಿವೆ. ಫೇಸ್‌ಬುಕ್ ಅವೆರಡೂ ಮಾಧ್ಯಮಗಳಿಗೆ ಪರ್ಯಾಯವಾಗಲಾರದು. ಆದರೆ ಅವೆರಡೂ ಮಾಧ್ಯಮಗಳಲ್ಲಿ ಇಲ್ಲದ ಕೆಲವು ಅನುಕೂಲಗಳು ಇಲ್ಲಿವೆ ಅನ್ನುವುದೂ ನಿಜ. ಪತ್ರಿಕೆ ಮತ್ತು ಟೀವಿಗಳಿಂದ ನಿರ್ಲಕ್ಷ್ಯಕ್ಕೊಳಗಾದ ಘಟನೆ ಅಥವಾ ಸಂಗತಿಯೊಂದರ ಬಗ್ಗೆ ಫೇಸ್‌ಬುಕ್ ಸದಸ್ಯರು ಗಮನ ಸೆಳೆಯಬಹುದು. ಅದರ ಬಗ್ಗೆ ಕೆಲವು ದಿನ ಆರೋಗ್ಯಕರ ಚರ್ಚೆ ನಡೆಯಬಹುದು. ಕೊನೆಗೆ ಇದು ಒಂದು ಸಾಮೂಹಿಕ ಧ್ವನಿಯಾಗಿ ಆ ಘಟನೆಗೆ ಸಂಬಂಧಪಟ್ಟವರ ಮೇಲೆ ಒತ್ತಡ ಹೇರುವಂತಾಗಬಹುದು. ನೊಂದವರಿಗೆ ನ್ಯಾಯ ಸಿಗಲೂಬಹುದು.

ಇದಕ್ಕೊಂದು ಒಳ್ಳೆಯ ಉದಾಹರಣೆಯೆಂದರೆ ಡಿ.ಕೆ.ರವಿ ಆತ್ಮಹತ್ಯೆಯ ಪ್ರಕರಣ. ಅದರ ತನಿಖೆಯನ್ನು ಸರ್ಕಾರ ಸಿಬಿಐಗೆ ಒಪ್ಪಿಸುವಲ್ಲಿ ಫೇಸ್‌ಬುಕ್ಕಿನದ್ದೂ ಪಾಲಿದೆ. ಕೆಟ್ಟ ಉದಾಹರಣೆಯೆಂದರೆ porno sightಗಳ ನಿಷೇಧದ ಪ್ರಕರಣ. ರೈತರ ಆತ್ಯಹತ್ಯೆ, ಸಿಇಟಿ ಗೊಂದಲದಲ್ಲಿ ಸಿಲುಕಿದ ವಿದ್ಯಾರ್ಥಿಗಳ ಭವಿಷ್ಯಕ್ಕಿಂತಲೂ ಈ ವಲ್ಗರ್ ಇಶ್ಯೂ ಕೆಲವು ಫೇಸ್‌ಬುಕ್ ಸದಸ್ಯರಿಗೆ ಮುಖ್ಯವಾಯಿತು. ಅಶ್ಲೀಲ ಸೈಟುಗಳನ್ನು ನೋಡುವುದು ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ಕೆಲವರು ಕೂಗಾಡಿದರು, ಮಿಕ್ಕವರಿಗೆ ಇದೊಂದು ಚಪ್ಪರಿಸುವ ಸಂಗತಿಯಾಯಿತು. ಟ್ವೀಟರ್‌ನಲ್ಲಿ porn ತಾರೆ ಸನ್ನಿ ಲಿಯೋನ್, ನಮ್ಮ ನರೇಂದ್ರ ಮೋದಿಗಿಂತ ಹೆಚ್ಚು ಜನಪ್ರಿಯಳಾಗಿರುವುದೇ ಈ ನಿಷೇಧದ ಹಿಂದಿರುವ ರಾಜಕೀಯ ಎಂಬ ಮಾತು ಕೂಡ ಕೇಳಿ ಬಂತು. ತಮಗೆ ಅರಿವಿಲ್ಲದಂತೆಯೇ ಪೋರ್ನೋ ಸೈಟುಗಳನ್ನು ಬೆಂಬಲಿಸುವವರು ಎಡಪಂಥೀಯರಾಗಿಯೂ, ವಿರೋಧಿಸುವವರು ಬಲಪಂಥೀಯರಾಗಿಯೂ ಹೊರಹೊಮ್ಮಿದರು.

ನನಗಿಂಥ ಸೈಟುಗಳ ಬಗ್ಗೆ ಆಸಕ್ತಿಯಿಲ್ಲ. ಕೆಲವು ಸಂಗೀತಾಸಕ್ತರು ನನ್ನ ಫ್ರೆಂಡ್ ಲಿಸ್ಟಲ್ಲಿದ್ದಾರೆ. ಅವರು ಆಗಾಗ ಕೆಲವು ಹಳೇ ಚಿತ್ರಗಳ ಹಾಡುಗಳನ್ನು ಪೋಸ್ಟ್ ಮಾಡುತ್ತಾರೆ. ಆ ಮೂಲಕ ನನ್ನ ನೆನಪುಗಳನ್ನು ನವೀಕರಿಸುತ್ತಾರೆ. ನಾನು ಓದಲೇಬೇಕಾದ ಪುಸ್ತಕಗಳ ಪಟ್ಟಿ ನೀಡುವ ಸಹೃದಯಿಗಳೂ ಇದ್ದಾರೆ. ಅವರ ಜೊತೆಗೆ ಅಜ್ಞಾನಿಗಳಿಗೆ ಶಾಲಿನಿಂದ ಸುತ್ತಿ ಹೊಡೆಯುವ ಶಾಮಿ ಅಂಥವರೂ ಇದ್ದಾರೆ. ಫೇಸ್‌ಬುಕ್ಕಿಗೆ ದಿನಕ್ಕೊಮ್ಮೆ ಭೇಟಿ ನೀಡುವುದಕ್ಕೆ ಇಷ್ಟು ಸಾಕು.

ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 12 August, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books